ಯೆಹೆಜ್ಕೇಲನು 7 : 1 (IRVKN)
ಇಸ್ರಾಯೇಲರ ನಾಶನ ಸಮೀಪಿಸಿತು ಇದಲ್ಲದೆ ಯೆಹೋವನು ಈ ಮಾತನ್ನು ನನಗೆ ದಯಪಾಲಿಸಿದನು,
ಯೆಹೆಜ್ಕೇಲನು 7 : 2 (IRVKN)
“ನರಪುತ್ರನೇ, ಕರ್ತನಾದ ಯೆಹೋವನು ಇಸ್ರಾಯೇಲ್ ದೇಶಕ್ಕೆ ಹೀಗೆ ನುಡಿಯುತ್ತಾನೆ, ‘ಪ್ರಳಯವು, ಪೂರ್ಣ ಪ್ರಳಯವು ದೇಶದ ಚತುರ್ದಿಕ್ಕಿನಲ್ಲಿಯೂ ಸಂಭವಿಸಿದೆ.’
ಯೆಹೆಜ್ಕೇಲನು 7 : 3 (IRVKN)
ಈಗಲೇ ನಿನಗೆ ಅಂತ್ಯವು ಬಂದಿದೆ; ನಾನು ನನ್ನ ಕೋಪವನ್ನು ನಿನ್ನ ಮೇಲೆ ಬರಮಾಡಿ, ನಿನ್ನ ನಡತೆಗೆ ತಕ್ಕಂತೆ ನ್ಯಾಯತೀರಿಸಿ ನಿನ್ನ ಸಮಸ್ತ ಅಸಹ್ಯಕಾರ್ಯಗಳ ಫಲವನ್ನು ನಿನಗೆ ತಿನ್ನಿಸುವೆನು.
ಯೆಹೆಜ್ಕೇಲನು 7 : 4 (IRVKN)
ನಿನ್ನನ್ನು ಕಟಾಕ್ಷಿಸುವುದಿಲ್ಲ, ಉಳಿಸುವುದಿಲ್ಲ; ನಿನ್ನ ದುರ್ಮಾರ್ಗದ ಫಲವನ್ನು ನಿನಗೆ ತಿನ್ನಿಸುವೆನು; ನಿನ್ನ ಅಸಹ್ಯಕಾರ್ಯಗಳು ನಿನ್ನ ಅನುಭವಕ್ಕೆ ಬರುವವು; ಆಗ ನಾನೇ ಯೆಹೋವನು ಎಂದು ನಿನಗೆ ಗೊತ್ತಾಗುವುದು.”
ಯೆಹೆಜ್ಕೇಲನು 7 : 5 (IRVKN)
ಕರ್ತನಾದ ಯೆಹೋವನು ಇಂತೆನ್ನುತ್ತಾನೆ, “ಕೇಡು, ಎಂದೂ ಕಾಣದ ಕೇಡು, ಇಗೋ ಬಂದಿತು!
ಯೆಹೆಜ್ಕೇಲನು 7 : 6 (IRVKN)
ಅಂತ್ಯವು ಬಂತು, ಅಂತ್ಯವು ಬಂದುಬಿಟ್ಟಿತು, ನಿನ್ನನ್ನು ಚಚ್ಚುವುದಕ್ಕೆ ಎಚ್ಚರಗೊಂಡಿದೆ, ಇಗೋ, ಬಂದೇ ಬಂತು!
ಯೆಹೆಜ್ಕೇಲನು 7 : 7 (IRVKN)
ದೇಶ ನಿವಾಸಿಯೇ, ನಿನ್ನ ಗತಿ ಮುಗಿಯಿತು. ಸಮಯ ಬಂದಿತು, ದಿನ ಸಮೀಪಿಸಿತು; ಬೆಟ್ಟಗಳ ಮೇಲೆ ಕೇಳಿಸುವ ಧ್ವನಿಯು ಉತ್ಸಾಹ ಧ್ವನಿಯಲ್ಲ, ಅದು ಕಳವಳವೇ.
ಯೆಹೆಜ್ಕೇಲನು 7 : 8 (IRVKN)
ಇನ್ನು ಸ್ವಲ್ಪ ಕಾಲದೊಳಗೆ ನಾನು ನಿನ್ನ ಮೇಲೆ ನನ್ನ ರೋಷಾಗ್ನಿಯನ್ನು ಸುರಿದು, ನನ್ನ ಕೋಪವನ್ನು ತೀರಿಸಿಕೊಂಡು, ನಿನ್ನ ನಡತೆಗೆ ತಕ್ಕ ದಂಡನೆಯನ್ನು ವಿಧಿಸಿ, ನಿನ್ನ ಅಸಹ್ಯಕಾರ್ಯಗಳ ಫಲವನ್ನೆಲ್ಲಾ ನಿನಗೆ ತಿನ್ನಿಸುವೆನು.
ಯೆಹೆಜ್ಕೇಲನು 7 : 9 (IRVKN)
ನಿನ್ನನ್ನು ಕಟಾಕ್ಷಿಸುವುದಿಲ್ಲ, ಉಳಿಸುವುದಿಲ್ಲ, ನಿನ್ನ ದುರ್ಮಾರ್ಗಗಳಿಗೆ ತಕ್ಕ ಗತಿಯನ್ನು ಬರಮಾಡುವೆನು, ಆಗ ನಿನ್ನ ಅಸಹ್ಯಕಾರ್ಯಗಳು ನಿನ್ನ ಅನುಭವಕ್ಕೆ ಬರುವವು; ಯೆಹೋವನಾದ ನಾನು ದಂಡಿಸುವವನು ಎಂಬುದು ನಿನಗೆ ಗೊತ್ತಾಗುವುದು.
ಯೆಹೆಜ್ಕೇಲನು 7 : 10 (IRVKN)
“ಆಹಾ, ದಂಡನೆಯ ದಿನವು, ಇಗೋ ಬಂತು! ನಿನಗೆ ದುರ್ಗತಿಯು ಅಂಕುರಿಸಿದೆ, ಕೋಲು ಹೂಬಿಟ್ಟಿದೆ, ಹೆಮ್ಮೆಯು ಚಿಗುರಿದೆ.
ಯೆಹೆಜ್ಕೇಲನು 7 : 11 (IRVKN)
ಹಿಂಸೆಯು ಬೆಳೆದು ಕೆಡುಕಿನ ಕೋಲಾಗಿದೆ; ನಿನ್ನವರಲ್ಲಿ ಯಾರೂ ಉಳಿಯುವುದಿಲ್ಲ, ಆ ಜನಸಮೂಹದಲ್ಲಿಯೂ, ಅವರ ಆಸ್ತಿಯಲ್ಲಿಯೂ ಏನೂ ಉಳಿಯುವುದಿಲ್ಲ, ಅವರಲ್ಲಿ ಯಾವ ಶ್ರೇಷ್ಠತೆಯೂ ನಿಲ್ಲುವುದಿಲ್ಲ.
ಯೆಹೆಜ್ಕೇಲನು 7 : 12 (IRVKN)
ಸಮಯ ಬಂದಿದೆ, ದಿನ ಸಮೀಪಿಸಿತು; ಕೊಂಡುಕೊಳ್ಳುವವನು ಹರ್ಷಿಸದಿರಲಿ, ಮಾರುವವನು ದುಃಖಿಸದಿರಲಿ; ರೋಷಾಗ್ನಿಯು ಆ ಸಮೂಹದವರೆಲ್ಲರ ಮೇಲೆ ಹತ್ತಿದೆ.
ಯೆಹೆಜ್ಕೇಲನು 7 : 13 (IRVKN)
ಮಾರಿದವನು ಎಷ್ಟು ವರ್ಷ ಬದುಕಿದರೂ ಮಾರಿದ ಸೊತ್ತು ಅವನ ವಶಕ್ಕೆ ತಿರುಗಿಬಾರದು; ಉಂಟಾದ ದಿವ್ಯದರ್ಶನವು ಸಮೂಹದವರಿಗೆಲ್ಲಾ ಸಂಬಂಧಿಸಿದೆ, ಯಾರೂ ಹಿಂದಿರುಗುವುದಿಲ್ಲ. ಯಾರೂ ತಮ್ಮ ಅಧರ್ಮದಿಂದ ತಮ್ಮ ಜೀವವನ್ನು ಉಳಿಸಿಕೊಳ್ಳುವುದಿಲ್ಲ.
ಯೆಹೆಜ್ಕೇಲನು 7 : 14 (IRVKN)
ಅವರು ಕೊಂಬನ್ನೂದಿ ಎಲ್ಲವನ್ನೂ ಸಿದ್ಧ ಮಾಡಿದರೂ ಯಾರೂ ಯುದ್ಧಕ್ಕೆ ಹೊರಡುವುದಿಲ್ಲ; ನನ್ನ ರೋಷಾಗ್ನಿಯು ಆ ಸಮೂಹದವರೆಲ್ಲರ ಮೇಲೆ ಹತ್ತಿದೆ.
ಯೆಹೆಜ್ಕೇಲನು 7 : 15 (IRVKN)
ಊರ ಹೊರಗೆ ಖಡ್ಗ, ಊರೊಳಗೆ ವ್ಯಾಧಿ ಮತ್ತು ಕ್ಷಾಮಗಳು; ಹೊರಗಿರುವವರು ಖಡ್ಗದಿಂದ ಸಾಯುವರು, ಒಳಗಿರುವವರು ವ್ಯಾಧಿ ಕ್ಷಾಮಗಳಿಗೆ ತುತ್ತಾಗುವರು.
ಯೆಹೆಜ್ಕೇಲನು 7 : 16 (IRVKN)
ಅವರಲ್ಲಿ ಪಲಾಯನ ಮಾಡಿದವರು ತಪ್ಪಿಸಿಕೊಂಡು, ತಮ್ಮ ಅಧರ್ಮದಲ್ಲಿಯೇ ಇದ್ದು, ಡೊಂಗರಗಳಲ್ಲಿನ ಪಾರಿವಾಳಗಳಂತೆ ಬೆಟ್ಟಗಳ ಮೇಲೆ ಗೋಳಾಡುತ್ತಿರುವರು.
ಯೆಹೆಜ್ಕೇಲನು 7 : 17 (IRVKN)
ಎಲ್ಲರ ಕೈಗಳು ಜೋಲುಬಿದ್ದಿರುವುವು, ಎಲ್ಲರ ಮೊಣಕಾಲುಗಳು ನೀರಿನಂತೆ ಅದರುವುವು.
ಯೆಹೆಜ್ಕೇಲನು 7 : 18 (IRVKN)
ಅವರು ಗೋಣಿತಟ್ಟನ್ನು ಸುತ್ತಿಕೊಳ್ಳುವರು, ದಿಗಿಲು ಅವರನ್ನು ಮುಚ್ಚಿಬಿಡುವುದು; ಎಲ್ಲರ ಮುಖದಲ್ಲಿಯೂ ನಾಚಿಕೆ ಕಾಣುವುದು, ಎಲ್ಲರೂ ತಲೆ ಬೋಳಿಸಿಕೊಂಡು ಇರುವರು.
ಯೆಹೆಜ್ಕೇಲನು 7 : 19 (IRVKN)
ಅವರು ತಮ್ಮ ಬೆಳ್ಳಿಯನ್ನು ಬೀದಿಗಳಲ್ಲಿ ಬಿಸಾಡುವರು, ಅವರ ಬಂಗಾರವು ಅಶುದ್ಧ ಪದಾರ್ಥದಂತಿರುವುದು; ಯೆಹೋವನು ತನ್ನ ರೋಷವನ್ನು ತೀರಿಸುವ ದಿನದಲ್ಲಿ ಅವರ ಬೆಳ್ಳಿಬಂಗಾರವು ಅವರನ್ನು ರಕ್ಷಿಸಲಾರದು; ಅವರ ಇಷ್ಟಾರ್ಥ ನೆರವೇರುವುದಿಲ್ಲ, ಅವರ ಹೊಟ್ಟೆ ತುಂಬುವುದಿಲ್ಲ; ಏಕೆಂದರೆ ಅವರ ಆಸ್ತಿಯು ಅವರಿಗೆ ಪಾಪಕಾರಿ ವಿಘ್ನವಾಗಿದೆ.
ಯೆಹೆಜ್ಕೇಲನು 7 : 20 (IRVKN)
ಅವರ ಆಭರಣಗಳ ಚಂದವು ಅವರ ಗರ್ವಕ್ಕೆ ಆಸ್ಪದವಾಯಿತು; ಇದಲ್ಲದೆ ಹೇಯವೂ, ಅಸಹ್ಯವೂ ಆದ ತಮ್ಮ ದೇವತೆಗಳ ಪ್ರತಿಮೆಗಳನ್ನು ಬೆಳ್ಳಿಬಂಗಾರದಿಂದ ರೂಪಿಸುತ್ತಿದ್ದರು; ಆದಕಾರಣ ಅದನ್ನು ಅವರಿಗೆ ಅಶುದ್ಧ ಪದಾರ್ಥವನ್ನಾಗಿ ಮಾಡಿದೆನು.
ಯೆಹೆಜ್ಕೇಲನು 7 : 21 (IRVKN)
ಅನ್ಯರ ಕೈಯಿಂದ ಕೊಳ್ಳೆಹೊಡೆಯಿಸಿ ಲೋಕದ ಅತಿ ದುಷ್ಟರಿಂದ ಸೂರೆಮಾಡಿಸುವೆನು; ಅವರು ಅದನ್ನು ಹೊಲೆಗೊಳಿಸುವೆನು.
ಯೆಹೆಜ್ಕೇಲನು 7 : 22 (IRVKN)
ನಾನು ಅವರ ಕಡೆಯಿಂದ ನನ್ನ ಮುಖವನ್ನು ತಿರುಗಿಸಲು, ನನ್ನ ಪ್ರಿಯ ಮಂದಿರವನ್ನು ಹೊಲೆಗೆಡಿಸುವರು; ಕಳ್ಳರು ಅದರಲ್ಲಿ ನುಗ್ಗಿ ಅದನ್ನು ಹೊಲಸುಮಾಡುವರು.
ಯೆಹೆಜ್ಕೇಲನು 7 : 23 (IRVKN)
ಒಂದು ಸರಪಣಿಯನ್ನು ಮಾಡು; ಏಕೆಂದರೆ ದೇಶವು ನರಹತ್ಯಭರಿತವಾಗಿದೆ, ಪಟ್ಟಣವು ಹಿಂಸೆಯಿಂದ ತುಂಬಿಹೋಗಿದೆ.
ಯೆಹೆಜ್ಕೇಲನು 7 : 24 (IRVKN)
ಹೀಗಿರಲು ನಾನು ಅತಿ ದುಷ್ಟ ಜನಾಂಗಗಳನ್ನು ಬರಮಾಡುವೆನು, ಅವು ನನ್ನ ಜನರ ಮನೆಗಳನ್ನು ವಶಮಾಡಿಕೊಳ್ಳುವುದು; ನಾನು ಬಲಿಷ್ಠರ ಸೊಕ್ಕನ್ನು ಅಡಗಿಸುವೆನು, ಅವರ ಪವಿತ್ರ ಸ್ಥಾನಗಳು ಹೊಲೆಗೆಡುವವು.
ಯೆಹೆಜ್ಕೇಲನು 7 : 25 (IRVKN)
ಸಂಕಟ ಸಂಭವಿಸುವುದು; ಅವರು ಸಮಾಧಾನವನ್ನು ಹುಡುಕಿದರೂ ಸ್ವಲ್ಪವೂ ಸಿಕ್ಕುವುದಿಲ್ಲ.
ಯೆಹೆಜ್ಕೇಲನು 7 : 26 (IRVKN)
ಕೇಡಿನ ಮೇಲೆ ಕೇಡು, ಸುದ್ದಿಯ ಮೇಲೆ ಸುದ್ದಿ ಬರುವುದು; ‘ದಿವ್ಯದರ್ಶನವಾಯಿತೇ?’ ಎಂದು ಪ್ರವಾದಿಯನ್ನು ಕೇಳುತ್ತಲೇ ಇರುವರು; ಯಾಜಕರಲ್ಲಿ ಧರ್ಮೋಪದೇಶವು ಅಡಗಿಹೋಗುವುದು, ಹಿರಿಯರಲ್ಲಿ ಸಲಹೆ, ಸಮಾಲೋಚನೆಯು ಇಲ್ಲವಾಗುವುದು.
ಯೆಹೆಜ್ಕೇಲನು 7 : 27 (IRVKN)
ಅರಸನು ದುಃಖಿಸುವನು, ಭಯವು ಪ್ರಭುವನ್ನು ಮುಸುಕುವುದು, ಸಾಧಾರಣಜನರ ಕೈಗಳು ತತ್ತರಿಸುವವು; ನಾನು ಅವರ ದುರ್ನಡತೆಗೆ ತಕ್ಕ ಪ್ರತಿಕಾರವನ್ನು ಮಾಡಿ, ಅವರ ದುಷ್ಟ ಕಾರ್ಯಗಳಿಗೆ ಸರಿಯಾಗಿ ದಂಡನೆಯನ್ನು ವಿಧಿಸುವೆನು; ಆಗ ನಾನೇ ಯೆಹೋವನು ಎಂದು ಅವರಿಗೆ ಗೊತ್ತಾಗುವುದು.”
❮
❯