ಯೆಹೆಜ್ಕೇಲನು 47 : 1 (IRVKN)
ದೇವಸ್ಥಾನದಿಂದ ಹೊರಡುವ ಪ್ರವಾಹ ಆಮೇಲೆ ಅವನು ನನ್ನನ್ನು ದೇವಸ್ಥಾನದ ಬಾಗಿಲಿಗೆ ಪುನಃ ಕರೆದು ತಂದನು. ಆಹಾ, ದೇವಸ್ಥಾನದ ಹೊಸ್ತಿಲ ಕೆಳಗಿನಿಂದ ನೀರು ಹೊರಟು ಪೂರ್ವಕ್ಕೆ ಹರಿಯುತ್ತಿತ್ತು. (ದೇವಸ್ಥಾನವು ಪೂರ್ವಾಭಿಮುಖವಷ್ಟೆ) ಆ ನೀರು ದೇವಸ್ಥಾನದ ಬಲಗಡೆ ಕೆಳಗಿನಿಂದ ಹೊರಟು ಯಜ್ಞವೇದಿಯ ದಕ್ಷಿಣದಲ್ಲಿ ಹರಿಯುತ್ತಿತ್ತು.
ಯೆಹೆಜ್ಕೇಲನು 47 : 2 (IRVKN)
ಆಗ ಅವನು ನನ್ನನ್ನು ಉತ್ತರದಿಕ್ಕಿನ ಹೆಬ್ಬಾಗಿಲಿನಿಂದ ದೇವಾಲಯದ ಹೊರಗಿನ ಮಾರ್ಗವಾಗಿ ಸುತ್ತಿಕೊಂಡು ಪೂರ್ವದಿಕ್ಕಿನ ಹೆಬ್ಬಾಗಿಲಿಗೆ ಕರೆದು ತಂದನು. ಅಲ್ಲಿ ನೋಡಲು ಅದರ ಬಲಗಡೆ ಮೆಲ್ಲನೆ ಹರಿಯುವ ನೀರು ಕಾಣಿಸಿತು.
ಯೆಹೆಜ್ಕೇಲನು 47 : 3 (IRVKN)
ಆ ಪುರುಷನು ಕೈಯಲ್ಲಿ ಹುರಿಯನ್ನು ಹಿಡಿದುಕೊಂಡು ಪೂರ್ವಕ್ಕೆ ಮುಂದುವರಿದು ಸಾವಿರ ಮೊಳ ಅಳೆದು, ನನ್ನನ್ನು ನೀರಿನ ಆಚೆಗೆ ದಾಟಿಸಿದನು. ಅಲ್ಲಿ ನೀರು ಕಾಲು ಮುಳುಗುವಷ್ಟಿತ್ತು.
ಯೆಹೆಜ್ಕೇಲನು 47 : 4 (IRVKN)
ಅವನು ತಿರುಗಿ ಸಾವಿರ ಮೊಳ ಅಳೆದು, ನನ್ನನ್ನು ನೀರಿನ ಆಚೆಗೆ ದಾಟಿಸುವಾಗ, ಆ ನೀರು ಮೊಣಕಾಲಿನವರೆಗೆ ಇತ್ತು. ಅವನು ತಿರುಗಿ ಸಾವಿರ ಮೊಳ ಅಳೆದು, ನನ್ನನ್ನು ನೀರಿನ ಆಚೆಗೆ ದಾಟಿಸುವಾಗ, ಆ ನೀರು ಸೊಂಟದವರೆಗೆ ಇತ್ತು.
ಯೆಹೆಜ್ಕೇಲನು 47 : 5 (IRVKN)
ಅವನು ಮತ್ತೆ ಸಾವಿರ ಮೊಳ ಅಳೆದನು. ಅದು ನನ್ನಿಂದ ದಾಟಲಾಗದ ನದಿಯಾಗಿತ್ತು; ನೀರು ಆಳವಾಗಿ ಈಜಾಡುವಷ್ಟು ಪ್ರವಾಹವಾಗಿತ್ತು, ದಾಟಲಾಗದ ನದಿಯಾಗಿತ್ತು.
ಯೆಹೆಜ್ಕೇಲನು 47 : 6 (IRVKN)
ಆಗ ಅವನು ನನಗೆ, “ನರಪುತ್ರನೇ, ಇದನ್ನು ನೋಡಿದೆಯಾ?” ಎಂದು ಹೇಳಿ ನನ್ನನ್ನು ನದಿಯ ದಡಕ್ಕೆ ಹತ್ತಿಸಿ ಹಿಂದಿರುಗಿಸಿದನು.
ಯೆಹೆಜ್ಕೇಲನು 47 : 7 (IRVKN)
ನಾನು ಹಿಂದಿರುಗಲು ಆಹಾ, ನದಿಯ ಎರಡು ದಡಗಳಲ್ಲಿಯೂ ಅನೇಕ ವೃಕ್ಷಗಳು ಕಾಣಿಸಿದವು.
ಯೆಹೆಜ್ಕೇಲನು 47 : 8 (IRVKN)
ಆಗ ಅವನು ನನಗೆ ಹೀಗೆ ಹೇಳಿದನು, “ಈ ಪ್ರವಾಹವು ಪೂರ್ವ ಪ್ರಾಂತ್ಯಕ್ಕೆ ಹೊರಟು, ಅರಾಬಾ ಎಂಬ ಕಣಿವೆಗೆ ಇಳಿದು ಲವಣ ಸಮುದ್ರದ ಕಡೆಗೆ ಹರಿಯುವುದು. ಈ ನೀರು ಲವಣ ಸಮುದ್ರಕ್ಕೆ ಸೇರಲು ಅದರ ನೀರು ಸಿಹಿಯಾಗುವುದು.
ಯೆಹೆಜ್ಕೇಲನು 47 : 9 (IRVKN)
ಈ ನದಿಯು ಎಲ್ಲೆಲ್ಲಿ ಹರಿಯುತ್ತದೋ ಅಲ್ಲಲ್ಲಿ ಗುಂಪು ಗುಂಪಾಗಿ ಚಲಿಸುವ ಸಕಲ ವಿಧವಾದ ಜಲಜಂತುಗಳು ಬದುಕಿ ಬಾಳುವವು; ಮೀನುಗಳು ಗುಂಪು ಗುಂಪಾಗಿರುವವು. ಈ ನೀರು ಸಮುದ್ರಕ್ಕೆ ಬೀಳಲು, ಆ ನೀರೂ ಸಿಹಿಯಾಗುವುದು. ಈ ನದಿಯು ಎಲ್ಲೆಲ್ಲಿ ಹರಿದರೂ ಅಲ್ಲಲ್ಲಿ ಜೀವವುಂಟಾಗುವುದು.
ಯೆಹೆಜ್ಕೇಲನು 47 : 10 (IRVKN)
ಆಗ ಆ ಸಮುದ್ರದ ತೀರದಲ್ಲಿ ಬೆಸ್ತರು ನಿಂತಿರುವರು; ಏನ್ ಗೆದಿಯಿಂದ ಏನ್ ಎಗ್ಲಯಿಮಿನವರೆಗೆ ದಡವೆಲ್ಲಾ ಬಲೆ ಹಾಸುವ ಸ್ಥಳವಾಗುವುದು; ಬಗೆಬಗೆಯ ಮೀನುಗಳು ಮಹಾಸಾಗರದ ಮೀನುಗಳಂತೆ ಅವರಿಗೆ ರಾಶಿ ರಾಶಿಯಾಗಿ ಸಿಕ್ಕುವವು.
ಯೆಹೆಜ್ಕೇಲನು 47 : 11 (IRVKN)
ಆದರೆ ಅದರ ಸುತ್ತಣ ಕೆಸರಾದ ಸ್ಥಳಗಳು, ಕೊಳಚೆಗಳು ಸಿಹಿಯಾಗುವುದಿಲ್ಲ. ಅವು ಉಪ್ಪಿನ ಗಣಿಯಾಗುವುವು.
ಯೆಹೆಜ್ಕೇಲನು 47 : 12 (IRVKN)
ನದಿಯ ಎರಡು ದಡಗಳ ತನಕ ಸಕಲ ಫಲವೃಕ್ಷಗಳು ಬೆಳೆಯುವವು. ಅವುಗಳ ಎಲೆ ಬಾಡುವುದಿಲ್ಲ, ಹಣ್ಣು ತೀರುವುದಿಲ್ಲ; ನದಿಯ ನೀರು ಪವಿತ್ರಾಲಯದಿಂದ ಹೊರಟು ಬರುವ ಕಾರಣ ಅವು ತಿಂಗಳುಗಳ ಪ್ರಕಾರ ಹೊಸ ಫಲವನ್ನು ಫಲಿಸುವವು; ಅವುಗಳ ಹಣ್ಣು ಆಹಾರಕ್ಕೂ, ಸೊಪ್ಪು ಔಷಧಕ್ಕೂ ಉಪಯೋಗವಾಗುವುದು.”
ಯೆಹೆಜ್ಕೇಲನು 47 : 13 (IRVKN)
ಇಸ್ರಾಯೇಲ್ ದೇಶದ ಮೇರೆಗಳು ಕರ್ತನಾದ ಯೆಹೋವನು ಇಂತೆನ್ನುತ್ತಾನೆ, “ನೀವು ಇಸ್ರಾಯೇಲಿನ ಹನ್ನೆರಡು ಕುಲಗಳಿಗೆ ದೇಶವನ್ನು ಬಾಧ್ಯವಾಗಿ ಹಂಚಿಕೊಡುವಾಗ ಮುಂದಿನ ಮೇರೆಗಳನ್ನು ಅನುಸರಿಸಬೇಕು. ಯೋಸೇಫಿಗೆ ಎರಡು ಪಾಲು ಸೇರಲಿ.
ಯೆಹೆಜ್ಕೇಲನು 47 : 14 (IRVKN)
ನಾನು ನಿಮ್ಮ ಪೂರ್ವಿಕರಿಗೆ ಪ್ರಮಾಣವಾಗಿ ವಾಗ್ದಾನ ಮಾಡಿದ ಈ ದೇಶವನ್ನು ನೀವೆಲ್ಲರೂ ಸರಿಸಮಾನವಾಗಿ ಅನುಭವಿಸುವಿರಿ. ಇದು ನಿಮಗೆ ಸ್ವತ್ತಾಗಿಯೇ ಇರುವುದು.
ಯೆಹೆಜ್ಕೇಲನು 47 : 15 (IRVKN)
“ನಿಮ್ಮ ದೇಶದ ಮೇರೆಗಳು ಹೀಗಿರಬೇಕು, ಉತ್ತರದ ಮೇರೆಯು ಮಹಾ ಸಮುದ್ರದಿಂದ ಆರಂಭವಾಗಿ ಹೆತ್ಲೋನಿನ ಮಾರ್ಗವಾಗಿ ಚೆದಾದಿಗೆ ಸೇರುವುದು.
ಯೆಹೆಜ್ಕೇಲನು 47 : 16 (IRVKN)
ಹಮಾತ್, ಬೇರೋತ, ದಮಸ್ಕದವರೆಗೂ ಹಮಾತಿನ ಮೇರೆಗೂ ಮಧ್ಯವಾಗಿರುವ ಸಿಬ್ರಯಿಮ್ ಎಂಬ ಊರುಗಳ ಮೇಲೆ ಹವ್ರಾನಿನ ಮೇರೆಯಲ್ಲಿರುವ ಹಾಚೇರ್ ಹತ್ತೀಕೋನಿನ ಬಳಿಯಲ್ಲಿ ಮುಗಿಯಬೇಕು.
ಯೆಹೆಜ್ಕೇಲನು 47 : 17 (IRVKN)
ಹೀಗೆ ಉತ್ತರ ಮೇರೆಯು ಸಮುದ್ರದಿಂದ ದಮಸ್ಕದ ಮೇರೆಯ ಹಚರ್ ಐನೋನಿನವರೆಗೆ ಹಬ್ಬುವುದು. ಅದರ ಉತ್ತರದಲ್ಲಿ ಹಮಾತಿನ ಪ್ರಾಂತ್ಯವಿರುವುದು.
ಯೆಹೆಜ್ಕೇಲನು 47 : 18 (IRVKN)
“ಇದು ಪೂರ್ವದಿಕ್ಕಿನ ಮೇರೆಯಾಗಿದೆ: ಹವ್ರಾನ್, ದಮಸ್ಕ, ಗಿಲ್ಯಾದ್ ಇವುಗಳಿಗೂ ಇಸ್ರಾಯೇಲ್ ದೇಶಕ್ಕೂ ಮಧ್ಯದಲ್ಲಿರುವ ಯೊರ್ದನ್ ಹೊಳೆಯು ಮೇರೆಯಾಗಿರುವುದು. ಉತ್ತರ ಮೇರೆಯಿಂದ ದಕ್ಷಿಣ ಸಮುದ್ರದವರೆಗೆ ನೀವು ಗುರುತು ಹಾಕಿಕೊಳ್ಳಬೇಕು.
ಯೆಹೆಜ್ಕೇಲನು 47 : 19 (IRVKN)
ಇದು ದಕ್ಷಿಣದ ಮೇರೆಯಾಗಿದೆ: ದಕ್ಷಿಣದ ಮೇರೆಯು ತಾಮಾರಿನಿಂದ ಹೊರಟು, ಮೆರೀಬೋತ್ ಕಾದೇಶಿನ ಹಳ್ಳದ ಮೇಲೆ ಐಗುಪ್ತದವರೆಗೆ ಮುಂದುವರೆಯುವ ನದಿಯ ಮಾರ್ಗವಾಗಿ ಮಹಾ ಸಮುದ್ರವನ್ನು ಮುಟ್ಟಬೇಕು.
ಯೆಹೆಜ್ಕೇಲನು 47 : 20 (IRVKN)
ಇದು ಪಶ್ಚಿಮದ ಮೇರೆಯಾಗಿದೆ. ಹಮಾತಿನ ದಾರಿಗೆ ಎದುರಿನ (ಕರಾವಳಿಯ) ತನಕ ಮಹಾ ಸಮುದ್ರದವರೆಗೂ ಪಶ್ಚಿಮದ ಮೇರೆಯಾಗಿರುವುದು.
ಯೆಹೆಜ್ಕೇಲನು 47 : 21 (IRVKN)
ಈ ರೀತಿಯಾಗಿ ದೇಶವನ್ನು ನೀವು ಇಸ್ರಾಯೇಲಿನ ಎಲ್ಲಾ ಕುಲಕ್ಕೂ ಹಂಚಿಕೊಳ್ಳಬೇಕು.
ಯೆಹೆಜ್ಕೇಲನು 47 : 22 (IRVKN)
ನಿಮಗೂ, ನಿಮ್ಮ ಮಧ್ಯದಲ್ಲಿ ಪ್ರವಾಸ ಮಾಡುತ್ತಾ, ಮಕ್ಕಳನ್ನು ಪಡೆದಿರುವ ವಿದೇಶಿಗಳಿಗೂ ದೇಶವನ್ನು ಬಾಧ್ಯವಾಗಿ ಹಂಚಬೇಕು. ಅವರು ಇಸ್ರಾಯೇಲರ ಮಧ್ಯದಲ್ಲಿ ನಿಮಗೆ ಸ್ವದೇಶಿಗಳಂತೆಯೇ ಇರಬೇಕು. ಇಸ್ರಾಯೇಲಿನ ಕುಲಗಳೊಳಗೆ ನಿಮ್ಮೊಂದಿಗೆ ಅವರಿಗೆ ಸ್ವಾಸ್ತ್ಯವಾಗಲಿ.
ಯೆಹೆಜ್ಕೇಲನು 47 : 23 (IRVKN)
ಯಾವ ಕುಲದಲ್ಲಿ ವಿದೇಶಿಯು ಪ್ರವಾಸವಾಗಿರುತ್ತಾನೋ ಅಲ್ಲಿ ಅವನಿಗೆ ಸ್ವತ್ತನ್ನು ಕೊಡಬೇಕು” ಇದು ಕರ್ತನಾದ ಯೆಹೋವನ ನುಡಿ.

1 2 3 4 5 6 7 8 9 10 11 12 13 14 15 16 17 18 19 20 21 22 23