ಯೆಹೆಜ್ಕೇಲನು 40 : 1 (IRVKN)
ನೂತನ ದೇವಾಲಯದ ವಿಧಾನ ನಾವು ಸೆರೆಯಾದ ಇಪ್ಪತ್ತೈದನೆಯ ವರ್ಷದ, ಮೊದಲನೆಯ ತಿಂಗಳಿನ, ಹತ್ತನೆಯ ದಿನದಲ್ಲಿ, ಪಟ್ಟಣವು ಹಾಳಾದ ಮೇಲೆ ಹದಿನಾಲ್ಕನೆಯ ವರ್ಷದ ಆ ದಿನದಲ್ಲೇ ಯೆಹೋವನ ಹಸ್ತಸ್ಪರ್ಶದಿಂದ ನಾನು ಪರವಶನಾಗಲು, ಆತನು ನನ್ನನ್ನು ಅಲ್ಲಿಗೆ ಬರಮಾಡಿದನು.
ಯೆಹೆಜ್ಕೇಲನು 40 : 2 (IRVKN)
ಯೆಹೋವನು ನನ್ನನ್ನು ಇಸ್ರಾಯೇಲ್ ದೇಶಕ್ಕೆ ತಂದು, ಅತ್ಯುನ್ನತ ಪರ್ವತದ ಮೇಲೆ ಇಳಿಸಿದನೆಂದು ದೇವರ ದರ್ಶನದಲ್ಲಿ ನನಗೆ ಕಂಡುಬಂದಿತು. ದಕ್ಷಿಣದ ಕಡೆ ಆ ಪರ್ವತದ ಮೇಲೆ ಪಟ್ಟಣದಂತಿರುವ ಕಟ್ಟಡಗಳು ಕಾಣಿಸಿತು.
ಯೆಹೆಜ್ಕೇಲನು 40 : 3 (IRVKN)
ಆಮೇಲೆ ಆತನು ನನ್ನನ್ನು ಅಲ್ಲಿಗೆ ತಂದಾಗ, ಇಗೋ, ತಾಮ್ರದಂತೆ ಹೊಳೆಯುವ ಒಬ್ಬ ಪುರುಷನು ನಾರಿನ ನೂಲನ್ನು, ಅಳತೆಯ ಕೋಲನ್ನೂ ಕೈಯಲ್ಲಿ ಹಿಡಿದುಕೊಂಡು ಬಾಗಿಲಲ್ಲೇ ನಿಂತುಕೊಂಡಿದ್ದನು.
ಯೆಹೆಜ್ಕೇಲನು 40 : 4 (IRVKN)
ಆ ಪುರುಷನು ನನಗೆ, “ನರಪುತ್ರನೇ, ನೀನು ಕಣ್ಣಿಟ್ಟು ನೋಡು, ಕಿವಿಗೊಟ್ಟು ಕೇಳು; ನಾನು ನಿನಗೆ ತೋರಿಸುವುದನ್ನೆಲ್ಲಾ ಮನಸ್ಸಿಟ್ಟು ತಿಳಿದುಕೋ. ನಾನು ನಿನಗೆ ತೋರಿಸುವುದನ್ನು ನೀನು ನೋಡಬೇಕೆಂದೇ ಇಲ್ಲಿಗೆ ಬರಮಾಡಿದ್ದೇನೆ. ನೀನು ನೋಡುವುದನ್ನೆಲ್ಲಾ ಇಸ್ರಾಯೇಲ್ ವಂಶದವರಿಗೆ ಪ್ರಕಟಿಸು” ಎಂದು ಹೇಳಿದನು.
ಯೆಹೆಜ್ಕೇಲನು 40 : 5 (IRVKN)
ಪೂರ್ವದಿಕ್ಕಿನ ಹೆಬ್ಬಾಗಿಲು ಇಗೋ, ಒಂದು ಗೋಡೆಯು ಆ ಕಟ್ಟಡವನ್ನು ಸುತ್ತಿಕೊಂಡಿತ್ತು. ಆ ಪುರುಷನ ಕೈಯಲ್ಲಿ ಆರು ಮೊಳ ಉದ್ದದ ಅಳತೆ ಕೋಲು ಇತ್ತು. (ಉದ್ದಮೊಳ ಅಂದರೆ ಮೊಳದ ಮೇಲೆ ಒಂದು ಹಿಡಿ ಉದ್ದ); ಅವನು ಆ ಗೋಡೆಯ ಅಗಲವನ್ನು ಅಳತೆ ಮಾಡಿದಾಗ ಅದರ ಅಗಲವೂ ಮತ್ತು ಎತ್ತರವೂ ಒಂದೇ ಕೋಲಾಗಿತ್ತು.
ಯೆಹೆಜ್ಕೇಲನು 40 : 6 (IRVKN)
ಆಮೇಲೆ ಅವನು ಪೂರ್ವದಿಕ್ಕಿನ ಹೆಬ್ಬಾಗಿಲಿಗೆ ಬಂದು, ಮೆಟ್ಟಿಲುಗಳನ್ನು ಹತ್ತಿ, ಹೊಸ್ತಿಲಿನ ಅಗಲವನ್ನು ಅಳೆದನು. ಅದು ಒಂದೇ ಕೋಲು ಅಗಲವಾಗಿತ್ತು. ಅಗಲವಾದ ಹೊಸ್ತಿಲಿನ ಬಾಗಿಲೂ ಅಲ್ಲಿ ಇತ್ತು.
ಯೆಹೆಜ್ಕೇಲನು 40 : 7 (IRVKN)
ಅಲ್ಲಿ ಗೋಡೆಯಲ್ಲಿದ್ದ ಒಂದೊಂದು ಕೋಣೆಯು ಒಂದು ಕೋಲು ಉದ್ದವಾಗಿಯೂ, ಒಂದು ಕೋಲು ಅಗಲವಾಗಿಯೂ ಇತ್ತು. ದೇವಸ್ಥಾನಕ್ಕೆ ಎದುರಾಗಿರುವ ಹೆಬ್ಬಾಗಿಲ ಕೈಸಾಲೆಯ ಹೊಸ್ತಿಲಿನ ಅಗಲವು ಒಂದು ಕೋಲು. ಆ ಗೋಡೆಕೋಣೆಗಳು ಒಂದಕ್ಕೊಂದು ಐದೈದು ಮೊಳ ದೂರವಾಗಿದ್ದವು; ದೇವಸ್ಥಾನಕ್ಕೆ ಎದುರಾಗಿರುವ ಹೆಬ್ಬಾಗಿಲ ಕೈಸಾಲೆಯ ಹೊಸ್ತಿಲಿನ ಅಗಲವು ಒಂದು ಕೋಲು.
ಯೆಹೆಜ್ಕೇಲನು 40 : 8 (IRVKN)
ಆಮೇಲೆ ಅವನು ಹೆಬ್ಬಾಗಿಲ ಕೈಸಾಲೆಯ ಅಗಲವನ್ನು ಅಳೆದನು. ಅದು ಒಂದು ಕೋಲು ಉದ್ದವಾಗಿತ್ತು.
ಯೆಹೆಜ್ಕೇಲನು 40 : 9 (IRVKN)
ಆಮೇಲೆ ಅವನು ಹೆಬ್ಬಾಗಿಲ ಕೈಸಾಲೆಯನ್ನು ಎಂಟು ಮೊಳವೆಂದೂ; ಅದರ ಕಂಬಗಳನ್ನು ಎರಡು ಮೊಳವೆಂದೂ ಅಳೆದನು. ಹೆಬ್ಬಾಗಿಲಿನ ಕೈಸಾಲೆಯು ದೇವಸ್ಥಾನಕ್ಕೆ ಎದುರಾಗಿತ್ತು.
ಯೆಹೆಜ್ಕೇಲನು 40 : 10 (IRVKN)
ಪೂರ್ವದಿಕ್ಕಿನ ಹೆಬ್ಬಾಗಿಲಿನ ಎರಡು ಪಕ್ಕಗಳಲ್ಲಿ ಮೂರು ಗೋಡೆಕೋಣೆಗಳಿದ್ದವು. ಆ ಮೂರಕ್ಕೂ ಒಂದೇ ಅಳತೆ ಇತ್ತು. ಎರಡು ಪಕ್ಕಗಳಲ್ಲಿನ ಕಂಬಗಳೂ ಒಂದೇ ಅಳತೆಯಾಗಿದ್ದವು.
ಯೆಹೆಜ್ಕೇಲನು 40 : 11 (IRVKN)
ಅನಂತರ ಅವನು ಹೆಬ್ಬಾಗಿಲ ದ್ವಾರದ ಅಗಲ ಹತ್ತು ಮೊಳವೆಂದೂ ಉದ್ದ ಹದಿಮೂರು ಮೊಳವೆಂದೂ ಅಳೆದನು.
ಯೆಹೆಜ್ಕೇಲನು 40 : 12 (IRVKN)
ಎರಡು ಪಕ್ಕಗಳಲ್ಲಿನ ಗೋಡೆಕೋಣೆಗಳ ಮುಂದೆ ಒಂದೊಂದು ಮೊಳ ಅವಕಾಶ; ಎರಡು ಕಡೆಯ ಗೋಡೆಕೋಣೆಗಳ ಅಗಲವು ಮೂರು ಮೊಳ.
ಯೆಹೆಜ್ಕೇಲನು 40 : 13 (IRVKN)
ಅವನು ಒಂದು ಕಡೆಯ ಗೋಡೆಕೋಣೆಗಳ ಮಾಳಿಗೆಯ ಹೊರಗಡೆಯಿಂದ ಇನ್ನೊಂದು ಕಡೆಯ ಗೋಡೆಕೋಣೆಗಳ ಮಾಳಿಗೆಯ ಹೊರಗಡೆ ಅಂದರೆ ಒಂದು ಕೋಣೆಯ ಬಾಗಿಲಿಂದ ಇನ್ನೊಂದು ಕೋಣೆಯ ಬಾಗಿಲಿಗೆ ಹೆಬ್ಬಾಗಿಲಿನ ಅಗಲವನ್ನು ಅಳೆಯಲು ಇಪ್ಪತ್ತೈದು ಮೊಳವಾಗಿತ್ತು.
ಯೆಹೆಜ್ಕೇಲನು 40 : 14 (IRVKN)
ಅಂಗಳದಲ್ಲಿನ ಕಂಬಗಳನ್ನು ಅಳತೆ ಮಾಡಲು ಅರವತ್ತು ಮೊಳವಿದ್ದವು; ಅದನ್ನು ಹೆಬ್ಬಾಗಿಲಿನ ಸುತ್ತುಮುತ್ತಲಿರುವ ಕಂಬದವರೆಗೂ ಅಳೆದನು.
ಯೆಹೆಜ್ಕೇಲನು 40 : 15 (IRVKN)
ಪ್ರವೇಶದ ಬಾಗಿಲಿನ ಮುಂದುಗಡೆಯಿಂದ ಒಳ ಬಾಗಿಲಿನ ದ್ವಾರದ ಅಂಗಳದವರೆಗೂ ಐವತ್ತು ಮೊಳ ಉದ್ದವಾಗಿತ್ತು.
ಯೆಹೆಜ್ಕೇಲನು 40 : 16 (IRVKN)
ಗೋಡೆ ಕೋಣೆಗಳಲ್ಲಿಯೂ ಒಳ ಎರಡು ಕಡೆಯ ನಿಲುವು ಕಂಬಗಳಲ್ಲಿಯೂ, ಕೈಸಾಲೆಗಳಲ್ಲಿಯೂ ಸಹ ಒಳಗಡೆ ಸುತ್ತಲೂ ಇಕ್ಕಟಾದ ಕಿಟಕಿಗಳಿದ್ದವು. ಒಂದೊಂದು ಗೋಡೆಯ ಮೇಲೆ ಖರ್ಜೂರ ಮರಗಳ ಚಿತ್ರಗಳಿದ್ದವು.
ಯೆಹೆಜ್ಕೇಲನು 40 : 17 (IRVKN)
ಹೊರಗಿನ ಅಂಗಳ ಆ ಮೇಲೆ ಅವನು ನನ್ನನ್ನು ಹೊರಗಿನ ಅಂಗಳಕ್ಕೆ ಕರೆದು ತಂದನು; ಇಗೋ, ಕೋಣೆಗಳೂ ಅಂಗಳದ ಸುತ್ತಲೂ ಕಲ್ಲುಹಾಸಿದ ನೆಲವೂ ಕಾಣಿಸಿದವು; ಕಲ್ಲುಹಾಸಿದ ನೆಲದ ಮೇಲೆ ಒಟ್ಟಾಗಿ ಮೂವತ್ತು ಕೊಠಡಿಗಳಿದ್ದವು.
ಯೆಹೆಜ್ಕೇಲನು 40 : 18 (IRVKN)
ಆ ಕೆಳಗಣ ಕಲ್ಲುಹಾಸಿದ ನೆಲವೂ ಹೆಬ್ಬಾಗಿಲುಗಳ ಎರಡು ಪಕ್ಕಗಳವರೆಗೂ ಹಾಸಲ್ಪಟಿತ್ತು. ಅದರ ಅಗಲವೂ ಬಾಗಿಲುಗಳ ಉದ್ದಕ್ಕೆ ಸಮನಾಗಿತ್ತು. ಇದು ಕೆಳಗಿನ ಕಲ್ಲುಹಾಸಿದ ನೆಲವಾಗಿತ್ತು.
ಯೆಹೆಜ್ಕೇಲನು 40 : 19 (IRVKN)
ಅವನು ಪೂರ್ವಕ್ಕೂ, ಉತ್ತರಕ್ಕೂ ಕೆಳಗಣ ಹೆಬ್ಬಾಗಿಲಿನ ಒಳಗಡೆಯಿಂದ ಒಳಗಣ ಅಂಗಳದ ಹೊರಗಡೆಯ ತನಕ ಅಳೆಯಲು, ಅದು ನೂರು ಮೊಳವಿತ್ತು.
ಯೆಹೆಜ್ಕೇಲನು 40 : 20 (IRVKN)
ಉತ್ತರದ ಬಾಗಿಲು ಇದಲ್ಲದೆ ಹೊರಗಣ ಅಂಗಳದ ಉತ್ತರದ ಹೆಬ್ಬಾಗಿಲಿನ ಅಗಲವನ್ನೂ ಮತ್ತು ಉದ್ದವನ್ನೂ ಅಳೆದನು.
ಯೆಹೆಜ್ಕೇಲನು 40 : 21 (IRVKN)
ಅದರೊಳಗೆ ಎರಡು ಕಡೆ ಮೂರು ಗೋಡೆಕೋಣೆಗಳಿದ್ದವು; ಅಲ್ಲಿನ ಕಂಬಗಳೂ ಕೈಸಾಲೆಯೂ ಮೊದಲನೆಯ ಹೆಬ್ಬಾಗಿಲಿನ ಅಳತೆಯಂತಿದ್ದವು. ಆ ಹೆಬ್ಬಾಗಿಲಿನ ಉದ್ದವೂ ಐವತ್ತು ಮೊಳ, ಅಗಲವೂ ಇಪ್ಪತ್ತೈದು ಮೊಳವಾಗಿತ್ತು.
ಯೆಹೆಜ್ಕೇಲನು 40 : 22 (IRVKN)
ಅಲ್ಲಿನ ಕಿಟಕಿಗಳೂ, ಕೈಸಾಲೆಯೂ, ಚಿತ್ರಿತವಾಗಿದ್ದ ಖರ್ಜೂರ ಮರಗಳೂ ಮೂಡಣ ಹೆಬ್ಬಾಗಿಲಿನ ಕಡೆಗೆ ಅಭಿಮುಖವಾಗಿದ್ದವು. ಅವರು ಏಳು ಮೆಟ್ಟಿಲುಗಳನ್ನು ಹತ್ತಿ, ಅಲ್ಲಿಗೆ ಸೇರುತ್ತಿದ್ದರು. ಕೈಸಾಲೆಯು ಅದರ ಒಳಗಡೆಯಿತ್ತು.
ಯೆಹೆಜ್ಕೇಲನು 40 : 23 (IRVKN)
ಹೊರಗಣ ಅಂಗಳದ ಉತ್ತರ ಮತ್ತು ಪೂರ್ವಕ್ಕಿರುವ ಹೆಬ್ಬಾಗಿಲುಗಳಿಗೆ ಎದುರಾಗಿ ಒಳಗಣ ಹೆಬ್ಬಾಗಿಲುಗಳು ಇದ್ದವು; ಒಂದು ಬಾಗಿಲಿನಿಂದ ಎದುರು ಬಾಗಿಲಿಗೆ ನೂರು ಮೊಳ ಅಳತೆ ಮಾಡಿದನು.
ಯೆಹೆಜ್ಕೇಲನು 40 : 24 (IRVKN)
ದಕ್ಷಿಣದ ಬಾಗಿಲು ಆ ಮೇಲೆ ಅವನು ನನ್ನನ್ನು ದಕ್ಷಿಣಕ್ಕೆ ಕರೆ ತಂದನು. ಇಗೋ, ಅಲ್ಲಿಯೂ ಒಂದು ಹೆಬ್ಬಾಗಿಲು ಇತ್ತು; ಅವನು ಅಲ್ಲಿನ ಕಂಬಗಳನ್ನೂ, ಕೈಸಾಲೆಯನ್ನೂ ಈ ಅಳತೆಯ ಪ್ರಕಾರವೇ ಅಳೆದನು.
ಯೆಹೆಜ್ಕೇಲನು 40 : 25 (IRVKN)
ಅದರ ಕೈಸಾಲೆಗಳಲ್ಲಿಯೂ ಸುತ್ತಲೂ ಕಿಟಕಿಗಳೇ ಇದ್ದವು; ಅದರ ಉದ್ದವೂ ಐವತ್ತು ಮೊಳ ಮತ್ತು ಅಗಲವೂ ಇಪ್ಪತ್ತೈದು ಮೊಳವಾಗಿತ್ತು.
ಯೆಹೆಜ್ಕೇಲನು 40 : 26 (IRVKN)
ಅಲ್ಲಿ ಹತ್ತುವುದಕ್ಕೆ ಏಳು ಮೆಟ್ಟಿಲುಗಳಿದ್ದವು. ಕೈಸಾಲೆಯ ಎರಡು ಪಕ್ಕದ ಕಂಬಗಳಲ್ಲಿ ಖರ್ಜೂರ ಮರಗಳ ಚಿತ್ರಗಳಿದ್ದವು.
ಯೆಹೆಜ್ಕೇಲನು 40 : 27 (IRVKN)
ಒಳಗಿನ ಅಂಗಳದಲ್ಲಿ ದಕ್ಷಿಣದ ಕಡೆಗೆ ಹೆಬ್ಬಾಗಿಲಿತ್ತು; ದಕ್ಷಿಣದ ಒಂದು ಬಾಗಿಲಿಂದ ಮತ್ತೊಂದು ಬಾಗಿಲಿಗೆ ನೂರು ಮೊಳ ಅಳೆದನು.
ಯೆಹೆಜ್ಕೇಲನು 40 : 28 (IRVKN)
ಒಳಗಿನ ಅಂಗಳದ ಬಾಗಿಲು ಆಮೇಲೆ ಅವನು ನನ್ನನ್ನು ದಕ್ಷಿಣ ಬಾಗಿಲಿನ ಮಾರ್ಗವಾಗಿ ಒಳಗಣ ಅಂಗಳಕ್ಕೆ ಕರೆದು ತಂದನು. ಅವನು ಆ ದಕ್ಷಿಣ ಹೆಬ್ಬಾಗಿಲನ್ನೂ, ಅಲ್ಲಿನ ಗೋಡೆಕೋಣೆ, ಕಂಬ, ಕೈಸಾಲೆ ಇವುಗಳನ್ನೂ ಅಳೆಯಲು, ಅದರ ಅಳತೆಗಳೆಲ್ಲ ಸಮನಾಗಿದ್ದವು.
ಯೆಹೆಜ್ಕೇಲನು 40 : 29 (IRVKN)
ಅದರಲ್ಲಿಯೂ, ಅದರ ಕೈಸಾಲೆಯಲ್ಲಿಯೂ ಕಿಟಕಿಗಳು ಎಲ್ಲಾ ಕಡೆಯಿದ್ದವು; ಹೆಬ್ಬಾಗಿಲಿನ ಉದ್ದ ಐವತ್ತು ಮೊಳ ಮತ್ತು ಅಗಲ ಇಪ್ಪತ್ತೈದು ಮೊಳವಾಗಿತ್ತು.
ಯೆಹೆಜ್ಕೇಲನು 40 : 30 (IRVKN)
ಸುತ್ತುಮುತ್ತಲಿನ ಕೈಸಾಲೆಗಳ ಉದ್ದ ಇಪ್ಪತ್ತೈದು ಮೊಳ ಮತ್ತು ಅಗಲ ಐದು ಮೊಳವಾಗಿತ್ತು.
ಯೆಹೆಜ್ಕೇಲನು 40 : 31 (IRVKN)
ಆ ಹೆಬ್ಬಾಗಿಲ ಕೈಸಾಲೆಯು ಹೊರಗಣ ಅಂಗಳಕ್ಕೆ ಅಭಿಮುಖವಾಗಿತ್ತು. ಅದರ ಕಂಬಗಳಲ್ಲಿ ಖರ್ಜೂರ ಮರಗಳು ಚಿತ್ರಿತವಾಗಿದ್ದವು. ಅಲ್ಲಿ ಹತ್ತುವುದಕ್ಕೆ ಎಂಟು ಮೆಟ್ಟಿಲುಗಳಿದ್ದವು.
ಯೆಹೆಜ್ಕೇಲನು 40 : 32 (IRVKN)
ಅವನು ನನ್ನನ್ನು ಒಳಗಣ ಅಂಗಳದ ಪೂರ್ವಕ್ಕೆ ಕರೆದು ತಂದು, ಅಲ್ಲಿನ ಹೆಬ್ಬಾಗಿಲನ್ನೂ ಅಳೆಯಲು, ಅದರ ಅಳತೆಗಳೆಲ್ಲಾ ಒಂದೇ ಆಗಿ ಕಂಡುಬಂದವು.
ಯೆಹೆಜ್ಕೇಲನು 40 : 33 (IRVKN)
ಅದರಲ್ಲಿಯೂ ಮತ್ತು ಅದರ ಕೈಸಾಲೆಯಲ್ಲಿಯೂ ಎಲ್ಲಾ ಕಡೆ ಕಿಟಕಿಗಳಿದ್ದವು; ಆ ಹೆಬ್ಬಾಗಿಲಿನ ಉದ್ದ ಐವತ್ತು ಮೊಳ ಮತ್ತು ಅಗಲ ಇಪ್ಪತ್ತೈದು ಮೊಳವಾಗಿತ್ತು.
ಯೆಹೆಜ್ಕೇಲನು 40 : 34 (IRVKN)
ಅದರ ಕೈಸಾಲೆಯು ಹೊರಗಿನ ಅಂಗಳಕ್ಕೆ ಅಭಿಮುಖವಾಗಿತ್ತು; ಕೈಸಾಲೆಯ ಎದುರುಬದುರಿನ ಕಂಬಗಳಲ್ಲಿ ಖರ್ಜೂರ ಮರಗಳು ಚಿತ್ರಿತವಾಗಿದ್ದವು; ಅಲ್ಲಿ ಹತ್ತುವುದಕ್ಕೆ ಎಂಟು ಮೆಟ್ಟಿಲುಗಳಿದ್ದವು.
ಯೆಹೆಜ್ಕೇಲನು 40 : 35 (IRVKN)
ಆ ಮೇಲೆ ಅವನು ನನ್ನನ್ನು ಉತ್ತರದ ಬಾಗಿಲಿಗೆ ಕರೆದು ತಂದನು. ಅದರ ಗೋಡೆಕೋಣೆ, ಕಂಬ, ಕೈಸಾಲೆ ಇವುಗಳನ್ನೂ ಆ ಅಳತೆಯ ಪ್ರಕಾರವೇ ಅಳೆದನು.
ಯೆಹೆಜ್ಕೇಲನು 40 : 36 (IRVKN)
ಅಲ್ಲಿನ ಕೋಣೆಗಳ, ಕಂಬಗಳ, ಕೈಸಾಲೆಗಳ ಎಲ್ಲಾ ಕಡೆಗಳಲ್ಲಿಯೂ ಕಿಟಕಿಗಳಿದ್ದವು; ಅದರ ಉದ್ದ ಐವತ್ತು ಮೊಳ ಮತ್ತು ಅಗಲ ಇಪ್ಪತ್ತೈದು ಮೊಳವಾಗಿತ್ತು.
ಯೆಹೆಜ್ಕೇಲನು 40 : 37 (IRVKN)
ಅದರ ಕಂಬಗಳು, ಕೈಸಾಲೆಗಳು ಹೊರಗಣ ಅಂಗಳಕ್ಕೆ ಅಭಿಮುಖವಾಗಿದ್ದವು; ಆ ಎದುರುಬದುರಿನ ಕಂಬಗಳಲ್ಲಿ ಖರ್ಜೂರ ಮರಗಳು ಚಿತ್ರಿತವಾಗಿದ್ದವು; ಅಲ್ಲಿ ಹತ್ತುವುದಕ್ಕೆ ಎಂಟು ಮೆಟ್ಟಿಲುಗಳಿದ್ದವು.
ಯೆಹೆಜ್ಕೇಲನು 40 : 38 (IRVKN)
ಯಜ್ಞಗಳನ್ನು ಸಿದ್ಧಪಡಿಸುವ ಕೋಣೆಗಳು ಹೆಬ್ಬಾಗಿಲ ಕಂಬಗಳ ಪಕ್ಕದಲ್ಲಿ ಒಂದು ಕೋಣೆಯೂ, ಅದರ ದ್ವಾರವೂ ಕಾಣಿಸಿದವು. ಆ ಕೋಣೆಯೊಳಗೆ ಸರ್ವಾಂಗಹೋಮ ಪಶುಗಳ ಮಾಂಸವನ್ನು ತೊಳೆಯುತ್ತಿದ್ದರು.
ಯೆಹೆಜ್ಕೇಲನು 40 : 39 (IRVKN)
ಹೆಬ್ಬಾಗಿಲಿನ ಕೈಸಾಲೆಯಲ್ಲಿ ಎರಡು ಕಡೆಯಲ್ಲಿಯೂ ಎರಡೆರಡು ಪೀಠಗಳಿದ್ದವು; ಅವುಗಳ ಮೇಲೆ ಸರ್ವಾಂಗಹೋಮ ಪಶು, ದೋಷಪರಿಹಾರಕ ಯಜ್ಞ ಪಶು, ಪ್ರಾಯಶ್ಚಿತ್ತಯಜ್ಞ ಪಶು ಇವುಗಳನ್ನು ವಧಿಸುತ್ತಿದ್ದರು.
ಯೆಹೆಜ್ಕೇಲನು 40 : 40 (IRVKN)
ಉತ್ತರದ ಹೆಬ್ಬಾಗಿಲಿನ ಪ್ರವೇಶ ಸ್ಥಾನದ ಮೆಟ್ಟಿಲುಗಳ ಹತ್ತಿರ ಎರಡು ಪೀಠಗಳು ಇದ್ದವು.
ಯೆಹೆಜ್ಕೇಲನು 40 : 41 (IRVKN)
ಹೆಬ್ಬಾಗಿಲಿನ ಎರಡು ಪಕ್ಕಗಳಲ್ಲಿ ನಾಲ್ಕು ನಾಲ್ಕು ಪೀಠಗಳು, ಒಟ್ಟಿಗೆ ಯಜ್ಞಪಶುಗಳನ್ನು ವಧಿಸುವ ಎಂಟು ಪೀಠಗಳಿದ್ದವು.
ಯೆಹೆಜ್ಕೇಲನು 40 : 42 (IRVKN)
ಇದಲ್ಲದೆ ಸರ್ವಾಂಗಹೋಮಕ್ಕಾಗಿ ಉಪಯುಕ್ತವಾದ ಕೆತ್ತಿದ ಕಲ್ಲಿನ ನಾಲ್ಕು ಪೀಠಗಳಿದ್ದವು. ಅವುಗಳ ಅಗಲ ಒಂದುವರೆ ಮೊಳ, ಉದ್ದ ಒಂದುವರೆ ಮೊಳ, ಎತ್ತರ ಒಂದುವರೆ ಮೊಳವಾಗಿತ್ತು. ಅವುಗಳ ಮೇಲೆ ಸರ್ವಾಂಗಹೋಮ ಪಶುಗಳನ್ನು ವಧಿಸುವ ಉಪಕರಣಗಳನ್ನು ಇಡುತ್ತಿದ್ದರು.
ಯೆಹೆಜ್ಕೇಲನು 40 : 43 (IRVKN)
ಒಳಗೆ, ಸುತ್ತಲು ಕೈ ಅಗಲದಷ್ಟು ಕೊಂಡಿಗಳು ಜಡಿಯಲ್ಪಟ್ಟಿದ್ದವು. ನೈವೇದ್ಯ ಮಾಂಸವು ಪೀಠಗಳ ಮೇಲಿತ್ತು.
ಯೆಹೆಜ್ಕೇಲನು 40 : 44 (IRVKN)
ಯಾಜಕರ ಕೋಣೆಗಳು ಆ ಮೇಲೆ ಅವನು ನನ್ನನ್ನು ಒಳಗಣ ಅಂಗಳಕ್ಕೆ ಕರೆ ತಂದನು. ಇಗೋ, ಅಲ್ಲಿ ಎರಡು ಕೋಣೆಗಳು ಕಾಣಿಸಿದವು. ಉತ್ತರದ ಹೆಬ್ಬಾಗಿಲ ಪಕ್ಕದಲ್ಲಿ ಒಂದು ಕೋಣೆಯು ದಕ್ಷಿಣಕ್ಕೆ ಅಭಿಮುಖವಾಗಿತ್ತು; ಒಂದು ಕೋಣೆಯು ಉತ್ತರಕ್ಕೂ, ಇನ್ನೊಂದು ಕೋಣೆಯು ದಕ್ಷಿಣಕ್ಕೂ ಇತ್ತು.
ಯೆಹೆಜ್ಕೇಲನು 40 : 45 (IRVKN)
ಆಗ ಅವನು ನನಗೆ, “ದಕ್ಷಿಣಕ್ಕೆ ಅಭಿಮುಖವಾಗಿರುವ ಈ ಕೋಣೆಯು ದೇವಾಲಯದ ಮೇಲ್ವಿಚಾರಣೆಯನ್ನು ನಡೆಸುವ ಯಾಜಕರಿಗೆ ನೇಮಕವಾಗಿದೆ.
ಯೆಹೆಜ್ಕೇಲನು 40 : 46 (IRVKN)
ಉತ್ತರಕ್ಕೆ ಅಭಿಮುಖವಾಗಿರುವ ಆ ಕೋಣೆಯು ಯಜ್ಞವೇದಿಯ ಕಾರ್ಯದರ್ಶಿಗಳಾದ ಯಾಜಕರಿಗೆ ನೇಮಕವಾಗಿದೆ. ಚಾದೋಕನ ಸಂತತಿಯವರಾದ ಇವರು ಲೇವಿಯ ಕುಲದವರಲ್ಲಿ ಯೆಹೋವನ ಸನ್ನಿಧಿ ಸೇವಕರಾಗಿದ್ದಾರೆ” ಎಂದು ಹೇಳಿದನು.
ಯೆಹೆಜ್ಕೇಲನು 40 : 47 (IRVKN)
ಆ ಮೇಲೆ ಅವನು ಅಂಗಳವನ್ನು ಅಳೆಯಲು, ಅದು ನೂರು ಮೊಳ ಉದ್ದವಾಗಿಯೂ, ನೂರು ಮೊಳ ಅಗಲವಾಗಿಯೂ ಚಚ್ಚೌಕವಾಗಿತ್ತು. ಯಜ್ಞವೇದಿಯು ದೇವಸ್ಥಾನದ ಮುಂದೆ ಇತ್ತು.
ಯೆಹೆಜ್ಕೇಲನು 40 : 48 (IRVKN)
ದೇವಾಲಯದ ದ್ವಾರಮಂಟಪ ಕೂಡಲೆ ಅವನು ನನ್ನನ್ನು ದೇವಸ್ಥಾನದ ದ್ವಾರಮಂಟಪಕ್ಕೆ ಕರೆ ತಂದನು. ಅದನ್ನು ಅಳೆಯಲು, ಅದರ ಎದುರುಬದುರಿನ ಕಂಬಗಳ ಅಗಲ ಐದೈದು ಮೊಳ, ಬಾಗಿಲಿನ ಎರಡು ಪಕ್ಕದ ಗೋಡೆಗಳ ಅಗಲ ಮೂರು ಮೂರು ಮೊಳವಾಗಿತ್ತು.
ಯೆಹೆಜ್ಕೇಲನು 40 : 49 (IRVKN)
ದ್ವಾರಮಂಟಪದ ಉದ್ದ ಇಪ್ಪತ್ತು ಮೊಳ, ಅಗಲ ಹನ್ನೊಂದು ಮೊಳ ಇದ್ದವು. ಹತ್ತು ಮೆಟ್ಟಿಲುಗಳನ್ನು ಹತ್ತಿ, ಅಲ್ಲಿಗೆ ಸೇರುತ್ತಿದ್ದರು. ಎರಡು ಕಡೆಯ ಕಂಬಗಳ ಪಕ್ಕದಲ್ಲಿ ಒಂದೊಂದು ಉಪಸ್ತಂಭವು ಇತ್ತು.
❮
❯