ಯೆಹೆಜ್ಕೇಲನು 39 : 1 (IRVKN)
ಗೋಗನ ಸೋಲು ಈಗ, “ನರಪುತ್ರನೇ, ನೀನು ಗೋಗನಿಗೆ ವಿರುದ್ಧವಾಗಿ ಈ ಪ್ರವಾದನೆಯನ್ನು ನುಡಿ, ಕರ್ತನಾದ ಯೆಹೋವನು ಇಂತೆನ್ನುತ್ತಾನೆ, ‘ರೋಷ್, ಮೆಷೆಕ್, ತೂಬಲ್ ಜನಾಂಗಗಳ ಪ್ರಭುವಾದ ಗೋಗನೇ, ಆಹಾ! ನಾನು ನಿನ್ನ ವಿರುದ್ಧವಾಗಿದ್ದೇನೆ.
ಯೆಹೆಜ್ಕೇಲನು 39 : 2 (IRVKN)
ನಾನು ನಿನ್ನನ್ನು ಪರಿವರ್ತಿಸಿ, ಮುಂದುವರಿಸಿ ಉತ್ತರದಿಕ್ಕಿನ ಕಟ್ಟಕಡೆಯಿಂದ ಬರಮಾಡಿ, ಇಸ್ರಾಯೇಲಿನ ಪರ್ವತಗಳ ಮೇಲೆ ನುಗ್ಗಿಸಿ,
ಯೆಹೆಜ್ಕೇಲನು 39 : 3 (IRVKN)
ನಾನು ನಿನ್ನ ಎಡಗೈಯಲ್ಲಿರುವ ಬಿಲ್ಲನ್ನು ಹೊಡೆದು ಹಾಕಿ, ನಿನ್ನ ಬಲಗೈಯಲ್ಲಿರುವ ಬಾಣಗಳನ್ನು ಬೀಳುವಂತೆ ಮಾಡುವೆನು.
ಯೆಹೆಜ್ಕೇಲನು 39 : 4 (IRVKN)
ನೀನೂ, ನಿನ್ನ ಎಲ್ಲಾ ಸೈನ್ಯದಳಗಳೂ ಮತ್ತು ನಿನ್ನೊಂದಿಗಿರುವ ನಿನ್ನ ಜನರೂ ಇಸ್ರಾಯೇಲಿನ ಪರ್ವತಗಳಲ್ಲಿ ಬೀಳುವಿರಿ; ನಾನು ನಿಮ್ಮನ್ನು ಹದ್ದುಗಳಿಗೂ, ಪಕ್ಷಿಗಳಿಗೂ ಕಾಡಿನ ಮೃಗಗಳಿಗೂ, ಬಯಲಿನ ಭೂಜಂತುಗಳಿಗೂ ಆಹಾರವಾಗುವಂತೆ ನಾನು ನಿನ್ನನ್ನು ಕೊಡುವೆನು.
ಯೆಹೆಜ್ಕೇಲನು 39 : 5 (IRVKN)
ನೀನು ತೆರೆದ ಬಯಲಿನಲ್ಲಿ ಬೀಳುವಿ. ಏಕೆಂದರೆ ನಾನೇ ಅಪ್ಪಣೆ ಕೊಟ್ಟಿದ್ದೇನೆ’ ಎಂದು ಕರ್ತನಾದ ಯೆಹೋವನ ನುಡಿಯುತ್ತಾನೆ.
ಯೆಹೆಜ್ಕೇಲನು 39 : 6 (IRVKN)
ನಾನು ಮಾಗೋಗ್ ದೇಶದ ಮೇಲೂ, ಕರಾವಳಿಯ ಸೀಮೆಗಳಲ್ಲಿ ನಿರ್ಭಯವಾಗಿ ವಾಸಿಸುವವರ ಮೇಲೂ ಬೆಂಕಿಯನ್ನು ಕಳುಹಿಸುವೆನು. ಆಗ ನಾನೇ ಯೆಹೋವನು ಎಂದು ಅವರಿಗೆ ತಿಳಿಯುವುದು.
ಯೆಹೆಜ್ಕೇಲನು 39 : 7 (IRVKN)
“ನಾನು ನನ್ನ ಪವಿತ್ರ ನಾಮವನ್ನು ನನ್ನ ಜನರಾದ ಇಸ್ರಾಯೇಲರ ಮಧ್ಯದಲ್ಲಿ ವ್ಯಕ್ತಗೊಳಿಸುವೆನು. ಅದನ್ನು ಇನ್ನು ಮುಂದೆ ಅಪಕೀರ್ತಿಗೆ ಗುರಿಯಾಗದ ಹಾಗೆ ಮಾಡುತ್ತೇನೆ. ನಾನೇ ಯೆಹೋವ, ಇಸ್ರಾಯೇಲಿನ ಸದಮಲಸ್ವಾಮಿ ಎಂದು ಅನ್ಯ ಜನಾಂಗಗಳಿಗೆ ಗೊತ್ತಾಗುವುದು.”
ಯೆಹೆಜ್ಕೇಲನು 39 : 8 (IRVKN)
ಕರ್ತನಾದ ಯೆಹೋವನು ಇಂತೆನ್ನುತ್ತಾನೆ. “ಇಗೋ! ಇದು ಬಂತು, ಇದು ಸಂಭವಿಸಿತು; ನಾನು ಮುಂತಿಳಿಸಿದ ದಿನವು ಇದೇ.
ಯೆಹೆಜ್ಕೇಲನು 39 : 9 (IRVKN)
“ಇಸ್ರಾಯೇಲಿನ ಪಟ್ಟಣಗಳ ನಿವಾಸಿಗಳು ಬಯಲಿಗೆ ಬಂದು ಶತ್ರುವಿನ ಆಯುಧಗಳಿಗೆ ಬೆಂಕಿಯಿಟ್ಟು ಸುಟ್ಟುಬಿಡುವರು. ಹೌದು, ಖೇಡ್ಯ, ಗುರಾಣಿ, ಬಿಲ್ಲು, ಬಾಣ, ದೊಣ್ಣೆ, ಈಟಿ ಇವುಗಳನ್ನು ಏಳು ವರ್ಷಗಳ ತನಕ ಸುಡುತ್ತಲೇ ಬರುವರು.
ಯೆಹೆಜ್ಕೇಲನು 39 : 10 (IRVKN)
ಅದಕ್ಕಾಗಿ ಅವರು ಕಾಡಿನಿಂದ ಸೌದೆಯನ್ನು ತರಬೇಕಾಗುವುದಿಲ್ಲ, ವನದಲ್ಲಿ ಮರವನ್ನು ಕಡಿಯಬೇಕಾಗುವುದಿಲ್ಲ; ಆಯುಧಗಳನ್ನೇ ಸೌದೆಯನ್ನಾಗಿ ಉರಿಸುವರು; ತಮ್ಮನ್ನು ಸೂರೆಮಾಡಿದವರನ್ನು ತಾವು ಸೂರೆಮಾಡುವರು, ತಮ್ಮನ್ನು ಕೊಳ್ಳೆಹೊಡೆದವರನ್ನು ತಾವು ಕೊಳ್ಳೆಹೊಡೆಯುವರು” ಇದು ಕರ್ತನಾದ ಯೆಹೋವನ ನುಡಿ.
ಯೆಹೆಜ್ಕೇಲನು 39 : 11 (IRVKN)
“ಆ ದಿನದಲ್ಲಿ ಗೋಗನಿಗೆ ನಾನು ಇಸ್ರಾಯೇಲಿನ ಸಮಾಧಿಗಳಲ್ಲಿ ಸ್ಥಳವನ್ನು ಏರ್ಪಡಿಸುವೆನು; ಲವಣ ಸಮುದ್ರದ ಪೂರ್ವದಿಕ್ಕಿನಲ್ಲಿ ಪ್ರಯಾಣಿಕರ ಮಾರ್ಗವಾದ ಕಣಿವೆಯೇ. ಅಲ್ಲಿ ಪ್ರಯಾಣ ಮಾಡಲು ಆಗುವುದಿಲ್ಲ; ಅಲ್ಲೇ ಗೋಗನನ್ನೂ ಮತ್ತು ಅವನ ಸಮೂಹವೆಲ್ಲವನ್ನೂ ಸಮಾಧಿ ಮಾಡುವರು; ಅ ಕಣಿವೆಯನ್ನು ‘ಗೋಗನ ಸಮೂಹದ ಕಣಿವೆ’ ಎಂದು ಕರೆಯುವರು.
ಯೆಹೆಜ್ಕೇಲನು 39 : 12 (IRVKN)
ಇಸ್ರಾಯೇಲರು ದೇಶವನ್ನು ಶುದ್ಧಿಮಾಡುವುದಕ್ಕಾಗಿ ಏಳು ತಿಂಗಳು ಅವರನ್ನು ಸಮಾಧಿ ಮಾಡುತ್ತಲೇ ಇರುವರು.
ಯೆಹೆಜ್ಕೇಲನು 39 : 13 (IRVKN)
ಹೌದು, ದೇಶದ ಸಕಲ ಪ್ರಜೆಗಳು ಅವರನ್ನು ಸಮಾಧಿ ಮಾಡುವರು. ಹೀಗೆ ನಾನು ಮಹಿಮೆಯನ್ನು ಹೊಂದುವ ದಿನವು ನನ್ನ ಜನರಿಗೆ ಸ್ಮರಣೆಯ ದಿನವಾಗಿರುವುದು” ಇದು ಕರ್ತನಾದ ಯೆಹೋವನ ನುಡಿ.
ಯೆಹೆಜ್ಕೇಲನು 39 : 14 (IRVKN)
ತರುವಾಯ ಅವರು ದೇಶವನ್ನು ಶುದ್ಧಿ ಮಾಡುವುದಕ್ಕೆ ತಕ್ಕವರನ್ನು ಆರಿಸಿ, ದೇಶದಲ್ಲಿ ತಿರುಗುತ್ತಾ ನೆಲದ ಮೇಲೆ ಉಳಿದಿರುವವರನ್ನು ಸಮಾಧಿ ಮಾಡುವುದಕ್ಕೆ ಯಾವಾಗಲೂ ದೇಶವನ್ನು ಹಾದುಹೋಗುವ ಮನುಷ್ಯರನ್ನೇ ನೇಮಿಸುವರು ಮತ್ತು ಏಳು ತಿಂಗಳಾದ ಮೇಲೆ ಇವರು ಈ ಹುಡುಕುವ ಕೆಲಸದಲ್ಲಿ ತೊಡಗುವರು.
ಯೆಹೆಜ್ಕೇಲನು 39 : 15 (IRVKN)
ಪ್ರಯಾಣಿಕರಲ್ಲಿ ಯಾರೇ ಆಗಲಿ ಪ್ರಯಾಣ ಮಾಡುತ್ತಿರುವಾಗ ಮನುಷ್ಯನ ಎಲುಬನ್ನು ನೋಡಿದರೆ, ಅಲ್ಲಿ ಒಂದು ಗುರುತನ್ನು ನಿಲ್ಲಿಸುವರು; ಸಮಾಧಿ ಮಾಡುವವರು ಗೋಗನ ಸಮೂಹದ ಕಣಿವೆಯಲ್ಲಿ ಅದನ್ನು ಸಮಾಧಿ ಮಾಡುವ ತನಕ ಆ ಗುರುತು ಹಾಗೆಯೇ ನಿಂತಿರುವುದು.
ಯೆಹೆಜ್ಕೇಲನು 39 : 16 (IRVKN)
ಆ ಪಟ್ಟಣಕ್ಕೆ ‘ಹಮೇನ್’ “ಸಮೂಹಪುರ” ಎಂದು ಹೆಸರಾಗುವುದು. ಹೀಗೆ ಅವರು ದೇಶವನ್ನು ಶುದ್ಧಿಮಾಡುವರು.
ಯೆಹೆಜ್ಕೇಲನು 39 : 17 (IRVKN)
ಕರ್ತನಾದ ಯೆಹೋವನು ಇಂತೆನ್ನುತ್ತಾನೆ, “ನರಪುತ್ರನೇ, ಎಲ್ಲಾ ಬಗೆಯ ಪಕ್ಷಿಗಳಿಗೂ, ಸಮಸ್ತ ಭೂಜಂತುಗಳಿಗೂ ಹೀಗೆ ನುಡಿ, ‘ನೀವು ಕೂಡಿಬನ್ನಿರಿ; ನಾನು ಇಸ್ರಾಯೇಲಿನ ಪರ್ವತಗಳ ಮೇಲೆ ನಿಮಗಾಗಿ ಅರ್ಪಿಸುವ ಮಹಾಯಜ್ಞಕ್ಕೆ ಎಲ್ಲಾ ಕಡೆಯಿಂದಲೂ ನೆರೆದು ಬಂದು, ಮಾಂಸವನ್ನು ತಿಂದು, ರಕ್ತವನ್ನು ಕುಡಿಯಿರಿ.
ಯೆಹೆಜ್ಕೇಲನು 39 : 18 (IRVKN)
ಟಗರುಗಳ, ಕುರಿಗಳ, ಹೋತಗಳ, ಹೋರಿಗಳ ಅಂತು ಬಾಷಾನಿನ ಕೊಬ್ಬಿದ ಪಶುಗಳ ರಕ್ತವನ್ನು ಕುಡಿಯುವಿರಿ. ನೀವು ಬಲಿಷ್ಠರ ಮತ್ತು ಭೂಪತಿಗಳ ಮಾಂಸವನ್ನು ತಿನ್ನುವಿರಿ.
ಯೆಹೆಜ್ಕೇಲನು 39 : 19 (IRVKN)
ನಾನು ನಿಮಗೋಸ್ಕರ ಅರ್ಪಿಸುವ ಯಜ್ಞಪಶುಗಳ ಮಾಂಸವನ್ನು ಹೊಟ್ಟೆತುಂಬಾ ತಿನ್ನುವಿರಿ, ರಕ್ತವನ್ನು ಅಮಲೇರುವವರೆಗೂ ಕುಡಿಯುವಿರಿ.
ಯೆಹೆಜ್ಕೇಲನು 39 : 20 (IRVKN)
ನಾನು ಸಿದ್ಧಪಡಿಸುವ ಆ ಔತಣದಲ್ಲಿ ಕುದುರೆ, ರಾಹುತ, ಶೂರ ಸಕಲ ವಿಧವಾದ ಸೈನಿಕರನ್ನು ಬೇಕಾದಷ್ಟು ಭಕ್ಷಿಸುವಿರಿ’ ” ಇದು ಕರ್ತನಾದ ಯೆಹೋವನ ನುಡಿ.
ಯೆಹೆಜ್ಕೇಲನು 39 : 21 (IRVKN)
“ನಂತರ ನಾನು ಜನಾಂಗಗಳ ನಡುವೆ ನನ್ನ ಮಹಿಮೆಯನ್ನು ಸ್ಥಾಪಿಸಲು, ಆ ಸೈನಿಕರ ಮೇಲೆ ಕೈಮಾಡಿ, ನ್ಯಾಯದಂಡನೆ ನಡೆಸಿದವನು ನಾನೇ ಎಂಬುದು ಆ ಜನಾಂಗಗಳಿಗೆಲ್ಲಾ ತಿಳಿಯುವುದು.
ಯೆಹೆಜ್ಕೇಲನು 39 : 22 (IRVKN)
ಹೀಗೆ ಇಸ್ರಾಯೇಲ್ ವಂಶದವರು ನಾನೇ ಅವರ ದೇವರಾದ ಯೆಹೋವನೆಂದು ಅಂದಿನಿಂದ ಯಾವಾಗಲೂ ತಿಳಿದುಕೊಳ್ಳುವರು.
ಯೆಹೆಜ್ಕೇಲನು 39 : 23 (IRVKN)
“ಇದಲ್ಲದೆ, ಇಸ್ರಾಯೇಲರು ತಮ್ಮ ಅಧರ್ಮದ ನಿಮಿತ್ತವೇ ಸೆರೆಯಾಗಿ ಹೋದರೆಂತಲೂ, ಅವರು ನನಗೆ ದ್ರೋಹಮಾಡಿದ್ದರಿಂದ ನಾನು ಅವರಿಗೆ ವಿಮುಖನಾಗಿ ಅವರೆಲ್ಲರೂ ಖಡ್ಗದಿಂದ ಹತರಾಗುವಂತೆ ಅವರನ್ನು ಶತ್ರುಗಳ ವಶ ಮಾಡಿದೆನೆಂತಲೂ ಜನಾಂಗಗಳಿಗೆ ಗೊತ್ತಾಗುವುದು.
ಯೆಹೆಜ್ಕೇಲನು 39 : 24 (IRVKN)
ಅವರ ಪಾಪಕ್ಕೂ, ದುರಾಚಾರಗಳಿಗೂ ತಕ್ಕಂತೆ ನಾನು ಅವರನ್ನು ದಂಡಿಸಿ ನನ್ನ ಮುಖವನ್ನು ಅವರಿಗೆ ಮರೆಮಾಡಿದ್ದೇನೆ.”
ಯೆಹೆಜ್ಕೇಲನು 39 : 25 (IRVKN)
ದೇವಜನರ ಪುನಃಸ್ಥಾಪನೆ ಕರ್ತನಾದ ಯೆಹೋವನು ಇಂತೆನ್ನುತ್ತಾನೆ, “ನನ್ನ ಪವಿತ್ರನಾಮಕ್ಕೆ ಇನ್ನು ಅಪಕೀರ್ತಿ ಬಾರದಂತೆ ನಾನು ಈಗ ಅನುಕಂಪವುಳ್ಳವನಾಗಿ ಯಾಕೋಬ್ಯರ ದುರಾವಸ್ಥೆಯನ್ನು ತಪ್ಪಿಸಿ, ಇಸ್ರಾಯೇಲ್ ವಂಶದವರಿಗೆಲ್ಲಾ ಕೃಪೆ ತೋರಿಸುವೆನು.
ಯೆಹೆಜ್ಕೇಲನು 39 : 26 (IRVKN)
ನಾನು ನನ್ನ ಜನರನ್ನು ದೇವದ್ರೋಹಿಗಳಾದ ಅನ್ಯಜನಾಂಗಗಳ ವಶದಿಂದ ತಪ್ಪಿಸಿ, ಆ ಶತ್ರುಗಳ ದೇಶಗಳಿಂದ ಒಟ್ಟುಗೂಡಿಸಿ, ಅನೇಕ ಜನಾಂಗಗಳ ಕಣ್ಣೆದುರಿಗೆ ಅವರ ರಕ್ಷಣೆಯ ಮೂಲಕ ನನ್ನ ಗೌರವವನ್ನು ಕಾಪಾಡಿಕೊಳ್ಳುವೆನು.
ಯೆಹೆಜ್ಕೇಲನು 39 : 27 (IRVKN)
ನಾನು ಅವರನ್ನು ಜನರೊಳಗಿಂದ ತಂದ ಮೇಲೆ ಅವರ ಶತ್ರುಗಳ ದೇಶದೊಳಗಿಂದ ಅವರನ್ನು ಕೂಡಿಸಿ, ಅನೇಕ ಜನಾಂಗಗಳ ಮುಂದೆ ಅವರಲ್ಲಿ ಪರಿಶುದ್ಧನಾಗುವೆನು.
ಯೆಹೆಜ್ಕೇಲನು 39 : 28 (IRVKN)
“ನಾನು ಅವರನ್ನು ಅನ್ಯಜನಾಂಗಗಳೊಳಗೆ ಸೆರೆಹೋಗುವಂತೆ ಮಾಡಿದ ಮೇಲೆ ಅವರನ್ನು ಒಟ್ಟುಗೂಡಿಸಿ, ಸ್ವದೇಶಕ್ಕೆ ಬರಮಾಡಿದುದರಿಂದ ನಾನೇ ಅವರ ದೇವರಾದ ಯೆಹೋವನು ಎಂದು ದೃಢಮಾಡಿಕೊಳ್ಳುವರು. ಅವರಲ್ಲಿ ಯಾರನ್ನೂ ದೇಶದಲ್ಲಿ ವಾಸಿಸುವುದಕ್ಕೆ ಬಿಡುವುದಿಲ್ಲ.
ಯೆಹೆಜ್ಕೇಲನು 39 : 29 (IRVKN)
ಇನ್ನೆಂದಿಗೂ ನಾನು ನನ್ನ ಮುಖವನ್ನು ಮರೆಮಾಡುವುದಿಲ್ಲ. ಇಸ್ರಾಯೇಲ್ ವಂಶದ ಮೇಲೆ ನನ್ನ ಆತ್ಮವನ್ನು ಸುರಿಸಿದ್ದೇನೆ” ಇದು ಕರ್ತನಾದ ಯೆಹೋವನ ನುಡಿ.
❮
❯