ಯೆಹೆಜ್ಕೇಲನು 33 : 1 (IRVKN)
ಇಸ್ರಾಯೇಲರ ಕಾವಲುಗಾರನಾದ ಯೆಹೆಜ್ಕೇಲನು ಯೆಹೋವನು ಈ ವಾಕ್ಯವನ್ನು ನನಗೆ ದಯಪಾಲಿಸಿದನು,
ಯೆಹೆಜ್ಕೇಲನು 33 : 2 (IRVKN)
“ನರಪುತ್ರನೇ, ನಿನ್ನ ಜನರನ್ನು ಸಂಬೋಧಿಸಿ, ಅವರಿಗೆ ಹೀಗೆ ನುಡಿ, ‘ನಾನು ದೇಶದ ಮೇಲೆ ಖಡ್ಗವನ್ನು ಬೀಳಮಾಡುವಾಗ, ಆ ದೇಶದವರು ತಮ್ಮಲ್ಲಿ ಒಬ್ಬ ಮನುಷ್ಯನನ್ನು ಆರಿಸಿ, ತಮಗೆ ಕಾವಲುಗಾರನನ್ನಾಗಿ ನೇಮಿಸಿಕೊಳ್ಳಲಿ.
ಯೆಹೆಜ್ಕೇಲನು 33 : 3 (IRVKN)
ಅವರು ದೇಶದ ಮೇಲೆ ಬೀಳುವ ಖಡ್ಗವನ್ನು ನೋಡಿದ ಕೂಡಲೆ, ಕೊಂಬನ್ನು ಊದಿ ಸ್ವಜನರನ್ನು ಎಚ್ಚರಿಸಲಿ.
ಯೆಹೆಜ್ಕೇಲನು 33 : 4 (IRVKN)
ಕೊಂಬಿನ ಧ್ವನಿಯನ್ನು ಕೇಳಿದ ಯಾರೇ ಆಗಲಿ ಎಚ್ಚರಗೊಳ್ಳದೆ, ಖಡ್ಗಕ್ಕೆ ಸಿಕ್ಕಿ ನಾಶವಾದರೆ, ತನ್ನ ಮರಣಕ್ಕೆ ತಾನೇ ಹೊಣೆಯಾಗುವನು.
ಯೆಹೆಜ್ಕೇಲನು 33 : 5 (IRVKN)
ಏಕೆಂದರೆ ಅವನು ಕೊಂಬಿನ ಧ್ವನಿಯನ್ನು ಕೇಳಿಯೂ ಎಚ್ಚರಗೊಳ್ಳಲಿಲ್ಲ; ತನ್ನ ಮರಣಕ್ಕೆ ತಾನೇ ಕಾರಣನಾಗುವನು; ಎಚ್ಚರಗೊಂಡಿದ್ದರೆ ತನ್ನ ಪ್ರಾಣವನ್ನು ಉಳಿಸಿಕೊಳ್ಳುತ್ತಿದ್ದನು.
ಯೆಹೆಜ್ಕೇಲನು 33 : 6 (IRVKN)
ಆದರೆ ಕಾವಲುಗಾರನು ಬೀಳುವ ಖಡ್ಗವನ್ನು ನೋಡಿಯೂ, ಕೊಂಬನ್ನೂದದೆ, ಸ್ವಜನರನ್ನು ಎಚ್ಚರಿಸದೆ ಇದ್ದರೆ, ಖಡ್ಗವು ಬಿದ್ದು ಆ ಜನರೊಳಗೆ ಯಾರನ್ನೇ ಆಗಲಿ ನಾಶಮಾಡಿದರೆ, ತನ್ನ ಅಧರ್ಮದಲ್ಲೇ ನಾಶಗೊಂಡ ಆ ಮನುಷ್ಯನ ಮರಣಕ್ಕೆ ಕಾವಲುಗಾರನನ್ನೇ ಹೊಣೆಮಾಡುವೆನು.’
ಯೆಹೆಜ್ಕೇಲನು 33 : 7 (IRVKN)
“ಆದುದರಿಂದ ನರಪುತ್ರನೇ, ನಾನು ನಿನ್ನನ್ನು ಇಸ್ರಾಯೇಲ್ ವಂಶದವರಿಗೆ ಕಾವಲುಗಾರನನ್ನಾಗಿ ನೇಮಿಸಿದ್ದೇನೆ; ನೀನು ನನ್ನ ಬಾಯಿಂದ ಹೊರಡುವ ಮಾತನ್ನು ಕೇಳಿ, ನನ್ನ ದೂತನಾಗಿ ಅವರನ್ನು ಎಚ್ಚರಿಸು.
ಯೆಹೆಜ್ಕೇಲನು 33 : 8 (IRVKN)
ನಾನು ದುಷ್ಟನಿಗೆ ದುಷ್ಟನೇ, ‘ನೀನು ಖಂಡಿತವಾಗಿ ಸಾಯುವೆ’ ಎಂದು ಹೇಳುವಾಗ, ನೀನು ಆ ದುಷ್ಟನನ್ನು ತನ್ನ ದುರ್ಮಾರ್ಗದಿಂದ ತಪ್ಪಿಸಿ, ಅವನನ್ನು ಎಚ್ಚರಗೊಳಿಸದೆ ಹೋದರೆ, ಅವನು ತನ್ನ ಅಪರಾಧದಿಂದಲೇ ಸಾಯಬೇಕಾಗುವುದು; ಅವನ ಮರಣಕ್ಕೆ ಹೊಣೆಯಾದ ನಿನಗೆ ನಾನು ಮುಯ್ಯಿತೀರಿಸುವೆನು.
ಯೆಹೆಜ್ಕೇಲನು 33 : 9 (IRVKN)
ಆದರೆ ನೀನು ದುಷ್ಟನನ್ನು ದುರ್ಮಾರ್ಗದಿಂದ ತಪ್ಪಿಸಲು, ಅವನನ್ನು ಎಚ್ಚರಿಸಿದರೂ ಅವನು ಅದನ್ನು ಬಿಡದೆ ಹೋದರೆ ತನ್ನ ಅಪರಾಧದಲ್ಲೇ ಸಾಯುವನು; ನೀನೋ ನಿನ್ನ ಪ್ರಾಣವನ್ನು ಉಳಿಸಿಕೊಳ್ಳುವಿ.
ಯೆಹೆಜ್ಕೇಲನು 33 : 10 (IRVKN)
ಕಾವಲುಗಾರನ ಸಂದೇಶ “ನರಪುತ್ರನೇ, ಇಸ್ರಾಯೇಲ್ ವಂಶದವರಿಗೆ ಹೀಗೆ ನುಡಿ, ‘ಅಯ್ಯೋ, ನಮ್ಮ ದ್ರೋಹಗಳ ಮತ್ತು ಪಾಪಗಳ ಭಾರವು ನಮ್ಮ ಮೇಲೆ ಬಿದ್ದಿದೆ; ಅವುಗಳಿಂದ ಕ್ಷೀಣವಾಗಿ ಹೋಗುತ್ತಿದ್ದೇವೆ; ನಾವು ಹೇಗೆ ಬದುಕುವೆವು? ಅಂದುಕೊಳ್ಳುತ್ತೀರಲ್ಲಾ.
ಯೆಹೆಜ್ಕೇಲನು 33 : 11 (IRVKN)
ನನ್ನ ಜೀವದಾಣೆ, ದುಷ್ಟನ ಸಾವಿನಲ್ಲಿ ನನಗೆ ಸ್ವಲ್ಪವೂ ಸಂತೋಷವಿಲ್ಲ; ಅವನು ತನ್ನ ದುರ್ಮಾರ್ಗವನ್ನು ಬಿಟ್ಟುಬಿಡಲಿ; ಇಸ್ರಾಯೇಲಿನ ಮನೆತನದವರೇ ನೀವು ಏಕೆ ಸಾಯಬೇಕು?’ ” ಇದು ಕರ್ತನಾದ ಯೆಹೋವನ ನುಡಿ.
ಯೆಹೆಜ್ಕೇಲನು 33 : 12 (IRVKN)
ನರಪುತ್ರನೇ, ನಿನ್ನ ಜನರಿಗೆ ಹೀಗೆ ಹೇಳು, “ನೀತಿವಂತನು ದ್ರೋಹಮಾಡಿದ್ದಲ್ಲಿ ಅವನ ನೀತಿಯು ಅವನನ್ನು ಉದ್ಧರಿಸುವುದಿಲ್ಲ; ದುಷ್ಟನು ತನ್ನ ದುಷ್ಟತನವನ್ನು ಬಿಟ್ಟಲ್ಲಿ, ಅವನ ಪಾಪವು ಅವನನ್ನು ಬೀಳಿಸುವುದಿಲ್ಲ; ನೀತಿವಂತನು ಪಾಪಮಾಡಿದಲ್ಲಿ ಅವನ ನೀತಿಯು ಅವನನ್ನು ಬದುಕಿಸುವುದಿಲ್ಲ.
ಯೆಹೆಜ್ಕೇಲನು 33 : 13 (IRVKN)
ನಾನು ನೀತಿವಂತನಿಗೆ, ‘ನೀನು ಖಂಡಿತವಾಗಿ ಬದುಕುವಿ’ ಎಂದು ಹೇಳುವಾಗ, ಅವನು ತನ್ನ ನೀತಿಯ ಮೇಲೆ ಭರವಸವಿಟ್ಟು ಪಾಪ ಮಾಡಿದರೆ, ಅವನು ಮಾಡಿದ ಯಾವ ಸುಕೃತ್ಯವೂ ಅವನ ಲೆಕ್ಕಕ್ಕೆ ಸೇರಿಸಲ್ಪಡುವುದಿಲ್ಲ; ಅವನು ಮಾಡುವ ಪಾಪದಿಂದಲೇ ಅವನು ಸಾಯುವನು.
ಯೆಹೆಜ್ಕೇಲನು 33 : 14 (IRVKN)
ನಾನು ದುಷ್ಟನಿಗೆ, ‘ನೀನು ಖಂಡಿತವಾಗಿ ಸಾಯುವಿ’ ಎಂದು ಹೇಳಲು ಅವನು ತನ್ನ ಪಾಪವನ್ನು ಬಿಟ್ಟು ನೀತಿನ್ಯಾಯಗಳನ್ನು ನಡೆಸಿದರೆ,
ಯೆಹೆಜ್ಕೇಲನು 33 : 15 (IRVKN)
ಆ ದುಷ್ಟನು ತನ್ನ ಒತ್ತೆಯನ್ನು ಬಿಗಿಹಿಡಿಯದೆ, ದೋಚಿಕೊಂಡದ್ದನ್ನು ಹಿಂದಕ್ಕೆ ಕೊಟ್ಟು, ಅನ್ಯಾಯವನ್ನು ಮಾಡದೆ, ಜೀವಾಧಾರವಾದ ವಿಧಿಗಳನ್ನು ಅನುಸರಿಸಿ, ಸಕಲ ದುಷ್ಕರ್ಮಗಳಿಗೂ ದೂರನಾದರೆ ಸಾಯುವುದಿಲ್ಲ. ಖಂಡಿತವಾಗಿ ಬದುಕುವನು.
ಯೆಹೆಜ್ಕೇಲನು 33 : 16 (IRVKN)
ಅವನು ಮಾಡಿದ ಯಾವ ಪಾಪವೂ ಅವನ ಲೆಕ್ಕಕ್ಕೆ ಸೇರಿಸಲ್ಪಡುವುದಿಲ್ಲ; ನೀತಿನ್ಯಾಯಗಳನ್ನು ನಡೆಸುತ್ತಿದ್ದುದರಿಂದ ನಿಶ್ಚಯವಾಗಿ ಬದುಕುವನು.
ಯೆಹೆಜ್ಕೇಲನು 33 : 17 (IRVKN)
ಆದರೆ ನಿನ್ನ ಜನರು ಕರ್ತನ ಮಾರ್ಗವು ಸಮವಲ್ಲವೆಂದು ಹೇಳುತ್ತಿದ್ದಾರೆ, ಆದರೆ ಅವರ ಮಾರ್ಗವೇ ಸಮವಿಲ್ಲ.
ಯೆಹೆಜ್ಕೇಲನು 33 : 18 (IRVKN)
ನೀತಿವಂತನು ತನ್ನ ನೀತಿಯನ್ನು ಬಿಟ್ಟು ಅಧರ್ಮಮಾಡಿದರೆ ಆ ಅಧರ್ಮದಿಂದಲೇ ಸಾಯುವನು.
ಯೆಹೆಜ್ಕೇಲನು 33 : 19 (IRVKN)
ದುಷ್ಟನು ತನ್ನ ದುಷ್ಟತನವನ್ನು ಬಿಟ್ಟು, ನೀತಿನ್ಯಾಯಗಳನ್ನು ನಡೆಸಿದರೆ ಅವುಗಳಿಂದ ಬದುಕುವನು.
ಯೆಹೆಜ್ಕೇಲನು 33 : 20 (IRVKN)
ಆದರೆ ನೀವು, ‘ಯೆಹೋವನ ಮಾರ್ಗವು ಸಮವಲ್ಲ’ ಎಂದು ಹೇಳುತ್ತಿದ್ದೀರಿ; ಇಸ್ರಾಯೇಲ್ ವಂಶದವರೇ, ನಿಮ್ಮ ನಿಮ್ಮ ನಡತೆಗೆ ತಕ್ಕ ಹಾಗೆ ನಾನು ನಿಮಗೆ ತೀರ್ಪುಮಾಡುವೆನು.”
ಯೆಹೆಜ್ಕೇಲನು 33 : 21 (IRVKN)
ಯೆರೂಸಲೇಮಿನ ಪತನದ ವಿವರಣೆ ನಾವು ಸೆರೆಯಾದ ಹನ್ನೆರಡನೆಯ ವರ್ಷದ, ಹತ್ತನೆಯ ತಿಂಗಳಿನ ಐದನೆಯ ದಿನದಲ್ಲಿ, ಯೆರೂಸಲೇಮಿನಿಂದ ತಪ್ಪಿಸಿಕೊಂಡವನೊಬ್ಬನು ನನ್ನ ಬಳಿಗೆ ಬಂದು, “ಪಟ್ಟಣವು ಶತ್ರುವಶವಾಯಿತು” ಎಂದು ಹೇಳಿದನು.
ಯೆಹೆಜ್ಕೇಲನು 33 : 22 (IRVKN)
ಅವನು ಬರುವುದಕ್ಕಿಂತ ಮೊದಲೇ, ಸಾಯಂಕಾಲದಲ್ಲಿ ನಾನು ಯೆಹೋವನ ಹಸ್ತಸ್ಪರ್ಶದಿಂದ ಪರವಶನಾಗಿರಲು, ಯೆಹೋವನು ತಪ್ಪಿಸಿಕೊಂಡವನು ಬೆಳಿಗ್ಗೆ ನನ್ನ ಬಳಿಗೆ ಬರುವ ತನಕ ನನ್ನ ಬಾಯಿ ತೆರೆಯಲ್ಪಟ್ಟಿತ್ತು; ಹೌದು, ನನ್ನ ಬಾಯಿ ತೆರೆದಿತ್ತು, ನಾನು ಮೂಕನಾಗಿರಲಿಲ್ಲ.
ಯೆಹೆಜ್ಕೇಲನು 33 : 23 (IRVKN)
ಆಗ ಯೆಹೋವನು ನನಗೆ ಈ ವಾಕ್ಯವನ್ನು ದಯಪಾಲಿಸಿದನು,
ಯೆಹೆಜ್ಕೇಲನು 33 : 24 (IRVKN)
“ನರಪುತ್ರನೇ, ಇಸ್ರಾಯೇಲ್ ಸೀಮೆಯ ಹಾಳು ಪ್ರದೇಶಗಳಲ್ಲಿ ವಾಸಿಸುವವರು ‘ಅಬ್ರಹಾಮನು ಒಂಟಿಗನಾಗಿದ್ದರೂ ಈ ದೇಶವು ಅವನಿಗೆ ಸ್ವತ್ತಾಗಿ ಸಿಕ್ಕಿತಲ್ಲಾ; ಅದು ಬಹು ಜನರಾದ ನಮಗೆ ಸ್ವತ್ತಾಗಿ ಸಿಕ್ಕಿದ್ದು ಬಹು ದೊಡ್ಡದು?’ ” ಎಂದು ಅಂದುಕೊಳ್ಳುತ್ತಿದ್ದಾರೆ.
ಯೆಹೆಜ್ಕೇಲನು 33 : 25 (IRVKN)
ಆದುದರಿಂದ ನೀನು ಅವರಿಗೆ ಹೀಗೆ ನುಡಿ, ಕರ್ತನಾದ ಯೆಹೋವನು ಇಂತೆನ್ನುತ್ತಾನೆ, “ರಕ್ತದಿಂದ ಕೂಡಿದ ಮಾಂಸವನ್ನು ತಿನ್ನುತ್ತೀರಲ್ಲವೇ? ವಿಗ್ರಹಗಳ ಕಡೆಗೆ ನಿಮ್ಮ ಕಣ್ಣೆತ್ತಿ ನೋಡುತ್ತೀರಿ ಜನರ ರಕ್ತವನ್ನು ಚೆಲ್ಲುತ್ತೀರಿ; ನಿಮ್ಮಂಥವರು ದೇಶವನ್ನು ಸ್ವಾಧೀನಪಡಿಸಿಕೊಳ್ಳಬಹುದೋ?
ಯೆಹೆಜ್ಕೇಲನು 33 : 26 (IRVKN)
ನೀವು ನಿಮ್ಮ ಕತ್ತಿಯ ಮೇಲೆ ನಿಂತು ಅಸಹ್ಯವಾದ ಕೆಲಸಗಳಲ್ಲಿ ನಿರತರಾಗಿದ್ದೀರಿ, ದುರಾಚಾರ ನಡೆಸುತ್ತೀರಿ, ನಿಮ್ಮಲ್ಲಿ ಪ್ರತಿಯೊಬ್ಬನು ತನ್ನ ನೆರೆಯವನ ಹೆಂಡತಿಯನ್ನು ಮಾನಭಂಗ ಪಡಿಸುತ್ತಾನೆ; ನಿಮ್ಮಂಥವರು ದೇಶವನ್ನು ಸ್ವಾಧೀನಪಡಿಸಿಕೊಳ್ಳಬಹುದೋ?”
ಯೆಹೆಜ್ಕೇಲನು 33 : 27 (IRVKN)
ಅವರಿಗೆ ಹೀಗೆ ನುಡಿ, ಕರ್ತನಾದ ಯೆಹೋವನು ಇಂತೆನ್ನುತ್ತಾನೆ, “ನನ್ನ ಜೀವದಾಣೆ, ಹಾಳು ಪ್ರದೇಶಗಳಲ್ಲಿರುವವರನ್ನು ಖಡ್ಗವು ಹತಿಸುವುದು; ಬಯಲಿನಲ್ಲಿರುವವರನ್ನು ನಾನು ಮೃಗಗಳಿಗೆ ತುತ್ತುಮಾಡುವೆನು; ಗುಹೆ ದುರ್ಗಗಳಲ್ಲಿರುವವರನ್ನು ವ್ಯಾಧಿಯು ಸಾಯಿಸುವುದು.
ಯೆಹೆಜ್ಕೇಲನು 33 : 28 (IRVKN)
ನಾನು ದೇಶವನ್ನು ಹಾಳುಮಾಡುವೆನು, ಅದರ ಶಕ್ತಿಯ ಅಹಂಕಾರವು ಇಳಿದು ಹೋಗುವುದು; ಇಸ್ರಾಯೇಲಿನ ಪರ್ವತಗಳು ಹಾಳಾಗಿರುವುದರಿಂದ ಯಾರೂ ಅಲ್ಲಿ ಹಾದು ಹೋಗುವುದಿಲ್ಲ.
ಯೆಹೆಜ್ಕೇಲನು 33 : 29 (IRVKN)
ಅವರು ನಡೆಸಿದ ಬಹು ದುರಾಚಾರಗಳ ನಿಮಿತ್ತ ನಾನು ದೇಶವನ್ನು ಹಾಳುಮಾಡಿದಾಗ ನಾನೇ ಯೆಹೋವನು” ಎಂದು ಅವರಿಗೆ ದೃಢವಾಗುವುದು.
ಯೆಹೆಜ್ಕೇಲನು 33 : 30 (IRVKN)
ಪ್ರವಾದಿಯ ಸಂದೇಶದ ಪರಿಣಾಮ ನರಪುತ್ರನೇ, “ನಿನ್ನ ಜನರು ಗೋಡೆಗಳ ನೆರಳಿನಲ್ಲಿಯೂ, ಮನೆಯ ಬಾಗಿಲುಗಳಲ್ಲಿಯೂ ನಿನ್ನ ಪ್ರಸ್ತಾಪವನ್ನೆತ್ತಿ ಪರಸ್ಪರವಾಗಿ ಒಬ್ಬರಿಗೊಬ್ಬರು, ‘ಯೆಹೋವನ ಬಾಯಿಂದ ಹೊರಟ ಮಾತೇನು ಕೇಳೋಣ ಬನ್ನಿರಿ’ ಎಂದು ಹೇಳಿಕೊಳ್ಳುತ್ತಿದ್ದಾರೆ.
ಯೆಹೆಜ್ಕೇಲನು 33 : 31 (IRVKN)
ಶ್ರದ್ಧೆ ಇರುವ ನನ್ನ ಭಕ್ತರಂತೆ ಅವರು ನಿನ್ನ ಬಳಿಗೆ ಬಂದು, ನಿನ್ನ ಮುಂದೆ ಕುಳಿತುಕೊಂಡು ನಿನ್ನ ಮಾತುಗಳನ್ನು ಕೇಳುತ್ತಾರೆ, ಆದರೆ ಕೈಗೊಳ್ಳುವುದಿಲ್ಲ; ಬಾಯಿಂದ ಬಹುಪ್ರೀತಿಯನ್ನು ತೋರಿಸುತ್ತಾರೆ. ಅವರ ಮನಸ್ಸೋ ತಾವು ದೋಚಿಕೊಂಡದರ ಮೇಲೆ ಇರುತ್ತದೆ.
ಯೆಹೆಜ್ಕೇಲನು 33 : 32 (IRVKN)
ಇಗೋ, ನಿನ್ನ ಮಾತು ಅವರ ಎಣಿಕೆಯಲ್ಲಿ ಒಬ್ಬ ಸಂಗೀತಗಾರನು ವಾದ್ಯವನ್ನು ಜಾಣತನದಿಂದ ಬಾರಿಸಿ, ಮಧುರ ಸ್ವರದಿಂದ ಹಾಡುವ ಪ್ರೇಮಗೀತೆಗೆ ಸಮಾನವಾಗಿದೆ; ನಿನ್ನ ಮಾತುಗಳನ್ನು ಕೇಳುತ್ತಾರೆ, ಆದರೆ ಕೈಗೊಳ್ಳುವುದಿಲ್ಲ.
ಯೆಹೆಜ್ಕೇಲನು 33 : 33 (IRVKN)
ನೀನು ಮುಂತಿಳಿಸಿದ್ದು ಸಂಭವಿಸುವಾಗ, ತಮ್ಮ ಮಧ್ಯದಲ್ಲಿ ಪ್ರವಾದಿಯು ಇದ್ದಾನೆ ಎಂದು ಅವರಿಗೆ ತಿಳಿಯುವುದು.”

1 2 3 4 5 6 7 8 9 10 11 12 13 14 15 16 17 18 19 20 21 22 23 24 25 26 27 28 29 30 31 32 33