ಯೆಹೆಜ್ಕೇಲನು 25 : 1 (IRVKN)
ಅಮ್ಮೋನ್ ವಿರುದ್ಧವಾದ ದೈವೋಕ್ತಿ ಯೆಹೋವನು ಈ ವಾಕ್ಯವನ್ನು ನನಗೆ ದಯಪಾಲಿಸಿದನು,
ಯೆಹೆಜ್ಕೇಲನು 25 : 2 (IRVKN)
“ನರಪುತ್ರನೇ, ನೀನು ಅಮ್ಮೋನಿಗೆ ವಿರುದ್ಧವಾಗಿ, ಅದರ ವಿಷಯದಲ್ಲಿ ದೈವಸಂಕಲ್ಪವನ್ನು ಪ್ರವಾದಿಸುತ್ತಾ ಅದಕ್ಕೆ ಹೀಗೆ ನುಡಿ,
ಯೆಹೆಜ್ಕೇಲನು 25 : 3 (IRVKN)
‘ಕರ್ತನಾದ ಯೆಹೋವನ ಮಾತನ್ನು ಕೇಳು’ ಕರ್ತನಾದ ಯೆಹೋವನು ಇಂತೆನ್ನುತ್ತಾನೆ, ‘ಅಮ್ಮೋನೇ, ನನ್ನ ಪವಿತ್ರಾಲಯವು ಅಪವಿತ್ರವಾದದ್ದನ್ನು, ಇಸ್ರಾಯೇಲ್ ದೇಶವು ಹಾಳುಬಿದ್ದದನ್ನು, ಯೆಹೂದ ವಂಶದವರು ಸೆರೆಹೋದದ್ದನ್ನು ನೀನು ನೋಡಿ, “ಅಹಾ!” ಎಂದು ಹಿಗ್ಗಿಕೊಂಡೆ.
ಯೆಹೆಜ್ಕೇಲನು 25 : 4 (IRVKN)
ಆದುದರಿಂದ ಇಗೋ, ನಾನು ನಿನ್ನನ್ನು ಮೂಡಣದವರಿಗೆ ಬಾಧ್ಯವಾಗಿ ವಶಪಡಿಸುವೆನು; ಅವರು ನಿನ್ನಲ್ಲಿ ತಮ್ಮ ಗುಡಾರಗಳನ್ನು ಹಾಕಿ ಪಾಳೆಯಮಾಡಿಕೊಳ್ಳುವರು; ನಿನ್ನ ಹಣ್ಣನ್ನು ತಿಂದು, ನಿನ್ನ ಹಾಲನ್ನು ಕುಡಿದುಬಿಡುವರು.
ಯೆಹೆಜ್ಕೇಲನು 25 : 5 (IRVKN)
ನಾನು ರಬ್ಬಾ ಪಟ್ಟಣವನ್ನು ಒಂಟೆಗಳಿಗೆ ಲಾಯವನ್ನಾಗಿಯೂ, ಅಮ್ಮೋನ್ ಸೀಮೆಯನ್ನು ಹಿಂಡುಗಳಿಗೆ ತಂಗುವ ಸ್ಥಳವನ್ನಾಗಿಯೂ ಮಾಡುವೆನು. ನಾನೇ ಯೆಹೋವನು ಎಂದು ನಿಮಗೆ ಗೊತ್ತಾಗುವುದು.’ ”
ಯೆಹೆಜ್ಕೇಲನು 25 : 6 (IRVKN)
ಕರ್ತನಾದ ಯೆಹೋವನು ಇಂತೆನ್ನುತ್ತಾನೆ, “ನೀನು ಚಪ್ಪಾಳೆ ಹೊಡೆದು, ಕಾಲಿನಿಂದ ನೆಲವನ್ನು ಬಡಿದು, ಇಸ್ರಾಯೇಲ್ ದೇಶವನ್ನು ಮನಃಪೂರ್ವಕವಾಗಿ ತಿರಸ್ಕರಿಸಿ, ಅದರ ಗತಿಗೆ ಹಿಗ್ಗಿಕೊಂಡೆ.
ಯೆಹೆಜ್ಕೇಲನು 25 : 7 (IRVKN)
ಆದುದರಿಂದ ಇಗೋ, ನಾನು ನಿನ್ನ ಮೇಲೆ ಕೈಯೆತ್ತಿ ನಿನ್ನನ್ನು ಸುಲಿಗೆಗಾಗಿ ಮ್ಲೇಚ್ಛರಿಗೆ ವಶಪಡಿಸಿ, ಜನಾಂಗಗಳೊಳಗಿಂದ ಕಿತ್ತುಬಿಟ್ಟು, ದೇಶಗಳೊಳಗಿಂದ ನಿನ್ನ ಹೆಸರನ್ನು ಅಳಿಸಿ, ನಿನ್ನನ್ನು ಹಾಳುಮಾಡುವೆನು; ಆಗ ನಾನೇ ಯೆಹೋವನು ಎಂದು ನಿನಗೆ ಗೊತ್ತಾಗುವುದು.”
ಯೆಹೆಜ್ಕೇಲನು 25 : 8 (IRVKN)
ಮೋವಾಬ್ ವಿರುದ್ಧವಾದ ದೈವೋಕ್ತಿ ಕರ್ತನಾದ ಯೆಹೋವನು ಇಂತೆನ್ನುತ್ತಾನೆ, “ಆಹಾ, ಯೆಹೂದ ವಂಶವು ಎಲ್ಲಾ ಜನಾಂಗಗಳ ಹಾಗೆಯೇ ಇದೆ, ವಿಶೇಷವೇನು? ಎಂದು ಮೋವಾಬೂ ಮತ್ತು ಸೇಯೀರೂ ಅಂದುಕೊಂಡಿದೆ.
ಯೆಹೆಜ್ಕೇಲನು 25 : 9 (IRVKN)
ಆದುದರಿಂದ, ಇಗೋ, ದೇಶಭೂಷಣಗಳಾದ ಮೋವಾಬಿನ ಗಡಿಯ ಪಟ್ಟಣಗಳು, ಅಂದರೆ ಬೇತ್ ಯೆಷೀಮೋತ್, ಬಾಳ್ ಮೆಯೋನ್, ಕಿರ್ಯಾಥಯಿಮ್ ಎಂಬ ಪಟ್ಟಣಗಳು ಇರುವ ಕಡೆಯಲ್ಲಿ ನಾನು ಮೋವಾಬಿನ ಮೇರೆಯನ್ನು ಒಡೆದುಬಿಡುವೆನು.
ಯೆಹೆಜ್ಕೇಲನು 25 : 10 (IRVKN)
ಆ ಸೀಮೆಯನ್ನಲ್ಲದೆ, ಅಮ್ಮೋನನ್ನೂ ಮೂಡಣದವರಿಗೆ ಬಾಧ್ಯವಾಗಿ ಕೊಟ್ಟು, ಅಮ್ಮೋನ್ಯರು ಜನಾಂಗಗಳೊಳಗೆ ನಿರ್ನಾಮವಾಗಬೇಕೆಂಬ ನನ್ನ ಸಂಕಲ್ಪವನ್ನು ನೆರವೇರಿಸುವೆನು.
ಯೆಹೆಜ್ಕೇಲನು 25 : 11 (IRVKN)
ಮೋವಾಬ್ಯರಿಗೂ ದಂಡನೆಗಳನ್ನು ವಿಧಿಸಿ ತೀರಿಸುವೆನು. ಆಗ ನಾನೇ ಯೆಹೋವನು ಎಂದು ಅವರಿಗೆ ಗೊತ್ತಾಗುವುದು.”
ಯೆಹೆಜ್ಕೇಲನು 25 : 12 (IRVKN)
ಎದೋಮ್ ವಿರುದ್ಧವಾದ ದೈವೋಕ್ತಿ ಕರ್ತನಾದ ಯೆಹೋವನು ಇಂತೆನ್ನುತ್ತಾನೆ, “ಎದೋಮು ಯೆಹೂದ ವಂಶಕ್ಕೆ ಪ್ರತಿಕಾರಮಾಡಿದೆ; ಮುಯ್ಯಿಗೆ ಮುಯ್ಯಿ ತೀರಿಸಿ ಮಹಾಪರಾಧವನ್ನು ನಡೆಸಿದೆ.”
ಯೆಹೆಜ್ಕೇಲನು 25 : 13 (IRVKN)
ಹೀಗಿರಲು ಕರ್ತನಾದ ಯೆಹೋವನು ಇಂತೆನ್ನುತ್ತಾನೆ, “ನಾನು ಎದೋಮಿನ ಮೇಲೆ ಕೈಯೆತ್ತಿ, ಅದರೊಳಗಿಂದ ಜನರನ್ನೂ ಮತ್ತು ಪಶುಗಳನ್ನೂ ನಿರ್ಮೂಲಮಾಡಿ, ತೇಮಾನಿನಿಂದ ದೆದಾನಿನವರೆಗೂ ಅದನ್ನು ಹಾಳುಮಾಡಿ, ಪ್ರಜೆಗಳನ್ನು ಖಡ್ಗಕ್ಕೆ ಸಿಕ್ಕಿಸುವೆನು.
ಯೆಹೆಜ್ಕೇಲನು 25 : 14 (IRVKN)
ನಾನು ಎದೋಮಿಗೆ ನನ್ನ ಜನರಾದ ಇಸ್ರಾಯೇಲರ ಕೈಯಿಂದ ಮುಯ್ಯಿ ತೀರಿಸುವೆನು; ಅವರು ನನ್ನ ಕೋಪರೋಷಗಳಿಗೆ ತಕ್ಕ ಹಾಗೆ ಅದಕ್ಕೆ ಮಾಡುವರು; ನನ್ನ ಪ್ರತಿಕಾರವು ಎದೋಮಿನ ಅನುಭವಕ್ಕೆ ಬರುವುದು” ಇದು ಕರ್ತನಾದ ಯೆಹೋವನ ನುಡಿ.
ಯೆಹೆಜ್ಕೇಲನು 25 : 15 (IRVKN)
ಫಿಲಿಷ್ಟಿಯರ ವಿರುದ್ಧವಾದ ದೈವೋಕ್ತಿ ಕರ್ತನಾದ ಯೆಹೋವನು ಇಂತೆನ್ನುತ್ತಾನೆ, “ಫಿಲಿಷ್ಟಿಯರು ಯೆಹೂದಕ್ಕೆ ಪ್ರತಿಕಾರಮಾಡಿದ್ದಾರೆ; ಹೌದು, ಮುಯ್ಯಿಗೆಮುಯ್ಯಿ ತೀರಿಸುತ್ತಾ ಅದನ್ನು ಮನಃಪೂರ್ವಕವಾಗಿ ತಿರಸ್ಕರಿಸಿ ದೀರ್ಘದ್ವೇಷದಿಂದ ಹಾಳುಮಾಡಿದ್ದಾರೆ.”
ಯೆಹೆಜ್ಕೇಲನು 25 : 16 (IRVKN)
ಹೀಗಿರಲು ಕರ್ತನಾದ ಯೆಹೋವನು ಇಂತೆನ್ನುತ್ತಾನೆ, “ಇಗೋ, ನಾನು ಫಿಲಿಷ್ಟಿಯರ ಮೇಲೆ ಕೈಯೆತ್ತುವೆನು; ಕೆರೇತಿಯರನ್ನು ಕತ್ತರಿಸಿಬಿಟ್ಟು, ಸಮುದ್ರತೀರದಲ್ಲಿನ ಜನಶೇಷವನ್ನು ನಿಶ್ಶೇಷಮಾಡುವೆನು.
ಯೆಹೆಜ್ಕೇಲನು 25 : 17 (IRVKN)
ಅವರೆಲ್ಲರನ್ನು ಬಲವಾಗಿ ಖಂಡಿಸಿ ಮುಯ್ಯಿಗೆಮುಯ್ಯಿ ತೀರಿಸುವೆನು; ಹೀಗೆ ಪ್ರತಿಕಾರಮಾಡುವುದರಿಂದ ನಾನೇ ಯೆಹೋವನು ಎಂದು ಅವರಿಗೆ ಗೊತ್ತಾಗುವುದು.”

1 2 3 4 5 6 7 8 9 10 11 12 13 14 15 16 17