ಯೆಹೆಜ್ಕೇಲನು 17 : 1 (IRVKN)
ಹದ್ದುಗಳ ಮತ್ತು ಗಿಡಗಳ ಸಾಮ್ಯಗಳು ಯೆಹೋವನು ಈ ವಾಕ್ಯವನ್ನು ನನಗೆ ದಯಪಾಲಿಸಿದನು,
ಯೆಹೆಜ್ಕೇಲನು 17 : 2 (IRVKN)
“ನರಪುತ್ರನೇ, ನೀನು ಇಸ್ರಾಯೇಲ್ ವಂಶದವರಿಗೆ ಈ ಸಾಮ್ಯವನ್ನು ಒಗಟಾಗಿ ಹೇಳು,
ಯೆಹೆಜ್ಕೇಲನು 17 : 3 (IRVKN)
ಕರ್ತನಾದ ಯೆಹೋವನು ಇಂತೆನ್ನುತ್ತಾನೆ, ‘ಅಗಲವಾದ ಮತ್ತು ಉದ್ದವಾದ ರೆಕ್ಕೆಗಳಿಂದ ತುಂಬಿದ, ನಾನಾ ಬಣ್ಣದ ದೊಡ್ಡ ಹದ್ದು ಲೆಬನೋನಿಗೆ ಬಂದು, ದೇವದಾರು ಮರದ ಮೇಲ್ಗಡೆಯ ರೆಂಬೆಯನ್ನು ಕಿತ್ತು ಹಾಕಿತು.
ಯೆಹೆಜ್ಕೇಲನು 17 : 4 (IRVKN)
ತುಟ್ಟತುದಿಯ ಚಿಗುರುಗಳನ್ನು ಕಚ್ಚಿ, ವ್ಯಾಪಾರದ ದೇಶಕ್ಕೆ ತೆಗೆದುಕೊಂಡು ಹೋಗಿ ಬಹಳ ವರ್ತಕರಿರುವ ಪಟ್ಟಣದಲ್ಲಿ ಇಟ್ಟುಬಿಟ್ಟಿತು.
ಯೆಹೆಜ್ಕೇಲನು 17 : 5 (IRVKN)
“ ‘ಆಮೇಲೆ ಅದು ಆ ದೇವದಾರು ಇದ್ದ ದೇಶದ ಒಂದು ಬೀಜವನ್ನು ತೆಗೆದುಕೊಂಡು ಫಲವತ್ತಾದ ನೀರಾವರಿಯ ಭೂಮಿಯಲ್ಲಿ ನೆಟ್ಟು, ನೀರವಂಜಿಯ ಮರದ ಹಾಗೆ ಬೆಳೆಯಿಸಿತು.
ಯೆಹೆಜ್ಕೇಲನು 17 : 6 (IRVKN)
ಅದು ಮೊಳೆತು ದ್ರಾಕ್ಷಾಲತೆಯಾಗಿ ತುಂಬಾ ಹರಡಿಕೊಂಡು ತನ್ನ ರೆಂಬೆಗಳನ್ನು ಆ ಹದ್ದಿನ ಕಡೆಗೆ ಚಾಚಿ ಅದರ ಕೆಳಗೆ ತನ್ನ ಬೇರುಗಳನ್ನು ಬಿಟ್ಟಿತು; ಅದು ಲತೆಯಾಗಿ ಬೆಳೆದು, ರೆಂಬೆಗಳನ್ನು ಹರಡಿಸಿ, ಚಿಗುರುಗಳನ್ನು ಹೊರಡಿಸಿತು.
ಯೆಹೆಜ್ಕೇಲನು 17 : 7 (IRVKN)
“ ‘ಅಗಲವಾದ ರೆಕ್ಕೆಗಳುಳ್ಳ ಗರಿ ತುಂಬಿದ ಮತ್ತೊಂದು ದೊಡ್ಡ ಹದ್ದು ಇತ್ತು; ಇಗೋ, ಆ ದ್ರಾಕ್ಷಾಲತೆಯು ತಾನು ನಾಟಿಕೊಂಡಿದ್ದ ಪಾತಿಯೊಳಗಿಂದ ಅದರ ಕಡೆಗೆ ತನ್ನ ಬೇರುಗಳನ್ನು ತಿರುಗಿಸಿ, ತನ್ನ ರೆಂಬೆಗಳನ್ನು ಚಾಚಿ ಅದರಿಂದ ನೀರನ್ನು ಹಾಯಿಸುತ್ತಿತ್ತು.
ಯೆಹೆಜ್ಕೇಲನು 17 : 8 (IRVKN)
ಅದು ಸೊಂಪಾದ ದ್ರಾಕ್ಷಾಲತೆಯಾಗಿ ರೆಂಬೆಗಳನ್ನು ಹರಡಿ ಫಲಕೊಡುವುದಕ್ಕೆ ಅನುಕೂಲವಾದ ಒಳ್ಳೆಯ ನೀರಾವರಿಯ ನೆಲದಲ್ಲಿ ನಾಟಿಕೊಂಡಿತ್ತು.’ ”
ಯೆಹೆಜ್ಕೇಲನು 17 : 9 (IRVKN)
ಈ ಮಾತನ್ನು ನುಡಿ, “ಕರ್ತನಾದ ಯೆಹೋವನು ಇಂತೆನ್ನುತ್ತಾನೆ, ಅದು ಸಮೃದ್ಧವಾಗಿಯೇ ಇರುವುದೋ? ಅದನ್ನು ನಾಟಿದ ಹದ್ದು ಅದರ ಬೇರುಗಳನ್ನು ಕಿತ್ತು, ಅದರ ಫಲವನ್ನು ಕಡಿದುಬಿಡಲು ಅದು ಒಣಗಿ ಅದರ ಹಸುರೆಲೆಗಳೆಲ್ಲಾ ಬಾಡುವುದಲ್ಲವೆ? ಅದು ಬೇರು ಸಹಿತ ಕೀಳಲ್ಪಡುವುದು; ಬಹಳ ಬಲದಿಂದಲ್ಲ, ಬಹಳ ಜನರಿಂದಲ್ಲ.
ಯೆಹೆಜ್ಕೇಲನು 17 : 10 (IRVKN)
ಆಹಾ, ನಾಟಿಕೊಂಡಿದ್ದ ಆ ಲತೆಯು ಸಮೃದ್ಧವಾಗಿಯೇ ಇರುವುದೋ? ಮೂಡಣ ಗಾಳಿಯು ಬಡಿಯುವಾಗ ಬಾಡೇ ಬಾಡುವುದಲ್ಲವೇ? ಬೆಳೆದ ಪಾತಿಯಲ್ಲಿಯೇ ಒಣಗಿಹೋಗುವುದು.”
ಯೆಹೆಜ್ಕೇಲನು 17 : 11 (IRVKN)
ಸಾಮ್ಯದ ಅರ್ಥ ಯೆಹೋವನು ಇನ್ನೊಂದು ವಾಕ್ಯವನ್ನು ನನಗೆ ದಯಪಾಲಿಸಿದನು,
ಯೆಹೆಜ್ಕೇಲನು 17 : 12 (IRVKN)
“ದ್ರೋಹಿ ವಂಶದವರಾದ ಈ ಜನರಿಗೆ ಹೀಗೆ ಹೇಳು, ಇದರ ಅಭಿಪ್ರಾಯವು ನಿಮಗೆ ಗೊತ್ತಿಲ್ಲವೋ? ಇಗೋ, ಬಾಬೆಲಿನ ಅರಸನು ಯೆರೂಸಲೇಮಿಗೆ ಬಂದು ಅಲ್ಲಿನ ಅರಸನನ್ನೂ ಮತ್ತು ಪ್ರಧಾನರನ್ನೂ ಹಿಡಿದು ಬಾಬಿಲೋನಿಗೆ ತೆಗೆದುಕೊಂಡು ಹೋದನು.
ಯೆಹೆಜ್ಕೇಲನು 17 : 13 (IRVKN)
ರಾಜವಂಶದವನೊಬ್ಬನನ್ನು ಆರಿಸಿ ಅವನೊಂದಿಗೆ ಒಡಂಬಡಿಕೆ ಮಾಡಿಕೊಂಡು ಅವನಿಂದ ಆಣೆಯಿಡಿಸಿದನು.
ಯೆಹೆಜ್ಕೇಲನು 17 : 14 (IRVKN)
ಇವನ ರಾಜ್ಯವು ಮೇಲಕ್ಕೆ ಏಳಲಾರದೆ ಇದ್ದರೂ, ಒಡಂಬಡಿಕೆಯನ್ನು ಕೈಗೊಳ್ಳುವುದರಿಂದ ಅದು ನಿಲ್ಲುವುದು.
ಯೆಹೆಜ್ಕೇಲನು 17 : 15 (IRVKN)
ಆದರೆ ಅವನು ಬಾಬೆಲಿನ ಅರಸನ ಮೇಲೆ ತಿರುಗಿಬಿದ್ದು ಕುದುರೆಗಳನ್ನೂ ಮತ್ತು ಬಹಳ ಮಂದಿ ಸೈನಿಕರನ್ನೂ ನಮಗೆ ಒದಗಿಸೆಂದು ಐಗುಪ್ತಕ್ಕೆ ರಾಯಭಾರಿಗಳನ್ನು ಕಳುಹಿಸಿದನು. ಆದರೂ ಇವನು ಗೆಲ್ಲುವನೋ? ಇಂಥಾ ಕೃತ್ಯಗಳನ್ನು ನಡೆಸಿದವನು ಪಾರಾಗುವನೋ? ಒಡಂಬಡಿಕೆಯನ್ನು ಮೀರಿದವನು ತಪ್ಪಿಸಿಕೊಂಡಾನೇ?”
ಯೆಹೆಜ್ಕೇಲನು 17 : 16 (IRVKN)
ಕರ್ತನಾದ ಯೆಹೋವನು ಇಂತೆನ್ನುತ್ತಾನೆ, “ನನ್ನ ಜೀವದಾಣೆ, ಇವನು ಯಾರಿಂದ ಅರಸನಾಗಿ ನೇಮಿಸಲ್ಪಟ್ಟನೋ, ಯಾವನಿಗೆ ಮಾಡಿದ ಪ್ರಮಾಣವನ್ನು ತಿರಸ್ಕರಿಸಿದನೋ, ಯಾರ ಒಡಂಬಡಿಕೆಯನ್ನು ಮೀರಿದನೋ, ಆ ಅರಸನ ಬಳಿಯಲ್ಲಿ, ಅಂದರೆ ಬಾಬೆಲೆಂಬ ಅವನ ವಾಸಸ್ಥಾನದಲ್ಲಿ ಇವನು ಸಾಯುವುದು ಖಂಡಿತ.
ಯೆಹೆಜ್ಕೇಲನು 17 : 17 (IRVKN)
ಫರೋಹನೂ, ಅವನ ಮಹಾಸೈನ್ಯವೂ, ದೊಡ್ಡ ಪರಿವಾರವೂ ಬಂದು ಬಹಳ ಜನರನ್ನು ಕೊಲ್ಲುವುದಕ್ಕೆ ದಿಬ್ಬಗಳನ್ನು ಹಾಕಿ, ಕೋಟೆಗಳನ್ನು ಕಟ್ಟಿದರೂ ಯುದ್ಧದಲ್ಲಿ ಇವನಿಗೆ ಏನೂ ಸಹಾಯವಾಗುವುದಿಲ್ಲ.
ಯೆಹೆಜ್ಕೇಲನು 17 : 18 (IRVKN)
ಏಕೆಂದರೆ ಇವನು ಇಟ್ಟ ಆಣೆಯನ್ನು ತಿರಸ್ಕರಿಸಿ ಒಡಂಬಡಿಕೆಯನ್ನು ಮೀರಿದನಲ್ಲವೇ? ಕೈಯ ಮೇಲೆ ಕೈಯಿಟ್ಟು ಆಣೆಮಾಡಿದರೆ ಪ್ರಯೋಜನವೇನು? ಇದನ್ನೆಲ್ಲಾ ಮಾಡಿದ್ದರಿಂದ ಇವನು ಪಾರಾಗನು.”
ಯೆಹೆಜ್ಕೇಲನು 17 : 19 (IRVKN)
ಹೀಗಿರಲು ಕರ್ತನಾದ ಯೆಹೋವನು ಇಂತೆನ್ನುತ್ತಾನೆ, “ನನ್ನ ಜೀವದಾಣೆ, ನನಗೆ ಮಾಡಿದ ಪ್ರಮಾಣವನ್ನು ಅವನು ತಿರಸ್ಕರಿಸಿ, ನನ್ನ ಒಡಂಬಡಿಕೆಯನ್ನು ಮೀರಿದ ದೋಷವನ್ನು ಅವನ ತಲೆಗೆ ಕಟ್ಟುವೆನು.
ಯೆಹೆಜ್ಕೇಲನು 17 : 20 (IRVKN)
ನಾನು ಅವನಿಗೆ ನನ್ನ ಬಲೆಯೊಡ್ಡುವೆನು, ನಾನು ಹಾಕಿದ ಉರುಲಿನಲ್ಲಿ ಸಿಕ್ಕಿಬೀಳುವನು, ಅವನನ್ನು ಬಾಬಿಲೋನಿಗೆ ತಂದು ಅಲ್ಲೇ ಅವನೊಂದಿಗೆ ವಾದಿಸಿ, ಅವನು ನನಗೆ ಮಾಡಿದ ಅಪರಾಧವನ್ನು ಅವನ ಮೇಲೆ ಹೊರಿಸುವೆನು.
ಯೆಹೆಜ್ಕೇಲನು 17 : 21 (IRVKN)
ಅವನ ಸೇನೆಗಳೆಲ್ಲಾ ಚದರಿ ಓಡಿಹೋಗಿ, ಕತ್ತಿಯ ಬಾಯಿಗೆ ತುತ್ತಾಗುವುವು; ಉಳಿದವರನ್ನು ಎಲ್ಲಾ ಕಡೆಯ ಗಾಳಿಗೂ ತೂರಿಬಿಡುವೆನು; ಈ ಮಾತನ್ನು ಆಡಿದವನು ಯೆಹೋವನಾದ ನಾನೇ ಎಂದು ನಿಮಗೆ ಗೊತ್ತಾಗುವುದು.”
ಯೆಹೆಜ್ಕೇಲನು 17 : 22 (IRVKN)
ಕರ್ತನಾದ ಯೆಹೋವನು ಇಂತೆನ್ನುತ್ತಾನೆ, “ನಾನೇ ಎತ್ತರವಾದ ದೇವದಾರು ಮರದ ಮೇಲ್ಗಡೆಯ ರೆಂಬೆಯನ್ನು ತೆಗೆದು ಅದನ್ನು ನೆಡುವೆನು; ತುಟ್ಟತುದಿಯ ಚಿಗುರುಗಳಲ್ಲಿ ಅತಿ ಕೋಮಲವಾದದ್ದನ್ನು ಚಿವುಟಿ ತಂದು, ಉನ್ನತೋನ್ನತವಾದ ಪರ್ವತದ ಮೇಲೆ ನೆಡುವೆನು.
ಯೆಹೆಜ್ಕೇಲನು 17 : 23 (IRVKN)
ನಾನು ಅದನ್ನು ಇಸ್ರಾಯೇಲಿನ ಉನ್ನತ ಪರ್ವತಾಗ್ರದಲ್ಲಿ ನೆಡಲು, ಅದು ಸೊಂಪಾದ ದೇವದಾರು ಮರವಾಗಿ ರೆಂಬೆಗಳನ್ನು ಹರಡಿ ಫಲಕೊಡುವುದು; ಅದರಲ್ಲಿ ಸಕಲವಿಧವಾದ ಪಕ್ಷಿಗಳು ವಾಸಿಸುತ್ತಾ ಅದರ ರೆಂಬೆಗಳ ನೆರಳನ್ನು ಆಶ್ರಯಿಸುವವು.
ಯೆಹೆಜ್ಕೇಲನು 17 : 24 (IRVKN)
ಆಗ ಯೆಹೋವನಾದ ನಾನು ಎತ್ತರವಾದ ಮರವನ್ನು ತಗ್ಗಿಸಿ, ತಗ್ಗಾದದ್ದನ್ನು ಎತ್ತರಗೊಳಿಸಿ, ಹಸುರಾದದ್ದನ್ನು ಒಣಗಿಸಿ, ಒಣಗಿದ್ದನ್ನು ಚಿಗುರಿಸಿದ್ದೇನೆ ಎಂದು ಅರಣ್ಯದ ಸಕಲ ವೃಕ್ಷಗಳು ತಿಳಿಯುವವು. ಇದನ್ನು ಯೆಹೋವನಾದ ನಾನೇ ನುಡಿದು ನಡೆಸಿದ್ದೇನೆ.”
❮
❯
1
2
3
4
5
6
7
8
9
10
11
12
13
14
15
16
17
18
19
20
21
22
23
24