ಯೆಹೆಜ್ಕೇಲನು 15 : 1 (IRVKN)
ಪ್ರಯೋಜನಕ್ಕೆ ಬಾರದ ದ್ರಾಕ್ಷಾಲತೆಯ ಸಾಮ್ಯ ಯೆಹೋವನು ಈ ವಾಕ್ಯವನ್ನು ನನಗೆ ದಯಪಾಲಿಸಿದನು,
ಯೆಹೆಜ್ಕೇಲನು 15 : 2 (IRVKN)
“ನರಪುತ್ರನೇ, ದ್ರಾಕ್ಷಿಯ ಗಿಡವು ಉಳಿದ ಗಿಡಗಳಿಗಿಂತ ಎಷ್ಟು ಹೆಚ್ಚು? ವನವೃಕ್ಷಗಳಲ್ಲಿ ದ್ರಾಕ್ಷಾಲತೆಯ ವಿಶೇಷವೇನು?
ಯೆಹೆಜ್ಕೇಲನು 15 : 3 (IRVKN)
ಜನರು ದ್ರಾಕ್ಷಿಯ ಕಟ್ಟಿಗೆಯನ್ನು ತೆಗೆದುಕೊಂಡು ಅದರಿಂದ ಯಾವ ಕೆಲಸವನ್ನಾದರೂ ಮಾಡುವರೋ ಅಥವಾ ಅದರ ಮೇಲೆ ಯಾವ ವಸ್ತುವನ್ನಾದರೂ ನೇತು ಹಾಕುವುದಕ್ಕೆ ಅದರಿಂದ ಗೂಟವನ್ನು ಮಾಡಿಕೊಳ್ಳುವರೋ?
ಯೆಹೆಜ್ಕೇಲನು 15 : 4 (IRVKN)
ಇಲ್ಲ, ಸೌದೆಯಾಗಿ ಬೆಂಕಿಯಲ್ಲಿ ಹಾಕುವರು; ಬೆಂಕಿಯು ಅದರ ಎರಡು ಕೊನೆಗಳನ್ನು ಸುಟ್ಟುಬಿಡುವುದು, ಮಧ್ಯಭಾಗವು ಇದ್ದಲಾಗಿ ಯಾವ ಕೆಲಸಕ್ಕೂ ಬರುವುದಿಲ್ಲ.
ಯೆಹೆಜ್ಕೇಲನು 15 : 5 (IRVKN)
ಅದು ಸಂಪೂರ್ಣವಾಗಿ ಇದ್ದಾಗ ಯಾವ ಕೆಲಸಕ್ಕೂ ಬರಲಿಲ್ಲ; ಬೆಂಕಿಯಲ್ಲಿ ಸುಟ್ಟು ಇದ್ದಲಾದ ಮೇಲೆ ಯಾವ ಕೆಲಸಕ್ಕೆ ಬಂದೀತು?”
ಯೆಹೆಜ್ಕೇಲನು 15 : 6 (IRVKN)
ಹೀಗಿರಲು ಕರ್ತನಾದ ಯೆಹೋವನು ಇಂತೆನ್ನುತ್ತಾನೆ, “ವನ ವೃಕ್ಷಗಳಲ್ಲಿ ದ್ರಾಕ್ಷಿಯ ಗಿಡವನ್ನು ನಾನು ಹೇಗೆ ಬೆಂಕಿಗೆ ಸೌದೆಯನ್ನಾಗಿ ಕೊಟ್ಟಿದ್ದೇನೋ, ಹಾಗೆಯೇ ನಾನು ಯೆರೂಸಲೇಮಿನವರನ್ನು ವಿನಾಶಕ್ಕೆ ಗುರಿಮಾಡಿದ್ದೇನೆ.
ಯೆಹೆಜ್ಕೇಲನು 15 : 7 (IRVKN)
ಅವರ ಮೇಲೆ ಕೋಪ ದೃಷ್ಟಿಯನ್ನಿಡುವೆನು; ಅವರು ಬೆಂಕಿಯೊಳಗಿಂದ ತಪ್ಪಿಸಿಕೊಂಡರೂ, ಬೆಂಕಿಯು ಅವರನ್ನು ನುಂಗಿಬಿಡುವುದು; ನಾನು ಅವರ ಮೇಲೆ ಕೋಪ ದೃಷ್ಟಿಯನ್ನಿಡುವಾಗ ನಾನೇ ಯೆಹೋವನು ಎಂದು ನಿಮಗೆ ಗೊತ್ತಾಗುವುದು.
ಯೆಹೆಜ್ಕೇಲನು 15 : 8 (IRVKN)
ಅವರು ದ್ರೋಹ ಮಾಡಿದ್ದರಿಂದ ನಾನು ದೇಶವನ್ನು ಹಾಳುಮಾಡುವೆನು” ಇದು ಕರ್ತನಾದ ಯೆಹೋವನ ನುಡಿ.

1 2 3 4 5 6 7 8