ಯೆಹೆಜ್ಕೇಲನು 13 : 1 (IRVKN)
ಸುಳ್ಳು ಪ್ರವಾದಿಗಳನ್ನು ಖಂಡಿಸಿದ್ದು ಯೆಹೋವನು ಈ ವಾಕ್ಯವನ್ನು ನನಗೆ ದಯಪಾಲಿಸಿದನು,
ಯೆಹೆಜ್ಕೇಲನು 13 : 2 (IRVKN)
“ನರಪುತ್ರನೇ, ಪ್ರವಾದನೆ ಮಾಡಿ, ಸ್ವಕಲ್ಪಿತವಾದುದನ್ನೇ ಸಾರುತ್ತಲಿರುವ ಇಸ್ರಾಯೇಲಿನ ಪ್ರವಾದಿಗಳಿಗೆ ಖಂಡನೆಯಾಗಿ ನೀನು ಪ್ರವಾದಿಸುತ್ತಾ ಹೀಗೆ ಹೇಳು, ‘ಯೆಹೋವನ ವಾಕ್ಯವನ್ನು ಕೇಳಿರಿ.
ಯೆಹೆಜ್ಕೇಲನು 13 : 3 (IRVKN)
ಕರ್ತನಾದ ಯೆಹೋವನು ಇಂತೆನ್ನುತ್ತಾನೆ, ಯಾವ ಸಾಕ್ಷಾತ್ಕಾರವೂ ಇಲ್ಲದೆ ಸ್ವಬುದ್ಧಿಯನ್ನೇ ಅನುಸರಿಸುವ ಮೂರ್ಖ ಪ್ರವಾದಿಗಳ ಗತಿಯನ್ನು ಏನೆಂದು ಹೇಳಲಿ!
ಯೆಹೆಜ್ಕೇಲನು 13 : 4 (IRVKN)
ಇಸ್ರಾಯೇಲೇ, ನಿನ್ನ ಪ್ರವಾದಿಗಳು ಹಾಳು ಪ್ರದೇಶಗಳಲ್ಲಿನ ನರಿಗಳ ಹಾಗೆ ಇದ್ದಾರೆ.
ಯೆಹೆಜ್ಕೇಲನು 13 : 5 (IRVKN)
ಯೆಹೋವನ ದಿನದಲ್ಲಿ ಯುದ್ಧಕ್ಕೆ ನಿಲ್ಲಬೇಕೆಂದು ನೀವು ಪೌಳಿ ಗೋಡೆಯ ಒಡಕುಗಳನ್ನೇರಲಿಲ್ಲ, ಇಸ್ರಾಯೇಲ್ ವಂಶದ ರಕ್ಷಣೆಗಾಗಿ ಗೋಡೆಯನ್ನು ಭದ್ರ ಮಾಡಲೂ ಇಲ್ಲ. ಯೆಹೋವನು ಇಂತೆನ್ನುತ್ತಾನೆ’ ಎಂದು ನುಡಿ,
ಯೆಹೆಜ್ಕೇಲನು 13 : 6 (IRVKN)
ಅಂಥವರಿಗೆ ಆದ ದರ್ಶನ ಮಿಥ್ಯ, ಕೇಳಿಸಿದ ಕಣಿ ಸುಳ್ಳು; ಯೆಹೋವನು ಅವರನ್ನು ಕಳುಹಿಸಲಿಲ್ಲ, ತಾವು ನುಡಿದ ಮಾತು ನೆರವೇರುವುದೆಂದು ಸುಮ್ಮನೆ ನಿರೀಕ್ಷಿಸಿಕೊಂಡಿದ್ದಾರೆ.
ಯೆಹೆಜ್ಕೇಲನು 13 : 7 (IRVKN)
ನಾನು ಮಾತನಾಡದೆ ಹೋದರೂ, ‘ಯೆಹೋವನು ಇಂತೆನ್ನುತ್ತಾನೆ’ ಎಂದು ನುಡಿಯುತ್ತಿರುವ ನಿಮಗೆ ಆದ ದರ್ಶನವು ಮಿಥ್ಯ, ನೀವು ಹೇಳಿದ ಕಣಿಯು ಸುಳ್ಳು.
ಯೆಹೆಜ್ಕೇಲನು 13 : 8 (IRVKN)
“ಹೀಗಿರಲು ಕರ್ತನಾದ ಯೆಹೋವನು ಇಂತೆನ್ನುತ್ತಾನೆ, ‘ನೀವು ವ್ಯರ್ಥವಾದದ್ದನ್ನು ನುಡಿದು, ಸುಳ್ಳಾದ ದರ್ಶನವನ್ನು ಕಂಡಿದ್ದರಿಂದ ಇಗೋ, ನಿಮಗೆ ವಿರುದ್ಧವಾಗಿದ್ದೇನೆ’ ಇದು ಕರ್ತನಾದ ಯೆಹೋವನೆಂಬ ನನ್ನ ನುಡಿ.
ಯೆಹೆಜ್ಕೇಲನು 13 : 9 (IRVKN)
‘ಮಿಥ್ಯ ದರ್ಶನಹೊಂದಿ, ಸುಳ್ಳು ಕಣಿ ಹೇಳುವ ಪ್ರವಾದಿಗಳ ಮೇಲೆ ನಾನು ಕೈಮಾಡುವೆನು; ಅವರು ನನ್ನ ಜನರ ಹಿರೀಸಭೆಯಲ್ಲಿ ಸೇರಬಾರದು, ಇಸ್ರಾಯೇಲ್ ವಂಶದವರ ಪಟ್ಟಿಯಲ್ಲಿ ಅವರ ಹೆಸರುಗಳು ಲಿಖಿತವಾಗಬಾರದು, ಅವರು ಇಸ್ರಾಯೇಲ್ ದೇಶದಲ್ಲಿ ಪ್ರವೇಶಿಸಲೂಬಾರದು; ನಾನೇ ಕರ್ತನಾದ ಯೆಹೋವನು’ ಎಂದು ನಿಮಗೆ ಗೊತ್ತಾಗುವುದು.
ಯೆಹೆಜ್ಕೇಲನು 13 : 10 (IRVKN)
“ಅಶಾಂತಿಯಿದ್ದರೂ ಅವರು ‘ಶಾಂತಿಯಿದೆ’ ಎಂದು ಹೇಳಿ ನನ್ನ ಜನರನ್ನು ವಂಚಿಸಿದ್ದಾರೆ. ಒಬ್ಬನು ತೆಳುವಾದ ಗೋಡೆಯನ್ನು ಕಟ್ಟಿದ್ದರೂ, ಇಗೋ, ಅದಕ್ಕೆ ಸುಣ್ಣಬಳಿಯುತ್ತಾರೆ;
ಯೆಹೆಜ್ಕೇಲನು 13 : 11 (IRVKN)
ಆದಕಾರಣ, ನೀನು ಸುಣ್ಣಬಳಿಯುವವರಿಗೆ ಹೀಗೆ ನುಡಿ, ‘ವಿಪರೀತ ಮಳೆಯಾಗಿ ಗೋಡೆಯು ಬಿದ್ದುಹೋಗುವುದು, ಆನೆಕಲ್ಲುಗಳು ಸುರಿಯುವವು; ಬಿರುಗಾಳಿಯು ಗೋಡೆಯನ್ನು ಒಡೆದುಹಾಕುವುದು.’
ಯೆಹೆಜ್ಕೇಲನು 13 : 12 (IRVKN)
ಇಗೋ, ಗೋಡೆಯು ಬಿದ್ದ ಮೇಲೆ, ‘ನೀವು ಬಳಿದ ಸುಣ್ಣ ಎಲ್ಲಿ?’ ಎಂದು ನಿಮ್ಮನ್ನು ಕೇಳುವರಲ್ಲವೆ?”
ಯೆಹೆಜ್ಕೇಲನು 13 : 13 (IRVKN)
ಹೀಗಿರಲು ಕರ್ತನಾದ ಯೆಹೋವನು ಇಂತೆನ್ನುತ್ತಾನೆ, “ ‘ನಾನು ಸಿಟ್ಟುಗೊಂಡು ಗೋಡೆಯನ್ನು ಬಿರುಗಾಳಿಯಿಂದ ಒಡೆದುಹಾಕುವೆನು; ಅದನ್ನು ನಾಶ ಮಾಡಲಿಕ್ಕೆ ನನ್ನ ಕೋಪದಿಂದ ವಿಪರೀತ ಮಳೆಯುಂಟಾಗುವುದು, ನನ್ನ ರೋಷದಿಂದ ಆನೆಕಲ್ಲುಗಳು ಸುರಿಯುವವು;
ಯೆಹೆಜ್ಕೇಲನು 13 : 14 (IRVKN)
ನೀವು ಸುಣ್ಣಬಳಿದ ಗೋಡೆಯನ್ನು ನಾನು ಹೀಗೆ ಕೆಡವಿ ನೆಲ ಸಮಮಾಡಿ ಅದರ ಅಸ್ತಿವಾರವನ್ನು ಬಯಲುಪಡಿಸುವೆನು; ಅದು ಬಿದ್ದುಹೋಗುವುದು ಮತ್ತು ನೀವು ಅದರೊಳಗೆ ಸಿಕ್ಕಿಕೊಂಡು ನಾಶವಾಗುವಿರಿ ನಾನೇ ಯೆಹೋವನು’ ಎಂದು ನಿಮಗೆ ಗೊತ್ತಾಗುವುದು.
ಯೆಹೆಜ್ಕೇಲನು 13 : 15 (IRVKN)
ಹೀಗೆ ನಾನು ಗೋಡೆಯಲ್ಲಿಯೂ, ಅದಕ್ಕೆ ಸುಣ್ಣ ಬಳಿದ ನಿಮ್ಮಲ್ಲಿಯೂ ರೋಷವನ್ನು ತೀರಿಸಿಕೊಂಡು ಇಂತೆನ್ನುವೆನು,
ಯೆಹೆಜ್ಕೇಲನು 13 : 16 (IRVKN)
‘ಇಸ್ರಾಯೇಲಿನ ಪ್ರವಾದಿಗಳೇ, ಅಶಾಂತಿಯಿದ್ದರೂ ಶಾಂತಿಯಿದೆ ಎಂಬ ದರ್ಶನಗಳನ್ನು ನೀವು ಕಂಡು ಯೆರೂಸಲೇಮಿನ ವಿಷಯವಾಗಿ ಪ್ರವಾದಿಸಿದ್ದೀರಲ್ಲವೆ? ಗೋಡೆಯು ಇಲ್ಲವಾಯಿತು, ಅದಕ್ಕೆ ಸುಣ್ಣ ಬಳಿದವರೂ ಇಲ್ಲವಾದರು’ ” ಇದು ಕರ್ತನಾದ ಯೆಹೋವನ ನುಡಿ.
ಯೆಹೆಜ್ಕೇಲನು 13 : 17 (IRVKN)
ಸುಳ್ಳು ಪ್ರವಾದಿನಿಯರನ್ನು ಖಂಡಿಸಿದ್ದು “ ‘ನರಪುತ್ರನೇ, ಸ್ವಕಲ್ಪಿತವಾದುದನ್ನು ಕಣಿ ಎಂದು ಹೇಳುವ ನಿನ್ನ ಸ್ವಕುಲ ಸ್ತ್ರೀಯರ ಕಡೆಗೆ ಮುಖ ಮಾಡಿಕೊಂಡು ಅವರನ್ನೂ ಖಂಡಿಸಿ ಹೀಗೆ ಪ್ರವಾದಿಸು.’
ಯೆಹೆಜ್ಕೇಲನು 13 : 18 (IRVKN)
ಕರ್ತನಾದ ಯೆಹೋವನು ಇಂತೆನ್ನುತ್ತಾನೆ, ‘ಜನರ ಪ್ರಾಣಗಳನ್ನು ಬೇಟೆಯಾಡಬೇಕೆಂದು, ಎಲ್ಲರ ಮೊಣಕೈಗಳಿಗೆ ತಾಯಿತಗಳನ್ನು ಕಟ್ಟಿ, ಉದ್ದವಾದವರಿಗೂ, ಗಿಡ್ಡವಾದವರಿಗೂ ತಕ್ಕ ಮುಸುಕುಗಳನ್ನು ಸಿದ್ಧಮಾಡಿಕೊಂಡಿರುವ ಸ್ತ್ರೀಯರ ಗತಿಯನ್ನು ಏನೆಂದು ಹೇಳಲಿ! ಸ್ತ್ರೀಯರೇ, ನೀವು ನನ್ನ ಜನರ ಪ್ರಾಣಗಳನ್ನು ಬೇಟೆಯಾಡಿ ಸ್ವಂತ ಪ್ರಾಣಗಳನ್ನು ಉಳಿಸಿಕೊಳ್ಳುವಿರೋ?
ಯೆಹೆಜ್ಕೇಲನು 13 : 19 (IRVKN)
ನೀವು ಜವೆಗೋದಿಯ ಹಿಡಿಗಳನ್ನೂ, ರೊಟ್ಟಿಯ ಚೂರುಗಳನ್ನೂ ಆಶಿಸಿ ಸುಳ್ಳು ಮಾತಿಗೆ ಕಿವಿಗೊಡುವ ನನ್ನ ಜನರಿಗೆ ಸುಳ್ಳು ಹೇಳುವುದರಿಂದ ಜೀವಿಸತಕ್ಕವರನ್ನು ಸಾಯಿಸಿ, ಸಾಯತಕ್ಕವರನ್ನು ಉಳಿಸಿ, ನನ್ನ ಜನರ ನಡುವೆ ನನ್ನ ಘನತೆಗೆ ಕುಂದುತಂದಿದ್ದೀರಿ.’
ಯೆಹೆಜ್ಕೇಲನು 13 : 20 (IRVKN)
“ಹೀಗಿರಲು ಕರ್ತನಾದ ಯೆಹೋವನು ಇಂತೆನ್ನುತ್ತಾನೆ, ‘ಆಹಾ, ನೀವು ಜನರ ಪ್ರಾಣಗಳನ್ನು ಪಕ್ಷಿಗಳನ್ನೋ ಎಂಬಂತೆ ಬೇಟೆಯಾಡುವುದಕ್ಕೆ ಸಾಧನವಾದ ನಿಮ್ಮ ತಾಯಿತಗಳಿಗೆ ನಾನು ಹೇಸಿ, ಅವುಗಳನ್ನು ನಿಮ್ಮ ಕೈಗಳಿಂದ ಕಿತ್ತು ಹಾಕುವೆನು; ನೀವು ಪಕ್ಷಿಗಳನ್ನೋ ಎಂಬಂತೆ ಬೇಟೆಯಾಡುವ ಪ್ರಾಣಿಗಳನ್ನು ನಾನು ಬಿಡಿಸಿ, ಪಕ್ಷಿಗಳ ಹಾಗೆ ಸ್ವತಂತ್ರವಾಗಿಸುವೆನು.
ಯೆಹೆಜ್ಕೇಲನು 13 : 21 (IRVKN)
ನಾನು ನಿಮ್ಮ ಮುಸುಕುಗಳನ್ನೂ ಹರಿದು, ನನ್ನ ಜನರನ್ನು ನಿಮ್ಮ ಕೈಯೊಳಗಿಂದ ತಪ್ಪಿಸುವೆನು; ಅವರು ಇನ್ನು ಮೇಲೆ ನಿಮ್ಮ ಕೈಗೆ ಬೇಟೆಯಾಗಿ ಸಿಕ್ಕುವುದಿಲ್ಲ; ನಾನೇ ಯೆಹೋವನು ಎಂದು ನಿಮಗೆ ಗೊತ್ತಾಗುವುದು.
ಯೆಹೆಜ್ಕೇಲನು 13 : 22 (IRVKN)
ನಾನು ಎದೆಗುಂದಿಸದ ಶಿಷ್ಟನ ಮನಸ್ಸನ್ನು ನೀವು ಸುಳ್ಳಾಡಿ ಕುಂದಿಸಿದ್ದೀರಿ, ದುಷ್ಟನು ತನ್ನ ದುರ್ಮಾರ್ಗವನ್ನು ಬಿಟ್ಟು ತನ್ನ ಪ್ರಾಣವನ್ನು ಉಳಿಸಿಕೊಳ್ಳದಂತೆ ನೀವು ಅವನ ಕೈಗಳನ್ನು ಬಲಪಡಿಸಿದ್ದೀರಿ.
ಯೆಹೆಜ್ಕೇಲನು 13 : 23 (IRVKN)
ಆದಕಾರಣ ನೀವು ಮಿಥ್ಯ ದರ್ಶನವನ್ನು ಹೊಂದಿ, ಕಣಿಹೇಳುವ ಕೆಲಸವು ಇನ್ನು ನಡೆಯುವುದೇ ಇಲ್ಲ; ನನ್ನ ಜನರನ್ನು ನಿಮ್ಮ ಕೈಯೊಳಗಿಂದ ತಪ್ಪಿಸುವೆನು, ನಾನೇ ಯೆಹೋವನು’ ಎಂದು ನಿಮಗೆ ಗೊತ್ತಾಗುವುದು.”
❮
❯
1
2
3
4
5
6
7
8
9
10
11
12
13
14
15
16
17
18
19
20
21
22
23