ವಿಮೋಚನಕಾಂಡ 9 : 1 (IRVKN)
ದನಕರುಗಳಿಗೆ ಉಂಟಾದ ವ್ಯಾಧಿ ತರುವಾಯ ಯೆಹೋವನು ಮೋಶೆಗೆ ಹೇಳಿದ್ದೇನೆಂದರೆ, “ನೀನು, ಫರೋಹನ ಬಳಿಗೆ ಹೋಗಿ ಅವನಿಗೆ, ‘ಇಬ್ರಿಯರ ದೇವರಾದ ಯೆಹೋವನು ತನ್ನನ್ನು ಆರಾಧಿಸುವಂತೆ ತನ್ನ ಜನರಿಗೆ ಅಪ್ಪಣೆಕೊಡಬೇಕೆಂಬುದಾಗಿ ಹೇಳಿದ್ದಾನೆ.
ವಿಮೋಚನಕಾಂಡ 9 : 2 (IRVKN)
ನೀನು ಅವರಿಗೆ ಅಪ್ಪಣೆ ಕೊಡದೆ ಇನ್ನೂ ಅವರನ್ನು ತಡೆದರೆ,
ವಿಮೋಚನಕಾಂಡ 9 : 3 (IRVKN)
ಯೆಹೋವನು ಅಡವಿಯಲ್ಲಿರುವ ನಿನ್ನ ಎಲ್ಲಾ ಪಶುಗಳಿಗೂ, ಕುದುರೆ, ಕತ್ತೆ, ಒಂಟೆ, ದನ, ಕುರಿ, ಆಡು ಇವೆಲ್ಲವುಗಳಿಗೂ ವಿರೋಧವಾಗಿ ತನ್ನ ಕೈಯನ್ನು ಎತ್ತಿ ಘೋರವ್ಯಾಧಿಯನ್ನು ಉಂಟುಮಾಡುವನೆಂದು ತಿಳಿದುಕೋ.
ವಿಮೋಚನಕಾಂಡ 9 : 4 (IRVKN)
ಯೆಹೋವನು ಇಸ್ರಾಯೇಲರ ಪಶುಗಳಿಗೂ, ಐಗುಪ್ತರ ಪಶುಗಳಿಗೂ ವ್ಯತ್ಯಾಸವನ್ನುಂಟು ಮಾಡುವನು. ಇಸ್ರಾಯೇಲರಿಗಿರುವ ಪಶುಗಳಲ್ಲಿ ಒಂದೂ ಸಾಯುವುದಿಲ್ಲ’ ಎಂದು ಹೇಳಬೇಕು” ಎಂದನು.
ವಿಮೋಚನಕಾಂಡ 9 : 5 (IRVKN)
ಇದಲ್ಲದೆ ಯೆಹೋವನು, “ನಿರ್ದಿಷ್ಟವಾದ ಸಮಯವನ್ನು ನೇಮಿಸಿ, ನಾಳೆಯೇ ಈ ಕಾರ್ಯವನ್ನು ಈ ದೇಶದಲ್ಲಿ ಮಾಡುವನು ಎಂದು ಹೇಳು” ಎಂದನು.
ವಿಮೋಚನಕಾಂಡ 9 : 6 (IRVKN)
ಮರುದಿನ ಯೆಹೋವನು ಆ ಕಾರ್ಯವುಂಟಾಗುವಂತೆ ಮಾಡಿದನು. ಐಗುಪ್ತ್ಯರ ಪಶುಗಳೆಲ್ಲಾ ಸತ್ತುಹೋದವು. ಇಸ್ರಾಯೇಲರ ಪಶುಗಳಲ್ಲಿ ಒಂದೂ ಸಾಯಲಿಲ್ಲ.
ವಿಮೋಚನಕಾಂಡ 9 : 7 (IRVKN)
ಫರೋಹನು ವಿಚಾರಿಸಿದಾಗ, ಇಸ್ರಾಯೇಲ್ಯರ ಪಶುಗಳಲ್ಲಿ ಒಂದೂ ಸಾಯಲಿಲ್ಲವೆಂಬುದನ್ನು ತಿಳಿದುಕೊಂಡನು. ಆದರೂ ಫರೋಹನ ಹೃದಯವು ಕಠಿಣವಾಗಿದ್ದರಿಂದ ಆ ಜನರಿಗೆ ಹೋಗುವುದಕ್ಕೆ ಅಪ್ಪಣೆಕೊಡಲಿಲ್ಲ.
ವಿಮೋಚನಕಾಂಡ 9 : 8 (IRVKN)
ಹುಣ್ಣುಬೊಕ್ಕೆಗಳ ಬಾಧೆ ಯೆಹೋವನು ಮೋಶೆ ಮತ್ತು ಆರೋನರಿಗೆ, “ನೀವು ಒಲೆಯ ಬೂದಿಯನ್ನು ಕೈತುಂಬಾ ತೆಗೆದುಕೊಳ್ಳಿರಿ. ಮೋಶೆ ಅದನ್ನು ಫರೋಹನ ಕಣ್ಣುಗಳ ಮುಂದೆ ಆಕಾಶದ ಕಡೆಗೆ ತೂರಲಿ.
ವಿಮೋಚನಕಾಂಡ 9 : 9 (IRVKN)
ಆಗ ಅದು ಐಗುಪ್ತ ದೇಶದಲ್ಲೆಲ್ಲಾ ಧೂಳಿನ ಕಣಗಳಾಗಿ ಮಾರ್ಪಟ್ಟು ಅದು ಐಗುಪ್ತ ದೇಶದಲ್ಲೆಲ್ಲಾ ಮನುಷ್ಯರ ಮೇಲೆಯೂ ಪಶುಗಳ ಮೇಲೆಯೂ ಹುಣ್ಣುಗಳಾಗುವ ಬೊಕ್ಕೆಗಳು ಏಳುವಂತೆ ಮಾಡುವವು” ಎಂದು ಹೇಳಿದನು.
ವಿಮೋಚನಕಾಂಡ 9 : 10 (IRVKN)
ಅದರಂತೆ ಮೋಶೆ ಮತ್ತು ಆರೋನರು ಒಲೆಯ ಬೂದಿಯನ್ನು ತೆಗೆದುಕೊಂಡು ಫರೋಹನ ಮುಂದೆ ನಿಂತರು. ಮೋಶೆಯು ಆ ಬೂದಿಯನ್ನು ಆಕಾಶದ ಕಡೆಗೆ ತೂರಿದನು. ಆಗ ಅದು ಮನುಷ್ಯರ ಮೇಲೆಯೂ, ಪಶುಗಳ ಮೇಲೆಯೂ ಹರಡಿ ಹುಣ್ಣುಗಳಾಗುವಂತೆ ಬೊಕ್ಕೆಗಳನ್ನೆಬ್ಬಿಸಿತು.
ವಿಮೋಚನಕಾಂಡ 9 : 11 (IRVKN)
ಇದಲ್ಲದೆ ಮಂತ್ರಗಾರರು, ಹುಣ್ಣುಗಳ ದೆಸೆಯಿಂದ ಮೋಶೆಯ ಮುಂದೆ ನಿಲ್ಲಲಾರದೆ ಹೋದರು. ಏಕೆಂದರೆ ಹುಣ್ಣುಗಳು ಮಂತ್ರಗಾರರ ಮೇಲೆಯೂ, ಐಗುಪ್ತ್ಯರ ಮೇಲೆಯೂ ಎದ್ದಿದ್ದವು.
ವಿಮೋಚನಕಾಂಡ 9 : 12 (IRVKN)
ಆದರೂ ಯೆಹೋವನು ಮೋಶೆಗೆ ಹೇಳಿದಂತೆಯೇ ಆಯಿತು. ಯೆಹೋವನು ಫರೋಹನ ಹೃದಯವನ್ನು ಕಠಿಣಮಾಡಿದ್ದರಿಂದ ಅವನು ಅವರ ಮಾತಿಗೆ ಕಿವಿಗೊಡದೆ ಹೋದನು.
ವಿಮೋಚನಕಾಂಡ 9 : 13 (IRVKN)
ಆನೆಕಲ್ಲಿನ ಮಳೆಯಿಂದ ಉಂಟಾದ ಬಾಧೆ ತರುವಾಯ ಯೆಹೋವನು ಮೋಶೆಗೆ, “ನೀನು ಬೆಳಿಗ್ಗೆ ಎದ್ದು ಫರೋಹನ ಮುಂದೆ ನಿಂತುಕೊಂಡು ಅವನಿಗೆ, ‘ಇಬ್ರಿಯರ ದೇವರಾದ ಯೆಹೋವನು ಆಜ್ಞಾಪಿಸುವುದೇನೆಂದರೆ, ನನ್ನನ್ನು ಆರಾಧಿಸುವಂತೆ ನನ್ನ ಜನರಿಗೆ ಅಪ್ಪಣೆಕೊಡಬೇಕು.
ವಿಮೋಚನಕಾಂಡ 9 : 14 (IRVKN)
ಈ ಸಾರಿ ನಾನು ನನ್ನ ವಶದಲ್ಲಿರುವ ಈ ಬಾಧೆಗಳನ್ನು ನಿನ್ನ ಪ್ರಜಾಪರಿವಾರದವರಿಗೆ ಉಂಟಾಗುವಂತೆಯೂ, ನಿನ್ನ ಹೃದಯಕ್ಕೂ ತಗಲುವಂತೆಯೂ ಮಾಡುವೆನು. ಆದುದರಿಂದ ಸಮಸ್ತ ಲೋಕದಲ್ಲಿ ನನಗೆ ಸಮಾನರು ಬೇರೆ ಯಾರೂ ಇಲ್ಲವೆಂದು ನನ್ನ ವಿಷಯದಲ್ಲಿ ತಿಳಿದುಕೊಳ್ಳುವಿ.
ವಿಮೋಚನಕಾಂಡ 9 : 15 (IRVKN)
ನಾನು ಕೈಯನ್ನೆತ್ತಿ ನಿನ್ನನ್ನೂ, ನಿನ್ನ ಪ್ರಜೆಗಳನ್ನೂ, ವ್ಯಾಧಿಯಿಂದ ಬಾಧಿಸುವೆನು. ನಿನ್ನನ್ನು ಭೂಮಿಯೊಳಗಿಂದ ನಿರ್ಮೂಲ ಮಾಡುವೆನು.
ವಿಮೋಚನಕಾಂಡ 9 : 16 (IRVKN)
ಆದರೆ ನಾನು ನಿನ್ನಲ್ಲಿ ನನ್ನ ಶಕ್ತಿಯನ್ನು ತೋರಿಸಿ, ನನ್ನ ಹೆಸರನ್ನು ಲೋಕದಲ್ಲೆಲ್ಲಾ ಪ್ರಸಿದ್ಧಿಪಡಿಸಬೇಕೆಂಬ ಉದ್ದೇಶದಿಂದಲೇ ನಿನ್ನನ್ನು ಸಾಯಿಸದೇ ಉಳಿಸಿರುವೆನು.
ವಿಮೋಚನಕಾಂಡ 9 : 17 (IRVKN)
ನೀನು ನನ್ನ ಜನರನ್ನು ಇನ್ನೂ ಹೋಗಗೊಡಿಸದೆ ಅವರ ಮುಂದೆ, ಅಡ್ಡಿ ಆತಂಕಗಳನ್ನು ಒಡ್ಡುತ್ತಿರುವೆಯಾ?
ವಿಮೋಚನಕಾಂಡ 9 : 18 (IRVKN)
ಹಾಗಾದರೆ, ನಾಳೆ ಇಷ್ಟು ಹೊತ್ತಿಗೆ ವಿಪರೀತವಾದ ಆನೆಕಲ್ಲಿನ ಮಳೆ ಬೀಳುವಂತೆ ಮಾಡುವೆನು. ಐಗುಪ್ತ ರಾಜ್ಯವು ಸ್ಥಾಪಿತವಾದ ದಿನ ಮೊದಲುಗೊಂಡು ಇಂದಿನವರೆಗೂ ಅಂಥ ಕಲ್ಲಿನ ಮಳೆ ಬಿದ್ದಿರುವುದಿಲ್ಲ.
ವಿಮೋಚನಕಾಂಡ 9 : 19 (IRVKN)
ಆದಕಾರಣ ನೀನು ಆಳುಗಳನ್ನು ಕಳುಹಿಸಿ ನಿನ್ನ ಪಶುಗಳನ್ನೂ, ನಿನಗೆ ಹೊಲದಲ್ಲಿರುವುದೆಲ್ಲವನ್ನೂ ಬೇಗ ಭದ್ರಪಡಿಸು. ಮನೆಯೊಳಗೆ ಬಾರದೆ ಬಯಲಿನಲ್ಲೇ ಇರುವ ಎಲ್ಲಾ ಮನುಷ್ಯರೂ, ಪಶುಗಳೂ ಆ ಕಲ್ಲಿನ ಮಳೆಯ ಹೊಡೆತದಿಂದ ಸಾಯುವರು’ ” ಎಂದು ಹೇಳಿದನು.
ವಿಮೋಚನಕಾಂಡ 9 : 20 (IRVKN)
ಆಗ ಫರೋಹನ ಸೇವಕರಲ್ಲಿ ಯಾರಾರು ಯೆಹೋವನ ಮಾತಿಗೆ ಹೆದರಿದರೋ ಅವರು ತಮ್ಮ ಆಳುಗಳನ್ನೂ ಪಶುಗಳನ್ನೂ ಬೇಗ ಮನೆಗೆ ಬರಮಾಡಿಕೊಂಡರು.
ವಿಮೋಚನಕಾಂಡ 9 : 21 (IRVKN)
ಯಾರು ಯೆಹೋವನ ಮಾತನ್ನು ಮನಸ್ಸಿಗೆ ತೆಗೆದುಕೊಳ್ಳಲಿಲ್ಲವೋ, ಅವರು ತಮ್ಮ ಆಳುಗಳನ್ನೂ, ಪಶುಗಳನ್ನೂ ಹೊಲದಲ್ಲಿಯೇ ಬಿಟ್ಟರು.
ವಿಮೋಚನಕಾಂಡ 9 : 22 (IRVKN)
ಯೆಹೋವನು ಮೋಶೆಗೆ, “ಆಕಾಶಕ್ಕೆ ನಿನ್ನ ಕೈಚಾಚು, ಆಗ ಐಗುಪ್ತ ದೇಶದಲ್ಲೆಲ್ಲಾ ಮನುಷ್ಯರ ಮೇಲೆಯೂ, ಪಶುಗಳ ಮೇಲೆಯೂ, ಹೊಲದಲ್ಲಿರುವ ಎಲ್ಲಾ ಪೈರುಗಳ ಮೇಲೆಯೂ ಆನೆಕಲ್ಲಿನ ಮಳೆ ಬೀಳುವುದು” ಎಂದು ಹೇಳಿದನು.
ವಿಮೋಚನಕಾಂಡ 9 : 23 (IRVKN)
ಮೋಶೆಯು ತನ್ನ ಕೋಲನ್ನು ಆಕಾಶದ ಕಡೆಗೆ ಚಾಚಿದಾಗ ಯೆಹೋವನು ಗುಡುಗನ್ನು, ಆನೆಕಲ್ಲಿನ ಮಳೆಯನ್ನು ಕಳುಹಿಸಿದನು. ಸಿಡಿಲುಗಳು ನೆಲಕ್ಕೆ ಅಪ್ಪಳಿಸಿದವು. ಯೆಹೋವನು ಐಗುಪ್ತ ದೇಶದ ಮೇಲೆ ಆನೆಕಲ್ಲಿನ ಮಳೆಯನ್ನು ಸುರಿಸಿದನು.
ವಿಮೋಚನಕಾಂಡ 9 : 24 (IRVKN)
ಆನೆಕಲ್ಲಿನ ಮಳೆಯು ಬಹು ರಭಸವಾಗಿತ್ತು. ಅದರೊಂದಿಗೆ ಮಿಂಚು ಫಳಫಳನೆ ಹೊಳೆಯುತಿತ್ತು. ಐಗುಪ್ತ್ಯದವರು ಒಂದು ರಾಷ್ಟ್ರವಾದಂದಿನಿಂದ ಆ ದೇಶದಲ್ಲಿ ಅಂಥ ಘೋರವಾದ ಆನೆಕಲ್ಲಿನ ಮಳೆ ಆಗಿರಲಿಲ್ಲ.
ವಿಮೋಚನಕಾಂಡ 9 : 25 (IRVKN)
ಆ ಮಳೆಯಿಂದ ಐಗುಪ್ತ ದೇಶದ ಎಲ್ಲಾ ಕಡೆಗಳಲ್ಲಿದ್ದ ಮನುಷ್ಯರು, ಪಶುಗಳು, ಬಯಲಿನಲ್ಲಿದ್ದ ಎಲ್ಲವೂ ನಾಶವಾದವು. ಆನೆಕಲ್ಲಿನ ಮಳೆಯಿಂದ ಹೊಲಗಳಲ್ಲಿದ್ದ ಪೈರುಗಳು ಹಾಳಾದವು. ಹೊಲಗಳಲ್ಲಿದ್ದ ಮರಗಳು ಮುರಿದುಹೋದವು.
ವಿಮೋಚನಕಾಂಡ 9 : 26 (IRVKN)
ಇಸ್ರಾಯೇಲರು ವಾಸವಾಗಿದ್ದ ಗೋಷೆನ್ ಸೀಮೆಯಲ್ಲಿ ಮಾತ್ರ ಆನೆಕಲ್ಲಿನ ಮಳೆ ಬೀಳಲಿಲ್ಲ.
ವಿಮೋಚನಕಾಂಡ 9 : 27 (IRVKN)
ಆಗ ಫರೋಹನು ಮೋಶೆ ಆರೋನರನ್ನು ಕರೆಯಿಸಿ ಅವರಿಗೆ, “ನಾನು ಅಪರಾಧಿಯೆಂದು ಈಗ ಒಪ್ಪಿಕೊಳ್ಳುತ್ತೇನೆ. ಯೆಹೋವನು ನ್ಯಾಯವಂತನು. ನಾನೂ ನನ್ನ ಜನರೂ ದೋಷಿಗಳು.
ವಿಮೋಚನಕಾಂಡ 9 : 28 (IRVKN)
ಈ ಭಯಂಕರವಾದ ಗುಡುಗು ಮತ್ತು ಆನೆಕಲ್ಲಿನ ಮಳೆಯೂ ಬಹಳ ಹೆಚ್ಚಾದವು. ಇವುಗಳನ್ನು ನಿಲ್ಲಿಸುವುದಕ್ಕೆ ಯೆಹೋವನನ್ನು ಪ್ರಾರ್ಥಿಸಿರಿ. ಈ ದೇಶವನ್ನು ಬಿಟ್ಟು ಹೊರಡುವುದಕ್ಕೆ ನಿಮಗೆ ಅಪ್ಪಣೆ ಕೊಡುತ್ತೇನೆ. ಇನ್ನು ನಿಮ್ಮನ್ನು ತಡೆಯುವುದಿಲ್ಲ” ಎಂದನು.
ವಿಮೋಚನಕಾಂಡ 9 : 29 (IRVKN)
ಅದಕ್ಕೆ ಮೋಶೆ, “ನಾನು ಈ ಪಟ್ಟಣದಿಂದಾಚೆಗೆ ಹೋದ ಕೂಡಲೇ ಕೈಯೆತ್ತಿ ಯೆಹೋವನನ್ನು ಪ್ರಾರ್ಥಿಸುವೆನು. ಆಗ ಗುಡುಗು ಮತ್ತು ಆನೆಕಲ್ಲಿನ ಮಳೆಯು ನಿಂತುಹೋಗುವದು. ಇದರಿಂದ ಸಮಸ್ತ ಭೂಲೋಕವು ಯೆಹೋವನ ಅಧೀನದಲ್ಲಿದೆ ಎಂದು ನೀನು ತಿಳಿದುಕೊಳ್ಳುವಿ.
ವಿಮೋಚನಕಾಂಡ 9 : 30 (IRVKN)
ಆದರೂ ನೀನಾಗಲಿ, ನಿನ್ನ ಪರಿವಾರದವರಾಗಲಿ, ದೇವರಾಗಿರುವ ಯೆಹೋವನಿಗೆ ಆಗಲೂ ಭಯಪಡುವುದಿಲ್ಲವೆಂದು ಬಲ್ಲೆನು” ಎಂದನು.
ವಿಮೋಚನಕಾಂಡ 9 : 31 (IRVKN)
ಜವೆಗೋದಿ ಮತ್ತು ಅಗಸೆ ಬೆಳೆಗಳು ನಾಶವಾದವು. ಏಕೆಂದರೆ ಜವೆಗೋದಿ ತೆನೆ ಬಿಟ್ಟಿತ್ತು, ಅಗಸೆ ಮೊಗ್ಗು ಬಿಟ್ಟಿತ್ತು.
ವಿಮೋಚನಕಾಂಡ 9 : 32 (IRVKN)
ಆದರೆ ಗೋದಿ ಮತ್ತು ಕಡಲೆ ಹಿಂದಿನ ಬೆಳೆಗಳಾಗಿದ್ದುದರಿಂದ ಅವುಗಳಿಗೆ ಹಾನಿಯಾಗಲಿಲ್ಲ.
ವಿಮೋಚನಕಾಂಡ 9 : 33 (IRVKN)
ಮೋಶೆಯು ಫರೋಹನನ್ನು ಬಿಟ್ಟು ಪಟ್ಟಣದಿಂದ ಹೊರಕ್ಕೆ ಬಂದು ಕೈಯನ್ನೆತ್ತಿ ಯೆಹೋವನನ್ನು ಪ್ರಾರ್ಥಿಸಿದನು. ಗುಡುಗೂ, ಆನೆಕಲ್ಲಿನ ಮಳೆಯೂ ನಿಂತುಹೋದವು.
ವಿಮೋಚನಕಾಂಡ 9 : 34 (IRVKN)
ಆದರೆ ಆನೆಕಲ್ಲು ಮಳೆ, ಗುಡುಗು ನಿಂತುಹೋದದ್ದನ್ನು ಫರೋಹನು ಕಂಡಾಗ ಅವನೂ, ಅವನ ಪರಿವಾರದವರೂ ತಮ್ಮ ಹೃದಯಗಳನ್ನು ಕಠಿಣಮಾಡಿಕೊಂಡು ಇನ್ನೂ ಪಾಪ ಮಾಡಿದರು.
ವಿಮೋಚನಕಾಂಡ 9 : 35 (IRVKN)
ಯೆಹೋವನು ಮೋಶೆಯಿಂದ ಹೇಳಿಸಿದಂತೆಯೇ ಆಯಿತು. ಫರೋಹನ ಹೃದಯವು ಕಠಿಣವಾಗಿತ್ತು. ಅವನು ಇಸ್ರಾಯೇಲರನ್ನು ಹೋಗಲು ಬಿಡಲಿಲ್ಲ.
❮
❯