ವಿಮೋಚನಕಾಂಡ 7 : 1 (IRVKN)
ಆಗ ಯೆಹೋವನು ಮೋಶೆಗೆ ಇಂತೆಂದನು, “ನಿನ್ನನ್ನು ಫರೋಹನಿಗೆ ದೇವರಂತೆ ನೇಮಿಸಿದ್ದೇನೆ. ನೋಡು, ನಿನ್ನ ಅಣ್ಣನಾದ ಆರೋನನು ನಿನಗೋಸ್ಕರ ಪ್ರವಾದಿಯಾಗಿರುವನು.
ವಿಮೋಚನಕಾಂಡ 7 : 2 (IRVKN)
ನಾನು ನಿನಗೆ ಆಜ್ಞಾಪಿಸುವುದ್ದನ್ನೆಲ್ಲಾ ನೀನು ಹೇಳಬೇಕು. ಇಸ್ರಾಯೇಲರು ದೇಶದಿಂದ ಹೊರಟುಹೋಗುವುದಕ್ಕೆ ಅಪ್ಪಣೆಕೊಡಬೇಕೆಂಬುದಾಗಿ ನಿನ್ನ ಅಣ್ಣನಾದ ಆರೋನನೇ ಫರೋಹನ ಮುಂದೆ ಮಾತನಾಡಬೇಕು.
ವಿಮೋಚನಕಾಂಡ 7 : 3 (IRVKN)
ಆದರೂ ನಾನು ಫರೋಹನ ಮನಸ್ಸಿನಲ್ಲಿ ಹಠವನ್ನು ಹುಟ್ಟಿಸಿ, ಐಗುಪ್ತದೇಶದಲ್ಲಿ ಅನೇಕ ಸೂಚಕಕಾರ್ಯಗಳನ್ನೂ ಮತ್ತು ಅದ್ಭುತಕಾರ್ಯಗಳನ್ನೂ ಮಾಡಿ ನನ್ನ ಶಕ್ತಿಯನ್ನು ತೋರಿಸುವೆನು.
ವಿಮೋಚನಕಾಂಡ 7 : 4 (IRVKN)
ಫರೋಹನು ನಿಮ್ಮ ಮಾತನ್ನು ಕೇಳುವುದಿಲ್ಲ. ಆಗ ನಾನು ಐಗುಪ್ತದೇಶದವರನ್ನು ಬಾಧಿಸಿ, ಅವರಿಗೆ ಮಹಾಶಿಕ್ಷೆಗಳನ್ನು ವಿಧಿಸಿ, ನನ್ನ ಜನರಾಗಿರುವ ಇಸ್ರಾಯೇಲರ ಸೈನ್ಯವನ್ನೆಲ್ಲಾ ಐಗುಪ್ತದೇಶದಿಂದ ಹೊರತರುವೆನು.
ವಿಮೋಚನಕಾಂಡ 7 : 5 (IRVKN)
ನಾನು ಐಗುಪ್ತ್ಯರಿಗೆ ವಿರೋಧವಾಗಿ ಕೈಚಾಚಿ ಅವರ ಮಧ್ಯದಿಂದ ಇಸ್ರಾಯೇಲರನ್ನು ಹೊರತಂದಾಗ ನಾನು ಯೆಹೋವನು ಎಂಬುವುದನ್ನು ಐಗುಪ್ತ್ಯರು ತಿಳಿದುಕೊಳ್ಳುವರು” ಅಂದನು.
ವಿಮೋಚನಕಾಂಡ 7 : 6 (IRVKN)
ಯೆಹೋವನ ಆಜ್ಞೆಯಂತೆಯೇ ಮೋಶೆ ಮತ್ತು ಆರೋನರು ಮಾಡಿದರು.
ವಿಮೋಚನಕಾಂಡ 7 : 7 (IRVKN)
ಅವರು ಫರೋಹನ ಹತ್ತಿರ ಮಾತನಾಡಿದ ಕಾಲದಲ್ಲಿ ಮೋಶೆ ಎಂಬತ್ತು ವರ್ಷದವನೂ ಮತ್ತು ಆರೋನನು ಎಂಭತ್ತಮೂರು ವರ್ಷದವನೂ ಆಗಿದ್ದರು.
ವಿಮೋಚನಕಾಂಡ 7 : 8 (IRVKN)
ಆರೋನನ ಕೋಲು ಸರ್ಪವಾಗಿದ್ದು ಯೆಹೋವನು ಮೋಶೆ ಹಾಗೂ ಆರೋನರ ಸಂಗಡ ಮಾತನಾಡಿ,
ವಿಮೋಚನಕಾಂಡ 7 : 9 (IRVKN)
“ಫರೋಹನು ನಿಮಗೆ ‘ನಾನು ನಿಮ್ಮ ಮಾತನ್ನು ನಂಬುವಂತೆ ನೀವು ಮಹತ್ಕಾರ್ಯವನ್ನು ನನ್ನ ಮುಂದೆ ಮಾಡಬೇಕು’ ಎಂದು ಹೇಳಿದರೆ ಮೋಶೆಯು ಆರೋನನಿಗೆ, ‘ನಿನ್ನ ಕೈಯಲ್ಲಿರುವ ಕೋಲನ್ನು ಫರೋಹನ ಮುಂದೆ ನೆಲದಲ್ಲಿ ಹಾಕು’ ಎಂದು ಹೇಳಬೇಕು. ಅದು ಸರ್ಪವಾಗುವುದು” ಎಂದು ಆಜ್ಞಾಪಿಸಿದನು.
ವಿಮೋಚನಕಾಂಡ 7 : 10 (IRVKN)
ಮೋಶೆ ಆರೋನರು ಫರೋಹನ ಬಳಿಗೆ ಹೋಗಿ ತಮಗೆ ಆಜ್ಞಾಪಿಸಿದಂತೆಯೇ ಮಾಡಿದರು. ಆರೋನನು ತನ್ನ ಕೋಲನ್ನು ಫರೋಹನ ಮತ್ತು ಅವನ ಪರಿವಾರದವರ ಮುಂದೆ ನೆಲದಲ್ಲಿ ಹಾಕಿದಾಗ ಅದು ಸರ್ಪವಾಯಿತು.
ವಿಮೋಚನಕಾಂಡ 7 : 11 (IRVKN)
ಫರೋಹನು ಐಗುಪ್ತದೇಶದ ವಿದ್ವಾಂಸರನ್ನೂ ಮತ್ತು ಮಂತ್ರವಾದಿಗಳನ್ನೂ ಕರೆಯಿಸಿದಾಗ ಆ ಮಾಂತ್ರಿಕರು ತಮ್ಮ ಮಂತ್ರವಿದ್ಯೆಗಳಿಂದ ಅದೇ ರೀತಿಯಾಗಿ ಮಾಡಿದರು.
ವಿಮೋಚನಕಾಂಡ 7 : 12 (IRVKN)
ಅವರು ತಮ್ಮ ತಮ್ಮ ಕೋಲುಗಳನ್ನು ನೆಲಕ್ಕೆ ಹಾಕಲು ಅವು ಸರ್ಪಗಳಾದವು. ಆದರೆ ಆರೋನನ ಕೋಲು ಅವರ ಕೋಲುಗಳನ್ನು ನುಂಗಿಬಿಟ್ಟಿತು.
ವಿಮೋಚನಕಾಂಡ 7 : 13 (IRVKN)
ಯೆಹೋವನು ಮೊದಲು ಹೇಳಿದಂತೆಯೇ ಫರೋಹನ ಹೃದಯವು ಕಠಿಣವಾಯಿತು. ಅವನು ಅವರ ಮಾತಿಗೆ ಕಿವಿಗೊಡದೆ ಹೋದನು.
ವಿಮೋಚನಕಾಂಡ 7 : 14 (IRVKN)
ನೈಲನದಿಯ ನೀರು ರಕ್ತವಾದದ್ದು ಆಗ ಯೆಹೋವನು ಮೋಶೆಗೆ, “ಫರೋಹನ ಹೃದಯವು ಕಠಿಣವಾಗಿದೆ, ತಾನು ಜನರಿಗೆ ಹೋಗುವುದಕ್ಕೆ ಅಪ್ಪಣೆಕೊಡುವುದಿಲ್ಲ ಎನ್ನುತ್ತಾನೆ.
ವಿಮೋಚನಕಾಂಡ 7 : 15 (IRVKN)
ನೀನು ಬೆಳಿಗ್ಗೆ ಫರೋಹನ ಬಳಿಗೆ ಹೋಗು, ಅವನು ನೀರಿನ ಬಳಿಗೆ ಇಳಿದು ಬರುತ್ತಾನಲ್ಲಾ. ಸರ್ಪವಾಗಿ ಮಾರ್ಪಾಟುಮಾಡಿದ ಆ ಕೋಲನ್ನು ನಿನ್ನ ಕೈಯಲ್ಲಿ ತೆಗೆದುಕೊಂಡು ಅವನನ್ನು ಎದುರುಗೊಳ್ಳುವುದಕ್ಕೆ ನೈಲ್ ನದಿ ತೀರದಲ್ಲಿ ನಿಂತುಕೊಂಡು ಅವನಿಗೆ ಹೀಗನ್ನಬೇಕು,
ವಿಮೋಚನಕಾಂಡ 7 : 16 (IRVKN)
‘ಇಬ್ರಿಯರ ದೇವರಾದ ಯೆಹೋವನು ನನ್ನನ್ನು ನಿನ್ನ ಬಳಿಗೆ ಕಳುಹಿಸಿ, ಅರಣ್ಯದಲ್ಲಿ ತನ್ನನ್ನು ಆರಾಧಿಸುವಂತೆ ತನ್ನ ಜನರಿಗೆ ಅಪ್ಪಣೆಕೊಡಬೇಕೆಂದು ನಿನಗೆ ಆಜ್ಞಾಪಿಸಿದ್ದಾನಷ್ಟೇ. ಈ ವರೆಗೂ ನೀನು ಅದನ್ನು ಲಕ್ಷ್ಯಕ್ಕೆ ತರಲಿಲ್ಲ.
ವಿಮೋಚನಕಾಂಡ 7 : 17 (IRVKN)
ಆದುದರಿಂದ ಯೆಹೋವನು ಹೇಳುವುದೇನೆಂದರೆ, ನೀನು ನನ್ನನ್ನು ಯೆಹೋವನೆಂದು ತಿಳಿದುಕೊಳ್ಳುವುದಕ್ಕಾಗಿ ನನ್ನ ಸೇವಕನ ಕೈಯಲ್ಲಿರುವ ಕೋಲಿನಿಂದ ನೈಲ್ ನದಿಯ ನೀರನ್ನು ಹೊಡೆಸುವೆನು. ಆಗ ಅದು ರಕ್ತವಾಗುವುದು.
ವಿಮೋಚನಕಾಂಡ 7 : 18 (IRVKN)
ನದಿಯಲ್ಲಿರುವ ಮೀನುಗಳು ಸಾಯುವವು. ನದಿಯು ಹೊಲಸಾಗಿ ನಾರುವುದು. ಅದನ್ನು ಕುಡಿಯುವುದಕ್ಕೆ ಐಗುಪ್ತರಿಗೆ ಹೇಸಿಗೆಯಾಗುವುದು’ ಎಂದು ಹೇಳಬೇಕು” ಅಂದನು.
ವಿಮೋಚನಕಾಂಡ 7 : 19 (IRVKN)
ಯೆಹೋವನು ಮೋಶೆಯ ಸಂಗಡ ಮಾತನಾಡಿ, “ನೀನು ಆರೋನನಿಗೆ ‘ನಿನ್ನ ಕೋಲನ್ನು ತೆಗೆದುಕೊಂಡು ಐಗುಪ್ತದೇಶದಲ್ಲಿರುವ ಹೊಳೆ, ಕಾಲುವೆ, ಕೆರೆ, ಕೊಳ ಮೊದಲಾದ ನೀರಿರುವ ಎಲ್ಲಾ ಸ್ಥಳಗಳ ಮೇಲೆ ಅದನ್ನು ಚಾಚು’ ಎಂದು ಹೇಳಬೇಕು. ಅವನು ಚಾಚುವಾಗ ಆ ನೀರೆಲ್ಲಾ ರಕ್ತವಾಗುವುದು. ಐಗುಪ್ತದೇಶದಲ್ಲೆಲ್ಲಾ ಮರದ ಪಾತ್ರೆಗಳಲ್ಲಿಯೂ, ಕಲ್ಲಿನ ಪಾತ್ರೆಗಳಲ್ಲಿಯೂ ಇರುವ ನೀರು ರಕ್ತವಾಗುವುದು” ಅಂದನು.
ವಿಮೋಚನಕಾಂಡ 7 : 20 (IRVKN)
ಮೋಶೆ ಮತ್ತು ಆರೋನರು ಯೆಹೋವನು ತಮಗೆ ಆಜ್ಞಾಪಿಸಿದಂತೆಯೇ ಮಾಡಿದರು. ಆರೋನನು ಫರೋಹನ ಮತ್ತು ಅವನ ಪರಿವಾರದ ಮುಂದೆ ಕೋಲನ್ನು ಎತ್ತಿ, ನೈಲ್ ನದಿಯಲ್ಲಿರುವ ನೀರನ್ನು ಹೊಡೆಯಲು ಅದೆಲ್ಲಾ ರಕ್ತವಾಯಿತು.
ವಿಮೋಚನಕಾಂಡ 7 : 21 (IRVKN)
ಅದರಲ್ಲಿದ್ದ ಮೀನುಗಳು ಸತ್ತುಹೋದವು. ನದಿಯು ದುರ್ವಾಸನೆಗೊಂಡಿದ್ದರಿಂದ ಐಗುಪ್ತರು ನೈಲ್ ನದಿಯ ನೀರನ್ನು ಕುಡಿಯಲಾರದೆ ಹೋದರು. ಐಗುಪ್ತ ದೇಶದಲ್ಲೆಲ್ಲಾ ರಕ್ತವೇ ಕಾಣುತಿತ್ತು.
ವಿಮೋಚನಕಾಂಡ 7 : 22 (IRVKN)
ಆದರೆ ಐಗುಪ್ತ್ಯ ದೇಶದ ಮಾಂತ್ರಿಕರು ತಮ್ಮ ಮಂತ್ರವಿದ್ಯೆಗಳಿಂದ ಅದೇ ರೀತಿಯಾಗಿ ಮಾಡಿದ್ದರಿಂದ ಫರೋಹನ ಹೃದಯವು ಇನ್ನೂ ಕಠಿಣವಾಯಿತು. ಯೆಹೋವನು ಹೇಳಿದಂತೆಯೇ ಅವನು ಮೋಶೆ ಮತ್ತು ಆರೋನರ ಮಾತನ್ನು ಕೇಳದೆ ಹೋದನು.
ವಿಮೋಚನಕಾಂಡ 7 : 23 (IRVKN)
ಫರೋಹನು ಆ ಮಹತ್ಕಾರ್ಯವನ್ನು ಲಕ್ಷ್ಯಕ್ಕೆ ತೆಗೆದುಕೊಳ್ಳದೆ ತನ್ನ ಮನೆಗೆ ಹೊರಟುಹೋದನು.
ವಿಮೋಚನಕಾಂಡ 7 : 24 (IRVKN)
ಐಗುಪ್ತ್ಯರೆಲ್ಲರೂ ನದಿಯ ನೀರನ್ನು ಕುಡಿಯಲಾರದೆ ಕುಡಿಯುವ ನೀರಿಗಾಗಿ ನದಿಯ ಸುತ್ತಲೂ ಗುಂಡಿಗಳನ್ನು ತೆಗೆದರು.
ವಿಮೋಚನಕಾಂಡ 7 : 25 (IRVKN)
ಯೆಹೋವನು ನೈಲ್ ನದಿಯನ್ನು ಹೊಡೆದ ಮೇಲೆ ಏಳು ದಿನಗಳು ತುಂಬಿದವು.

1 2 3 4 5 6 7 8 9 10 11 12 13 14 15 16 17 18 19 20 21 22 23 24 25