ವಿಮೋಚನಕಾಂಡ 35 : 1 (IRVKN)
ಸಬ್ಬತ್ ದಿನದ ನಿಯಮಗಳು ಮೋಶೆ ಇಸ್ರಾಯೇಲರ ಸಮೂಹವನ್ನೆಲ್ಲಾ ಸೇರಿಸಿ ಅವರಿಗೆ, “ನೀವು ಅನುಸರಿಸಬೇಕೆಂದು ಯೆಹೋವನು ನಿಮಗೆ ಹೀಗೆ ಅಪ್ಪಣೆ ಮಾಡಿದ್ದಾನೆ.
ವಿಮೋಚನಕಾಂಡ 35 : 2 (IRVKN)
ಆರು ದಿನಗಳು ನೀವು ಕೆಲಸ ಮಾಡಬೇಕು; ಏಳನೆಯ ದಿನವು ಪರಿಶುದ್ಧವಾದ ದಿನ; ಅದು ಯೆಹೋವನಿಗೆ ಮೀಸಲಾದ ಸಬ್ಬತ್ ದಿನವಾಗಿರುವುದರಿಂದ ಅಂದು ನೀವು ಸಂಪೂರ್ಣವಾಗಿ ಕೆಲಸವನ್ನು ನಿಲ್ಲಿಸಿಬಿಡಬೇಕು; ಆ ದಿನದಲ್ಲಿ ಕೆಲಸಮಾಡುವವನಿಗೆ ಮರಣದಂಡನೆಯಾಗಬೇಕು;
ವಿಮೋಚನಕಾಂಡ 35 : 3 (IRVKN)
ನೀವು ವಾಸಿಸುವ ಯಾವ ಸ್ಥಳದಲ್ಲಿಯಾದರೂ ಸಬ್ಬತ್ ದಿನದಲ್ಲಿ ಬೆಂಕಿಯನ್ನೂ ಹೊತ್ತಿಸಬಾರದು ಎಂದು” ಹೇಳಿದನು.
ವಿಮೋಚನಕಾಂಡ 35 : 4 (IRVKN)
ದೇವದರ್ಶನ ಗುಡಾರದ ನಿರ್ಮಾಣಕ್ಕೆ ಬೇಕಾದ ವಸ್ತುಗಳು
ವಿಮೋ 25:1-9 ಮೋಶೆಯು ಇಸ್ರಾಯೇಲ್ಯರ ಸರ್ವಸಮೂಹಕ್ಕೆ ಹೀಗೆಂದನು: “ಯೆಹೋವನು ಆಜ್ಞಾಪಿಸಿದ್ದೇನೆಂದರೆ,
ವಿಮೋಚನಕಾಂಡ 35 : 5 (IRVKN)
ನೀವು ನಿಮ್ಮ ನಿಮ್ಮೊಳಗೆ ಯೆಹೋವನಿಗಾಗಿ ಕಾಣಿಕೆಯನ್ನು ತೆಗೆದುಕೊಡಬೇಕು; ಒಳ್ಳೆಯ ಮನಸ್ಸಿರುವವರೆಲ್ಲರೂ ಕಾಣಿಕೆಯನ್ನು ತಂದುಕೊಡಬೇಕು. ಯೆಹೋವನಿಗೆ ತರಬೇಕಾದ ಆ ಕಾಣಿಕೆಯು ಎಂಥದಾಗಿರಬೇಕೆಂದರೆ; ಚಿನ್ನ, ಬೆಳ್ಳಿ, ತಾಮ್ರ ಎಂಬ ಲೋಹಗಳು,
ವಿಮೋಚನಕಾಂಡ 35 : 6 (IRVKN)
ನೀಲಿ, ನೇರಳೆ, ಕಡುಗೆಂಪು ವರ್ಣಗಳುಳ್ಳ ದಾರಗಳು, ನಾರುಬಟ್ಟೆಗಳು, ಉಣ್ಣೆಯ ಬಟ್ಟೆಗಳು,
ವಿಮೋಚನಕಾಂಡ 35 : 7 (IRVKN)
ಹದಮಾಡಿರುವ ಕೆಂಪುಬಣ್ಣದ ಟಗರಿನ ತೊಗಲುಗಳು, ಕಡಲಪ್ರಾಣಿಯ ತೊಗಲುಗಳು, ಜಾಲೀಮರವು, ದೀಪಕ್ಕೆ ಬೇಕಾದ ಎಣ್ಣೆಯು,
ವಿಮೋಚನಕಾಂಡ 35 : 8 (IRVKN)
ಅಭಿಷೇಕತೈಲಕ್ಕೆ ಮತ್ತು ಪರಿಮಳಧೂಪಕ್ಕೆ ಬೇಕಾದ ಸುಗಂಧದ್ರವ್ಯಗಳು,
ವಿಮೋಚನಕಾಂಡ 35 : 9 (IRVKN)
ಏಫೋದ್ ಕವಚಕ್ಕೆ ಬೇಕಾಗಿರುವ ರತ್ನಗಳು ಹಾಗು ಎದೆಪದಕದಲ್ಲಿ ಹಚ್ಚಬೇಕಾದ ನಾನಾ ರತ್ನಗಳು ಇವೇ.
ವಿಮೋಚನಕಾಂಡ 35 : 10 (IRVKN)
ದೇವದರ್ಶನ ಗುಡಾರದ ನಿರ್ಮಾಣಕ್ಕೆ ಬೇಕಾದ ಉಪಕರಣಗಳು
ವಿಮೋ 39:32-43 “ನಿಮ್ಮಲ್ಲಿರುವ ಜ್ಞಾನಿಗಳಾದ ಶಿಲ್ಪಿಗಳು ಬಂದು ಯೆಹೋವನು ಆಜ್ಞಾಪಿಸಿದವುಗಳನ್ನೆಲ್ಲಾ ಮಾಡಬೇಕು.
ವಿಮೋಚನಕಾಂಡ 35 : 11 (IRVKN)
ಅವರು ಮಾಡಬೇಕಾದವುಗಳು ಯಾವುವೆಂದರೆ; ದೇವದರ್ಶನದ ಗುಡಾರ, ಅದರ ಮೇಲ್ಹೊದಿಕೆಗಳು, ಕೊಂಡಿಗಳು, ಚೌಕಟ್ಟುಗಳು, ಅಗುಳಿಗಳು, ಕಂಬಗಳು, ಗದ್ದಿಗೆಕಲ್ಲುಗಳು,
ವಿಮೋಚನಕಾಂಡ 35 : 12 (IRVKN)
ಆಜ್ಞಾಶಾಸನಗಳ ಮಂಜೂಷ, ಅದನ್ನು ಹೊರುವ ಕಂಬಗಳು, ಕೃಪಾಸನ, ಅದನ್ನು ಮರೆಮಾಡುವ ಪರದೆ,
ವಿಮೋಚನಕಾಂಡ 35 : 13 (IRVKN)
ಮೇಜು, ಅದರ ಕಂಬಗಳು, ಅದರ ಉಪಕರಣಗಳು, ಅದರ ಮೇಲೆ ಇಡತಕ್ಕ ನೈವೇದ್ಯದ ರೊಟ್ಟಿಗಳು,
ವಿಮೋಚನಕಾಂಡ 35 : 14 (IRVKN)
ದೀಪಸ್ತಂಭ, ಅದರ ಉಪಕರಣಗಳು, ಹಣತೆಗಳು, ದೀಪಕ್ಕೆ ಬೇಕಾದ ಎಣ್ಣೆ,
ವಿಮೋಚನಕಾಂಡ 35 : 15 (IRVKN)
ಧೂಪವೇದಿ, ಅದರ ಕಂಬಗಳು, ಅಭಿಷೇಕ ತೈಲ, ಪರಿಮಳಧೂಪದ್ರವ್ಯ, ಗುಡಾರದ ಬಾಗಿಲಿನ ಪರದೆ,
ವಿಮೋಚನಕಾಂಡ 35 : 16 (IRVKN)
ಯಜ್ಞವೇದಿ, ಅದರ ತಾಮ್ರದ ಜಾಳಿಗೆ, ಕಂಬಗಳು, ಉಪಕರಣಗಳು, ಬೋಗುಣಿ, ಅದರ ಪೀಠ,
ವಿಮೋಚನಕಾಂಡ 35 : 17 (IRVKN)
ಅಂಗಳದ ತೆರೆಗಳು, ಕಂಬಗಳು, ಗದ್ದಿಗೆಕಲ್ಲುಗಳು, ಅಂಗಳದ ಬಾಗಿಲಿನ ಪರದೆ,
ವಿಮೋಚನಕಾಂಡ 35 : 18 (IRVKN)
ಗುಡಾರದ ಗೂಟಗಳು, ಅಂಗಳದ ಗೂಟಗಳು, ಇವುಗಳ ಹಗ್ಗಗಳು,
ವಿಮೋಚನಕಾಂಡ 35 : 19 (IRVKN)
ಪವಿತ್ರಸ್ಥಾನದ ಸೇವೆಗೆ ಬೇಕಾದ ಸುಂದರವಾದ ದೀಕ್ಷಾವಸ್ತ್ರಗಳು ಅಂದರೆ ಮಹಾಯಾಜಕನಾದ ಆರೋನನಿಗೂ ಅವನ ಮಕ್ಕಳಿಗೂ ಬೇಕಾದ ಪವಿತ್ರ ಯಾಜಕವಸ್ತ್ರಗಳು ಇವೇ” ಅಂದನು.
ವಿಮೋಚನಕಾಂಡ 35 : 20 (IRVKN)
ದೇವದರ್ಶನ ಗುಡಾರದ ನಿರ್ಮಾಣಕ್ಕೆ ಕಾಣಿಕೆಗಳು ಇಸ್ರಾಯೇಲರು ಮತ್ತು ಸಮೂಹದವರೆಲ್ಲರೂ ಮೋಶೆಯ ಎದುರಿನಿಂದ ಹೊರಟು ಹೋದರು.
ವಿಮೋಚನಕಾಂಡ 35 : 21 (IRVKN)
ಯಾರನ್ನು ಹೃದಯವು ಪ್ರೇರೇಪಿಸಿತೋ, ಯಾರ ಮನಸ್ಸು ಸಿದ್ಧವಾಗಿತ್ತೋ ಅವರೆಲ್ಲರೂ ಬಂದು ದೇವದರ್ಶನದ ಗುಡಾರದ ಕೆಲಸಕ್ಕಾಗಿಯೂ ಅದರ ಸಮಸ್ತ ಸೇವೆಗಳಿಗಾಗಿಯೂ, ಪವಿತ್ರ ವಸ್ತ್ರಗಳಿಗಾಗಿಯೂ ಯೆಹೋವನಿಗೆ ಕಾಣಿಕೆಗಳನ್ನು ತಂದರು.
ವಿಮೋಚನಕಾಂಡ 35 : 22 (IRVKN)
ಸಿದ್ಧಚಿತ್ತರಾದ ಗಂಡಸರೂ, ಹೆಂಗಸರೂ ಬಂದು ಯೆಹೋವನಿಗೆ ಚಿನ್ನದ ಕಾಣಿಕೆಗಳನ್ನು ಅಂದರೆ ಕಡಗ, ಮೂಗುತಿ, ಮುದ್ರೆಯುಂಗರ, ಕಂಠಮಾಲೆ ಮೊದಲಾದ ಚಿನ್ನದ ಒಡವೆಗಳನ್ನು ಸಮರ್ಪಿಸಿದರು.
ವಿಮೋಚನಕಾಂಡ 35 : 23 (IRVKN)
ಯಾರಲ್ಲಿ ನೀಲಿ, ನೇರಳೆ ಹಾಗು ಕಡುಗೆಂಪು ವರ್ಣಗಳುಳ್ಳ ದಾರಗಳು, ನಾರುಬಟ್ಟೆಯು, ಉಣ್ಣೆ ಬಟ್ಟೆಯು, ಹದಮಾಡಿದ ಕೆಂಪುಬಣ್ಣದ ಟಗರಿನ ತೊಗಲುಗಳು ಹಾಗು ಕಡಲಪ್ರಾಣಿಯ ತೊಗಲುಗಳು ಇದ್ದವೋ ಅವರು ಅವುಗಳನ್ನು ತಂದುಕೊಟ್ಟರು.
ವಿಮೋಚನಕಾಂಡ 35 : 24 (IRVKN)
ಯಾರಲ್ಲಿ ಬೆಳ್ಳಿ ಇಲ್ಲವೇ ತಾಮ್ರ ಇತ್ತೋ ಅವರು ಅವುಗಳನ್ನೇ ತಂದು ಯೆಹೋವನಿಗೆ ಸಮರ್ಪಿಸಿದರು. ಯಾರ ಬಳಿಯಲ್ಲಿ ಗುಡಾರದ ಕೆಲಸಕ್ಕೆ ಬೇಕಾದ ಜಾಲೀಮರವಿತ್ತೋ ಅವರು ಅದನ್ನು ತಂದುಕೊಟ್ಟರು.
ವಿಮೋಚನಕಾಂಡ 35 : 25 (IRVKN)
ನಿಪುಣೆಯರಾದ ಸ್ತ್ರೀಯರು ತಮ್ಮ ಕೈಗಳಿಂದ ನೀಲಿ, ನೇರಳೆ, ಕಡುಗೆಂಪು ವರ್ಣಗಳುಳ್ಳ ನೂಲನ್ನೂ, ಹತ್ತಿಯ ನೂಲನ್ನೂ ನೇಯ್ದು ಆ ನೂಲನ್ನು ತಂದುಕೊಟ್ಟರು.
ವಿಮೋಚನಕಾಂಡ 35 : 26 (IRVKN)
ಬುದ್ಧಿವಂತೆಯರಾದ ಬೇರೆ ಸ್ತ್ರೀಯರು ಆಡಿನ ಕೂದಲುಗಳನ್ನು ನೇಯ್ದು ತಂದುಕೊಟ್ಟರು.
ವಿಮೋಚನಕಾಂಡ 35 : 27 (IRVKN)
ಅಧಿಪತಿಗಳು ಏಫೋದ್ ಕವಚಕ್ಕೆ ಬೇಕಾದ ಗೋಮೇಧಕ ರತ್ನಗಳನ್ನು, ಎದೆಪದಕದಲ್ಲಿ ಇಡಬೇಕಾದ ರತ್ನಗಳನ್ನು,
ವಿಮೋಚನಕಾಂಡ 35 : 28 (IRVKN)
ದೀಪಕ್ಕೆ ಬೇಕಾದ ಎಣ್ಣೆಯನ್ನು ಹಾಗು ಅಭಿಷೇಕತೈಲಕ್ಕೆ ಮತ್ತು ಪರಿಮಳಧೂಪಕ್ಕೆ ಬೇಕಾದ ಸುಗಂಧದ್ರವ್ಯಗಳನ್ನು ತಂದುಕೊಟ್ಟರು.
ವಿಮೋಚನಕಾಂಡ 35 : 29 (IRVKN)
ಮೋಶೆಯ ಮೂಲಕ ಯೆಹೋವನು ಆಜ್ಞಾಪಿಸಿದ ಎಲ್ಲಾ ಕೆಲಸಕಾರ್ಯಗಳಿಗಾಗಿ ಆತನಿಗೆ ಕಾಣಿಕೆಗಳನ್ನು ತಂದುಕೊಡುವುದಕ್ಕೆ ಹೃದಯದಿಂದ ಪ್ರೇರೇಪಿತರಾಗಿ ಇಸ್ರಾಯೇಲ್ಯರ ಸ್ತ್ರೀಪುರುಷರೆಲ್ಲರೂ ಮನಃಪೂರ್ವಕವಾಗಿಯೇ ತಂದುಕೊಟ್ಟರು.
ವಿಮೋಚನಕಾಂಡ 35 : 30 (IRVKN)
ಗುಡಾರದ ಶಿಲ್ಪಿಗಳು
ವಿಮೋ 31:1-11 ಮೋಶೆಯು ಇಸ್ರಾಯೇಲ್ಯರಿಗೆ ಹೀಗೆಂದನು, “ನೋಡಿರಿ, ಯೆಹೋವನು ಯೆಹೂದ ಕುಲದವನಾದ ಹೂರನ ಮೊಮ್ಮಗನೂ, ಊರಿಯ ಮಗನೂ ಆಗಿರುವ ಬೆಚಲೇಲನೆಂಬವನನ್ನು ಹೆಸರು ಹಿಡಿದು ಕರೆದಿದ್ದಾನೆ.
ವಿಮೋಚನಕಾಂಡ 35 : 31 (IRVKN)
ಕಲಾತ್ಮಕವಾದ ವಿನ್ಯಾಸಗಳನ್ನು ಕಲ್ಪಿಸುವುದಕ್ಕೂ, ಚಿನ್ನ, ಬೆಳ್ಳಿ ಹಾಗು ತಾಮ್ರಗಳಿಂದ ಕೆಲಸ ಮಾಡುವುದಕ್ಕೂ,
ವಿಮೋಚನಕಾಂಡ 35 : 32 (IRVKN)
ರತ್ನಗಳನ್ನು ಕೆತ್ತುವುದಕ್ಕೂ, ಮರದಲ್ಲಿ ಕೆತ್ತನೇ ಕೆಲಸವನ್ನು ಮಾಡುವುದಕ್ಕೂ,
ವಿಮೋಚನಕಾಂಡ 35 : 33 (IRVKN)
ಅವನಿಗೆ ದೇವರಾತ್ಮವನ್ನು ಕೊಟ್ಟು ಅವನಿಗೆ ಬೇಕಾದ ಜ್ಞಾನ, ವಿದ್ಯೆ, ವಿವೇಕಗಳನ್ನೂ ಸಕಲ ಶಿಲ್ಪಕಲಾಜ್ಞಾನವನ್ನೂ ಅನುಗ್ರಹಿಸಿದ್ದೇನೆ.
ವಿಮೋಚನಕಾಂಡ 35 : 34 (IRVKN)
ಅದಲ್ಲದೆ ಮತ್ತೊಬ್ಬರಿಗೆ ಕಲಿಸಿಕೊಡುವುದಕ್ಕೆ ಸಹ ಅವನಿಗೂ ಮತ್ತು ದಾನ್ ಕುಲದ ಅಹೀಸಾಮಾಕನ ಮಗನಾದ ಒಹೋಲೀಯಾಬನಿಗೂ ವರಕೊಟ್ಟಿದ್ದೇನೆ.
ವಿಮೋಚನಕಾಂಡ 35 : 35 (IRVKN)
ಕಸೂತಿ ಕೆಲಸ ಕಲ್ಪಿಸುವವರು, ನೀಲಿ, ನೇರಳೆ ಕಡುಗೆಂಪು ವರ್ಣದ ದಾರದಿಂದಲೂ, ಹತ್ತಿಬಟ್ಟೆಯಿಂದಲೂ ಕಸೂತಿ ಕೆಲಸ ಮಾಡುವವರು, ನೇಯುವವರು, ಅಂತೂ ಎಲ್ಲಾ ಕಸಬುದಾರರು ಮಾಡುವ ಕೆಲಸಗಳನ್ನು ಕಸಿಮಾಡುವುದಕ್ಕೂ ಯೆಹೋವನು ಅವರಿಗೆ ಜ್ಞಾನವನ್ನು ಪರಿಪೂರ್ಣವಾಗಿ ಅನುಗ್ರಹಿಸಿದ್ದಾನೆ.”
❮
❯