ವಿಮೋಚನಕಾಂಡ 18 : 1 (IRVKN)
ಇತ್ರೋವನು ಮೋಶೆಯನ್ನು ಭೇಟಿಮಾಡಿದ್ದು ದೇವರು ಮೋಶೆಗೂ ತನ್ನ ಜನರಾದ ಇಸ್ರಾಯೇಲರಿಗೂ ಮಹೋಪಕಾರಗಳನ್ನು ಮಾಡಿದ್ದನ್ನೂ, ಯೆಹೋವನು ಇಸ್ರಾಯೇಲರನ್ನು ಐಗುಪ್ತ ದೇಶದಿಂದ ಕರತಂದದ್ದನ್ನೂ, ಮಿದ್ಯಾನ್ಯರ ಆಚಾರ್ಯನೂ ಮೋಶೆಯ ಮಾವನೂ ಆಗಿದ್ದ ಇತ್ರೋವನು ಕೇಳಿದನು.
ವಿಮೋಚನಕಾಂಡ 18 : 2 (IRVKN)
ಆಗ ಮೋಶೆಯ ಮಾವನಾದ ಇತ್ರೋವನು ತನ್ನ ಬಳಿಗೆ ಕಳುಹಿಸಲ್ಪಟ್ಟಿದ್ದ ಮೋಶೆಯ ಹೆಂಡತಿಯಾದ ಚಿಪ್ಪೋರಳನ್ನೂ, ಆಕೆಯ ಇಬ್ಬರು ಗಂಡು ಮಕ್ಕಳನ್ನೂ ಕರೆದುಕೊಂಡು ಬಂದನು.
ವಿಮೋಚನಕಾಂಡ 18 : 3 (IRVKN)
ಆ ಪುತ್ರರಲ್ಲಿ ಒಬ್ಬನಿಗೆ “* ಗೇರ್ಷೋಮ್ ಎಂದರೆ ಅನ್ಯದೇಶದವನು. ಗೇರ್ಷೋಮ್” ಎಂದು ಹೆಸರಿಟ್ಟನು. ಏಕೆಂದರೆ ಮೋಶೆಯು, “ನಾನು ಅನ್ಯದೇಶದಲ್ಲಿ ಪ್ರವಾಸಿಯಾಗಿದ್ದೇನೆ” ಎಂದು ಹೇಳಿದನು.
ವಿಮೋಚನಕಾಂಡ 18 : 4 (IRVKN)
ತನ್ನ ಇನ್ನೊಬ್ಬ ಮಗನಿಗೆ ಮೋಶೆಯು, “ನನ್ನ ತಂದೆಯ ದೇವರು ನನಗೆ ಸಹಾಯಕನಾಗಿದ್ದು ನನ್ನನ್ನು ಫರೋಹನ ಕತ್ತಿಗೆ ತಪ್ಪಿಸಿ ಕಾಪಾಡಿದನು” ಎಂದು ಹೇಳಿ, ಆ ಮಗನಿಗೆ “† ನನ್ನ ದೇವರು ಸಹಾಯಕನು. ಎಲೀಯೆಜೆರ್” ಎಂದು ಹೆಸರಿಟ್ಟನು.
ವಿಮೋಚನಕಾಂಡ 18 : 5 (IRVKN)
ಮೋಶೆಯ ಮಾವನಾದ ಇತ್ರೋವನು ಮೋಶೆಯ ಮಕ್ಕಳನ್ನು, ಹೆಂಡತಿಯನ್ನು ಕರೆದುಕೊಂಡು ಮರುಭೂಮಿಯಲ್ಲಿ ದೇವರ ಬೆಟ್ಟದ ಹತ್ತಿರ ಇಳಿದುಕೊಂಡಿದ್ದ ಮೋಶೆಯ ಬಳಿಗೆ ಬಂದನು.
ವಿಮೋಚನಕಾಂಡ 18 : 6 (IRVKN)
ಅವನು ಮೋಶೆಗೆ, “ನಿನ್ನ ಮಾವನಾದ ಇತ್ರೋವನಾದ ನಾನು ನಿನ್ನ ಹೆಂಡತಿಯನ್ನು, ನಿನ್ನ ಇಬ್ಬರು ಮಕ್ಕಳನ್ನು ಕರೆದುಕೊಂಡು ನಿನ್ನ ಬಳಿಗೆ ಬಂದಿದ್ದೇನೆ” ಎಂದು ಹೇಳಿ ಕಳುಹಿಸಿದನು.
ವಿಮೋಚನಕಾಂಡ 18 : 7 (IRVKN)
ಮೋಶೆಯು ತನ್ನ ಮಾವನನ್ನು ಎದುರುಗೊಳ್ಳುವುದಕ್ಕೆ ಹೊರಟು ಆತನನ್ನು ವಂದಿಸಿ ಮುದ್ದಿಟ್ಟನು. ಅವರು ಪರಸ್ಪರ ಯೋಗಕ್ಷೇಮವನ್ನು ವಿಚಾರಿಸಿದ ಮೇಲೆ ಡೇರೆಯೊಳಗೆ ಹೋದರು.
ವಿಮೋಚನಕಾಂಡ 18 : 8 (IRVKN)
ಆ ನಂತರ ಮೋಶೆಯು ಯೆಹೋವನು ಇಸ್ರಾಯೇಲರ ಪರವಾಗಿ ಫರೋಹನಿಗೂ, ಐಗುಪ್ತ್ಯರಿಗೂ ಮಾಡಿದ್ದೆಲ್ಲವನ್ನೂ, ದಾರಿಯಲ್ಲಿ ತಮಗುಂಟಾದ ಎಲ್ಲಾ ಕಷ್ಟಗಳನ್ನೂ, ಯೆಹೋವನು ಆ ಕಷ್ಟಗಳಿಂದ ತಪ್ಪಿಸಿದ್ದನ್ನೂ ತನ್ನ ಮಾವನಿಗೆ ವಿವರಿಸಿದನು.
ವಿಮೋಚನಕಾಂಡ 18 : 9 (IRVKN)
ಯೆಹೋವನು ಐಗುಪ್ತ್ಯರ ಕೈಯಿಂದ ಇಸ್ರಾಯೇಲರನ್ನು ಬಿಡಿಸಿ ಅವರಿಗೆ ಉಪಕಾರವನ್ನು ಮಾಡಿದ್ದಕ್ಕಾಗಿ ಇತ್ರೋವನು ಸಂತೋಷ ಪಟ್ಟನು.
ವಿಮೋಚನಕಾಂಡ 18 : 10 (IRVKN)
ಇತ್ರೋವನು, “ಐಗುಪ್ತ್ಯರ ಕೈಯಿಂದಲೂ, ಫರೋಹನ ಕೈಯಿಂದಲೂ ನಿಮ್ಮನ್ನು ಬಿಡುಗಡೆ ಮಾಡಿದ ಯೆಹೋವನಿಗೆ ಸ್ತೋತ್ರವಾಗಲಿ.
ವಿಮೋಚನಕಾಂಡ 18 : 11 (IRVKN)
ಯೆಹೋವನು ತನ್ನ ಜನರನ್ನು ಅವರ ಕೈಯಿಂದ ಬಿಡಿಸಿ, ಆ ಐಗುಪ್ತ್ಯರು ಯಾವ ವಿಷಯದಲ್ಲಿ ಗರ್ವಪಡುತ್ತಿದ್ದರೋ, ಆ ವಿಷಯದಲ್ಲಿ ಅವರನ್ನು ತಗ್ಗಿಸಿದ್ದರಿಂದ ಯೆಹೋವನು ಎಲ್ಲಾ ದೇವರುಗಳಿಗಿಂತಲೂ ದೊಡ್ಡವನೆಂದು ಈಗ ತಿಳಿದುಕೊಂಡಿದ್ದೇನೆ” ಅಂದನು.
ವಿಮೋಚನಕಾಂಡ 18 : 12 (IRVKN)
ಇದಲ್ಲದೆ ಮೋಶೆಯ ಮಾವನಾದ ಇತ್ರೋವನು ದೇವರಿಗೆ ಸರ್ವಾಂಗಹೋಮ ಯಜ್ಞಗಳನ್ನು ಸಮರ್ಪಿಸಿದನು. ಆರೋನನು, ಇಸ್ರಾಯೇಲರ ಹಿರಿಯರೆಲ್ಲರೂ ಅವನ ಸಂಗಡ ದೇವರ ಸನ್ನಿಧಿಯಲ್ಲಿ ಸಹಭೋಜನವನ್ನು ಮಾಡುವುದಕ್ಕೆ ಬಂದರು.
ವಿಮೋಚನಕಾಂಡ 18 : 13 (IRVKN)
ನ್ಯಾಯಾಧಿಪತಿಗಳನ್ನು ನೇಮಿಸಿದ್ದು
ಧರ್ಮೋ 1:9-18 ಮರುದಿನ ಮೋಶೆ ಜನರಿಗೆ ನ್ಯಾಯತೀರಿಸುವುದಕ್ಕಾಗಿ ಕುಳಿತಿರಲು ಮುಂಜಾನೆಯಿಂದ ಸಾಯಂಕಾಲದವರೆಗೂ ಜನರು ಅವನ ಹತ್ತಿರ ನಿಂತಿದ್ದರು.
ವಿಮೋಚನಕಾಂಡ 18 : 14 (IRVKN)
ಮೋಶೆಯು ಜನರಿಗಾಗಿ ಮಾಡುತ್ತಿರುವುದೆಲ್ಲವನ್ನು ಮಾವನು ನೋಡಿ ಅವನಿಗೆ, “ನೀನು ಯಾತಕ್ಕೆ ಜನರಿಗಾಗಿ ಇಷ್ಟು ಪ್ರಯಾಸ ಪಡುತ್ತಿರುವೆ? ನೀನು ಒಬ್ಬನೇ ನ್ಯಾಯತೀರಿಸುವುದಕ್ಕೆ ಕುಳಿತಿರುವುದೇಕೆ?” ಎಂದು ಕೇಳಿದನು.
ವಿಮೋಚನಕಾಂಡ 18 : 15 (IRVKN)
ಮೋಶೆ ತನ್ನ ಮಾವನಿಗೆ, “ದೇವರ ನಡೆಸುವಿಕೆಯನ್ನು ತಿಳಿದುಕೊಳ್ಳುವುದಕ್ಕಾಗಿ ಜನರು ನನ್ನ ಹತ್ತಿರ ಬರುತ್ತಾರೆ.
ವಿಮೋಚನಕಾಂಡ 18 : 16 (IRVKN)
ಹಾಗೆಯೇ ಅವರೊಳಗೆ ವ್ಯಾಜ್ಯವೇನಾದರೂ ಉಂಟಾಗಿದ್ದರೆ ನನ್ನ ಬಳಿಗೆ ಬರುತ್ತಾರೆ. ನಾನು ವಿಚಾರಣೆ ಮಾಡಿ ಅವರಿಗೆ ನ್ಯಾಯತೀರಿಸಿ ದೇವರ ಆಜ್ಞಾವಿಧಿಗಳನ್ನು ಬೋಧಿಸುತ್ತೇನೆ” ಎಂದು ಹೇಳಿದನು.
ವಿಮೋಚನಕಾಂಡ 18 : 17 (IRVKN)
ಅದನ್ನು ಕೇಳಿ ಮೋಶೆಯ ಮಾವನು ಅವನಿಗೆ, “ನೀನು ಮಾಡುತ್ತಿರುವ ಈ ಕಾರ್ಯವಿಧಾನ ಸರಿಯಲ್ಲ.
ವಿಮೋಚನಕಾಂಡ 18 : 18 (IRVKN)
ಈ ಕೆಲಸ ಬಹಳ ಕಷ್ಟವಾದದ್ದು. ನಿನ್ನೊಬ್ಬನಿಂದಲೇ ಅದನ್ನು ನಡೆಸಲಾಗದು. ನೀನು ನಿನ್ನ ಸಂಗಡ ಇರುವ ಈ ಜನರೂ ನಿಶ್ಚಯವಾಗಿ ಬಳಲಿಹೋಗುವಿರಿ.
ವಿಮೋಚನಕಾಂಡ 18 : 19 (IRVKN)
ನನ್ನ ಮಾತನ್ನು ಕೇಳು. ನಾನು ನಿನಗೆ ಒಂದು ಆಲೋಚನೆಯನ್ನು ಹೇಳುತ್ತೇನೆ ಮತ್ತು ದೇವರು ನಿನ್ನ ಸಂಗಡ ಇರಲಿ. ನೀನು ಜನರಿಗೂ, ದೇವರಿಗೂ ಮಧ್ಯಸ್ಥನಾಗಿದ್ದು ಜನರ ವ್ಯಾಜ್ಯಗಳನ್ನು ದೇವರ ಹತ್ತಿರಕ್ಕೆ ತರಬೇಕು.
ವಿಮೋಚನಕಾಂಡ 18 : 20 (IRVKN)
ನೀನು ದೇವರ ಆಜ್ಞಾವಿಧಿಗಳನ್ನು ಬೋಧಿಸಿ, ಅವರು ನಡೆಯಬೇಕಾದ ಮಾರ್ಗವನ್ನೂ, ಮಾಡಬೇಕಾದ ಕಾರ್ಯಗಳನ್ನೂ ಅವರಿಗೆ ತಿಳಿಯಪಡಿಸಬೇಕು.
ವಿಮೋಚನಕಾಂಡ 18 : 21 (IRVKN)
ಆದರೆ ನೀನು ಸಮಸ್ತ ಜನರೊಳಗೆ ಸಮರ್ಥರೂ, ಭಕ್ತರೂ, ನಂಬಿಗಸ್ತರೂ, ಲಂಚಮುಟ್ಟದವರೂ ಆಗಿರುವ ಪುರುಷರನ್ನು ಆರಿಸಿಕೊಂಡು ಅವರನ್ನು ಸಾವಿರ ಮಂದಿಯ ಮೇಲೆಯೂ, ನೂರು ಮಂದಿಯ ಮೇಲೆಯೂ, ಐವತ್ತು ಮಂದಿಯ ಮೇಲೆಯೂ, ಹತ್ತು ಮಂದಿಯ ಮೇಲೆಯೂ ಅಧಿಕಾರಿಗಳನ್ನಾಗಿ ನೇಮಿಸಬೇಕು.
ವಿಮೋಚನಕಾಂಡ 18 : 22 (IRVKN)
ಅವರೇ ಯಾವಾಗಲೂ ಜನರಿಗೆ ನ್ಯಾಯವನ್ನು ತೀರಿಸಲಿ. ಅವರು ದೊಡ್ಡ ವ್ಯಾಜ್ಯಗಳನ್ನು ನಿನ್ನ ಮುಂದೆ ತರಲಿ. ಸಣ್ಣ ವ್ಯಾಜ್ಯಗಳನ್ನೆಲ್ಲಾ ಅವರೇ ತೀರಿಸಲಿ. ಅವರು ನಿನ್ನೊಂದಿಗೆ ಈ ಭಾರವನ್ನು ಹೊರುವುದರಿಂದ ನಿನಗೆ ಸುಲಭವಾಗುವುದು.
ವಿಮೋಚನಕಾಂಡ 18 : 23 (IRVKN)
ದೇವರು ನಿನಗೆ ಹೀಗೆ ಮಾಡುವುದಕ್ಕೆ ಅಪ್ಪಣೆಕೊಡುವುದಾದರೆ, ನೀನು ಈ ಕೆಲಸದ ಹೊರೆಯನ್ನು ನಿರ್ವಹಿಸಲು ಸಾಧ್ಯವಾಗುವುದು. ಇದು ಮಾತ್ರವಲ್ಲದೆ ಈ ಜನರೆಲ್ಲರೂ ಸಂತುಷ್ಟರಾಗಿ ತಮ್ಮ ತಮ್ಮ ಮನೆಗಳಿಗೆ ಹೋಗುವರು” ಎಂದು ಹೇಳಿದನು.
ವಿಮೋಚನಕಾಂಡ 18 : 24 (IRVKN)
ಮೋಶೆ ತನ್ನ ಮಾವನ ಮಾತಿಗೆ ಒಪ್ಪಿಕೊಂಡು ಅವನು ಹೇಳಿದಂತೆಯೇ ಎಲ್ಲವನ್ನು ಮಾಡಿದನು.
ವಿಮೋಚನಕಾಂಡ 18 : 25 (IRVKN)
ಮೋಶೆಯು ಇಸ್ರಾಯೇಲರಲ್ಲಿ ಸಮರ್ಥರಾದವರನ್ನು ಆರಿಸಿಕೊಂಡು ಸಾವಿರ ಮಂದಿಯ ಮೇಲೆಯೂ, ನೂರು ಮಂದಿಯ ಮೇಲೆಯೂ, ಐವತ್ತು ಮಂದಿಯ ಮೇಲೆಯೂ, ಹತ್ತು ಮಂದಿಯ ಮೇಲೆಯೂ ಅಧಿಕಾರಿಗಳನ್ನಾಗಿ ನೇಮಿಸಿದನು.
ವಿಮೋಚನಕಾಂಡ 18 : 26 (IRVKN)
ಇವರು ಯಾವಾಗಲೂ ಜನರಿಗೆ ನ್ಯಾಯತೀರಿಸುವವರಾಗಿ ಕಠಿಣ ವ್ಯಾಜ್ಯಗಳನ್ನು ಮೋಶೆಯ ಬಳಿಗೆ ತರುತ್ತಾ, ಸುಲಭವಾದ ವ್ಯಾಜ್ಯಗಳನ್ನು ತಾವೇ ತೀರಿಸುತ್ತಾ ಬಂದರು.
ವಿಮೋಚನಕಾಂಡ 18 : 27 (IRVKN)
ತರುವಾಯ ಮೋಶೆ ತನ್ನ ಮಾವನಿಗೆ ಅಪ್ಪಣೆ ಕೊಡಲಾಗಿ, ಅವನು ಸ್ವದೇಶಕ್ಕೆ ಹೊರಟುಹೋದನು.
❮
❯