ವಿಮೋಚನಕಾಂಡ 14 : 1 (IRVKN)
ಕೆಂಪು ಸಮುದ್ರವನ್ನು ದಾಟಿಹೋದದ್ದು ಯೆಹೋವನು ಮೋಶೆಯ ಸಂಗಡ ಮಾತನಾಡಿ
ವಿಮೋಚನಕಾಂಡ 14 : 2 (IRVKN)
“ಇಸ್ರಾಯೇಲರು ಹಿಂದಿರುಗಿ ಹೋಗಿ ಪೀಹಹೀರೋತಿನ ಪೂರ್ವಕಡೆಯಲ್ಲಿ ಮಿಗ್ದೋಲಿಗೂ ಕೆಂಪು ಸಮುದ್ರಕ್ಕೂ ನಡುವೆ ಬಾಳ್ಚೆಫೋನಿಗೆ ಎದುರಾಗಿ ಇಳಿದುಕೊಳ್ಳಬೇಕೆಂದು ಅವರಿಗೆ ಹೇಳು. ಅದರ ಎದುರಾಗಿಯೇ ಸಮುದ್ರದ ಬಳಿಯಲ್ಲೇ ಅವರು ಇಳಿದುಕೊಳ್ಳಬೇಕು.
ವಿಮೋಚನಕಾಂಡ 14 : 3 (IRVKN)
ಫರೋಹನು ಅದನ್ನು ಕಂಡು ಇಸ್ರಾಯೇಲರನ್ನು ಕುರಿತು, ‘ಅವರಿಗೆ ದಾರಿತಪ್ಪಿದೆ, ಎಲ್ಲಾ ಕಡೆಯಲ್ಲಿಯೂ ಮರುಭೂಮಿ ಅವರನ್ನು ಸುತ್ತುವರಿದಿದೆ’ ಎಂದು ಅಂದುಕೊಳ್ಳುವನು.
ವಿಮೋಚನಕಾಂಡ 14 : 4 (IRVKN)
ನಾನು ಫರೋಹನ ಹೃದಯವನ್ನು ಕಠಿಣಪಡಿಸುವೆನು. ಆದುದರಿಂದ ಅವನು ಅವರನ್ನು ಬೆನ್ನಟ್ಟಿ ಬರುವನು. ಆಗ ನಾನು ಫರೋಹನಲ್ಲಿಯೂ, ಅವನ ಸೈನ್ಯದಲ್ಲಿಯೂ ಮಹಿಮೆಗೊಳ್ಳುವೆನು. ‘ನಾನೇ ಯೆಹೋವನು’ ಎಂದು ಐಗುಪ್ತ್ಯರಿಗೆ ತಿಳಿದು ಬರುವುದು” ಎಂದು ಹೇಳಿದನು. ಯೆಹೋವನು ಆಜ್ಞಾಪಿಸಿದಂತೆಯೇ ಇಸ್ರಾಯೇಲರು ನಡೆದುಕೊಂಡರು.
ವಿಮೋಚನಕಾಂಡ 14 : 5 (IRVKN)
ಇಸ್ರಾಯೇಲರು ಓಡಿಹೋದರೆಂಬ ವರ್ತಮಾನವು ಐಗುಪ್ತದ ಅರಸನಾದ ಫರೋಹನಿಗೆ ತಿಳಿದುಬಂದಾಗ, ಅವರ ವಿಷಯದಲ್ಲಿ ಫರೋಹನ ಮತ್ತು ಅವನ ಪರಿವಾರದವರ ಹೃದಯವು ಅವರಿಗೆ ವಿರುದ್ಧವಾಗಿ ಕಠಿಣಗೊಂಡಿತು. ಅವರು, “ಇದೇನು ನಾವು ಮಾಡಿದ್ದು? ನಮಗೆ ದಾಸರಾಗಿದ್ದ ಇಸ್ರಾಯೇಲರನ್ನು ಹೊರಟು ಹೋಗುವುದಕ್ಕೆ ಬಿಟ್ಟೆವಲ್ಲಾ” ಎಂದುಕೊಂಡರು.
ವಿಮೋಚನಕಾಂಡ 14 : 6 (IRVKN)
ಆಗ ಫರೋಹನು ತನ್ನ ರಥಬಲವನ್ನು ಸಿದ್ಧಪಡಿಸಿಕೊಂಡು ತನ್ನ ಭಟರೊಡನೆ ಹೊರಟನು.
ವಿಮೋಚನಕಾಂಡ 14 : 7 (IRVKN)
ಶ್ರೇಷ್ಠವಾದ ಆರುನೂರು ರಥಗಳನ್ನೂ, ಐಗುಪ್ತ ದೇಶದ ಎಲ್ಲಾ ರಥಗಳನ್ನೂ ತೆಗೆದುಕೊಂಡು ಬೆನ್ನಟ್ಟಿ ಹೋದನು. ಆ ಎಲ್ಲಾ ರಥಗಳಲ್ಲಿ ಅಧಿಪತಿಗಳನ್ನೂ ಕರೆಸಿ ಕೊಂಡನು.
ವಿಮೋಚನಕಾಂಡ 14 : 8 (IRVKN)
ಯೆಹೋವನು ಐಗುಪ್ತ ದೇಶದ ಅರಸನಾದ ಫರೋಹನ ಹೃದಯವನ್ನು ಕಠಿಣಪಡಿಸಿದ್ದರಿಂದ ಅವನು ಇಸ್ರಾಯೇಲರನ್ನು ಬೆನ್ನಟ್ಟಿಹೋದನು. ಆದರೆ ಇಸ್ರಾಯೇಲರು ಯುದ್ಧಸನ್ನದ್ಧರಾಗಿ ಹೊರಟು ಬಂದಿದ್ದರು.
ವಿಮೋಚನಕಾಂಡ 14 : 9 (IRVKN)
ಐಗುಪ್ತ್ಯರು ಅಂದರೆ ಫರೋಹನ ಕುದುರೆಗಳೂ, ರಥಗಳೂ, ಅವನ ರಾಹುತರೂ, ಸೈನ್ಯದವರೆಲ್ಲರೂ ಅವರ ಹಿಂದೆ ಹೊರಟು ಇಸ್ರಾಯೇಲರು ಪೀಹಹೀರೋತಿನ ಹತ್ತಿರ ಬಾಳ್ಚೆಫೋನಿನ ಎದುರಾಗಿ ಸಮುದ್ರ ತೀರದಲ್ಲಿ ಇಳಿದುಕೊಳ್ಳುತ್ತಿರುವಾಗಲೇ ಅವರ ಸಮೀಪಕ್ಕೆ ಬಂದರು.
ವಿಮೋಚನಕಾಂಡ 14 : 10 (IRVKN)
ಫರೋಹನು ಸಮೀಪಿಸುತ್ತಿರುವಾಗ ಇಸ್ರಾಯೇಲರು ಕಣ್ಣೆತ್ತಿ ತಮ್ಮ ಹಿಂದೆ ಹೊರಟು ಬಂದಿದ್ದ ಐಗುಪ್ತ್ಯರನ್ನು ಕಂಡು, ಬಹಳ ಭಯಪಟ್ಟವರಾಗಿ ಯೆಹೋವನಿಗೆ ಮೊರೆಯಿಟ್ಟರು.
ವಿಮೋಚನಕಾಂಡ 14 : 11 (IRVKN)
ಅವರು ಮೋಶೆಗೆ, “ಐಗುಪ್ತ ದೇಶದಲ್ಲಿ ಸಮಾಧಿಗಳಿರಲಿಲ್ಲವೆಂದು ಮರುಭೂಮಿಯಲ್ಲಿ ಸಾಯಲಿ ಎಂದು ನಮ್ಮನ್ನು ಇಲ್ಲಿಗೆ ಕರೆದುಕೊಂಡು ಬಂದೆಯೋ? ಯಾಕೆ ನೀನು ನಮಗೆ ಈ ರೀತಿಮಾಡಿ ಐಗುಪ್ತ ದೇಶದಿಂದ ಕರೆದುಕೊಂಡು ಬಂದೆ?
ವಿಮೋಚನಕಾಂಡ 14 : 12 (IRVKN)
ನಾವು ಐಗುಪ್ತ ದೇಶದಲ್ಲಿರುವಾಗಲೇ, ‘ನೀನು ನಮ್ಮ ಗೊಡವೆಗೆ ಬರಬೇಡ. ನಾವು ಐಗುಪ್ತ್ಯರಿಗೆ ದಾಸರಾಗಿಯೇ ಇರುವೆವು’ ಎಂಬುದಾಗಿ ನಿನಗೆ ಹೇಳಲಿಲ್ಲವೇ. ನಾವು ಈ ಮರುಭೂಮಿಯಲ್ಲಿ ಸಾಯುವುದಕ್ಕಿಂತ ಐಗುಪ್ತ್ಯರಿಗೆ ದಾಸರಾಗಿರುವುದೇ ಮೇಲಲ್ಲವೇ” ಎಂದು ಹೇಳಿದರು.
ವಿಮೋಚನಕಾಂಡ 14 : 13 (IRVKN)
ಆದರೆ ಮೋಶೆ ಆ ಜನರಿಗೆ, “ನೀವು ಅಂಜಬೇಡಿರಿ. ಸುಮ್ಮನೆ ನಿಂತುಕೊಂಡಿದ್ದು ಯೆಹೋವನು ಈ ಹೊತ್ತು ನಿಮ್ಮನ್ನು ರಕ್ಷಿಸುವ ರೀತಿಯನ್ನು ನೋಡಿರಿ. ನೀವು ಈ ಹೊತ್ತು ನೋಡುವ ಐಗುಪ್ತ್ಯರನ್ನು ಇನ್ನು ಮುಂದೆ ಎಂದಿಗೂ ನೋಡುವುದಿಲ್ಲ.
ವಿಮೋಚನಕಾಂಡ 14 : 14 (IRVKN)
ಯೆಹೋವನೇ ನಿಮಗಾಗಿ ಯುದ್ಧಮಾಡುವನು. ನೀವಂತು ಸುಮ್ಮನೇ ನಿಂತುಕೊಂಡಿರಿ” ಎಂದು ಹೇಳಿದನು.
ವಿಮೋಚನಕಾಂಡ 14 : 15 (IRVKN)
ಆಗ ಯೆಹೋವನು ಮೋಶೆಗೆ ಹೇಳಿದ್ದೇನೆಂದರೆ, “ನೀನು ನನಗೆ ಮೊರೆಯಿಡುವುದೇನು? ಮುಂದಕ್ಕೆ ಹೊರಡಬೇಕೆಂದು ಇಸ್ರಾಯೇಲರಿಗೆ ಹೇಳು.
ವಿಮೋಚನಕಾಂಡ 14 : 16 (IRVKN)
ನೀನು ನಿನ್ನ ಕೋಲನ್ನು ಎತ್ತಿ ಸಮುದ್ರದ ಮೇಲೆ ಕೈಚಾಚಿ ಅದನ್ನು ವಿಭಾಗಿಸು, ಆಗ ಇಸ್ರಾಯೇಲರು ಸಮುದ್ರದ ಮಧ್ಯದಲ್ಲಿ ಒಣಗಿದ ನೆಲದ ಮೇಲೆ ನಡೆದುಕೊಂಡು ಹೋಗುವರು.
ವಿಮೋಚನಕಾಂಡ 14 : 17 (IRVKN)
ನಾನಂತೂ ಐಗುಪ್ತ್ಯರ ಹೃದಯಗಳನ್ನು ಕಠಿಣಪಡಿಸುವೆನು. ಅವರು ಇವರನ್ನು ಹಿಂದಟ್ಟುವರು. ಆಗ ನಾನು ಫರೋಹನ ಮೇಲೆಯೂ, ಅವನ ಸಮಸ್ತ ಸೈನ್ಯದವರ ಮೇಲೆಯೂ, ರಥಗಳ ಮೇಲೆಯೂ ಮತ್ತು ಕುದುರೆಗಳ ಮೇಲೆಯೂ ಪ್ರಖ್ಯಾತಿಗೊಳ್ಳುವೆನು.
ವಿಮೋಚನಕಾಂಡ 14 : 18 (IRVKN)
ನಾನು ಫರೋಹನನಲ್ಲಿಯೂ ಅವನ ರಥಗಳಲ್ಲಿಯೂ, ಕುದುರೆಗಳಲ್ಲಿಯೂ ಪ್ರಖ್ಯಾತಿ ಹೊಂದಿದ ನಂತರ ನಾನೇ ಯೆಹೋವನು ಎಂಬುದನ್ನು ಐಗುಪ್ತ್ಯರು ತಿಳಿದುಕೊಳ್ಳುವರು” ಎಂದನು.
ವಿಮೋಚನಕಾಂಡ 14 : 19 (IRVKN)
ಆಗ ಇಸ್ರಾಯೇಲರ ದಂಡಿನ ಮುಂದೆ ಹೋಗುತ್ತಿದ್ದ ದೇವದೂತನು ತನ್ನ ಸ್ಥಳವನ್ನು ಬಿಟ್ಟು ಅವರ ಹಿಂದಕ್ಕೆ ಬಂದನು. ಅವರ ಮುಂದಾಗಿ ಹೋಗುತ್ತಿದ್ದ ಮೇಘಸ್ತಂಭವು ಅಲ್ಲಿಂದ ಬಂದು ಅವರ ಹಿಂದೆ ನಿಂತುಕೊಂಡಿತು.
ವಿಮೋಚನಕಾಂಡ 14 : 20 (IRVKN)
ಆ ಮೇಘಸ್ತಂಭವು ಐಗುಪ್ತ್ಯರ ಪಾಳೆಯಕ್ಕೂ, ಇಸ್ರಾಯೇಲರ ಪಾಳೆಯಕ್ಕೂ ನಡುವೆ ಬಂದಿತು. ಅದು ಐಗುಪ್ತ್ಯರಿಗೆ ಕತ್ತಲನ್ನೂ, ಇಸ್ರಾಯೇಲರಿಗೆ ರಾತ್ರಿಯಲ್ಲಿ ಬೆಳಕನ್ನು ಕೊಟ್ಟಿದ್ದರಿಂದ ಆ ರಾತ್ರಿಯೆಲ್ಲಾ ಒಬ್ಬರ ಹತ್ತಿರಕ್ಕೆ ಒಬ್ಬರು ಬರಲಾಗಲಿಲ್ಲ.
ವಿಮೋಚನಕಾಂಡ 14 : 21 (IRVKN)
ಮೋಶೆ ಸಮುದ್ರದ ಮೇಲೆ ಕೈಚಾಚಿದಾಗ, ಯೆಹೋವನು ಆ ರಾತ್ರಿಯೆಲ್ಲಾ ಮೂಡಣ ದಿಕ್ಕಿನಿಂದ ಬಲವಾದ ಬಿರುಗಾಳಿಯನ್ನು ಬೀಸುವಂತೆ ಮಾಡಿ ಸಮುದ್ರದ ನೀರನ್ನು ಒಂದು ಕಡೆಗೆ ನೂಕಿ ಅದರ ತಳದಲ್ಲಿ ಒಣನೆಲವು ಕಾಣಿಸುವಂತೆ ಮಾಡಿದನು. ನೀರು ಇಬ್ಭಾಗವಾಯಿತು.
ವಿಮೋಚನಕಾಂಡ 14 : 22 (IRVKN)
ಇಸ್ರಾಯೇಲರು ಸಮುದ್ರದ ಮಧ್ಯದಲ್ಲಿ ಒಣನೆಲದಲ್ಲಿ ನಡೆದುಹೋದರು. ನೀರು ಅವರ ಎಡಗಡೆ ಮತ್ತು ಬಲಗಡೆಗಳಲ್ಲಿ ಗೋಡೆಯಂತೆ ನಿಂತುಕೊಂಡಿತು.
ವಿಮೋಚನಕಾಂಡ 14 : 23 (IRVKN)
ಐಗುಪ್ತ್ಯರೂ ಅಂದರೆ ಫರೋಹನ ಕುದುರೆಗಳೂ, ರಥಗಳೂ, ರಾಹುತರೂ ಅವರನ್ನು ಬೆನ್ನಟ್ಟುವವರಾಗಿ ಅವರ ಹಿಂದೆಯೇ ಸಮುದ್ರದೊಳಗೆ ಬಂದರು.
ವಿಮೋಚನಕಾಂಡ 14 : 24 (IRVKN)
ಬೆಳಗಿನ ಜಾವದಲ್ಲಿ ಯೆಹೋವನು ಆ ಅಗ್ನಿ ಸ್ತಂಭ ಮತ್ತು ಮೇಘ ಸ್ತಂಭದೊಳಗಿನಿಂದ ಐಗುಪ್ತ್ಯರ ದಂಡಿನ ಕಡೆಗೆ ನೋಡಿ ಅವರಲ್ಲಿ ಗಲಿಬಿಲಿಯನ್ನು ಉಂಟುಮಾಡಿದನು.
ವಿಮೋಚನಕಾಂಡ 14 : 25 (IRVKN)
ಯೆಹೋವನು ಅವರ ರಥಗಳ ಚಕ್ರದ ಕೀಲುಗಳಲ್ಲಿ ವ್ಯತ್ಯಾಸ ಮಾಡಿಬಿಟ್ಟದ್ದರಿಂದ ಐಗುಪ್ತರು ಬಹು ಕಷ್ಟದಿಂದ ರಥಗಳನ್ನು ಸಾಗಿಸಿಕೊಂಡು ಹೋಗಬೇಕಾಯಿತು. ಆಗ ಐಗುಪ್ತ್ಯರು, “ನಾವು ಇಸ್ರಾಯೇಲರ ಮುಂದೆ ನಿಲ್ಲಲಾರೆವು, ಓಡಿ ಹೋಗೋಣ, ಯೆಹೋವನು ಅವರಿಗೋಸ್ಕರ ನಮಗೆ ವಿರೋಧವಾಗಿ ಯುದ್ಧಮಾಡುತ್ತಿದ್ದಾನೆ” ಎಂದು ಹೇಳಿಕೊಂಡರು.
ವಿಮೋಚನಕಾಂಡ 14 : 26 (IRVKN)
ಹಿಂದಟ್ಟಿದ ಐಗುಪ್ತ್ಯರು ಮುಳುಗಿಹೋದದ್ದು ಅಷ್ಟರಲ್ಲಿ ಯೆಹೋವನು ಮೋಶೆಗೆ, “ಸಮುದ್ರದ ಮೇಲೆ ನಿನ್ನ ಕೈಚಾಚು, ಆಗ ಅದರ ನೀರು ಮೊದಲಿನಂತೆ ಬಂದು ಐಗುಪ್ತ್ಯರನ್ನೂ, ಅವರ ರಥಗಳನ್ನೂ, ರಾಹುತರನ್ನೂ ಮುಳುಗಿಸುವುದು” ಎಂದು ಹೇಳಿದನು.
ವಿಮೋಚನಕಾಂಡ 14 : 27 (IRVKN)
ಮೋಶೆ ಸಮುದ್ರದ ಮೇಲೆ ಕೈಚಾಚಿದನು. ಬೆಳಗಾಗುವಾಗಲೇ ಸಮುದ್ರದ ನೀರು ಮೊದಲಿದ್ದಂತೆಯೇ ತುಂಬಿಕೊಂಡಿತು. ಐಗುಪ್ತ್ಯರು ಓಡಿಹೋಗುತ್ತಾ ಅದರ ಎದುರಾಗಿಯೇ ಬಂದರು. ಹೀಗೆ ಯೆಹೋವನು ಐಗುಪ್ತ್ಯರನ್ನು ಸಮುದ್ರದೊಳಗೆ ತಳ್ಳಿಬಿಟ್ಟನು.
ವಿಮೋಚನಕಾಂಡ 14 : 28 (IRVKN)
ನೀರು ಮೊದಲಿನಂತೆ ಬಂದು ಆ ರಥಗಳನ್ನೂ, ರಾಹುತರನ್ನೂ, ಅವರ ಹಿಂದೆ ಸಮುದ್ರದೊಳಗೆ ಹೋಗಿದ್ದ ಫರೋಹನ ಸೈನ್ಯದವರೆಲ್ಲರನ್ನೂ ಮುಳುಗಿಸಿಬಿಟ್ಟಿತ್ತು, ಅವರಲ್ಲಿ ಒಬ್ಬರಾದರೂ ಉಳಿಯಲಿಲ್ಲ.
ವಿಮೋಚನಕಾಂಡ 14 : 29 (IRVKN)
ಇಸ್ರಾಯೇಲರಾದರೋ, ಸಮುದ್ರದೊಳಗೆ ಒಣನೆಲದಲ್ಲೇ ನಡೆದುಹೋದರು. ನೀರು ಅವರ ಎಡಗಡೆ ಮತ್ತು ಬಲಗಡೆಗಳಲ್ಲಿ ಗೋಡೆಯಂತೆ ನಿಂತಿತ್ತು.
ವಿಮೋಚನಕಾಂಡ 14 : 30 (IRVKN)
ಆ ದಿನದಲ್ಲಿ ಯೆಹೋವನು ಇಸ್ರಾಯೇಲ್ಯರನ್ನು ಐಗುಪ್ತ್ಯರ ಕೈಯಿಂದ ರಕ್ಷಿಸಿದನು. ಐಗುಪ್ತ್ಯರು ಸತ್ತು ಸಮುದ್ರ ತೀರದಲ್ಲಿ ಬಿದ್ದಿರುವುದನ್ನು ಇಸ್ರಾಯೇಲರು ನೋಡಿದರು.
ವಿಮೋಚನಕಾಂಡ 14 : 31 (IRVKN)
ಯೆಹೋವನು ಐಗುಪ್ತ್ಯರಲ್ಲಿ ಮಾಡಿದ ಈ ಪರಾಕ್ರಮ ಕಾರ್ಯವನ್ನು ಇಸ್ರಾಯೇಲರು ನೋಡಿ ಯೆಹೋವನಿಗೆ ಭಯಪಟ್ಟು ಆತನಲ್ಲಿಯೂ ಆತನ ಸೇವಕನಾದ ಮೋಶೆಯಲ್ಲಿಯೂ ನಂಬಿಕೆಯನ್ನಿಟ್ಟರು.
❮
❯