ವಿಮೋಚನಕಾಂಡ 10 : 1 (IRVKN)
{ಮಿಡತೆಗಳಿಂದ ಉಂಟಾದ ಬಾಧೆ} [PS] ತರುವಾಯ ಯೆಹೋವನು ಮೋಶೆಗೆ, “ಫರೋಹನ ಬಳಿಗೆ ಹಿಂತಿರುಗಿ ಹೋಗು. ನಾನು ಫರೋಹನ ಮತ್ತು ಅವನ ಪರಿವಾರದವರ ಹೃದಯಗಳನ್ನು ಕಠಿಣಗೊಳಿಸಿದ್ದೇನೆ. ಏಕೆಂದರೆ ನಾನು ಈ ಮಹತ್ಕಾರ್ಯಗಳನ್ನು ಅವರ ಮುಂದೆ ನಡೆಸುವುದಕ್ಕೆ ಇದು ಕಾರಣವಾಯಿತು.
ವಿಮೋಚನಕಾಂಡ 10 : 2 (IRVKN)
ಇಸ್ರಾಯೇಲರು ತಮ್ಮ ಮಕ್ಕಳಿಗೂ, ಮೊಮ್ಮಕ್ಕಳಿಗೂ ನಾನು ಐಗುಪ್ತ್ಯರ ನಡುವೆ ನಡೆಸಿರುವ ಈ ಮಹತ್ಕಾರ್ಯಗಳನ್ನು ವಿವರಿಸಿ ಯೆಹೋವನು ಐಗುಪ್ತ್ಯರನ್ನು ತನಗೆ ಇಷ್ಟಬಂದ ಹಾಗೆ ಶಿಕ್ಷಿಸಿದನು ಎಂಬುದಾಗಿ ತಿಳಿಸಬೇಕು. ಹೀಗೆ ನಾನು ಫರೋಹನ ಹೃದಯವನ್ನು, ಅವನ ಪರಿವಾರದವರ ಹೃದಯಗಳನ್ನೂ ಕಠಿಣಮಾಡಿದ್ದೇನೆ. ಇದಲ್ಲದೆ ಈ ಮಹತ್ಕಾರ್ಯಗಳಿಂದ ನೀವು ನನ್ನನ್ನೇ ಯೆಹೋವನೆಂದು ತಿಳಿದುಕೊಳ್ಳುವಿರಿ” ಎಂದನು. [PE][PS]
ವಿಮೋಚನಕಾಂಡ 10 : 3 (IRVKN)
ಮೋಶೆ ಮತ್ತು ಆರೋನರು ಫರೋಹನ ಬಳಿಗೆ ಹೋಗಿ ಅವನಿಗೆ, “ಇಬ್ರಿಯರ ದೇವರಾಗಿರುವ ಯೆಹೋವನು ಆಜ್ಞಾಪಿಸುವುದೇನೆಂದರೆ, ‘ನೀನು ನನ್ನ ಮುಂದೆ ತಗ್ಗಿಸಿಕೊಳ್ಳದೆ ಇರುವುದು ಇನ್ನು ಎಲ್ಲಿಯವರೆಗೆ? ನನ್ನನ್ನು ಆರಾಧಿಸುವಂತೆ ನನ್ನ ಜನರಿಗೆ ಅಪ್ಪಣೆ ಕೊಡು.
ವಿಮೋಚನಕಾಂಡ 10 : 4 (IRVKN)
ಅಪ್ಪಣೆಕೊಡದೆ ಹೋದರೆ ನಾಳೆ ನಿನ್ನ ರಾಜ್ಯದೊಳಗೆ ಮಿಡತೆಗಳನ್ನು ಬರುವಂತೆ ಮಾಡುವೆನು.
ವಿಮೋಚನಕಾಂಡ 10 : 5 (IRVKN)
ಅವು ಭೂಮಿಯನ್ನೆಲ್ಲಾ ಆವರಿಸಿಕೊಳ್ಳುವವು. ನೆಲವೇ ಕಾಣಿಸದೆ ಹೋಗುವುದು. ಆನೆಕಲ್ಲಿನ ಮಳೆಯಿಂದ ನಾಶವಾಗದೆ ಉಳಿದಿದ್ದೆಲ್ಲವನ್ನು ಮಿಡತೆಗಳು ತಿಂದುಬಿಡುವವು. ಹೊಲದಲ್ಲಿರುವ ನಿಮ್ಮ ಎಲ್ಲಾ ಮರಗಳ ಎಲೆ ಚಿಗುರುಗಳನ್ನೂ ತಿಂದುಬಿಡುವವು.
ವಿಮೋಚನಕಾಂಡ 10 : 6 (IRVKN)
ಅವು ನಿನ್ನ ಮನೆಗಳಲ್ಲಿಯೂ, ನಿನ್ನ ಪರಿವಾರದವರ ಮನೆಗಳಲ್ಲಿಯೂ, ಐಗುಪ್ತ್ಯರೆಲ್ಲರ ಮನೆಗಳಲ್ಲಿಯೂ ತುಂಬಿಕೊಂಡಿರುವವು. ನಿಮ್ಮ ಪೂರ್ವಿಕರ ಕಾಲದಿಂದ ಇಂದಿನವರೆಗೂ ಅಂಥ ಮಿಡತೆಯ ದಂಡನ್ನು ಎಂದೂ ಅವರು ನೋಡಿರುವುದಿಲ್ಲ’ ” ಎಂದು ಹೇಳಿದರು. ಇದನ್ನು ಹೇಳಿ ಮೋಶೆ ತಿರುಗಿಕೊಂಡು ಫರೋಹನ ಬಳಿಯಿಂದ ಹೊರಟುಹೋದನು. [PE][PS]
ವಿಮೋಚನಕಾಂಡ 10 : 7 (IRVKN)
ಆಗ ಫರೋಹನ ಪರಿವಾರದವರು ಅವನಿಗೆ, “ಈ ಮನುಷ್ಯನು ಇನ್ನು ಎಷ್ಟು ದಿನ ನಮಗೆ ಉರುಲಾಗಿರಬೇಕು. ಆ ಜನರು ಹೋಗಿ ತಮ್ಮ ದೇವರಾದ ಯೆಹೋವನನ್ನು ಆರಾಧಿಸುವುದಕ್ಕೆ ಅಪ್ಪಣೆಕೊಡು. ಐಗುಪ್ತ ದೇಶವು ಹಾಳಾಯಿತೆಂದು ಇನ್ನು ನಿನ್ನ ಮನಸ್ಸಿಗೆ ಬರಲಿಲ್ಲವೋ?” ಎಂದು ಹೇಳಿದರು.
ವಿಮೋಚನಕಾಂಡ 10 : 8 (IRVKN)
ಅದನ್ನು ಕೇಳಿ ಫರೋಹನು, ಮೋಶೆ ಮತ್ತು ಆರೋನರನ್ನು ತಿರುಗಿ ಕರೆಯಿಸಿ ಅವರಿಗೆ, “ನೀವು ಹೋಗಿ ನಿಮ್ಮ ದೇವರಾದ ಯೆಹೋವನನ್ನು ಆರಾಧಿಸಬಹುದು. ಆದರೆ ಯಾರಾರು ಹೋಗಬೇಕನ್ನುತ್ತೀರಿ?” ಎಂದು ಕೇಳಿದನು.
ವಿಮೋಚನಕಾಂಡ 10 : 9 (IRVKN)
ಮೋಶೆ ಅವನಿಗೆ, “ನಾವು ಯೆಹೋವನಿಗೆ ಜಾತ್ರೆಯನ್ನು ಆಚರಿಸಬೇಕಾಗಿದೆ. ಆದಕಾರಣ ಚಿಕ್ಕವರು ಮೊದಲುಗೊಂಡು, ಮುದುಕರವರೆಗೂ ಎಲ್ಲರೂ ಹೋಗುತ್ತೇವೆ; ಗಂಡು ಹೆಣ್ಣುಮಕ್ಕಳನ್ನೂ, ದನಕುರಿಗಳ ಮಂದೆಯನ್ನು ತೆಗೆದುಕೊಂಡು ಹೋಗುತ್ತೇವೆ” ಎಂದು ಉತ್ತರಕೊಟ್ಟನು.
ವಿಮೋಚನಕಾಂಡ 10 : 10 (IRVKN)
ಅದಕ್ಕೆ ಫರೋಹನು, “ನಾನು ನಿಮ್ಮನ್ನು ಮತ್ತು ನಿಮ್ಮ ಮಕ್ಕಳನ್ನು ಹೋಗುವುದಕ್ಕೆ ಅಪ್ಪಣೆ ಕೊಡುವುದಿಲ್ಲ; ಕಳುಹಿಸಿಕೊಟ್ಟರೆ, ಯೆಹೋವನು ನಿಮ್ಮ ಸಂಗಡವಿರುವನು. ನೋಡಿ, ನೀವು ದುರಾಲೋಚನೆಯಿಂದ ಕೂಡಿದವರು.
ವಿಮೋಚನಕಾಂಡ 10 : 11 (IRVKN)
ನಿಮ್ಮಲ್ಲಿ ಗಂಡಸರು ಮಾತ್ರ ಹೋಗಿ ಯೆಹೋವನನ್ನು ಆರಾಧಿಸಿ ಬರಬಹುದು. ನೀವು ಕೇಳಿಕೊಂಡದ್ದು ಅಷ್ಟೇ ಅಲ್ಲವೇ” ಎಂದು ಹೇಳಿ ಅವರನ್ನು ಫರೋಹನು ತನ್ನ ಸನ್ನಿಧಿಯಿಂದ ಹೊರಡಿಸಿಬಿಟ್ಟನು. [PE][PS]
ವಿಮೋಚನಕಾಂಡ 10 : 12 (IRVKN)
ಆಗ ಯೆಹೋವನು ಮೋಶೆಗೆ, “ಐಗುಪ್ತ ದೇಶದ ಮೇಲೆ ನಿನ್ನ ಕೈಯನ್ನು ಚಾಚಿ, ಮಿಡತೆಗಳನ್ನು ಬರಮಾಡು. ಆನೆಕಲ್ಲಿನ ಮಳೆಯಿಂದ ನಾಶವಾಗದೆ ಉಳಿದಿರುವ ಪೈರುಗಳನ್ನೆಲ್ಲಾ ಮಿಡತೆಗಳು ತಿಂದುಬಿಡಲಿ” ಎಂದು ಹೇಳಿದನು.
ವಿಮೋಚನಕಾಂಡ 10 : 13 (IRVKN)
ಮೋಶೆ ತನ್ನ ಕೋಲನ್ನು ಐಗುಪ್ತ ದೇಶದ ಮೇಲೆ ಚಾಚಿದಾಗ, ಯೆಹೋವನು ಹಗಲಿರುಳು ಮೂಡಣದಿಕ್ಕಿನಿಂದ ಗಾಳಿಯನ್ನು ಬೀಸುವಂತೆ ಮಾಡಿದನು. ಹೊತ್ತಾರೆ ಗಾಳಿಯ ದೆಸೆಯಿಂದ ಮಿಡತೆಗಳು ಬಂದಿದ್ದವು.
ವಿಮೋಚನಕಾಂಡ 10 : 14 (IRVKN)
ಮಿಡತೆಗಳು ಐಗುಪ್ತ ದೇಶದಲ್ಲೆಲ್ಲಾ ಬಂದಿಳಿದು ಐಗುಪ್ತ ದೇಶದ ಎಲ್ಲಾ ಕಡೆಯಲ್ಲಿಯೂ ಅಪರಿಮಿತವಾಗಿ ಮುತ್ತಿಕೊಂಡವು. ಅಂಥ ಮಿಡತೆಯ ದಂಡು ಹಿಂದೆಂದೂ ಬಂದಿರಲಿಲ್ಲ, ಮುಂದೆಯೂ ಬರಲು ಸಾಧ್ಯವಿಲ್ಲ.
ವಿಮೋಚನಕಾಂಡ 10 : 15 (IRVKN)
ಅವು ಭೂಮಿಯನ್ನೆಲ್ಲಾ ಮುಚ್ಚಿಕೊಂಡಿದ್ದರಿಂದ ನೆಲವು ಕಾಣದೇ ಹೋಯಿತು. ಆನೆಕಲ್ಲಿನ ಮಳೆಯಿಂದ ನಾಶವಾಗದೆ ಉಳಿದಿದ್ದ ಎಲ್ಲಾ ಪೈರುಗಳನ್ನೂ, ಮರಗಳಲ್ಲಿದ್ದ ಎಲ್ಲಾ ಕಾಯಿಗಳನ್ನೂ ಅವು ತಿಂದುಬಿಟ್ಟವು. ಐಗುಪ್ತ ದೇಶದಲ್ಲೆಲ್ಲಾ ಮರಗಳಲ್ಲಾಗಲಿ, ಹೊಲದ ಗಿಡಗಳಲ್ಲಾಗಲಿ ಹಸುರಾದದ್ದು ಒಂದೂ ಉಳಿಯಲಿಲ್ಲ. [PE][PS]
ವಿಮೋಚನಕಾಂಡ 10 : 16 (IRVKN)
ಆಗ ಫರೋಹನು ಮೋಶೆ ಆರೋನರನ್ನು ತ್ವರೆಯಾಗಿ ಕರೆಯಿಸಿ, “ನಾನು ನಿಮ್ಮ ದೇವರಾದ ಯೆಹೋವನಿಗೂ, ನಿಮಗೂ ವಿರುದ್ಧವಾಗಿ ಪಾಪಮಾಡಿದ್ದೇನೆ.
ವಿಮೋಚನಕಾಂಡ 10 : 17 (IRVKN)
ಆದರೂ ಈ ಒಂದೇ ಸಾರಿ ನನ್ನ ಪಾಪಗಳನ್ನು ಕ್ಷಮಿಸಬೇಕು. ನಿಮ್ಮ ದೇವರಾದ ಯೆಹೋವನು ಈ ಮರಣಕರವಾದ ವಿಪತ್ತನ್ನು ನನ್ನ ಬಳಿಯಿಂದ ತೊಲಗಿಸುವಂತೆ ಆತನನ್ನು ಪ್ರಾರ್ಥಿಸಬೇಕು” ಎಂದನು.
ವಿಮೋಚನಕಾಂಡ 10 : 18 (IRVKN)
ಮೋಶೆ ಫರೋಹನ ಬಳಿಯಿಂದ ಹೊರಟು ಯೆಹೋವನನ್ನು ಬೇಡಿಕೊಂಡನು.
ವಿಮೋಚನಕಾಂಡ 10 : 19 (IRVKN)
ಯೆಹೋವನು ಪಶ್ಚಿಮದಿಂದ ಬಿರುಗಾಳಿ ಬೀಸುವಂತೆ ಮಾಡಿದನು. ಅದು ಆ ಮಿಡತೆಗಳನ್ನು ಎತ್ತಿಕೊಂಡು ಹೋಗಿ ಕೆಂಪುಸಮುದ್ರದೊಳಗೆ ಹಾಕಿಬಿಟ್ಟಿತು. ಐಗುಪ್ತ ದೇಶದ ಮೇರೆಗಳೊಳಗೆ ಒಂದು ಮಿಡತೆಯೂ ನಿಲ್ಲಲಿಲ್ಲ.
ವಿಮೋಚನಕಾಂಡ 10 : 20 (IRVKN)
ಆದರೆ ಯೆಹೋವನು ಫರೋಹನ ಹೃದಯವನ್ನು ಕಠಿಣಮಾಡಿದ್ದರಿಂದ ಅವನು ಇಸ್ರಾಯೇಲರನ್ನು ಕಳುಹಿಸಿಕೊಡಲು ಒಪ್ಪಲಿಲ್ಲ. [PS]
ವಿಮೋಚನಕಾಂಡ 10 : 21 (IRVKN)
{ಮೂರು ದಿನ ಕಾರ್ಗತ್ತಲೆಯುಂಟಾದದ್ದು} [PS] ತರುವಾಯ ಯೆಹೋವನು ಮೋಶೆಗೆ, “ಆಕಾಶಕ್ಕೆ ನಿನ್ನ ಕೈಯನ್ನು ಚಾಚು. ಆಗ ಐಗುಪ್ತ ದೇಶದಲ್ಲೆಲ್ಲಾ ಕತ್ತಲು ಉಂಟಾಗುವುದು. ಆ ಕತ್ತಲೆಯಿಂದಾಗಿ ಜನರು ತಡವರಿಸುತ್ತಾ ನಡೆಯುವರು” ಎಂದು ಹೇಳಿದನು.
ವಿಮೋಚನಕಾಂಡ 10 : 22 (IRVKN)
ಮೋಶೆ ಆಕಾಶಕ್ಕೆ ಕೈಯನ್ನು ಚಾಚಿದಾಗ ಐಗುಪ್ತ ದೇಶದಲ್ಲೆಲ್ಲಾ ಮೂರು ದಿನ ಕಾರ್ಗತ್ತಲೆ ಮುಚ್ಚಿಕೊಂಡಿತು.
ವಿಮೋಚನಕಾಂಡ 10 : 23 (IRVKN)
ಮೂರು ದಿನಗಳವರೆಗೆ ಅವರು ಒಬ್ಬರನ್ನೊಬ್ಬರು ನೋಡಲಿಲ್ಲ. ಯಾರೂ ತಮ್ಮ ಸ್ಥಳದಿಂದ ಏಳಲೂ ಇಲ್ಲ. ಆದರೆ ಇಸ್ರಾಯೇಲರು ವಾಸವಾಗಿದ್ದ ಸ್ಥಳಗಳಲ್ಲಿ ಬೆಳಕು ಇತ್ತು.
ವಿಮೋಚನಕಾಂಡ 10 : 24 (IRVKN)
ಆಗ ಫರೋಹನು ಮೋಶೆಯನ್ನು ಕರೆಯಿಸಿ ಅವನಿಗೆ, “ನೀವು ಹೋಗಿ ಯೆಹೋವನಿಗೆ ಆರಾಧನೆ ಮಾಡಿ ಬರಬಹುದು. ನಿಮ್ಮ ಮನೆಗಳಿಗೆ ಸೇರಿದವರೂ ಹೋಗಬಹುದು. ನಿಮ್ಮ ಕುರಿದನಗಳನ್ನು ಮಾತ್ರ ಇಲ್ಲೇ ಬಿಟ್ಟುಹೋಗಬೇಕು” ಎಂದನು.
ವಿಮೋಚನಕಾಂಡ 10 : 25 (IRVKN)
ಅದಕ್ಕೆ ಮೋಶೆಯು, “ನಮ್ಮ ದೇವರಾದ ಯೆಹೋವನಿಗೆ ನಾವು ಯಜ್ಞಹೋಮಗಳನ್ನು ಮಾಡುವಂತೆ ಬೇಕಾದ ಪಶುಗಳನ್ನು ತೆಗೆದುಕೊಂಡು ಹೋಗಲು ಅಪ್ಪಣೆಯಾಗಬೇಕು.
ವಿಮೋಚನಕಾಂಡ 10 : 26 (IRVKN)
ನಮ್ಮ ಎಲ್ಲಾ ಪಶುಗಳನ್ನೂ ಸಹ ನಮ್ಮ ಸಂಗಡ ತೆಗೆದುಕೊಂಡು ಹೋಗುವೆವು. ಒಂದು ಗೊರಸನ್ನಾದರೂ ನಾವು ಬಿಟ್ಟು ಹೋಗುವುದಿಲ್ಲ. ಆ ಪಶುಗಳಿಂದಲೇ ನಮ್ಮ ದೇವರಾದ ಯೆಹೋವನಿಗೆ ಆರಾಧನೆಯನ್ನು ಸಲ್ಲಿಸಬೇಕು. ಯಾವ ಪಶುಗಳನ್ನು ಅರ್ಪಿಸಬೇಕೆಂಬುದು ನಾವು ಅಲ್ಲಿಗೆ ಸೇರುವುದಕ್ಕೆ ಮೊದಲು ನಮಗೆ ತಿಳಿಯದು” ಎಂದನು.
ವಿಮೋಚನಕಾಂಡ 10 : 27 (IRVKN)
ಆದರೆ ಯೆಹೋವನು ಫರೋಹನ ಹೃದಯವನ್ನು ಕಠಿಣ ಮಾಡಿದ್ದರಿಂದ ಅವನು ಅವರನ್ನು ಕಳುಹಿಸಲಾರದೆ ಹೋದನು.
ವಿಮೋಚನಕಾಂಡ 10 : 28 (IRVKN)
ಆಗ ಫರೋಹನು ಮೋಶೆಗೆ, “ನನ್ನನ್ನು ಬಿಟ್ಟುಹೋಗು. ಇನ್ನು ಮುಂದೆ ನನ್ನ ಮುಖವನ್ನು ನೋಡದಂತೆ ಎಚ್ಚರಿಕೆಯಾಗಿರು. ಏಕೆಂದರೆ ನೀನು ನನ್ನ ಮುಖವನ್ನು ನೋಡಿದ ದಿನದಲ್ಲಿ ನೀನು ಸಾಯುವೆ” ಎಂದು ಹೇಳಿದನು.
ವಿಮೋಚನಕಾಂಡ 10 : 29 (IRVKN)
ಅದಕ್ಕೆ ಮೋಶೆಯು, “ನೀನು ಸರಿಯಾಗಿ ಹೇಳಿದೆ. ಇನ್ನು ಮೇಲೆ ನಾನು ನಿನ್ನ ಮುಖವನ್ನು ಪುನಃ ನೋಡುವುದಿಲ್ಲ” ಎಂದನು. [PE]
❮
❯