ಎಸ್ತೇರಳು 6 : 1 (IRVKN)
ಮೊರ್ದೆಕೈಯನ್ನು ಸನ್ಮಾನಿಸಿದ ಅರಸನು ಆ ರಾತ್ರಿಯಲ್ಲಿ ಅರಸನಿಗೆ ನಿದ್ರೆಬರಲಿಲ್ಲ; ಆದುದರಿಂದ ಅವನು ಪೂರ್ವ ಘಟನೆಗಳ ಗ್ರಂಥವನ್ನು ತರಲು ಸೇವಕರಿಗೆ ಅಪ್ಪಣೆಮಾಡಿ ಅದನ್ನು ಪಾರಾಯಣಮಾಡಿಸುತ್ತಿದ್ದನು.
ಎಸ್ತೇರಳು 6 : 2 (IRVKN)
ಅಹಷ್ವೇರೋಷ್ ರಾಜನನ್ನು ಕೊಲ್ಲಬೇಕೆಂದು ದ್ವಾರಪಾಲಕರಾದ ಬಿಗೆತಾನ್ ಮತ್ತು ತೆರೆಷ್ ಎಂಬ ಇಬ್ಬರೂ ರಾಜಕಂಚುಕಿಗಳು ಒಳಸಂಚುಮಾಡಿದ ಸಂಗತಿಯೂ ಅದು ಮೊರ್ದೆಕೈ ಮುಖಾಂತರ ಬಯಲಿಗೆ ಬಂದ ಸಂಗತಿಯೂ ಅದರಲ್ಲಿ ಬರೆಯಲಾಗಿತ್ತು.
ಎಸ್ತೇರಳು 6 : 3 (IRVKN)
ಆಗ ಅರಸನು, “ಇದಕ್ಕಾಗಿ ಮೊರ್ದೆಕೈಗೆ ಯಾವ ಸ್ಥಾನಮಾನಗಳು ದೊರಕಿದವು?” ಎಂದು ವಿಚಾರಿಸಿದಾಗ ಅವನ ಸಾನ್ನಿಧ್ಯಸೇವಕರಾದ ಪರಿವಾರದವರು, “ಏನೂ ದೊರಕಲಿಲ್ಲ” ಎಂದು ಹೇಳಿದರು.
ಎಸ್ತೇರಳು 6 : 4 (IRVKN)
ಅರಸನು, “ಪ್ರಾಕಾರದಲ್ಲಿ ಯಾರಿದ್ದಾರೆ?” ಎಂದು ಕೇಳಿದನು. ಅಷ್ಟರಲ್ಲಿ ಹಾಮಾನನು ತಾನು ಸಿದ್ಧಮಾಡಿಸಿದ ಗಲ್ಲಿಗೆ ಮೊರ್ದೆಕೈಯನ್ನು ನೇತುಹಾಕಿಸುವುದಕ್ಕೆ ಅರಸನ ಅಪ್ಪಣೆ ಪಡೆದುಕೊಳ್ಳಬೇಕೆಂದು ಅರಮನೆಯ ಹೊರಗಣ ಪ್ರಾಕಾರದಲ್ಲಿ ಬಂದು ನಿಂತಿದ್ದನು.
ಎಸ್ತೇರಳು 6 : 5 (IRVKN)
ಆಗ ರಾಜಸೇವಕರು, “ಇಗೋ, ಪ್ರಾಕಾರದಲ್ಲಿ ಹಾಮಾನನಿರುತ್ತಾನೆ” ಎಂದು ಬಿನ್ನವಿಸಿದರು. ಆಗ ಅರಸನು, “ಅವನು ಒಳಗೆ ಬರಲಿ” ಅಂದನು.
ಎಸ್ತೇರಳು 6 : 6 (IRVKN)
ಹಾಮಾನನು ಬಂದಾಗ, “ಅರಸನು ಯಾರನ್ನಾದರು ಸನ್ಮಾನಿಸಬೇಕೆಂದು ಇಷ್ಟವುಳ್ಳವನಾಗಿದ್ದರೆ ಅಂಥವನಿಗೆ ಮಾಡಬೇಕಾದದ್ದೇನು?” ಎಂದು ಅವನನ್ನು ಕೇಳಿದನು.
ಎಸ್ತೇರಳು 6 : 7 (IRVKN)
ಅದಕ್ಕೆ ಹಾಮಾನನು, “ಅರಸನು ನನ್ನನ್ನಲ್ಲದೆ ಇನ್ನಾರನ್ನು ಸನ್ಮಾನಿಸುವುದಕ್ಕೆ ಇಷ್ಟವುಳ್ಳವನಾಗಿರುವನು” ಅಂದುಕೊಂಡನು.
ಎಸ್ತೇರಳು 6 : 8 (IRVKN)
ಅವನು ಅರಸನಿಗೆ, “ಯಾರನ್ನಾದರೂ ಸನ್ಮಾನಿಸಬೇಕೆಂದು ಅರಸನಿಗೆ ಇಷ್ಟವಿದ್ದರೆ ತಾನು ಧರಿಸಿಕೊಳ್ಳುವ ರಾಜ ವಸ್ತ್ರಗಳನ್ನೂ ಮತ್ತು ಸವಾರಿಮಾಡುವ ಪಟ್ಟದ ಕುದುರೆಯನ್ನೂ ತರಿಸಬೇಕು.
ಎಸ್ತೇರಳು 6 : 9 (IRVKN)
ಆ ವಸ್ತ್ರಗಳನ್ನೂ ಕುದುರೆಯನ್ನೂ ಪ್ರಧಾನರಾದ ಅರಸನ ಸರದಾರರಲ್ಲೊಬ್ಬನ ವಶಕ್ಕೆ ಕೊಟ್ಟು, ಅರಸನು ಸನ್ಮಾನಿಸಬೇಕೆಂದಿರುವ ಪುರುಷನಿಗೆ ಆ ರಾಜವಸ್ತ್ರಗಳನ್ನು ಹಾಕಿಸಬೇಕು. ಅನಂತರ ಅವನನ್ನು ಆ ಕುದುರೆಯ ಮೇಲೆ ಕುಳ್ಳಿರಿಸಿ ಪಟ್ಟಣದ ಬೀದಿಗಳಲ್ಲಿ ಮೆರವಣಿಗೆ ಮಾಡಿಸುತ್ತಾ ಅವನ ಮುಂದೆ, ‘ಅರಸನು ಸನ್ಮಾನಿಸಬೇಕೆಂದಿರುವವನನ್ನು ಗೌರವಿಸುವ ರೀತಿಯು ಇದೇ’ ಎಂದು ಪ್ರಕಟಣೆ ಮಾಡಿಸಬೇಕು” ಎಂದು ಹೇಳಿದನು.
ಎಸ್ತೇರಳು 6 : 10 (IRVKN)
ಕೂಡಲೆ ಅರಸನು ಹಾಮಾನನಿಗೆ, “ನೀನು ಹೇಳಿದ ವಸ್ತ್ರಗಳನ್ನೂ ಮತ್ತು ಕುದುರೆಯನ್ನೂ ಬೇಗನೆ ತೆಗೆದುಕೊಂಡು ಬಂದು ಅರಮನೆಯ ಬಾಗಿಲಿನಲ್ಲಿ ಕುಳಿತುಕೊಂಡಿರುವ ಮೊರ್ದೆಕೈ ಎಂಬ ಯೆಹೂದ್ಯನಿಗೆ ಹಾಗೆಯೇ ಮಾಡು; ನೀನು ಹೇಳಿದವುಗಳಲ್ಲಿ ಒಂದನ್ನೂ ನೆರವೇರಿಸದೆ ಬಿಡಬೇಡ” ಎಂದು ಅಪ್ಪಣೆಮಾಡಿದನು.
ಎಸ್ತೇರಳು 6 : 11 (IRVKN)
ಹಾಮಾನನು ಆ ವಸ್ತ್ರಗಳನ್ನೂ ಮತ್ತು ಕುದುರೆಯನ್ನೂ ತೆಗೆದುಕೊಂಡು ಬಂದು, ಮೊರ್ದೆಕೈಯನ್ನು ಭೂಷಿಸಿ, ಪಟ್ಟಣದ ಬೀದಿಗಳಲ್ಲಿ ಮೆರವಣಿಗೆ ಮಾಡಿಸಿ, ಅವನ ಮುಂದೆ, “ಅರಸನು ಸನ್ಮಾನಿಸಬೇಕೆಂದಿರುವವನನ್ನು ಗೌರವಿಸುವ ರೀತಿಯು ಇದೇ” ಎಂದು ಪ್ರಕಟಣೆಮಾಡಿಸಿದನು.
ಎಸ್ತೇರಳು 6 : 12 (IRVKN)
ಮೊರ್ದೆಕೈಯು ಹಿಂತಿರುಗಿ ಅರಮನೆಯ ಬಾಗಿಲಿಗೆ ಹೋದನು. ಹಾಮಾನನಾದರೋ ದುಃಖದಿಂದ ಮುಖವನ್ನು ಮುಚ್ಚಿಕೊಂಡು ಶೀಘ್ರವಾಗಿ ಮನೆಗೆ ಹೋಗಿ ತನ್ನ ಹೆಂಡತಿಯಾದ ಜೆರೆಷಳ ಮತ್ತು ಎಲ್ಲಾ ಆಪ್ತರ ಮುಂದೆ ತನಗೆ ಸಂಭವಿಸಿದ್ದನ್ನೆಲ್ಲಾ ತಿಳಿಸಿದನು.
ಎಸ್ತೇರಳು 6 : 13 (IRVKN)
ಆಗ ಅವನ ಪಂಡಿತರೂ ಮತ್ತು ಹೆಂಡತಿಯೂ ಅವನಿಗೆ, “ಯಾವನ ಮುಂದೆ ನಿನ್ನ ಸೋಲು ಪ್ರಾರಂಭವಾಯಿತೋ ಆ ಮನುಷ್ಯನು ಯೆಹೂದ ಸಂತಾನದವನಾಗಿದ್ದರೆ ನೀನು ಗೆಲ್ಲಲಾರಿ, ಅವನ ಮುಂದೆ ಬಿದ್ದು ಹಾಳಾಗುವಿ” ಅಂದರು.
ಎಸ್ತೇರಳು 6 : 14 (IRVKN)
ಅವರು ಇನ್ನೂ ಅವನೊಡನೆ ಮಾತನಾಡುತ್ತಿರುವಾಗಲೇ ರಾಜಕಂಚುಕಿಗಳು ಬಂದು ಎಸ್ತೇರಳು ಮಾಡಿಸಿರುವ ಔತಣಕ್ಕೆ ಬೇಗ ಬರಬೇಕೆಂದು ಹಾಮಾನನನ್ನು ಕರೆದೊಯ್ದರು.

1 2 3 4 5 6 7 8 9 10 11 12 13 14