ಧರ್ಮೋಪದೇಶಕಾಂಡ 6 : 1 (IRVKN)
ದೇವರನ್ನು ಪ್ರೀತಿಸಬೇಕೆಂಬ ಆಜ್ಞೆ ನೀವು ಯೊರ್ದನ್ ನದಿ ದಾಟಿ ಸ್ವತಂತ್ರಿಸಿಕೊಳ್ಳುವ ದೇಶದಲ್ಲಿ ಅನುಸರಿಸುವುದಕ್ಕಾಗಿ ನಿಮಗೆ ಬೋಧಿಸಬೇಕೆಂದು ನಿಮ್ಮ ದೇವರಾದ ಯೆಹೋವನು ನನಗೆ ಆಜ್ಞಾಪಿಸಿದ ಧರ್ಮೋಪದೇಶವೂ ಮತ್ತು ವಿಧಿನಿಯಮಗಳೂ ಇವೇ.
ಧರ್ಮೋಪದೇಶಕಾಂಡ 6 : 2 (IRVKN)
ನೀವೂ, ನಿಮ್ಮ ಮಕ್ಕಳು, ಅವರ ಮಕ್ಕಳು ಮತ್ತು ಅವರ ಸಂತತಿಯವರು ಜೀವಮಾನದಲ್ಲೆಲ್ಲಾ ನಿಮ್ಮ ದೇವರಾದ ಯೆಹೋವನಲ್ಲಿ ಭಯಭಕ್ತಿಯುಳ್ಳವರಾಗಿದ್ದುಕೊಂಡು, ನಾನು ಈಗ ಬೋಧಿಸುವ ಆತನ ವಿಧಿನಿಯಮಗಳನ್ನೆಲ್ಲಾ ಅನುಸರಿಸಬೇಕೆಂದೂ ಮತ್ತು ನೀವು ಬಹುಕಾಲ ಬಾಳಬೇಕೆಂದೂ ಇವುಗಳನ್ನು ಆಜ್ಞಾಪಿಸಿದ್ದಾನೆ.
ಧರ್ಮೋಪದೇಶಕಾಂಡ 6 : 3 (IRVKN)
ಆದುದರಿಂದ ಇಸ್ರಾಯೇಲರೇ, ನಿಮ್ಮ ಪೂರ್ವಿಕರ ದೇವರಾದ ಯೆಹೋವನು ವಾಗ್ದಾನಮಾಡಿದ ಪ್ರಕಾರ * ಬಹಳಷ್ಟು ಫಲವತ್ತಾದ ದೇಶ. ಹಾಲೂ ಮತ್ತು ಜೇನೂ ಹರಿಯುವ ಆ ದೇಶದಲ್ಲಿ ನಿಮಗೆ ಶುಭವುಂಟಾಗುವುದಕ್ಕೂ, ನೀವು ಬಹಳವಾಗಿ ಹೆಚ್ಚುವುದಕ್ಕೂ ಈ ಆಜ್ಞೆಗಳನ್ನು ಲಕ್ಷ್ಯವಿಟ್ಟು ಕೇಳಿ ಅನುಸರಿಸಲೇಬೇಕು.
ಧರ್ಮೋಪದೇಶಕಾಂಡ 6 : 4 (IRVKN)
ಇಸ್ರಾಯೇಲರೇ, ಕೇಳಿರಿ, ನಮ್ಮ ದೇವರಾದ ಯೆಹೋವನು ಒಬ್ಬನೇ ದೇವರು;
ಧರ್ಮೋಪದೇಶಕಾಂಡ 6 : 5 (IRVKN)
ನೀವು ನಿಮ್ಮ ದೇವರಾದ ಯೆಹೋವನನ್ನು ಪೂರ್ಣಹೃದಯದಿಂದಲೂ, ಪೂರ್ಣಪ್ರಾಣದಿಂದಲೂ ಮತ್ತು ಪೂರ್ಣಶಕ್ತಿಯಿಂದಲೂ ಪ್ರೀತಿಸಬೇಕು.
ಧರ್ಮೋಪದೇಶಕಾಂಡ 6 : 6 (IRVKN)
ನಾನು ಈಗ ನಿಮಗೆ ತಿಳಿಸುವ ಮಾತುಗಳು ನಿಮ್ಮ ಹೃದಯದಲ್ಲಿರಬೇಕು.
ಧರ್ಮೋಪದೇಶಕಾಂಡ 6 : 7 (IRVKN)
ಇವುಗಳನ್ನು ನಿಮ್ಮ ಮಕ್ಕಳಿಗೆ ಅಭ್ಯಾಸಮಾಡಿಸಿ, ಮನೆಯಲ್ಲಿ ಕುಳಿತಿರುವಾಗಲೂ, ದಾರಿಯಲ್ಲಿ ನಡೆಯುವಾಗಲೂ, ಮಲಗುವಾಗಲೂ ಮತ್ತು ಏಳುವಾಗಲೂ ಇವುಗಳ ವಿಷಯದಲ್ಲಿ ಮಾತನಾಡಬೇಕು.
ಧರ್ಮೋಪದೇಶಕಾಂಡ 6 : 8 (IRVKN)
ಇವುಗಳನ್ನು ಜ್ಞಾಪಕಾರ್ಥವಾಗಿ ಕೈಗೆ ಕಟ್ಟಿಕೊಳ್ಳಬೇಕು, ಇವು ಹಣೆಗೆ ಕಟ್ಟಿಕೊಳ್ಳುವ ಜ್ಞಾಪಕದ ಪಟ್ಟಿಯಂತೆ ಇರಬೇಕು.
ಧರ್ಮೋಪದೇಶಕಾಂಡ 6 : 9 (IRVKN)
ನಿಮ್ಮ ಮನೆಬಾಗಿಲಿನ ನಿಲುವು ಪಟ್ಟಿಗಳಲ್ಲಿಯೂ ಮತ್ತು ದ್ವಾರಗಳ ಮೇಲೆಯೂ ಇವುಗಳನ್ನು ಬರೆಯಬೇಕು.
ಧರ್ಮೋಪದೇಶಕಾಂಡ 6 : 10 (IRVKN)
ನಿಮ್ಮ ದೇವರಾದ ಯೆಹೋವನು ನಿಮ್ಮ ಪೂರ್ವಿಕರಾದ ಅಬ್ರಹಾಮ್, ಇಸಾಕ್ ಮತ್ತು ಯಾಕೋಬರಿಗೆ ಪ್ರಮಾಣಮಾಡಿಕೊಟ್ಟ ದೇಶದಲ್ಲಿ ನಿಮ್ಮನ್ನು ಸೇರಿಸಿದಾಗ ನೀವು ಕಟ್ಟದ ಒಳ್ಳೆಯ ದೊಡ್ಡ ಪಟ್ಟಣಗಳನ್ನೂ, ನೀವು ಕೂಡಿಸದ ಉತ್ತಮ ವಸ್ತುಗಳಿಂದ
ಧರ್ಮೋಪದೇಶಕಾಂಡ 6 : 11 (IRVKN)
ತುಂಬಿದ ಮನೆಗಳನ್ನೂ, ನೀವು ತೋಡದ ನೀರುಗುಂಡಿಗಳನ್ನೂ, ನೀವು ಬೆಳಸದ ದ್ರಾಕ್ಷಿತೋಟಗಳನ್ನೂ ಮತ್ತು ಎಣ್ಣೆಮರಗಳನ್ನೂ ಅನುಭವಿಸುತ್ತಾ ತೃಪ್ತರಾಗಿರುವಾಗ,
ಧರ್ಮೋಪದೇಶಕಾಂಡ 6 : 12 (IRVKN)
ಐಗುಪ್ತದೇಶದಲ್ಲಿ ದಾಸರಾಗಿದ್ದ ನಿಮ್ಮನ್ನು ಬಿಡುಗಡೆ ಮಾಡಿದ ಯೆಹೋವನನ್ನು ಮರೆಯದೇ ಎಚ್ಚರದಿಂದಿರಿ.
ಧರ್ಮೋಪದೇಶಕಾಂಡ 6 : 13 (IRVKN)
ನಿಮ್ಮ ದೇವರಾದ ಯೆಹೋವನಲ್ಲಿಯೇ ಭಯಭಕ್ತಿಯುಳ್ಳವರಾಗಿರಬೇಕು, ಆತನನ್ನೇ ಸೇವಿಸಬೇಕು ಮತ್ತು ಆತನ ಹೆಸರು ಹೇಳಿ ಪ್ರಮಾಣಮಾಡಬೇಕು.
ಧರ್ಮೋಪದೇಶಕಾಂಡ 6 : 14 (IRVKN)
ಸುತ್ತಮುತ್ತಲಿರುವ ಜನಾಂಗಗಳು ಸೇವಿಸುವ ದೇವರುಗಳನ್ನು ನೀವು ಆರಾಧಿಸಬಾರದು.
ಧರ್ಮೋಪದೇಶಕಾಂಡ 6 : 15 (IRVKN)
ನಿಮ್ಮ ಮಧ್ಯದಲ್ಲಿರುವ ನಿಮ್ಮ ದೇವರಾದ ಯೆಹೋವನು ತನಗೆ ಸಲ್ಲಬೇಕಾದ ಗೌರವವನ್ನು ಇನ್ನೊಬ್ಬನಿಗೆ ಸಲ್ಲಗೊಡಿಸುವುದಿಲ್ಲ, ಆತನು ನಿಮ್ಮ ಮೇಲೆ ಕೋಪಗೊಂಡರೆ ನಿಮ್ಮನ್ನು ಭೂಮಿಯ ಮೇಲೆ ಉಳಿಯದಂತೆ ನಾಶಮಾಡಾನು.
ಧರ್ಮೋಪದೇಶಕಾಂಡ 6 : 16 (IRVKN)
ನೀವು [† ವಿಮೋ 17:1- 7 ]ಮಸ್ಸದಲ್ಲಿ ನಿಮ್ಮ ದೇವರಾದ ಯೆಹೋವನನ್ನು ಪರೀಕ್ಷಿಸಿದಂತೆ ಇನ್ನು ಮುಂದೆ ಮಾಡಬೇಡಿರಿ.
ಧರ್ಮೋಪದೇಶಕಾಂಡ 6 : 17 (IRVKN)
ನಿಮ್ಮ ದೇವರಾದ ಯೆಹೋವನು ನಿಮಗೆ ನೇಮಿಸಿದ ಆಜ್ಞಾವಿಧಿನಿಯಮಗಳನ್ನು ಅನುಸರಿಸಲೇಬೇಕು.
ಧರ್ಮೋಪದೇಶಕಾಂಡ 6 : 18 (IRVKN)
ಯೆಹೋವನ ದೃಷ್ಟಿಗೆ ಯಾವುದು ನ್ಯಾಯವೂ ಮತ್ತು ಯೋಗ್ಯವೂ ಆಗಿದೆಯೋ ಅದನ್ನೇ ಮಾಡಬೇಕು. ಹೀಗೆ ನಡೆದರೆ ನಿಮಗೆ ಶುಭವುಂಟಾಗುವುದು, ಮತ್ತು ಯೆಹೋವನು ನಿಮ್ಮ ಪೂರ್ವಿಕರಿಗೆ ಪ್ರಮಾಣಪೂರ್ವಕವಾಗಿ ಕೊಟ್ಟ ಉತ್ತಮದೇಶವನ್ನು ನೀವು ಸೇರಿ ಸ್ವಾಧೀನಮಾಡಿಕೊಳ್ಳುವಿರಿ.
ಧರ್ಮೋಪದೇಶಕಾಂಡ 6 : 19 (IRVKN)
ಆತನು ತಾನೇ ನಿಮ್ಮ ಶತ್ರುಗಳನ್ನು ನಿಮ್ಮ ಎದುರಿನಿಂದ ಹೊರಡಿಸುವೆನೆಂದು ಮಾತುಕೊಟ್ಟನಲ್ಲವೇ.
ಧರ್ಮೋಪದೇಶಕಾಂಡ 6 : 20 (IRVKN)
ಇನ್ನು ಮುಂದೆ ನಿಮ್ಮ ಮಕ್ಕಳು, “ಈ ಆಜ್ಞಾವಿಧಿನಿಯಮಗಳನ್ನು ನಮ್ಮ ದೇವರಾದ ಯೆಹೋವನು ಏಕೆ ನೇಮಿಸಿದನು?” ಎಂದು ವಿಚಾರಿಸುವಾಗ
ಧರ್ಮೋಪದೇಶಕಾಂಡ 6 : 21 (IRVKN)
ನೀವು ಅವರಿಗೆ, “ನಾವು ಐಗುಪ್ತದೇಶದಲ್ಲಿ ಫರೋಹನಿಗೆ ದಾಸರಾಗಿದ್ದಾಗ ಯೆಹೋವನು ತನ್ನ ಭುಜಬಲದಿಂದ ನಮ್ಮನ್ನು ಬಿಡುಗಡೆಮಾಡಿದನು.
ಧರ್ಮೋಪದೇಶಕಾಂಡ 6 : 22 (IRVKN)
ಆತನು ಐಗುಪ್ತ್ಯರನ್ನೂ, ಫರೋಹನನ್ನೂ ಮತ್ತು ಅವನ ಮನೆಯವರನ್ನೂ ಬಾಧಕವಾದ ದೊಡ್ಡ ಮಹತ್ಕಾರ್ಯಗಳಿಂದಲೂ, ಉತ್ಪಾತಗಳಿಂದಲೂ ನಮ್ಮ ಕಣ್ಣೆದುರಿನಲ್ಲಿ ಶಿಕ್ಷಿಸಿ,
ಧರ್ಮೋಪದೇಶಕಾಂಡ 6 : 23 (IRVKN)
ತಾನು ನಮ್ಮ ಪೂರ್ವಿಕರಿಗೆ ಪ್ರಮಾಣಮಾಡಿಕೊಟ್ಟ ದೇಶದಲ್ಲಿ ನಮ್ಮನ್ನು ಸೇರಿಸುವುದಕ್ಕಾಗಿ ಐಗುಪ್ತದೇಶದೊಳಗಿಂದ ಬರಮಾಡಿದನು.
ಧರ್ಮೋಪದೇಶಕಾಂಡ 6 : 24 (IRVKN)
ಆ ಕಾರಣದಿಂದಲೇ ಈ ನಿಯಮಗಳನ್ನೆಲ್ಲಾ ಆಚರಿಸಬೇಕೆಂದು ಆತನು ನಮಗೆ ಅಪ್ಪಣೆಕೊಟ್ಟಿದ್ದಾನೆ. ಯಾವಾಗಲೂ ಶುಭವುಂಟಾಗುವಂತೆಯೂ, ಆತನು ಈಗಲೂ ನಮ್ಮ ಪ್ರಾಣಗಳನ್ನು ಕಾಪಾಡುವಂತೆಯೂ ನಾವು ನಮ್ಮ ದೇವರಾದ ಯೆಹೋವನಿಗೆ ಭಯಭಕ್ತಿಯುಳ್ಳವರಾಗಿರಬೇಕು.
ಧರ್ಮೋಪದೇಶಕಾಂಡ 6 : 25 (IRVKN)
ನಮ್ಮ ದೇವರಾದ ಯೆಹೋವನು ನಿರೂಪಿಸಿದ ಈ ಧರ್ಮೋಪದೇಶವನ್ನೆಲ್ಲಾ ನಾವು ಅನುಸರಿಸಿದರೆ ಆತನ ದೃಷ್ಟಿಯಲ್ಲಿ ನೀತಿವಂತರೆಂದು ಪರಿಗಣಿಸಲು ಯೋಗ್ಯರಾಗುವೆವು” ಎಂಬುದಾಗಿ ನೀವು ಉತ್ತರಕೊಡಬೇಕು.

1 2 3 4 5 6 7 8 9 10 11 12 13 14 15 16 17 18 19 20 21 22 23 24 25