ಧರ್ಮೋಪದೇಶಕಾಂಡ 3 : 1 (IRVKN)
ಅರಸನಾದ ಓಗನ ಅಪಜಯ ತರುವಾಯ ನಾವು ಹಿಂದಿರುಗಿ ಬಾಷಾನಿನ ಮಾರ್ಗವನ್ನು ಹಿಡಿದು ಮೇಲಕ್ಕೆ ಹೋದಾಗ ಬಾಷಾನಿನ ಅರಸನಾದ ಓಗನು ತನ್ನ ಜನರೆಲ್ಲರ ಸಮೇತ ನಮಗೆ ವಿರುದ್ಧವಾಗಿ ಯುದ್ಧಮಾಡುವುದಕ್ಕೆ ಎದ್ರೈ ಊರಿಗೆ ಹೊರಟುಬಂದನು.
ಧರ್ಮೋಪದೇಶಕಾಂಡ 3 : 2 (IRVKN)
ಆಗ ಯೆಹೋವನು ನನಗೆ, “ಅವನಿಗೆ ಭಯಪಡಬೇಡ; ನಾನು ಅವನನ್ನೂ, ಅವನ ಸಮಸ್ತ ಜನರನ್ನೂ ಮತ್ತು ದೇಶವನ್ನೂ ನಿನ್ನ ಕೈವಶಮಾಡಿದ್ದೇನೆ. ನೀನು ಹೆಷ್ಬೋನಿನಲ್ಲಿದ್ದ ಅಮೋರಿಯರ ಅರಸನಾದ ಸೀಹೋನನಿಗೆ ಮಾಡಿದ ಪ್ರಕಾರವೇ ಇವನಿಗೂ ಮಾಡಬೇಕು” ಎಂದು ಆಜ್ಞಾಪಿಸಿದನು.
ಧರ್ಮೋಪದೇಶಕಾಂಡ 3 : 3 (IRVKN)
ಬಾಷಾನಿನ ಅರಸನಾದ ಓಗನೂ ಅವನ ಜನರೆಲ್ಲರೂ ನಮ್ಮಿಂದ ಸೋತುಹೋಗುವಂತೆ ನಮ್ಮ ದೇವರಾದ ಯೆಹೋವನು ಮಾಡಲಾಗಿ ಅವರಲ್ಲಿ ಒಬ್ಬರಾದರೂ ಉಳಿಯದಂತೆ ಅವರನ್ನು ಹತಮಾಡಿದೆವು.
ಧರ್ಮೋಪದೇಶಕಾಂಡ 3 : 4 (IRVKN)
ಆ ಕಾಲದಲ್ಲಿ ನಾವು ಅವನ ಎಲ್ಲಾ ಪಟ್ಟಣಗಳನ್ನು ಜಯಿಸಿದೆವು; ನಾವು ಜಯಿಸದೇ ಇದ್ದ ಪಟ್ಟಣವು ಒಂದೂ ಇರಲಿಲ್ಲ. ಬಾಷಾನಿನಲ್ಲಿರುವ ಓಗನ ರಾಜ್ಯದಲ್ಲಿ ಅಂದರೆ ಅರ್ಗೋಬ್ ಎಂಬ ಸಮಸ್ತ ಪ್ರದೇಶದಲ್ಲಿ ಅರವತ್ತು ಪಟ್ಟಣಗಳನ್ನು ತೆಗೆದುಕೊಂಡೆವು.
ಧರ್ಮೋಪದೇಶಕಾಂಡ 3 : 5 (IRVKN)
ಅವುಗಳೆಲ್ಲಾ ಎತ್ತರವಾದ ಪೌಳಿಗೋಡೆಗಳಿಂದಲೂ, ಕದಗಳಿಂದಲೂ, ಅಗುಳಿಗಳಿಂದಲೂ ಭದ್ರಮಾಡಲ್ಪಟ್ಟ ಪಟ್ಟಣಗಳೇ. ಅವುಗಳಲ್ಲದೆ ಹಳ್ಳಿಪಳ್ಳಿಗಳು ಬಹಳ ಇದ್ದವು.
ಧರ್ಮೋಪದೇಶಕಾಂಡ 3 : 6 (IRVKN)
ನಾವು ಹೆಷ್ಬೋನಿನ ಅರಸನಾದ ಸೀಹೋನನ ಪಟ್ಟಣಗಳಿಗೆ ಮಾಡಿದಂತೆ ಇವುಗಳಿಗೂ ಮಾಡಿದೆವು. ಅವುಗಳಲ್ಲಿದ್ದ ಗಂಡಸರನ್ನೂ, ಹೆಂಗಸರನ್ನೂ ಮತ್ತು ಮಕ್ಕಳನ್ನೂ ಸಂಪೂರ್ಣವಾಗಿ ನಾಶಮಾಡಿದೆವು.
ಧರ್ಮೋಪದೇಶಕಾಂಡ 3 : 7 (IRVKN)
ಪಶುಗಳನ್ನು ಮಾತ್ರ ಉಳಿಸಿ ಸ್ವಂತಕ್ಕೆ ತೆಗೆದುಕೊಂಡು ಊರುಗಳನ್ನೆಲ್ಲಾ ಸೂರೆಮಾಡಿಬಿಟ್ಟೆವು.
ಧರ್ಮೋಪದೇಶಕಾಂಡ 3 : 8 (IRVKN)
ಆ ಕಾಲದಲ್ಲಿ ನಾವು ಅರ್ನೋನ್ ನದಿ ಮೊದಲುಗೊಂಡು ಹೆರ್ಮೋನ್ ಪರ್ವತದವರೆಗೂ, ಯೊರ್ದನ್ ನದಿಯ ಈಚೆ ಇರುವ ದೇಶವನ್ನೆಲ್ಲಾ ಅಮೋರಿಯರ ಇಬ್ಬರು ಅರಸರಿಂದ ತೆಗೆದುಕೊಂಡೆವು.
ಧರ್ಮೋಪದೇಶಕಾಂಡ 3 : 9 (IRVKN)
(ಹೆರ್ಮೋನ್ ಪರ್ವತಕ್ಕೆ ಚೀದೋನ್ಯರು ಸಿರ್ಯೋನ್ ಎಂದೂ ಮತ್ತು ಅಮೋರಿಯರು ಸೆನೀರ್ ಎಂದೂ ಕರೆಯುತ್ತಿದ್ದರು.)
ಧರ್ಮೋಪದೇಶಕಾಂಡ 3 : 10 (IRVKN)
ಹೀಗೆ ಮೀಶೊರೆಂಬ ಎತ್ತರವಾದ ಬೈಲುಸೀಮೆಯ ಎಲ್ಲಾ ಪಟ್ಟಣಗಳನ್ನೂ, ಗಿಲ್ಯಾದ್ ಸೀಮೆಯನ್ನೂ, ಓಗನ ರಾಜ್ಯವಾದ ಸಲ್ಕಾ ಮತ್ತು ಎದ್ರೈ ಎಂಬ ಪಟ್ಟಣಗಳಿಂದ ಕೂಡಿರುವ ಬಾಷಾನ್ ಸೀಮೆಯನ್ನೂ ಸ್ವಾಧೀನಮಾಡಿಕೊಂಡೆವು.
ಧರ್ಮೋಪದೇಶಕಾಂಡ 3 : 11 (IRVKN)
(ರೆಫಾಯರೊಳಗೆ ಬಾಷಾನಿನ ಅರಸನಾದ ಓಗನೊಬ್ಬನೇ ಉಳಿದಿದ್ದನು. ಅವನ ಮಂಚ ಕಬ್ಬಿಣದ್ದು; ಅಮ್ಮೋನಿಯರ ರಬ್ಬಾ ಎಂಬ ಪಟ್ಟಣದಲ್ಲಿ ಅದನ್ನು ಈಗಲೂ ನೋಡಬಹುದು. ಪುರುಷನ ಕೈ ಅಳತೆಯ ಪ್ರಕಾರ ಅದರ ಉದ್ದ ಒಂಭತ್ತು ಮೊಳ, ಅಗಲ ನಾಲ್ಕು ಮೊಳ.)
ಧರ್ಮೋಪದೇಶಕಾಂಡ 3 : 12 (IRVKN)
ದೇಶದ ಹಂಚಿಕೆ ಆ ಕಾಲದಲ್ಲಿ ನಾವು ಆ ದೇಶವನ್ನೆಲ್ಲಾ ಸ್ವಾಧೀನಮಾಡಿಕೊಂಡೆವು. ಅರ್ನೋನ್ ಹಳ್ಳದ ಬಳಿಯಲ್ಲಿರುವ * ಅರೋಯೇರ್ ಪಟ್ಟಣದ ಉತ್ತರ ಭಾಗ ಮೊದಲುಗೊಂಡು. ಅರೋಯೇರ್ ಮೊದಲುಗೊಂಡು ಗಿಲ್ಯಾದ್ ಸೀಮೆಯ ಮಧ್ಯದ ವರೆಗೂ ಇರುವ ಪ್ರದೇಶವನ್ನೆಲ್ಲಾ ಅದರ ಪಟ್ಟಣಗಳ ಸಹಿತವಾಗಿ ನಾನು ರೂಬೇನ್ಯರಿಗೂ ಮತ್ತು ಗಾದ್ಯರಿಗೂ ಕೊಟ್ಟೆನು.
ಧರ್ಮೋಪದೇಶಕಾಂಡ 3 : 13 (IRVKN)
ಗಿಲ್ಯಾದಿನ ಮಿಕ್ಕ ಭಾಗವನ್ನೂ ಓಗನ ರಾಜ್ಯವಾಗಿದ್ದ ಅರ್ಗೋಬ್ ಎನಿಸಿಕೊಳ್ಳುವ ಸಮಸ್ತ ಬಾಷಾನ್ ದೇಶವನ್ನೂ ಮನಸ್ಸೆ ಕುಲದ ಅರ್ಧ ಜನರಿಗೆ ಕೊಟ್ಟೆನು.
ಧರ್ಮೋಪದೇಶಕಾಂಡ 3 : 14 (IRVKN)
(ಬಾಷಾನ್ ದೇಶವು ರೆಫಾಯರ ದೇಶವೆನಿಸಿಕೊಳ್ಳುತ್ತದೆ. ಮನಸ್ಸೆಯ ವಂಶಸ್ಥನಾದ ಯಾಯೀರನು ಗೆಷೂರ್ಯರ ಮತ್ತು ಮಾಕಾತ್ಯರ ಮೇರೆಯವರೆಗೆ ಅರ್ಗೋಬ್ ಎಂಬ ಪ್ರದೇಶವನ್ನೆಲ್ಲಾ ಸ್ವಾಧೀನಮಾಡಿಕೊಂಡನು. ಅವನು ಬಾಷಾನಿಗೆ ಸೇರಿರುವ ಆ ಪ್ರಾಂತ್ಯಕ್ಕೆ † ಅರಣ್ಯ 32:41 ನೋಡಿರಿ. ಯಾಯೀರನ ಗ್ರಾಮಗಳೆಂದು ತನ್ನ ಹೆಸರಿಟ್ಟನು. ಈ ಹೆಸರು ಇಂದಿನ ವರೆಗೂ ಉಂಟು.)
ಧರ್ಮೋಪದೇಶಕಾಂಡ 3 : 15 (IRVKN)
ನಾನು ಗಿಲ್ಯಾದ್ ದೇಶವನ್ನು ಮಾಕೀರನಿಗೂ ಗಿಲ್ಯಾದ್ ಮೊದಲುಗೊಂಡು (ದಕ್ಷಿಣದ) ಅರ್ನೋನ್ ತಗ್ಗಿನ ವರೆಗೂ,
ಧರ್ಮೋಪದೇಶಕಾಂಡ 3 : 16 (IRVKN)
(ಪೂರ್ವದ) ಯಬ್ಬೋಕ್ ನದಿಯ ವರೆಗೂ ಇರುವ ಪ್ರದೇಶವನ್ನು ರೂಬೇನ್ಯರಿಗೂ ಮತ್ತು ಗಾದ್ಯರಿಗೂ ಕೊಟ್ಟೆನು. ಅರ್ನೋನ್ ತಗ್ಗಿನ ಮಧ್ಯಭಾಗವೇ ಅವರ (ದಕ್ಷಿಣ) ಮೇರೆ. ಅವರಿಗೂ ಅಮ್ಮೋನಿಯರಿಗೂ ನಡುವೆ ಇರುವ ಯಬ್ಬೋಕ್ ನದಿಯು ಅವರ (ಪೂರ್ವದಿಕ್ಕಿನವರೆಗೆ) ಮೇರೆ.
ಧರ್ಮೋಪದೇಶಕಾಂಡ 3 : 17 (IRVKN)
ಅದಲ್ಲದೆ ಆರಾಬಾ ಎಂಬ ತಗ್ಗನ್ನೂ ಅವರಿಗೆ ಕೊಟ್ಟೆನು; ಅದರಲ್ಲಿ ಕಿನ್ನೆರೆತ್ ಸಮುದ್ರದಿಂದ ಪಿಸ್ಗಾ ಬೆಟ್ಟದ ಪಶ್ಚಿಮದಲ್ಲಿರುವ ಅರಾಬದ ಸಮುದ್ರವೆನಿಸಿಕೊಳ್ಳುವ ಲವಣಸಮುದ್ರದ ವರೆಗೆ ಯೊರ್ದನ್ ನದಿಯು ಅವರ (ಪಶ್ಚಿಮದ ವರೆಗೆ) ಮೇರೆ.
ಧರ್ಮೋಪದೇಶಕಾಂಡ 3 : 18 (IRVKN)
ಆ ಕಾಲದಲ್ಲಿ ನಾನು ನಿಮಗೆ, “ನಿಮ್ಮ ದೇವರಾದ ಯೆಹೋವನು ಈ ಪ್ರದೇಶವನ್ನೇ ನಿಮಗೆ ಸ್ವತ್ತಾಗಿ ಕೊಟ್ಟಿದ್ದಾನೆ. ಆದರೆ ನಿಮ್ಮ ಸೈನಿಕರೆಲ್ಲರೂ ಯುದ್ಧಸನ್ನದ್ಧರಾಗಿ ನಿಮ್ಮ ಸಹೋದರರಾದ ಇಸ್ರಾಯೇಲರ ಮುಂದೆ ಹೊರಟು ಹೊಳೆ ದಾಟಿ ಹೋಗಬೇಕು.
ಧರ್ಮೋಪದೇಶಕಾಂಡ 3 : 19 (IRVKN)
ನಿಮಗೆ ಬಹಳ ದನಕುರಿಗಳು ಉಂಟೆಂಬುದನ್ನು ನಾನು ಬಲ್ಲೆ. ನಿಮ್ಮ ದೇವರಾದ ಯೆಹೋವನು ಯೊರ್ದನ್ ನದಿಯ ಆಚೆ ನಿಮ್ಮ ಸಹೋದರರಿಗೆ ಕೊಡುವ ದೇಶವು ಅವರಿಗೆ ಸ್ವಾಧೀನವಾಗುವವರೆಗೆ ನಿಮ್ಮ ಹೆಂಡತಿ ಮಕ್ಕಳೂ, ದನಕುರಿಗಳೂ ನಾನು ನಿಮಗೆ ಕೊಟ್ಟಿರುವ ಪಟ್ಟಣಗಳಲ್ಲೇ ಇರಲಿ.
ಧರ್ಮೋಪದೇಶಕಾಂಡ 3 : 20 (IRVKN)
ಅನಂತರ ನಿಮ್ಮಂತೆ ನಿಮ್ಮ ಸಹೋದರರಿಗೂ ಯೆಹೋವನಿಂದ ವಿಶ್ರಾಂತಿ ದೊರಕಿದಾಗ ನಿಮ್ಮಲ್ಲಿ ಪ್ರತಿಯೊಬ್ಬನೂ ನಾನು ಕೊಟ್ಟ ಸ್ವತ್ತಿಗೆ ಹಿಂತಿರುಗಿ ಬರಬಹುದು” ಎಂದು ಆಜ್ಞಾಪಿಸಿದೆನು.
ಧರ್ಮೋಪದೇಶಕಾಂಡ 3 : 21 (IRVKN)
ಆ ಕಾಲದಲ್ಲಿ ನಾನು ಯೆಹೋಶುವನಿಗೆ, “ನಿಮ್ಮ ದೇವರಾದ ಯೆಹೋವನು ಆ ಇಬ್ಬರು ಅರಸರಿಗೆ ಮಾಡಿದ್ದನ್ನು ನೀನು ನೋಡೇ ಇದ್ದೀ. ನೀನು ನದಿ ದಾಟಿಹೋಗುವ ಎಲ್ಲಾ ರಾಜ್ಯಗಳನ್ನೂ ಆತನು ಹಾಗೆಯೇ ನಾಶಮಾಡುವನು.
ಧರ್ಮೋಪದೇಶಕಾಂಡ 3 : 22 (IRVKN)
ನೀವು ಅವರಿಗೆ ಭಯಪಡಬೇಡಿರಿ; ನಿಮ್ಮ ದೇವರಾದ ಯೆಹೋವನು ತಾನೇ ನಿಮ್ಮ ಪರವಾಗಿ ಯುದ್ಧಮಾಡುವನು” ಎಂದು ಆಜ್ಞಾಪಿಸಿದೆನು.
ಧರ್ಮೋಪದೇಶಕಾಂಡ 3 : 23 (IRVKN)
ಮೋಶೆಯು ಯೊರ್ದನ್ ನದಿಯನ್ನು ದಾಟಲು ನಿಷೇಧವೇರಿದ್ದು ಆ ಕಾಲದಲ್ಲಿ ನಾನು ಯೆಹೋವನಿಗೆ, “ಕರ್ತನಾದ ಯೆಹೋವನೇ, ನೀನು ನಿನ್ನ ಮಹತ್ವವನ್ನೂ, ಭುಜಬಲವನ್ನೂ ನಿನ್ನ ದಾಸನಿಗೆ ತೋರಿಸಲಾರಂಭಿಸಿದಿ.
ಧರ್ಮೋಪದೇಶಕಾಂಡ 3 : 24 (IRVKN)
ನೀನು ನಡಿಸುವ ಈ ಮಹತ್ಕಾರ್ಯಗಳಿಗೆ ಸಮಾನವಾದ ಕಾರ್ಯಗಳನ್ನು ಆಕಾಶದಲ್ಲಾಗಲಿ, ಭೂಮಿಯಲ್ಲಾಗಲಿ ಬೇರೆ ಯಾವ ದೇವರು ನಡೆಸಲಾರನು?
ಧರ್ಮೋಪದೇಶಕಾಂಡ 3 : 25 (IRVKN)
ಕರ್ತನೇ, ನಾನೂ ಈ ನದಿಯನ್ನು ದಾಟಿ ಆಚೆಯಿರುವ ಒಳ್ಳೆಯ ದೇಶವನ್ನು ಅಂದರೆ ಆ ಅಂದವಾದ ಬೆಟ್ಟದ ಸೀಮೆಯನ್ನೂ, ಲೆಬನೋನ್ ಪರ್ವತವನ್ನೂ ನೋಡುವುದಕ್ಕೆ ಅಪ್ಪಣೆಯಾಗಲಿ” ಎಂದು ಬಿನ್ನವಿಸಿದೆನು.
ಧರ್ಮೋಪದೇಶಕಾಂಡ 3 : 26 (IRVKN)
ಆದರೆ ಯೆಹೋವನು ನಿಮ್ಮ ದೆಸೆಯಿಂದ ನನ್ನ ಮೇಲೆ ಕೋಪವುಳ್ಳವನಾಗಿ ನನ್ನ ಮನವಿಯನ್ನು ಕೇಳದೆ, “ಸಾಕು, ಇದರ ವಿಷಯದಲ್ಲಿ ಇನ್ನು ನನ್ನ ಸಂಗಡ ಮಾತನಾಡಬೇಡ; ನೀನು ಯೊರ್ದನ್ ನದಿಯನ್ನು ದಾಟಬಾರದು.
ಧರ್ಮೋಪದೇಶಕಾಂಡ 3 : 27 (IRVKN)
ಆದರೆ ಪಿಸ್ಗಾ ಬೆಟ್ಟವನ್ನು ಹತ್ತಿ ತುದಿಯಲ್ಲಿ ನಿಂತು, ನಾಲ್ಕು ದಿಕ್ಕುಗಳಲ್ಲಿ ಸುತ್ತಲೂ ಇರುವ ದೇಶವನ್ನು ಕಣ್ಣು ತುಂಬಾ ನೋಡಬಹುದು.
ಧರ್ಮೋಪದೇಶಕಾಂಡ 3 : 28 (IRVKN)
ಯೆಹೋಶುವನೇ ಈ ಜನರ ನಾಯಕನಾಗಿ ಹೋಗಿ ನೀನು ನೋಡುವ ದೇಶವನ್ನು ಅವರಿಗೆ ಸ್ವಾಧೀನಪಡಿಸುವನು. ಅವನಿಗೆ ಈ ಅಧಿಕಾರವನ್ನು ಕೊಡಬೇಕು; ಅವನು ದೃಢವಾಗುವಂತೆ ಅವನನ್ನು ಧೈರ್ಯಪಡಿಸಬೇಕು” ಎಂದು ಉತ್ತರಕೊಟ್ಟನು.
ಧರ್ಮೋಪದೇಶಕಾಂಡ 3 : 29 (IRVKN)
ಆಗ ನಾವು ಬೇತ್‍ಪೆಗೋರಿಗೆ ಮುಂದೆ ಇದ್ದ ಕಣಿವೆಯಲ್ಲಿ ವಾಸವಾಗಿದ್ದೆವು.
❮
❯