ದಾನಿಯೇಲನು 9 : 1 (IRVKN)
ದಾನಿಯೇಲನ ಪ್ರಾರ್ಥನೆಗೆ, ದೇವರಿಂದ ಬಂದ ಉತ್ತರ ಅಹಷ್ವೇರೋಷನ ಮಗನೂ, ಮೇದ್ಯ ವಂಶದವನೂ ಕಸ್ದೀಯ ರಾಜ್ಯದ ದೊರೆತನವನ್ನು ಹೊಂದಿದವನೂ ಆದ ದಾರ್ಯಾವೆಷನ ಆಳ್ವಿಕೆಯ ಮೊದಲನೆಯ ವರ್ಷದಲ್ಲಿ,
ದಾನಿಯೇಲನು 9 : 2 (IRVKN)
ದಾನಿಯೇಲನಾದ ನಾನು ಪವಿತ್ರಗ್ರಂಥಗಳನ್ನು ಪರೀಕ್ಷಿಸಿ ಯೆಹೋವನು ಪ್ರವಾದಿಯಾದ ಯೆರೆಮೀಯನಿಗೆ ದಯಪಾಲಿಸಿದ ವಾಕ್ಯಾನುಸಾರ ಯೆರೂಸಲೇಮ್ ಹಾಳು ಬಿದ್ದಿರಬೇಕಾದ ಪೂರ್ಣಕಾಲದ ವರ್ಷಗಳ ಸಂಖ್ಯೆ ಎಪ್ಪತ್ತೆಂದು ತಿಳಿದೆನು.
ದಾನಿಯೇಲನು 9 : 3 (IRVKN)
ನಾನು ಉಪವಾಸವಿದ್ದು ಗೋಣಿತಟ್ಟು ಸುತ್ತಿಕೊಂಡು ಬೂದಿ ಬಳಿದುಕೊಂಡು ಕರ್ತನಾದ ದೇವರ ಕಡೆಗೆ ಮುಖವೆತ್ತಿ ಪ್ರಾರ್ಥನೆ, ವಿಜ್ಞಾಪನೆಗಳಲ್ಲಿ ನಿರತನಾದೆನು.
ದಾನಿಯೇಲನು 9 : 4 (IRVKN)
ನನ್ನ ದೇವರಾದ ಯೆಹೋವನಿಗೆ ಹೀಗೆ ಪಾಪವನ್ನು ಅರಿಕೆ ಮಾಡಿ ಬಿನ್ನವಿಸಿದೆನು, “ಓ ಕರ್ತನೇ, ಮಹೋನ್ನತನೂ, ಭಯಂಕರನೂ ಆದ ದೇವರೇ, ನಿನ್ನನ್ನು ಪ್ರೀತಿಸಿ ನಿನ್ನ ಆಜ್ಞೆಗಳನ್ನು ಅನುಸರಿಸುವವರಿಗೆ ಮಾಡಿದ ಕೃಪಾ ವಾಗ್ದಾನಗಳನ್ನು ನೆರವೇರಿಸುವವನೇ,
ದಾನಿಯೇಲನು 9 : 5 (IRVKN)
ನಾವು ಪಾಪಾಪರಾಧಗಳನ್ನು ಮಾಡಿ ಕೆಟ್ಟವರಾಗಿ ನಡೆದು ನಿನಗೆ ತಿರುಗಿಬಿದ್ದು ನಿನ್ನ ಆಜ್ಞಾವಿಧಿಗಳನ್ನು ತೊರೆದು
ದಾನಿಯೇಲನು 9 : 6 (IRVKN)
ನಮ್ಮ ಅರಸರು, ಪ್ರಧಾನರು, ಹಿರಿಯರು, ಸಾಮಾನ್ಯ ಜನರು, ಇವರಿಗೆಲ್ಲ ನಿನ್ನ ಹೆಸರಿನ ನಿಮಿತ್ತ ನುಡಿದ ನಿನ್ನ ಸೇವಕರಾದ ಪ್ರವಾದಿಗಳ ಕಡೆಗೆ ಕಿವಿಗೊಡಲೇ ಇಲ್ಲ.
ದಾನಿಯೇಲನು 9 : 7 (IRVKN)
ಕರ್ತನೇ, ನೀನು ಧರ್ಮಸ್ವರೂಪನು, ನಾವೋ ನಾಚಿಕೆಗೆ ಈಡಾದವರು; ಹೌದು, ಈಗಲೇ ಯೆಹೂದ್ಯರೂ ಯೆರೂಸಲೇಮಿನ ನಿವಾಸಿಗಳೂ ನಿನ್ನ ವಿರುದ್ಧವಾಗಿ ಮಾಡಿದ ದ್ರೋಹದ ನಿಮಿತ್ತ ನಿನ್ನಿಂದ ದೇಶದೇಶಗಳಿಗೆ ತಳ್ಳಲ್ಪಟ್ಟು ದೂರದಲ್ಲಿಯೂ, ಸಮೀಪದಲ್ಲಿಯೂ ಚದರಿರುವ ಎಲ್ಲಾ ಇಸ್ರಾಯೇಲರೂ ನಾಚಿಕೆಗೆ ಈಡಾಗಿದ್ದಾರೆ.
ದಾನಿಯೇಲನು 9 : 8 (IRVKN)
ಸ್ವಾಮೀ, ನಿನ್ನ ವಿರುದ್ಧವಾಗಿ ಪಾಪ ಮಾಡಿದ್ದರಿಂದ ನಾವೂ ನಮ್ಮ ಅರಸರೂ, ಪ್ರಧಾನರೂ, ಹಿರಿಯರೂ ನಾಚಿಕೆಗೆ ಗುರಿಯಾಗಿದ್ದೇವೆ.
ದಾನಿಯೇಲನು 9 : 9 (IRVKN)
ಕರ್ತನಾದ ನಮ್ಮ ದೇವರು ಕರುಣಿಸುವವನೂ, ಕ್ಷಮಿಸುವವನೂ ಆಗಿದ್ದಾನೆ; ನಾವು ಆತನಿಗೆ ತಿರುಗಿಬಿದ್ದೆವಲ್ಲಾ.
ದಾನಿಯೇಲನು 9 : 10 (IRVKN)
ಕರ್ತನಾದ ನಮ್ಮ ದೇವರ ಮಾತನ್ನು ಕೇಳಲಿಲ್ಲ, ತನ್ನ ಸೇವಕರಾದ ಪ್ರವಾದಿಗಳ ಮೂಲಕ ನಮಗೆ ಗೊತ್ತು ಮಾಡಿದ ಧರ್ಮಮಾರ್ಗದಲ್ಲಿ ನಡೆಯಲಿಲ್ಲ.
ದಾನಿಯೇಲನು 9 : 11 (IRVKN)
ಇಸ್ರಾಯೇಲರೆಲ್ಲರೂ ನಿನ್ನ ಧರ್ಮಪ್ರಮಾಣವನ್ನು ಮೀರಿ ನಿನ್ನ ಮಾತನ್ನು ಕೇಳಲೊಲ್ಲದೆ ಓರೆಯಾಗಿ ಹೋದರು. ಆದಕಾರಣ ನಿನ್ನ ಶಾಪದ ಕೇಡುಗಳೂ, ದೇವಸೇವಕನಾದ ಮೋಶೆಯ ಧರ್ಮನಿಯಮದಲ್ಲಿ ನೀನು ಆಣೆಯಿಟ್ಟು ಪ್ರಕಟಿಸಿದ ವಿಪತ್ತುಗಳೂ ನಮ್ಮ ಮೇಲೆ ಸುರಿಯಲ್ಪಟ್ಟಿವೆ; ನಾವು ದೇವ ದ್ರೋಹಿಗಳೇ ಸರಿ.
ದಾನಿಯೇಲನು 9 : 12 (IRVKN)
ಆಹಾ, ನಮ್ಮ ದೇವರು ನಮ್ಮ ಮೇಲೆ ದೊಡ್ಡ ಕೇಡನ್ನು ಬರಮಾಡಿ ನಮ್ಮನ್ನೂ, ನಮ್ಮನ್ನಾಳುವ ಅಧಿಪತಿಗಳನ್ನೂ ಕುರಿತು ಗದರಿಸಿ ಹೇಳಿದ ಮಾತುಗಳನ್ನು ನೆರವೇರಿಸಿದ್ದಾನೆ; ಯೆರೂಸಲೇಮಿಗೆ ಆದಂತಹ ಕೇಡು ಭೂಮಂಡಲದಲ್ಲಿ ಎಲ್ಲಿಯೂ ಎಂದೂ ಆಗಲಿಲ್ಲವಲ್ಲಾ.
ದಾನಿಯೇಲನು 9 : 13 (IRVKN)
ಮೋಶೆಯ ಧರ್ಮನಿಯಮಗಳಲ್ಲಿ ಬರೆದಂತೆಯೇ ಈ ವಿಪತ್ತೆಲ್ಲಾ ನಮ್ಮ ಮೇಲೆ ಬಂದಿದೆ; ಆದರೂ ನಾವು ನಮ್ಮ ದುರ್ಮಾರ್ಗಗಳನ್ನು ತೊರೆದುಬಿಟ್ಟು ನಿನ್ನ ಸತ್ಯೋಪದೇಶವನ್ನು ಗ್ರಹಿಸಿ ನಡೆಯುವಂತೆ ನಮ್ಮ ದೇವರಾದ ಯೆಹೋವನೆಂಬ ನಿನ್ನ ದಯೆಯನ್ನು ಬೇಡಿಕೊಳ್ಳಲಿಲ್ಲ.
ದಾನಿಯೇಲನು 9 : 14 (IRVKN)
ಆದಕಾರಣ ಯೆಹೋವನು ಆ ಕೇಡನ್ನು ನೋಡಿಕೊಂಡಿದ್ದು ನಮ್ಮ ಮೇಲೆ ಬರಮಾಡಿದ್ದಾನೆ; ನಮ್ಮ ದೇವರಾದ ಯೆಹೋವನು ತಾನು ಮಾಡುವ ಸಕಲಕಾರ್ಯಗಳಲ್ಲಿ ಧರ್ಮಸ್ವರೂಪನೇ; ನಾವೋ ಆತನ ಮಾತನ್ನು ಕೇಳಲಿಲ್ಲ.
ದಾನಿಯೇಲನು 9 : 15 (IRVKN)
ಕರ್ತನೇ, ನಮ್ಮ ದೇವರೇ, ಭುಜಪರಾಕ್ರಮವನ್ನು ತೋರಿಸಿ ನಿನ್ನ ಜನರನ್ನು ಐಗುಪ್ತದೇಶದೊಳಗಿಂದ ಪಾರು ಮಾಡಿ ಇಂದಿನವರೆಗೂ ಪ್ರಸಿದ್ಧವಾಗಿರುವ ಹೆಸರನ್ನು ಪಡೆದುಕೊಂಡವನೇ, ಈಗ ಚಿತ್ತೈಸು. ನಾವು ಪಾಪಮಾಡಿ ಕೆಟ್ಟವರಾಗಿ ನಡೆದಿದ್ದೇವೆ.
ದಾನಿಯೇಲನು 9 : 16 (IRVKN)
ಕರ್ತನೇ, ನಿನ್ನ ಸಮಸ್ತ ಧರ್ಮಕಾರ್ಯಗಳಿಗೆ ಅನುಸಾರವಾಗಿ ನಿನ್ನ ಪಟ್ಟಣವೂ ಮತ್ತು ನಿನ್ನ ಪವಿತ್ರ ಪರ್ವತವೂ ಆದ ಯೆರೂಸಲೇಮಿನ ಮೇಲೆ ನಿನಗಿರುವ ಕೋಪವನ್ನು, ನಿನ್ನ ರೋಷಾಗ್ನಿಯನ್ನು ದಯಮಾಡಿ ತೊಲಗಿಸಿಬಿಡು; ನಮ್ಮ ಮತ್ತು ನಮ್ಮ ಪೂರ್ವಿಕರ ಪಾಪಾಪರಾಧಗಳ ನಿಮಿತ್ತ ಯೆರೂಸಲೇಮೂ, ನಿನ್ನ ಜನವೂ ನೆರೆಹೊರೆಯವರೆಲ್ಲರ ನಿಂದೆಗೆ ಗುರಿಯಾಗಿವೆಯಲ್ಲಾ.
ದಾನಿಯೇಲನು 9 : 17 (IRVKN)
ನಮ್ಮ ದೇವರೇ, ನಿನ್ನ ಸೇವಕನ ಪ್ರಾರ್ಥನೆಯ ವಿಜ್ಞಾಪನೆಗಳನ್ನು ಈಗ ಲಾಲಿಸು; ಹಾಳಾಗಿರುವ ನಿನ್ನ ಪವಿತ್ರಾಲಯವನ್ನು ಕರ್ತನಾದ ನಿನ್ನ ಹೆಸರಿನ ನಿಮಿತ್ತವೇ ಪ್ರಸನ್ನಮುಖದಿಂದ ನೋಡು.
ದಾನಿಯೇಲನು 9 : 18 (IRVKN)
ನನ್ನ ದೇವರೇ, ಕಿವಿಗೊಟ್ಟು ಕೇಳು, ಕಣ್ಣುತೆರೆದು ನಮ್ಮ ಹಾಳು ಪ್ರದೇಶಗಳನ್ನೂ, ನಿನ್ನ ಹೆಸರುಗೊಂಡಿರುವ ಪಟ್ಟಣವನ್ನೂ ನೋಡು; ನಾವು ಸದ್ಧರ್ಮಿಗಳೇನೂ ಅಲ್ಲ. ನಿನ್ನ ಮಹಾ ಕೃಪೆಯನ್ನೇ ನಂಬಿಕೊಂಡು ಈ ಬಿನ್ನಹಗಳನ್ನು ನಿನ್ನ ಮುಂದೆ ಅರಿಕೆ ಮಾಡುತ್ತಿದ್ದೇವೆ.
ದಾನಿಯೇಲನು 9 : 19 (IRVKN)
ಸ್ವಾಮೀ, ಕೇಳು! ಸ್ವಾಮೀ, ಕ್ಷಮಿಸು! ಸ್ವಾಮೀ, ಲಾಲಿಸು, ಕಾರ್ಯವನ್ನು ಸಾಧಿಸು! ತಡಮಾಡಬೇಡ! ನನ್ನ ದೇವರೇ, ನಿನ್ನ ಜನವೂ, ಪಟ್ಟಣವೂ ನಿನ್ನ ಹೆಸರಿನವುಗಳಾದ ಕಾರಣ ನಿನ್ನ ಹೆಸರನ್ನು ಕಾಪಾಡಿಕೋ!”
ದಾನಿಯೇಲನು 9 : 20 (IRVKN)
ಎಪ್ಪತ್ತು ವಾರಗಳ ಕುರಿತಾದ ಪ್ರವಾದನೆ ನಾನು ಬಾಯಿಬಿಟ್ಟು ಬೇಡಿಕೊಂಡು ನನ್ನ ಮತ್ತು ನನ್ನ ಜನರಾದ ಇಸ್ರಾಯೇಲರ ಪಾಪವನ್ನು ಅರಿಕೆ ಮಾಡುತ್ತಾ ನನ್ನ ದೇವರ ಪವಿತ್ರ ಪರ್ವತದ ವಿಷಯವಾಗಿ ನನ್ನ ದೇವರಾದ ಯೆಹೋವನಿಗೆ ಬಿನ್ನವಿಸಿದೆನು.
ದಾನಿಯೇಲನು 9 : 21 (IRVKN)
ಪ್ರಾರ್ಥಿಸುತ್ತಿರುವಾಗಲೇ ಮೊದಲು ನನ್ನ ಕನಸಿನಲ್ಲಿ ಕಂಡ ಗಬ್ರಿಯೇಲನೆಂಬ ಪುರುಷನು ಅವಸರವಾಗಿ ಹಾರಿಬಂದು, ಸಂಧ್ಯಾನೈವೇದ್ಯ ಸಮಯದಲ್ಲಿ ನನ್ನನ್ನು ಸೇರಿದನು.
ದಾನಿಯೇಲನು 9 : 22 (IRVKN)
ಆತನು ನನ್ನೊಂದಿಗೆ ಹೀಗೆ ಮಾತನಾಡಿ ಉಪದೇಶಿಸಿದನು, “ದಾನಿಯೇಲನೇ, ನಿನಗೆ ಜ್ಞಾನಬೋಧೆ ಮಾಡುವುದಕ್ಕೆ ಈಗ ಬಂದೆನು.
ದಾನಿಯೇಲನು 9 : 23 (IRVKN)
ನಿನ್ನ ವಿಜ್ಞಾಪನೆಯ ಆರಂಭದಲ್ಲಿಯೇ ದೇವರ ಅಪ್ಪಣೆಯಾಯಿತು; ಅದನ್ನು ನಿನಗೆ ತಿಳಿಸಲು ಇಲ್ಲಿಗೆ ಬಂದಿದ್ದೇನೆ; ನೀನು ದೇವರಿಗೆ ಅತಿಪ್ರಿಯನು. ಈ ದೈವೋಕ್ತಿಯನ್ನು ಯೋಚಿಸು, ಈ ದರ್ಶನವನ್ನು ಗ್ರಹಿಸಿಕೋ.
ದಾನಿಯೇಲನು 9 : 24 (IRVKN)
ಅಧರ್ಮವನ್ನು ಕೊನೆಗಾಣಿಸುವುದು, ಪಾಪಗಳನ್ನು ತೀರಿಸುವುದು, ಅಪರಾಧವನ್ನು ನಿವಾರಿಸುವುದು, ಸನಾತನ ಧರ್ಮವನ್ನು ಸ್ಥಾಪಿಸುವುದು, ಕನಸನ್ನೂ ಮತ್ತು ಪ್ರವಾದಿಯ ನುಡಿಯನ್ನೂ ಮುದ್ರೆಹಾಕಿ ಯಥಾರ್ಥಮಾಡುವುದಕ್ಕೆ, ಅತಿಪರಿಶುದ್ಧವಾದದ್ದನ್ನು* ಅತಿಪರಿಶುದ್ಧವಾದದ್ದನ್ನು ದೇವಾಲಯವನ್ನು. ಅಭಿಷೇಕಿಸುವುದು, ಇವೆಲ್ಲಾ ನೆರವೇರುವುದಕ್ಕೆ ಮೊದಲು ನಿನ್ನ ಜನಕ್ಕೂ, ನಿನ್ನ ಪರಿಶುದ್ಧ ಪುರಕ್ಕೂ ಎಪ್ಪತ್ತು ವಾರಗಳು ಕಳೆಯಬೇಕು ಎಂದು ನಿಷ್ಕರ್ಷೆಯಾಗಿದೆ.
ದಾನಿಯೇಲನು 9 : 25 (IRVKN)
ಇದನ್ನು ತಿಳಿದು ಮನದಟ್ಟುಮಾಡಿಕೋ; ಯೆರೂಸಲೇಮ್ ಜೀರ್ಣೋದ್ಧಾರವಾಗಿ ಕಟ್ಟಲ್ಪಡಲಿ ಎಂಬ ದೈವೋಕ್ತಿಯು ಹರಡುವ ದಿನದಿಂದ ಅಭಿಷಿಕ್ತನಾದ ಪ್ರಭುವು† ಅಭಿಷಿಕ್ತನಾದ ಪ್ರಭುವು ನೇಮಿಸಲ್ಪಟ್ಟ ಮುಖ್ಯಾಧಿಕಾರಿ. ಬರುವುದರೊಳಗೆ ಏಳು ವಾರಗಳು ಕಳೆಯಬೇಕು! ಅದು ಪುನಃ ಕಟ್ಟಲ್ಪಟ್ಟು ಅರವತ್ತೆರಡು ವಾರ ಇರುವುದು; ಅದಕ್ಕೆ ಚೌಕವೂ ಕಂದಕವೂ ಇರುವವು; ಆ ಕಾಲವು ಬಹು ಕಷ್ಟಕಾಲ.
ದಾನಿಯೇಲನು 9 : 26 (IRVKN)
ಅರುವತ್ತೆರಡು ವಾರಗಳಾದ ಮೇಲೆ ಅಭಿಷಿಕ್ತನೊಬ್ಬನು ಛೇದಿಸಲ್ಪಡುವನು; ಅವನಿಗೆ ಏನೂ ಇರದು; ನುಗ್ಗುವ ಪ್ರಭುವಿನ ಜನರು ಪಟ್ಟಣವನ್ನೂ ಪವಿತ್ರಾಲಯವನ್ನೂ ಹಾಳು ಮಾಡುವರು; ತುಂಬಿ ತುಳುಕುವ ಪ್ರಳಯವು ಪಟ್ಟಣವನ್ನು ಕೊನೆಗಾಣಿಸುವುದು; ಅಂತ್ಯದವರೆಗೂ ಯುದ್ಧವಾಗುವುದು, ನಿಶ್ಚಿತ ನಾಶನಗಳು ಸಂಭವಿಸುವವು.
ದಾನಿಯೇಲನು 9 : 27 (IRVKN)
ಆ ಪ್ರಭುವು ಒಂದು ವಾರದ ಮಟ್ಟಿಗೆ ಬಹು ಜನರೊಂದಿಗೆ ದೃಢವಾದ ಒಡಂಬಡಿಕೆಯನ್ನು ಮಾಡಿಕೊಳ್ಳುವನು; ಅರ್ಧಭಾಗ ಯಜ್ಞನೈವೇದ್ಯಗಳನ್ನು ನಿಲ್ಲಿಸುವನು; ಅಸಹ್ಯಗಳನ್ನು ವಾಹನಮಾಡಿಕೊಂಡು ಒಬ್ಬ ಘಾತಕನು ಹಾರಿಬಂದು ನಿಶ್ಚಿತ ಪ್ರಳಯವು ಅವನನ್ನು ಮುಳುಗಿಸುವ ತನಕ ಹಾಳು ಮಾಡುವನು.”
❮
❯
1
2
3
4
5
6
7
8
9
10
11
12
13
14
15
16
17
18
19
20
21
22
23
24
25
26
27