ಅಪೊಸ್ತಲರ ಕೃತ್ಯಗ 9 : 1 (IRVKN)
ಸೌಲನು ಯೇಸುವಿನ ಶಿಷ್ಯನಾದದ್ದು ಸೌಲನು ಇನ್ನೂ ಕರ್ತನ ಶಿಷ್ಯರ ಮೇಲೆ ಕೋಪವುಳ್ಳನಾಗಿದ್ದು ಬೆದರಿಕೆಯ ಮಾತುಗಳನ್ನಾಡುತ್ತಾ ಅವರನ್ನು ಸಂಹರಿಸಬೇಕೆಂದು ಆಲೋಚಿಸುತ್ತಾ ಮಹಾಯಾಜಕನ ಬಳಿಗೆ ಹೋಗಿ;
ಅಪೊಸ್ತಲರ ಕೃತ್ಯಗ 9 : 2 (IRVKN)
ಈ ಮಾರ್ಗವನ್ನು ಹಿಡಿದವರು ಯಾರಾದರೂ ಸಿಕ್ಕಿದರೆ ಅವರು ಗಂಡಸರಾದರೂ ಸರಿಯೇ, ಹೆಂಗಸರಾದರೂ ಸರಿಯೇ ನಾನು ಅವರಿಗೆ ಬೇಡಿಹಾಕಿಸಿ ಯೆರೂಸಲೇಮಿಗೆ ತರುವಂತೆ, ದಮಸ್ಕದಲ್ಲಿರುವ ಸಭಾಮಂದಿರದವರಿಗೆ ನೀನು, ಪತ್ರವನ್ನು ಕೊಡಬೇಕು ಎಂದು ಅವನನ್ನು ಬೇಡಿಕೊಂಡನು.
ಅಪೊಸ್ತಲರ ಕೃತ್ಯಗ 9 : 3 (IRVKN)
ಅವನು ಪ್ರಯಾಣ ಮಾಡುತ್ತಾ ದಮಸ್ಕದ ಹತ್ತಿರಕ್ಕೆ ಬರಲು, ಫಕ್ಕನೆ ಆಕಾಶದಿಂದ ಒಂದು ಬೆಳಕು ಅವನ ಸುತ್ತಲು ಮಿಂಚಿತು.
ಅಪೊಸ್ತಲರ ಕೃತ್ಯಗ 9 : 4 (IRVKN)
ಅವನು ನೆಲಕ್ಕೆ ಬಿದ್ದನು. ಆಗ, “ಸೌಲನೇ, ಸೌಲನೇ, ನನ್ನನ್ನು ಏಕೆ ಹಿಂಸೆಪಡಿಸುತ್ತೀ?” ಎಂದು ಹೇಳುವ ವಾಣಿಯನ್ನು ಕೇಳಿದನು.
ಅಪೊಸ್ತಲರ ಕೃತ್ಯಗ 9 : 5 (IRVKN)
ಅದಕ್ಕೆ ಸೌಲನು;, “ಕರ್ತನೇ, ನೀನಾರು?” ಎಂದು ಕೇಳಿದ್ದಕ್ಕೆ, ಕರ್ತನು, “ನೀನು ಹಿಂಸೆಪಡಿಸುವ ಯೇಸುವೇ ನಾನು;
ಅಪೊಸ್ತಲರ ಕೃತ್ಯಗ 9 : 6 (IRVKN)
ನೀನೆದ್ದು ಊರೊಳಕ್ಕೆ ಹೋಗು, ನೀನು ಮಾಡಬೇಕಾದದ್ದು ಅಲ್ಲಿ ನಿನಗೆ ತಿಳಿಸಲ್ಪಡುವುದು” ಎಂದು ಹೇಳಿದನು.
ಅಪೊಸ್ತಲರ ಕೃತ್ಯಗ 9 : 7 (IRVKN)
ಅವನ ಜೊತೆಯಲ್ಲಿ ಪ್ರಯಾಣ ಮಾಡುತ್ತಿದ್ದವರು ಧ್ವನಿಯನ್ನು ಮಾತ್ರ ಕೇಳಿ, ಯಾರನ್ನೂ ಕಾಣದೆ ಮೂಕರಂತೆ ವಿಸ್ಮಿತರಾಗಿ ನಿಂತರು.
ಅಪೊಸ್ತಲರ ಕೃತ್ಯಗ 9 : 8 (IRVKN)
ಸೌಲನು ನೆಲದಿಂದ ಎದ್ದು ಕಣ್ಣು ತೆರೆದಾಗ ಏನೂ ಕಾಣಿಸಲಿಲ್ಲ. ಆಗ ಅವರು ಅವನನ್ನು ಕೈಹಿಡಿದು ದಮಸ್ಕದೊಳಕ್ಕೆ ಕರೆದುಕೊಂಡು ಹೋದರು.
ಅಪೊಸ್ತಲರ ಕೃತ್ಯಗ 9 : 9 (IRVKN)
ಅವನು ಮೂರು ದಿನಗಳು ಕಣ್ಣುಕಾಣದೆ, ಏನೂ ತಿನ್ನಲಿಲ್ಲ ಮತ್ತು ಏನೂ ಕುಡಿಯದೇ ಇದ್ದನು.
ಅಪೊಸ್ತಲರ ಕೃತ್ಯಗ 9 : 10 (IRVKN)
ದಮಸ್ಕದಲ್ಲಿ ಅನನೀಯನೆಂಬ ಒಬ್ಬ ಶಿಷ್ಯನಿದ್ದನು; ಕರ್ತನು ದರ್ಶನದಲ್ಲಿ; “ಅನನೀಯನೇ,” ಎಂದು ಅವನನ್ನು ಕರೆಯಲು, ಅವನು; “ಕರ್ತನೇ, ಇಗೋ, ಇದ್ದೇನೆ” ಅಂದನು.
ಅಪೊಸ್ತಲರ ಕೃತ್ಯಗ 9 : 11 (IRVKN)
ಕರ್ತನು ಅವನಿಗೆ, “ನೀನೆದ್ದು ನೆಟ್ಟನೇ ಬೀದಿ ಎಂಬ ಬೀದಿಗೆ ಹೋಗಿ ಯೂದನ ಮನೆಯಲ್ಲಿ ತಾರ್ಸದ ಸೌಲನೆಂಬವನನ್ನು ಕುರಿತು ವಿಚಾರಿಸು; ಅವನು ಈಗ ಪ್ರಾರ್ಥನೆ ಮಾಡುತ್ತಿದ್ದಾನೆ.
ಅಪೊಸ್ತಲರ ಕೃತ್ಯಗ 9 : 12 (IRVKN)
ಮತ್ತು ಅನನೀಯನೆಂಬ ಒಬ್ಬ ಮನುಷ್ಯನು ಒಳಗೆ ಬಂದು ತನಗೆ ಪುನಃ ಕಣ್ಣು ಕಾಣುವಂತೆ ತನ್ನ ಮೇಲೆ ಕೈಯಿಟ್ಟು ಪ್ರಾರ್ಥನೆಮಾಡುವುದನ್ನು ದರ್ಶನದಲ್ಲಿ ನೋಡಿದ್ದಾನೆ” ಎಂದು ಹೇಳಿದನು.
ಅಪೊಸ್ತಲರ ಕೃತ್ಯಗ 9 : 13 (IRVKN)
ಅದಕ್ಕೆ ಅನನೀಯನು, “ಕರ್ತನೇ, ಆ ಮನುಷ್ಯನು ಯೆರೂಸಲೇಮಿನಲ್ಲಿ ನಿನ್ನನ್ನು ನಂಬಿದ ದೇವಜನರಿಗೆ ಎಷ್ಟೋ ಕೇಡನ್ನುಂಟುಮಾಡಿದನೆಂದು ಅವನ ವಿಷಯವಾಗಿ ಅನೇಕರಿಂದ ಕೇಳಿದ್ದೇನೆ.
ಅಪೊಸ್ತಲರ ಕೃತ್ಯಗ 9 : 14 (IRVKN)
ಮತ್ತು ಇಲ್ಲಿಯೂ ನಿನ್ನ ಹೆಸರನ್ನು ಸ್ಮರಿಸುವವರೆಲ್ಲರಿಗೆ ಬೇಡಿಹಾಕಿಸುವ ಅಧಿಕಾರವನ್ನು ಮುಖ್ಯಯಾಜಕರಿಂದ ಹೊಂದಿದ್ದಾನೆ” ಅಂದನು.
ಅಪೊಸ್ತಲರ ಕೃತ್ಯಗ 9 : 15 (IRVKN)
ಕರ್ತನು ಅವನಿಗೆ, “ನೀನು ಹೋಗು; ಆ ಮನುಷ್ಯನು ಅನ್ಯಜನರಿಗೂ, ಅರಸುಗಳಿಗೂ, ಇಸ್ರಾಯೇಲ್ಯರಿಗೂ ನನ್ನ ಹೆಸರನ್ನು ತಿಳಿಸುವುದಕ್ಕಾಗಿ ನಾನು ಆರಿಸಿಕೊಂಡ ಸಾಧನವಾಗಿದ್ದಾನೆ.
ಅಪೊಸ್ತಲರ ಕೃತ್ಯಗ 9 : 16 (IRVKN)
ಅವನು ನನ್ನ ಹೆಸರಿನ ನಿಮಿತ್ತ ಎಷ್ಟು ಹಿಂಸೆ ಅನುಭವಿಸಬೇಕೆಂಬುದನ್ನು ನಾನೇ ಅವನಿಗೆ ತೋರಿಸುವೆನು” ಎಂದು ಹೇಳಿದನು.
ಅಪೊಸ್ತಲರ ಕೃತ್ಯಗ 9 : 17 (IRVKN)
ಆಗ ಅನನೀಯನು ಹೊರಟು ಆ ಮನೆಯೊಳಗೆ ಹೋಗಿ ಅವನ ಮೇಲೆ ತನ್ನ ಕೈಗಳನ್ನಿಟ್ಟು, “ಸಹೋದರನಾದ ಸೌಲನೇ, ನೀನು ಬಂದ ದಾರಿಯಲ್ಲಿ ನಿನಗೆ ಕಾಣಿಸಿಕೊಂಡ ಕರ್ತನಾದ ಯೇಸು ನಿನಗೆ ಕಣ್ಣು ಕಾಣುವಂತೆಯೂ, ನೀನು ಪವಿತ್ರಾತ್ಮಭರಿತನಾಗುವಂತೆಯೂ ನನ್ನನ್ನು ನಿನ್ನ ಬಳಿಗೆ ಕಳುಹಿಸಿದ್ದಾನೆ” ಎಂದು ಹೇಳಿದನು.
ಅಪೊಸ್ತಲರ ಕೃತ್ಯಗ 9 : 18 (IRVKN)
ಕೂಡಲೇ ಅವನ ಕಣ್ಣುಗಳಿಂದ ಪರೆಗಳಂತೆ ಏನೋ ಬಿದ್ದು ಅವನ ಕಣ್ಣು ಕಾಣಿಸಿದವು. ಅವನು ಎದ್ದು ದೀಕ್ಷಾಸ್ನಾನ ಮಾಡಿಸಿಕೊಂಡನು.
ಅಪೊಸ್ತಲರ ಕೃತ್ಯಗ 9 : 19 (IRVKN)
ತರುವಾಯ ಊಟಮಾಡಿ ಬಲಹೊಂದಿದನು. ಅವನು ದಮಸ್ಕದಲ್ಲಿದ್ದ ಶಿಷ್ಯರ ಸಂಗಡ ಕೆಲವು ದಿನಗಳು ಇದ್ದನು.
ಅಪೊಸ್ತಲರ ಕೃತ್ಯಗ 9 : 20 (IRVKN)
ಅವನು ಕೂಡಲೇ, ಸಭಾಮಂದಿರಗಳಲ್ಲಿ ಯೇಸುವಿನ ವಿಷಯವಾಗಿ ಆತನೇ ದೇವಕುಮಾರನೆಂದು ಸಾರುವುದಕ್ಕೆ ಪ್ರಾರಂಭಮಾಡಿದನು.
ಅಪೊಸ್ತಲರ ಕೃತ್ಯಗ 9 : 21 (IRVKN)
ಕೇಳಿದವರೆಲ್ಲರು ಬೆರಗಾಗಿ; “ಯೇಸುಕ್ರಿಸ್ತನ ಹೆಸರು ಹೇಳುವವರನ್ನು ಯೆರೂಸಲೇಮಿನಲ್ಲಿ ನಾಶಮಾಡುತ್ತಿದ್ದವನು ಇವನಲ್ಲವೇ. ಅಂಥವರನ್ನು ಬೇಡಿಹಾಕಿಸಿ ಮುಖ್ಯಯಾಜಕರ ಬಳಿಗೆ ತೆಗೆದುಕೊಂಡು ಹೋಗಬೇಕೆಂದು ಇಲ್ಲಿಗೆ ಬಂದಿರುವನಲ್ಲವೇ” ಎಂದು ಮಾತನಾಡಿಕೊಂಡರು.
ಅಪೊಸ್ತಲರ ಕೃತ್ಯಗ 9 : 22 (IRVKN)
ಆದರೆ ಸೌಲನು ಇನ್ನೂ ಅಧಿಕ ಬಲವುಳ್ಳವನಾಗಿ, ಯೇಸುವೇ ಕ್ರಿಸ್ತನೆಂದು ರುಜುವಾತುಪಡಿಸುತ್ತಾ ದಮಸ್ಕದಲ್ಲಿದ್ದ ಯೆಹೂದ್ಯರನ್ನು ಉತ್ತರವಿಲ್ಲದವರ ಹಾಗೆ ಮಾಡಿದನು.
ಅಪೊಸ್ತಲರ ಕೃತ್ಯಗ 9 : 23 (IRVKN)
ಅನೇಕ ದಿನಗಳು ಕಳೆದ ಮೇಲೆ, ಯೆಹೂದ್ಯರು ಅವನನ್ನು ಕೊಲ್ಲಬೇಕೆಂದು ಆಲೋಚನೆ ಮಾಡಿಕೊಂಡರು.
ಅಪೊಸ್ತಲರ ಕೃತ್ಯಗ 9 : 24 (IRVKN)
ಆದರೆ ಅವರ ಗೂಢಾಲೋಚನೆಯು ಸೌಲನಿಗೆ ತಿಳಿದುಬಂದಿತು. ಅವನನ್ನು ಕೊಲ್ಲುವುದಕ್ಕಾಗಿ ಅವರು ಹಗಲಿರುಳೂ ಪಟ್ಟಣದ ಬಾಗಿಲುಗಳನ್ನು ಕಾಯುತ್ತಿದ್ದರು.
ಅಪೊಸ್ತಲರ ಕೃತ್ಯಗ 9 : 25 (IRVKN)
ಆದರೆ ಸೌಲನ ಶಿಷ್ಯರು ರಾತ್ರಿಕಾಲದಲ್ಲಿ ಅವನನ್ನು ಕರೆದುಕೊಂಡುಹೋಗಿ, ಒಂದು ಪುಟ್ಟಿಯಲ್ಲಿ ಕುಳ್ಳಿರಿಸಿ, ಗೋಡೆಯ ಮಗ್ಗುಲಲ್ಲಿ ಇಳಿಸಿದರು.
ಅಪೊಸ್ತಲರ ಕೃತ್ಯಗ 9 : 26 (IRVKN)
ಅವನು ಯೆರೂಸಲೇಮಿಗೆ ಬಂದು ಶಿಷ್ಯರೊಳಗೆ ಸೇರಿಕೊಳ್ಳಬೇಕೆಂದು ಪ್ರಯತ್ನಪಟ್ಟಾಗ, ಅಲ್ಲಿ ಇದ್ದವರು ಅವನನ್ನು ಯೇಸುವಿನ ಶಿಷ್ಯನೆಂದು ನಂಬದೆ ಅವನಿಗೆ ಭಯಪಟ್ಟರು.
ಅಪೊಸ್ತಲರ ಕೃತ್ಯಗ 9 : 27 (IRVKN)
ಆದರೆ ಬಾರ್ನಬನು ಅವನನ್ನು ಕೈಹಿಡಿದು, ಅಪೊಸ್ತಲರ ಬಳಿಗೆ ಕರೆದುಕೊಂಡುಹೋಗಿ, ಅವನು ದಮಸ್ಕದ ದಾರಿಯಲ್ಲಿ ಕರ್ತನನ್ನು ಕಂಡದ್ದನ್ನೂ, ಕರ್ತನು ಅವನ ಸಂಗಡ ಮಾತನಾಡಿದ್ದನ್ನೂ, ದಮಸ್ಕದೊಳಗೆ ಯೇಸುವಿನ ಹೆಸರಿನಲ್ಲಿ ಧೈರ್ಯದಿಂದ ಪ್ರಚಾರ ಮಾಡಿದ್ದನ್ನೂ ಅವರಿಗೆ ವಿವರವಾಗಿ ಹೇಳಿದನು.
ಅಪೊಸ್ತಲರ ಕೃತ್ಯಗ 9 : 28 (IRVKN)
ಆ ಮೇಲೆ ಸೌಲನು ಯೆರೂಸಲೇಮಿನಲ್ಲಿದ್ದುಕೊಂಡು ಅವರಲ್ಲಿ ಬರುತ್ತಾ ಹೋಗುತ್ತಾ ಕರ್ತನ ಹೆಸರಿನಲ್ಲಿ ಧೈರ್ಯದಿಂದ ಬೋಧಿಸತೊಡಗಿದನು.
ಅಪೊಸ್ತಲರ ಕೃತ್ಯಗ 9 : 29 (IRVKN)
ಮತ್ತು ಗ್ರೀಕ್ ಭಾಷೆಯನ್ನಾಡುವ ಯೆಹೂದ್ಯರ ಸಂಗಡ ಮಾತನಾಡಿ ತರ್ಕಮಾಡುತ್ತಿದ್ದನು. ಆದರೆ ಅವರು ಅವನನ್ನು ಕೊಲ್ಲುವುದಕ್ಕೆ ಪ್ರಯತ್ನ ಮಾಡುತ್ತಿದ್ದರು.
ಅಪೊಸ್ತಲರ ಕೃತ್ಯಗ 9 : 30 (IRVKN)
ಇದು ಸಹೋದರರಿಗೆ ತಿಳಿದು ಬರಲು, ಅವರು ಅವನನ್ನು ಕೈಸರೈಯಕ್ಕೆ ಕರೆದುಕೊಂಡು ಹೋಗಿ, ಅಲ್ಲಿಂದ ತಾರ್ಸಕ್ಕೆ ಕಳುಹಿಸಿದರು.
ಅಪೊಸ್ತಲರ ಕೃತ್ಯಗ 9 : 31 (IRVKN)
ಅಪೊಸ್ತಲರ ಕೃತ್ಯಗ 9 : 32 (IRVKN)
ಹೀಗಿರಲಾಗಿ ಯೂದಾಯ, ಗಲಿಲಾಯ, ಸಮಾರ್ಯ ಸೀಮೆಗಳಲ್ಲಿದ್ದ ಸಭೆಯು ಸಮಾಧಾನ ಹೊಂದಿತು; ಮತ್ತು ಭಕ್ತಿಯಲ್ಲಿ ಬೆಳೆದು ಕರ್ತನ ಭಯದಲ್ಲಿ ನಡೆದು, ಪವಿತ್ರಾತ್ಮನಿಂದ ಪ್ರೋತ್ಸಾಹವನ್ನು ಹೊಂದಿ ಬೆಳೆಯುತ್ತಾ ಬಂದಿತು. ಐನೇಯನು ವಾಸಿಯಾದದ್ದು ಪೇತ್ರನು ಎಲ್ಲಾ ಕಡೆಗಳಲ್ಲಿಯೂ ಸಂಚಾರಮಾಡುತ್ತಿರುವಾಗ, ಲುದ್ದದಲ್ಲಿ ವಾಸವಾಗಿದ್ದ ದೇವಜನರ ಬಳಿಗೂ ಬಂದನು.
ಅಪೊಸ್ತಲರ ಕೃತ್ಯಗ 9 : 33 (IRVKN)
ಅಲ್ಲಿ ಪಾರ್ಶ್ವವಾಯುರೋಗಿಯಾಗಿ ಎಂಟು ವರ್ಷಗಳಿಂದ ಹಾಸಿಗೆಯ ಮೇಲೆ ಬಿದ್ದಿದ್ದ ಐನೇಯನೆಂಬ ಒಬ್ಬ ಮನುಷ್ಯನನ್ನು ಕಂಡನು.
ಅಪೊಸ್ತಲರ ಕೃತ್ಯಗ 9 : 34 (IRVKN)
ಪೇತ್ರನು ಅವನಿಗೆ, “ಐನೇಯನೇ, ಯೇಸು ಕ್ರಿಸ್ತನು ನಿನ್ನನ್ನು ವಾಸಿಮಾಡುತ್ತಾನೆ; ಎದ್ದು ನಿನ್ನ ಹಾಸಿಗೆಯನ್ನು ನೀನೇ ಹಾಸಿಕೋ” ಎಂದು ಹೇಳಿದನು. ಕೂಡಲೆ ಅವನು ಎದ್ದನು.
ಅಪೊಸ್ತಲರ ಕೃತ್ಯಗ 9 : 35 (IRVKN)
ಮತ್ತು ಲುದ್ದದಲ್ಲಿಯೂ, ಶಾರೋನಿನಲ್ಲಿಯೂ ವಾಸವಾಗಿದ್ದವರೆಲ್ಲರು ಅವನನ್ನು ನೋಡಿ, ಅವರು ಕರ್ತನ ಕಡೆಗೆ ತಿರುಗಿಕೊಂಡರು.
ಅಪೊಸ್ತಲರ ಕೃತ್ಯಗ 9 : 36 (IRVKN)
ಸತ್ತುಹೋಗಿದ್ದ ದೊರ್ಕಳೆಂಬ ಒಬ್ಬ ಶಿಷ್ಯಳನ್ನು ಬದುಕಿಸಿದ್ದು ಯೊಪ್ಪ ಪಟ್ಟಣದಲ್ಲಿ ತಬಿಥಾ ಎಂಬ ಒಬ್ಬ ಶಿಷ್ಯಳಿದ್ದಳು. ಆ ಹೆಸರಿಗೆ ಗ್ರೀಕ್ ಭಾಷೆಯಲ್ಲಿ “ದೊರ್ಕ” ಅಂದರೆ ಜಿಂಕೆ ಎಂದರ್ಥ. ಆಕೆಯು ಸತ್ಕ್ರಿಯೆಗಳನ್ನೂ, ದಾನಧರ್ಮಗಳನ್ನೂ ಬಹಳವಾಗಿ ಮಾಡುತ್ತಿದ್ದಳು.
ಅಪೊಸ್ತಲರ ಕೃತ್ಯಗ 9 : 37 (IRVKN)
ಆ ಕಾಲದಲ್ಲಿ ಆಕೆ ರೋಗಕ್ಕೆ ತುತ್ತಾಗಿ ಸತ್ತಳು. ಆಕೆಯ ಶವವನ್ನು ಸ್ನಾನಮಾಡಿಸಿ ಮೇಲಂತಸ್ತಿನಲ್ಲಿಟ್ಟರು.
ಅಪೊಸ್ತಲರ ಕೃತ್ಯಗ 9 : 38 (IRVKN)
ಯೊಪ್ಪಕ್ಕೆ ಲುದ್ದವು ಹತ್ತಿರವಾಗಿರಲಾಗಿ ಪೇತ್ರನು ಅಲ್ಲಿ ಇದ್ದಾನೆಂದು ಶಿಷ್ಯರು ಕೇಳಿ ಇಬ್ಬರು ಮನುಷ್ಯರನ್ನು ಅವನ ಬಳಿಗೆ ಕಳುಹಿಸಿ, “ತಡಮಾಡದೆ ನಮ್ಮ ಹತ್ತಿರಕ್ಕೆ ಬರಬೇಕೆಂದು” ಬೇಡಿಕೊಂಡರು.
ಅಪೊಸ್ತಲರ ಕೃತ್ಯಗ 9 : 39 (IRVKN)
ಪೇತ್ರನು ಎದ್ದು ಅವರ ಜೊತೆಯಲ್ಲಿ ಹೋದನು. ಅವನು ಬಂದ ಕೂಡಲೆ ಅವರು ಅವನನ್ನು ಮೇಲಂತಸ್ತಿಗೆ ಕರೆದುಕೊಂಡು ಹೋದರು. ಅಲ್ಲಿ ವಿಧವೆಯರೆಲ್ಲ ಅಳುತ್ತಾ, ಅವನ ಹತ್ತಿರ ನಿಂತುಕೊಂಡು ದೊರ್ಕಳು ತಮ್ಮ ಸಂಗಡ ಇದ್ದಾಗ ಮಾಡಿಕೊಟ್ಟಿದ್ದ ಒಳಂಗಿಗಳನ್ನೂ, ಮೇಲಂಗಿಗಳನ್ನೂ ತೋರಿಸಿದರು.
ಅಪೊಸ್ತಲರ ಕೃತ್ಯಗ 9 : 40 (IRVKN)
ಪೇತ್ರನು ಅವರೆಲ್ಲರನ್ನು ಹೊರಕ್ಕೆ ಕಳುಹಿಸಿ, ಮೊಣಕಾಲೂರಿ ಪ್ರಾರ್ಥನೆಮಾಡಿ ಶವದ ಕಡೆಗೆ ತಿರುಗಿಕೊಂಡು; “ತಬಿಥಾ, ಎದ್ದೇಳು” ಅಂದನು. ಆಕೆಯು ಕಣ್ಣು ತೆರೆದು ಪೇತ್ರನನ್ನು ನೋಡಿ ಎದ್ದು ಕುಳಿತುಕೊಂಡಳು.
ಅಪೊಸ್ತಲರ ಕೃತ್ಯಗ 9 : 41 (IRVKN)
ಅವನು ಆಕೆಯನ್ನು ಕೈಹಿಡಿದು ಎಬ್ಬಿಸಿ, ಅಲ್ಲಿದ್ದ ವಿಧವೆಯರನ್ನು ಮತ್ತು ದೇವಜನರನ್ನೂ ಕರೆದು, ಜೀವಿತಳಾದ ಆಕೆಯನ್ನು ಅವರೆದುರಿಗೆ ನಿಲ್ಲಿಸಿದನು.
ಅಪೊಸ್ತಲರ ಕೃತ್ಯಗ 9 : 42 (IRVKN)
ಈ ಸಂಗತಿಯು ಯೊಪ್ಪದಲ್ಲೆಲ್ಲಾ ಹರಡಿ ಅನೇಕರು ಕರ್ತನ ಮೇಲೆ ನಂಬಿಕೆಯಿಟ್ಟರು.
ಅಪೊಸ್ತಲರ ಕೃತ್ಯಗ 9 : 43 (IRVKN)
ಆ ಮೇಲೆ ಪೇತ್ರನು ಯೊಪ್ಪದಲ್ಲಿ ಚರ್ಮದ ಕೆಲಸ ಮಾಡುವ ಸೀಮೋನನೆಂಬುವನ ಬಳಿಯಲ್ಲಿ ಬಹಳ ದಿನಗಳ ವರೆಗೂ ಇದ್ದನು.
❮
❯