2 ಸಮುವೇಲನು 6 : 1 (IRVKN)
ದಾವೀದನು ಯೆಹೋವನ ಮಂಜೂಷವನ್ನು ಯೆರೂಸಲೇಮಿಗೆ ತಂದದ್ದು ಅನಂತರ ದಾವೀದನು ಇಸ್ರಾಯೇಲರಲ್ಲಿ ಮೂವತ್ತು ಸಾವಿರ ಮಂದಿ ಶ್ರೇಷ್ಠ ಸೈನಿಕರನ್ನು ಆರಿಸಿಕೊಂಡು ಅವರ ಸಂಗಡ
2 ಸಮುವೇಲನು 6 : 2 (IRVKN)
ದೇವರ ಮಂಜೂಷವನ್ನು ತರುವುದಕ್ಕಾಗಿ ಯೆಹೂದ ದೇಶದ ಬಾಳಾ ಎಂಬಲ್ಲಿಗೆ ಹೋದನು. ಆ ಮಂಜೂಷವು ದೇವನಾಮದಿಂದ ಅಂದರೆ ಕೆರೂಬಿಯರ ನಡುವೆ ಆಸೀನನಾಗಿರುವ ಸೇನಾಧೀಶ್ವರನಾದ ಯೆಹೋವನ ನಾಮದಿಂದ ಪ್ರಸಿದ್ಧವಾಗಿತ್ತು.
2 ಸಮುವೇಲನು 6 : 3 (IRVKN)
ಅವರು ದೇವರ ಮಂಜೂಷವನ್ನು ಗುಡ್ಡದ ಮೇಲಿರುವ ಅಬೀನಾದಾಬನ ಮನೆಯಿಂದ ಹೊರಗೆ ತಂದು, ಅದನ್ನು ಒಂದು ಹೊಸ ಬಂಡಿಯ ಮೇಲೆ ಏರಿಸಿದರು. ಅಬೀನಾದಾಬನ ಮಕ್ಕಳಾದ ಉಜ್ಜನೂ ಮತ್ತು ಅಹಿಯೋವನೂ ಬಂಡಿಯನ್ನು ಮಾರ್ಗ ತೋರಿಸುತ್ತಾ ಮುನ್ನಡೆಸಿದರು.
2 ಸಮುವೇಲನು 6 : 4 (IRVKN)
ಗುಡ್ಡದ ಮೇಲೆ ವಾಸವಾಗಿದ್ದ ಅಬೀನಾದಾಬನ ಮನೆಯಿಂದ ತೆಗೆಯಲ್ಪಟ್ಟ ದೇವರ ಮಂಜೂಷದ ಮುಂದೆ ಅಹಿಯೋವನೂ ಹೋಗುತ್ತಿದ್ದನು.
2 ಸಮುವೇಲನು 6 : 5 (IRVKN)
ದಾವೀದನೂ ಎಲ್ಲಾ ಇಸ್ರಾಯೇಲರೂ ಶಂಕುಮರದಿಂದ (ಸೈಪ್ರಸ್ ಮರ) ಮಾಡಿದ ಕಿನ್ನರಿ, ಸ್ವರಮಂಡಲ, ದಮ್ಮಡಿ, ಝಲ್ಲರಿ, ತಾಳ ಇವುಗಳನ್ನು ಬಾರಿಸಿಕೊಂಡು ಪೂರ್ಣಾಸಕ್ತಿಯಿಂದ ಗೀತೆಗಳನ್ನು ಹಾಡುತ್ತಾ, ಯೆಹೋವನ ಮುಂದೆ ನರ್ತನ ಮಾಡುತ್ತಾ ಹೋದರು.
2 ಸಮುವೇಲನು 6 : 6 (IRVKN)
ಅವರು ನಾಕೋನನ ಕಣಕ್ಕೆ ಬಂದಾಗ ಎತ್ತುಗಳು ಎಡವಿದ್ದರಿಂದ ಉಜ್ಜನು ಕೈಚಾಚಿ ದೇವರ ಮಂಜೂಷವನ್ನು ಹಿಡಿದನು.
2 ಸಮುವೇಲನು 6 : 7 (IRVKN)
ಆಗ ಯೆಹೋವನು ಉಜ್ಜನ ಮೇಲೆ ಕೋಪಗೊಂಡು, ಈ ತಪ್ಪಿಗೆ ಅವನನ್ನು ಸಂಹರಿಸಿದನು. ಅವನು ಅಲ್ಲೇ ದೇವರ ಮಂಜೂಷದ ಬಳಿಯಲ್ಲಿ ಸತ್ತನು.
2 ಸಮುವೇಲನು 6 : 8 (IRVKN)
ಯೆಹೋವನು ಉಜ್ಜನನ್ನು ಹತ್ಯಮಾಡಿದ್ದರಿಂದ ದಾವೀದನು ಸಿಟ್ಟುಗೊಂಡು ಆ ಸ್ಥಳಕ್ಕೆ “ಪೆರೆಚ್ ಉಜ್ಜಾ” ಎಂದು ಹೆಸರಿಟ್ಟನು. ಅದಕ್ಕೆ ಇಂದಿನ ವರೆಗೂ ಅದೇ ಹೆಸರಿರುತ್ತದೆ.
2 ಸಮುವೇಲನು 6 : 9 (IRVKN)
ಆ ದಿನ ದಾವೀದನು ಯೆಹೋವನಿಗೆ ಭಯಪಟ್ಟು, “ಯೆಹೋವನ ಮಂಜೂಷವನ್ನು ನಾನಿರುವಲ್ಲಿಗೆ ತೆಗೆದುಕೊಂಡು ಹೋಗುವುದು ಹೇಗೆ?” ಎಂದುಕೊಂಡು,
2 ಸಮುವೇಲನು 6 : 10 (IRVKN)
ಅದನ್ನು ದಾವೀದನಗರಕ್ಕೆ ತರಲೊಲ್ಲದೆ ಗತ್ ಊರಿನ ಓಬೇದೆದೋಮನ ಮನೆಗೆ ಕಳುಹಿಸಿದನು.
2 ಸಮುವೇಲನು 6 : 11 (IRVKN)
ಯೆಹೋವನ ಮಂಜೂಷವು ಗತ್ ಊರಿನ ಓಬೇದೆದೋಮನ ಮನೆಯಲ್ಲಿ ಮೂರು ತಿಂಗಳು ಇತ್ತು. ಆ ದಿನಗಳಲ್ಲಿ ಯೆಹೋವನು ಅವನನ್ನೂ ಅವನ ಮನೆಯವರನ್ನೂ ಆಶೀರ್ವದಿಸಿದನು.
2 ಸಮುವೇಲನು 6 : 12 (IRVKN)
ಯೆಹೋವನು ಹೀಗೆ ಮಂಜೂಷದ ದೆಸೆಯಿಂದ ಓಬೇದೆದೋಮನನ್ನೂ ಅವನಿಗಿರುವುದೆಲ್ಲವನ್ನೂ ಆಶೀರ್ವದಿಸಿದ್ದಾನೆಂಬ ವರ್ತಮಾನವು ದಾವೀದನಿಗೆ ಮುಟ್ಟಿದಾಗ, ಅವನು ಹೋಗಿ ಓಬೇದೆದೋಮನ ಮನೆಯಲ್ಲಿದ್ದ ದೇವರ ಮಂಜೂಷವನ್ನು ಉತ್ಸಾಹದಿಂದ ದಾವೀದನಗರಕ್ಕೆ ತಂದನು.
2 ಸಮುವೇಲನು 6 : 13 (IRVKN)
ಯೆಹೋವನ ಮಂಜೂಷವನ್ನು ಹೊತ್ತವರು ಆರು ಹೆಜ್ಜೆ ನಡೆದ ನಂತರ, ದಾವೀದನು ಒಂದು ಎತ್ತನ್ನೂ ಕೊಬ್ಬಿದ ಕರುವನ್ನೂ ಯಜ್ಞಮಾಡಿದನು.
2 ಸಮುವೇಲನು 6 : 14 (IRVKN)
ದಾವೀದನು ನಾರಿನ ಏಫೋದನ್ನು ಧರಿಸಿಕೊಂಡವನಾಗಿ, ಯೆಹೋವನ ಸನ್ನಿಧಿಯಲ್ಲಿ ಪೂರ್ಣಾಸಕ್ತಿಯಿಂದ ಕುಣಿದಾಡಿದನು.
2 ಸಮುವೇಲನು 6 : 15 (IRVKN)
ಹೀಗೆ ದಾವೀದನೂ ಎಲ್ಲಾ ಇಸ್ರಾಯೇಲರೂ ಅರ್ಭಟಿಸುತ್ತಾ, ತುತ್ತೂರಿ ಊದುತ್ತಾ, ಯೆಹೋವನ ಮಂಜೂಷವನ್ನು ತಂದರು.
2 ಸಮುವೇಲನು 6 : 16 (IRVKN)
ಮಂಜೂಷವು ದಾವೀದನಗರದೊಳಗೆ ಬರುತ್ತಿರುವಾಗ ಸೌಲನ ಮಗಳಾದ ಮೀಕಲಳು ಕಿಟಿಕಿಯಿಂದ ಇಣಿಕಿ ನೋಡಿ, ದಾವೀದನು ಯೆಹೋವನ ಮುಂದೆ ಜಿಗಿಯುತ್ತಾ, ಕುಣಿಯುತ್ತಾ ಇರುವುದನ್ನು ಕಂಡು, ಮನಸ್ಸಿನಲ್ಲಿ ಅವನನ್ನು ತಿರಸ್ಕರಿಸಿದಳು
2 ಸಮುವೇಲನು 6 : 17 (IRVKN)
ಜನರು ಯೆಹೋವನ ಮಂಜೂಷವನ್ನು ತಂದು ದಾವೀದನು ಹಾಕಿಸಿದ ಗುಡಾರದೊಳಗೆ ನಿಯಮಿತ ಸ್ಥಳದಲ್ಲಿಟ್ಟರು. ಆಗ ದಾವೀದನು ಯೆಹೋವನಿಗೋಸ್ಕರ ಸರ್ವಾಂಗಹೋಮಗಳನ್ನು, ಸಮಾಧಾನಯಜ್ಞಗಳನ್ನೂ ಸಮರ್ಪಿಸಿದನು.
2 ಸಮುವೇಲನು 6 : 18 (IRVKN)
ಇದಾದ ಮೇಲೆ ಅವನು ಸೇನಾಧೀಶ್ವರನಾದ ಯೆಹೋವನ ಹೆಸರಿನಲ್ಲಿ ಎಲ್ಲರನ್ನೂ ಆಶೀರ್ವದಿಸಿದನು.
2 ಸಮುವೇಲನು 6 : 19 (IRVKN)
ಸಭೆಯಾಗಿ ಸೇರಿ ಬಂದಿರುವ ಇಸ್ರಾಯೇಲರ ಪ್ರತಿಯೊಬ್ಬ ಗಂಡಸಿಗೂ ಹೆಂಗಸಿಗೂ ಒಂದು ರೊಟ್ಟಿಯನ್ನೂ, ಒಂದು ತುಂಡು ಮಾಂಸವನ್ನೂ ಮತ್ತು ದ್ರಾಕ್ಷಿ ಹಣ್ಣಿನ ಉಂಡೆಯನ್ನೂ ಕೊಡಿಸಿದರು. ತರುವಾಯ ಜನರೆಲ್ಲರೂ ತಮ್ಮ ತಮ್ಮ ಮನೆಗಳಿಗೆ ಹೋದರು.
2 ಸಮುವೇಲನು 6 : 20 (IRVKN)
ಅನಂತರ ದಾವೀದನು ತನ್ನ ಮನೆಯವರನ್ನು ಆಶೀರ್ವದಿಸುವುದಕ್ಕೆ ಹೋದಾಗ ಸೌಲನ ಮಗಳಾದ ಮೀಕಲಳು ಅವನೆದುರಿಗೆ ಬಂದು, “ಈ ಹೊತ್ತು ಇಸ್ರಾಯೇಲರ ಅರಸನು ಎಂಥ ಗೌರವದಿಂದ ನಡೆದುಕೊಂಡನು. ಹುಚ್ಚರಲ್ಲೊಬ್ಬನಂತೆ ತನ್ನ ಜನರ ದಾಸಿಯರ ಮುಂದೆ ಬೆತ್ತಲೆಯಾಗಿದ್ದನಲ್ಲಾ” ಅಂದಳು.
2 ಸಮುವೇಲನು 6 : 21 (IRVKN)
ಆಗ ದಾವೀದನು ಮೀಕಲಳಿಗೆ, “ಇದನ್ನು ಯೆಹೋವನ ಸನ್ನಿಧಿಯಲ್ಲಿ ಮಾಡಿದ್ದೇನಷ್ಟೇ, ನಿನ್ನ ತಂದೆಯನ್ನೂ ಅವರ ಮನೆಯವರೆಲ್ಲರನ್ನೂ ಬಿಟ್ಟು, ನನ್ನನ್ನೇ ಆರಿಸಿಕೊಂಡು, ತನ್ನ ಪ್ರಜೆಗಳಾದ ಇಸ್ರಾಯೇಲರ ಅರಸನನ್ನಾಗಿ ಮಾಡಿದ ಯೆಹೋವನ ಮುಂದೆ ಇನ್ನೂ ಸಂತೋಷದಿಂದ ಕುಣಿದಾಡುವೆನು.
2 ಸಮುವೇಲನು 6 : 22 (IRVKN)
ಇದಕ್ಕಿಂತ ಇನ್ನೂ ಹೆಚ್ಚಾಗಿ ತಿರಸ್ಕಾರ ಹೊಂದುವುದಕ್ಕೂ ನನ್ನನ್ನು ಅಲ್ಪನೆಂದು ಭಾವಿಸಿಕೊಳ್ಳುವುದಕ್ಕೂ ಸಿದ್ಧನಾಗಿದ್ದೇನೆ. ನೀನು ಹೇಳಿದ ದಾಸಿಯರಾದರೋ ಹೇಗೂ ನನ್ನನ್ನು ಸನ್ಮಾನಿಸುವರು” ಎಂದನು.
2 ಸಮುವೇಲನು 6 : 23 (IRVKN)
ಸೌಲನ ಮಗಳಾದ ಮೀಕಲಳಿಗೆ ಜೀವದಿಂದಿರುವ ವರೆಗೂ ಮಕ್ಕಳೇ ಆಗಲಿಲ್ಲ.

1 2 3 4 5 6 7 8 9 10 11 12 13 14 15 16 17 18 19 20 21 22 23