2 ಸಮುವೇಲನು 3 : 2 (IRVKN)
ಬಹು ದಿನಗಳವರೆಗೆ ಸೌಲನ ವಂಶದವರಿಗೂ ಮತ್ತು ದಾವೀದನ ವಂಶದವರಿಗೂ ಯುದ್ಧ ನಡೆಯಿತು. ದಾವೀದನು ಬಲಗೊಳ್ಳುತ್ತಾ ಬಂದನು. ಸೌಲನ ವಂಶವು ದುರ್ಬಲವಾಗುತ್ತಾ ಬಂತು. ದಾವೀದನ ಮಕ್ಕಳು ಹೆಬ್ರೋನಿನಲ್ಲಿರುವಾಗ ದಾವೀದನಿಗೆ ಹುಟ್ಟಿದ ಮಕ್ಕಳು; ಚೊಚ್ಚಲ ಮಗನು ಅಮ್ನೋನನು, ಇವನು ಇಜ್ರೇಲಿನವಳಾದ ಅಹೀನೋವಮಳಲ್ಲಿ ಹುಟ್ಟಿದವನು.
2 ಸಮುವೇಲನು 3 : 3 (IRVKN)
ಎರಡನೆಯವನು ಕಿಲಾಬನು. ಇವನು ಕರ್ಮೆಲ್ಯನಾದ ನಾಬಾಲನ ಹೆಂಡತಿಯಾಗಿದ್ದ ಅಬೀಗೈಲಳಲ್ಲಿ ಹುಟ್ಟಿದವನು. ಮೂರನೆಯವನು ಅಬ್ಷಾಲೋಮನು. ಇವನು ಗೆಷೂರಿನ ಅರಸನಾದ ತಲ್ಮೈ ಎಂಬುವನ ಮಗಳಾದ ಮಾಕಳ ಪುತ್ರನು.
2 ಸಮುವೇಲನು 3 : 4 (IRVKN)
ನಾಲ್ಕನೆಯವನು ಅದೋನೀಯನು. ಇವನು ಹಗ್ಗೀತಳ ಮಗನು. ಐದನೆಯವನು ಶೆಫಟ್ಯನು, ಇವನು ಅಬೀಟಲಳ ಮಗನು.
2 ಸಮುವೇಲನು 3 : 5 (IRVKN)
ಆರನೆಯವನು ಇತ್ರಾಮನು. ಇವನು ದಾವೀದನಿಗೆ ಅವನ ಹೆಂಡತಿಯಾದ ಎಗ್ಲಳಲ್ಲಿ ಹುಟ್ಟಿದವನು. ಹೆಬ್ರೋನಿನಲ್ಲಿರುವಾಗ ದಾವೀದನಿಗೆ ಹುಟ್ಟಿದ ಮಕ್ಕಳು ಇವರೇ.
2 ಸಮುವೇಲನು 3 : 6 (IRVKN)
ಅಬ್ನೇರನು ದಾವೀದನ ಪಕ್ಷಕ್ಕೆ ಸೇರಿದ್ದು ಸೌಲನ ವಂಶದವರಿಗೂ ದಾವೀದನ ವಂಶದವರಿಗೂ ಯುದ್ಧ ನಡೆಯುತ್ತಿರುವಾಗ ಸೌಲನ ವಂಶದವರಲ್ಲಿ ಅಬ್ನೇರನೇ ಬಲಿಷ್ಠನಾಗಿದ್ದನು.
2 ಸಮುವೇಲನು 3 : 7 (IRVKN)
ಅಯಾಹನ ಮಗಳಾದ ರಿಚ್ಪಳು ಸೌಲನ ಉಪಪತ್ನಿಯಾಗಿದ್ದಳು. ಒಂದು ದಿನ ಈಷ್ಬೋಶೆತನು ಅಬ್ನೇರನನ್ನು, “ನೀನು ನನ್ನ ತಂದೆಯ ಉಪಪತ್ನಿಯರನ್ನು ಕೂಡಿದ್ದೇಕೆ?” ಎಂದು ಕೇಳಿದನು.
2 ಸಮುವೇಲನು 3 : 8 (IRVKN)
ಅಬ್ನೇರನು ಈ ಮಾತನ್ನು ಕೇಳಿ ಕೋಪಗೊಂಡು ಈಷ್ಬೋಶೆತನಿಗೆ, “ಈ ವರೆಗೆ ನಾನು ನಿನ್ನ ತಂದೆಯಾದ ಸೌಲನ ಕುಟುಂಬಕ್ಕೂ ಅವನ ಬಂಧು ಮಿತ್ರರಿಗೂ ದಯೆತೋರಿಸುತ್ತಿದ್ದೇನಲ್ಲಾ. ನಿನ್ನನ್ನು ದಾವೀದನ ಕೈಗೆ ಒಪ್ಪಿಸಿಕೊಡಲಿಲ್ಲವಷ್ಟೆ. ಈಗ ಈ ಹೆಂಗಸಿನ ದೆಸೆಯಿಂದ ನನ್ನಲ್ಲಿ ತಪ್ಪುಹಿಡಿಯುವುದಕ್ಕೆ ನಾನೇನು ಯೆಹೂದ ನಾಯಿಯ ತಲೆಯೋ?
2 ಸಮುವೇಲನು 3 : 9 (IRVKN)
ನಾನು ಅರಸುತನವನ್ನು ಸೌಲನ ಕುಟುಂಬದಿಂದ ತೆಗೆದು ದಾನಿನಿಂದ ಬೇರ್ಷೆಬದ ವರೆಗಿರುವ ಎಲ್ಲಾ ಇಸ್ರಾಯೇಲರಲ್ಲಿಯೂ, ಯೆಹೂದ್ಯರಲ್ಲಿಯೂ ದಾವೀದನ ಸಿಂಹಾಸನವನ್ನು ಸ್ಥಿರಪಡಿಸಿ,
2 ಸಮುವೇಲನು 3 : 10 (IRVKN)
ಯೆಹೋವನಾದ ದೇವರು ದಾವೀದನಿಗೆ ಮಾಡಿದ ವಾಗ್ದಾನವನ್ನು ನೆರವೇರಿಸದೆ ಹೋದರೆ, ಆತನು ನನಗೆ ಬೇಕಾದದ್ದನ್ನು ಮಾಡಲಿ” ಅಂದನು.
2 ಸಮುವೇಲನು 3 : 11 (IRVKN)
ಈಷ್ಬೋಶೆತನು ಅವನಿಗೆ ಹೆದರಿ ಏನೂ ಉತ್ತರಕೊಡಲಾರದೆ ಹೋದನು.
2 ಸಮುವೇಲನು 3 : 12 (IRVKN)
ಅನಂತರ ಅಬ್ನೇರನು ದಾವೀದನ ಬಳಿಗೆ ದೂತರನ್ನು ಕಳುಹಿಸಿ ಅವನಿಗೆ, “ದೇಶವು ಯಾರದು? ನೀನು ನನ್ನೊಡನೆ ಒಡಂಬಡಿಕೆ ಮಾಡಿಕೊಂಡರೆ ಇಸ್ರಾಯೇಲರನ್ನೆಲ್ಲಾ ನಿನ್ನ ಕಡೆಗೆ ತಿರುಗಿಸುವ ಪ್ರಯತ್ನದಲ್ಲಿ ನಾನು ನಿನ್ನ ಸಂಗಡ ಕೈಜೋಡಿಸುತ್ತೇನೆ” ಎಂದು ಹೇಳಿಸಿದನು.
2 ಸಮುವೇಲನು 3 : 13 (IRVKN)
ಅದಕ್ಕೆ ದಾವೀದನು, “ಒಳ್ಳೆಯದು, ನಿನ್ನ ಸಂಗಡ ಒಡಂಬಡಿಕೆ ಮಾಡಿಕೊಳ್ಳುತ್ತೇನೆ. ಆದರೆ ನಿನ್ನಿಂದ ನನಗೆ ಒಂದು ಸಹಾಯ ಬೇಕು. ನನ್ನನ್ನು ನೋಡುವುದಕ್ಕೆ ಬರುವಾಗ ಸೌಲನ ಮಗಳಾದ ಮೀಕಲಳನ್ನು ಕರೆದುಕೊಂಡು ಬರಬೇಕು. ಹಾಗೆ ಕರೆದುಕೊಂಡು ಬಾರದಿದ್ದರೆ, ನೀನು ನನ್ನ ಮುಖವನ್ನು ನೋಡಕೂಡದು” ಎಂದು ಉತ್ತರಕೊಟ್ಟನು.
2 ಸಮುವೇಲನು 3 : 14 (IRVKN)
ಆಗ ದಾವೀದನು ಸೌಲನ ಮಗನಾದ ಈಷ್ಬೋಶೆತನ ಬಳಿಗೆ ದೂತರನ್ನು ಕಳುಹಿಸಿ ಅವನಿಗೆ, “ನಾನು ನೂರು ಮಂದಿ ಫಿಲಿಷ್ಟಿಯರ ಮುಂದೊಗಲನ್ನು ತಂದು ಕೊಟ್ಟು ವರಿಸಿದ ನನ್ನ ಹೆಂಡತಿಯಾದ ಮೀಕಲಳನ್ನು ನನಗೊಪ್ಪಿಸು” ಎಂಬುದಾಗಿ ಆಜ್ಞಾಪಿಸಿದನು.
2 ಸಮುವೇಲನು 3 : 15 (IRVKN)
ಈಷ್ಬೋಶೆತನು ಲಯಿಷನ ಮಗನೂ ಆಕೆಯ ಗಂಡನೂ ಆದ ಪಲ್ಟೀಯೇಲನ ಮನೆಗೆ ಆಳುಗಳನ್ನು ಕಳುಹಿಸಿ ಆಕೆಯನ್ನು ಕರೆಯಿಸಿದನು.
2 ಸಮುವೇಲನು 3 : 16 (IRVKN)
ಆಗ ಪಲ್ಟೀಯೇಲನು ಬಹುರೀಮಿನವರೆಗೆ ಅಳುತ್ತಾ ಆಕೆಯ ಹಿಂದೆ ಹೋದನು. ಅನಂತರ ಅಬ್ನೇರನು ಅವನಿಗೆ, “ಹಿಂದಿರುಗಿ ಮನೆಗೆ ಹೋಗು” ಎಂದು ಹೇಳಲು ಅವನು ಹಿಂದಿರುಗಿ ಹೋದನು.
2 ಸಮುವೇಲನು 3 : 17 (IRVKN)
ಅಬ್ನೇರನು ಇಸ್ರಾಯೇಲರ ಹಿರಿಯರಿಗೆ, “ದಾವೀದನು ನಮ್ಮ ಅರಸನಾಗಬೇಕೆಂದು ನೀವು ಮೊದಲು ಅಪೇಕ್ಷಿಸಿದಂತೆಯೇ ಈಗ ಮಾಡಿರಿ.
2 ಸಮುವೇಲನು 3 : 18 (IRVKN)
ಯೆಹೋವನು ದಾವೀದನ ವಿಷಯವಾಗಿ ನನ್ನ ಸೇವಕನಾದ ದಾವೀದನ ಮುಖಾಂತರವಾಗಿ ನನ್ನ ಪ್ರಜೆಗಳಾದ ಇಸ್ರಾಯೇಲ್ಯರನ್ನು ಫಿಲಿಷ್ಟಿಯರ ಕೈಗೂ ಬೇರೆ ಎಲ್ಲಾ ಶತ್ರುಗಳ ಕೈಗೂ ತಪ್ಪಿಸುವನೆಂದು ನುಡಿದಿದ್ದಾನಲ್ಲಾ” ಎಂದು ಹೇಳಿದನು.
2 ಸಮುವೇಲನು 3 : 19 (IRVKN)
ಅವನು ಬೆನ್ಯಾಮೀನ್ಯರಿಗೂ ಇದೇ ಪ್ರಕಾರ ಹೇಳಿದನು. ತರುವಾಯ ಅವನು ಇಸ್ರಾಯೇಲರೂ ಬೆನ್ಯಾಮೀನ್ಯರೆಲ್ಲರೂ ಒಪ್ಪಿಕೊಂಡು ಹೇಳಿದ ಮಾತುಗಳನ್ನು ದಾವೀದನಿಗೆ ತಿಳಿಸುವುದಕ್ಕೋಸ್ಕರ ಹೆಬ್ರೋನಿಗೆ ಹೊರಟನು.
2 ಸಮುವೇಲನು 3 : 20 (IRVKN)
ಅವನು ಹೆಬ್ರೋನಿಗೆ ಬಂದಾಗ ದಾವೀದನು ಅವನಿಗೂ ಅವನ ಸಂಗಡ ಬಂದಿದ್ದ ಇಪ್ಪತ್ತು ಜನರಿಗೂ ಔತಣ ಮಾಡಿಸಿದನು.
2 ಸಮುವೇಲನು 3 : 21 (IRVKN)
ಅಬ್ನೇರನು ದಾವೀದನಿಗೆ, “ನಾನು ಹೊರಟುಹೋಗಿ ಇಸ್ರಾಯೇಲರನ್ನೆಲ್ಲಾ ಕೂಡಿಸಿ, ನನ್ನ ಒಡೆಯನಾದ ಅರಸನ ಬಳಿಗೆ ಕರೆದುಕೊಂಡು ಬರುವೆನು. ಅವರು ನಿನ್ನ ಸಂಗಡ ಒಡಂಬಡಿಕೆ ಮಾಡಿಕೊಳ್ಳುವರು. ನೀನು ನಿನ್ನ ಅಪೇಕ್ಷೆಯಂತೆ ಎಲ್ಲರ ಮೇಲೆ ದೊರೆತನಮಾಡಬಹುದು” ಎಂದು ಹೇಳಲು ದಾವೀದನು ಅವನನ್ನು ಸಮಾಧಾನದಿಂದ ಕಳುಹಿಸಿಕೊಟ್ಟನು.
2 ಸಮುವೇಲನು 3 : 22 (IRVKN)
ಅಬ್ನೇರನ ಹತ್ಯೆ ಸುಲಿಗೆ ಮಾಡುವುದಕ್ಕಾಗಿ ಹೋಗಿದ್ದ ದಾವೀದನ ಭಟರು ಯೋವಾಬನೂ ದೊಡ್ಡ ಕೊಳ್ಳೆಯೊಡನೆ ಅಷ್ಟರಲ್ಲಿ ಹಿಂತಿರುಗಿ ಬಂದರು. ಅವನು ಹೆಬ್ರೋನಿಗೆ ಬಂದಾಗ ಅಬ್ನೇರನು ದಾವೀದನ ಹತ್ತಿರ ಇರಲಿಲ್ಲ. ದಾವೀದನು ಅವನನ್ನು ಸುರಕ್ಷಿತವಾಗಿ ಕಳುಹಿಸಿಬಿಟ್ಟಿದ್ದನು.
2 ಸಮುವೇಲನು 3 : 23 (IRVKN)
ಸೈನ್ಯಸಹಿತವಾಗಿ ಹಿಂದಿರುಗಿ ಬಂದ ಯೋವಾಬನು ನೇರನ ಮಗನಾದ ಅಬ್ನೇರನು ಬಂದಿದ್ದನೆಂದೂ, ಅರಸನು ಅವನನ್ನು ಸುರಕ್ಷಿತವಾಗಿ ಕಳುಹಿಸಿದನೆಂದೂ ತಿಳಿದು, ಅರಸನ ಬಳಿಗೆ ಹೋಗಿ,
2 ಸಮುವೇಲನು 3 : 24 (IRVKN)
“ನೀನು ಮಾಡಿದ್ದೇನು? ಅಬ್ನೇರನು ನಿನ್ನ ಬಳಿಗೆ ಬಂದಿದ್ದನಂತೆ. ನೀನು ಅವನನ್ನು ಸುರಕ್ಷಿತವಾಗಿ ಕಳುಹಿಸಿಬಿಟ್ಟಿದ್ದೇಕೆ?
2 ಸಮುವೇಲನು 3 : 25 (IRVKN)
ನೇರನ ಮಗನಾದ ಅಬ್ನೇರನ ಸಂಗತಿ ನಿನಗೆ ಗೊತ್ತಿಲ್ಲವೋ? ಅವನು ನಿನ್ನನ್ನು ವಂಚಿಸುವುದಕ್ಕೂ ನಿನ್ನ ಸ್ಥಿತಿಗತಿಗಳನ್ನು ತಿಳಿದುಕೊಳ್ಳುವುದಕ್ಕೂ ನೀನು ಏನೇನು ಮಾಡುತ್ತಿರುತ್ತೀ ಎಂಬುದನ್ನು ಕಂಡುಹಿಡಿಯುವುದಕ್ಕೂ ಬಂದಿದ್ದನಷ್ಟೇ” ಎಂದು ಹೇಳಿ,
2 ಸಮುವೇಲನು 3 : 26 (IRVKN)
ಯೋವಾಬನು ದಾವೀದನನ್ನು ಬಿಟ್ಟು, ಹೊರಗೆ ಹೋಗಿ, ಅಬ್ನೇರನನ್ನು ಕರೆತರುವಂತೆ ದೂತರನ್ನು ಕಳುಹಿಸಿದನು. ಇವರು ಹೋಗಿ ಸಿರಾ ಬಾವಿಯ ಬಳಿಯಿಂದ ಅವನನ್ನು ಕರೆದುಕೊಂಡು ಬಂದರು. ಇದು ದಾವೀದನಿಗೆ ಗೊತ್ತಿರಲಿಲ್ಲ.
2 ಸಮುವೇಲನು 3 : 27 (IRVKN)
ಅಬ್ನೇರನು ಹೆಬ್ರೋನಿಗೆ ಬಂದಾಗ ಯೋವಾಬನು ಅವನನ್ನು ರಹಸ್ಯ ಸಂಭಾಷಣೆಗೋ ಎಂಬಂತೆ ಊರಬಾಗಿಲಿನೊಳಗೆ ಕರೆದುಕೊಂಡು ಹೋಗಿ ತನ್ನ ತಮ್ಮನಾದ ಅಸಾಹೇಲನನ್ನು ಕೊಂದದ್ದಕ್ಕೆ ಪ್ರತಿಯಾಗಿ ಅವನನ್ನು ಹೊಟ್ಟೆಯಲ್ಲಿ ತಿವಿದು ಕೊಂದನು.
2 ಸಮುವೇಲನು 3 : 28 (IRVKN)
ಸ್ವಲ್ಪ ಹೊತ್ತಾದ ಮೇಲೆ ಈ ವರ್ತಮಾನವು ದಾವೀದನಿಗೆ ಮುಟ್ಟಿತು. ಆಗ ಅವನು, “ನೇರನ ಮಗನಾದ ಅಬ್ನೇರನ ರಕ್ತಾಪರಾಧಕ್ಕೆ ನಾನೂ, ನನ್ನ ರಾಜ್ಯವೂ ಯೆಹೋವನ ಮುಂದೆ ಸದಾ ನಿರ್ದೋಷಿಗಳು.
2 ಸಮುವೇಲನು 3 : 29 (IRVKN)
ಈ ಅಪರಾಧವು ಯೋವಾಬನ ಮೇಲೆಯೂ ಅವನ ಸಂತಾನದವರ ಮೇಲೆಯೂ ಇರಲಿ. ಅವನ ಮನೆಯಲ್ಲಿ ಮೇಹಸ್ರಾವವುಳ್ಳವರೂ (ರಕ್ತ, ಕೀವುಸ್ರವಿಸುವ ಚರ್ಮ ರೋಗ), ಕುಷ್ಠರೋಗಿಗಳೂ, ಕುಂಟರೂ, ಕತ್ತಿಯಿಂದ ಹತರಾಗುವವರೂ, ಭಿಕ್ಷೇ ಬೇಡುವವರು ಇದ್ದೇ ಇರಲಿ” ಅಂದನು.
2 ಸಮುವೇಲನು 3 : 30 (IRVKN)
ಅಬ್ನೇರನು ಗಿಬ್ಯೋನಿನ ಸಮೀಪದಲ್ಲಾದ ಯುದ್ಧದಲ್ಲಿ ಯೋವಾಬ ಅಬೀಷೈಯರ ತಮ್ಮನಾದ ಅಸಾಹೇಲನನ್ನು ಸಾಯಿಸಿದ್ದರಿಂದ ಅವರು ಇವನನ್ನು ಕೊಂದು ಹಾಕಿದರು.
2 ಸಮುವೇಲನು 3 : 31 (IRVKN)
ದಾವೀದನು ಅಬ್ನೇರನಿಗಾಗಿ ಶೋಕಿಸಿದ್ದು ಅರಸನಾದ ದಾವೀದನು ಯೋವಾಬನಿಗೂ ಅವನ ಸಂಗಡ ಇದ್ದ ಜನರಿಗೂ, “ನಿಮ್ಮ ಬಟ್ಟೆಗಳನ್ನು ಹರಿದುಕೊಂಡು, ಗೋಣಿತಟ್ಟುಗಳನ್ನು ಕಟ್ಟಿಕೊಂಡು, ಗೋಳಾಡುತ್ತಾ ಅಬ್ನೇರನ ಶವದ ಮುಂದೆ ನಡೆಯಿರಿ” ಎಂದು ಆಜ್ಞಾಪಿಸಿ ತಾನು ಶವಯಾತ್ರೆ ಹಿಂದೆ ಹೋದನು.
2 ಸಮುವೇಲನು 3 : 32 (IRVKN)
ಅಬ್ನೇರನ ಶವವನ್ನು ಹೆಬ್ರೋನಿನಲ್ಲಿ ಸಮಾಧಿಮಾಡಿದರು. ಅರಸನು ಅವನ ಸಮಾಧಿಯ ಹತ್ತಿರ ನಿಂತು ಗಟ್ಟಿಯಾಗಿ ಅತ್ತನು. ಜನರೆಲ್ಲರೂ ಅತ್ತರು.
2 ಸಮುವೇಲನು 3 : 33 (IRVKN)
ದಾವೀದನು ಅಬ್ನೇರನನ್ನು ಕುರಿತು, “ಅಬ್ನೇರನೇ ನಿನಗೆ ಮೂರ್ಖರಿಗಾಗುವಂತೆ ದುರ್ಮರಣವಾಯಿತೋ?
2 ಸಮುವೇಲನು 3 : 34 (IRVKN)
ನಿನ್ನ ಕೈಗಳು ಕಟ್ಟಲ್ಪಡಲಿಲ್ಲ. ನಿನ್ನ ಕಾಲುಗಳಿಗೆ ಬೇಡಿಗಳು ಹಾಕಿರಲಿಲ್ಲ. ನೀನು ದುಷ್ಟರಿಂದ ಹತನಾದಂತೆ ಹತನಾದಿ” ಎಂದು ಶೋಕಗೀತೆಯನ್ನು ಹಾಡಲು ಜನರು ತಿರುಗಿ ಅತ್ತರು.
2 ಸಮುವೇಲನು 3 : 35 (IRVKN)
ಸೂರ್ಯಸ್ತಮಾನಕ್ಕೆ ಮೊದಲೇ ಜನರೆಲ್ಲರೂ ದಾವೀದನ ಬಳಿಗೆ ಬಂದು ಅವನನ್ನು ಊಟಕ್ಕೆ ಎಬ್ಬಿಸಬೇಕೆಂದು ಪ್ರಯತ್ನಿಸಿದರು. ಆದರೆ ಅವನು, “ಸೂರ್ಯನು ಮುಣುಗುವ ಮೊದಲು ನಾನು ರೊಟ್ಟಿಯನ್ನಾಗಲಿ, ಬೇರೆ ಯಾವುದನ್ನಾಗಲಿ ಬಾಯಲ್ಲಿ ಹಾಕಿದರೆ ದೇವರು ನನಗೆ ಬೇಕಾದದ್ದನ್ನು ಮಾಡಲಿ” ಎಂದು ಆಣೆಯಿಟ್ಟು ಹೇಳಿದನು.
2 ಸಮುವೇಲನು 3 : 36 (IRVKN)
ಜನರು ಇದನ್ನು ಕಂಡು ಮೆಚ್ಚಿದರು. ಅರಸನು ಮಾಡಿದ್ದೆಲ್ಲವೂ ಅವರಿಗೆ ಒಪ್ಪಿಗೆಯಾಯಿತು.
2 ಸಮುವೇಲನು 3 : 37 (IRVKN)
ನೇರನ ಮಗನಾದ ಅಬ್ನೇರನ ಕೊಲೆಯಲ್ಲಿ ಅರಸನು ಕೈಹಾಕಲಿಲ್ಲವೆಂಬುದು ಅವನ ಎಲ್ಲಾ ಜನರಿಗೂ ಇಸ್ರಾಯೇಲರಿಗೂ ಅದೇ ದಿನ ಗೊತ್ತಾಯಿತು.
2 ಸಮುವೇಲನು 3 : 38 (IRVKN)
ಅರಸನು ತನ್ನ ಸೇವಕರಿಗೆ, “ಈ ದಿನ ಇಸ್ರಾಯೇಲರಲ್ಲಿ ಹತವಾದವನು, ಪ್ರಭುವೂ, ಮಹಾಪುರುಷನೂ ಆಗಿದ್ದಾನೆಂಬುದು ನಿಮಗೆ ಗೊತ್ತಿದೆಯಲ್ಲಾ.
2 ಸಮುವೇಲನು 3 : 39 (IRVKN)
ನಾನು ರಾಜ್ಯಾಭಿಷೇಕ ಹೊಂದಿದವನಾಗಿದ್ದರೂ ಈಗ ಏನೂ ಮಾಡಲಾರದವನಾಗಿದ್ದೇನೆ. ಚೆರೂಯಳ ಮಕ್ಕಳಾದ ಇವರು ನನ್ನ ಹತೋಟಿಗೆ ಬಾರದವರು ಯೆಹೋವನೇ ಕೆಡುಕರಿಗೆ ಮುಯ್ಯಿ ತೀರಿಸಲಿ” ಎಂದು ಹೇಳಿದನು.
❮
❯