2 ಅರಸುಗಳು 23 : 1 (IRVKN)
ಧರ್ಮಸಂಸ್ಥಾಪನೆ ಅನಂತರ ಅರಸನು ದೂತರ ಮುಖಾಂತರವಾಗಿ ಯೆರೂಸಲೇಮಿನ ಮತ್ತು ಯೆಹೂದ ಪ್ರಾಂತ್ಯಗಳಲ್ಲಿರುವ ಎಲ್ಲಾ ಊರುಗಳ ಹಿರಿಯರನ್ನು ತನ್ನ ಬಳಿಗೆ ಕರೆಯಿಸಿದನು.
2 ಅರಸುಗಳು 23 : 2 (IRVKN)
ಅರಸನು ಯೆರೂಸಲೇಮಿನವರನ್ನೂ, ಎಲ್ಲಾ ಯೆಹೂದ್ಯರನ್ನೂ, ಯಾಜಕರನ್ನೂ, ಪ್ರವಾದಿಗಳನ್ನೂ ಕರೆದುಕೊಂಡು ಯೆಹೋವನ ಆಲಯಕ್ಕೆ ಹೋದನು. ಚಿಕ್ಕವರು ಮೊದಲುಗೊಂಡು ದೊಡ್ಡವರವರೆಗೆ ಎಲ್ಲರೂ ಅವನನ್ನು ಹಿಂಬಾಲಿಸಿದರು. ಅಲ್ಲಿ ಅವನು ಎಲ್ಲರಿಗೂ ಕೇಳಿಸುವಂತೆ ಯೆಹೋವನ ಆಲಯದಲ್ಲಿ ಸಿಕ್ಕಿದ ಒಡಂಬಡಿಕೆಯ ನಿಬಂಧನ ಗ್ರಂಥವನ್ನು ಸಂಪೂರ್ಣವಾಗಿ ಓದಿಸಿದನು.
2 ಅರಸುಗಳು 23 : 3 (IRVKN)
ಅರಸನು ಕಂಬದ ಬಳಿಯಲ್ಲಿ ನಿಂತು, ತಾನು ಯೆಹೋವನ ಮಾರ್ಗದಲ್ಲಿ ನಡೆಯುವುದಾಗಿಯೂ, ಆತನ ಆಜ್ಞಾನಿಯಮ, ವಿಧಿಗಳನ್ನು ಪೂರ್ಣಮನಸ್ಸಿನಿಂದಲೂ, ಪೂರ್ಣಪ್ರಾಣದಿಂದಲೂ, ಕೈಕೊಳ್ಳುವುದಾಗಿಯೂ ಆ ಒಡಂಬಡಿಕೆಯ ನಿಬಂಧನ ಗ್ರಂಥದಲ್ಲಿ ಬರೆದಿರುವ ಎಲ್ಲಾ ವಾಕ್ಯಗಳನ್ನು ನೆರವೇರಿಸುವುದಾಗಿಯೂ ಯೆಹೋವನಿಗೆ ಎಲ್ಲಾ ಜನರ ಎದುರು ಪ್ರಮಾಣ ಮಾಡಿದನು.
2 ಅರಸುಗಳು 23 : 4 (IRVKN)
ತರುವಾಯ ಅರಸನು ಮಹಾಯಾಜಕನಾದ ಹಿಲ್ಕೀಯನಿಗೆ, ಅವನ ಕೈಕೆಳಗಿರುವ ಯಾಜಕರ ಮತ್ತು ದ್ವಾರಪಾಲಕರ ಮುಖಾಂತರವಾಗಿ ಬಾಳ್, ಅಶೇರ್ ಎಂಬ ದೇವತೆಗಳಿಗಾಗಿಯೂ, ಆಕಾಶಸೈನ್ಯಗಳಿಗಾಗಿಯೂ, ಉಪಯೋಗಿಸುತ್ತಿದ್ದ ಎಲ್ಲಾ ಸಾಮಾನುಗಳನ್ನು ಯೆಹೋವನ ಆಲಯದಿಂದ ತರಿಸಿ ಯೆರೂಸಲೇಮಿನ ಹೊರಗಿರುವ ಕಿದ್ರೋನ್ ಬಯಲಿನಲ್ಲಿ ಅವುಗಳನ್ನು ಸುಟ್ಟು ಬೂದಿಯನ್ನು ಬೇತೇಲಿಗೆ ಕಳುಹಿಸಿದನು.
2 ಅರಸುಗಳು 23 : 5 (IRVKN)
ಇದಲ್ಲದೆ, ಯೆಹೂದ ಪ್ರಾಂತ್ಯದ ಪಟ್ಟಣಗಳಲ್ಲಿಯೂ, ಯೆರೂಸಲೇಮಿನ ಸುತ್ತಣ ಪ್ರದೇಶಗಳಲ್ಲಿಯೂ ಇದ್ದ ಪೂಜಾಸ್ಥಳಗಳ ವಿಗ್ರಹಗಳಿಗೂ, ಬಾಳನಿಗೂ, ಸೂರ್ಯ, ಚಂದ್ರ ಹಾಗೂ ನಕ್ಷತ್ರಗಳು ಎನಿಸಿಕೊಳ್ಳುವ ಆಕಾಶಸೈನ್ಯಕ್ಕೂ, ಧೂಪಹಾಕುವುದಕ್ಕಾಗಿ ಯೆಹೂದ ರಾಜರಿಂದ ನೇಮಿಸಲ್ಪಟ್ಟ ಎಲ್ಲಾ ಪೂಜಾರಿಗಳನ್ನು ತೆಗೆದುಹಾಕಿದನು.
2 ಅರಸುಗಳು 23 : 6 (IRVKN)
ಯೆಹೋವನ ಆಲಯದಲ್ಲಿದ್ದ ಅಶೇರ್ ವಿಗ್ರಹಸ್ತಂಭವನ್ನು ತರಿಸಿ ಯೆರೂಸಲೇಮಿನ ಹೊರಗಿರುವ ಕಿದ್ರೋನ್ ಹಳ್ಳಕ್ಕೆ ತೆಗೆದುಕೊಂಡು ಹೋಗಿ ಅಲ್ಲಿ ಅದನ್ನು ಸುಟ್ಟು ಪುಡಿಪುಡಿ ಮಾಡಿಸಿ ಆ ಪುಡಿಯನ್ನು ಸಾಮಾನ್ಯ ಜನರ ಸ್ಮಶಾನದಲ್ಲಿ ಹಾಕಿಬಿಟ್ಟನು.
2 ಅರಸುಗಳು 23 : 7 (IRVKN)
ಯೆಹೋವನ ಆಲಯದ ಪ್ರಾಕಾರದೊಳಗಿದ್ದ ದೇವದಾಸ, ವೇಶ್ಯವೃತ್ತಿಯವರ ಮನೆಗಳನ್ನು ಕೆಡವಿಹಾಕಿಸಿದನು. ಆ ಮನೆಗಳಲ್ಲಿ ಸ್ತ್ರೀಯರು ಅಶೇರ್ ದೇವತೆಗಳಿಗಾಗಿ ಗುಡಾರದ ಬಟ್ಟೆಗಳನ್ನು ನೇಯುತ್ತಿದ್ದರು.
2 ಅರಸುಗಳು 23 : 8 (IRVKN)
ಅನಂತರ ಗೆಬದಿಂದ ಬೇರ್ಷೆಬದವರೆಗಿರುವ ಯೆಹೂದ ಪಟ್ಟಣಗಳ ಎಲ್ಲಾ ಯಾಜಕರನ್ನು ಕರೆಯಿಸಿಕೊಂಡು ಅವರು ಧೂಪಹಾಕುತ್ತಿದ್ದ ಪೂಜಾಸ್ಥಳಗಳನ್ನು ನಾಶಮಾಡಿಸಿದನು. ಪುರಾಧಿಕಾರಿಯಾದ ಯೆಹೋಶುವನ ಬಾಗಿಲಿನ ಎಡಗಡೆಯಲ್ಲಿದ್ದ ದ್ವಾರಗಳ ದೇವತೆಯ ಪೂಜಾಸ್ಥಳಗಳನ್ನು ಕೆಡವಿ ಹಾಕಿಸಿದನು.
2 ಅರಸುಗಳು 23 : 9 (IRVKN)
ಪೂಜಾಸ್ಥಳಗಳಿಂದ ಬಂದ ಯಾಜಕರಿಗೆ ಇತರ ಯಾಜಕರೊಡನೆ ಹುಳಿಯಿಲ್ಲದ ರೊಟ್ಟಿಗಳಲ್ಲಿ ಪಾಲುಸಿಕ್ಕಿದರೂ, ಅವರಿಗೆ ಯೆರೂಸಲೇಮಿನಲ್ಲಿದ್ದ ಯೆಹೋವನ ಯಜ್ಞವೇದಿಯ ಸಮೀಪಕ್ಕೆ ಹೋಗುವುದಕ್ಕೆ ಅಪ್ಪಣೆಯಿರಲಿಲ್ಲ.
2 ಅರಸುಗಳು 23 : 10 (IRVKN)
ತಮ್ಮ ಗಂಡುಹೆಣ್ಣು ಮಕ್ಕಳನ್ನು ಮೋಲೆಕನಿಗೋಸ್ಕರ ಆಹುತಿ ಕೊಡದಂತೆ ಬೆನ್ ಹಿನ್ನೋಮ್ ತಗ್ಗಿನಲ್ಲಿದ್ದ “ತೋಫೆತ್” ಎಂಬ ಯಜ್ಞವೇದಿಯ ಸ್ಥಳವನ್ನು ಹೊಲೆಮಾಡಿದನು.
2 ಅರಸುಗಳು 23 : 11 (IRVKN)
ಯೆಹೂದ ರಾಜರು ಸೂರ್ಯದೇವತೆಗೋಸ್ಕರ ಪ್ರತಿಷ್ಠಿಸಿದ ಕುದುರೆಗಳನ್ನು ತೆಗೆದುಹಾಕಿ ರಥಗಳನ್ನು ಸುಟ್ಟುಬಿಟ್ಟನು. ಅವು ಯೆಹೋವನ ಆಲಯದ ಹೆಬ್ಬಾಗಿಲಿನ ಹೊರಗೆ “ಪರ್ವರೀಮ್” ಎಂಬ ಸ್ಥಳದಲ್ಲಿ ಕಂಚುಕಿಯಾದ ನಾತಾನ್ ಮೆಲೆಕನ ಕೋಣೆಯ ಹತ್ತಿರ ಇಡಲ್ಪಟ್ಟಿದ್ದವು.
2 ಅರಸುಗಳು 23 : 12 (IRVKN)
ಇದಲ್ಲದೆ, ಯೆಹೂದ್ಯರ ಅರಸರು ದೇವಸ್ಥಾನದ ಮಾಳಿಗೆಯ ಮೇಲೆ ಆಹಾಜನ ಉಪ್ಪರಿಗೆಯ ಹತ್ತಿರ ಕಟ್ಟಿಸಿದ್ದ ಯಜ್ಞವೇದಿಗಳನ್ನೂ, ಮನಸ್ಸೆಯು ಯೆಹೋವನ ಆಲಯದ ಎರಡು ಪ್ರಾಕಾರಗಳಲ್ಲಿ ಕಟ್ಟಿಸಿದ ಯಜ್ಞವೇದಿಗಳನ್ನೂ ಕೆಡವಿ ಪುಡಿಪುಡಿ ಮಾಡಿ ಅವುಗಳ ಧೂಳನ್ನು ಕಿದ್ರೋನ್ ಹಳ್ಳದಲ್ಲಿ ಹಾಕಿಸಿದನು.
2 ಅರಸುಗಳು 23 : 13 (IRVKN)
ಇಸ್ರಾಯೇಲರ ಅರಸನಾದ ಸೊಲೊಮೋನನು ಚೀದೋನ್ಯರ ಅಷ್ಟೋರೆತ್ ದೇವತೆ, ಮೋವಾಬ್ಯರ ಕೆಮೋಷ್, ಅಮ್ಮೋನಿಯರ ಮಿಲ್ಕೋಮ್ ಎಂಬ ಅಸಹ್ಯ ವಿಗ್ರಹಗಳಿಗಾಗಿ ಯೆರೂಸಲೇಮಿನ ಎದುರಿನಲ್ಲಿಯೂ, ವಿಘ್ನಪರ್ವತದ ದಕ್ಷಿಣದಿಕ್ಕಿನಲ್ಲಿಯೂ ಸ್ಥಾಪಿಸಿದ್ದ ಪೂಜಾಸ್ಥಳಗಳನ್ನು ಅರಸನು ಹೊಲೆ ಮಾಡಿದನು.
2 ಅರಸುಗಳು 23 : 14 (IRVKN)
ಕಲ್ಲು ಕಂಬಗಳನ್ನು ಒಡೆದುಹಾಕಿ ಅಶೇರ ವಿಗ್ರಹ ಸ್ತಂಭಗಳನ್ನು ಕಡಿದುಬಿಟ್ಟು ಅವುಗಳಲ್ಲಿದ್ದ ಸ್ಥಳಗಳನ್ನು ಮನುಷ್ಯರ ಎಲುಬುಗಳಿಂದ ತುಂಬಿಸಿದನು.
2 ಅರಸುಗಳು 23 : 15 (IRVKN)
ಇದಲ್ಲದೆ, ಅವನು ಇಸ್ರಾಯೇಲರನ್ನು ಪಾಪಕ್ಕೆ ಪ್ರೇರೇಪಿಸಿದ ನೆಬಾಟನ ಮಗನಾದ ಯಾರೊಬ್ಬಾಮನು ಬೇತೇಲಿನಲ್ಲಿ ನಿರ್ಮಿಸಿದ್ದ ಪೂಜಾಸ್ಥಳವನ್ನೂ, ಅದರಲ್ಲಿದ್ದ ಯಜ್ಞವೇದಿಯನ್ನೂ ಕೆಡವಿಬಿಟ್ಟನು. ಪೂಜಾಸ್ಥಳವನ್ನೂ ಅದರಲ್ಲಿದ್ದ ಅಶೇರ ವಿಗ್ರಹಸ್ತಂಭವನ್ನೂ ಸುಟ್ಟು ಬೂದಿಮಾಡಿನು.
2 ಅರಸುಗಳು 23 : 16 (IRVKN)
ಯೋಷೀಯನು ಹಿಂದಿರುಗಿ ನೋಡಿದಾಗ ಅಲ್ಲಿನ ಗುಡ್ಡಗಳಲ್ಲಿ ಸಮಾಧಿಗಳನ್ನು ಕಂಡು, ಅವುಗಳಲ್ಲಿದ್ದ ಎಲುಬುಗಳನ್ನು ತರಿಸಿ ಆ ಯಜ್ಞವೇದಿಯ ಮೇಲೆ ಸುಟ್ಟು ಅವುಗಳನ್ನು ನಾಶಮಾಡಿದನು. ಹೀಗೆ ದೇವರ ಮನುಷ್ಯನೊಬ್ಬನು ಪ್ರಕಟಿಸಿದ ಯೆಹೋವನ ವಾಕ್ಯವು ನೆರವೇರಿತು.
2 ಅರಸುಗಳು 23 : 17 (IRVKN)
ಇದಲ್ಲದೆ, ಅವನು ಒಂದು ಸಮಾಧಿಶಿಲೆಯನ್ನು ಕಂಡು, ಅದು ಏನು? ಎಂದು ವಿಚಾರಿಸಲು ಆ ಊರಿನವರು, “ನೀನು ಈಗ ಬೇತೇಲಿನ ಯಜ್ಞವೇದಿಗೆ ಮಾಡಿದ್ದನ್ನು ಮುಂತಿಳಿಸಿದ ಯೆಹೂದ ದೇಶದವನಾದ ದೇವರ ಮನುಷ್ಯನ ಸಮಾಧಿ” ಎಂದು ಉತ್ತರಕೊಟ್ಟರು.
2 ಅರಸುಗಳು 23 : 18 (IRVKN)
ಆಗ ಯೋಷೀಯನು, “ಬಿಡಿರಿ, ಆ ಮನುಷ್ಯನ ಎಲುಬುಗಳನ್ನು ಯಾರೂ ಮುಟ್ಟಬಾರದು” ಎಂದು ಹೇಳಿದನು. ಆದುದರಿಂದ ಅವರು ಅವನ ಮತ್ತು ಸಮಾರ್ಯದೇಶದ ಪ್ರವಾದಿಯ ಎಲುಬುಗಳನ್ನು ಮುಟ್ಟಲಿಲ್ಲ.
2 ಅರಸುಗಳು 23 : 19 (IRVKN)
ಇಸ್ರಾಯೇಲ್ ರಾಜರು ಸಮಾರ್ಯದ ಪಟ್ಟಣಗಳಲ್ಲಿ ಪೂಜಾಸ್ಥಳಗಳನ್ನು ಗುಡಿಗಳನ್ನು ಕಟ್ಟಿಸಿ, ಯೆಹೋವನ ಕೋಪಕ್ಕೆ ಕಾರಣವಾದಂಥವುಗಳನ್ನು ಯೋಷೀಯನು ತೆಗೆದುಕೊಂಡು, ಬೇತೇಲಿನಲ್ಲಿ ನಾಶಮಾಡಿದ ಹಾಗೆ ಅವೆಲ್ಲವನ್ನು ನಾಶಮಾಡಿದನು.
2 ಅರಸುಗಳು 23 : 20 (IRVKN)
ಯೋಷೀಯನು ಅವುಗಳನ್ನು ಕೆಡವಿಬಿಟ್ಟು ಅವುಗಳ ಪೂಜಾರಿಗಳನ್ನು ಯಜ್ಞವೇದಿಯ ಮೇಲೆ ವಧಿಸಿ ಆ ಮನುಷ್ಯರ ಎಲುಬುಗಳನ್ನು ಸುಟ್ಟು ಯೆರೂಸಲೇಮಿಗೆ ಹಿಂದಿರುಗಿ ಹೋದನು.
2 ಅರಸುಗಳು 23 : 21 (IRVKN)
ಪಸ್ಕಹಬ್ಬದ ಆಚರಣೆ ಅನಂತರ ಅರಸನು ಎಲ್ಲಾ ಜನರಿಗೆ, “ಈ ಒಡಂಬಡಿಕೆಯ ಗ್ರಂಥದಲ್ಲಿ ಬರೆದಿರುವ ಪ್ರಕಾರ ನೀವು ನಿಮ್ಮ ದೇವರಾದ ಯೆಹೋವನಿಗಾಗಿ ಪಸ್ಕಹಬ್ಬವನ್ನು ಆಚರಿಸಬೇಕು” ಎಂದು ಆಜ್ಞಾಪಿಸಿದನು.
2 ಅರಸುಗಳು 23 : 22 (IRVKN)
ಇಂಥ ಪಸ್ಕಹಬ್ಬವು ಇಸ್ರಾಯೇಲರನ್ನು ಪಾಲಿಸಿದ ನ್ಯಾಯಸ್ಥಾಪಕರ ಕಾಲದಲ್ಲಾಗಲಿ, ಇಸ್ರಾಯೇಲರ ಮತ್ತು ಯೆಹೂದ್ಯರ ಅರಸರ ಕಾಲದಲ್ಲಾಗಲಿ ನಡೆಯಲೇ ಇಲ್ಲ.
2 ಅರಸುಗಳು 23 : 23 (IRVKN)
ಈ ಪಸ್ಕಹಬ್ಬವು ಅರಸನಾದ ಯೋಷೀಯನ ಆಳ್ವಿಕೆಯ ಹದಿನೆಂಟನೆಯ ವರ್ಷದಲ್ಲಿ ಯೆರೂಸಲೇಮಿನಲ್ಲಿ ಯೆಹೋವನಿಗಾಗಿ ಆಚರಿಸಲ್ಪಟ್ಟಿತು.
2 ಅರಸುಗಳು 23 : 24 (IRVKN)
ಇದಲ್ಲದೆ, ಯೋಷೀಯನು ಸತ್ತವರಲ್ಲಿ ವಿಚಾರಿಸುವವರನ್ನೂ, ಭೂತ ಪ್ರೇತ ಆರಾಧಕರನ್ನೂ, ಯೆರೂಸಲೇಮ್, ಯೆಹೂದ ಪ್ರಾಂತ್ಯ ಇವುಗಳಲ್ಲಿದ್ದ ಎಲ್ಲಾ ತೆರಾಫೀಮ್ ಎಂಬ ಬೊಂಬೆಗಳನ್ನೂ, ಮೂರ್ತಿಗಳನ್ನೂ ಎಲ್ಲಾ ಅಸಹ್ಯ ವಿಗ್ರಹಗಳನ್ನೂ ತೆಗೆದುಹಾಕಿ ಯಾಜಕನಾದ ಹಿಲ್ಕೀಯನಿಗೆ ಯೆಹೋವನ ಆಲಯದಲ್ಲಿ ಸಿಕ್ಕಿದ್ದ ಧರ್ಮೋಪದೇಶಗ್ರಂಥದಲ್ಲಿದ್ದ ಆಜ್ಞೆಗಳನ್ನು ನೆರವೇರಿಸಿದನು.
2 ಅರಸುಗಳು 23 : 25 (IRVKN)
ಯೆಹೋವನ ಕಡೆಗೆ ತಿರುಗಿಕೊಂಡು ಪೂರ್ಣಮನಸ್ಸಿನಿಂದಲೂ, ಪೂರ್ಣಪ್ರಾಣದಿಂದಲೂ, ಪೂರ್ಣಬಲದಿಂದಲೂ ಮೋಶೆಯ ಧರ್ಮಶಾಸ್ತ್ರವನ್ನು ಅನುಸರಿಸಿದ ಯೋಷೀಯನಿಗೆ ಸಮಾನನಾದ ಅರಸನು ಹಿಂದಿನ ಕಾಲದಲ್ಲೂ ಆ ನಂತರದ ಕಾಲದಲ್ಲೂ ಇರಲಿಲ್ಲ.
2 ಅರಸುಗಳು 23 : 26 (IRVKN)
ಆದರೂ ಮನಸ್ಸೆಯ ದುಷ್ಕೃತ್ಯಗಳ ದೆಸೆಯಿಂದ ಯೆಹೂದ್ಯರ ಮೇಲಿದ್ದ ಯೆಹೋವನ ಉಗ್ರಕೋಪವು ಇಳಿಯಲಿಲ್ಲ.
2 ಅರಸುಗಳು 23 : 27 (IRVKN)
ಯೆಹೋವನು, “ಇಸ್ರಾಯೇಲರನ್ನು ತೆಗೆದುಹಾಕಿದಂತೆ, ಯೆಹೂದ್ಯರನ್ನೂ ನನ್ನ ಸನ್ನಿಧಿಯಿಂದ ತೆಗೆದುಹಾಕುವೆನು, ನಾನು ಆರಿಸಿಕೊಂಡ ಯೆರೂಸಲೇಮ್ ಪಟ್ಟಣವನ್ನೂ ನನ್ನ ನಾಮದ ಮಹಿಮೆಗಾಗಿ ಸ್ವೀಕರಿಸಿಕೊಂಡ ದೇವಾಲಯವನ್ನೂ ತಿರಸ್ಕರಿಸುವೆನು” ಎಂದು ಹೇಳಿದನು.
2 ಅರಸುಗಳು 23 : 28 (IRVKN)
ಯೋಷೀಯನ ಉಳಿದ ಚರಿತ್ರೆಯೂ, ಅವನ ಎಲ್ಲಾ ಕೃತ್ಯಗಳೂ ಯೆಹೂದ ರಾಜಕಾಲವೃತ್ತಾಂತ ಎಂಬ ಗ್ರಂಥದಲ್ಲಿ ಬರೆಯಲಾಗಿದೆ.
2 ಅರಸುಗಳು 23 : 29 (IRVKN)
ಅವನ ಕಾಲದಲ್ಲಿ, ಐಗುಪ್ತದ ಅರಸನಾದ ಫರೋಹ ನೆಕೋ ಎಂಬುವವನು ಅಶ್ಶೂರದ ಅರಸನಿಗೆ ವಿರುದ್ಧವಾಗಿ ಎದ್ದು ಯುದ್ಧಮಾಡುವುದಕ್ಕಾಗಿ ಯೂಫ್ರೆಟಿಸ್ ನದಿಯ ಬಳಿಗೆ ಹೋದನು. ಅವನು ಅಲ್ಲಿಗೆ ಹೋಗುತ್ತಿರುವಾಗ ಯೋಷೀಯನು ಮೆಗಿದ್ದೋವಿನಲ್ಲಿ ಅವನನ್ನು ಎದುರುಗೊಂಡು ಅಲ್ಲಿ ಅವನಿಂದ ಹತನಾದನು.
2 ಅರಸುಗಳು 23 : 30 (IRVKN)
ಯೋಷೀಯನ ಸೇವಕರು ಅವನ ಶವವನ್ನು ರಥದಲ್ಲಿ ಹಾಕಿಕೊಂಡು ಮೆಗಿದ್ದೋವಿನಿಂದ ಯೆರೂಸಲೇಮಿಗೆ ತಂದು ಅವನ ಸ್ವಂತ ಸಮಾಧಿಯಲ್ಲಿ ಇಟ್ಟರು. ಜನರು ಅವನ ನಂತರ ಅವನ ಮಗನಾದ ಯೆಹೋವಾಹಾಜನನ್ನು ಅಭಿಷೇಕಿಸಿ ಅರಸನನ್ನಾಗಿ ಮಾಡಿದರು.
2 ಅರಸುಗಳು 23 : 31 (IRVKN)
ಯೆಹೂದದ ಅರಸನಾದ ಯೆಹೋವಾಹಾಜನು ಯೆಹೋವಾಹಾಜನು ಅರಸನಾದಾಗ ಅವನು ಇಪ್ಪತ್ತಮೂರು ವರ್ಷದವನಾಗಿದ್ದು ಯೆರೂಸಲೇಮಿನಲ್ಲಿ ಮೂರು ತಿಂಗಳುಗಳ ಕಾಲ ಆಳಿದನು. ಲಿಬ್ನದವನಾದ ಯೆರೆಮೀಯನ ಮಗಳಾದ ಹಮೂಟಲ್ ಎಂಬಾಕೆಯು ಇವನ ತಾಯಿ.
2 ಅರಸುಗಳು 23 : 32 (IRVKN)
ಯೆಹೋವಾಹಾಜನು ತನ್ನ ಪೂರ್ವಿಕರಂತೆ ಯೆಹೋವನ ದೃಷ್ಟಿಯಲ್ಲಿ ದ್ರೋಹಿಯಾದನು.
2 ಅರಸುಗಳು 23 : 33 (IRVKN)
ಫರೋಹ ನೆಕೋವನು ಇವನನ್ನು ಯೆರೂಸಲೇಮಿನಲ್ಲಿ ಬಹು ದಿನಗಳವರೆಗೆ ಆಳಗೊಡಲಿಲ್ಲ. ಅವನು ಹಮಾತ ದೇಶದ ರಿಬ್ಲಾ ಎಂಬ ಊರಲ್ಲಿ ಇವನನ್ನು ಸೆರೆಯಲ್ಲಿಟ್ಟದ್ದಲ್ಲದೆ ಯೆಹೂದ್ಯರು ಅವನಿಗೆ ನೂರು ತಲಾಂತು ಬೆಳ್ಳಿಯನ್ನೂ* ನೂರು ತಲಾಂತು ಬೆಳ್ಳಿಯನ್ನೂ ಮೂರು ಸಾವಿರದ ನಾಲ್ಕು ನೂರು ಕಿಲೋಗ್ರಾಂ. , ಒಂದು ತಲಾಂತು ಬಂಗಾರವನ್ನೂ † ಒಂದು ತಲಾಂತು ಬಂಗಾರವನ್ನೂ ಮೂವತ್ತನಾಲ್ಕು ಕಿಲೋಗ್ರಾಂ. ದಂಡ ತೆರಬೇಕಾಯಿತು.
2 ಅರಸುಗಳು 23 : 34 (IRVKN)
ಫರೋಹ ನೆಕೋವನು ಯೋಷೀಯನಿಗೆ ಬದಲಾಗಿ ಅವನ ಮಗನಾದ ಎಲ್ಯಾಕೀಮನನ್ನು ಅರಸನನ್ನಾಗಿ ನೇಮಿಸಿ ಅವನಿಗೆ ಯೆಹೋಯಾಕೀಮನೆಂಬ ಹೊಸ ಹೆಸರನ್ನಿಟ್ಟು ಯೆಹೋವಾಹಾಜನನ್ನು ಐಗುಪ್ತ ದೇಶಕ್ಕೆ ಕರೆದುಕೊಂಡು ಹೋದನು. ಯೆಹೋವಾಹಾಜನು ಅಲ್ಲಿ ಮರಣ ಹೊಂದಿದನು.
2 ಅರಸುಗಳು 23 : 35 (IRVKN)
ಫರೋಹನು ಗೊತ್ತುಮಾಡಿದಷ್ಟು ಬೆಳ್ಳಿ ಬಂಗಾರವನ್ನು ಕೊಡುವುದಕ್ಕಾಗಿ ಯೆಹೋಯಾಕೀಮನು ತನ್ನ ದೇಶದಲ್ಲಿ ತೆರಿಗೆಯನ್ನು ವಿಧಿಸಿದನು. ತೆರಿಗೆಕೊಡಬೇಕಾದ ಪ್ರತಿಯೊಬ್ಬನು ತನಗೆ ನೇಮಕವಾದಷ್ಟು ಬೆಳ್ಳಿ ಬಂಗಾರವನ್ನು ದೇಶದ ಜನರಿಂದ ವಸೂಲಿಮಾಡಿಕೊಂಡು ಫರೋಹ ನೆಕೋವನಿಗೆ ತಂದೊಪ್ಪಿಸಿದನು.
2 ಅರಸುಗಳು 23 : 36 (IRVKN)
ಯೆಹೂದದ ಅರಸನಾದ ಯೆಹೋಯಾಕೀಮನು ಯೆಹೋಯಾಕೀಮನು ಅರಸನಾದಾಗ ಅವನು ಇಪ್ಪತ್ತೈದು ವರ್ಷದವನಾಗಿದ್ದು ಯೆರೂಸಲೇಮಿನಲ್ಲಿ ಹನ್ನೊಂದು ವರ್ಷಗಳ ಕಾಲ ಆಳಿದನು. ರೂಮನ ಪೆದಾಯನ ಮಗಳಾದ ಜೆಬೂದಾ ಎಂಬಾಕೆಯು ಅವನ ತಾಯಿ.
2 ಅರಸುಗಳು 23 : 37 (IRVKN)
ಯೆಹೋಯಾಕೀಮನು ತನ್ನ ಪೂರ್ವಿಕರಂತೆ ಯೆಹೋವನ ದೃಷ್ಟಿಯಲ್ಲಿ ದ್ರೋಹಿಯಾಗಿದ್ದನು.
❮
❯