2 ಅರಸುಗಳು 17 : 1 (IRVKN)
ಇಸ್ರಾಯೇಲರ ಕೊನೆಯ ಅರಸನಾದ ಹೋಶೇಯನು ಯೆಹೂದದ ಅರಸನಾದ ಆಹಾಜನ ಆಳ್ವಿಕೆಯ ಹನ್ನೆರಡನೆಯ ವರ್ಷದಲ್ಲಿ ಏಲನ ಮಗನಾದ ಹೋಶೇಯನು ಇಸ್ರಾಯೇಲರ ಅರಸನಾಗಿ ಸಮಾರ್ಯದಲ್ಲಿ ಒಂಭತ್ತು ವರ್ಷ ಆಳಿದನು.
2 ಅರಸುಗಳು 17 : 2 (IRVKN)
ಹೋಶೇಯನು ತನ್ನ ಪೂರ್ವಿಕರಾದ ಇಸ್ರಾಯೇಲರ ಅರಸರಷ್ಟು ಕೆಟ್ಟವನಾಗಿರಲಿಲ್ಲವಾದರೂ, ಯೆಹೋವನ ದೃಷ್ಟಿಯಲ್ಲಿ ದ್ರೋಹಿಯಾಗಿದ್ದನು.
2 ಅರಸುಗಳು 17 : 3 (IRVKN)
ಅಶ್ಶೂರದ ಅರಸನಾದ ಶಲ್ಮನೆಸರನು ಹೋಶೇಯನಿಗೆ ವಿರುದ್ಧವಾಗಿ ಬಂದಾಗ, ಹೋಶೇಯನು ಅವನಿಗೆ ಅಧೀನನಾಗಿ ಕಪ್ಪಕೊಡುವವನಾದನು.
2 ಅರಸುಗಳು 17 : 4 (IRVKN)
ಕೆಲವು ವರ್ಷಗಳಾದ ನಂತರ ಅರಸನಾದ ಹೋಶೇಯನು ಪ್ರತಿವರ್ಷವೂ ಕೊಡಬೇಕಾದ ಕಪ್ಪವನ್ನು ಕೊಡದೆಹೋದುದರಿಂದಲೂ, ಐಗುಪ್ತದ ಅರಸನಾದ ಸೋ ಎಂಬುವವನ ಬಳಿಗೆ ರಾಯಭಾರಿಗಳನ್ನು ಕಳುಹಿಸಿದ್ದರಿಂದಲೂ ಅಶ್ಶೂರದ ಅರಸನು ಇವನನ್ನು ದ್ರೋಹಿಯೆಂದು ತಿಳಿದು ಬಂಧಿಸಿ ಸೆರೆಯಲ್ಲಿಟ್ಟನು.
2 ಅರಸುಗಳು 17 : 5 (IRVKN)
ಸಮಾರ್ಯದ ಪತನ ಇದಲ್ಲದೆ, ಅಶ್ಶೂರದ ಅರಸನು ದೇಶವನ್ನೆಲ್ಲಾ ಸ್ವಾಧೀನಮಾಡಿಕೊಂಡು ಸಮಾರ್ಯಕ್ಕೆ ಬಂದು ಮೂರು ವರ್ಷಗಳವರೆಗೂ ಅದಕ್ಕೆ ಮುತ್ತಿಗೆ ಹಾಕಿದನು.
2 ಅರಸುಗಳು 17 : 6 (IRVKN)
ಹೋಶೇಯನ ಆಳ್ವಿಕೆಯ ಒಂಭತ್ತನೆಯ ವರ್ಷದಲ್ಲಿ, ಅಶ್ಶೂರದ ಅರಸನು ಸಮಾರ್ಯವನ್ನು ವಶಪಡಿಸಿಕೊಂಡು, ಎಲ್ಲಾ ಇಸ್ರಾಯೇಲರನ್ನು ಅಶ್ಶೂರ್ ದೇಶಕ್ಕೆ ಸೆರೆಯಾಗಿ ಒಯ್ದನು. ಅವರನ್ನು ಹಲಹು ಪ್ರಾಂತ್ಯದಲ್ಲಿಯೂ, ಹಾಬೋರ್ ಹೊಳೆಯಿರುವ ಗೋಜಾನ್ ಪ್ರಾಂತ್ಯದಲ್ಲಿಯೂ, ಮೇದ್ಯರ ಪಟ್ಟಣಗಳಲ್ಲಿಯೂ ಇರಿಸಿದನು.
2 ಅರಸುಗಳು 17 : 7 (IRVKN)
ಇಸ್ರಾಯೇಲರ ಸೋಲಿಗೆ ಕಾರಣಗಳು ಇಸ್ರಾಯೇಲರ ಈ ದುರ್ಗತಿಗೆ, ಅವರ ದುರ್ನಡತೆಯೇ ಕಾರಣ. ಹೇಗೆಂದರೆ ಅವರು ತಮ್ಮನ್ನು ಐಗುಪ್ತದ ಅರಸನಾದ ಫರೋಹನ ಕೈಯಿಂದ ಬಿಡಿಸಿ, ಅವನ ರಾಜ್ಯದಿಂದ ಹೊರತಂದ ದೇವರಾದ ಯೆಹೋವನಿಗೆ ಭಯಪಡದೆ, ಪಾಪಮಾಡಿ ಅನ್ಯದೇವತೆಗಳನ್ನು ಸೇವಿಸಿದರು.
2 ಅರಸುಗಳು 17 : 8 (IRVKN)
ಯೆಹೋವನು ತಮ್ಮ ಎದುರಿನಿಂದ ಹೊರಡಿಸಿಬಿಟ್ಟ ಜನಾಂಗಗಳ ಮತ್ತು ಇಸ್ರಾಯೇಲ್ ರಾಜರ ದುರಾಚಾರಗಳನ್ನು ಅನುಸರಿಸಿದರು.
2 ಅರಸುಗಳು 17 : 9 (IRVKN)
ಇಸ್ರಾಯೇಲರು ತಮ್ಮ ದೇವರಾದ ಯೆಹೋವನಿಗೆ ವಿರುದ್ಧವಾದ ಗುಪ್ತವಾದ ದುಷ್ಟ ಕೃತ್ಯಗಳನ್ನು ನಡಿಸಿದರು. ಕಾವಲುಗಾರರ ಗೋಪುರವುಳ್ಳ ಚಿಕ್ಕ ಊರು ಮೊದಲುಗೊಂಡು ಕೋಟೆಕೊತ್ತಲುಗಳುಳ್ಳ ಪಟ್ಟಣದವರೆಗಿರುವ ಎಲ್ಲಾ ಊರುಗಳಲ್ಲಿ ತಮಗೋಸ್ಕರ ಪೂಜಾಸ್ಥಳಗಳನ್ನು ಏರ್ಪಡಿಸಿಕೊಂಡರು.
2 ಅರಸುಗಳು 17 : 10 (IRVKN)
ಎಲ್ಲಾ ದಿನ್ನೆಗಳ ಮೇಲೆ ಮತ್ತು ಎಲ್ಲಾ ಹಸುರು ಮರಗಳ ಕೆಳಗೆ ಕಲ್ಲು ಕಂಬ, ಅಶೇರ ವಿಗ್ರಹಸ್ತಂಭ ಇವುಗಳನ್ನು ನಿಲ್ಲಿಸಿದರು.
2 ಅರಸುಗಳು 17 : 11 (IRVKN)
ಅಲ್ಲಿ ಅವರು ಯೆಹೋವನು ತಮ್ಮ ಎದುರಿನಿಂದ ಹೊರಡಿಸಿ ಜಡಿಸಿದ ಅನ್ಯಜನಾಂಗಗಳಂತೆ ಎಲ್ಲಾ ಪೂಜಾಸ್ಥಳಗಳಲ್ಲಿಯೂ ಧೂಪವನ್ನು ಹಾಕಿ, ತಮ್ಮ ದುಷ್ಕೃತ್ಯಗಳಿಂದ ಆತನನ್ನು ರೇಗಿಸಿದರು.
2 ಅರಸುಗಳು 17 : 12 (IRVKN)
“ನೀವು ಇಂತಹ ಕೃತ್ಯಗಳನ್ನು ಮಾಡಬಾರದು” ಎಂದು ಯೆಹೋವನು ಅವರಿಗೆ ಆಜ್ಞಾಪಿಸಿದ್ದರೂ ಅವರು ಆತನ ಅಜ್ಞೆಯನ್ನು ಮೀರಿ ಅವರು ವಿಗ್ರಹಗಳನ್ನು ಆರಾಧಿಸಿದರು.
2 ಅರಸುಗಳು 17 : 13 (IRVKN)
ಯೆಹೋವನು ದರ್ಶಕರೆನಿಸಿಕೊಂಡ ತನ್ನ ಪ್ರವಾದಿಗಳ ಮುಖಾಂತರವಾಗಿ ಇಸ್ರಾಯೇಲರಿಗೆ ಮತ್ತು ಯೆಹೂದ್ಯರಿಗೆ, “ನೀವು, ನಿಮ್ಮ ದುರಾಚಾರವನ್ನು ಬಿಟ್ಟು ನಾನು ನಿಮ್ಮ ಪೂರ್ವಿಕರಿಗೂ, ನನ್ನ ಸೇವಕರಾದ ಪ್ರವಾದಿಗಳ ಮುಖಾಂತರವಾಗಿ ನಿಮಗೆ ಕೊಟ್ಟಂಥ ನನ್ನ ಎಲ್ಲಾ ಆಜ್ಞಾನಿಯಮವಿಧಿಗಳನ್ನು ಕೈಕೊಂಡು ನಡೆಯಿರಿ” ಎಂದು ಖಂಡಿತವಾಗಿ ಹೇಳಿಸಿದನು.
2 ಅರಸುಗಳು 17 : 14 (IRVKN)
ಆದರೆ ಅವರು ದೇವರಾದ ಯೆಹೋವನನ್ನು ನಂಬದೆ, ಆತನ ಆಜ್ಞೆಗಳಿಗೆ ಮಣಿಯದೆ ಇದ್ದ ತಮ್ಮ ಹಿರಿಯರಂತೆ ಯೆಹೋವನ ಮಾತಿಗೆ ಕಿವಿಗೊಡದೆ ಹೋದರು.
2 ಅರಸುಗಳು 17 : 15 (IRVKN)
ಆತನು ತಮ್ಮ ಪೂರ್ವಿಕರಿಗೆ ಕೊಟ್ಟ ವಿಧಿನಿಬಂಧನೆಗಳನ್ನೂ, ತಮಗೆ ಹೇಳಿಸಿದ ಒಡಂಬಡಿಕೆಯನ್ನು ತಿರಸ್ಕರಿಸಿ, ವ್ಯರ್ಥವಾದ ದೇವತೆಗಳನ್ನು ಸೇವಿಸಿ ನಿಷ್ಪ್ರಯೋಜಕರಾದರು. ಸುತ್ತಣ ಜನಾಂಗಗಳನ್ನು ಅನುಸರಿಸಬಾರದೆಂದು ಯೆಹೋವನು ಆಜ್ಞಾಪಿಸಿದರೂ ಅವರು ಕೇಳದೆ, ಅವರನ್ನು ಅನುಸರಿಸಿದರು.
2 ಅರಸುಗಳು 17 : 16 (IRVKN)
ತಮ್ಮ ದೇವರಾದ ಯೆಹೋವನ ಆಜ್ಞೆಗಳನ್ನೆಲ್ಲಾ ಮೀರಿ ಎರಡು ಎರಕದ ಬಸವನಮೂರ್ತಿಗಳು, ಅಶೇರ ವಿಗ್ರಹಸ್ತಂಭ ಇವುಗಳನ್ನು ಮಾಡಿಕೊಂಡರು. ಆಕಾಶಸೈನ್ಯ, ಬಾಳ್ ದೇವತೆ ಇವುಗಳನ್ನು ಪೂಜಿಸಿದರು.
2 ಅರಸುಗಳು 17 : 17 (IRVKN)
ತಮ್ಮ ಗಂಡು ಹೆಣ್ಣು ಮಕ್ಕಳನ್ನು ಆಹುತಿ ಕೊಟ್ಟರು. ಯೆಹೋವನ ದೃಷ್ಟಿಯಲ್ಲಿ ನೀಚಕೃತ್ಯಗಳಾಗಿರುವ ಕಣಿಹೇಳುವುದು, ಮಾಟ ಮಂತ್ರಗಳನ್ನು ಮಾಡುವುದು ಮೊದಲಾದ ದುಷ್ಕೃತ್ಯಗಳಿಗೆ ತಮ್ಮನ್ನು ತೊಡಗಿಸಿಕೊಂಡು, ಯೆಹೋವನಿಗೆ ಕೋಪವನ್ನೆಬ್ಬಿಸಿದರು.
2 ಅರಸುಗಳು 17 : 18 (IRVKN)
ಇಸ್ರಾಯೇಲರು ಈ ಪ್ರಕಾರ ನಡೆದುಕೊಂಡುದರಿಂದ, ಯೆಹೋವನು ಅವರ ಮೇಲೆ ಬಹಳವಾಗಿ ಕೋಪಗೊಂಡು, ಯೆಹೂದ ಕುಲದವರ ಹೊರತು ಎಲ್ಲ ಕುಲಗಳವರನ್ನು ತನ್ನ ಸನ್ನಿಧಿಯಿಂದ ತಳ್ಳಿಬಿಟ್ಟನು.
2 ಅರಸುಗಳು 17 : 19 (IRVKN)
ಯೆಹೂದ್ಯರೂ ಸಹ ತಮ್ಮ ದೇವರಾದ ಯೆಹೋವನ ಆಜ್ಞೆಯನ್ನು ಕೈಕೊಳ್ಳದೆ ಇಸ್ರಾಯೇಲರ ಪದ್ಧತಿಯನ್ನು ಅನುಸರಿಸಿದರು.
2 ಅರಸುಗಳು 17 : 20 (IRVKN)
ಯೆಹೋವನು ಇಸ್ರಾಯೇಲರ ಕುಲಗಳಲ್ಲಿ ಉಳಿದಿದ್ದವರನ್ನೂ ಅಲಕ್ಷ್ಯಮಾಡಿ, ತನ್ನ ಸನ್ನಿಧಿಯಿಂದ ತಳ್ಳಿಬಿಟ್ಟು, ಸೂರೆಮಾಡುವವರಿಗೆ ಒಪ್ಪಿಸಿ ಅವರನ್ನು ಬಾಧಿಸಿದನು.
2 ಅರಸುಗಳು 17 : 21 (IRVKN)
ಆತನು * ಉತ್ತರ ರಾಜ್ಯ. ಇಸ್ರಾಯೇಲರ ರಾಜ್ಯವನ್ನು † ದಕ್ಷಿಣ ರಾಜ್ಯವಾದ ಯೆಹೂದ. ದಾವೀದ ಸಂತಾನದವರ ಕೈಯಿಂದ ಕಿತ್ತುಕೊಂಡ ನಂತರ ಇಸ್ರಾಯೇಲರು ನೆಬಾಟನ ಮಗನಾದ ಯಾರೊಬ್ಬಾಮನನ್ನು ಅರಸನನ್ನಾಗಿ ಮಾಡಿಕೊಂಡರು. ಅವನು ಅವರನ್ನು ಯೆಹೋವನ ಭಕ್ತಿಯಿಂದ ಬೀಳಿಸಿ ಮಹಾ ಪಾಪಕ್ಕೆ ಒಳಪಡಿಸಿದನು.
2 ಅರಸುಗಳು 17 : 22 (IRVKN)
ಇಸ್ರಾಯೇಲರು ಯಾರೊಬ್ಬಾಮನ ದುರ್ಮಾರ್ಗದಲ್ಲಿ ನಡೆದು ಅವನು ಮಾಡಿದ ಪಾಪಗಳನ್ನು ತೊರೆದು ಬಿಡಲಿಲ್ಲ.
2 ಅರಸುಗಳು 17 : 23 (IRVKN)
ಯೆಹೋವನು ತನ್ನ ಸೇವಕರಾದ ಎಲ್ಲಾ ಪ್ರವಾದಿಗಳ ಮುಖಾಂತರವಾಗಿ ಮುಂತಿಳಿಸಿದಂತೆ, ಇಸ್ರಾಯೇಲರನ್ನು ತನ್ನ ಸನ್ನಿಧಿಯಿಂದ ತಳ್ಳಿಬಿಟ್ಟನು. ಅವರು ಸೆರೆಯವರಾಗಿ ತಮ್ಮ ದೇಶದಿಂದ ಅಶ್ಶೂರ್ ದೇಶಕ್ಕೆ ಒಯ್ಯಲ್ಪಟ್ಟು ಇಂದಿನವರೆಗೂ ಅಲ್ಲಿಯೇ ಇದ್ದಾರೆ.
2 ಅರಸುಗಳು 17 : 24 (IRVKN)
ಸಮಾರ್ಯದವರೆನ್ನಿಸಿಕೊಳ್ಳುವ ಮಿಶ್ರಜನಾಂಗದವರ ಉತ್ಪತ್ತಿ ಅಶ್ಶೂರದ ಅರಸನು ಸಮಾರ್ಯಪಟ್ಟಣಗಳಲ್ಲಿ ವಾಸವಾಗಿದ್ದ ಇಸ್ರಾಯೇಲರನ್ನು ಸೆರೆಯಾಗಿ ಒಯ್ದ ನಂತರ ಅವರಿಗೆ ಬದಲಾಗಿ ಆ ಪಟ್ಟಣಗಳಿಗೆ ಬಾಬೆಲ್, ಕೂತಾ, ಅವ್ವಾ, ಹಮಾತ್, ಸೆಫರ್ವಯಿಮ್ ಎಂಬ ಊರುಗಳವರನ್ನು ಅಲ್ಲಿಗೆ ಕಳುಹಿಸಿದನು. ಅವರು ಸಮಾರ್ಯ ದೇಶವನ್ನು ಸ್ವತಂತ್ರಪಡಿಸಿಕೊಂಡು ಅದರ ಪಟ್ಟಣಗಳಲ್ಲಿ ವಾಸಮಾಡಿದರು.
2 ಅರಸುಗಳು 17 : 25 (IRVKN)
ಅವರಿಗೆ ಆರಂಭದಲ್ಲಿ ಯೆಹೋವನ ಭಯಭಕ್ತಿ ಇರಲಿಲ್ಲ. ಆದುದರಿಂದ ಆತನು ಸಿಂಹಗಳನ್ನು ಕಳುಹಿಸಿದನು. ಅವು ಅವರಲ್ಲಿ ಕೆಲವರನ್ನು ಕೊಂದವು.
2 ಅರಸುಗಳು 17 : 26 (IRVKN)
ಅಶ್ಶೂರದ ಅರಸನ ಸೇವಕರು ತಮ್ಮ ಅರಸನಿಗೆ, “ನೀನು ಸಮಾರ್ಯ ಪಟ್ಟಣಗಳಿಗೆ ಕಳುಹಿಸಿದ ಆಯಾ ಊರುಗಳ ಜನರು ಆ ದೇಶದ ದೇವರಿಗೆ ನಡೆಯತಕ್ಕ ರೀತಿಯನ್ನು ಅರಿಯದವರಾಗಿದ್ದಾರೆ. ಆದುದರಿಂದ ಅಲ್ಲಿ ದೇವರು ಸಿಂಹಗಳನ್ನು ಕಳುಹಿಸಿ ಅವರನ್ನು ಸಂಹರಿಸುತ್ತಿದ್ದಾನೆ” ಎಂದು ತಿಳಿಸಿದರು.
2 ಅರಸುಗಳು 17 : 27 (IRVKN)
ಆಗ ಅಶ್ಶೂರದ ಅರಸನು ಅವರಿಗೆ, “ಅಲ್ಲಿಂದ ಇಲ್ಲಿಗೆ ಸೆರೆಯವರಾಗಿ ಬಂದಿರುವ ಯಾಜಕರಲ್ಲಿ ಒಬ್ಬನನ್ನು ಅಲ್ಲಿಗೆ ಕಳುಹಿಸಿರಿ. ಅವನು ಹೋಗಿ ಅಲ್ಲಿ ವಾಸವಾಗಿದ್ದು ಆ ದೇಶದ ದೇವರಿಗೆ ನಡೆಯತಕ್ಕ ರೀತಿಯನ್ನು ಅವರಿಗೆ ಕಲಿಸಲಿ” ಎಂದು ಆಜ್ಞಾಪಿಸಿದನು.
2 ಅರಸುಗಳು 17 : 28 (IRVKN)
ಅವರು ಸಮಾರ್ಯದಿಂದ ಸೆರೆಯವನಾಗಿ ಬಂದಿದ್ದ ಒಬ್ಬ ಯಾಜಕನನ್ನು ಅಲ್ಲಿಗೆ ಕಳುಹಿಸಿದರು. ಇವನು ಬೇತೇಲಿನಲ್ಲಿ ವಾಸವಾಗಿದ್ದು ಜನರಿಗೆ ಯೆಹೋವನ ಭಕ್ತಿಯನ್ನು ಬೋಧಿಸಿದನು.
2 ಅರಸುಗಳು 17 : 29 (IRVKN)
ಆದರೂ ಆ ಜನಾಂಗಗಳವರು ತಮ್ಮ ದೇವತೆಯ ವಿಗ್ರಹಗಳನ್ನು ಮಾಡಿಕೊಂಡು ತಾವು ವಾಸಿಸುವ ಊರುಗಳಲ್ಲಿ ಸಮಾರ್ಯದವರು ಏರ್ಪಡಿಸಿದ್ದ ಪೂಜಾಸ್ಥಳಗಳಲ್ಲಿ ಅವುಗಳನ್ನಿಟ್ಟು ಪ್ರತಿಷ್ಠಿಸಿ ಪೂಜಿಸುತ್ತಿದ್ದರು.
2 ಅರಸುಗಳು 17 : 30 (IRVKN)
ಬಾಬೆಲಿನವರು ಸುಕ್ಕೋತ್ಬೆನೋತ್ ನನ್ನೂ, ಕೂತದವರು ನೇರ್ಗೆಲ್ ನನ್ನೂ ಹಮಾತಿನವರು ಅಷೀಮನನ್ನು ಮಾಡಿದರು.
2 ಅರಸುಗಳು 17 : 31 (IRVKN)
ಅವ್ವಿಯರು ನಿಭಜ್ ಮತ್ತು ತರ್ತಕ್ ಎಂಬ ದೇವತೆಗಳನ್ನು ಮಾಡಿ ಪೂಜಿಸುತ್ತಿದ್ದರು. ಸೆಫರ್ವಯಿಮಿನವರು ಅದ್ರಮ್ಮೆಲೆಕ್, ಅನಮ್ಮೆಲೆಕ್ ಎಂಬ ತಮ್ಮ ಕುಲ ದೇವತೆಗಳನ್ನಾಗಿ ಪೂಜಿಸುತ್ತಾ ತಮ್ಮ ಮಕ್ಕಳನ್ನು ಬಲಿ ಅಗ್ನಿಪ್ರವೇಶ ಮಾಡಿಸುತ್ತಿದ್ದರು.
2 ಅರಸುಗಳು 17 : 32 (IRVKN)
ಅವರು ಯೆಹೋವನ ಭಕ್ತರಾಗಿದ್ದರೂ ಮನಸ್ಸಿಗೆ ಬಂದವರನ್ನು ಉನ್ನತ ಪೂಜಾಸ್ಥಳಗಳ ಯಾಜಕರನ್ನಾಗಿ ನೇಮಿಸಿಕೊಂಡು ಅವರ ಮುಖಾಂತರವಾಗಿ ಪೂಜಾಸ್ಥಳದ ಗುಡಿಗಳಲ್ಲಿ ಆರಾಧನೆ ನಡಿಸುತ್ತಿದ್ದರು.
2 ಅರಸುಗಳು 17 : 33 (IRVKN)
ಯೆಹೋವನ ಭಕ್ತರಾಗಿದ್ದರೂ ತಾವು ಬಿಟ್ಟು ಬಂದ ದೇಶಗಳ ಪದ್ಧತಿಯ ಪ್ರಕಾರ ತಮ್ಮ ಕುಲದೇವತೆಗಳ ಆರಾಧನೆಯನ್ನೂ ಮಾಡುತ್ತಿದ್ದರು.
2 ಅರಸುಗಳು 17 : 34 (IRVKN)
ಅವರು ಆ ಕಾಲದಲ್ಲಿ ರೂಢಿಯಾದ ಪದ್ಧತಿಯಂತೆ ಇಂದಿನವರೆಗೂ ನಡೆಯುತ್ತಿದ್ದಾರೆ. ಅವರು ಯೆಹೋವನಲ್ಲಿ ಭಯಭಕ್ತಿಯುಳ್ಳವರಲ್ಲ. ಆತನಿಂದ ಇಸ್ರಾಯೇಲನೆಂಬ ಹೆಸರು ಹೊಂದಿದ ಯಾಕೋಬನ ಸಂತಾನದವರಿಗೆ ಕೊಡಲ್ಪಟ್ಟ ಆಜ್ಞಾವಿಧಿಗಳನ್ನು, ಧರ್ಮನಿಯಮಗಳನ್ನು ಅನುಸರಿಸುವುದಿಲ್ಲ.
2 ಅರಸುಗಳು 17 : 35 (IRVKN)
ಯೆಹೋವನು ಇಸ್ರಾಯೇಲರೊಂದಿಗೆ ಒಡಂಬಡಿಕೆಯನ್ನು ಮಾಡಿಕೊಂಡು ಅವರಿಗೆ, “ನೀವು ಅನ್ಯದೇವತೆಗಳಿಗೆ ಭಯಪಡಬಾರದು, ಅವುಗಳಿಗೆ ಕೈಮುಗಿಯಲೂ ಬಾರದು, ಆರಾಧಿಸಲೂಬಾರದು, ಯಜ್ಞವನ್ನರ್ಪಿಸಲೂಬಾರದು.
2 ಅರಸುಗಳು 17 : 36 (IRVKN)
ನಿಮ್ಮನ್ನು ಮಹಾಶಕ್ತಿ, ಭುಜಬಲಪರಾಕ್ರಮ ಇವುಗಳ ಮೂಲಕವಾಗಿ ಐಗುಪ್ತ ದೇಶದಿಂದ ಕರೆದುಕೊಂಡು ಬಂದ ಯೆಹೋವನಾದ ನನ್ನಲ್ಲಿ ಭಯಭಕ್ತಿಯುಳ್ಳವರಾಗಿ, ನನಗೊಬ್ಬನಿಗೇ ಕೈಮುಗಿದು ಯಜ್ಞವರ್ಪಿಸಬೇಕು.
2 ಅರಸುಗಳು 17 : 37 (IRVKN)
ಯೆಹೋವನಾದ ನಾನು ನಿಮಗೆ ಬರೆಯಿಸಿ ಕೊಟ್ಟ ಆಜ್ಞಾವಿಧಿಗಳನ್ನು ಧರ್ಮನಿಯಮಗಳನ್ನು ತಪ್ಪದೇ ಕೈಕೊಳ್ಳಬೇಕು. ನೀವು ಅನ್ಯ ದೇವತೆಗಳಿಗೆ ಭಯಪಡಬಾರದು.
2 ಅರಸುಗಳು 17 : 38 (IRVKN)
ನಾನು ನಿಮ್ಮ ಸಂಗಡ ಮಾಡಿದ ಒಡಂಬಡಿಕೆಯನ್ನು ಮರೆಯದೆ ಇರಬೇಕು. ಅನ್ಯದೇವತೆಗಳನ್ನು ಪೂಜಿಸಬಾರದು.
2 ಅರಸುಗಳು 17 : 39 (IRVKN)
ಆದರೆ, ನಿಮ್ಮ ದೇವರಾದ ಯೆಹೋವನಲ್ಲಿ ನೀವು ಭಯಭಕ್ತಿಯುಳ್ಳವರಾಗಿರಬೇಕು. ಆಗ ಆತನು ನಿಮ್ಮನ್ನು ಎಲ್ಲಾ ಶತ್ರುಗಳ ಕೈಗೆ ಸಿಕ್ಕದಂತೆ ಕಾಪಾಡುವನು” ಎಂದು ಹೇಳಿದನು.
2 ಅರಸುಗಳು 17 : 40 (IRVKN)
ಅವರು ಅದನ್ನು ಲಕ್ಷ್ಯಕ್ಕೆ ತಂದುಕೊಳ್ಳದೆ ತಮ್ಮ ಹಿಂದಿನ ಪದ್ಧತಿಗಳನ್ನೇ ಅನುಸರಿಸಿದರು.
2 ಅರಸುಗಳು 17 : 41 (IRVKN)
ಆ ಜನಾಂಗಗಳವರು ಯೆಹೋವನಲ್ಲಿ ಭಯಭಕ್ತಿಯುಳ್ಳವರಾಗಿದ್ದರೂ ವಿಗ್ರಹಗಳನ್ನೂ ಆರಾಧಿಸುತ್ತಿದ್ದರು. ಅವರ ಸಂತಾನದವರು ಇಂದಿನವರೆಗೂ ಹಾಗೆಯೇ ಮಾಡುತ್ತಿದ್ದಾರೆ.
❮
❯