2 ಅರಸುಗಳು 16 : 1 (IRVKN)
ಯೆಹೂದದ ಅರಸನಾದ ಆಹಾಜನು ರೆಮಲ್ಯನ ಮಗನಾದ ಪೆಕಹನ ಆಳ್ವಿಕೆಯ ಹದಿನೇಳನೆಯ ವರ್ಷದಲ್ಲಿ ಯೆಹೂದ ರಾಜನಾದ ಯೋತಾಮನ ಮಗ ಆಹಾಜನು ಆಳತೊಡಗಿದನು.
2 ಅರಸುಗಳು 16 : 2 (IRVKN)
ಆಹಾಜನು ಪಟ್ಟಕ್ಕೆ ಬಂದಾಗ ಇಪ್ಪತ್ತು ವರ್ಷದವನಾಗಿದ್ದು, ಯೆರೂಸಲೇಮಿನಲ್ಲಿ ಹದಿನಾರು ವರ್ಷ ಆಳಿದನು. ಇವನು ತನ್ನ ದೇವರಾದ ಯೆಹೋವನ ದೃಷ್ಟಿಯಲ್ಲಿ ಒಳ್ಳೆಯವನಾಗಿರಲಿಲ್ಲ. ತನ್ನ ಪೂರ್ವಿಕನಾದ ದಾವೀದನ ಮಾರ್ಗವನ್ನು ಬಿಟ್ಟು ಇಸ್ರಾಯೇಲರ ಮಾರ್ಗವನ್ನು ಹಿಡಿದನು.
2 ಅರಸುಗಳು 16 : 3 (IRVKN)
ಇದಲ್ಲದೆ, ಅವನು ಇಸ್ರಾಯೇಲಿನ ಅರಸುಗಳ ಮಾರ್ಗದಲ್ಲಿ ನಡೆದುದಲ್ಲದೆ, ಯೆಹೋವನು ಇಸ್ರಾಯೇಲರ ಎದುರಿನಿಂದ ಹೊರಡಿಸಿಬಿಟ್ಟ ಅನ್ಯಜನಾಂಗಗಳ ಅಸಹ್ಯವಾದ ಪೂಜಾಕಾರ್ಯಗಳನ್ನು ಅನುಸರಿಸಿ ತನ್ನ ಮಗನನ್ನು ಅಗ್ನಿಗೆ ಬಲಿಕೊಟ್ಟನು.
2 ಅರಸುಗಳು 16 : 4 (IRVKN)
ಪೂಜಾಸ್ಥಳಗಳಲ್ಲಿಯೂ, ದಿನ್ನೆಗಳ ಮೇಲೆಯೂ, ಎಲ್ಲಾ ಹಸಿರು ಮರಗಳ ಕೆಳಗಡೆಯೂ ಯಜ್ಞಧೂಪಗಳನ್ನು ಸಮರ್ಪಿಸಿದನು.
2 ಅರಸುಗಳು 16 : 5 (IRVKN)
ಇವನ ಕಾಲದಲ್ಲಿ ಅರಾಮ್ಯರ ಅರಸನಾದ ರೆಚೀನ್, ಇಸ್ರಾಯೇಲರ ಅರಸನೂ, ರೆಮಲ್ಯನ ಮಗನೂ ಆದ ಪೆಕಹ ಎಂಬುವವರು ಒಟ್ಟಿಗೆ ಸೇರಿ ಯೆರೂಸಲೇಮಿಗೆ ವಿರೋಧವಾಗಿ ಬಂದು ಆಹಾಜನನ್ನು ಸುತ್ತಿಕೊಂಡರು. ಆದರೆ ಅವನನ್ನು ಜಯಿಸುವುದು ಅವರಿಂದ ಆಗಲಿಲ್ಲ.
2 ಅರಸುಗಳು 16 : 6 (IRVKN)
ಇದೇ ಕಾಲದಲ್ಲಿ ಅರಾಮ್ಯರ ಅರಸನಾದ ರೆಚೀನನು ಏಲತ್ ಪಟ್ಟಣವನ್ನು ಅರಾಮ್ ರಾಜ್ಯಕ್ಕೆ ಸೇರಿಸಿಕೊಂಡು ಅದರಲ್ಲಿದ್ದ ಯೆಹೂದ್ಯರನ್ನೆಲ್ಲಾ ಓಡಿಸಿದನು. ಎದೋಮ್ಯರು ಬಂದು ಅಲ್ಲಿ ವಾಸಿಸತೊಡಗಿದರು.ಅವರು ಇಂದಿನವರೆಗೂ ಅಲ್ಲೇ ವಾಸವಾಗಿದ್ದಾರೆ.
2 ಅರಸುಗಳು 16 : 7 (IRVKN)
ಆಹಾಜನು ಅಶ್ಶೂರ್ ದೇಶದ ಅರಸನಾದ ತಿಗ್ಲತ್ಪಿಲೆಸೆರನ ಬಳಿಗೆ ದೂತರನ್ನು ಕಳುಹಿಸಿ ಅವನಿಗೆ, “ನಾನು ನಿನ್ನ ದಾಸನೂ, ಮಗನೂ ಆಗಿದ್ದೇನೆ. ನೀನು ಬಂದು ನನ್ನನ್ನು, ನನಗೆ ವಿರೋಧವಾಗಿ ಎದ್ದಿರುವ ಅರಾಮ್ಯರ ಮತ್ತು ಇಸ್ರಾಯೇಲರ ಅರಸುಗಳ ಕೈಗೆ ಸಿಕ್ಕದಂತೆ ತಪ್ಪಿಸು” ಎಂದು ಕೇಳಿಕೊಂಡನು.
2 ಅರಸುಗಳು 16 : 8 (IRVKN)
ಇದಲ್ಲದೆ, ಆಹಾಜನು ಯೆಹೋವನ ಆಲಯದಲ್ಲಿಯೂ, ಅರಮನೆಯ ಭಂಡಾರದಲ್ಲಿಯೂ ಇದ್ದ, ಬೆಳ್ಳಿಬಂಗಾರವನ್ನು ತೆಗೆದುಕೊಂಡು ಅಶ್ಶೂರದ ಅರಸನಿಗೆ ಕಾಣಿಕೆಯಾಗಿ ಕಳುಹಿಸಿದನು.
2 ಅರಸುಗಳು 16 : 9 (IRVKN)
ಅಶ್ಶೂರದ ಅರಸನು ಇವನ ಮಾತಿಗೆ ಒಪ್ಪಿ, ದಮಸ್ಕ ಪಟ್ಟಣಕ್ಕೆ ವಿರೋಧವಾಗಿ ಹೋಗಿ ರೆಚೀನನನ್ನು ಕೊಂದು ನಿವಾಸಿಗಳನ್ನು ಸೆರೆಹಿಡಿದು, ಕೀರ್ ಪ್ರಾಂತ್ಯಕ್ಕೆ ತಂದನು.
2 ಅರಸುಗಳು 16 : 10 (IRVKN)
ಅರಸನಾದ ಆಹಾಜನು ಅಶ್ಶೂರದ ಅರಸನಾದ ತಿಗ್ಲತ್ಪಿಲೆಸೆರನ ದರ್ಶನಕ್ಕಾಗಿ ದಮಸ್ಕಕ್ಕೆ ಹೋದನು. ಅವನು ಅಲ್ಲಿದ್ದ ಯಜ್ಞವೇದಿಯನ್ನು ಕಂಡು, ಅದರ ಒಂದು ಪ್ರತಿಮೆಯನ್ನೂ, ಅದರ ಎಲ್ಲಾ ಅಲಂಕಾರದ ನಕ್ಷೆಯನ್ನೂ ಬರೆಯಿಸಿ, ಯಾಜಕನಾದ ಊರೀಯನಿಗೆ ಕಳುಹಿಸಿದನು.
2 ಅರಸುಗಳು 16 : 11 (IRVKN)
ಅರಸನಾದ ಆಹಾಜನು ದಮಸ್ಕದಿಂದ ಬರುವಷ್ಟರಲ್ಲಿ ಊರೀಯನು ಅರಸನಿಂದ ತನಗೆ ಬಂದ ಮಾದರಿಯ ಪ್ರಕಾರ ಒಂದು ಯಜ್ಞವೇದಿಯನ್ನು ಮಾಡಿಸಿಟ್ಟಿದ್ದನು.
2 ಅರಸುಗಳು 16 : 12 (IRVKN)
ಅರಸನು ದಮಸ್ಕದಿಂದ ಹಿಂತಿರುಗಿ ಬಂದ ಮೇಲೆ ಆ ಯಜ್ಞವೇದಿಯನ್ನು ಕಂಡು, ಸಮೀಪಕ್ಕೆ ಹೋಗಿ, ಅದರ ಮೇಲೆ ಬಲಿಗಳನ್ನು ಅರ್ಪಿಸಿದನು.
2 ಅರಸುಗಳು 16 : 13 (IRVKN)
ತಾನು ತಂದ ಸರ್ವಾಂಗಹೋಮದ್ರವ್ಯ, ಧಾನ್ಯನೈವೇದ್ಯ, ಪಾನದ್ರವ್ಯನೈವೇದ್ಯ ಇವುಗಳನ್ನು ಸಮರ್ಪಿಸಿ ಸಮಾಧಾನಯಜ್ಞಕ್ಕಾಗಿ ವಧಿಸಿದ ಪಶುಗಳ ರಕ್ತವನ್ನು ಅದರ ಮೇಲೆ ಚಿಮುಕಿಸಿದನು.
2 ಅರಸುಗಳು 16 : 14 (IRVKN)
ಇದಲ್ಲದೆ, ಯೆಹೋವನ ಆಲಯಕ್ಕೂ, ತನ್ನ ವೇದಿಗೂ ಮಧ್ಯದಲ್ಲಿದ್ದು ಆ ವರೆಗೂ ಯೆಹೋವನ ಸೇವೆಗೆ ಉಪಯೋಗಿಸಲ್ಪಡುತ್ತಿದ್ದ ತಾಮ್ರ ಯಜ್ಞವೇದಿಯನ್ನೂ ಆಲಯದ ಎದುರಿನಿಂದ ತೆಗೆಯಿಸಿ, ತನ್ನ ಯಜ್ಞವೇದಿಯ ಉತ್ತರ ದಿಕ್ಕಿನಲ್ಲಿಡಿಸಿದನು.
2 ಅರಸುಗಳು 16 : 15 (IRVKN)
ಅರಸನಾದ ಆಹಾಜನು ಯಾಜಕನಾದ ಊರೀಯನಿಗೆ, “ಉದಯಕಾಲದಲ್ಲಿ ಸರ್ವಾಂಗಹೋಮವನ್ನೂ, ಸಾಯಂಕಾಲದಲ್ಲಿ ಧಾನ್ಯನೈವೇದ್ಯವನ್ನೂ, ಅರಸನು ತರುವ ಸರ್ವಾಂಗಹೋಮದ್ರವ್ಯ, ಧಾನ್ಯನೈವೇದ್ಯ ಇವುಗಳನ್ನೂ, ಜನರು ತರುವ ಸರ್ವಾಂಗಹೋಮದ್ರವ್ಯ, ಧಾನ್ಯನೈವೇದ್ಯ, ಪಾನದ್ರವ್ಯ ಇವುಗಳನ್ನೂ ಈ ಮಹಾವೇದಿಯ ಮೇಲೆ ಸಮರ್ಪಿಸಬೇಕು ಮತ್ತು ಸರ್ವಾಂಗಹೋಮಯಜ್ಞಗಳಿಗಾಗಿ ವಧಿಸುವ ಪಶುಗಳ ರಕ್ತವನ್ನು ಇದರ ಮೇಲೆಯೇ ಚಿಮುಕಿಸಬೇಕು. ತಾಮ್ರ ಯಜ್ಞವೇದಿಯನ್ನು ಕುರಿತಾಗಿ ನಾನೇ ಆಲೋಚಿಸಿ ನೋಡಿಕೊಳ್ಳುವೆನು” ಎಂದು ಹೇಳಿದನು.
2 ಅರಸುಗಳು 16 : 16 (IRVKN)
ಯಾಜಕನಾದ ಊರೀಯನು ಅರಸನಾದ ಆಹಾಜನು ಹೇಳಿದಂತೆಯೇ ಮಾಡಿದನು.
2 ಅರಸುಗಳು 16 : 17 (IRVKN)
ಅರಸನಾದ ಆಹಾಜನು ಅಶ್ಶೂರದ ಅರಸನ ನಿಮಿತ್ತವಾಗಿ ಯಜ್ಞವೇದಿಗಳ ಪಟ್ಟಿಗಳನ್ನು ಕತ್ತರಿಸಿದನು, ಅವುಗಳ ಮೇಲಿದ್ದ ಗಂಗಾಳಗಳನ್ನು ತೆಗೆದಿಟ್ಟನು. ಕಡಲೆನಿಸುವ ಪಾತ್ರೆಯನ್ನು ತಾಮ್ರದ ಹೋರಿಗಳ ಮೇಲಣಿಂದ ಇಳಿಸಿ ಕಲ್ಲುಕಟ್ಟೆಗಳ ಮೇಲೆ ಇಡಿಸಿದನು.
2 ಅರಸುಗಳು 16 : 18 (IRVKN)
ಯೆಹೋವನ ಆಲಯದ ಪ್ರಾಕಾರದೊಳಗೆ ಸಬ್ಬತ್ ದಿನದ ಆರಾಧನೆಗಾಗಿ ರಾಜರಿಗಾಗಿ ಕಟ್ಟಲ್ಪಟ್ಟಿದ್ದ ಮಂಟಪವನ್ನು ಹಾಗೂ ಅರಮನೆಯಿಂದ ದೇವಸ್ಥಾನಕ್ಕೆ ಹೋಗುವ ಹೊರಗಿನ ಬಾಗಿಲನ್ನೂ ಬದಲಾಯಿಸಿದವನು ಅಶ್ಶೂರದ ಅರಸನಾದ ಈ ಆಹಾಜನೇ.
2 ಅರಸುಗಳು 16 : 19 (IRVKN)
ಆಹಾಜನ ಉಳಿದ ಚರಿತ್ರೆಯೂ, ಅವನ ಕೃತ್ಯಗಳೂ ಯೆಹೂದ್ಯರ ರಾಜಕಾಲ ಇತಿಹಾಸ ಎಂಬ ಗ್ರಂಥದಲ್ಲಿ ಬರೆದು ದಾಖಲಿಸಿದೆ.
2 ಅರಸುಗಳು 16 : 20 (IRVKN)
ಆಹಾಜನು ಪೂರ್ವಿಕರ ಬಳಿಗೆ ಸೇರಲು ಅವನ ಶವವನ್ನು ದಾವೀದನ ಪಟ್ಟಣದೊಳಗೆ ಅವನ ಕುಟುಂಬ ಸ್ಮಶಾನದಲ್ಲಿ ಸಮಾಧಿಮಾಡಿದರು. ಅವನ ನಂತರ ಅವನ ಮಗನಾದ ಹಿಜ್ಕೀಯನು ಅರಸನಾದನು.
❮
❯
1
2
3
4
5
6
7
8
9
10
11
12
13
14
15
16
17
18
19
20