2 ಅರಸುಗಳು 15 : 1 (IRVKN)
{ಯೆಹೂದದ ಅರಸನಾದ ಅಜರ್ಯ} [PS] ಇಸ್ರಾಯೇಲರ ಅರಸನಾದ ಯಾರೊಬ್ಬಾಮನ ಆಳ್ವಿಕೆಯ ಇಪ್ಪತ್ತೇಳನೆಯ ವರ್ಷದಲ್ಲಿ ಅಮಚ್ಯನ ಮಗನಾದ ಅಜರ್ಯನು ಯೆಹೂದದ ಅರಸನಾದನು.
2 ಅರಸುಗಳು 15 : 2 (IRVKN)
ಅಜರ್ಯನು ಪಟ್ಟಕ್ಕೆ ಬಂದಾಗ ಅವನು ಹದಿನಾರು ವರ್ಷದವನಾಗಿದ್ದು ಯೆರೂಸಲೇಮಿನಲ್ಲಿ ಐವತ್ತೆರಡು ವರ್ಷಗಳ ಕಾಲ ಆಳಿದನು. ಯೆರೂಸಲೇಮಿನವಳಾದ ಯೆಕೊಲ್ಯ ಎಂಬಾಕೆ ಇವನ ತಾಯಿ.
2 ಅರಸುಗಳು 15 : 3 (IRVKN)
ಅಜರ್ಯನು ತನ್ನ ತಂದೆಯಾದ ಅಮಚ್ಯನಂತೆ ಯೆಹೋವನ ದೃಷ್ಟಿಯಲ್ಲಿ ಒಳ್ಳೆಯವನಾಗಿ ನಡೆದನು. [PE][PS]
2 ಅರಸುಗಳು 15 : 4 (IRVKN)
ಆದರೆ, ಇವನ ಕಾಲದಲ್ಲಿಯೂ ಪೂಜಾಸ್ಥಳಗಳು ತೆಗೆಯಲ್ಪಡಲಿಲ್ಲವಾದುದರಿಂದ ಜನರು ಅವುಗಳಲ್ಲಿ ಯಜ್ಞಧೂಪಗಳನ್ನು ಅರ್ಪಿಸುತ್ತಿದ್ದರು.
2 ಅರಸುಗಳು 15 : 5 (IRVKN)
ಯೆಹೋವನು ಅವನನ್ನು ಕುಷ್ಠರೋಗದಿಂದ ಶಿಕ್ಷಿಸಿದನು. ಆದುದರಿಂದ ಇವನು ಜೀವದಿಂದಿರುವವರೆಗೂ ಪ್ರತ್ಯೇಕವಾದ ಮನೆಯಲ್ಲಿ ವಾಸಮಾಡಬೇಕಾಯಿತು. ರಾಜಗೃಹಾಧಿಪತ್ಯವನ್ನೂ, ಪ್ರಜಾಪಾಲನೆಯನ್ನೂ ಇವನ ಮಗನಾದ ಯೋತಾಮನು ನೋಡಿಕೊಳ್ಳುತ್ತಿದ್ದನು. [PE][PS]
2 ಅರಸುಗಳು 15 : 6 (IRVKN)
ಅಜರ್ಯನ ಉಳಿದ ಎಲ್ಲಾ ಕೃತ್ಯಗಳೂ ಯೆಹೂದ ರಾಜಕಾಲದ ವೃತಾಂತ ಇತಿಹಾಸ ಎಂಬ ಗ್ರಂಥದಲ್ಲಿ ಲಿಖಿತವಾಗಿದೆ.
2 ಅರಸುಗಳು 15 : 7 (IRVKN)
ಅಜರ್ಯನು ಪೂರ್ವಿಕರ ಬಳಿಗೆ ಸೇರಲು ಅವನ ಶವವನ್ನು ದಾವೀದ ನಗರದೊಳಗೆ ರಾಜಕುಟುಂಬದ ಸ್ಮಶಾನಭೂಮಿಯಲ್ಲಿ ಸಮಾಧಿಮಾಡಿದರು. ಅವನ ನಂತರ ಅವನ ಮಗನಾದ ಯೋತಾಮನು ಅರಸನಾದನು. [PS]
2 ಅರಸುಗಳು 15 : 8 (IRVKN)
{ಇಸ್ರಾಯೇಲರ ಅರಸನಾದ ಜೆಕರ್ಯ} [PS] ಯೆಹೂದದ ಅರಸನಾದ ಅಜರ್ಯನ ಆಳ್ವಿಕೆಯ ಮೂವತ್ತೆಂಟನೆಯ ವರ್ಷದಲ್ಲಿ ಯಾರೊಬ್ಬಾಮನ ಮಗನಾದ ಜೆಕರ್ಯ ಎಂಬುವವನು ಇಸ್ರಾಯೇಲರ ಅರಸನಾಗಿ ಸಮಾರ್ಯದಲ್ಲಿ ಆರು ತಿಂಗಳು ಆಳಿದನು.
2 ಅರಸುಗಳು 15 : 9 (IRVKN)
ಅವನು ಇಸ್ರಾಯೇಲರನ್ನು ಪಾಪಕ್ಕೆ ಪ್ರೇರೇಪಿಸಿದ ನೆಬಾಟನ ಮಗನಾದ ಯಾರೊಬ್ಬಾಮನ ಮಾರ್ಗವನ್ನು ಬಿಡದೆ ತನ್ನ ಪೂರ್ವಿಕರಂತೆ ಯೆಹೋವನ ದೃಷ್ಟಿಯಲ್ಲಿ ದ್ರೋಹಿಯಾದನು. [PE][PS]
2 ಅರಸುಗಳು 15 : 10 (IRVKN)
ಯಾಬೇಷನ ಮಗನಾದ ಶಲ್ಲೂಮನು ಅವನಿಗೆ ವಿರುದ್ಧವಾಗಿ ಒಳಸಂಚುಮಾಡಿ ಪ್ರಜೆಗಳ ಮುಂದೆಯೇ ಅವನನ್ನು ಕೊಂದು ಅವನಿಗೆ ಬದಲಾಗಿ ತಾನು ಅರಸನಾದನು.
2 ಅರಸುಗಳು 15 : 11 (IRVKN)
ಜೆಕರ್ಯನ ಉಳಿದ ಚರಿತ್ರೆಯು ಇಸ್ರಾಯೇಲರ ರಾಜಕಾಲ ಇತಿಹಾಸ ಎಂಬ ಗ್ರಂಥದಲ್ಲಿ ಲಿಖಿತವಾಗಿದೆ.
2 ಅರಸುಗಳು 15 : 12 (IRVKN)
“ನಿನ್ನ ಸಂತಾನದವರು ನಾಲ್ಕನೆಯ ತಲೆಮಾರಿನವರೆಗೂ ಇಸ್ರಾಯೇಲರ ಸಿಂಹಾಸನದ ಮೇಲೆ ಕುಳಿತುಕೊಳ್ಳುವರು” ಎಂಬುದಾಗಿ ಯೆಹೋವನು ಯೇಹುವಿಗೆ ಮುಂತಿಳಿಸಿದ ಮಾತು ನೆರವೇರಿತು. [PS]
2 ಅರಸುಗಳು 15 : 13 (IRVKN)
{ಇಸ್ರಾಯೇಲರ ಅರಸನಾದ ಶಲ್ಲೂಮನು} [PS] ಯೆಹೂದದ ಅರಸನಾದ ಉಜ್ಜೀಯನ ಆಳ್ವಿಕೆಯ ಮೂವತ್ತೊಂಬತ್ತನೆಯ ವರ್ಷದಲ್ಲಿ ಯಾಬೇಷನ ಮಗನಾದ ಶಲ್ಲೂಮನು ಇಸ್ರಾಯೇಲರ ಅರಸನಾಗಿ ಸಮಾರ್ಯದಲ್ಲಿ ಒಂದು ತಿಂಗಳು ಆಳಿದನು.
2 ಅರಸುಗಳು 15 : 14 (IRVKN)
ಗಾದಿಯ ಮಗನಾದ ಮೆನಹೇಮನೆಂಬುವನು ತಿರ್ಚದಿಂದ ಸಮಾರ್ಯಕ್ಕೆ ಬಂದು ಅಲ್ಲಿದ್ದ ಯಾಬೇಷನ ಮಗನಾದ ಶಲ್ಲೂಮನನ್ನು ಕೊಂದು, ಅವನಿಗೆ ಬದಲಾಗಿ ತಾನು ಅರಸನಾದನು.
2 ಅರಸುಗಳು 15 : 15 (IRVKN)
ಶಲ್ಲೂಮನ ಉಳಿದ ಚರಿತ್ರೆಯೂ ಮತ್ತು ಅವನ ಒಳಸಂಚಿನ ವಿವರವೂ ಇಸ್ರಾಯೇಲ್ ರಾಜಕಾಲ ಇತಿಹಾಸ ಎಂಬ ಗ್ರಂಥದಲ್ಲಿ ಬರೆದು ದಾಖಲಿಸಲಾಗಿದೆ.
2 ಅರಸುಗಳು 15 : 16 (IRVKN)
ಮೆನಹೇಮನು ತಿರ್ಚದಿಂದ ತಿಪ್ಸಹುವಿಗೆ ಹೋದಾಗ ಅಲ್ಲಿಯವರು ತಮ್ಮ ಊರುಬಾಗಿಲನ್ನು ಅವನಿಗೆ ತೆರೆಯಲಿಲ್ಲ, ಆದುದರಿಂದ ಅವನು ಆ ಊರನ್ನು ಅದಕ್ಕೆ ಸೇರಿದ ಪ್ರದೇಶವನ್ನೂ ಹಾಳುಮಾಡಿ ಅದರ ನಿವಾಸಿಗಳನ್ನು ಸಂಹರಿಸಿದನು. ಅದರಲ್ಲಿದ್ದ ಎಲ್ಲಾ ಗರ್ಭಿಣಿಗಳ ಹೊಟ್ಟೆಯನ್ನು ಸೀಳಿಹಾಕಿಸಿದನು. [PS]
2 ಅರಸುಗಳು 15 : 17 (IRVKN)
{ಇಸ್ರಾಯೇಲರ ಅರಸನಾದ ಮೆನಹೇಮನು} [PS] ಯೆಹೂದದ ಅರಸನಾದ [* ಅಂದರೆ ಉಜ್ಜೀಯ.] ಅಜರ್ಯನ ಆಳ್ವಿಕೆಯ ಮೂವತ್ತೊಂಬತ್ತನೆಯ ವರ್ಷದಲ್ಲಿ ಗಾದಿಯ ಮಗನಾದ ಮೆನಹೇಮನು ಇಸ್ರಾಯೇಲರ ಅರಸನಾಗಿ ಸಮಾರ್ಯದಲ್ಲಿ ಹತ್ತು ವರ್ಷ ಆಳಿದನು.
2 ಅರಸುಗಳು 15 : 18 (IRVKN)
ಇವನು ಜೀವದಿಂದ ಇರುವವರೆಗೂ ಇಸ್ರಾಯೇಲರನ್ನು ಪಾಪಕ್ಕೆ ಪ್ರಚೋದಿಸಿದ ನೆಬಾಟನ ಮಗನಾದ ಯಾರೊಬ್ಬಾಮನ ದುರ್ಮಾರ್ಗವನ್ನು ಬಿಡದೆ ತನ್ನ ಪೂರ್ವಿಕರಂತೆ ಯೆಹೋವನ ದೃಷ್ಟಿಯಲ್ಲಿ ದ್ರೋಹಿಯಾದನು.
2 ಅರಸುಗಳು 15 : 19 (IRVKN)
ಅಶ್ಶೂರ ದೇಶದ ಅರಸನಾದ ಪೂಲನೆಂಬವನು ಇಸ್ರಾಯೇಲ್ ದೇಶಕ್ಕೆ ವಿರುದ್ಧವಾಗಿ ಬಂದಾಗ ಮೆನಹೇಮನು ಅವನ ಮುಖಾಂತರವಾಗಿ ತನ್ನ ಅರಸುತನವನ್ನು ಜನರು ದೃಢಪಡಿಸಿಕೊಳ್ಳುವುದಕ್ಕೋಸ್ಕರ ಅವನಿಗೆ [† ಸುಮಾರು 34,000 ಕಿಲೋಗ್ರಾಂ.] ಸಾವಿರ ತಲಾಂತು ಬೆಳ್ಳಿಯನ್ನು ಕೊಟ್ಟನು.
2 ಅರಸುಗಳು 15 : 20 (IRVKN)
ಮೆನಹೇಮನು ಅಶ್ಶೂರದ ಅರಸನಿಗೆ ಆ ಹಣವನ್ನು ಕೊಡುವುದಕ್ಕಾಗಿ ಇಸ್ರಾಯೇಲರ ಪ್ರತಿಯೊಬ್ಬ ಐಶ್ವರ್ಯವಂತನಿಂದ [‡ ಸುಮಾರು 570 ಕಿಲೋಗ್ರಾಂ.] ಐವತ್ತು ರೂಪಾಯಿಗಳನ್ನು ವಸೂಲಿಮಾಡಿಕೊಂಡನು. ಆ ಹಣವು ಸಿಕ್ಕಿದ ನಂತರ ಅಶ್ಶೂರದ ಅರಸನು ಅಲ್ಲಿ ನಿಲ್ಲದೆ ಹಿಂತಿರುಗಿ ಹೋದನು. [PE][PS]
2 ಅರಸುಗಳು 15 : 21 (IRVKN)
ಮೆನಹೇಮನ ಉಳಿದ ಚರಿತ್ರೆಯೂ, ಅವನ ಎಲ್ಲಾ ಕೃತ್ಯಗಳೂ ಇಸ್ರಾಯೇಲರ ರಾಜಕಾಲ ಇತಿಹಾಸ ಎಂಬ ಗ್ರಂಥದಲ್ಲಿ ಲಿಖಿತವಾಗಿದೆ.
2 ಅರಸುಗಳು 15 : 22 (IRVKN)
ಮೆನಹೇಮನು ತನ್ನ ಪೂರ್ವಿಕರ ಬಳಿಗೆ ಸೇರಲು ಅವನ ಮಗನಾದ ಪೆಕಹ್ಯನು ಇಸ್ರಾಯೇಲರ ಅರಸನಾದನು. [PS]
2 ಅರಸುಗಳು 15 : 23 (IRVKN)
{ಇಸ್ರಾಯೇಲರ ಅರಸನಾದ ಪೆಕಹ್ಯ} [PS] ಯೆಹೂದದ ಅರಸನಾದ ಅಜರ್ಯನ ಆಳ್ವಿಕೆಯ ಐವತ್ತನೆಯ ವರ್ಷದಲ್ಲಿ ಮೆನಹೇಮನ ಮಗನಾದ ಪೆಕಹ್ಯ ಎಂಬುವವನು ಇಸ್ರಾಯೇಲರ ಅರಸನಾಗಿ ಸಮಾರ್ಯದಲ್ಲಿ ಎರಡು ವರ್ಷ ಆಳಿದನು.
2 ಅರಸುಗಳು 15 : 24 (IRVKN)
ಇವನು ಇಸ್ರಾಯೇಲರನ್ನು ಪಾಪಕ್ಕೆ ಪ್ರಚೋದಿಸಿದ ನೆಬಾಟನ ಮಗನಾದ ಯಾರೊಬ್ಬಾಮನ ಮಾರ್ಗವನ್ನು ಬಿಡದೆ ಯೆಹೋವನ ದೃಷ್ಟಿಯಲ್ಲಿ ದ್ರೋಹಿಯಾದನು. [PE][PS]
2 ಅರಸುಗಳು 15 : 25 (IRVKN)
ಇವನ ಸರದಾರನೂ, ರೆಮಲ್ಯನ ಮಗನೂ ಆಗಿದ್ದ ಪೆಕಹನು, ಗಿಲ್ಯಾದಿನ ಐವತ್ತು ಮಂದಿ ಜನರನ್ನು ಕೂಡಿಸಿಕೊಂಡು ಇವನಿಗೆ ವಿರುದ್ಧವಾಗಿ ಒಳಸಂಚು ಮಾಡಿ ಸಮಾರ್ಯದಲ್ಲಿರುವ ಅರಮನೆಯ ಗರ್ಭಗೃಹದಲ್ಲಿ ಇವನನ್ನೂ ಅರ್ಗೋಬ್, ಅರ್ಯೇ ಎಂಬವರನ್ನೂ ಕೊಂದು ಇವನಿಗೆ ಬದಲಾಗಿ ತಾನು ಅರಸನಾದನು.
2 ಅರಸುಗಳು 15 : 26 (IRVKN)
ಪೆಕಹ್ಯನ ಉಳಿದ ಚರಿತ್ರೆಯೂ, ಅವನ ಎಲ್ಲಾ ಕೃತ್ಯಗಳೂ ಇಸ್ರಾಯೇಲರ ರಾಜಕಾಲ ಇತಿಹಾಸ ಎಂಬ ಗ್ರಂಥದಲ್ಲಿ ಬರೆದು ದಾಖಲಿಸಿದೆ. [PS]
2 ಅರಸುಗಳು 15 : 27 (IRVKN)
{ಇಸ್ರಾಯೇಲರ ಅರಸನಾದ ಪೆಕಹ} [PS] ಯೆಹೂದದ ಅರಸನಾದ ಅಜರ್ಯನ ಆಳ್ವಿಕೆಯ ಐವತ್ತೆರಡನೆಯ ವರ್ಷದಲ್ಲಿ ರೆಮಲ್ಯನ ಮಗನಾದ ಪೆಕಹನು ಇಸ್ರಾಯೇಲರ ಅರಸನಾಗಿ ಸಮಾರ್ಯದಲ್ಲಿ ಇಪ್ಪತ್ತು ವರ್ಷ ಆಳಿದನು.
2 ಅರಸುಗಳು 15 : 28 (IRVKN)
ಇವನು ಇಸ್ರಾಯೇಲರನ್ನು ಪಾಪಕ್ಕೆ ಪ್ರಚೋದಿಸಿದ ನೆಬಾಟನ ಮಗನಾದ ಯಾರೊಬ್ಬಾಮನ ಮಾರ್ಗವನ್ನು ಬಿಡದೆ ಯೆಹೋವನ ದೃಷ್ಟಿಯಲ್ಲಿ ದ್ರೋಹಿಯಾದನು. [PE][PS]
2 ಅರಸುಗಳು 15 : 29 (IRVKN)
ಇಸ್ರಾಯೇಲರ ಅರಸನಾದ ಪೆಕಹನ ಕಾಲದಲ್ಲಿ ಅಶ್ಶೂರ್ ದೇಶದ ಅರಸನಾದ ತಿಗ್ಲತ್ಪಿಲೆಸೆರನೆಂಬುವವನು ಬಂದು ಇಯ್ಯೋನ್, ಆಬೇಲ್ಬೇತ್ಮಾಕಾ, ಯಾನೋಹ, ಕೆದೆಷ್, ಹಾಚೋರ್ ಮೊದಲಾದ ನಫ್ತಾಲಿಯ ಊರುಗಳನ್ನು ಗಿಲ್ಯಾದ್ ಮತ್ತು ಗಲಿಲಾಯ ಪ್ರಾಂತ್ಯಗಳನ್ನೂ ಸ್ವಾಧೀನಪಡಿಸಿಕೊಂಡು ಅವುಗಳ ನಿವಾಸಿಗಳನ್ನು ಅಶ್ಶೂರ್ ದೇಶಕ್ಕೆ ಸೆರೆಯಾಗಿ ತೆಗೆದುಕೊಂಡು ಹೋದನು.
2 ಅರಸುಗಳು 15 : 30 (IRVKN)
ಆಗ ಏಲನ ಮಗನಾದ ಹೋಶೇಯನು, ರೆಮಲ್ಯನ ಮಗನಾದ ಪೆಕಹನಿಗೆ ವಿರುದ್ಧವಾಗಿ ಒಳಸಂಚು ಮಾಡಿ, ಇವನನ್ನು ಉಜ್ಜೀಯನ ಮಗನಾದ ಯೋತಾಮನ ಆಳ್ವಿಕೆಯ ಇಪ್ಪತ್ತನೆಯ ವರ್ಷದಲ್ಲಿ ಕೊಂದು ಇವನಿಗೆ ಬದಲಾಗಿ ತಾನು ಅರಸನಾದನು.
2 ಅರಸುಗಳು 15 : 31 (IRVKN)
ಪೆಕಹನ ಉಳಿದ ಚರಿತ್ರೆಯೂ, ಅವನ ಎಲ್ಲಾ ಕೃತ್ಯಗಳೂ ಇಸ್ರಾಯೇಲರ ರಾಜಕಾಲ ಇತಿಹಾಸ ಎಂಬ ಗ್ರಂಥದಲ್ಲಿ ಬರೆದು ದಾಖಲಿಸಿದೆ. [PS]
2 ಅರಸುಗಳು 15 : 32 (IRVKN)
{ಇಸ್ರಾಯೇಲರ ಅರಸನಾದ ಯೋತಾಮನು} [PS] ಇಸ್ರಾಯೇಲರ ಅರಸನೂ, ರೆಮಲ್ಯನ ಮಗನೂ ಆದ ಪೆಕಹನ ಆಳ್ವಿಕೆಯ ಎರಡನೆಯ ವರ್ಷದಲ್ಲಿ ಯೆಹೂದ್ಯರ ಅರಸನಾದ ಉಜ್ಜೀಯನ ಮಗನಾದ ಯೋತಾಮನು ಆಳತೊಡಗಿದನು.
2 ಅರಸುಗಳು 15 : 33 (IRVKN)
ಇವನು ಪಟ್ಟಕ್ಕೆ ಬಂದಾಗ ಇಪ್ಪತ್ತೈದು ವರ್ಷದವನಾಗಿದ್ದನು. ಇವನು ಯೆರೂಸಲೇಮಿನಲ್ಲಿ ಹದಿನಾರು ವರ್ಷ ಆಳಿದನು. ಚಾದೋಕನ ಮಗಳಾದ ಯೆರೂಷಾ ಇವನ ತಾಯಿ.
2 ಅರಸುಗಳು 15 : 34 (IRVKN)
ಇವನು ತನ್ನ ತಂದೆಯಾದ ಉಜ್ಜೀಯನಂತೆ ಯೆಹೋವನ ದೃಷ್ಟಿಯಲ್ಲಿ ಒಳ್ಳೆಯವನಾಗಿದ್ದನು.
2 ಅರಸುಗಳು 15 : 35 (IRVKN)
ಆದರೆ ಇವನ ಕಾಲದಲ್ಲಿ ಪೂಜಾಸ್ಥಳಗಳು ಇನ್ನೂ ತೆಗೆಯಲ್ಪಟ್ಟಿರಲಿಲ್ಲ. ಆದುದರಿಂದ ಜನರು ಅವುಗಳಲ್ಲಿ ಯಜ್ಞಧೂಪಗಳನ್ನು ಸಮರ್ಪಿಸುತ್ತಿದ್ದರು. ಯೆಹೋವನ ಆಲಯಕ್ಕೆ ಮೇಲಣ ಹೆಬ್ಬಾಗಿಲನ್ನು ಇಡಿಸಿದವನು ಇವನೇ.
2 ಅರಸುಗಳು 15 : 36 (IRVKN)
ಯೋತಾಮನ ಉಳಿದ ಚರಿತ್ರೆಯೂ, ಅವನ ಎಲ್ಲಾ ಕೃತ್ಯಗಳೂ ಯೆಹೂದ ರಾಜಕಾಲ ಇತಿಹಾಸ ಎಂಬ ಗ್ರಂಥದಲ್ಲಿ ಬರೆದು ದಾಖಲಿಸಿದೆ. [PE][PS]
2 ಅರಸುಗಳು 15 : 37 (IRVKN)
ಯೆಹೋವನು ಆ ಕಾಲದಲ್ಲಿ ಅರಾಮ್ಯರ ಅರಸನಾದ ರೆಚೀನನನ್ನೂ, ರೆಮಲ್ಯನ ಮಗನಾದ ಪೆಕಹನನ್ನೂ ಯೆಹೂದ್ಯರಿಗೆ ವಿರೋಧವಾಗಿ ಕಳುಹಿಸತೊಡಗಿದನು.
2 ಅರಸುಗಳು 15 : 38 (IRVKN)
ಯೋತಾಮನು ಪೂರ್ವಿಕರ ಬಳಿಗೆ ಸೇರಲು ಅವನ ಶವವನ್ನು ಅವನ ಪೂರ್ವಿಕನಾದ ದಾವೀದನ ಪಟ್ಟಣದೊಳಗೆ ಅವನ ಪೂರ್ವಿಕರ ಕುಟುಂಬ ಸ್ಮಶಾನದಲ್ಲಿ ಸಮಾಧಿಮಾಡಿದರು. ಅವನ ನಂತರ ಅವನ ಮಗನಾದ ಆಹಾಜನು ಅರಸನಾದನು. [PE]
❮
❯