2 ಅರಸುಗಳು 12 : 1 (IRVKN)
ಯೆಹೂದದ ಅರಸನಾದ ಯೆಹೋವಾಷನು ಯೆಹೋವಾಷನು ಯೇಹುವಿನ ಆಳ್ವಿಕೆಯ ಏಳನೆಯ ವರ್ಷದಲ್ಲಿ ಅರಸನಾಗಿ, ಯೆರೂಸಲೇಮಿನಲ್ಲಿ ನಲ್ವತ್ತು ವರ್ಷ ಆಳಿದನು. ಬೇರ್ಷೆಬದವಳಾದ ಚಿಬ್ಯಳು ಇವನ ತಾಯಿ.
2 ಅರಸುಗಳು 12 : 2 (IRVKN)
ಯಾಜಕನಾದ ಯೆಹೋಯಾದಾವನು ಯೆಹೋವಾಷನಿಗೆ ಬೋಧಕನಾಗಿದ್ದ ಕಾಲದಲ್ಲಿ ಅವನು ಯೆಹೋವನ ದೃಷ್ಟಿಯಲ್ಲಿ ಒಳ್ಳೆಯವನಾಗಿಯೇ ನಡೆದುಕೊಳ್ಳುತ್ತಿದ್ದನು.
2 ಅರಸುಗಳು 12 : 3 (IRVKN)
ಆದರೆ ಅವನು ಪೂಜಾಸ್ಥಳಗಳನ್ನು ತೆಗೆದುಹಾಕಲಿಲ್ಲವಾದುದರಿಂದ ಜನರು ಅವುಗಳ ಮೇಲೆಯೇ ಯಜ್ಞಧೂಪಗಳನ್ನು ಅರ್ಪಿಸುತ್ತಿದ್ದರು.
2 ಅರಸುಗಳು 12 : 4 (IRVKN)
ಯೆಹೋವಾಷನು ಯಾಜಕರಿಗೆ, “ನೀವು ಯೆಹೋವನ ಆಲಯಕ್ಕೆ ಸೇರಿದ ಎಲ್ಲಾ ಪರಿಶುದ್ಧ ದ್ರವ್ಯವನ್ನು ಅಂದರೆ ಜನಗಣತಿಯಲ್ಲಿ ಲೆಕ್ಕಿಸಲ್ಪಟ್ಟ ಪ್ರತಿಯೊಬ್ಬನೂ ತಂದುಕೊಡುವ ಹಣ, ದೇವರಿಗೆ ಪ್ರತಿಷ್ಠಿತನಾದ ಮನುಷ್ಯನು ತನ್ನ ಪ್ರಾಣವನ್ನು ಬಿಡಿಸಿಕೊಳ್ಳುವುದಕ್ಕಾಗಿ ತರುವ ಹಣ, ಜನರು ಯೆಹೋವನ ಆಲಯಕ್ಕೆ ಸ್ವೇಚ್ಛೆಯಿಂದ ತಂದೊಪ್ಪಿಸುವ ಹಣ ಇವುಗಳನ್ನು ತೆಗೆದುಕೊಂಡು,
2 ಅರಸುಗಳು 12 : 5 (IRVKN)
ದೇವಾಲಯಕ್ಕೆ ಎಲ್ಲೆಲ್ಲಿ ದುರಸ್ತಿಯಾಗಬೇಕೆಂಬುದನ್ನು ನೋಡಿ ಅದನ್ನು ಸರಿಮಾಡುವುದಕ್ಕೋಸ್ಕರ ಉಪಯೋಗಿಸಿರಿ, ಪ್ರತಿಯೊಬ್ಬನೂ ತನ್ನ ತನ್ನ ಪರಿಚಿತರಿಂದಲೇ ಹಣವನ್ನು ತೆಗೆದುಕೊಳ್ಳಬೇಕು” ಎಂದು ಆಜ್ಞಾಪಿಸಿದನು.
2 ಅರಸುಗಳು 12 : 6 (IRVKN)
ಯಾಜಕರು ಅರಸನಾದ ಯೆಹೋವಾಷನ ಆಳ್ವಿಕೆಯ ಇಪ್ಪತ್ತಮೂರನೆ ವರ್ಷದವರೆಗೂ ದೇವಾಲಯವನ್ನು ದುರಸ್ತಿ ಮಾಡಿರಲಿಲ್ಲ.
2 ಅರಸುಗಳು 12 : 7 (IRVKN)
ಆದುದರಿಂದ ಅರಸನಾದ ಯೆಹೋವಾಷನು ಯೆಹೋಯಾದಾವ, ಮೊದಲಾದ ಯಾಜಕರನ್ನು ಕರೆದು ಅವರಿಗೆ, “ನೀವು ಈ ವರೆಗೂ ದೇವಾಲಯವನ್ನೇಕೆ ದುರಸ್ತಿ ಮಾಡಲಿಲ್ಲ? ಇನ್ನು ಮುಂದೆ ನಿಮ್ಮ ಪರಿಚಿತರಿಂದ ಹಣವನ್ನು ವಸೂಲಿಮಾಡಿಕೊಳ್ಳದೆ ನಿಮ್ಮಲಿರುವ ಹಣದಿಂದ ದೇವಾಲಯದ ದುರಸ್ತಿಗಾಗಿ ಕಾರ್ಯವನ್ನು ಮಾಡಿರಿ” ಎಂದು ಹೇಳಿದನು.
2 ಅರಸುಗಳು 12 : 8 (IRVKN)
ಆಗ ಯಾಜಕರು ಅವನಿಗೆ, “ನಾವು ಇನ್ನು ಮುಂದೆ ಜನರಿಂದ ಹಣ ತೆಗೆದುಕೊಳ್ಳುವುದಿಲ್ಲ. ದೇವಾಲಯದ ದುರಸ್ತಿಗಾಗಿ ಕೈಹಾಕುವುದಿಲ್ಲ” ಎಂಬುದಾಗಿ ಮಾತುಕೊಟ್ಟರು.
2 ಅರಸುಗಳು 12 : 9 (IRVKN)
ಯಾಜಕನಾದ ಯೆಹೋಯಾದಾವನು ಒಂದು ಪೆಟ್ಟಿಗೆಯನ್ನು ತೆಗೆದುಕೊಂಡು ಬಂದು ಅದರ ಮುಚ್ಚಳದಲ್ಲಿ ತೂತು ಮಾಡಿ, ಅದನ್ನು ಯೆಹೋವನ ಆಲಯದ ಬಾಗಿಲಿನ ಬಲಗಡೆಯಲ್ಲಿ ಯಜ್ಞವೇದಿಯ ಹತ್ತಿರ ಇಟ್ಟನು. ದ್ವಾರಪಾಲಕರಾದ ಯಾಜಕರು ಯೆಹೋವನ ಆಲಯಕ್ಕೆ ತರಲ್ಪಟ್ಟ ಹಣವನ್ನೆಲ್ಲಾ ಅದರಲ್ಲಿಯೇ ಹಾಕಿಸುತ್ತಿದ್ದರು.
2 ಅರಸುಗಳು 12 : 10 (IRVKN)
ಯೆಹೋವನ ಆಲಯದ ಪೆಟ್ಟಿಗೆಯಲ್ಲಿ ಬೇಕಾದಷ್ಟು ಹಣ ಇದೆಯೆಂದು ಕಂಡು ಬಂದಾಗೆಲ್ಲಾ, ರಾಜಲೇಖಕನೂ, ಮಹಾಯಾಜಕನೂ ಬಂದು ಅದನ್ನು ಎಣಿಸಿ ಚೀಲಗಳಲ್ಲಿ ಕಟ್ಟಿ ಇಡುವರು.
2 ಅರಸುಗಳು 12 : 11 (IRVKN)
ಅವರು ತೂಕಮಾಡಿ ಎಣಿಸಿದ ಹಣವನ್ನು, ಯೆಹೋವನ ಆಲಯದ ಕೆಲಸವನ್ನು ನಡಿಸುವ ಮುಖ್ಯಸ್ಥರಿಗೆ ಒಪ್ಪಿಸುವರು. ಅವರು ಅದನ್ನು ಅಲ್ಲಿ ಕೆಲಸ ಮಾಡುವ ಬಡಗಿ, ಶಿಲ್ಪಿ, ಮೇಸ್ತ್ರಿ, ಕಲ್ಲುಕುಟಿಕ ಇವರ ಸಂಬಳಕ್ಕಾಗಿಯೂ.
2 ಅರಸುಗಳು 12 : 12 (IRVKN)
ಮರ, ಕೆತ್ತಿದ ಕಲ್ಲುಗಳನ್ನು ಕೊಂಡುಕೊಳ್ಳುವುದಕ್ಕೂ, ಆಲಯವನ್ನು ದುರಸ್ತಿ ಮಾಡಲು ಬೇಕಾದ ಎಲ್ಲಾ ವೆಚ್ಚಕ್ಕಾಗಿಯೂ ಉಪಯೋಗಿಸಿದರು.
2 ಅರಸುಗಳು 12 : 13 (IRVKN)
ಯೆಹೋವನ ಆಲಯದೊಳಗೆ ತಂದ ಹಣದಿಂದ ಬೆಳ್ಳಿಯ ಬಟ್ಟಲುಗಳನ್ನು, ಕತ್ತರಿಗಳನ್ನು, ಬೋಗುಣಿಗಳನ್ನು, ತುತ್ತೂರಿಗಳನ್ನೂ, ಬೆಳ್ಳಿ ಬಂಗಾರದ ಪಾತ್ರೆ ಇವುಗಳನ್ನು ಮಾಡುವುದಕ್ಕಾಗಿ ಉಪಯೋಗಿಸುತ್ತಿರಲಿಲ್ಲ.
2 ಅರಸುಗಳು 12 : 14 (IRVKN)
ಯೆಹೋವನ ಆಲಯಕ್ಕೆ ತರಲ್ಪಟ್ಟ ಹಣವನ್ನು ದುರಸ್ತಿ ಕಾರ್ಯಮಾಡುವವರ ಸಂಬಳಕ್ಕಾಗಿ ಉಪಯೋಗಿಸುತ್ತಿದ್ದರು.
2 ಅರಸುಗಳು 12 : 15 (IRVKN)
ಕೆಲಸಗಾರರಿಗೆ ಸಂಬಳಕೊಡುವ ಮುಖ್ಯಸ್ಥರು ನಂಬಿಗಸ್ತರಾಗಿದ್ದರಿಂದ ಅವರ ವಶಕ್ಕೆ ಕೊಡಲ್ಪಟ್ಟ ಹಣದ ಲೆಕ್ಕವನ್ನು ಯಾರೂ ಕೇಳುತ್ತಿರಲಿಲ್ಲ.
2 ಅರಸುಗಳು 12 : 16 (IRVKN)
ಅಪರಾಧ ಪ್ರಾಯಶ್ಚಿತ್ತಕ್ಕಾಗಿಯೂ, ದೋಷಪರಿಹಾರಕ್ಕಾಗಿಯೂ ತರಲ್ಪಟ್ಟ ಹಣವು ಯಾಜಕರ ಪಾಲಿಗೆ ಸೇರುತ್ತಿತ್ತು. ಅದು ಯೆಹೋವನ ಆಲಯಕ್ಕೆ ಸೇರುತ್ತಿರಲಿಲ್ಲ.
2 ಅರಸುಗಳು 12 : 17 (IRVKN)
ಇದೇ ಕಾಲದಲ್ಲಿ ಅರಾಮ್ಯರ ಅರಸನಾದ ಹಜಾಯೇಲನು ಬಂದು ಗತ್ ಊರಿಗೆ ಮುತ್ತಿಗೆ ಹಾಕಿ, ಅದನ್ನು ಸ್ವಾಧೀನಪಡಿಸಿಕೊಂಡನು. ಅಲ್ಲಿಂದ ಅವನು ಯೆರೂಸಲೇಮಿಗೆ ವಿರೋಧವಾಗಿ ಹೊರಟನು.
2 ಅರಸುಗಳು 12 : 18 (IRVKN)
ಯೆಹೂದದ ಅರಸನಾದ ಯೆಹೋವಾಷನು ಇದನ್ನು ಕೇಳಿ ತಾನೂ ತನ್ನ ಪೂರ್ವಿಕರಾದ ಯೆಹೋಷಾಫಾಟನೂ, ಯೆಹೋರಾಮನೂ, ಅಹಜ್ಯನೂ, ಯೆಹೂದ ರಾಜರೂ ದೇವಸ್ಥಾನಕ್ಕೆ ಕಾಣಿಕೆಯಾಗಿ ಕೊಟ್ಟ ಒಡವೆಗಳು, ಯೆಹೋವನ ಆಲಯದ ಪ್ರತಿಷ್ಠೆಗಾಗಿ ಅರಮನೆಯ ಭಂಡಾರಗಳಲ್ಲಿದ್ದ ಬಂಗಾರ ಇವುಗಳನ್ನು ತೆಗೆದುಕೊಂಡು ಅರಾಮ್ಯರ ಅರಸನಾದ ಹಜಾಯೇಲನಿಗೆ ಕಳುಹಿಸಿದನು. ಆಗ ಅವನು ಯೆರೂಸಲೇಮನ್ನು ಬಿಟ್ಟು ಹೋದನು.
2 ಅರಸುಗಳು 12 : 19 (IRVKN)
ಯೆಹೋವಾಷನ ಉಳಿದ ಚರಿತ್ರೆಯೂ, ಅವನ ಎಲ್ಲಾ ಕೃತ್ಯಗಳೂ ಯೆಹೂದ ರಾಜಕಾಲವೃತ್ತಾಂತ ಎಂಬ ಗ್ರಂಥದಲ್ಲಿ ಬರೆದಿರುತ್ತವೆ.
2 ಅರಸುಗಳು 12 : 20 (IRVKN)
ಯೆಹೋವಾಷನ ಉದ್ಯೋಗಸ್ಥರು ಅವನಿಗೆ ವಿರೋಧವಾಗಿ ಒಳಸಂಚು ಮಾಡಿ “ಸಿಲ್ಲಾ” ಊರಿಗೆ ಇಳಿದು ಹೋಗುವ ಮಾರ್ಗವಾದ “ಮಿಲ್ಲೋ” ಗೃಹದಲ್ಲಿ ಯೆಹೋವಾಷನನ್ನು ಕೊಂದರು.
2 ಅರಸುಗಳು 12 : 21 (IRVKN)
ಅವರಲ್ಲಿ ಶಿಮೆಯಾತನ ಮಗನಾದ ಯೋಜಾಕಾರ್, ಶೋಮೆರನ ಮಗನಾದ ಯೆಹೋಜಾಬಾದ್ ಎಂಬುವವರು ಅವನ ಮೇಲೆ ಬಿದ್ದು ಅವನನ್ನು ಕೊಂದರು. ಅವನ ಜನರು ಅವನ ಶವವನ್ನು ದಾವೀದ ನಗರದೊಳಗೆ ಅವನ ಪೂರ್ವಿಕರ ಸ್ಮಶಾನ ಭೂಮಿಯಲ್ಲಿ ಸಮಾಧಿಮಾಡಿದರು. ಅವನಿಗೆ ಬದಲಾಗಿ ಅವನ ಮಗನಾದ ಅಮಚ್ಯನು ಅರಸನಾದನು.

1 2 3 4 5 6 7 8 9 10 11 12 13 14 15 16 17 18 19 20 21