2 ಅರಸುಗಳು 11 : 1 (IRVKN)
ಅತಲ್ಯ ಅಹಜ್ಯನು ಮರಣಹೊಂದಿದನೆಂದು ಅವನ ತಾಯಿಯಾದ ಅತಲ್ಯಳು ಕೇಳಿದಾಗ ಪಕ್ಕನೆ ರಾಜಸಂತಾನದವರನ್ನೆಲ್ಲಾ ಸಂಹರಿಸಿಬಿಟ್ಟಳು.
2 ಅರಸುಗಳು 11 : 2 (IRVKN)
ಆದರೆ ಅರಸನಾದ ಯೆಹೋರಾಮನ ಮಗಳೂ, ಅಹಜ್ಯನ ತಂಗಿಯೂ ಆದ ಯೆಹೋಷೆಬಳೆಂಬಾಕೆಯು ಯಾರಿಗೂ ತಿಳಿಯದಂತೆ ತನ್ನ ಅಣ್ಣನ ಮಗನಾದ ಯೆಹೋವಾಷನನ್ನು ಅತಲ್ಯಳಿಂದ ಹತರಾಗಿದ್ದ ರಾಜಪುತ್ರರ ಮಧ್ಯದಿಂದ ಅವನ ದಾದಿಯರೊಡನೆ ಅವನನ್ನು ತೆಗೆದುಕೊಂಡು ಹೋಗಿ, ಮಲಗುವ ಕೋಣೆಯಲ್ಲಿ ಅಡಗಿಸಿಟ್ಟಳು
2 ಅರಸುಗಳು 11 : 3 (IRVKN)
ಹೀಗೆ ಅವನು ಅತಲ್ಯಳಿಂದ ಹತವಾಗದಂತೆ ತಪ್ಪಿಸಿ ಕೊಂಡು ಆರು ವರ್ಷಗಳವರೆಗೂ ಯೆಹೋಷೆಬಳೊಡನೆ ಗುಪ್ತವಾಗಿ ಯೆಹೋವನ ಆಲಯದಲ್ಲಿದ್ದನು. ಆ ಆರು ವರ್ಷಗಳಲ್ಲಿ ಅತಲ್ಯಳೇ ದೇಶವನ್ನು ಆಳುತ್ತಿದ್ದಳು.
2 ಅರಸುಗಳು 11 : 4 (IRVKN)
ಏಳನೆಯ ವರ್ಷದಲ್ಲಿ, ಯೆಹೋಯಾದಾವನು ಕಾರಿಯರ ಎಂಬ ಸಿಪಾಯಿಗಳ ಮತ್ತು ಕಾವಲುದಂಡಿನವರ ಶತಾಧಿಪತಿಗಳನ್ನು ತನ್ನ ಹತ್ತಿರ ಯೆಹೋವನ ಆಲಯಕ್ಕೆ ಕರೆಯಿಸಿದನು. ಅಲ್ಲಿ ಅವನು ಅವರ ಸಂಗಡ ಆಪ್ತನಾಗಿದ್ದು ಪ್ರಮಾಣಪೂರ್ವಕವಾದ ಒಡಂಬಡಿಕೆಯನ್ನು ಮಾಡಿಕೊಂಡ ನಂತರ ರಾಜಕುಮಾರನನ್ನು ತೋರಿಸಿದನು.
2 ಅರಸುಗಳು 11 : 5 (IRVKN)
ಯೆಹೋಯಾದಾವನು ಅವರಿಗೆ, “ಸಬ್ಬತ್ ದಿನದಲ್ಲಿ ಮನೆಗೆ ಹೋಗುವ ಸೈನ್ಯದ ಮೂರರಲ್ಲೊಂದು ಭಾಗವು ರಾಜರ ಅರಮನೆಯನ್ನು ಕಾಯಬೇಕು,
2 ಅರಸುಗಳು 11 : 6 (IRVKN)
ಮೂರರಲ್ಲೊಂದು ಭಾಗವು ಸೂರ್ ಬಾಗಿಲಿನಲ್ಲಿಯೂ, ಮತ್ತೊಂದು ಭಾಗವು ಕಾವಲುದಂಡಿನ ಹಿಂದಿನ ಬಾಗಿಲಿನಲ್ಲಿಯೂ ಇರಬೇಕು. ಈ ಪ್ರಕಾರ ನೀವು ಅರಮನೆಯನ್ನು ಭದ್ರವಾಗಿ ಕಾಯಬೇಕು.
2 ಅರಸುಗಳು 11 : 7 (IRVKN)
ಇದಲ್ಲದೆ, ಸಬ್ಬತ್ ದಿನದಲ್ಲಿ ಅರಸನೊಂದಿಗೆ ಯೆಹೋವನ ಆಲಯವನ್ನು ಕಾಯುವುದಕ್ಕಾಗಿ ಬರುವ ಸೈನ್ಯವು ಇಬ್ಬಗೆಯಾಗಿದ್ದುಕೊಂಡು ಯೆಹೋವನ ಆಲಯವನ್ನು ಕಾಯಬೇಕು.
2 ಅರಸುಗಳು 11 : 8 (IRVKN)
ನೀವು ಕೈಯಲ್ಲಿ ಆಯುಧಗಳನ್ನು ಹಿಡಿದುಕೊಂಡು ಅವನ ಸುತ್ತಲೂ ನಿಂತು, ಅವನ ಗುಂಪಿನಲ್ಲಿ ನುಗ್ಗುವಂತವನನ್ನು ಸಂಹರಿಸಬೇಕು. ಅರಸನು ಹೊರಗೆ ಹೋಗಿ ಬರುವಾಗಲೆಲ್ಲಾ ನೀವು ಅವನ ಜೊತೆಯಲ್ಲೇ ಇರಬೇಕು. ಇದೇ ನನ್ನ ಅಪ್ಪಣೆ” ಎಂದು ಹೇಳಿದನು.
2 ಅರಸುಗಳು 11 : 9 (IRVKN)
ಯಾಜಕನಾದ ಯೆಹೋಯಾದಾಮನು ಆಜ್ಞಾಪಿಸಿದಂತೆ, ಶತಾಧಿಪತಿಗಳು ಸಬ್ಬತ್ ದಿನದಲ್ಲಿ ಮನೆಗೆ ಹೋಗತಕ್ಕ ಮತ್ತು ಕಾಯುವುದಕ್ಕಾಗಿ ಬರತಕ್ಕ ಸಿಪಾಯಿಗಳನ್ನು ಕರೆದುಕೊಂಡು ರಾಜಪುತ್ರನ ಬಳಿಗೆ ಬಂದರು.
2 ಅರಸುಗಳು 11 : 10 (IRVKN)
ಯಾಜಕನಾದ ಯೆಹೋಯಾದಾವನು ಆ ಶತಾಧಿಪತಿಗಳಿಗೆ ಯೆಹೋವನ ಆಲಯದಲ್ಲಿ ಇಡಲ್ಪಟ್ಟಿದ್ದ ರಾಜನಾದ ದಾವೀದನ ಬರ್ಜಿಯನ್ನೂ, ಗುರಾಣಿಗಳನ್ನೂ ಕೊಟ್ಟನು.
2 ಅರಸುಗಳು 11 : 11 (IRVKN)
ಕಾವಲುದಂಡಿನವರು ಆಯುಧ ಹಿಡಿದುಕೊಂಡು ಅರಸನನ್ನು ಕಾಯುವುದಕ್ಕೋಸ್ಕರ ದೇವಾಲಯದ ದಕ್ಷಿಣ ದಿಕ್ಕಿನ ಮೂಲೆಯಿಂದ ಯಜ್ಞವೇದಿಯವರೆಗೂ, ಅಲ್ಲಿಂದ ಉತ್ತರ ದಿಕ್ಕಿನ ಮೂಲೆಯವರೆಗೂ ಸಾಲಾಗಿ ನಿಂತರು.
2 ಅರಸುಗಳು 11 : 12 (IRVKN)
ಯೆಹೋಯಾದಾವನು ರಾಜಪುತ್ರನನ್ನು ಹೊರಗೆ ಕರೆದುಕೊಂಡು ಬಂದು, ಅವನ ತಲೆಯ ಮೇಲೆ ಕಿರೀಟವನ್ನು ಇಟ್ಟು ಕೈಯಲ್ಲಿ ಧರ್ಮಶಾಸ್ತ್ರವನ್ನು ಕೊಟ್ಟು, ಅವನಿಗೆ ರಾಜ್ಯಾಭಿಷೇಕ ಮಾಡಿದನು. ಕೂಡಲೆ ಜನರು ಚಪ್ಪಾಳೆ ತಟ್ಟುತ್ತಾ, “ಅರಸನು ಚಿರಂಜೀವಿಯಾಗಿರಲಿ” ಎಂದು ಕೂಗಿದರು.
2 ಅರಸುಗಳು 11 : 13 (IRVKN)
ಅತಲ್ಯಳು ಕಾವಲುದಂಡಿನವರ ಮತ್ತು ಇತರ ಜನರ ಗದ್ದಲವನ್ನು ಕೇಳಿ ಅವರು ಸೇರಿ ಬಂದಿದ್ದ ಯೆಹೋವನ ಆಲಯಕ್ಕೆ ಬಂದಳು.
2 ಅರಸುಗಳು 11 : 14 (IRVKN)
ಅಲ್ಲಿ ಅರಸನು ಪದ್ದತಿಯ ಪ್ರಕಾರ ಸ್ತಂಭದ ಬಳಿಯಲ್ಲಿ ನಿಂತಿದ್ದನು. ಅಧಿಪತಿಗಳೂ, ತುತ್ತೂರಿಯನ್ನು ಊದುವವರೂ ಅರಸನ ಹತ್ತಿರ ನಿಂತಿದ್ದರು. ದೇಶದ ಜನರೆಲ್ಲರೂ ಸಂತೋಷದಿಂದ ಕೊಂಬೂದುತ್ತಿದ್ದರು. ಇದನ್ನು ಕಂಡ ಕೂಡಲೆ ಅತಲ್ಯಳು ಬಟ್ಟೆಗಳನ್ನು ಹರಿದುಕೊಂಡು, “ದ್ರೋಹ! ದ್ರೋಹ!” ಎಂದು ಕೂಗಿದಳು.
2 ಅರಸುಗಳು 11 : 15 (IRVKN)
ಆಗ ಯಾಜಕನಾದ ಯೆಹೋಯಾದಾವನು ಸೇನಾನಿಗಳಾದ, ಶತಾಧಿಪತಿಗಳಿಗೆ, “ಈಕೆಯನ್ನು ಯೆಹೋವನ ಆಲಯದಲ್ಲಿ ಕೊಲ್ಲಬೇಡಿರಿ ಸಿಪಾಯಿಗಳ ಮಧ್ಯದಲ್ಲಿ ಆಕೆಯನ್ನು ಹೊರಗೆ ಕರೆದುಕೊಂಡು ಹೋಗಿರಿ ಮತ್ತು ಆಕೆಯನ್ನು ಹಿಂಬಾಲಿಸುವವರನ್ನು ಕತ್ತಿಯಿಂದ ಕೊಲ್ಲಿರಿ” ಎಂದು ಆಜ್ಞಾಪಿಸಿದನು.
2 ಅರಸುಗಳು 11 : 16 (IRVKN)
ಅವರು ಆಕೆಯನ್ನು ಹಿಡಿದು ಕುದುರೆಗಳ ಬಾಗಿಲಿನಿಂದ ರಾಜನ ಅರಮನೆಗೆ ಕರೆದೊಯ್ದು ಅಲ್ಲಿ ಹತ್ಯೆ ಮಾಡಿದರು.
2 ಅರಸುಗಳು 11 : 17 (IRVKN)
ಯೆಹೋಯಾದಾವನಿಂದ ಧಾರ್ಮಿಕ ಸುಧಾರಣೆ ಅನಂತರ ಯೆಹೋಯಾದಾವನ ಪ್ರೇರಣೆಯಿಂದ ಅರಸನೂ, ಪ್ರಜೆಗಳೂ ತಾವು ಯೆಹೋವನ ಪ್ರಜೆಗಳಾಗಿರುವುದಾಗಿ ಅಲ್ಲಿ ಪ್ರಮಾಣ ಮಾಡಿದರು. ಇದಲ್ಲದೆ ರಾಜಪ್ರಜೆಗಳೂ ಒಡಂಬಡಿಕೆಮಾಡಿಕೊಂಡರು.
2 ಅರಸುಗಳು 11 : 18 (IRVKN)
ಯೆಹೂದ್ಯರೆಲ್ಲರೂ ಬಾಳನ ದೇವಸ್ಥಾನಕ್ಕೆ ಹೋಗಿ ಬಾಳನ ಪೂಜಾರಿಯಾದ ಮತ್ತಾನನನ್ನು ಬಲಿಪೀಠಗಳ ಎದುರಿನಲ್ಲಿಯೇ ಕೊಂದು, ದೇವಸ್ಥಾನವನ್ನೂ ಅದರಲ್ಲಿದ್ದ ಬಲಿಪೀಠಗಳನ್ನೂ, ವಿಗ್ರಹಗಳನ್ನೂ ಸಂಪೂರ್ಣವಾಗಿ ಹಾಳುಮಾಡಿದರು. ಯೆಹೋಯಾದಾವನು ಯೆಹೋವನ ದೇವಾಲಯಕ್ಕೆ ಕಾವಲಿಟ್ಟನು.
2 ಅರಸುಗಳು 11 : 19 (IRVKN)
ಅಲ್ಲದೆ ಯೆಹೋಯಾದಾವನು ಶತಾಧಿಪತಿಗಳನ್ನು, ಕಾರಿಯರು ಎನ್ನಿಸಿಕೊಳ್ಳುವ ಸೈನ್ಯಗಳ ಕಾವಲುದಂಡನ್ನು, ಸಾಧಾರಣ ಜನರನ್ನು ಅವರೊಡನೆ ಅರಸನಾದ ಯೆಹೋವಾಷನನ್ನು ಯೆಹೋವನ ಆಲಯದಲ್ಲಿ ಕಾವಲುದಂಡಿನವರ ಬಾಗಿಲಿನ ಮಾರ್ಗವಾಗಿ ಅರಮನೆಗೆ ಕರೆದುಕೊಂಡು ಹೋಗಿ ರಾಜಸಿಂಹಾಸನದ ಮೇಲೆ ಕುಳ್ಳಿರಿಸಿದನು.
2 ಅರಸುಗಳು 11 : 20 (IRVKN)
ದೇಶದವರೆಲ್ಲರೂ ಬಹಳವಾಗಿ ಸಂತೋಷಪಟ್ಟರು. ಪಟ್ಟಣದಲ್ಲಿ ಶಾಂತಿ ನೆಲೆಸಿತು. ಅತಲ್ಯಳನ್ನು ರಾಜನ ಅರಮನೆಯ ಸಮೀಪದಲ್ಲಿ ಕತ್ತಿಯಿಂದ ಸಂಹರಿಸಿದರು.
2 ಅರಸುಗಳು 11 : 21 (IRVKN)
ಯೆಹೋವಾಷನು ಅರಸನಾದಾಗ ಅವನು ಏಳು ವರ್ಷದವನಾಗಿದ್ದನು.

1 2 3 4 5 6 7 8 9 10 11 12 13 14 15 16 17 18 19 20 21