2 ಪೂರ್ವಕಾಲವೃತ್ತಾ 35 : 1 (IRVKN)
ಯೋಷೀಯನ ಕಾಲದಲ್ಲಿ ನಡೆದ ಪಸ್ಕಹಬ್ಬ ಯೋಷೀಯನು ಯೆಹೋವನಿಗೋಸ್ಕರ ಯೆರೂಸಲೇಮಿನಲ್ಲಿ ಪಸ್ಕಹಬ್ಬವನ್ನು ಆಚರಿಸುವಂತೆ ಮಾಡಿದನು. ಮೊದಲನೆಯ ತಿಂಗಳಿನ ಹದಿನಾಲ್ಕನೆಯ ದಿನದಲ್ಲಿ ಪಸ್ಕದ ಕುರಿಗಳನ್ನು ಕೊಯ್ದರು.
2 ಪೂರ್ವಕಾಲವೃತ್ತಾ 35 : 2 (IRVKN)
ಯೋಷೀಯನು ಯಾಜಕರನ್ನು ಅವರವರ ಕೆಲಸಕ್ಕೆ ನೇಮಿಸಿ, ಯೆಹೋವನ ಆಲಯದ ಸೇವೆಗಾಗಿ ಅವರನ್ನು ಪ್ರೋತ್ಸಾಹಿಸಿದನು.
2 ಪೂರ್ವಕಾಲವೃತ್ತಾ 35 : 3 (IRVKN)
ಎಲ್ಲಾ ಇಸ್ರಾಯೇಲರನ್ನು ಉಪದೇಶಿಸತಕ್ಕವರೂ, ಯೆಹೋವನಿಗೆ ಪ್ರತಿಷ್ಠಿತರೂ ಆದ ಲೇವಿಯರಿಗೆ, “ದಾವೀದನ ಮಗನೂ ಇಸ್ರಾಯೇಲ್ ರಾಜನೂ ಆದ ಸೊಲೊಮೋನನು ಕಟ್ಟಿಸಿದ ದೇವಾಲಯದಲ್ಲಿ ಪವಿತ್ರ ಮಂಜೂಷವನ್ನು ಇರಿಸಿರಿ; ಅದನ್ನು ಹೆಗಲಿನ ಮೇಲೆ ಹೊತ್ತುಕೊಳ್ಳುವ ಅಗತ್ಯವಿಲ್ಲ. ಅದು ನಿಮ್ಮ ಹೆಗಲುಗಳಿಗೆ ಹೊರೆಯಾಗಿರಬಾರದು; ಇನ್ನು ಮುಂದೆ ನಿಮ್ಮ ದೇವರಾದ ಯೆಹೋವನನ್ನೂ, ಆತನ ಪ್ರಜೆಗಳಾದ ಇಸ್ರಾಯೇಲರನ್ನೂ ಸೇವಿಸಿರಿ.
2 ಪೂರ್ವಕಾಲವೃತ್ತಾ 35 : 4 (IRVKN)
ಇಸ್ರಾಯೇಲರ ಅರಸನಾದ ದಾವೀದನೂ, ಅವನ ಮಗನಾದ ಸೊಲೊಮೋನನೂ ಬರೆದು ನೇಮಿಸಿದಂತೆ ನಿಮ್ಮ ನಿಮ್ಮ ಗೋತ್ರವರ್ಗಗಳ ಪ್ರಕಾರ ಸಿದ್ಧರಾಗಿದ್ದು,
2 ಪೂರ್ವಕಾಲವೃತ್ತಾ 35 : 5 (IRVKN)
ನಿಮ್ಮ ಸಹೋದರರಾದ ಇಸ್ರಾಯೇಲರ ಒಂದೊಂದು ಗೋತ್ರಶಾಖೆಗಳಿಗಾಗಿ ನಿಮ್ಮಲ್ಲಿ ಒಂದೊಂದು ಗುಂಪಿನವರು ಪವಿತ್ರಸ್ಥಾನದಲ್ಲಿ ನಿಂತು ಪಸ್ಕದ ಕುರಿಯನ್ನು ವಧಿಸಲಿ
2 ಪೂರ್ವಕಾಲವೃತ್ತಾ 35 : 6 (IRVKN)
ಮೋಶೆಯಿಂದ ಪ್ರಕಟವಾದ ಯೆಹೋವನ ವಿಧಿಗನುಸಾರವಾಗಿ ನಿಮ್ಮ ಸಹೋದರರು ಪಸ್ಕಭೋಜನ ಮಾಡುವಂತೆ ನೀವು ನಿಮ್ಮನ್ನು ಶುದ್ಧಿಪಡಿಸಿಕೊಂಡು ಅವರಿಗಾಗಿ ಎಲ್ಲವನ್ನೂ ಸಿದ್ಧಮಾಡಿರಿ” ಎಂದು ಆಜ್ಞಾಪಿಸಿದನು.
2 ಪೂರ್ವಕಾಲವೃತ್ತಾ 35 : 7 (IRVKN)
ಯೋಷೀಯನು ಹಬ್ಬಕ್ಕೆ ಬಂದ ಜನರಿಗೆ ಪಸ್ಕಯಜ್ಞಕ್ಕಾಗಿ ರಾಜಕೀಯ ಸೊತ್ತಿನಿಂದ ಮೂವತ್ತು ಸಾವಿರ ಆಡುಮರಿಗಳನ್ನೂ, ಕುರಿಮರಿಗಳನ್ನೂ, ಮೂರು ಸಾವಿರ ಹೋರಿಗಳನ್ನೂ ದಾನಮಾಡಿದನು.
2 ಪೂರ್ವಕಾಲವೃತ್ತಾ 35 : 8 (IRVKN)
ಅವನ ಸರದಾರರು ಜನರಿಗೂ, ಯಾಜಕರಿಗೂ, ಲೇವಿಯರಿಗೂ ಯಜ್ಞಪಶುಗಳನ್ನು ಸಂತೋಷವಾಗಿ ಕೊಟ್ಟರು. ದೇವಾಲಯದ ಪ್ರಧಾನರಾದ ಹಿಲ್ಕೀಯ, ಜೆಕರ್ಯ, ಯೆಹೀಯೇಲ್ ಎಂಬುವವರು ಯಾಜಕರಿಗೆ ಎರಡು ಸಾವಿರದ ಆರು ನೂರು ಪಸ್ಕದ ಕುರಿಮರಿಗಳನ್ನೂ, ಮುನ್ನೂರು ಹೋರಿಗಳನ್ನೂ ಕೊಟ್ಟರು.
2 ಪೂರ್ವಕಾಲವೃತ್ತಾ 35 : 9 (IRVKN)
ಲೇವಿಯರಲ್ಲಿ ಮುಖ್ಯಸ್ಥರಾದ ಕೋನನ್ಯ, ಸೆಮಾಯ, ನೆತನೇಲ್ ಎಂಬ ಅಣ್ಣತಮ್ಮಂದಿರೂ, ಹಷಲ್ಯ, ಯೆಗೀಯೇಲ್, ಯೋಜಾಬಾದ್ ಎಂಬವರೂ ಲೇವಿಯರಿಗೆ ಐದು ಸಾವಿರ ಪಸ್ಕದ ಕುರಿಮರಿಗಳನ್ನೂ, ಐನೂರು ಹೋರಿಗಳನ್ನೂ ದಾನಮಾಡಿದರು.
2 ಪೂರ್ವಕಾಲವೃತ್ತಾ 35 : 10 (IRVKN)
ಸೇವೆಯ ಸಂಬಂಧವಾದದ್ದೆಲ್ಲವನ್ನೂ ಏರ್ಪಡಿಸಿದನಂತರ ಯಾಜಕರು ತಮ್ಮ ತಮ್ಮ ಸ್ಥಳಗಳಲ್ಲಿಯೂ, ಲೇವಿಯರು ಅರಸನ ಅಪ್ಪಣೆಯಂತೆ ವರ್ಗವರ್ಗಗಳಾಗಿಯೂ ನಿಂತರು;
2 ಪೂರ್ವಕಾಲವೃತ್ತಾ 35 : 11 (IRVKN)
ಲೇವಿಯರು ಪಸ್ಕದ ಪಶುಗಳನ್ನು ವಧಿಸಿದರು. ಯಾಜಕರು ಇವರ ಕೈಯಿಂದ ರಕ್ತವನ್ನು ತೆಗೆದುಕೊಂಡು ಪ್ರೋಕ್ಷಿಸಿದರು.
2 ಪೂರ್ವಕಾಲವೃತ್ತಾ 35 : 12 (IRVKN)
ಲೇವಿಯರು ಚರ್ಮ ಸುಲಿದು ಹೋಮಕ್ಕಾಗಿ ಪ್ರತ್ಯೇಕಿಸತಕ್ಕದ್ದನ್ನು ಪ್ರತ್ಯೇಕಿಸಿ ಜನರಿಗೆ ಆಯಾ ಗೋತ್ರಶಾಖೆಗಳಿಗನುಸಾರವಾಗಿ ಕೊಟ್ಟರು. ಇವರು ಅದನ್ನು ಮೋಶೆಯ ಧರ್ಮಶಾಸ್ತ್ರವಿಧಿಯ ಮೇರೆಗೆ ಯೆಹೋವನಿಗೆ ಸಮರ್ಪಿಸಬೇಕಾಯಿತು. ಹೋರಿಗಳ ವಿಷಯದಲ್ಲಿಯೂ ಅದೇ ಕ್ರಮವನ್ನು ಅನುಸರಿಸಿದರು.
2 ಪೂರ್ವಕಾಲವೃತ್ತಾ 35 : 13 (IRVKN)
ಆಮೇಲೆ ಲೇವಿಯರು ಪಸ್ಕದ ಮಾಂಸವನ್ನು ನಿಯಮದ ಪ್ರಕಾರ ಬೆಂಕಿಯಲ್ಲಿ ಸುಟ್ಟು ದೇವರಿಗೆ ಕಾಣಿಕೆಯಾಗಿ ಸಮರ್ಪಿತವಾದ ಪಶುಗಳ ಮಾಂಸವನ್ನು ಕೊಪ್ಪರಿಗೆ, ಬಾನೆ, ಹಂಡೆಗಳಲ್ಲಿ ಬೇಯಿಸಿ, ಬೇಗನೆ ತಂದು ಜನರಿಗೆ ಬಡಿಸಿದರು.
2 ಪೂರ್ವಕಾಲವೃತ್ತಾ 35 : 14 (IRVKN)
ತರುವಾಯ ತಮಗೋಸ್ಕರವೂ ಯಾಜಕರಿಗೋಸ್ಕರವೂ ಸಿದ್ಧಮಾಡಿದರು. ಆರೋನನ ಮಕ್ಕಳಾದ ಯಾಜಕರು ರಾತ್ರಿಯವರೆಗೂ ಸರ್ವಾಂಗಹೋಮಗಳನ್ನೂ, ಕೊಬ್ಬನ್ನೂ ಸರ್ಮಪಿಸುತ್ತಾ ಇದ್ದುದರಿಂದ ಲೇವಿಯರು ತಮಗೋಸ್ಕರ ಹೇಗೋ ಹಾಗೆ ಆರೋನನ ಮಕ್ಕಳಾದ ಯಾಜಕರಿಗೋಸ್ಕರ ಭೋಜನ ಸಿದ್ಧಮಾಡಿದರು.
2 ಪೂರ್ವಕಾಲವೃತ್ತಾ 35 : 15 (IRVKN)
ಆಸಾಫ್ಯರಾದ ಗಾಯಕರು, ಅರಸನಾದ ದಾವೀದನ ಮತ್ತು ಆಸಾಫ್, ಹೇಮಾನ್, ಅರಸನ ದರ್ಶಿಯಾದ ಯೆದುತೂನ್ ಇವರ ಆಜ್ಞಾನುಸಾರವಾಗಿ ತಮ್ಮ ಸ್ಥಳದಲ್ಲಿ ನಿಂತಿದ್ದರು; ದ್ವಾರಪಾಲಕರು ಆಯಾ ಬಾಗಿಲುಗಳನ್ನು ಕಾಯುತ್ತಿದ್ದರು. ಅವರ ಸಹೋದರರಾದ ಲೇವಿಯರು ಅವರ ಭೋಜನಕ್ಕೆ ಸಿದ್ಧಮಾಡುತ್ತಿದ್ದದರಿಂದ ಅವರು ತಮ್ಮ ತಮ್ಮ ಸೇವೆಯನ್ನು ಬಿಡುವುದಕ್ಕೆ ಕಾರಣವಿರಲಿಲ್ಲ.
2 ಪೂರ್ವಕಾಲವೃತ್ತಾ 35 : 16 (IRVKN)
ಈ ಪ್ರಕಾರ ಅರಸನಾದ ಯೋಷೀಯನ ಅಪ್ಪಣೆಯಂತೆ ಪಸ್ಕವನ್ನು ಆಚರಿಸುವುದಕ್ಕೂ ಯೆಹೋವನ ಯಜ್ಞವೇದಿಯ ಮೇಲೆ ಸರ್ವಾಂಗಹೋಮಗಳನ್ನರ್ಪಿಸುವುದಕ್ಕೂ ಯೆಹೋವನ ಸೇವೆಯ ಸಂಬಂಧವಾದದ್ದೆಲ್ಲವೂ ಆ ದಿನವೇ ಸಿದ್ಧವಾಯಿತು.
2 ಪೂರ್ವಕಾಲವೃತ್ತಾ 35 : 17 (IRVKN)
ಕೂಡಿಬಂದಿದ್ದ ಇಸ್ರಾಯೇಲರು ಆ ಕಾಲದಲ್ಲಿ ಪಸ್ಕಹಬ್ಬವನ್ನೂ ಏಳು ದಿನಗಳವರೆಗೆ ಹುಳಿಯಿಲ್ಲದ ರೊಟ್ಟಿಗಳ ಜಾತ್ರೆಯನ್ನೂ ಆಚರಿಸಿದರು.
2 ಪೂರ್ವಕಾಲವೃತ್ತಾ 35 : 18 (IRVKN)
ಇಂಥಾ ಪಸ್ಕಹಬ್ಬವು ಪ್ರವಾದಿಯಾದ ಸಮುವೇಲನ ದಿನಗಳಿಂದ ಇಸ್ರಾಯೇಲರಲ್ಲಿ ನಡೆಯಲೇ ಇಲ್ಲ. ಯೋಷೀಯನೂ, ಯಾಜಕರೂ, ಲೇವಿಯರೂ ಕೂಡಿಬಂದಿದ್ದ ಇಸ್ರಾಯೇಲರು, ಯೆಹೂದ್ಯರು, ಯೆರೂಸಲೇಮಿನವರೂ ಪಸ್ಕಹಬ್ಬವನ್ನು ಆಚರಿಸಿದಂತೆ ಇಸ್ರಾಯೇಲ್ ರಾಜರಲ್ಲಿ ಒಬ್ಬನೂ ಆಚರಿಸಲಿಲ್ಲ.
2 ಪೂರ್ವಕಾಲವೃತ್ತಾ 35 : 19 (IRVKN)
ಈ ಪಸ್ಕಹಬ್ಬವು ಯೋಷೀಯನ ಆಳ್ವಿಕೆಯ ಹದಿನೆಂಟನೆಯ ವರ್ಷದಲ್ಲಿ ನಡೆಯಿತು.
2 ಪೂರ್ವಕಾಲವೃತ್ತಾ 35 : 20 (IRVKN)
ಯೋಷೀಯನ ಮರಣ ಯೋಷೀಯನು ದೇವಾಲಯದ ವಿಷಯದಲ್ಲಿ ಈ ಎಲ್ಲಾ ವ್ಯವಸ್ಥೆಯನ್ನು ಮಾಡಿದನಂತರ ಐಗುಪ್ತದ ಅರಸನಾದ ನೆಕೋ ಎಂಬುವವನು ಯುದ್ಧಮಾಡುವುದಕ್ಕೋಸ್ಕರ ಯೂಫ್ರೆಟಿಸ್ ನದಿಯ ತೀರದಲ್ಲಿದ್ದ ಕರ್ಕೆಮೀಷಿಗೆ ಹೋದನು.
2 ಪೂರ್ವಕಾಲವೃತ್ತಾ 35 : 21 (IRVKN)
ಯೋಷೀಯನು ಅವನಿಗೆ ವಿರುದ್ಧವಾಗಿ ಹೊರಡಲು ನೆಕೋವನು ಅವನ ಬಳಿಗೆ ದೂತರನ್ನು ಕಳುಹಿಸಿ, “ಯೆಹೂದದ ಅರಸನೇ, ನನ್ನ ಗೊಡವೆ ನಿನಗೇಕೆ? ನಾನು ಈ ಸಾರಿ ಯುದ್ಧಕ್ಕೆ ಹೊರಟದ್ದು ನಿನಗೆ ವಿರುದ್ಧವಾಗಿ ಅಲ್ಲ. ನನ್ನ ಶತ್ರುವಂಶಕ್ಕೆ ವಿರುದ್ಧವಾಗಿ, ನಾನು ಮುನ್ನುಗ್ಗಬೇಕೆಂದು ದೇವರ ಅಪ್ಪಣೆಯಾಗಿದೆ. ನನ್ನೊಂದಿಗಿರುವ ದೇವರಿಗೆ ವಿರುದ್ಧ ಕೈಯೆತ್ತುವುದನ್ನು ಬಿಡು. ಇಲ್ಲವಾದರೆ ಆತನು ನಿನ್ನನ್ನು ನಾಶಮಾಡುವನು” ಎಂದು ಹೇಳಿಸಿದನು.
2 ಪೂರ್ವಕಾಲವೃತ್ತಾ 35 : 22 (IRVKN)
ಆದರೆ ಯೋಷೀಯನು ಅವನನ್ನು ಬಿಟ್ಟು ಹಿಂದಿರುಗಲಿಲ್ಲ. ದೈವೋಕ್ತಿಯಾಗಿದ್ದ ನೆಕೋವಿನ ಮಾತಿಗೆ ಕಿವಿಗೊಡದೆ, ವೇಷಹಾಕಿಕೊಂಡು ಅವನೊಡನೆ ಕಾದಾಡುವುದಕ್ಕೆ ಮೆಗಿದ್ದೋ ಬಯಲಿಗೆ ಹೋದನು.
2 ಪೂರ್ವಕಾಲವೃತ್ತಾ 35 : 23 (IRVKN)
ಅಲ್ಲಿ ಬಿಲ್ಲುಗಾರರು ಅರಸನಾದ ಯೋಷೀಯನಿಗೆ ಬಾಣವನ್ನೆಸೆದಾಗ ಅವನು ತನ್ನ ಸೇವಕರಿಗೆ, “ನನಗೆ ದೊಡ್ಡ ಗಾಯವಾಯಿತು, ನನ್ನನ್ನು ಆಚೆಗೆ ತೆಗೆದುಕೊಂಡು ಹೋಗಿರಿ” ಎಂದನು.
2 ಪೂರ್ವಕಾಲವೃತ್ತಾ 35 : 24 (IRVKN)
ಸೇವಕರು ಅವನನ್ನು ಯುದ್ಧರಥದಿಂದಿಳಿಸಿ, ಅವನ ಎರಡನೆಯ ರಥದಲ್ಲಿ ಮಲಗಿಸಿ ಯೆರೂಸಲೇಮಿಗೆ ತೆಗೆದುಕೊಂಡು ಹೋಗಲು ಅಲ್ಲಿ ಸತ್ತನು. ಅವನ ಶವವನ್ನು ಅವನ ಪೂರ್ವಿಕರ ಸ್ಮಶಾನದಲ್ಲಿ ಸಮಾಧಿಮಾಡಿದರು. ಎಲ್ಲಾ ಯೆಹೂದ್ಯರೂ ಯೆರೂಸಲೇಮಿನವರೂ ಯೋಷೀಯನ ವಿಷಯವಾಗಿ ಗೋಳಾಡಿದರು.
2 ಪೂರ್ವಕಾಲವೃತ್ತಾ 35 : 25 (IRVKN)
ಯೆರೆಮೀಯನು ಯೋಷೀಯನನ್ನು ಕುರಿತು ಶೋಕಗೀತವನ್ನು ರಚಿಸಿದನು. ಎಲ್ಲಾ ಗಾಯಕರೂ ಗಾಯಕಿಯರೂ ಅವನನ್ನು ಇಂದಿನ ವರೆಗೆ ತಮ್ಮ ಶೋಕಗೀತಗಳಲ್ಲಿ ವರ್ಣಿಸುತ್ತಿರುತ್ತಾರೆ. ಆ ಗೀತೆಗಳನ್ನು ಹಾಡುವುದು ಇಸ್ರಾಯೇಲರಲ್ಲಿ ಒಂದು ಪದ್ಧತಿಯಾಗಿದೆ. ಅವು ಶೋಕಗೀತಗ್ರಂಥದಲ್ಲಿ ಬರೆದಿರುತ್ತವೆ.
2 ಪೂರ್ವಕಾಲವೃತ್ತಾ 35 : 26 (IRVKN)
ಯೋಷೀಯನ ಉಳಿದ ಚರಿತ್ರೆಯೂ ಯೆಹೋವನ ಧರ್ಮಶಾಸ್ತ್ರ ಅನುಸಾರವಾದ ಅವನ ಭಕ್ತಿಕಾರ್ಯಗಳೂ,
2 ಪೂರ್ವಕಾಲವೃತ್ತಾ 35 : 27 (IRVKN)
ಅವನ ಪೂರ್ವೋತ್ತರ ವೃತ್ತಾಂತವೂ ಇಸ್ರಾಯೇಲರ ಮತ್ತು ಯೆಹೂದ್ಯ ರಾಜರ ಗ್ರಂಥದಲ್ಲಿ ಬರೆದಿರುತ್ತವೆ.
❮
❯