2 ಪೂರ್ವಕಾಲವೃತ್ತಾ 32 : 1 (IRVKN)
ಅರಸನಾದ ಸನ್ಹೇರೀಬನು ಯೆರೂಸಲೇಮಿಗೆ ಬೆದರಿಕೆ ಹಾಕಿದ್ದು ಈ ಭಕ್ತಿ ಕಾರ್ಯಗಳಾದ ನಂತರ ಅಶ್ಶೂರದ ಅರಸನಾದ ಸನ್ಹೇರೀಬನು ಯುದ್ಧಕ್ಕೆ ಹೊರಟು ಯೆಹೂದದಲ್ಲಿ ನುಗ್ಗಿ ಕೋಟೆಕೊತ್ತಲುಗಳುಳ್ಳ ಪಟ್ಟಣಗಳನ್ನು ಸ್ವಾಧೀನಮಾಡಿ ಕೊಳ್ಳಬೇಕೆಂದು ಅವುಗಳಿಗೆ ಮುತ್ತಿಗೆ ಹಾಕಿದನು.
2 ಪೂರ್ವಕಾಲವೃತ್ತಾ 32 : 2 (IRVKN)
ದೇಶದೊಳಗೆ ನುಗ್ಗಿದ ಸನ್ಹೇರೀಬನು ಯೆರೂಸಲೇಮಿನ ಮೇಲೆಯೂ ಯುದ್ಧಕ್ಕಾಗಿ ಬರಬೇಕೆಂದಿರುವುದು ಹಿಜ್ಕೀಯನಿಗೆ ತಿಳಿದುಬಂದಿತು.
2 ಪೂರ್ವಕಾಲವೃತ್ತಾ 32 : 3 (IRVKN)
ಅವನು ಪಟ್ಟಣದ ಹೊರಗಿರುವ ಎಲ್ಲಾ ಒರತೆಗಳನ್ನು ಮುಚ್ಚಿಸಬೇಕೆಂದು ಮನಸ್ಸು ಮಾಡಿ ತನ್ನ ಸರದಾರರ ಮತ್ತು ಶೂರರ ಮುಂದೆ ಆ ಪ್ರಸ್ತಾಪವನ್ನೆತ್ತಿ ಅವರ ಸಹಾಯವನ್ನು ಪಡೆದುಕೊಂಡನು.
2 ಪೂರ್ವಕಾಲವೃತ್ತಾ 32 : 4 (IRVKN)
ಆಗ ಅನೇಕರು ಸೇರಿ, “ಇಲ್ಲಿಗೆ ಬರುವ ಅಶ್ಶೂರದ ರಾಜರು ಬೇಕಾದಷ್ಟು ನೀರನ್ನು ನೋಡುವುದೇತಕ್ಕೆ?” ಎಂದುಕೊಂಡು ಎಲ್ಲಾ ಒರತೆಗಳನ್ನೂ ದೇಶದ ಮಧ್ಯದಲ್ಲಿ ಹರಿಯುವ ಹೊಳೆಯನ್ನು ಮುಚ್ಚಿಬಿಟ್ಟರು.
2 ಪೂರ್ವಕಾಲವೃತ್ತಾ 32 : 5 (IRVKN)
ಇದರಿಂದ ಅರಸನು ಧ್ಯೆರ್ಯಗೊಂಡು, ಅಲ್ಲಲ್ಲಿ ಬಿದ್ದುಹೋಗಿದ್ದ ಪೌಳಿಗೋಡೆಯನ್ನು ಜೀರ್ಣೋದ್ಧಾರ ಮಾಡಿಸಿ, ಅದರ ಮೇಲೆ ಗೋಪುರಗಳನ್ನೂ, ಹೊರಗೆ ಇನ್ನೊಂದು ಗೋಡೆಯನ್ನೂ ಕಟ್ಟಿಸಿದನು. ದಾವೀದನಗರದ ಮಿಲ್ಲೋ ಕೋಟೆಯನ್ನು ಭದ್ರಪಡಿಸಿದಲ್ಲದೆ. ಅನೇಕ ಆಯುಧಗಳನ್ನೂ, ಗುರಾಣಿಗಳನ್ನೂ ಮಾಡಿಸಿದನು.
2 ಪೂರ್ವಕಾಲವೃತ್ತಾ 32 : 6 (IRVKN)
ಅನಂತರ ಅವನು ಜನರನ್ನು ಮುನ್ನಡೆಸಲು ಸೇನಾಪತಿಗಳನ್ನು ನೇಮಿಸಿ ಅವರನ್ನು ಊರುಬಾಗಲಿನ ಬಯಲಿನಲ್ಲಿ ಒಟ್ಟಾಗಿ ಸೇರಿಸಿಕೊಂಡು ಅವರಿಗೆ,
2 ಪೂರ್ವಕಾಲವೃತ್ತಾ 32 : 7 (IRVKN)
“ಶೂರರಾಗಿರಿ, ಧೈರ್ಯದಿಂದಿರಿ; ಅಶ್ಶೂರದ ಅರಸನಿಗೂ ಅವನೊಂದಿಗಿರುವ ಆ ದೊಡ್ಡ ಗುಂಪಿಗೂ ಅಂಜಬೇಡಿರಿ, ಕಳವಳಪಡಬೇಡಿರಿ. ಅವನಿಗಿರುವ ಸಹಾಯಕ್ಕಿಂತ ನಮಗಿರುವ ಸಹಾಯವು ದೊಡ್ಡದ್ದು. ಅವನೊಂದಿಗಿರುವದಕ್ಕಿಂತ ದೊಡ್ಡವನಾಗಿರುವವನು ನಮ್ಮೊಂದಿಗಿದ್ದಾನೆ.
2 ಪೂರ್ವಕಾಲವೃತ್ತಾ 32 : 8 (IRVKN)
ಅವನಿಗಿರುವ ಸಹಾಯವು ನಶ್ವರವಾದ ತೋಳುಬಲ; ನಮಗಾದರೋ ನಮ್ಮ ಸಹಾಯಕನು ದೇವರಾದ ಯೆಹೋವನೇ. ಆತನು ನಮಗೆ ನೆರವಾಗಿ, ಯುದ್ಧಗಳಲ್ಲಿ ನಮಗೋಸ್ಕರ ಕಾದಾಡುವನು” ಎಂದು ಹೇಳಿ ಧೈರ್ಯಪಡಿಸಿದನು. ಜನರು ಯೆಹೂದದ ಅರಸನಾದ ಹಿಜ್ಕೀಯನ ಮಾತುಗಳನ್ನು ಕೇಳಿ ಭರವಸೆಯುಳ್ಳವರಾದರು.
2 ಪೂರ್ವಕಾಲವೃತ್ತಾ 32 : 9 (IRVKN)
ಇದಾದ ಮೇಲೆ, ಸರ್ವಸೇನೆಯೊಡನೆ ಲಾಕೀಷಿನ ಎದುರಿನಲ್ಲಿ ಪಾಳೆಯಮಾಡಿಕೊಂಡಿದ್ದ ಅಶ್ಶೂರದ ಅರಸನಾದ ಸನ್ಹೇರೀಬನು ತನ್ನ ಸೇವಕರನ್ನು ಯೆರೂಸಲೇಮಿಗೆ ಕಳುಹಿಸಿದನು. ಅವರ ಮುಖಾಂತರ ಯೆಹೂದದ ಅರಸನಾದ ಹಿಜ್ಕೀಯನಿಗೂ ಯೆರೂಸಲೇಮಿನಲ್ಲಿದ್ದ ಎಲ್ಲಾ ಯೆಹೂದ್ಯರಿಗೂ ಹೀಗೆ ಹೇಳಿ ಕಳುಹಿಸಿದನು,
2 ಪೂರ್ವಕಾಲವೃತ್ತಾ 32 : 10 (IRVKN)
“ಅಶ್ಶೂರದ ಅರಸನಾದ ಸನ್ಹೇರೀಬನು ಈ ರೀತಿಯಾಗಿ ಹೇಳುತ್ತಿದ್ದಾನೆ: ನೀವು ಯಾವುದರ ಮೇಲೆ ಭರವಸೆಯಿಟ್ಟು ಮುತ್ತಿಗೆಗೆ ಗುರಿಯಾಗಲಿರುವ ಯೆರೂಸಲೇಮಿನಲ್ಲಿ ನಿಂತಿದ್ದೀರಿ?
2 ಪೂರ್ವಕಾಲವೃತ್ತಾ 32 : 11 (IRVKN)
ಹಿಜ್ಕೀಯನು, ‘ನಮ್ಮ ದೇವರಾದ ಯೆಹೋವನು ಅಶ್ಶೂರದ ಅರಸನ ಕೈಯಿಂದ ನಮ್ಮನ್ನು ರಕ್ಷಿಸುವನು’ ಎಂಬ ನಂಬಿಕೆ ನಿಮ್ಮಲ್ಲಿ ಹುಟ್ಟಿಸುವುದಕ್ಕೆ ಪ್ರಯತ್ನಿಸುತ್ತಿರುವುದು ನಿಮ್ಮನ್ನು ಹಸಿವೆ ನೀರಡಿಕೆಗಳಿಂದ ಸಾಯಿಸುವುದಕ್ಕಾಗಿಯೇ ಅಲ್ಲದೆ ಮತ್ತ್ಯಾವುದಕ್ಕೂ ಅಲ್ಲ.
2 ಪೂರ್ವಕಾಲವೃತ್ತಾ 32 : 12 (IRVKN)
ಹಿಜ್ಕೀಯನು ಒಂದೇ ಯಜ್ಞವೇದಿಯ ಮುಂದೆ ಆರಾಧನೆ ಮಾಡಿ ಅದರ ಮೇಲೆಯೇ ಧೂಪಹಾಕಬೇಕೆಂಬುದಾಗಿ ಯೆಹೂದ್ಯರಿಗೂ, ಯೆರೂಸಲೇಮಿನವರಿಗೂ ಆಜ್ಞಾಪಿಸಿ, ದೇವರ ಬೇರೆ ಎಲ್ಲಾ ಪೂಜಾಸ್ಥಳಗಳನ್ನೂ ಯಜ್ಞವೇದಿಗಳನ್ನೂ ಕೆಡವಿಸಿ ಬಿಟ್ಟನಲ್ಲವೆ?
2 ಪೂರ್ವಕಾಲವೃತ್ತಾ 32 : 13 (IRVKN)
ನಾನೂ, ನನ್ನ ತಂದೆ, ತಾತಂದಿರೂ ಎಲ್ಲಾ ದೇಶಗಳ ಜನಾಂಗಗಳಿಗೆ ಮಾಡಿದ್ದನ್ನು ಕೇಳಲಿಲ್ಲವೋ? ಆ ಜನಾಂಗಗಳ ದೇವತೆಗಳಿಗೆ ಅವರ ದೇಶವನ್ನು ನನ್ನ ಕೈಗೆ ಸಿಕ್ಕದಂತೆ ತಪ್ಪಿಸುವುದಕ್ಕೆ ಸಾಧ್ಯವಾಯಿತೋ?
2 ಪೂರ್ವಕಾಲವೃತ್ತಾ 32 : 14 (IRVKN)
ನನ್ನ ತಂದೆತಾತಂದಿರು ನಾಶಮಾಡಿಬಿಟ್ಟ ಆ ಜನಾಂಗಗಳ ದೇವರುಗಳಲ್ಲಿ ಯಾವನು ತಾನೆ ತನ್ನ ಪ್ರಜೆಯನ್ನು ನನ್ನ ಕೈಯಿಂದ ಬಿಡಿಸುವುದಕ್ಕೆ ಸಮರ್ಥನಾಗಿದ್ದನು? ಹೀಗಿರುವಲ್ಲಿ ನಿಮ್ಮ ದೇವರು ನಿಮ್ಮನ್ನು ನನ್ನ ಕೈಗೆ ಸಿಕ್ಕದಂತೆ ತಪ್ಪಿಸಿ ಕಾಪಾಡುವುದಕ್ಕೆ ಶಕ್ತನಾಗಿದ್ದಾನೆಯೋ
2 ಪೂರ್ವಕಾಲವೃತ್ತಾ 32 : 15 (IRVKN)
ನೀವು ಹಿಜ್ಕೀಯನಿಂದ ಮರುಳಾಗಿ ಈ ರೀತಿಯಾಗಿ ಮೋಸಹೋಗಬೇಡಿರಿ, ಅವನನ್ನು ನಂಬಲೂ ಬೇಡಿರಿ. ಯಾವ ರಾಜ್ಯಜನಾಂಗಗಳ ದೇವತೆಗಳೂ ತನ್ನ ಪ್ರಜೆಗಳನ್ನು ನನ್ನ ಮತ್ತು ನನ್ನ ಪೂರ್ವಿಕರ ಕೈಯಿಂದ ಬಿಡಿಸಲಾರದೆ ಹೋದನು ಅಂದ ಮೇಲೆ, ನಿಮ್ಮ ದೇವರು ನಿಮ್ಮನ್ನು ನನ್ನ ಕೈಗೆ ಸಿಕ್ಕಿದಂತೆ ತಪ್ಪಿಸಬಲ್ಲನೇ?” ಎಂದು ಹೇಳಿಸಿದನು.
2 ಪೂರ್ವಕಾಲವೃತ್ತಾ 32 : 16 (IRVKN)
ಸನ್ಹೇರೀಬನು ದೇವರಾದ ಯೆಹೋವನಿಗೂ ಆತನ ಸೇವಕನಾದ ಹಿಜ್ಕೀಯನಿಗೂ ವಿರುದ್ಧವಾಗಿ ಆಡಿದ ಈ ಮಾತುಗಳನ್ನು ತನ್ನ ಸೇವಕರ ಮುಖಾಂತರ ಹೇಳಿ ಕಳುಹಿಸಿದನು.
2 ಪೂರ್ವಕಾಲವೃತ್ತಾ 32 : 17 (IRVKN)
ಅಷ್ಟು ಮಾತ್ರವಲ್ಲದೆ, ಇಸ್ರಾಯೇಲಿನ ದೇವರಾದ ಯೆಹೋವನನ್ನು ನಿಂದಿಸಿ ದೂಷಿಸುವುದಕ್ಕಾಗಿ, “ಅನ್ಯದೇಶಗಳವರ ದೇವರುಗಳು ತಮ್ಮ ಜನರನ್ನು ನನ್ನ ಕೈಯಿಂದ ಬಿಡಿಸಲಾರದೆ ಹೋದಂತೆ ಹಿಜ್ಕೀಯನ ದೇವರು ತನ್ನ ಪ್ರಜೆಗಳನ್ನು ನನ್ನ ಕೈಯಿಂದ ಬಿಡಿಸಲಾರನು” ಎಂಬುದಾಗಿ ಪತ್ರದಲ್ಲಿ ಬರೆದು ಕಳುಹಿಸಿದನು.
2 ಪೂರ್ವಕಾಲವೃತ್ತಾ 32 : 18 (IRVKN)
ಯೆರೂಸಲೇಮಿಗೆ ಬಂದ ಆ ಅಶ್ಶೂರ್ಯರು ಗೋಡೆಯ ಮೇಲಿದ್ದ ಜನರನ್ನು ಬೆದರಿಸಿ, ದಿಗ್ಭ್ರಮೆಗೊಳಿಸಿ ಪಟ್ಟಣವನ್ನು ಸ್ವಾಧೀನಮಾಡಿಕೊಳ್ಳುವುದಕ್ಕಾಗಿ ಗಟ್ಟಿಯಾಗಿ ಕೂಗುತ್ತಾ ಅವರೊಡನೆ ಯೆಹೂದ್ಯರ ಭಾಷೆಯಲ್ಲಿ ಅವರಿಗೆ
2 ಪೂರ್ವಕಾಲವೃತ್ತಾ 32 : 19 (IRVKN)
ಯೆರೂಸಲೇಮಿನ ದೇವರಾದ ಯೆಹೋವನು ಮನುಷ್ಯರ ಕೈಕೆಲಸವಾಗಿರುವ ಅನ್ಯದೇಶಗಳವರ ದೇವತೆಗಳಿಗೆ ಸಮಾನನಾಗಿರುವನನು ಎಂದು ಅನ್ಯದೇವರುಗಳಿಗೆ ಹೋಲಿಸಿ ಮಾತನಾಡಿದರು.
2 ಪೂರ್ವಕಾಲವೃತ್ತಾ 32 : 20 (IRVKN)
ಈ ಕಾರಣದಿಂದ ಅರಸನಾದ ಹಿಜ್ಕೀಯನು ಹಾಗು ಆಮೋಚನ ಮಗನಾದ ಯೆಶಾಯನೆಂಬ ಪ್ರವಾದಿಯು ಪರಲೋಕದ ದೇವರಿಗೆ ಮೊರೆಯಿಟ್ಟು ಪ್ರಾರ್ಥಿಸಿದರು.
2 ಪೂರ್ವಕಾಲವೃತ್ತಾ 32 : 21 (IRVKN)
ಯೆಹೋವನು ದೂತನನ್ನು ಕಳುಹಿಸಿ ಅಶ್ಶೂರದ ಅರಸನ ದಂಡಿನಲ್ಲಿದ್ದ ಎಲ್ಲಾ ಶೂರರನ್ನೂ, ನಾಯಕರನ್ನೂ, ಅಧಿಪತಿಗಳನ್ನೂ ಸಂಹರಿಸಿದನು; ಅಶ್ಶೂರದ ಅರಸನು ನಾಚಿಕೆಯಿಂದ ತನ್ನ ದೇಶಕ್ಕೆ ಹಿಂದಿರುಗಿಹೋಗಬೇಕಾಯಿತು. ಅಲ್ಲಿ ಅವನು ತನ್ನ ದೇವರ ಗುಡಿಗೆ ಹೋಗಿದ್ದಾಗ ಅವನ ಸ್ವಂತ ಮಕ್ಕಳೇ ಅವನನ್ನು ಕತ್ತಿಯಿಂದ ಕೊಂದು ಹಾಕಿದರು.
2 ಪೂರ್ವಕಾಲವೃತ್ತಾ 32 : 22 (IRVKN)
ಹೀಗೆ ಯೆಹೋವನು ಹಿಜ್ಕೀಯನನ್ನೂ ಯೆರೂಸಲೇಮಿನವರನ್ನೂ ಅಶ್ಶೂರ್ಯದ ಅರಸನಾದ ಸನ್ಹೇರೀಬನ ಕೈಗೂ ಸುತ್ತಲಿನ ಎಲ್ಲಾ ಶತ್ರುಗಳ ಕೈಗೂ ಸಿಕ್ಕದಂತೆ ತಪ್ಪಿಸಿ ಕಾಪಾಡುತ್ತಿದ್ದನು.
2 ಪೂರ್ವಕಾಲವೃತ್ತಾ 32 : 23 (IRVKN)
ಅನೇಕರು ಯೆಹೋವನಿಗೋಸ್ಕರ ಕಾಣಿಕೆಗಳನ್ನೂ, ಯೆಹೂದ್ಯರ ಅರಸನಾದ ಹಿಜ್ಕೀಯನಿಗೋಸ್ಕರ ಶ್ರೇಷ್ಠ ವಸ್ತುಗಳನ್ನೂ ಯೆರೂಸಲೇಮಿಗೆ ತೆಗೆದುಕೊಂಡು ಬಂದರು. ಅಂದಿನಿಂದ ಎಲ್ಲಾ ಜನಾಂಗಗಳವರು ಹಿಜ್ಕೀಯನನ್ನು ಬಹಳ ದೊಡ್ಡವನೆಂದು ಪರಿಗಣಿಸುತ್ತಿದ್ದರು.
2 ಪೂರ್ವಕಾಲವೃತ್ತಾ 32 : 24 (IRVKN)
ಹಿಜ್ಕೀಯನ ರೋಗ ಮತ್ತು ಅಹಂಕಾರ ಆ ಕಾಲದಲ್ಲಿ ಹಿಜ್ಕೀಯನು ಮರಣಕರವಾದ ರೋಗಕ್ಕೆ ತುತ್ತಾದನು ಆಗ ಅವನು ಯೆಹೋವನಿಗೆ ಪ್ರಾರ್ಥಿಸಲು ಆತನು ಅದ್ಭುತವಾಗಿ ಸದುತ್ತರವನ್ನು ದಯಪಾಲಿಸಿ ಅವನಿಗೆ ಒಂದು ಗುರುತನ್ನು ಅನುಗ್ರಹಿಸಿದನು.
2 ಪೂರ್ವಕಾಲವೃತ್ತಾ 32 : 25 (IRVKN)
ಆದರೆ ಹಿಜ್ಕೀಯನು ಈ ಉಪಕಾರಕ್ಕೆ ತಕ್ಕಂತೆ ನಡೆಯದೆ ಅಹಂಕಾರಿಯಾದನು. ಆದುದರಿಂದ ಯೆಹೂದದ ಮೇಲೆಯೂ ಯೆರೂಸಲೇಮಿನವರ ಮೇಲೆಯೂ ದೇವರ ಕೋಪವುಂಟಾಯಿತು.
2 ಪೂರ್ವಕಾಲವೃತ್ತಾ 32 : 26 (IRVKN)
ಆಗ ಹಿಜ್ಕೀಯನ ತನ್ನ ಗರ್ವವನ್ನು ಬಿಟ್ಟು, ಯೆರೂಸಲೇಮಿನವರೊಡನೆ ತನ್ನನ್ನು ತಗ್ಗಿಸಿಕೊಂಡದ್ದರಿಂದ ಅವನ ಉಳಿದ ಜೀವಮಾನದಲ್ಲಿ ಯೆಹೋವನ ಕೋಪವು ಅವನ ಮೇಲೆ ಬರಲಿಲ್ಲ.
2 ಪೂರ್ವಕಾಲವೃತ್ತಾ 32 : 27 (IRVKN)
ಹಿಜ್ಕೀಯನಿಗೆ ಅತ್ಯಧಿಕವಾದ ಧನ ಘನತೆಗಳು ಒದಗಿದವು; ಅವನು ಬೆಳ್ಳಿಬಂಗಾರ, ರತ್ನ, ಪರಿಮಳ ದ್ರವ್ಯ, ಗುರಾಣಿ, ಆಭರಣ* ಆಭರಣ ಅಥವಾ ಪಾತ್ರೆ. ಮುಂತಾದ ಶ್ರೇಷ್ಠಾಯುಧಗಳನ್ನು ಇಡುವುದಕ್ಕೋಸ್ಕರ ಭಂಡಾರಗಳನ್ನು ಸಿದ್ಧಪಡಿಸಿದನು
2 ಪೂರ್ವಕಾಲವೃತ್ತಾ 32 : 28 (IRVKN)
ಧಾನ್ಯ, ದ್ರಾಕ್ಷಾರಸ, ಎಣ್ಣೆ ಇವುಗಳನ್ನು ಸಂಗ್ರಹಿಸುವುದಕ್ಕಾಗಿ ಉಗ್ರಾಣಗಳನ್ನು ಕಟ್ಟಿಸಿದನು.ಆಯಾ ಜಾತಿಯ ಪಶುಗಳಿಗೋಸ್ಕರ ಕೊಟ್ಟಿಗೆಗಳನ್ನೂ, ಆಡುಕುರಿಗಳ ಹಿಂಡುಗಳಿಗೋಸ್ಕರ ಹಟ್ಟಿಗಳನ್ನೂ ಸಿದ್ಧಮಾಡಿಸಿಕೊಂಡನು.
2 ಪೂರ್ವಕಾಲವೃತ್ತಾ 32 : 29 (IRVKN)
ಇದಲ್ಲದೆ, ಪಟ್ಟಣಗಳನ್ನೂ ಕಟ್ಟಿಸಿ ದನಕುರಿಗಳ ದೊಡ್ಡ ಹಿಂಡುಗಳನ್ನು ಸಂಪಾದಿಸಿಕೊಂಡನು. ದೇವರು ಅವನಿಗೆ ಕೊಟ್ಟ ಸಂಪತ್ತು ಅಪರಿಮಿತವಾಗಿತ್ತು.
2 ಪೂರ್ವಕಾಲವೃತ್ತಾ 32 : 30 (IRVKN)
ಮೇಲಣ ಗೀಹೋನ್ ಎಂಬ ಬುಗ್ಗೆಗೆ ಅಣೆಕಟ್ಟು ಕಟ್ಟಿಸಿ ಅದರ ನೀರು ನೆಟ್ಟಗೆ ದಾವೀದನಗರದ ಪಡುವಣ ತಗ್ಗಿಗೆ ಹರಿಯುವಂತೆ ಮಾಡಿದವನು ಹಿಜ್ಕೀಯನೇ. ಅವನು ತನ್ನ ಎಲ್ಲಾ ಕಾರ್ಯಗಳಲ್ಲಿಯೂ ಕೃತಾರ್ಥನಾದನು.
2 ಪೂರ್ವಕಾಲವೃತ್ತಾ 32 : 31 (IRVKN)
ಆದರೂ ಅವನ ದೇಶದಲ್ಲಿ ಉಂಟಾದ ಅದ್ಭುತ ವಿಷಯವನ್ನು ವಿಚಾರಿಸುವುದಕ್ಕಾಗಿ ಬಾಬೆಲಿನ ಅರಸನ ರಾಯಭಾರಿಗಳು ಅವನ ಬಳಿಗೆ ಬಂದಾಗ, ದೇವರು ಅವನನ್ನು ಪರೀಕ್ಷಿಸುವುದಕ್ಕೂ ಹಾಗು ಅವನ ಸರ್ವಾಂತರ್ಯವನ್ನು ತಿಳಿದುಕೊಳ್ಳುವುದಕ್ಕೂ ಅವನನ್ನು ಬಿಟ್ಟುಕೊಟ್ಟನು
2 ಪೂರ್ವಕಾಲವೃತ್ತಾ 32 : 32 (IRVKN)
ಹಿಜ್ಕೀಯನ ಉಳಿದ ಚರಿತ್ರೆಯೂ ಅವನ ಭಕ್ತಿ ಕಾರ್ಯಗಳೂ ಆಮೋಚನ ಮಗನಾದ, ಪ್ರವಾದಿಯಾದ ಯೆಶಾಯನ ದರ್ಶನಗ್ರಂಥದಲ್ಲಿಯೂ, ಯೆಹೂದ್ಯರ ಮತ್ತು ಇಸ್ರಾಯೇಲರ ರಾಜ ಗ್ರಂಥದಲ್ಲಿಯೂ ಬರೆದಿರುತ್ತವೆ.
2 ಪೂರ್ವಕಾಲವೃತ್ತಾ 32 : 33 (IRVKN)
ಹಿಜ್ಕೀಯನು ಪೂರ್ವಿಕರ ಬಳಿಗೆ ಸೇರಲು ಅವನ ಶವವನ್ನು ದಾವೀದವಂಶದವರ ಕುಟುಂಬ ಸ್ಮಶಾನ ಭೂಮಿಯ ದಿಬ್ಬದ ಮೇಲೆ ಸಮಾಧಿಮಾಡಿದರು. ಅವನ ಉತ್ತರಕ್ರಿಯೆ ನಡೆಯುವಾಗ ಎಲ್ಲಾ ಯೆಹೂದ್ಯರೂ, ಯೆರೂಸಲೇಮಿನವರು ಅವನನ್ನು ಬಹಳವಾಗಿ ಸನ್ಮಾನಿಸಿದರು. ಅವನಿಗೆ ಬದಲಾಗಿ ಅವನ ಮಗನಾದ ಮನಸ್ಸೆಯು ಅರಸನಾದನು.
❮
❯