2 ಪೂರ್ವಕಾಲವೃತ್ತಾ 29 : 1 (IRVKN)
ಯೆಹೂದದ ಅರಸನಾದ ಹಿಜ್ಕೀಯನು ದೇವಾಲಯವನ್ನು ಪುನಃ ಪ್ರತಿಷ್ಠಿಸಿದ್ದು ಹಿಜ್ಕೀಯನು ಪಟ್ಟಕ್ಕೆ ಬಂದಾಗ ಅವನು ಇಪ್ಪತ್ತೈದು ವರ್ಷದವನಾಗಿದ್ದನು. ಅವನು ಯೆರೂಸಲೇಮಿನಲ್ಲಿ ಇಪ್ಪತ್ತೊಂಭತ್ತು ವರ್ಷ ಆಳಿದನು. ಜೆಕರ್ಯನ ಮಗಳಾದ ಅಬೀಯ ಎಂಬಾಕೆಯು ಅವನ ತಾಯಿ.
2 ಪೂರ್ವಕಾಲವೃತ್ತಾ 29 : 2 (IRVKN)
ಅವನು ಎಲ್ಲಾ ವಿಷಯಗಳಲ್ಲಿಯೂ ನೀತಿವಂತನಾಗಿ ತನ್ನ ಪೂರ್ವಿಕನಾದ ದಾವೀದನಂತೆ ಯೆಹೋವನ ಚಿತ್ತಾನುಸಾರವಾಗಿ ನಡೆದನು.
2 ಪೂರ್ವಕಾಲವೃತ್ತಾ 29 : 3 (IRVKN)
ಅವನು ತನ್ನ ಆಳ್ವಿಕೆಯ ಮೊದಲನೆಯ ವರ್ಷದ ಮೊದಲನೆಯ ತಿಂಗಳಲ್ಲಿ ಯೆಹೋವನ ಆಲಯದ ಬಾಗಿಲುಗಳನ್ನು ತೆರೆಯಿಸಿ ಅವುಗಳನ್ನು ಭದ್ರಪಡಿಸಿದನು.
2 ಪೂರ್ವಕಾಲವೃತ್ತಾ 29 : 4 (IRVKN)
ಆಮೇಲೆ ಯಾಜಕರನ್ನೂ ಮತ್ತು ಲೇವಿಯರನ್ನೂ ದೇವಾಲಯದ ಮೂಡಣದಿಕ್ಕಿನ ಬಯಲಿನಲ್ಲಿ ಸೇರಿಸಿ
2 ಪೂರ್ವಕಾಲವೃತ್ತಾ 29 : 5 (IRVKN)
ಅವರಿಗೆ, “ಲೇವಿಯರೇ, ನನ್ನ ಮಾತನ್ನು ಕೇಳಿರಿ; ಈಗ ನಿಮ್ಮನ್ನು ಶುದ್ಧೀಕರಿಸಿಕೊಂಡು ನಿಮ್ಮ ಪೂರ್ವಿಕರ ದೇವರಾದ ಯೆಹೋವನ ಪವಿತ್ರಾಲಯದಲ್ಲಿರುವ ಹೊಲಸನ್ನೆಲ್ಲಾ ಹೊರಗೆ ಹಾಕಿ ಆಲಯವನ್ನು ಶುದ್ಧೀಕರಿಸಿರಿ.
2 ಪೂರ್ವಕಾಲವೃತ್ತಾ 29 : 6 (IRVKN)
ನಮ್ಮ ಪೂರ್ವಿಕರು ನಮ್ಮ ದೇವರಾದ ಯೆಹೋವನಿಗೆ ದ್ರೋಹಮಾಡಿ, ಆತನ ಚಿತ್ತಕ್ಕೆ ವಿರುದ್ಧವಾಗಿ ನಡೆದು ಆತನನ್ನು ತೊರೆದುಬಿಟ್ಟರು. ಅವರು ಆತನ ನಿವಾಸ ಸ್ಥಳವನ್ನು ತೊರೆದು ವಿಮುಖರಾದರು.
2 ಪೂರ್ವಕಾಲವೃತ್ತಾ 29 : 7 (IRVKN)
ಅದರ ಮಂಟಪದ ಬಾಗಿಲುಗಳನ್ನು ಮುಚ್ಚಿ, ದೀಪಗಳನ್ನು ನಂದಿಸಿದರು. ಇಸ್ರಾಯೇಲ್ ದೇವರ ಪವಿತ್ರ ಸ್ಥಾನದಲ್ಲಿ ಧೂಪಹಾಕುವುದನ್ನೂ, ಸರ್ವಾಂಗಹೋಮ ಸಮರ್ಪಿಸುವುದನ್ನೂ ನಿಲ್ಲಿಸಿಬಿಟ್ಟರು.
2 ಪೂರ್ವಕಾಲವೃತ್ತಾ 29 : 8 (IRVKN)
ಆದುದರಿಂದ ಯೆಹೋವನು ಯೆಹೂದ ದೇಶದ ಮೇಲೆಯೂ ಯೆರೂಸಲೇಮಿನ ಮೇಲೆಯೂ, ಕೋಪವುಳ್ಳವನಾಗಿ ಅವುಗಳನ್ನು ಭಯಭೀತಿಗೂ ನಿಂದೆಗೂ, ಪರಿಹಾಸ್ಯಗಳಿಗೂ ಗುರಿಮಾಡಿದ್ದಾನೆ; ಇದಕ್ಕೆ ನೀವೇ ಸಾಕ್ಷಿಗಳು.
2 ಪೂರ್ವಕಾಲವೃತ್ತಾ 29 : 9 (IRVKN)
ಅದೇ ಕಾರಣದಿಂದ ನಮ್ಮ ಹಿರಿಯರು ಕತ್ತಿಯಿಂದ ಹತರಾದರು; ನಮ್ಮ ಗಂಡು ಹೆಣ್ಣು ಮಕ್ಕಳೂ, ಹೆಂಡತಿಯರೂ ಸೆರೆಯವರಾಗಿ ಹೋಗಬೇಕಾಯಿತು.
2 ಪೂರ್ವಕಾಲವೃತ್ತಾ 29 : 10 (IRVKN)
ಈಗ ನಮ್ಮ ಮೇಲಿರುವ ಆತನ ಕೋಪಾಗ್ನಿಯು ತೊಲಗಿ ಹೋಗುವಂತೆ ಇಸ್ರಾಯೇಲಿನ ದೇವರಾದ ಯೆಹೋವನೊಡನೆ ಒಡಂಬಡಿಕೆ ಮಾಡಿಕೊಳ್ಳುವುದಕ್ಕೆ ಮನಸ್ಸುಳ್ಳವನಾಗಿದ್ದೇನೆ.
2 ಪೂರ್ವಕಾಲವೃತ್ತಾ 29 : 11 (IRVKN)
ಹೀಗಿರಲಾಗಿ ನನ್ನ ಮಕ್ಕಳೇ, ಉದಾಸೀನರಾಗಿರಬೇಡಿ; ಯೆಹೋವನು ತನ್ನನ್ನು ಆರಾಧಿಸುವುದಕ್ಕೂ ಧೂಪಹಾಕುವುದಕ್ಕೂ ನಿಮ್ಮನ್ನು ತನ್ನ ಸಾನ್ನಿಧ್ಯ ಸೇವಕರನ್ನಾಗಿ ಆರಿಸಿಕೊಂಡನಲ್ಲಾ” ಎಂದು ಹೇಳಿದನು.
2 ಪೂರ್ವಕಾಲವೃತ್ತಾ 29 : 12 (IRVKN)
ಕೂಡಲೆ ಲೇವಿಯರು ಮುಂದೆ ಬಂದರು: ಕೆಹಾತ್ಯರಲ್ಲಿ ಅಮಾಸೈಯ ಮಗನಾದ ಮಹತ್, ಅಜರ್ಯನ ಮಗನಾದ ಯೋವೇಲ್, ಮೆರಾರೀಯರಲ್ಲಿ ಅಬ್ದೀಯ ಮಗನಾದ ಕೀಷ್, ಯೆಹಲ್ಲೆಲೇಲನ ಮಗನಾದ ಅಜರ್ಯ, ಗೇರ್ಷೋನ್ಯರಲ್ಲಿ ಜಿಮ್ಮನ ಮಗನಾದ ಯೋವಾಹ, ಯೋವಾಹನ ಮಗನಾದ ಏದೆನ್,
2 ಪೂರ್ವಕಾಲವೃತ್ತಾ 29 : 13 (IRVKN)
ಎಲೀಚಾಫಾನ್ಯರಲ್ಲಿ ಶಿಮ್ರಾ, ಯೆಗೀಯೇಲ್, ಆಸಾಫ್ಯರಲ್ಲಿ ಜೆಕರ್ಯ ಮತ್ತು ಮತ್ತನ್ಯ,
2 ಪೂರ್ವಕಾಲವೃತ್ತಾ 29 : 14 (IRVKN)
ಹೇಮಾನ್ಯರಲ್ಲಿ ಯೆಹೀಯೇಲ್, ಶಿಮ್ಮೀ, ಯೆದೂತೂನ್ಯರಲ್ಲಿ ಶೆಮಾಯ ಹಾಗು ಉಜ್ಜೀಯೇಲ್,
2 ಪೂರ್ವಕಾಲವೃತ್ತಾ 29 : 15 (IRVKN)
ಎಂಬ ಲೇವಿಯರು ಎದ್ದು ತಮ್ಮ ಸಹೋದರರನ್ನು ಸೇರಿಕೊಂಡರು. ಅವರು ಅರಸನ ಆಜ್ಞಾನುಸಾರವಾಗಿ ಯೆಹೋವನ ಧರ್ಮಶಾಸ್ತ್ರ ವಿಧಿಯ ಮೇರೆಗೆ ತಮ್ಮನ್ನು ಶುದ್ಧೀಕರಿಸಿಕೊಂಡು ಯೆಹೋವನ ಆಲಯವನ್ನು ಶುದ್ಧೀಕರಿಸುವುದಕ್ಕೆ ಬಂದರು.
2 ಪೂರ್ವಕಾಲವೃತ್ತಾ 29 : 16 (IRVKN)
ಯಾಜಕರು ಯೆಹೋವನ ಆಲಯವನ್ನು ಶುದ್ಧಮಾಡುವುದಕ್ಕಾಗಿ ಒಳಗೆ ಹೋಗಿ ಪವಿತ್ರಸ್ಥಾನದಲ್ಲಿದ್ದ ಹೊಲಸನ್ನೆಲ್ಲಾ ತಂದು ಪ್ರಾಕಾರದಲ್ಲಿ ಹಾಕಿದರು. ಲೇವಿಯರು ಅದನ್ನು ಕೂಡಿಸಿ ಹೊರಗೆ ಒಯ್ದು ಕಿದ್ರೋನ್ ಹಳ್ಳದಲ್ಲಿ ಹಾಕಿದರು.
2 ಪೂರ್ವಕಾಲವೃತ್ತಾ 29 : 17 (IRVKN)
ಮೊದಲನೆಯ ತಿಂಗಳಿನ ಮೊದಲನೆಯ ದಿನದಲ್ಲಿ ಶುದ್ಧೀಕರಣ ಕಾರ್ಯವನ್ನು ಪ್ರಾರಂಭಿಸಿದರು. ಎಂಟನೆಯ ದಿನದಲ್ಲಿ ಯೆಹೋವನ ಆಲಯದ ಮಂಟಪಕ್ಕೆ ಕೈಹಾಕಿದರು. ಹೀಗೆ ಯೆಹೋವನ ಆಲಯವನ್ನು ಪರಿಶುದ್ಧಪಡಿಸುವುದರಲ್ಲಿ ಎಂಟು ದಿನಗಳು ಕಳೆದು ಹೋದವು. ಮೊದಲನೆಯ ತಿಂಗಳಿನ ಹದಿನಾರನೆಯ ದಿನದಲ್ಲಿ ಕೆಲಸವೆಲ್ಲಾ ಮುಗಿಯಿತು.
2 ಪೂರ್ವಕಾಲವೃತ್ತಾ 29 : 18 (IRVKN)
ಆಮೇಲೆ ಅವರು ಅರಮನೆಯೊಳಗೆ ಹೋಗಿ, ಅರಸನಾದ ಹಿಜ್ಕೀಯನಿಗೆ, “ನಾವು ಯೆಹೋವನ ಸಮಸ್ತಾಲಯವನ್ನೂ, ಯಜ್ಞವೇದಿಯನ್ನೂ, ಅದರ ಉಪಕರಣಗಳನ್ನೂ, ನೈವೇದ್ಯ ರೊಟ್ಟಿಗಳನ್ನಿಡತಕ್ಕ ಮೇಜನ್ನೂ ಹಾಗು ಅದರ ಸಾಮಾನುಗಳನ್ನೂ ಶುದ್ಧಿಮಾಡಿದೆವು.
2 ಪೂರ್ವಕಾಲವೃತ್ತಾ 29 : 19 (IRVKN)
ಅರಸನಾದ ಆಹಾಜನು ತನ್ನ ಆಳ್ವಿಕೆಯಲ್ಲಿ ದೈವದ್ರೋಹಿಯಾಗಿ ತಳ್ಳಿಬಿಟ್ಟಿದ್ದ ಪಾತ್ರೆಗಳನ್ನು ತಿರುಗಿ ತಂದಿಟ್ಟು ಪ್ರತಿಷ್ಠಿಸಿದ್ದೇವೆ; ಅವು ಈಗ ಯೆಹೋವನ ಯಜ್ಞವೇದಿಯ ಮುಂದಿರುತ್ತವೆ” ಎಂದರು.
2 ಪೂರ್ವಕಾಲವೃತ್ತಾ 29 : 20 (IRVKN)
ಅರಸನಾದ ಹಿಜ್ಕೀಯನು ಮರುದಿನ ಬೆಳಗಿನ ಜಾವದಲ್ಲೆದ್ದು ಪಟ್ಟಣದ ಅಧಿಕಾರಿಗಳನ್ನು ಕರೆಸಿ ಅವರೊಡನೆ ಯೆಹೋವನ ಆಲಯಕ್ಕೆ ಹೋದನು.
2 ಪೂರ್ವಕಾಲವೃತ್ತಾ 29 : 21 (IRVKN)
ಅವರು ರಾಜ್ಯಾಡಳಿತ ದೇವಾಲಯ, ಯೆಹೂದ ಪ್ರಜೆಗಳು ಇವುಗಳಿಗೋಸ್ಕರ ದೋಷಪರಿಹಾರಕ ಯಜ್ಞಮಾಡುವುದಕ್ಕಾಗಿ ಹೋರಿ, ಟಗರು, ಕುರಿಮರಿ, ಆಡು ಇವುಗಳಲ್ಲಿ ಏಳೇಳನ್ನು ತಂದರು. ಅರಸನು ಯಾಜಕರಾದ ಆರೋನನ ಸಂತಾನದವರಿಗೆ ಯೆಹೋವನ ಯಜ್ಞವೇದಿಯ ಮೇಲೆ ಸರ್ವಾಂಗಹೋಮ ಮಾಡಬೇಕೆಂದು ಆಜ್ಞಾಪಿಸಿದನು.
2 ಪೂರ್ವಕಾಲವೃತ್ತಾ 29 : 22 (IRVKN)
ಹೋರಿಗಳನ್ನು ವಧಿಸಿದ ಮೇಲೆ ಯಾಜಕರು ಅವುಗಳ ರಕ್ತವನ್ನು ಕೂಡಿಸಿ ಯಜ್ಞವೇದಿಗೆ ಪ್ರೋಕ್ಷಿಸಿದರು. ಅನಂತರ ಟಗರುಗಳನ್ನು ವಧಿಸಿದ ಮೇಲೆ ಯಾಜಕರು, ರಕ್ತವನ್ನು ಕೂಡಿಸಿ ಯಜ್ಞವೇದಿಗೆ ಅನಂತರ ಟಗರುಗಳನ್ನು ವಧಿಸಿ ಅವುಗಳ ರಕ್ತವನ್ನು ಯಜ್ಞವೇದಿಗೆ ಪ್ರೋಕ್ಷಿಸಿದರು. ಆ ಮೇಲೆ ಕುರಿಮರಿಗಳನ್ನು ವಧಿಸಿ ಅವುಗಳ ರಕ್ತವನ್ನೂ ಯಜ್ಞವೇದಿಗೆ ಪ್ರೋಕ್ಷಿಸಿದರು.
2 ಪೂರ್ವಕಾಲವೃತ್ತಾ 29 : 23 (IRVKN)
ಕಡೆಯಲ್ಲಿ ದೋಷಪರಿಹಾರಕ ಯಜ್ಞಕ್ಕಾಗಿ ತಂದ ಹೋತಗಳನ್ನು ಅರಸನ ಮುಂದೆಯೂ ಮತ್ತು ಸಮೂಹದವರ ಮುಂದೆಯೂ ನಿಲ್ಲಿಸಿದರು. ಅವರು ಅವುಗಳ ಮೇಲೆ ತಮ್ಮ ಕೈಗಳನ್ನಿಟ್ಟರು.
2 ಪೂರ್ವಕಾಲವೃತ್ತಾ 29 : 24 (IRVKN)
ನಂತರ ಯಾಜಕರು ಅವುಗಳನ್ನು ವಧಿಸಿ ಅವುಗಳ ರಕ್ತವನ್ನು ಸಮಸ್ತ ಇಸ್ರಾಯೇಲರ ದೋಷ ಪರಿಹಾರಕ್ಕಾಗಿ ಯಜ್ಞವೇದಿಯ ಮೇಲೆ ಸುರಿದರು. ಆ ಸರ್ವಾಂಗಹೋಮಗಳೂ, ದೋಷಪರಿಹಾರಕ ಯಜ್ಞಗಳೂ ಎಲ್ಲಾ ಇಸ್ರಾಯೇಲರಿಗಾಗಿ ಇರಬೇಕೆಂದು ಅರಸನು ಆಜ್ಞಾಪಿಸಿದ್ದನು.
2 ಪೂರ್ವಕಾಲವೃತ್ತಾ 29 : 25 (IRVKN)
ಇದಲ್ಲದೆ, ಅವನು ತಾಳ, ಸ್ವರಮಂಡಲ, ಕಿನ್ನರಿ ಇವುಗಳಿಂದ ಭಜಿಸುವುದಕ್ಕೋಸ್ಕರ ಲೇವಿಯರನ್ನು, ದಾವೀದನ ರಾಜದರ್ಶಿಯಾದ ಗಾದ್ ಹಾಗು ಪ್ರವಾದಿಯಾದ ನಾತಾನ್ ಇವರ ಆಜ್ಞಾನುಸಾರವಾಗಿ ಯೆಹೋವನ ಆಲಯದಲ್ಲಿ ನಿಲ್ಲಿಸಿದನು. ಯೆಹೋವನು ತಾನೇ ಪ್ರವಾದಿಗಳ ಮುಖಾಂತರ ಹೀಗೆ ಆಜ್ಞಾಪಿಸಿದ್ದನು.
2 ಪೂರ್ವಕಾಲವೃತ್ತಾ 29 : 26 (IRVKN)
ಆ ಲೇವಿಯರು ದಾವೀದನ ವಾದ್ಯಗಳನ್ನೂ, ಯಾಜಕರೂ ತುತ್ತೂರಿಗಳನ್ನೂ ಹಿಡಿದು ನಿಂತಿದ್ದರು.
2 ಪೂರ್ವಕಾಲವೃತ್ತಾ 29 : 27 (IRVKN)
ಆಗ ಹಿಜ್ಕೀಯನು ಯಜ್ಞವೇದಿಯ ಮೇಲೆ ಸರ್ವಾಂಗಹೋಮವನ್ನು ಸಮರ್ಪಿಸುವುದಕ್ಕೆ ಆಜ್ಞಾಪಿಸಿದನು.ಹೀಗೆ ಸರ್ವಾಂಗಹೋಮ ಸಮರ್ಪಣೆ ಪ್ರಾರಂಭಿಸಿದೊಡನೆ ಇಸ್ರಾಯೇಲ್ ರಾಜನಾದ ದಾವೀದನ ವಾದ್ಯಗಳಿಂದ ಯೆಹೋವನನ್ನು ಭಜಿಸುವುದೂ, ತುತ್ತೂರಿ ಊದುವುದೂ ಆರಂಭವಾಯಿತು.
2 ಪೂರ್ವಕಾಲವೃತ್ತಾ 29 : 28 (IRVKN)
ಸರ್ವಾಂಗಹೋಮ ಸಮರ್ಪಣೆಯು ಮುಗಿಯುವವರೆಗೆ ಸರ್ವಸಮೂಹದವರು ಸಾಷ್ಟಾಂಗ ನಮಸ್ಕಾರ ಮಾಡುತ್ತಲೂ, ಗಾಯಕರೂ ಗಾನಮಾಡುತ್ತಲೂ, ತುತ್ತೂರಿ ಊದುವವರು ತುತ್ತೂರಿ ಊದುತ್ತಲೂ ಇದ್ದರು.
2 ಪೂರ್ವಕಾಲವೃತ್ತಾ 29 : 29 (IRVKN)
ಸರ್ವಾಂಗಹೋಮ ಸಮರ್ಪಣೆಯು ಮುಗಿದ ಮೇಲೆ ಅರಸನೂ ಅವನ ಜೊತೆಯಲ್ಲಿದ್ದವರೆಲ್ಲರೂ ಸಾಷ್ಟಾಂಗ ನಮಸ್ಕಾರ ಮಾಡಿದರು.
2 ಪೂರ್ವಕಾಲವೃತ್ತಾ 29 : 30 (IRVKN)
ಅರಸನಾದ ಹಿಜ್ಕೀಯನೂ, ಪ್ರಭುಗಳೂ ದಾವೀದನ ಮತ್ತು ದರ್ಶಿಯಾದ ಆಸಾಫನ ಕೀರ್ತನೆಗಳಿಂದ ಯೆಹೋವನನ್ನು ಸ್ತುತಿಸಬೇಕೆಂದು ಲೇವಿಯರಿಗೆ ಆಜ್ಞಾಪಿಸಲು, ಅವರು ಉತ್ಸಾಹದಿಂದ ಸ್ತುತಿಸುತ್ತಾ ತಲೆಬಾಗಿ ನಮಸ್ಕರಿಸಿದರು.
2 ಪೂರ್ವಕಾಲವೃತ್ತಾ 29 : 31 (IRVKN)
ಆಮೇಲೆ ಹಿಜ್ಕೀಯನು ಸಮೂಹದವರಿಗೆ, “ನೀವು ಈಗ ಯೆಹೋವನಿಗೋಸ್ಕರ ನಿಮ್ಮನ್ನು ಪ್ರತಿಷ್ಠಿಸಿಕೊಂಡಿರುವಿಯಲ್ಲಾ; ಹತ್ತಿರ ಬಂದು ಯೆಹೋವನಿಗೆ ಸ್ತೋತ್ರಮಾಡಿ ಆತನ ಆಲಯಕ್ಕೋಸ್ಕರ ಸಮಾಧಾನ ಯಜ್ಞಗಳನ್ನೂ ಕೃತಜ್ಞತಾಯಜ್ಞಗಳನ್ನೂ ಸಮರ್ಪಿಸಿರಿ” ಎನ್ನಲು ಸಮೂಹದವರು ಸಮಾಧಾನಯಜ್ಞಗಳನ್ನೂ ಕೃತಜ್ಞತಾಯಜ್ಞಗಳನ್ನೂ ಸಮರ್ಪಿಸಿದ್ದಲ್ಲದೆ, ಅನೇಕರು ಸ್ವ ಇಚ್ಛೆಯಿಂದ ಸರ್ವಾಂಗಹೋಮಗಳನ್ನೂ ಸಮರ್ಪಿಸಿದರು.
2 ಪೂರ್ವಕಾಲವೃತ್ತಾ 29 : 32 (IRVKN)
ಸಮೂಹದವರು ಸರ್ವಾಂಗಹೋಮಕ್ಕೋಸ್ಕರ ತಂದೊಪ್ಪಿಸಿದ ಹೋರಿಗಳು ಎಪ್ಪತ್ತು, ಟಗರುಗಳು ನೂರು, ಕುರಿಮರಿಗಳು ಇನ್ನೂರು. ಇವೆಲ್ಲವು ಯೆಹೋವನಿಗೆ ಸರ್ವಾಂಗಹೋಮ ಸಮರ್ಪಣೆಗಾಗಿಯೇ ಮೀಸಲಾದವು.
2 ಪೂರ್ವಕಾಲವೃತ್ತಾ 29 : 33 (IRVKN)
ದೇವರಿಗೆ ಕಾಣಿಕೆಯಾಗಿ ಕೊಡಲ್ಪಟ್ಟ ಹಿಂಡುಗಳಲ್ಲಿ ಹೋರಿಗಳು ಆರುನೂರು, ಕುರಿಗಳು ಮೂರು ಸಾವಿರ.
2 ಪೂರ್ವಕಾಲವೃತ್ತಾ 29 : 34 (IRVKN)
ಯಾಜಕರು ಕೆಲವು ಮಂದಿಯಾದುದ್ದರಿಂದ ಸರ್ವಾಂಗಹೋಮದ ಪ್ರಾಣಿಗಳ ಚರ್ಮವನ್ನು ಸುಲಿಯುವುದು ಅವರಿಂದ ಆಗದೆ ಹೋಯಿತು. ಆದುದರಿಂದ ಮಿಕ್ಕ ಯಾಜಕರೂ ತಮ್ಮನ್ನು ಶುದ್ಧಿಪಡಿಸಿಕೊಳ್ಳುವವರೆಗೂ ಆ ಕೆಲಸವು ಮುಗಿಯುವ ತನಕ, ಅವರ ಬಂಧುಗಳಾದ ಲೇವಿಯರು ಅವರಿಗೆ ಸಹಾಯಮಾಡುತ್ತಿದ್ದರು. ತಮ್ಮನ್ನು ಶುದ್ಧಿಪಡಿಸಿಕೊಳ್ಳುವುದರಲ್ಲಿ ಯಾಜಕರಿಗಿಂತ ಲೇವಿಯರೇ ಹೆಚ್ಚು ಶ್ರದ್ಧೆಯುಳ್ಳವರಾಗಿದ್ದರು* ಶ್ರದ್ಧೆಯುಳ್ಳವರಾಗಿದ್ದರು ಅಥವಾ ನಂಬಿಗಸ್ತರಾಗಿದ್ದರು .
2 ಪೂರ್ವಕಾಲವೃತ್ತಾ 29 : 35 (IRVKN)
ಇದಲ್ಲದೆ ಯಾಜಕರೂ ಯೆಹೋವನಿಗೆ ಸಮರ್ಪಿಸಬೇಕಾಗಿದ್ದ ಸರ್ವಾಂಗಹೋಮ, ಸಮಾಧಾನ ಯಜ್ಞಗಳ ಕೊಬ್ಬು ಹಾಗು ಸರ್ವಾಂಗಹೋಮ ಸಂಬಂಧವಾದ ಪಾನದ್ರವ್ಯ ಇವು ಅಪಾರವಾಗಿದ್ದವು.
2 ಪೂರ್ವಕಾಲವೃತ್ತಾ 29 : 36 (IRVKN)
ಹೀಗೆ ಯೆಹೋವನ ಆಲಯದ ಸೇವಾಕ್ರಮವು ಪುನಃ ಸ್ಥಾಪಿತವಾಯಿತು. ದೇವರು ತಾನೇ ತನ್ನ ಪ್ರಜೆಗಳಿಗಾಗಿ ಈ ಕಾರ್ಯವನ್ನು ನೆರವೇರಿಸಿದ್ದರಿಂದ, ಹಿಜ್ಕೀಯನೂ ಮತ್ತು ಎಲ್ಲಾ ಜನರೂ ಸಂತೋಷಿಸಿದರು.

1 2 3 4 5 6 7 8 9 10 11 12 13 14 15 16 17 18 19 20 21 22 23 24 25 26 27 28 29 30 31 32 33 34 35 36