2 ಪೂರ್ವಕಾಲವೃತ್ತಾ 24 : 1 (IRVKN)
ಯೆಹೂದದ ಅರಸನಾದ ಯೆಹೋವಾಷನು ಯೆಹೋವಾಷನು ಅರಸನಾದಾಗ ಏಳು ವರ್ಷದವನಾಗಿದ್ದನು. ಅವನು ಯೆರೂಸಲೇಮಿನಲ್ಲಿ ನಲ್ವತ್ತು ವರ್ಷ ರಾಜ್ಯಭಾರ ಮಾಡಿದನು. ಬೇರ್ಷೆಬದವಳಾದ ಚಿಬ್ಯಳು ಅವನ ತಾಯಿ.
2 ಪೂರ್ವಕಾಲವೃತ್ತಾ 24 : 2 (IRVKN)
ಯೆಹೋವಾಷ ಯಾಜಕನಾದ ಯೆಹೋಯಾದನ ಜೀವಮಾನದಲ್ಲೆಲ್ಲಾ ಯೆಹೋವನ ಚಿತ್ತಾನುಸಾರವಾಗಿ ನಡೆದುಕೊಳ್ಳುತ್ತಿದ್ದನು.
2 ಪೂರ್ವಕಾಲವೃತ್ತಾ 24 : 3 (IRVKN)
ಯೆಹೋಯಾದನು, ಯೆಹೋವಾಷನಿಗೆ ಇಬ್ಬರು ಕನ್ಯೆಯರನ್ನು ಮದುವೆ ಮಾಡಿಸಿದನು; ಅರಸನು ಗಂಡು ಹೆಣ್ಣು ಮಕ್ಕಳನ್ನು ಪಡೆದನು.
2 ಪೂರ್ವಕಾಲವೃತ್ತಾ 24 : 4 (IRVKN)
ಕ್ರಮೇಣ ಯೆಹೋವಾಷನು ಯೆಹೋವನ ಆಲಯವನ್ನು ಜೀರ್ಣೋದ್ಧಾರ ಮಾಡುವುದಕ್ಕೆ ಮನಸ್ಸು ಮಾಡಿದನು.
2 ಪೂರ್ವಕಾಲವೃತ್ತಾ 24 : 5 (IRVKN)
ಯಾಜಕರನ್ನೂ ಲೇವಿಯರನ್ನೂ ಒಟ್ಟಿಗೆ ಸೇರಿಸಿ ಅವರಿಗೆ, “ನೀವು ಯೆಹೂದದ ಪಟ್ಟಣಗಳಿಗೆ ಹೋಗಿ, ನಿಮ್ಮ ದೇವರಾದ ಯೆಹೋವನ ಆಲಯದ ವಾರ್ಷಿಕ ಜೀರ್ಣೋದ್ಧಾರ ಮಾಡುವುದಕ್ಕಾಗಿ ಎಲ್ಲಾ ಇಸ್ರಾಯೇಲರಿಂದ ಹಣ ಸಂಗ್ರಹಿಸಿರಿ; ಈ ಕಾರ್ಯವನ್ನು ಶೀಘ್ರವಾಗಿ ನೆರವೇರಿಸಿರಿ” ಎಂದು ಆಜ್ಞಾಪಿಸಿದನು. ಆದರೂ ಲೇವಿಯರು ಅವಸರ ಮಾಡಲಿಲ್ಲ.
2 ಪೂರ್ವಕಾಲವೃತ್ತಾ 24 : 6 (IRVKN)
ಆದುದರಿಂದ ಅರಸನು ಅವರ ಮುಖ್ಯಸ್ಥನಾದ ಯೆಹೋಯಾದನನ್ನು ಕರೆಯಿಸಿ ಅವನಿಗೆ, “ಯೆಹೋವನ ಸೇವಕನಾದ ಮೋಶೆಯ ವಿಧಿಗನುಸಾರವಾಗಿ ಇಸ್ರಾಯೇಲ್ ಸಮೂಹದವರೆಲ್ಲರು ದೇವದರ್ಶನದ ಗುಡಾರಕ್ಕೋಸ್ಕರ ಕೊಡಬೇಕಾದ ಕಾಣಿಕೆಯನ್ನು ಈ ಲೇವಿಯರು ಯೆಹೂದ್ಯರಿಂದಲೂ ಯೆರೂಸಲೇಮಿನ ಜನರಿಂದಲೂ ಕೂಡಿಸುವ ಹಾಗೆ ನೀನೇಕೆ ನೋಡಿಕೊಳ್ಳಲಿಲ್ಲ?
2 ಪೂರ್ವಕಾಲವೃತ್ತಾ 24 : 7 (IRVKN)
ಅತಿದುಷ್ಟಳಾದ ಅತಲ್ಯಳ ಮನೆಯವರು ದೇವಾಲಯವನ್ನು ಹಾಳುಮಾಡಿ, ಯೆಹೋವನ ಆಲಯದ ಪ್ರತಿಷ್ಠಿತ ವಸ್ತುಗಳನ್ನು ಬಾಳನಿಗಾಗಿ ಕೊಟ್ಟು ಬಿಟ್ಟಿದ್ದಾರಲ್ಲಾ?” ಎಂದು ಹೇಳಿದನು.
2 ಪೂರ್ವಕಾಲವೃತ್ತಾ 24 : 8 (IRVKN)
ಅನಂತರ ಅರಸನು ಒಂದು ಪೆಟ್ಟಿಗೆಯನ್ನು ಮಾಡಿಸಿ ಅದನ್ನು ಯೆಹೋವನ ಆಲಯದ ಬಾಗಿಲಿನ ಹೊರಗೆ ಇರಿಸಿದನು.
2 ಪೂರ್ವಕಾಲವೃತ್ತಾ 24 : 9 (IRVKN)
ದೇವರ ಸೇವಕನಾದ ಮೋಶೆಯು ಅರಣ್ಯದಲ್ಲಿ ವಿಧಿಸಿದಂತೆ, ಇಸ್ರಾಯೇಲರು ಯೆಹೋವನಿಗೋಸ್ಕರ ಕೊಡಬೇಕಾದ ಕಾಣಿಕೆಯನ್ನು ತಂದು ಕೊಡಬೇಕು ಎಂಬುದಾಗಿ ಯೆಹೂದದಲ್ಲಿಯೂ, ಯೆರೂಸಲೇಮಿನಲ್ಲಿಯೂ ಪ್ರಕಟಿಸಿದನು.
2 ಪೂರ್ವಕಾಲವೃತ್ತಾ 24 : 10 (IRVKN)
ಎಲ್ಲಾ ಪ್ರಭುಗಳೂ, ಜನರೂ ಸಂತೋಷದಿಂದ ಬೇಕಾಗುವಷ್ಟು ಹಣವನ್ನು ಪೆಟ್ಟಿಗೆಯಲ್ಲಿ ತಂದು ಹಾಕಿದರು.
2 ಪೂರ್ವಕಾಲವೃತ್ತಾ 24 : 11 (IRVKN)
ಪೆಟ್ಟಿಗೆ ತುಂಬಾ ಹಣವಿರುತ್ತದೆಂದು ಕಂಡು ಬಂದಾಗೆಲ್ಲಾ ಲೇವಿಯರು ಪೆಟ್ಟಿಗೆಯನ್ನು, ಆಸ್ಥಾನದ ಅಧಿಕಾರಿಗಳ ಬಳಿಗೆ ತರುತ್ತಿದ್ದರು. ಆಗ ಅರಸನ ಲೇಖಕನೂ, ಮಹಾಯಾಜಕನ ಉದ್ಯೋಗಸ್ಥನೂ ಬಂದು ಅದನ್ನು ತೆರವು ಮಾಡಿ ಮತ್ತೆ ಅದನ್ನು ಅದರ ಸ್ಥಳದಲ್ಲಿಡುತ್ತಿದ್ದರು.
2 ಪೂರ್ವಕಾಲವೃತ್ತಾ 24 : 12 (IRVKN)
ಅರಸನೂ ಯೆಹೋಯಾದನೂ ಅದನ್ನು ಯೆಹೋವನ ಆಲಯದ ಕೆಲಸವನ್ನು ನಡೆಸುವವರಿಗೆ ಒಪ್ಪಿಸಿದರು. ಅವರು ಯೆಹೋವನ ಆಲಯದ ಜೀರ್ಣೋದ್ಧಾರಕ್ಕಾಗಿ ಶಿಲ್ಪಿಗಳನ್ನೂ, ಬಡಗಿಯರನ್ನೂ, ಅದನ್ನು ಭದ್ರಪಡಿಸುವುದಕ್ಕಾಗಿ ಕಮ್ಮಾರರನ್ನೂ, ಕಂಚುಗಾರರನ್ನೂ ಕೆಲಸಕ್ಕೆ ನೇಮಿಸಿದರು.
2 ಪೂರ್ವಕಾಲವೃತ್ತಾ 24 : 13 (IRVKN)
ಕೆಲಸ ಮಾಡುವವರು ಆಸಕ್ತಿಯಿಂದ ಜೀರ್ಣೋದ್ಧಾರದ ಕೆಲಸವನ್ನು ಮಾಡಿ ಮುಗಿಸಿದರು. ಹೀಗೆ ಅವರು ದೇವಾಲಯವನ್ನು ಭದ್ರಪಡಿಸಿ ಪೂರ್ವಸ್ಥಿತಿಗೆ ತಂದರು.
2 ಪೂರ್ವಕಾಲವೃತ್ತಾ 24 : 14 (IRVKN)
ಕೆಲಸ ಮುಗಿದಾಗ ಅವರು ಉಳಿದ ಹಣವನ್ನು ಅರಸನಿಗೂ, ಯೆಹೋಯಾದನಿಗೂ ಒಪ್ಪಿಸಿದರು. ಇವರು ಅದರಿಂದ ಯೆಹೋವನ ಆಲಯದ ಆರಾಧನೆಗಾಗಿಯೂ, ಯಜ್ಞಸಮರ್ಪಣೆಗಾಗಿಯೂ ಉಪಯೋಗವಾಗುವ ಧೂಪಾರತಿ, ಬೆಳ್ಳಿಬಂಗಾರದ ಪಾತ್ರೆ ಮೊದಲಾದ ಸಾಮಾನುಗಳನ್ನು ಮಾಡಿಸಿದರು. ಯೆಹೋಯಾದನ ಜೀವಮಾನದಲ್ಲೆಲ್ಲಾ ಯೆಹೋವನ ಆಲಯದಲ್ಲಿ ಪ್ರತಿನಿತ್ಯವೂ ಸರ್ವಾಂಗಹೋಮಯಜ್ಞವು ನಡೆಯುತ್ತಿತ್ತು.
2 ಪೂರ್ವಕಾಲವೃತ್ತಾ 24 : 15 (IRVKN)
ಯೆಹೋಯಾದನು ಮುಪ್ಪಿನ ಮುದುಕನಾಗಿ ಮರಣ ಹೊಂದಿದನು; ಅವನು ಸಾಯುವಾಗ ನೂರಮೂವತ್ತು ವರ್ಷದವನಾಗಿದ್ದನು.
2 ಪೂರ್ವಕಾಲವೃತ್ತಾ 24 : 16 (IRVKN)
ಅವನು ಇಸ್ರಾಯೇಲರ ಕುರಿತಾಗಿಯೂ ದೇವರ ಮತ್ತು ದೇವಾಲಯದ ವಿಷಯದಲ್ಲಿಯೂ ಸತ್ಕಾರ್ಯಗಳನ್ನು ಮಾಡಿದ್ದರಿಂದ ಅವನ ಶವವನ್ನು ದಾವೀದನಗರದೊಳಗೆ ರಾಜಸ್ಮಶಾನದಲ್ಲಿ ಸಮಾಧಿ ಮಾಡಿದರು.
2 ಪೂರ್ವಕಾಲವೃತ್ತಾ 24 : 17 (IRVKN)
ಯೆಹೋವಾಷನ ದುಷ್ಟತನ ಯೆಹೋಯಾದನು ಮೃತನಾದ ಮೇಲೆ ಯೆಹೂದ ಪ್ರಭುಗಳು ಅರಸನ ಬಳಿಗೆ ಬಂದು ಅವನಿಗೆ ಅಡ್ಡಬಿದ್ದು ಅವನನ್ನು ಒಲಿಸಿಕೊಂಡರು.
2 ಪೂರ್ವಕಾಲವೃತ್ತಾ 24 : 18 (IRVKN)
ಅಂದಿನಿಂದ ಅವರು ತಮ್ಮ ಪೂರ್ವಿಕರ ದೇವರಾದ ಯೆಹೋವನ ಆಲಯವನ್ನು ನಿರಾಕರಿಸಿ, ಅಶೇರ ಸ್ತಂಭಗಳನ್ನೂ, ವಿಗ್ರಹಗಳನ್ನೂ ಪೂಜಿಸುವವರಾದರು. ಅವರ ಈ ಅಪರಾಧದ ದೆಸೆಯಿಂದ ಯೆಹೂದದ ಮೇಲೆಯೂ ಯೆರೂಸಲೇಮಿನ ಮೇಲೆಯೂ, ಯೆಹೋವನಿಗೆ ಕೋಪವುಂಟಾಯಿತು.
2 ಪೂರ್ವಕಾಲವೃತ್ತಾ 24 : 19 (IRVKN)
ಯೆಹೋವನು ಅವರನ್ನು ತನ್ನ ಕಡೆಗೆ ತಿರುಗಿಸಿಕೊಳ್ಳುವುದಕ್ಕಾಗಿ ಅವರ ಬಳಿಗೆ ಪ್ರವಾದಿಗಳನ್ನು ಕಳುಹಿಸಿದರು. ಅವರ ಮುಖಾಂತರವಾಗಿ ಎಷ್ಟು ಎಚ್ಚರಿಸಿದರೂ ಅವರು ಕಿವಿಗೊಡಲಿಲ್ಲ.
2 ಪೂರ್ವಕಾಲವೃತ್ತಾ 24 : 20 (IRVKN)
ಆಗ ಯಾಜಕನಾದ ಯೆಹೋಯಾದನ ಮಗ ಜೆಕರ್ಯನು ದೇವರ ಆತ್ಮನಿಂದ ತುಂಬಿದವನಾಗಿ ಆವೇಶ ಉಳ್ಳವನಾದನು. ಆಗ ಅವನು ಜನರ ಎದುರಿನಲ್ಲಿ ಉನ್ನತ ಸ್ಥಾನದಲ್ಲಿ ನಿಂತುಕೊಂಡು ಅವರಿಗೆ, “ದೇವರ ಮಾತನ್ನು ಕೇಳಿರಿ; ನೀವು ಯೆಹೋವನ ಆಜ್ಞೆಗಳನ್ನು ಮೀರಿ, ನಿಮ್ಮನ್ನೆ ಏಕೆ ನಾಶಮಾಡಿಕೊಳ್ಳುತ್ತಿದ್ದೀರಿ? ನೀವು ಯೆಹೋವನನ್ನು ಕಡೆಗಣಿಸಿರುವುದರಿಂದ; ಆತನೂ ನಿಮ್ಮನ್ನು ಕಡೆಗಣಿಸಿದ್ದಾನೆ” ಎಂದನು.
2 ಪೂರ್ವಕಾಲವೃತ್ತಾ 24 : 21 (IRVKN)
ಆಗ ಅವರು ಅವನಿಗೆ ವಿರೋಧವಾಗಿ ಒಳಸಂಚುಮಾಡಿ ಯೆಹೋವನ ಆಲಯದ ಪ್ರಾಕಾರದಲ್ಲಿ ಅವನನ್ನು ಕಲ್ಲೆಸೆದು ಕೊಂದರು. ಇದು ಅರಸನಾದ ಯೆಹೋವಾಷನ ಅಪ್ಪಣೆಯಿಂದಲೇ ಆಯಿತು.
2 ಪೂರ್ವಕಾಲವೃತ್ತಾ 24 : 22 (IRVKN)
ಯೆಹೋವಾಷನು ಜೆಕರೀಯನ ತಂದೆಯಾದ ಯೆಹೋಯಾದನಿಂದ ತನಗಾದ ಕೃಪೆಯನ್ನು ಮರೆತು ಅವನ ಮಗನನ್ನು ಕೊಲ್ಲಿಸಿದನು. ಜೆಕರೀಯನು ಸಾಯುವಾಗ, “ಯೆಹೋವನೇ ಇದನ್ನು ನೋಡಿ, ತಕ್ಕ ಶಿಕ್ಷೆಯನ್ನು ವಿಧಿಸಲಿ” ಎಂದನು.
2 ಪೂರ್ವಕಾಲವೃತ್ತಾ 24 : 23 (IRVKN)
ವರ್ಷಾಂತ್ಯದಲ್ಲಿ ಅರಾಮ್ಯರ ಸೈನ್ಯವು ಯೆಹೋವಾಷನಿಗೆ ವಿರುದ್ಧವಾಗಿ ದಾಳಿಮಾಡಲು ಹೊರಟಿತು. ಆ ಸೈನ್ಯದವರು ಯೆಹೂದ ದೇಶದೊಳಗೆ ನುಗ್ಗಿ, ಯೆರೂಸಲೇಮಿಗೆ ಬಂದು ಇಸ್ರಾಯೇಲರ ಎಲ್ಲಾ ಜನಾಧಿಪತಿಗಳನ್ನು ನಿರ್ನಾಮ ಮಾಡಿ ಅವರಲ್ಲಿ ಸಿಕ್ಕಿದ ಕೊಳ್ಳೆಯನ್ನೆಲ್ಲಾ ದಮಸ್ಕದ ಅರಸನಿಗೆ ಕಳುಹಿಸಿಬಿಟ್ಟರು.
2 ಪೂರ್ವಕಾಲವೃತ್ತಾ 24 : 24 (IRVKN)
ಅರಾಮ್ಯ ಸೈನ್ಯದಿಂದ ಬಂದ ಗುಂಪು ಚಿಕ್ಕದಾಗಿದ್ದರೂ ಯೆಹೂದ್ಯರು ತಮ್ಮ ಪೂರ್ವಿಕರ ದೇವರಾದ ಯೆಹೋವನನ್ನು ಕಡೆಗಣಿಸಿದ್ದರಿಂದ ಮಹಾಸೈನ್ಯವಾಗಿದ್ದ ಅವರನ್ನು ಯೆಹೋವನು ಅರಾಮ್ಯರ ಕೈಯಲ್ಲಿ ಸೋಲುವಂತೆ ಮಾಡಿ, ಯೆಹೋವಾಷನನ್ನು ಅವರ ಮುಖಾಂತರ ಶಿಕ್ಷಿಸಿದನು.
2 ಪೂರ್ವಕಾಲವೃತ್ತಾ 24 : 25 (IRVKN)
ಕಠಿಣವಾಗಿ ಗಾಯಗೊಂಡಿದ್ದ ಅವನನ್ನು ಅರಾಮ್ಯರು ಬಿಟ್ಟು ಹೋದ ಕೂಡಲೆ, ಅವನ ಸೇವಕರು ಅವನು ಯಾಜಕನಾದ ಯೆಹೋಯಾದನ ಮಗನನ್ನು ಕೊಲ್ಲಿಸಿದ ನಿಮಿತ್ತ, ಅವನಿಗೆ ವಿರುದ್ಧವಾಗಿ ಒಳಸಂಚುಮಾಡಿ, ಅವನನ್ನು ಹಾಸಿಗೆಯಲ್ಲೇ ಕೊಂದುಹಾಕಿದರು. ಅವನ ಶವವನ್ನು ದಾವೀದನಗರದೊಳಗೆ ಸಮಾಧಿಮಾಡಿದರು. ಆದರೆ ರಾಜಸ್ಮಶಾನದಲ್ಲಿ ಅವನನ್ನು ಸಮಾಧಿ ಮಾಡಲಿಲ್ಲ.
2 ಪೂರ್ವಕಾಲವೃತ್ತಾ 24 : 26 (IRVKN)
ಅಮ್ಮೋನಿಯರ ದೇಶದ ಶಿಮ್ಗಾತೆಂಬಾಕೆಯ ಮಗನಾದ ಜಾಬಾದ್, ಮೋವಾಬ್ ದೇಶದ ಶಿಮ್ರಾತೆಂಬಾಕೆಯ ಮಗನಾದ ಯೆಹೋಜಾಬಾದ್ ಎಂಬುವರೇ ಅವನ ವಿರುದ್ಧವಾಗಿ ಒಳಸಂಚು ಮಾಡಿದವರು.
2 ಪೂರ್ವಕಾಲವೃತ್ತಾ 24 : 27 (IRVKN)
ಅವನ ಮಕ್ಕಳು ಅವನಿಗೆ ವಿರುದ್ಧವಾಗಿ ಹೇಳಲಾದ ಅನೇಕ ದೈವೋಕ್ತಿಗಳೂ, ಹಾಗು ದೇವಾಲಯದ ಜೀರ್ಣೋದ್ಧಾರ ವೃತ್ತಾಂತವು, ರಾಜರ ಗ್ರಂಥದ ವ್ಯಾಖ್ಯಾನದಲ್ಲಿ ದಾಖಲಿಸಲಾಗಿದೆ. ಅವನಿಗೆ ಬದಲಾಗಿ ಅವನ ಮಗನಾದ ಅಮಚ್ಯನು ಅರಸನಾದನು.
❮
❯