2 ಪೂರ್ವಕಾಲವೃತ್ತಾ 21 : 1 (IRVKN)
ಅರಸನಾದ ಯೆಹೋರಾಮನು ಯೆಹೋಷಾಫಾಟನು ಪೂರ್ವಿಕರ ಬಳಿಗೆ ಸೇರಿದನು. ದಾವೀದನಗರದಲ್ಲಿ ಅವನನ್ನು ಪೂರ್ವಿಕರ ಸ್ಮಶಾನ ಭೂಮಿಯಲ್ಲಿ ಸಮಾಧಿಮಾಡಿದ ಮೇಲೆ, ಅವನ ಮಗನಾದ ಯೆಹೋರಾಮನು ಅರಸನಾದನು.
2 ಪೂರ್ವಕಾಲವೃತ್ತಾ 21 : 2 (IRVKN)
ಇವನಿಗೆ ಅಜರ್ಯ, ಯೆಹೀಯೇಲ್, ಜೆಕರ್ಯ, ಅಜರ್ಯ, ಮಿಕಾಯೇಲ್, ಶೆಫಟ್ಯ ಎಂಬ ತಮ್ಮಂದಿರಿದ್ದರು. ಇವರೆಲ್ಲರೂ ಇಸ್ರಾಯೇಲರ ಅರಸನಾದ ಯೆಹೋಷಾಫಾಟನ ಮಕ್ಕಳು.
2 ಪೂರ್ವಕಾಲವೃತ್ತಾ 21 : 3 (IRVKN)
ಇವರ ತಂದೆಯು ಇವರಿಗೆ ಯೆಹೂದದ ಕೋಟೆಕೊತ್ತಲಗಳುಳ್ಳ ಪಟ್ಟಣಗಳನ್ನಲ್ಲದೆ ಬೆಳ್ಳಿ ಬಂಗಾರ, ಶ್ರೇಷ್ಠವಸ್ತು ಇತ್ಯಾದಿ ವಿಶೇಷ ದಾನಗಳನ್ನು ಕೊಟ್ಟನು. ಆದರೆ ಯೆಹೋರಾಮನು ಹಿರಿಯ ಮಗನಾಗಿದ್ದುದರಿಂದ ಅವನಿಗೆ ರಾಜ್ಯವನ್ನು ಕೊಟ್ಟನು.
2 ಪೂರ್ವಕಾಲವೃತ್ತಾ 21 : 4 (IRVKN)
ಯೆಹೋರಾಮನು ತನ್ನ ತಂದೆಯ ರಾಜ್ಯವನ್ನು ಪಡೆದುಕೊಂಡು ತನ್ನ ಆಳ್ವಿಕೆಯನ್ನು ಸ್ಥಿರಗೊಳಿಸಿಕೊಂಡ ಮೇಲೆ, ತನ್ನ ಎಲ್ಲಾ ಸಹೋದರರನ್ನೂ ಕೆಲವು ಮಂದಿ ಇಸ್ರಾಯೇಲ್ ಪ್ರಧಾನರನ್ನೂ ಕತ್ತಿಯಿಂದ ಸಂಹರಿಸಿದನು.
2 ಪೂರ್ವಕಾಲವೃತ್ತಾ 21 : 5 (IRVKN)
ಯೆಹೋರಾಮನು ಪಟ್ಟಕ್ಕೆ ಬಂದಾಗ ಮೂವತ್ತೆರಡು ವರ್ಷದವನಾಗಿದ್ದನು; ಅವನು ಯೆರೂಸಲೇಮಿನಲ್ಲಿ ಎಂಟು ವರ್ಷ ಆಳಿದನು.
2 ಪೂರ್ವಕಾಲವೃತ್ತಾ 21 : 6 (IRVKN)
ಅವನು ಅಹಾಬನ ಮಗಳನ್ನು ಮದುವೆಮಾಡಿಕೊಂಡದ್ದರಿಂದ, ಅಹಾಬನ ಕುಟುಂಬದವರಾದ ಇಸ್ರಾಯೇಲ್ ರಾಜರ ಮಾರ್ಗವನ್ನು ಅನುಸರಿಸಿ ಯೆಹೋವನ ಚಿತ್ತಕ್ಕೆ ವಿರುದ್ಧವಾಗಿ ನಡೆದನು.
2 ಪೂರ್ವಕಾಲವೃತ್ತಾ 21 : 7 (IRVKN)
ಆದರೂ ಯೆಹೋವನು ದಾವೀದನಿಗೆ, “ನಿನ್ನ ಮತ್ತು ನಿನ್ನ ಸಂತಾನದವರ ದೀಪವನ್ನು ಎಂದೂ ನಂದಿಸುವುದಿಲ್ಲ” ಎಂದು ಒಡಂಬಡಿಕೆ ಮಾಡಿ ಹೇಳಿದ್ದರಿಂದ ದಾವೀದನ ಮನೆತನದವರನ್ನು ನಾಶಮಾಡುವುದಕ್ಕೆ ಇಷ್ಟಪಡಲಿಲ್ಲ.
2 ಪೂರ್ವಕಾಲವೃತ್ತಾ 21 : 8 (IRVKN)
ಯೆಹೋರಾಮನ ಕಾಲದಲ್ಲಿ ಎದೋಮ್ಯರು ಯೆಹೂದ್ಯರಿಗೆ ವಿರೋಧವಾಗಿ ದಂಗೆಯೆದ್ದರು; ಸ್ವತಂತ್ರರಾಗಿ ತಾವೇ ತಮಗೊಬ್ಬ ಅರಸನನ್ನು ನೇಮಿಸಿಕೊಂಡರು.
2 ಪೂರ್ವಕಾಲವೃತ್ತಾ 21 : 9 (IRVKN)
ಆಗ ಯೆಹೋರಾಮನು ರಾತ್ರಿಯಲ್ಲಿ ತನ್ನ ಸರದಾರರನ್ನೂ ಎಲ್ಲಾ ರಥಬಲವನ್ನೂ ಕೂಡಿಸಿಕೊಂಡು ಯೊರ್ದನ್ ಹೊಳೆಯನ್ನು ದಾಟಿದನು.ಎದೋಮ್ಯರು ಬಂದು ಅವನನ್ನು ಸುತ್ತಿಕೊಳ್ಳಲು ಅವನು ರಾತ್ರಿಯಲ್ಲೇ ದಂಡೆತ್ತಿ ಹೋಗಿ ಅವರನ್ನೂ ಅವರ ರಥಬಲದ ಅಧಿಪತಿಗಳನ್ನೂ ಸೋಲಿಸಿ ಪಾರಾದನು.
2 ಪೂರ್ವಕಾಲವೃತ್ತಾ 21 : 10 (IRVKN)
ಯೆಹೂದ್ಯರಿಗೆ ವಿರೋಧವಾಗಿ ದಂಗೆಯೆದ್ದ ಎದೋಮ್ಯರು ಅಂದಿನಿಂದ ಇಂದಿನ ವರೆಗೂ ಅವರ ಶತ್ರುಗಳಾಗಿಯೇ ಇದ್ದಾರೆ. ಆ ಕಾಲದಲ್ಲಿಯೇ ಲಿಬ್ನದವರೂ ಅವನ ಕೈಯಿಂದ ತಪ್ಪಿಸಿಕೊಂಡು ಸ್ವತಂತ್ರರಾದರು. ಯೆಹೋರಾಮನು ತನ್ನ ಪೂರ್ವಿಕರ ದೇವರಾದ ಯೆಹೋವನನ್ನು ಕಡೆಗಣಿಸಿದ್ದರಿಂದ ಹೀಗಾಯಿತು.
2 ಪೂರ್ವಕಾಲವೃತ್ತಾ 21 : 11 (IRVKN)
ಅವನು ಯೆಹೂದದ ಗುಡ್ಡಗಳಲ್ಲಿ, ಪೂಜಾ ಸ್ಥಳಗಳನ್ನು ಏರ್ಪಡಿಸಿ ಯೆರೂಸಲೇಮಿನವರನ್ನು ದೈವದ್ರೋಹ ಮಾಡುವಂತೆ ಪ್ರೇರೇಪಿಸಿ, ಯೆಹೂದ್ಯರನ್ನು ಸನ್ಮಾರ್ಗದಿಂದ ತಪ್ಪಿಸಿದನು.
2 ಪೂರ್ವಕಾಲವೃತ್ತಾ 21 : 12 (IRVKN)
ಹೀಗಿರಲಾಗಿ, ಪ್ರವಾದಿಯಾದ ಎಲೀಯನು ಕಾಗದದ ಮೂಲಕವಾಗಿ ಅವನಿಗೆ, “ನಿನ್ನ ಪೂರ್ವಿಕನಾದ ದಾವೀದನ ದೇವರಾಗಿರುವ ಯೆಹೋವನ ಮಾತನ್ನು ಕೇಳು; ನೀನು ನಿನ್ನ ತಂದೆಯಾದ ಯೆಹೋಷಾಫಾಟನ ಮಾರ್ಗದಲ್ಲಿ ಹಾಗು ಯೆಹೂದ್ಯರ ಅರಸನಾದ ಆಸನ ಮಾರ್ಗದಲ್ಲಿ ನಡೆಯಲಿಲ್ಲ;
2 ಪೂರ್ವಕಾಲವೃತ್ತಾ 21 : 13 (IRVKN)
ಇಸ್ರಾಯೇಲ್ ರಾಜರ ಮಾರ್ಗದಲ್ಲೇ ನಡೆದು, ಅಹಾಬನ ಮನೆಯವರಲ್ಲಿ ಪ್ರಬಲವಾಗಿದ್ದ ದೇವದ್ರೋಹವನ್ನು ಮಾಡುವಂತೆ ಯೆಹೂದ್ಯರನ್ನೂ ಯೆರೂಸಲೇಮಿನವರನ್ನೂ ಪ್ರೇರೇಪಿಸಿರುವೆ; ಮತ್ತು ನಿನ್ನ ತಂದೆಯ ಕುಂಟುಂಬದವರೂ ನಿನಗಿಂತ ಉತ್ತಮರೂ, ನಿನ್ನ ಸಹೋದರರನ್ನೂ ಕೊಂದು ಹಾಕಿರುವೆ.
2 ಪೂರ್ವಕಾಲವೃತ್ತಾ 21 : 14 (IRVKN)
ಆದುದರಿಂದ ಯೆಹೋವನು ನಿನ್ನ ಪ್ರಜೆಗಳ, ಹೆಂಡತಿ ಮಕ್ಕಳನ್ನೂ, ಆಸ್ತಿಪಾಸ್ತಿ ಸರ್ವಸ್ವವನ್ನೂ ಮಹಾ ಆಪತ್ತಿಗೆ ಗುರಿಮಾಡುವನು.
2 ಪೂರ್ವಕಾಲವೃತ್ತಾ 21 : 15 (IRVKN)
ನಿನಗಾದರೋ ಕರುಳು ಬೇನೆಯ ಕಠಿಣ ರೋಗ ಬರುವುದು. ಅದು ಬಹು ದಿನಗಳವರೆಗೂ ಇದ್ದು ವಾಸಿಯಾಗದೇ ನಿನ್ನ ಕರುಳುಗಳು ಹೊರಗೆ ಬೀಳುವುವು” ಎಂದು ತಿಳಿಸಿದನು.
2 ಪೂರ್ವಕಾಲವೃತ್ತಾ 21 : 16 (IRVKN)
ಯೆಹೋವನು ಫಿಲಿಷ್ಟಿಯರನ್ನೂ, ಕೂಷ್ಯರ ನೆರೆಯವರಾದ ಅರಬಿಯರನ್ನೂ ಯೆಹೋರಾಮನಿಗೆ ವಿರೋಧಿಗಳಾಗುವಂತೆ ಪ್ರಚೋದಿಸಿದನು.
2 ಪೂರ್ವಕಾಲವೃತ್ತಾ 21 : 17 (IRVKN)
ಅವರು ಯೆಹೂದದ ಮೇಲೆ ಯುದ್ಧಕ್ಕೆ ಬಂದು, ದೇಶದೊಳಗೆ ನುಗ್ಗಿ, ಅರಮನೆಯಲ್ಲಿ ಸಿಕ್ಕಿದ ಎಲ್ಲಾ ವಸ್ತುಗಳನ್ನೂ, ಅರಸನ ಹೆಂಡತಿಯರನ್ನೂ ಮತ್ತು ಮಕ್ಕಳನ್ನೂ ಸೆರೆಯಾಗಿ ಒಯ್ದರು. ಅವನಿಗೆ ಕಿರಿಯ ಮಗನಾದ ಯೆಹೋವಾಹಾಜನ ಹೊರತು, ಯಾವ ಮಕ್ಕಳೂ ಉಳಿಯಲಿಲ್ಲ.
2 ಪೂರ್ವಕಾಲವೃತ್ತಾ 21 : 18 (IRVKN)
ಇದೆಲ್ಲಾ ಆದಮೇಲೆ, ಯೆಹೋವನು ಅವನ ಕರುಳುಗಳಲ್ಲಿ ವಾಸಿಯಾಗಲಾರದ ರೋಗವನ್ನು ಉಂಟುಮಾಡಿದನು.
2 ಪೂರ್ವಕಾಲವೃತ್ತಾ 21 : 19 (IRVKN)
ಕ್ರಮೇಣವಾಗಿ ಅಂದರೆ, ಸುಮಾರು ಎರಡು ವರ್ಷಗಳಾದ ಮೇಲೆ, ಆದೇ ರೋಗದ ನಿಮಿತ್ತ ಅವನ ಕರುಳುಗಳು ಹೊರಬಿದ್ದವು. ಅವನು ಕಡುಬೇನೆಯಿಂದ ಸತ್ತನು. ಅವನ ಪ್ರಜೆಗಳು ಅವನ ಪೂರ್ವಿಕರಿಗಾಗಿ ಧೂಪಹಾಕಿದ ಹಾಗೆ ಅವನಿಗೆ ಹಾಕಲಿಲ್ಲ.
2 ಪೂರ್ವಕಾಲವೃತ್ತಾ 21 : 20 (IRVKN)
ಅವನು ಪಟ್ಟಕ್ಕೆ ಬಂದಾಗ ಮೂವತ್ತೆರಡು ವರ್ಷದವನಾಗಿದ್ದನು. ಅವನು ಯೆರೂಸಲೇಮಿನಲ್ಲಿ ಎಂಟು ವರ್ಷ ರಾಜ್ಯಭಾರಮಾಡಿದನು. ಅವನು ಮರಣಹೊಂದಿದಾಗ ಯಾರೂ ಶೋಕಿಸಲಿಲ್ಲ. ಅವನು ಯಾರಿಗೂ ಇಷ್ಟವಿಲ್ಲದವನಾಗಿ ಗತಿಸಿಹೋದನು. ಅವನ ಶವವನ್ನು ದಾವೀದನಗರದಲ್ಲಿ ಸಮಾಧಿಮಾಡಿದರು; ಆದರೆ ರಾಜರ ಸಮಾಧಿಗಳಲ್ಲಿ ಅವನನ್ನು ಸಮಾಧಿಮಾಡಲಿಲ್ಲ.

1 2 3 4 5 6 7 8 9 10 11 12 13 14 15 16 17 18 19 20