2 ಪೂರ್ವಕಾಲವೃತ್ತಾ 20 : 1 (IRVKN)
ಯೆಹೋಷಾಫಾಟನು ಮೋವಾಬ್ಯರನ್ನೂ ಅಮ್ಮೋನಿಯರನ್ನೂ ಸೋಲಿಸಿದ್ದು ಇದಾದ ಮೇಲೆ ಮೋವಾಬ್ಯರೂ ಅಮ್ಮೋನಿಯರೂ ಹಾಗೂ ಮೆಗೂನ್ಯರಲ್ಲಿ ಕೆಲವರೂ ಯೆಹೋಷಾಫಾಟನಿಗೆ ವಿರುದ್ಧವಾಗಿ ಯುದ್ಧಕ್ಕೆ ಬಂದರು.
2 ಪೂರ್ವಕಾಲವೃತ್ತಾ 20 : 2 (IRVKN)
ದೂತರು ಬಂದು ಯೆಹೋಷಾಫಾಟನಿಗೆ, “ಮಹಾಸಮೂಹವು ನಿನಗೆ ವಿರುದ್ಧವಾಗಿ ಲವಣ ಸಮುದ್ರದ ಆಚೆಯಲ್ಲಿರುವ ಅರಾಮ್ ಪ್ರಾಂತ್ಯದ ಕಡೆಯಿಂದ ಬಂದು ಈಗ ‘ಏಂಗೆದಿ’ ಎನಿಸಿಕೊಳ್ಳುವ ಹಚಚೋನ್ ತಾಮಾರಿನಲ್ಲಿ ಬಂದು ತಂಗಿದ್ದಾರೆ” ಎಂದು ತಿಳಿಸಿದರು.
2 ಪೂರ್ವಕಾಲವೃತ್ತಾ 20 : 3 (IRVKN)
ಯೆಹೋಷಾಫಾಟನು ಇದನ್ನು ಕೇಳಿ ಹೆದರಿ, ಯೆಹೋವನನ್ನೇ ಆಶ್ರಯಿಸಿಕೊಳ್ಳಬೇಕೆಂದು ನಿರ್ಣಯಿಸಿಕೊಂಡನು. ಯೆಹೂದ್ಯರೆಲ್ಲರೂ ಉಪವಾಸ ಮಾಡಬೇಕೆಂದು ಪ್ರಕಟಿಸಿದನು.
2 ಪೂರ್ವಕಾಲವೃತ್ತಾ 20 : 4 (IRVKN)
ಆಗ ಯೆಹೂದ್ಯರು ಯೆಹೋವನ ಸಹಾಯವನ್ನು ಕೇಳಿಕೊಳ್ಳುವುದಕ್ಕಾಗಿ ತಮ್ಮ ಎಲ್ಲಾ ಪಟ್ಟಣಗಳಿಂದ ಆತನ ಸನ್ನಿಧಿಯಲ್ಲಿ ಸೇರಿ ಬಂದರು.
2 ಪೂರ್ವಕಾಲವೃತ್ತಾ 20 : 5 (IRVKN)
ಯೆಹೂದ್ಯರೂ ಯೆರೂಸಲೇಮಿನವರೂ ಯೆಹೋವನ ಆಲಯದ ಹೊಸ ಪ್ರಾಕಾರದಲ್ಲಿ ಸಭೆಯಾಗಿ ನೆರೆದು ಬಂದಾಗ, ಯೆಹೋಷಾಫಾಟನು ಅದರ ಮುಂದೆ ನಿಂತು,
2 ಪೂರ್ವಕಾಲವೃತ್ತಾ 20 : 6 (IRVKN)
“ಯೆಹೋವನೇ, ನಮ್ಮ ಪೂರ್ವಿಕರ ದೇವರೇ, ಪರಲೋಕದಲ್ಲಿ ದೇವರಾಗಿ ಇರುವಾತನು ನೀನಲ್ಲವೋ? ನೀನು ಜನಾಂಗಗಳನ್ನೂ, ಎಲ್ಲಾ ರಾಜ್ಯಗಳನ್ನು ಆಳುವವನಾಗಿರುವೆ. ಬಲ, ಪರಾಕ್ರಮಗಳು ನಿನ್ನ ಕೈಗಳಲ್ಲಿ ಇರುತ್ತವೆ: ನಿನ್ನೆದುರಿನಲ್ಲಿ ನಿಲ್ಲುವವರು ಯಾರಿದ್ದಾರೆ?
2 ಪೂರ್ವಕಾಲವೃತ್ತಾ 20 : 7 (IRVKN)
ನಮ್ಮ ದೇವರಾದ ನೀನು ನಿನ್ನ ಪ್ರಜೆಗಳಾದ ಇಸ್ರಾಯೇಲರ ಎದುರಿನಿಂದ ಈ ದೇಶದ ನಿವಾಸಿಗಳನ್ನು ಓಡಿಸಿ, ದೇಶವನ್ನು ನಿನ್ನ ಸ್ನೇಹಿತನಾದ ಅಬ್ರಹಾಮನ ಸಂತಾನದವರಿಗೆ ಶಾಶ್ವತ ಸ್ವತ್ತಾಗಿ ಕೊಟ್ಟಿರುವೆಯಲ್ಲಾ?.
2 ಪೂರ್ವಕಾಲವೃತ್ತಾ 20 : 8 (IRVKN)
ಅವರು ಈ ದೇಶದಲ್ಲಿ ನೆಲಗೊಂಡು ಇದರಲ್ಲಿ ನಿನ್ನ ಹೆಸರಿಗಾಗಿ ಪವಿತ್ರಾಲಯವನ್ನು ಕಟ್ಟಿದರು.
2 ಪೂರ್ವಕಾಲವೃತ್ತಾ 20 : 9 (IRVKN)
ತಮ್ಮ ಮೇಲೆ ನ್ಯಾಯ ತೀರ್ಪಿನ ಖಡ್ಗ, ಘೋರವ್ಯಾಧಿ, ಕ್ಷಾಮ ಮೊದಲಾದ ಆಪತ್ತುಗಳು ನಮಗೆ ಬರುವಾಗ, ನಾವು ನಿನ್ನ ನಾಮ ಮಹತ್ತು ಇರುವ ಈ ಆಲಯದ ಮುಂದೆಯೂ, ನಿನ್ನ ಮುಂದೆಯೂ ನಿಂತು, ನಮ್ಮ ಇಕ್ಕಟ್ಟಿನಲ್ಲಿ ನಿನಗೆ ಮೊರೆಯಿಡುವುದಾದರೆ ನೀನು ಕೇಳಿ ರಕ್ಷಿಸುವಿ ಎಂದುಕೊಂಡಿದ್ದೇವೆ.
2 ಪೂರ್ವಕಾಲವೃತ್ತಾ 20 : 10 (IRVKN)
ಈ ಅಮ್ಮೋನಿಯರನ್ನೂ, ಮೋವಾಬ್ಯರನ್ನೂ ಸೇಯೀರ್ ಪರ್ವತ ಪ್ರದೇಶದವರನ್ನೂ ನೋಡು, ಇಸ್ರಾಯೇಲರು ಐಗುಪ್ತ ದೇಶದಿಂದ ಬರುತ್ತಿದ್ದಾಗ, ಇವರ ದೇಶದಲ್ಲಿ ನುಗ್ಗಬಾರದೆಂದು ನಿನ್ನಿಂದ ಅಪ್ಪಣೆಹೊಂದಿ, ಇವರನ್ನು ಸಂಹರಿಸದೆ ಬೇರೆ ಮಾರ್ಗವಾಗಿ ಹೋದರಲ್ಲಾ.
2 ಪೂರ್ವಕಾಲವೃತ್ತಾ 20 : 11 (IRVKN)
ಈಗ ಅವರು ಉಪಕಾರಕ್ಕೆ ಅಪಕಾರಮಾಡಿ, ನೀನು ನಮಗೆ ಅನುಗ್ರಹಿಸಿದ ಸ್ವತ್ತಿನೊಳಗಿಂದ ನಮ್ಮನ್ನು ಹೊರ ಓಡಿಸುವುದಕ್ಕಾಗಿ ನಮ್ಮ ಮೇಲೆ ಯುದ್ಧಕ್ಕೆ ಬಂದಿರುತ್ತಾರೆ.
2 ಪೂರ್ವಕಾಲವೃತ್ತಾ 20 : 12 (IRVKN)
ನಮ್ಮ ದೇವರೇ, ಅವರನ್ನು ದಂಡಿಸದೆ ಬಿಡುವಿಯೋ? ನಮ್ಮ ಮೇಲೆ ಬಂದಿರುವ ಈ ಮಹಾಸಮೂಹದ ಮುಂದೆ ನಿಲ್ಲುವುದಕ್ಕೆ ನಮ್ಮಲ್ಲಿ ಬಲವಿಲ್ಲ; ಏನು ಮಾಡಬೇಕೆಂಬುದೂ ತಿಳಿಯದು; ನಮ್ಮ ಕಣ್ಣುಗಳು ನಿನ್ನನ್ನೇ ನೋಡುತ್ತಿವೆ” ಎಂದು ಪ್ರಾರ್ಥಿಸಿದನು.
2 ಪೂರ್ವಕಾಲವೃತ್ತಾ 20 : 13 (IRVKN)
ಎಲ್ಲಾ ಯೆಹೂದ್ಯರೂ ಅವರ ಹೆಂಡತಿ ಮಕ್ಕಳೂ ಯೆಹೋವನ ಸನ್ನಿಧಿಯಲ್ಲಿ ನಿಂತಿದ್ದರು.
2 ಪೂರ್ವಕಾಲವೃತ್ತಾ 20 : 14 (IRVKN)
ಆಗ ಆ ಸಮೂಹದೊಳಗೆ ಆಸಾಫನ ವಂಶದವನಾದ ಲೇವಿಯನೂ, ಮತ್ತನ್ಯನಿಗೆ ಹುಟ್ಟಿದ ಯೆಗೀಯೇಲನ ಮರಿಮಗನೂ, ಬೆನಾಯನ ಮೊಮ್ಮಗನೂ, ಜೆಕರ್ಯನ ಮಗನೂ ಆದ ಯಹಜೀಯೇಲನ ಮೇಲೆ ಯೆಹೋವನ ಆತ್ಮವು ಬಂದಿತು.
2 ಪೂರ್ವಕಾಲವೃತ್ತಾ 20 : 15 (IRVKN)
ಅವನು, “ಎಲ್ಲಾ ಯೆಹೂದ್ಯರೇ, ಯೆರೂಸಲೇಮಿನವರೇ, ಅರಸನಾದ ಯೆಹೋಷಾಫಾಟನೇ, ಯೆಹೋವನು ಹೇಳುವುದನ್ನು ಕೇಳಿರಿ: ಈ ಮಹಾಸಮೂಹದ ನಿಮಿತ್ತವಾಗಿ ಕಳವಳಗೊಳ್ಳಬೇಡಿರಿ; ಹೆದರಬೇಡಿರಿ; ಯುದ್ಧವು ನಿಮ್ಮದಲ್ಲ; ದೇವರದೇ.
2 ಪೂರ್ವಕಾಲವೃತ್ತಾ 20 : 16 (IRVKN)
ನಾಳೆ ಬೆಳಗ್ಗೆ ಅವರಿಗೆ ವಿರುದ್ಧವಾಗಿ ಹೊರಡಿರಿ; ಇಗೋ ಅವರು ಹಚ್ಚೀಚ್ ಗಟ್ಟದ ಮಾರ್ಗವಾಗಿ ಬರುತ್ತಾರೆ. ಯೆರೂವೇಲ್ ಅರಣ್ಯದ ಮುಂದಿರುವ ಕಣಿವೆಯ ತುದಿಯಲ್ಲಿ ಅವರನ್ನು ಸಂಧಿಸುವಿರಿ.
2 ಪೂರ್ವಕಾಲವೃತ್ತಾ 20 : 17 (IRVKN)
ಈ ಸಮೂಹದೊಂದಿಗೆ ನೀವು ಯುದ್ಧಮಾಡುವುದು ಅವಶ್ಯವಿಲ್ಲ. ಯೆಹೂದ್ಯರೇ, ಯೆರೂಸಲೇಮಿನವರೇ, ಸುಮ್ಮನೆ ನಿಂತುಕೊಂಡು ಯೆಹೋವನು ನಿಮಗೋಸ್ಕರ ಮಾಡುವ ರಕ್ಷಣಾ ಕಾರ್ಯವನ್ನು ನೋಡಿರಿ; ಹೆದರಬೇಡಿರಿ, ಕಳವಳಗೊಳ್ಳಬೇಡಿರಿ. ನಾಳೆ ಅವರೆದುರಿಗೆ ಹೊರಡಿರಿ, ಯೆಹೋವನು ನಿಮ್ಮ ಸಂಗಡ ಇರುವನು” ಎಂದು ಹೇಳಿದನು.
2 ಪೂರ್ವಕಾಲವೃತ್ತಾ 20 : 18 (IRVKN)
ಆಗ ಯೆಹೋಷಾಫಾಟನು ನೆಲದವರೆಗೂ ಬಗ್ಗಿ ನಮಸ್ಕರಿಸಿದನು. ಎಲ್ಲಾ ಯೆಹೂದ್ಯರೂ ಯೆರೂಸಲೇಮಿನವರೂ ಯೆಹೋವನ ಮುಂದೆ ಅಡ್ಡಬಿದ್ದು ನಮಸ್ಕರಿಸಿದರು.
2 ಪೂರ್ವಕಾಲವೃತ್ತಾ 20 : 19 (IRVKN)
ಆಮೇಲೆ ಲೇವಿಯರಲ್ಲಿ ಕೆಹಾತ್ಯರೂ, ಕೋರಹಿಯರೂ ಎದ್ದು, ಇಸ್ರಾಯೇಲ್ ದೇವರಾದ ಯೆಹೋವನನ್ನು ಮಹಾಸ್ವರದಿಂದ ಕೀರ್ತಿಸಿದರು.
2 ಪೂರ್ವಕಾಲವೃತ್ತಾ 20 : 20 (IRVKN)
ಅವರು ಮರುದಿನ ಬೆಳಿಗ್ಗೆ ಎದ್ದು ತೆಕೋವ ಅರಣ್ಯಕ್ಕೆ ಹೊರಟರು. ಹೊರಡುವಾಗ, ಯೆಹೋಷಾಫಾಟನು ಅವರಿಗೆ, “ಯೆಹೂದ್ಯರೇ, ಯೆರೂಸಲೇಮಿನವರೇ, ನನ್ನ ಮಾತನ್ನು ಕೇಳಿರಿ, ಯೆಹೋವನಲ್ಲಿ ಭರವಸವಿಡಿರಿ, ಆಗ ನೀವು ಸುರಕ್ಷಿತರಾಗಿರುವಿರಿ; ಆತನ ಪ್ರವಾದಿಗಳನ್ನು ನಂಬಿರಿ, ಆಗ ನೀವು ಸಫಲರಾಗುವಿರಿ” ಎಂದು ಹೇಳಿದನು.
2 ಪೂರ್ವಕಾಲವೃತ್ತಾ 20 : 21 (IRVKN)
ಆ ನಂತರ ಅವನು ಜನರೊಂದಿಗೆ ಸಮಾಲೋಚನೆ ಮಾಡಿ ಯೆಹೋವನನ್ನು ಸ್ತುತಿಸಿ ಹಾಡುವುದಕ್ಕಾಗಿ ಕೆಲವರನ್ನು ಆರಿಸಿಕೊಂಡು ಅವರಿಗೆ, “ಪರಿಶುದ್ಧವಸ್ತ್ರ ಅಲಂಕಾರ ಭೂಷಣದೊಡನೆ ಭಟರ ಮುಂದೆ ಹೋಗುತ್ತಾ, ‘ಯೆಹೋವನಿಗೆ ಕೃತಜ್ಞತಾಸ್ತುತಿಮಾಡಿರಿ, ಆತನ ಕೃಪೆಯು ಶಾಶ್ವತವಾದದ್ದು’ ಎಂದು ಭಜಿಸಿರಿ” ಎಂಬುದಾಗಿ ಆಜ್ಞಾಪಿಸಿದನು.
2 ಪೂರ್ವಕಾಲವೃತ್ತಾ 20 : 22 (IRVKN)
ಅವರು ಉತ್ಸಾಹ ಧ್ವನಿಯಿಂದ ಕೀರ್ತಿಸುವುದಕ್ಕೆ ಪ್ರಾರಂಭಿಸಿದರು. ಆಗ ಯೆಹೋವನು ಯೆಹೂದ್ಯರಿಗೆ ವಿರುದ್ಧವಾಗಿ ಬಂದ ಅಮ್ಮೋನಿಯರನ್ನೂ, ಮೋವಾಬ್ಯರನ್ನೂ, ಸೇಯೀರ್ ಪರ್ವತದವರನ್ನೂ ನಾಶಮಾಡುವುದಕ್ಕಾಗಿ ಹೊಂಚು ಹಾಕುವವರನ್ನು ಬರಮಾಡಿದನು.
2 ಪೂರ್ವಕಾಲವೃತ್ತಾ 20 : 23 (IRVKN)
ಅಮ್ಮೋನಿಯರೂ, ಮೋವಾಬ್ಯರೂ ಸೇಯೀರ್ ಪರ್ವತದವರ ಮೇಲೆ ಬಿದ್ದು ಅವರನ್ನು ಸಂಪೂರ್ಣವಾಗಿ ಸಂಹರಿಸಿಬಿಟ್ಟರು. ಅಮ್ಮೋನಿಯರನ್ನು ಮುಗಿಸಿಬಿಟ್ಟ ಮೇಲೆ ತಾವೇ ಒಬ್ಬರನ್ನೊಬ್ಬರು ಕೊಲ್ಲುವುದಕ್ಕೆ ಪ್ರಾರಂಭಿಸಿದರು.
2 ಪೂರ್ವಕಾಲವೃತ್ತಾ 20 : 24 (IRVKN)
ಯೆಹೂದ್ಯರು ಅರಣ್ಯದಲ್ಲಿನ ಬುರುಜಿಗೆ ಬಂದು ಆ ಸಮೂಹವಿದ್ದ ಕಡೆಗೆ ನೋಡಿದಾಗ, ನೆಲದ ಮೇಲೆ ಬಿದ್ದಿರುವ ಹೆಣಗಳ ಹೊರತಾಗಿ, ಜೀವದಿಂದುಳಿದವರು ಯಾರು ಕಾಣಿಸಲಿಲ್ಲ.
2 ಪೂರ್ವಕಾಲವೃತ್ತಾ 20 : 25 (IRVKN)
ಯೆಹೋಷಾಫಾಟನೂ ಅವನ ಜನರೂ ಸುಲಿಗೆ ಮಾಡುವುದಕ್ಕೋಸ್ಕರ ಅಲ್ಲಿಗೆ ಹೋದರು. ಅವರಿಗೆ ದ್ರವ್ಯ, ವಸ್ತ್ರ, ಶ್ರೇಷ್ಠಾಯುಧಗಳು ರಾಶಿರಾಶಿಯಾಗಿ ಸಿಕ್ಕಿದವು. ಅವರು ಹೊರಲಾರದಷ್ಟು ಸುಲಿಗೆಮಾಡಿದರು, ಕೊಳ್ಳೆಯು ಬಲು ಹೆಚ್ಚಾಗಿದ್ದುದರಿಂದ ಅವರು ಮೂರು ದಿನಗಳ ವರೆಗೂ ಕೂಡಿಸುತ್ತಿದ್ದರು.
2 ಪೂರ್ವಕಾಲವೃತ್ತಾ 20 : 26 (IRVKN)
ನಾಲ್ಕನೆಯ ದಿನದಲ್ಲಿ ಬೆರಾಕ ತಗ್ಗಿನಲ್ಲಿ ಕೂಡಿಬಂದರು. ಅವರು ಅಲ್ಲಿ ಯೆಹೋವನನ್ನು ಸ್ತುತಿಸಿದ್ದರಿಂದ ಆ ಸ್ಥಳಕ್ಕೆ ಇಂದಿನ ವರೆಗೂ ಬೆರಾಕ ತಗ್ಗು ಎಂಬ ಹೆಸರಿದೆ.
2 ಪೂರ್ವಕಾಲವೃತ್ತಾ 20 : 27 (IRVKN)
ಆ ನಂತರ ಯೆಹೂದ್ಯರೂ ಯೆರೂಸಲೇಮಿನವರೂ ಅವರ ಮುಂದೆ ಯೆಹೋಷಾಫಾಟನೂ ಯೆಹೋವನು ತಮಗೆ ಶತ್ರುಗಳ ಮೇಲೆ ಜಯವನ್ನು ಅನುಗ್ರಹಿಸಿದ್ದಾನೆಂದು ಜಯಘೋಷ ಮಾಡುತ್ತಾ ಯೆರೂಸಲೇಮಿಗೆ ಹಿಂತಿರುಗಿದರು.
2 ಪೂರ್ವಕಾಲವೃತ್ತಾ 20 : 28 (IRVKN)
ಅವರು ಸ್ವರಮಂಡಲ, ಕಿನ್ನರಿ, ತುತ್ತೂರಿ, ಇವುಗಳೊಡನೆ ಯೆರೂಸಲೇಮಿನಲ್ಲಿರುವ ಯೆಹೋವನ ಆಲಯಕ್ಕೆ ಬಂದರು.
2 ಪೂರ್ವಕಾಲವೃತ್ತಾ 20 : 29 (IRVKN)
ಯೆಹೋವನು ತಾನೇ ಇಸ್ರಾಯೇಲರ ಶತ್ರುಗಳೊಡನೆ ಯುದ್ಧಮಾಡಿದನೆಂಬ ಸುದ್ದಿಯು ಅನ್ಯದೇಶಗಳ ರಾಜ್ಯಗಳವರಿಗೆ ಮುಟ್ಟಿದಾಗ ಅವರೆಲ್ಲರೂ ಬಹುಭೀತರಾದರು.
2 ಪೂರ್ವಕಾಲವೃತ್ತಾ 20 : 30 (IRVKN)
ಹೀಗೆ ದೇವರ ಅನುಗ್ರಹದಿಂದ ಸುತ್ತಮುತ್ತಲಿನ ವೈರಿಗಳು ಭಯಭೀತರಾದರು. ಯೆಹೋಷಾಫಾಟನ ರಾಜ್ಯಕ್ಕೆ ಶತ್ರುಗಳ ಭಯತಪ್ಪಿ ಸಮಾಧಾನ ಉಂಟಾಯಿತು.
2 ಪೂರ್ವಕಾಲವೃತ್ತಾ 20 : 31 (IRVKN)
ಯೆಹೋಷಾಫಾಟನ ಅಂತ್ಯ ಯೆಹೂದ್ಯರ ಅರಸನಾದ ಯೆಹೋಷಾಫಾಟನು ಪಟ್ಟಕ್ಕೆ ಬಂದಾಗ ಮೂವತ್ತೈದು ವರ್ಷದವನಾಗಿದ್ದನು. ಇವನು ಯೆರೂಸಲೇಮಿನಲ್ಲಿ ಇಪ್ಪತ್ತೈದು ವರ್ಷ ಆಡಳಿತ ನಡೆಸಿದನು. ಶಿಲ್ಹಿಯ ಮಗಳಾದ ಅಜೂಬಳೆಂಬಾಕೆಯು ಅವನ ತಾಯಿ.
2 ಪೂರ್ವಕಾಲವೃತ್ತಾ 20 : 32 (IRVKN)
ಇವನು ತನ್ನ ತಂದೆಯಾದ ಆಸನ ಮಾರ್ಗದಲ್ಲಿ ನಡೆಯುತ್ತಾ ಅದನ್ನು ಮೀರದೆ ಯೆಹೋವನ ದೃಷ್ಟಿಯಲ್ಲಿ ಒಳ್ಳೆಯವನಾಗಿ ನಡೆದುಕೊಂಡನು.
2 ಪೂರ್ವಕಾಲವೃತ್ತಾ 20 : 33 (IRVKN)
ಅದರೂ ಪೂಜಾಸ್ಥಳಗಳನ್ನು ಹಾಳುಮಾಡಲಿಲ್ಲ. ಜನರು ತಮ್ಮ ಪೂರ್ವಿಕರ ದೇವರ ಮೇಲೆ ಮನಸ್ಸಿಟ್ಟಿರಲಿಲ್ಲ, ದೇವರ ಕಡೆಗೆ ತಿರುಗಿಕೊಳ್ಳಲೂ ಇಲ್ಲ.
2 ಪೂರ್ವಕಾಲವೃತ್ತಾ 20 : 34 (IRVKN)
ಯೆಹೋಷಾಫಾಟನ ಉಳಿದ ಪೂರ್ವೋತ್ತರ ಚರಿತ್ರೆಯು ಇಸ್ರಾಯೇಲ್ ರಾಜರ ಗ್ರಂಥದಲ್ಲಿ ಅಡಕವಾಗಿರುವ ಹನಾನೀಯ ಮಗನಾದ ಯೇಹುವಿನ ವೃತ್ತಾಂತದಲ್ಲಿ ಬರೆಯಲಾಗಿದೆ.
2 ಪೂರ್ವಕಾಲವೃತ್ತಾ 20 : 35 (IRVKN)
ಯೆಹೂದ್ಯರ ಅರಸನಾದ ಯೆಹೋಷಾಫಾಟನು ಇಸ್ರಾಯೇಲರ ಅರಸನೂ, ಬಹು ದುರಾಚಾರಿಯೂ ಆದ ಅಹಜ್ಯನೊಡನೆ ಒಡಬಂಡಿಕೆ ಮಾಡಿಕೊಂಡನು.
2 ಪೂರ್ವಕಾಲವೃತ್ತಾ 20 : 36 (IRVKN)
ಅವರು ತಾರ್ಷೀಷಿಗೆ ಹೋಗುವುದಕ್ಕಾಗಿ ಹಡುಗುಗಳನ್ನು ಕಟ್ಟಬೇಕೆಂದು ಒಡಬಂಡಿಕೆ ಮಾಡಿಕೊಂಡು ಅವುಗಳನ್ನು ಎಚ್ಯೋನ್ ಗೆಬೆರಿನಲ್ಲಿ ಕಟ್ಟಿಸಿದರು.
2 ಪೂರ್ವಕಾಲವೃತ್ತಾ 20 : 37 (IRVKN)
ಆಗ ಮಾರೇಷಾ ಊರಿನ ದೋದಾವಾಹುವಿನ ಮಗನಾದ ಎಲೀಯೆಜರನು ಯೆಹೋಷಾಫಾಟನಿಗೆ ವಿರುದ್ಧವಾಗಿ, “ನೀನು ಅಹಜ್ಯನೊಡನೆ ಒಡಬಂಡಿಕೆ ಮಾಡಿಕೊಂಡದ್ದರಿಂದ ಯೆಹೋವನು ನಿನ್ನ ಕೆಲಸವನ್ನು ಹಾಳು ಮಾಡುವನು” ಎಂದು ಪ್ರವಾದಿಸಿದನು. ಆ ಹಡುಗುಗಳು ಒಡೆದು ಹೋದುದರಿಂದ ತಾರ್ಷೀಷಿಗೆ ಪ್ರಯಾಣ ಮಾಡಲು ಸಾಧ್ಯವಾಗಲಿಲ್ಲ.

1 2 3 4 5 6 7 8 9 10 11 12 13 14 15 16 17 18 19 20 21 22 23 24 25 26 27 28 29 30 31 32 33 34 35 36 37