2 ಪೂರ್ವಕಾಲವೃತ್ತಾ 15 : 1 (IRVKN)
ಆಸನಿಂದ ಧಾರ್ಮಿಕ ಸುಧಾರಣೆ ಆಗ ಓದೇದನ ಮಗನಾದ ಅಜರ್ಯನ ಮೇಲೆ ದೇವರ ಆತ್ಮವು ಬಂದಿತು.
2 ಪೂರ್ವಕಾಲವೃತ್ತಾ 15 : 2 (IRVKN)
ಅವನು ಆಸನನ್ನು ಎದುರುಗೊಳ್ಳುವುದಕ್ಕೆ ಹೋಗಿ ಅವನಿಗೆ, “ಆಸನೇ, ಎಲ್ಲಾ ಯೆಹೂದ ಬೆನ್ಯಾಮೀನ ಕುಲಗಳವರೇ, ಕಿವಿಗೊಡಿರಿ, ನೀವು ಯೆಹೋವನನ್ನು ಹೊಂದಿಕೊಂಡಿರುವ ತನಕ ಆತನೂ ನಿಮ್ಮೊಂದಿಗಿರುವನು; ನೀವು ಆತನನ್ನು ಹುಡುಕಿದರೆ ಆತನು ನಿಮಗೆ ಸಿಕ್ಕುವನು; ಆತನನ್ನು ಬಿಟ್ಟರೆ ಆತನೂ ನಿಮ್ಮನ್ನು ಬಿಟ್ಟುಬಿಡುವನು.
2 ಪೂರ್ವಕಾಲವೃತ್ತಾ 15 : 3 (IRVKN)
ಆಗ ಇಸ್ರಾಯೇಲರಿಗೆ ಬಹುಕಾಲದಿಂದ ಸತ್ಯವಾದ ದೇವರೂ, ಬೋಧಿಸುವ ಯಾಜಕರೂ ಹಾಗೂ ಧರ್ಮಶಾಸ್ತ್ರವೂ ಇರಲಿಲ್ಲ.
2 ಪೂರ್ವಕಾಲವೃತ್ತಾ 15 : 4 (IRVKN)
ಅವರು ತಮ್ಮ ಇಕ್ಕಟ್ಟಿನಲ್ಲಿ ಇಸ್ರಾಯೇಲಿನ ದೇವರಾದ ಯೆಹೋವನ ಕಡೆಗೆ ತಿರುಗಿಕೊಂಡರು. ಅವರು ಆತನನ್ನು ಹುಡುಕಿದಾಗ ಆತನು ಅವರಿಗೆ ಸಿಕ್ಕಿದನು.
2 ಪೂರ್ವಕಾಲವೃತ್ತಾ 15 : 5 (IRVKN)
ಆ ಕಾಲದಲ್ಲಿ ಯಾರಿಗೂ ಸಮಾಧಾನವಾಗಿ ತಿರುಗಾಡುವುದಕ್ಕೆ ಸಾಧ್ಯವಾಗುತ್ತಾ ಇರಲಿಲ್ಲ; ದೇಶ ನಿವಾಸಿಗಳೆಲ್ಲರೂ ಕಳವಳಗೊಂಡಿದ್ದರು.
2 ಪೂರ್ವಕಾಲವೃತ್ತಾ 15 : 6 (IRVKN)
ಒಂದು ಜನಾಂಗವು ಇನ್ನೊಂದು ಜನಾಂಗವನ್ನೂ, ಒಂದು ಪಟ್ಟಣದವರು ಇನ್ನೊಂದು ಪಟ್ಟಣದವರನ್ನೂ ಹಾಳು ಮಾಡುತ್ತಿದ್ದರು. ದೇವರು ಎಲ್ಲಾ ತರಹ ಕಷ್ಟದಿಂದಲೂ ಅವರನ್ನು ತಳಮಳಗೊಳಿಸಿದ್ದನು.
2 ಪೂರ್ವಕಾಲವೃತ್ತಾ 15 : 7 (IRVKN)
ನೀವಾದರೋ ಸ್ಥಿರಚಿತ್ತರಾಗಿರಿ; ನಿಮ್ಮ ಕೈಗಳು ಜೋಲು ಬೀಳದಿರಲಿ. ನಿಮ್ಮ ಪ್ರಯತ್ನಕ್ಕೆ ತಕ್ಕ ಫಲ ಸಿಕ್ಕುವುದು” ಎಂದು ಹೇಳಿದನು.
2 ಪೂರ್ವಕಾಲವೃತ್ತಾ 15 : 8 (IRVKN)
ಆಸನು ಓದೇದನ ಮಗನಾದ ಅಜರ್ಯ ಪ್ರವಾದಿಯ ಈ ಮಾತುಗಳನ್ನು ಕೇಳಿದಾಗ ಧೈರ್ಯಗೊಂಡನು. ಯೆಹೂದ, ಬೆನ್ಯಾಮೀನ್ ಪ್ರಾಂತ್ಯಗಳಲ್ಲಿಯೂ ತಾನು ಸ್ವಾಧೀನಮಾಡಿಕೊಂಡ ಎಫ್ರಾಯೀಮ್ ಪರ್ವತ ಪ್ರದೇಶದ ಪಟ್ಟಣಗಳಲ್ಲಿಯೂ ಇದ್ದ ಅಸಹ್ಯ ಪ್ರತಿಮೆಗಳನ್ನು ತೆಗೆದು ಹಾಕಿಸಿದನು. ಯೆಹೋವನ ಆಲಯಕ್ಕೆ ಸೇರಿದ ಮಂಟಪದ ಎದುರಿಗಿದ್ದ ಯೆಹೋವನ ಯಜ್ಞವೇದಿಯನ್ನು ಜೀರ್ಣೋದ್ಧಾರ ಮಾಡಿಸಿದನು.
2 ಪೂರ್ವಕಾಲವೃತ್ತಾ 15 : 9 (IRVKN)
ಆ ಮೇಲೆ ಆಸನು ಎಲ್ಲಾ ಯೆಹೂದ ಬೆನ್ಯಾಮೀನ ಕುಲಗಳವರನ್ನೂ ತನ್ನ ದೇವರಾದ ಯೆಹೋವನು ತನ್ನ ಸಂಗಡ ಇರುವುದನ್ನು ನೋಡಿ ಇಸ್ರಾಯೇಲರೊಡನೆ ತನ್ನೊಡನೆ ಗುಂಪುಗುಂಪಾಗಿ ಕೂಡಿಕೊಂಡು ಯೆಹೂದ ದೇಶದಲ್ಲಿ ನೆಲಸಿದ್ದ ಎಫ್ರಾಯೀಮ್, ಮನಸ್ಸೆ ಹಾಗೂ ಸಿಮೆಯೋನ್ ಕುಲಗಳವರನ್ನೂ ಕರೆಸಿಕೊಂಡನು.
2 ಪೂರ್ವಕಾಲವೃತ್ತಾ 15 : 10 (IRVKN)
ಅವರು ಆಸನ ಆಳ್ವಿಕೆಯ ಹದಿನೈದನೆಯ ವರ್ಷದ ಮೂರನೆಯ ತಿಂಗಳಿನಲ್ಲಿ ಯೆರೂಸಲೇಮಿಗೆ ಒಟ್ಟಾಗಿ ಕೂಡಿ ಬಂದರು.
2 ಪೂರ್ವಕಾಲವೃತ್ತಾ 15 : 11 (IRVKN)
ಯೆಹೋವನಿಗಾಗಿ ಆ ದಿನ ತಾವು ತಂದ ಕೊಳ್ಳೆಯಿಂದ ಏಳು ನೂರು ಹೋರಿಗಳನ್ನೂ, ಏಳು ಸಾವಿರ ಕುರಿಗಳನ್ನೂ ಯಜ್ಞಮಾಡಿದರು.
2 ಪೂರ್ವಕಾಲವೃತ್ತಾ 15 : 12 (IRVKN)
ಅವರು ತಾವು ಪೂರ್ಣ ಹೃದಯದಿಂದಲೂ, ಪೂರ್ಣಪ್ರಾಣದಿಂದಲೂ ತಮ್ಮ ಪೂರ್ವಿಕರ ದೇವರಾದ ಯೆಹೋವನ ಭಕ್ತರಾಗಿರುವೆವೆಂದೂ ಒಡಂಬಡಿಕೆ ಮಾಡಿದರು.
2 ಪೂರ್ವಕಾಲವೃತ್ತಾ 15 : 13 (IRVKN)
ಇದಲ್ಲದೆ, ತಮ್ಮಲ್ಲಿ ಇಸ್ರಾಯೇಲ್ ದೇವರಾದ ಯೆಹೋವನ ಭಕ್ತಿಯನ್ನು ಬಿಟ್ಟವರು ಚಿಕ್ಕವರಾಗಲಿ, ದೊಡ್ಡವರಾಗಲಿ, ಗಂಡಸರಾಗಲಿ ಹೆಂಗಸರಾಗಲಿ, ಅವರೆಲ್ಲರನ್ನೂ ಕೊಲ್ಲಲಾಗುವುದು ಎಂದು
2 ಪೂರ್ವಕಾಲವೃತ್ತಾ 15 : 14 (IRVKN)
ತುತ್ತೂರಿ ಕೊಂಬುಗಳನ್ನೂ ಊದಿಸಿ ದೊಡ್ಡ ಅರ್ಭಟದೊಡನೆ ಯೆಹೋವನಿಗೆ ಪ್ರಮಾಣಮಾಡಿದರು.
2 ಪೂರ್ವಕಾಲವೃತ್ತಾ 15 : 15 (IRVKN)
ಈ ಪ್ರಮಾಣದ ನಿಮಿತ್ತವಾಗಿ ಯೆಹೂದ್ಯರೆಲ್ಲರಿಗೂ ಸಂತೋಷವಾಯಿತು. ಅವರು ಪೂರ್ಣಮನಸ್ಸಿನಿಂದ ಪ್ರಮಾಣಮಾಡಿ ತುಂಬಾ ಸಂತೋಷದಿಂದ ಯೆಹೋವನನ್ನು ಬಯಸಿದ ಕಾರಣ ಆತನು ಅವರಿಗೆ ಪ್ರಸನ್ನನಾಗಿ ಎಲ್ಲಾ ಕಡೆಗಳಿಂದಲೂ ಅವರಿಗೆ ಸಮಾಧಾನವನ್ನು ಅನುಗ್ರಹಿಸಿದನು.
2 ಪೂರ್ವಕಾಲವೃತ್ತಾ 15 : 16 (IRVKN)
ಅರಸನಾದ ಆಸನ ಅಜ್ಜಿಯಾದ ಮಾಕಳು ಅಶೇರ ದೇವತೆಯ ಒಂದು ಅಸಹ್ಯ ಮೂರ್ತಿಯನ್ನು ಮಾಡಿಸಿಕೊಂಡಿದ್ದಳು. ಆದುದರಿಂದ ಅವನು ಆಕೆಯನ್ನು ರಾಜಮಾತೆಯ ಸ್ಥಾನದಿಂದ ತೆಗೆದುಹಾಕಿದನು. ಅಲ್ಲದೆ ಆ ಮೂರ್ತಿಯನ್ನು ತೆಗೆದು ಕಿದ್ರೋನ್ ಹಳ್ಳದ ಬಳಿಯಲ್ಲಿ ಚೂರು ಚೂರು ಮಾಡಿ ಸುಟ್ಟುಹಾಕಿಸಿದನು.
2 ಪೂರ್ವಕಾಲವೃತ್ತಾ 15 : 17 (IRVKN)
ಅವನು ಇಸ್ರಾಯೇಲ್ ಪ್ರಾಂತ್ಯದಲ್ಲಿದ್ದ ಪೂಜಾಸ್ಥಳಗಳನ್ನು ಹಾಳು ಮಾಡದೆ ಇದ್ದರೂ ಆಸನು ತನ್ನ ಜೀವಮಾನದಲ್ಲೆಲ್ಲಾ ಯೆಹೋವನಿಗೆ ಯಥಾರ್ಥಚಿತ್ತನಾಗಿ ನಡೆದುಕೊಂಡನು.
2 ಪೂರ್ವಕಾಲವೃತ್ತಾ 15 : 18 (IRVKN)
ತನ್ನ ತಂದೆಯೂ ತಾನೂ ದೇವರಿಗೆ ಪ್ರತಿಷ್ಠಿಸಿದ್ದ ಬೆಳ್ಳಿಬಂಗಾರವನ್ನೂ, ಪಾತ್ರೆಗಳನ್ನೂ ದೇವಾಲಯದಲ್ಲಿ ತಂದಿಟ್ಟನು.
2 ಪೂರ್ವಕಾಲವೃತ್ತಾ 15 : 19 (IRVKN)
ಆಸನ ಆಳ್ವಿಕೆಯ ಮೂವತ್ತೈದನೆಯ ವರ್ಷದವರೆಗೂ ಯುದ್ಧವಿರಲಿಲ್ಲ.

1 2 3 4 5 6 7 8 9 10 11 12 13 14 15 16 17 18 19