1 ಸಮುವೇಲನು 23 : 1 (IRVKN)
ದಾವೀದನು ಕೆಯೀಲಾ ಊರಿನಲ್ಲಿ ವಾಸಮಾಡಿದ್ದು ಫಿಲಿಷ್ಟಿಯರು ಕೆಯೀಲಕ್ಕೆ ಮುತ್ತಿಗೆ ಹಾಕಿ ಅಲ್ಲಿನ ಕಣಗಳನ್ನು ಸೂರೆಮಾಡುತ್ತಿದ್ದಾರೆ ಎಂಬ ವರ್ತಮಾನವು ದಾವೀದನಿಗೆ ಮುಟ್ಟಲು
1 ಸಮುವೇಲನು 23 : 2 (IRVKN)
ಅವನು, “ನಾನು ಹೋಗಿ ಆ ಫಿಲಿಷ್ಟಿಯರನ್ನು ಹೊಡೆಯಬಹುದೋ” ಎಂದು ಯೆಹೋವನನ್ನು ಕೇಳಿದನು. ಆತನು ಅವನಿಗೆ, “ಹೋಗಿ ಫಿಲಿಷ್ಟಿಯರನ್ನು ಹೊಡೆದು ಕೆಯೀಲಾ ಊರನ್ನು ರಕ್ಷಿಸು” ಎಂದು ಉತ್ತರ ಕೊಟ್ಟನು.
1 ಸಮುವೇಲನು 23 : 3 (IRVKN)
ಆದರೆ ದಾವೀದನ ಸೈನಿಕರು ಅವನಿಗೆ, “ನಮಗೆ ಯೆಹೂದ ಸೀಮೆಯಲ್ಲಿಯೇ ಇಷ್ಟು ಭಯವಿರುವಾಗ ಫಿಲಿಷ್ಟಿಯ ಸೈನ್ಯದೊಡನೆ ಯುದ್ಧಮಾಡುವುದಕ್ಕೆ ಕೆಯೀಲಕ್ಕೆ ಹೋದರೆ ಅಲ್ಲಿ ಇನ್ನೂ ಹೆಚ್ಚು ಭಯ ಉಂಟಾಗುತ್ತದೆ” ಅಂದರು.
1 ಸಮುವೇಲನು 23 : 4 (IRVKN)
ಆದುದರಿಂದ ಅವನು ಪುನಃ ಯೆಹೋವನನ್ನು ಕೇಳಿದನು. ಆತನು, “ನೀನೆದ್ದು ಕೆಯೀಲಕ್ಕೆ ಹೋಗು. ನಾನು ಫಿಲಿಷ್ಟಿಯರನ್ನು ನಿನ್ನ ಕೈಗೆ ಒಪ್ಪಿಸಿಕೊಡುವೆನು” ಎಂದು ಉತ್ತರಕೊಟ್ಟನು.
1 ಸಮುವೇಲನು 23 : 5 (IRVKN)
ಆಗ ದಾವೀದನು ತನ್ನ ಜನರೊಡನೆ ಕೆಯೀಲಕ್ಕೆ ಹೋಗಿ, ಫಿಲಿಷ್ಟಿಯರೊಡನೆ ಯುದ್ಧಮಾಡಿ, ಅವರನ್ನು ಸಂಪೂರ್ಣವಾಗಿ ಸೋಲಿಸಿ, ಅವರ ಪಶುಗಳನ್ನು ತೆಗೆದುಕೊಂಡು ಕೆಯೀಲದವರನ್ನು ರಕ್ಷಿಸಿದನು.
1 ಸಮುವೇಲನು 23 : 6 (IRVKN)
ದಾವೀದನ ಬಳಿಗೆ ಓಡಿಬಂದಿದ್ದ ಅಹೀಮೆಲೆಕನ ಮಗನಾದ ಎಬ್ಯಾತಾರನು ಕೆಯೀಲಕ್ಕೆ ಬರುವಾಗ ಏಫೋದನ್ನು ತಂದಿದ್ದನು,
1 ಸಮುವೇಲನು 23 : 7 (IRVKN)
ದಾವೀದನು ಕೆಯೀಲದಲ್ಲಿದ್ದಾನೆಂಬ ವರ್ತಮಾನವು ಸೌಲನಿಗೆ ಮುಟ್ಟಿತು. ಆಗ ಅವನು, ದೇವರು ದಾವೀದನನ್ನು ನನ್ನ ಕೈಗೆ ಒಪ್ಪಿಸಿದನು. ಅವನು ಅಗುಳಿ ಬಾಗಿಲುಗಳಿಂದ ಭದ್ರವಾಗಿರುವ ಪಟ್ಟಣವನ್ನು ಪ್ರವೇಶಿಸಿದ್ದಾನಲ್ಲಾ ಅವನು ಅಲ್ಲಿಂದ ತಪ್ಪಿಸಿಕೊಳ್ಳಲಾರನು ಅಂದುಕೊಂಡು,
1 ಸಮುವೇಲನು 23 : 8 (IRVKN)
ಕೆಯೀಲದಲ್ಲಿದ್ದ ದಾವೀದನನ್ನೂ, ಅವನ ಜನರನ್ನೂ ಹಿಡಿಯಲು ಹೋಗುವುದಕ್ಕೋಸ್ಕರ ಸೈನ್ಯವನ್ನು ಕೂಡಿಸಿದನು.
1 ಸಮುವೇಲನು 23 : 9 (IRVKN)
ಸೌಲನು ತನಗೆ ಕೇಡುಮಾಡಬೇಕೆಂದಿದ್ದಾನೆ ಎಂಬುದನ್ನು ದಾವೀದನು ತಿಳಿದು ಯಾಜಕನಾದ ಎಬ್ಯಾತಾರನಿಗೆ, “ಏಫೋದನ್ನು ಇಲ್ಲಿಗೆ ತೆಗೆದುಕೊಂಡು ಬಾ” ಎಂದನು.
1 ಸಮುವೇಲನು 23 : 10 (IRVKN)
ಆಗ ದಾವೀದನು, “ಇಸ್ರಾಯೇಲ್ಯರ ದೇವರಾದ ಯೆಹೋವನೇ ಸೌಲನು ಕೆಯೀಲಕ್ಕೆ ಬಂದು ನನ್ನ ನಿಮಿತ್ತವಾಗಿ ಪಟ್ಟಣವನ್ನು ಹಾಳು ಮಾಡಬೇಕೆಂದಿದ್ದಾನೆಂದು ನಿನ್ನ ಸೇವಕನಾದ ನನಗೆ ಸುದ್ದಿ ಬಂದಿತು.
1 ಸಮುವೇಲನು 23 : 11 (IRVKN)
ನಾನು ಕೇಳಿದ ಸುದ್ದಿಯಂತೆ ಅವನು ನಿಜವಾಗಿ ಬರುವನೋ ಕೆಯೀಲಾ ಊರಿನವರು ನನ್ನನ್ನು ಅವನ ಕೈಗೆ ಒಪ್ಪಿಸುವರೋ? ಇಸ್ರಾಯೇಲರ ದೇವರಾದ ಯೆಹೋವನೇ ಈ ವಿಷಯದಲ್ಲಿ ಉತ್ತರ ದಯಪಾಲಿಸು” ಎಂದು ಪ್ರಾರ್ಥಿಸಲು ಅವನು ಬರುವನೆಂಬುದಾಗಿ ಯೆಹೋವನಿಂದ ಉತ್ತರ ಸಿಕ್ಕಿತು.
1 ಸಮುವೇಲನು 23 : 12 (IRVKN)
ದಾವೀದನು ತಿರುಗಿ ಯೆಹೋವನನ್ನು, “ಕೆಯೀಲದವರು ನನ್ನನ್ನೂ, ನನ್ನ ಜನರನ್ನೂ ಸೌಲನ ಕೈಗೆ ಒಪ್ಪಿಸುವರೋ” ಎಂದು ಕೇಳಿದಾಗ ಆತನು, “ಒಪ್ಪಿಸಿಕೊಡುವರು” ಎಂದು ಉತ್ತರಕೊಟ್ಟನು.
1 ಸಮುವೇಲನು 23 : 13 (IRVKN)
ಆಗ ದಾವೀದನು ತನ್ನ ಸಂಗಡ ಇದ್ದ [* 1 ಸಮು 27: 2 ]ಆರುನೂರು ಜನರ ಸಹಿತವಾಗಿ ಕೆಯೀಲಾ ಊರನ್ನು ಬಿಟ್ಟು ಮನಬಂದ ಕಡೆಗೆ ಅಲೆದಾಡಿದರು. ದಾವೀದನು ಕೆಯೀಲದಿಂದ ತಪ್ಪಿಸಿಕೊಂಡನೆಂದು ಸೌಲನಿಗೆ ಗೊತ್ತಾಗಲು ಅವನು ಹೊರಡುವುದನ್ನು ನಿಲ್ಲಿಸಿಬಿಟ್ಟನು.
1 ಸಮುವೇಲನು 23 : 14 (IRVKN)
ದಾವೀದನು ಜೀಫ್ ಅರಣ್ಯದಲ್ಲಿ ಇದ್ದದ್ದು ಅನಂತರ ದಾವೀದನು ಅರಣ್ಯದಲ್ಲಿರುವ ಆಯಾ ಆಶ್ರಯಗಿರಿಗಳಲ್ಲಿ ಇರುತ್ತಿದ್ದನು. ಅನಂತರ [† ಯೆಹೋ. 15:24; ಕೀರ್ತ 63 ]ಜೀಫ್ ಅರಣ್ಯದ ಪರ್ವತಪ್ರಾಂತ್ಯಕ್ಕೆ ಬಂದು ಅಲ್ಲಿ ವಾಸಮಾಡಿದನು. ಸೌಲನು ಪ್ರತಿದಿನ ಅವನನ್ನು ಹುಡುಕುತ್ತಿದ್ದರೂ ದೇವರು ಅವನನ್ನು ಸೌಲನ ಕೈಗೆ ಒಪ್ಪಿಸಲಿಲ್ಲ.
1 ಸಮುವೇಲನು 23 : 15 (IRVKN)
ಸೌಲನು ತನ್ನನ್ನು ಕೊಲ್ಲಲು ಹೊರಟಿದ್ದಾನೆಂದು ದಾವೀದನು ತಿಳಿದು ಜೀಫ್ ಅರಣ್ಯದ ಹೋರೆಷದಲ್ಲಿ ಅಡಗಿಕೊಂಡಿದ್ದನು.
1 ಸಮುವೇಲನು 23 : 16 (IRVKN)
ಆಗ ಸೌಲನ ಮಗನಾದ ಯೋನಾತಾನನು ಅಲ್ಲಿಗೆ ಹೋಗಿ,
1 ಸಮುವೇಲನು 23 : 17 (IRVKN)
ದಾವೀದನಿಗೆ, “ಭಯಪಡಬೇಡ; ನೀನು ನನ್ನ ತಂದೆಯಾದ ಸೌಲನ ಕೈಗೆ ಸಿಕ್ಕಿಬೀಳುವುದಿಲ್ಲ. ನೀನು ಇಸ್ರಾಯೇಲ್ಯರ ಅರಸನಾಗುವಿ; ನಾನು ನಿನಗೆ ಎರಡನೆಯವನಾಗಿರುವೆನು. ಹೀಗಾಗುವುದೆಂದು ನನ್ನ ತಂದೆಯಾದ ಸೌಲನೂ ತಿಳಿದುಕೊಂಡಿದ್ದಾನೆ” ಎಂದು ಹೇಳಿ, ದೇವರಲ್ಲಿ ಅವನನ್ನು ಬಲಪಡಿಸಿದನು.
1 ಸಮುವೇಲನು 23 : 18 (IRVKN)
ಅವರಿಬ್ಬರೂ ಯೆಹೋವನ ಸನ್ನಿಧಿಯಲ್ಲಿ ಒಡಂಬಡಿಕೆ ಮಾಡಿಕೊಂಡರು. ತರುವಾಯ ಯೋನಾತಾನನು ತನ್ನ ಮನೆಗೆ ಹೋದನು. ದಾವೀದನು ಹೋರೆಷದಲ್ಲಿಯೇ ಇದ್ದನು.
1 ಸಮುವೇಲನು 23 : 19 (IRVKN)
ಜೀಫ್ಯರು ಗಿಬೆಯಲ್ಲಿದ್ದ ಸೌಲನ ಬಳಿಗೆ ಬಂದು ಅವನಿಗೆ, “ಒಡೆಯಾ, ಕೇಳು ದಾವೀದನು ನಮ್ಮ ಪ್ರಾಂತ್ಯಕ್ಕೆ ಸೇರಿದ ಹೋರೆಷದ ಗಿರಿಗಳಲ್ಲಿ, ಅಂದರೆ [‡ ಅರಣ್ಯ 21: 20 ]ಯೆಷಿಮೋನಿನ ದಕ್ಷಿಣದಲ್ಲಿರುವ ಹಕೀಲಾ ಬೆಟ್ಟದಲ್ಲಿ ಅಡಗಿಕೊಂಡಿದ್ದಾನೆ.
1 ಸಮುವೇಲನು 23 : 20 (IRVKN)
ಅರಸನು ತನ್ನ ಇಚ್ಛೆಯಂತೆ ನಮ್ಮ ಜೊತೆಯಲ್ಲಿ ಬರೋಣವಾಗಲಿ. ಅವನನ್ನು ಅರಸನ ಕೈಗೆ ಒಪ್ಪಿಸುವ ಕೆಲಸ ನಮ್ಮದು” ಎಂದು ಹೇಳಿದರು.
1 ಸಮುವೇಲನು 23 : 21 (IRVKN)
ಆಗ ಸೌಲನು ಅವರಿಗೆ, “ನೀವು ನನ್ನ ಮೇಲೆ ಕನಿಕರ ತೋರಿಸಿ ಸಹಾಯ ಮಾಡುತ್ತಿರುವುದರಿಂದ ಯೆಹೋವನ ಆಶೀರ್ವಾದವು ನಿಮ್ಮ ಮೇಲಿರಲಿ.
1 ಸಮುವೇಲನು 23 : 22 (IRVKN)
ನೀವು ದಯವಿಟ್ಟು ಹೋಗಿ ಅವನು ಅಡಗಿಕೊಂಡಿರುವ ಸ್ಥಳವನ್ನು, ಅಲ್ಲಿ ಅವನನ್ನು ಕಂಡವರನ್ನೂ ಸೂಕ್ಷ್ಮವಾಗಿ ವಿಚಾರಿಸಿ, ತಿಳಿದುಕೊಳ್ಳಿರಿ. ಅವನು ಬಹು ಯುಕ್ತಿವಂತನೆಂದು ಕೇಳಿದ್ದೇನೆ.
1 ಸಮುವೇಲನು 23 : 23 (IRVKN)
ಆದುದರಿಂದ ಅವನು ಅಡಗಿಕೊಳ್ಳತಕ್ಕ ಎಲ್ಲಾ ಗುಪ್ತಸ್ಥಳಗಳನ್ನು ಗೊತ್ತುಮಾಡಿಕೊಂಡು ಸರಿಯಾದ ವರ್ತಮಾನವನ್ನು ನನಗೆ ತಲುಪಿಸಿರಿ. ನಾನು ನಿಮ್ಮ ಸಂಗಡ ಬರುವೆನು. ಅವನು ದೇಶದಲ್ಲಿರುವುದಾದರೆ ಎಲ್ಲಾ ಯೆಹೂದ ಪ್ರಜೆಗಳ ಮಧ್ಯದಲ್ಲಾಗಲಿ ಹುಡುಕಿ ಅವನನ್ನು ಕಂಡುಹಿಡಿಯುವೆನು” ಅಂದನು.
1 ಸಮುವೇಲನು 23 : 24 (IRVKN)
ಅವರು ಹೊರಟು ಸೌಲನ ಮುಂದಾಗಿ ಜೀಫಿಗೆ ಬಂದರು. ದಾವೀದನೂ ಅವನ ಜನರೂ ಮಾವೋನ ಅರಣ್ಯದ ದಕ್ಷಿಣ ದಿಕ್ಕಿನಲ್ಲಿರುವ [§ ಧರ್ಮೋ 1: 1 ]ಅರಾಬ್ ಎಂಬ ತಗ್ಗಾದ ಪ್ರದೇಶದಲ್ಲಿದ್ದನು.
1 ಸಮುವೇಲನು 23 : 25 (IRVKN)
ಸೌಲನು ತನ್ನ ಜನರೊಡನೆ ದಾವೀದನನ್ನು ಹಿಡಿಯುವುದಕ್ಕೆ ಬಂದನು. ಈ ವರ್ತಮಾನವು ದಾವೀದನಿಗೆ ತಲುಪಲು ಅವನು ಮಾವೋನಿನಲ್ಲಿರುವ ಒಂದು ಕಡಿದಾದ ಬೆಟ್ಟಕ್ಕೆ ಹೋಗಿ ಅಡಗಿಕೊಂಡನು. ಸೌಲನು ಇದನ್ನು ಕೇಳಿ ಮಾವೋನ ಅರಣ್ಯಕ್ಕೆ ಬಂದು ಆ ಬೆಟ್ಟದ ಒಂದು ಕಡೆಯಲ್ಲಿ ಹೋಗುತ್ತಿದ್ದನು.
1 ಸಮುವೇಲನು 23 : 26 (IRVKN)
ಅದರ ಇನ್ನೊಂದು ಕಡೆಯಲ್ಲಿ ದಾವೀದನೂ ಅವನ ಜನರೂ ಇದ್ದರು. ದಾವೀದನೂ ಅವನ ಜನರೂ ತಪ್ಪಿಸಿಕೊಳ್ಳುವುದಕ್ಕೆ ತ್ವರೆಪಡುವಷ್ಟರಲ್ಲಿ ಸೌಲನೂ, ಅವನ ಜನರೂ ಬಂದು ಅವರನ್ನು ಮುತ್ತಿಗೆ ಹಾಕುವುದಕ್ಕಿದ್ದರು.
1 ಸಮುವೇಲನು 23 : 27 (IRVKN)
ಆಗಲೇ ಒಬ್ಬ ದೂತನು ಸೌಲನ ಬಳಿಗೆ ಬಂದು ಅವನಿಗೆ, “ಬೇಗ ಬಾ, ಫಿಲಿಷ್ಟಿಯರು ದೇಶದೊಳಗೆ ನುಗ್ಗಿದ್ದಾರೆ” ಎಂದು ತಿಳಿಸಿದನು.
1 ಸಮುವೇಲನು 23 : 28 (IRVKN)
ಅವನು ದಾವೀದನನ್ನು ಹಿಡಿಯುವ ಕೆಲಸವನ್ನು ಬಿಟ್ಟು ಫಿಲಿಷ್ಟಿಯರ ವಿರುದ್ಧ ಯುದ್ಧಮಾಡಲು ಹೊರಟನು. ಆದುದರಿಂದ ಆ ಬೆಟ್ಟಕ್ಕೆ “ಮಕ್ಹೆಲೋಕೆತ್” ಎಂದರೆ “ಪಾರಾದ ಬಂಡೆ” ಎಂದು ಹೆಸರಾಯಿತು.
1 ಸಮುವೇಲನು 23 : 29 (IRVKN)
ದಾವೀದನು ಅಲ್ಲಿಂದ ಗಟ್ಟಾಹತ್ತಿ ಹೋಗಿ [* 2 ಪೂರ್ವ 20:2; ಯೆಹೆ. 47: 10 ]ಏಂಗೆದಿಯ ಗಿರಿಗಳಲ್ಲಿ ವಾಸಿಸಿದನು.
❮
❯