1 ಸಮುವೇಲನು 15 : 1 (IRVKN)
ಅಮಾಲೇಕ್ಯರೊಡನೆ ನಡೆದ ಯುದ್ಧ, ಸೌಲನ ಅವಿಧೇಯತೆ ಸಮುವೇಲನು ಸೌಲನಿಗೆ, “ಯೆಹೋವನು ನಿನ್ನನ್ನು ತನ್ನ ಪ್ರಜೆಗಳಾದ ಇಸ್ರಾಯೇಲರ ಮೇಲೆ ಅರಸನನ್ನಾಗಿ ಅಭಿಷೇಕಿಸುವುದಕ್ಕೋಸ್ಕರ ನನ್ನನ್ನೇ ಕಳುಹಿಸಿದನಲ್ಲಾ; ಆತನು ಈಗ ಹೇಳುವುದನ್ನು ಕೇಳು.
1 ಸಮುವೇಲನು 15 : 2 (IRVKN)
ಸೇನಾಧೀಶ್ವರನಾದ ಯೆಹೋವನು ನಿನಗೆ, ‘ಇಸ್ರಾಯೇಲರು ಐಗುಪ್ತದಿಂದ ಬರುತ್ತಿರುವಾಗ ದಾರಿಯಲ್ಲಿ ಅಮಾಲೇಕ್ಯರು ಅವರಿಗೆ ವಿರೋಧವಾಗಿ ನಿಂತು ತೊಂದರೆಪಡಿಸಿದ್ದನ್ನು ನೆನಪುಮಾಡಿಕೊಂಡು ನಾನು ಅವರಿಗೆ ಮುಯ್ಯಿತೀರಿಸುವೆನು.
1 ಸಮುವೇಲನು 15 : 3 (IRVKN)
ಈಗ ನೀನು ಹೋಗಿ ಅವರನ್ನು ಸೋಲಿಸಿ [* ಯಾಜ 27:28, 29 ]ಅವರಿಗಿರುವುದನ್ನೆಲ್ಲಾ ಸಂಪೂರ್ಣವಾಗಿ ಹಾಳುಮಾಡು. ಗಂಡಸರನ್ನೂ, ಹೆಂಗಸರನ್ನೂ, ಮಕ್ಕಳನ್ನೂ, ಶಿಶುಗಳನ್ನೂ, ಎತ್ತು, ಕುರಿ, ಕತ್ತೆ, ಒಂಟೆ, ಇವುಗಳನ್ನೂ ಕನಿಕರವಿಲ್ಲದೆ ಕೊಂದುಹಾಕು ಎಂದು ಹೇಳುತ್ತಾನೆ’ ” ಅಂದನು.
1 ಸಮುವೇಲನು 15 : 4 (IRVKN)
ಸೌಲನು ತೆಲಾಯೀಮಿನಲ್ಲಿ ಸೈನ್ಯವನ್ನು ಕೂಡಿಸಿ ಲೆಕ್ಕಿಸಲು ಎರಡು ಲಕ್ಷ ಕಾಲಾಳುಗಳು ಇದ್ದರು; ಯೆಹೂದ್ಯರು ಹತ್ತು ಸಾವಿರ ಜನರು ಇದ್ದರು.
1 ಸಮುವೇಲನು 15 : 5 (IRVKN)
ಅವನು ಇವರೊಡನೆ ಅಮಾಲೇಕ್ಯರ ರಾಜಧಾನಿಯ ಬಳಿಗೆ ಹೋಗಿ ಅಲ್ಲಿನ ಒಂದು ತಗ್ಗಿನಲ್ಲಿ ಹೊಂಚುಹಾಕುತ್ತಿದ್ದನು.
1 ಸಮುವೇಲನು 15 : 6 (IRVKN)
ಆದರೆ ಅವನು [† ನ್ಯಾಯ 1: 16 ]ಕೇನ್ಯರಿಗೆ, “ನೀವು ಅಮಾಲೇಕ್ಯರನ್ನು ಬಿಟ್ಟುಹೋಗಿರಿ; ಇಲ್ಲವಾದರೆ ನೀವೂ ಅವರೊಡನೆ ನಾಶವಾದೀರಿ. ಇಸ್ರಾಯೇಲರು ಐಗುಪ್ತದಿಂದ ಬರುತ್ತಿದ್ದಾಗ ನೀವು ಅವರಿಗೆ ದಯೆತೋರಿಸಿದಿರಲ್ಲಾ” ಎಂದು ಹೇಳಿಕಳುಹಿಸಿದನು. ಅದರಂತೆಯೇ ಅವರು ಅಮಾಲೇಕ್ಯರನ್ನು ಬಿಟ್ಟುಹೋದರು.
1 ಸಮುವೇಲನು 15 : 7 (IRVKN)
ಆಗ ಸೌಲನು ಅಮಾಲೇಕ್ಯರನ್ನು [‡ ಆದಿ 2: 11 ]ಹವೀಲಾ ಪ್ರಾಂತ್ಯದಿಂದ ಐಗುಪ್ತದ ಪೂರ್ವದಿಕ್ಕಿನಲ್ಲಿರುವ § ವಿಮೋ 15: 22. ಶೂರಿನವರೆಗೆ ಅವರನ್ನು ಸಂಹರಿಸುತ್ತಾ ಹೋದನು.
1 ಸಮುವೇಲನು 15 : 8 (IRVKN)
ಅವರ ಅರಸನಾದ ಅಗಾಗನನ್ನು ಜೀವಂತವಾಗಿ ಹಿಡಿದು, ಎಲ್ಲಾ ಜನರನ್ನು ಕತ್ತಿಯಿಂದ ಸಂಹರಿಸಿದನು.
1 ಸಮುವೇಲನು 15 : 9 (IRVKN)
ಸೌಲನೂ ಮತ್ತು ಇಸ್ರಾಯೇಲರೂ ಅಗಾಗನನ್ನೂ, ಉತ್ತಮವಾದ ಕುರಿದನಗಳನ್ನೂ, ಕುರಿಮರಿಗಳನ್ನೂ, ಕೊಬ್ಬಿದ ಪಶುಗಳನ್ನೂ, ಶ್ರೇಷ್ಠವಾದ ಎಲ್ಲಾ ಪದಾರ್ಥಗಳನ್ನೂ ನಾಶಮಾಡಲು ಮನಸ್ಸಿಲ್ಲದೆ ಉಳಿಸಿ ಪ್ರಯೋಜನವಿಲ್ಲದಂಥ ಹೀನವಾದವುಗಳನ್ನೆಲ್ಲಾ ನಾಶಮಾಡಿಬಿಟ್ಟರು.
1 ಸಮುವೇಲನು 15 : 10 (IRVKN)
ಯೆಹೋವನು ಸೌಲನನ್ನು ತಳ್ಳಿಬಿಟ್ಟದ್ದು ಯೆಹೋವನು ಸಮುವೇಲನಿಗೆ, “ಸೌಲನನ್ನು ಅರಸನನ್ನಾಗಿ ಮಾಡಿದ್ದಕ್ಕೆ ಈಗ ವಿಷಾದಿಸುತ್ತೇನೆ. ಅವನು ನನ್ನನ್ನು ಬಿಟ್ಟುಬಿಟ್ಟನು; ನನ್ನ ಆಜ್ಞೆಗಳನ್ನು ನೆರವೇರಿಸಲಿಲ್ಲ” ಎಂದು ಹೇಳಿದನು.
1 ಸಮುವೇಲನು 15 : 11 (IRVKN)
ಸಮುವೇಲನು ಕೋಪಗೊಂಡು ರಾತ್ರಿಯೆಲ್ಲಾ ಯೆಹೋವನಿಗೆ ಮೊರೆಯಿಟ್ಟನು.
1 ಸಮುವೇಲನು 15 : 12 (IRVKN)
ಸಮುವೇಲನು ಬೆಳಿಗ್ಗೆ ಎದ್ದು ಸೌಲನನ್ನು ನೋಡುವುದಕ್ಕೆ ಹೊರಟಾಗ ಅವನಿಗೆ, “ಸೌಲನು ಕರ್ಮೆಲಿಗೆ ಹೋಗಿ ಅಲ್ಲಿ ತನಗೋಸ್ಕರ ಒಂದು ಜ್ಞಾಪಕಸ್ತಂಭವನ್ನು ನಿಲ್ಲಿಸಿ, ಅಲ್ಲಿಂದ ಗಟ್ಟಾ ಇಳಿದು ಗಿಲ್ಗಾಲಿಗೆ ಹೋದನು” ಎಂಬ ವರ್ತಮಾನವು ಬಂದದ್ದರಿಂದ
1 ಸಮುವೇಲನು 15 : 13 (IRVKN)
ಸಮುವೇಲನು ಅಲ್ಲಿಗೆ ಹೋದನು. ಸೌಲನು ಅವನನ್ನು ಕಂಡು, “[* ರೂತ. 2: 20 ]ಯೆಹೋವನು ನಿನ್ನನ್ನು ಆಶೀರ್ವದಿಸಲಿ; ನಾನು ಆತನ ಅಪ್ಪಣೆಯನ್ನು ನೆರವೇರಿಸಿದೆನು” ಅಂದನು.
1 ಸಮುವೇಲನು 15 : 14 (IRVKN)
ಅದಕ್ಕೆ ಸಮುವೇಲನು, “ಹಾಗಾದರೆ ಇದೇನು? ಕುರಿಗಳ ಕೂಗು ನನ್ನ ಕಿವಿಗೆ ಬೀಳುತ್ತದೆ, ದನಗಳ ಶಬ್ದವು ನನಗೆ ಕೇಳಿಸುತ್ತದೆ” ಎನ್ನಲು
1 ಸಮುವೇಲನು 15 : 15 (IRVKN)
ಸೌಲನು, “ಜನರು ನಿನ್ನ ದೇವರಾದ ಯೆಹೋವನಿಗೆ ಯಜ್ಞವನ್ನು ಅರ್ಪಿಸುವುದಕ್ಕಾಗಿ ಅಮಾಲೇಕ್ಯರ ಕುರಿದನಗಳಲ್ಲಿ ಉತ್ತಮವಾದವುಗಳನ್ನು ಉಳಿಸಿ ತಂದಿದ್ದಾರೆ; ಮಿಕ್ಕಾದವುಗಳನ್ನೆಲ್ಲಾ ಸಂಪೂರ್ಣವಾಗಿ ನಾಶಮಾಡಿದೆವು” ಎಂದು ಉತ್ತರಕೊಟ್ಟನು.
1 ಸಮುವೇಲನು 15 : 16 (IRVKN)
ಆಗ ಸಮುವೇಲನು ಅವನಿಗೆ, “ಅದಿರಲಿ; ಯೆಹೋವನು ಕಳೆದ ರಾತ್ರಿಯಲ್ಲಿ ನನಗೆ ಹೇಳಿದ್ದನ್ನು ತಿಳಿಸುತ್ತೇನೆ ಕೇಳು” ಎನ್ನಲು ಅವನು, “ಹೇಳು” ಅಂದನು.
1 ಸಮುವೇಲನು 15 : 17 (IRVKN)
ಸಮುವೇಲನು, “ನೀನು ನಿನ್ನ ದೃಷ್ಟಿಯಲ್ಲಿ ಅಲ್ಪನಾಗಿದ್ದರೂ ಯೆಹೋವನು ನಿನಗೆ ಇಸ್ರಾಯೇಲ್ಯರಲ್ಲಿ ರಾಜ್ಯಾಭಿಷೇಕ ಮಾಡಿದ್ದರಿಂದ ನೀನು ಎಲ್ಲಾ ಕುಲಗಳಿಗೆ ಶಿರಸ್ಸನ್ನಾಗಿ ಮಾಡಿದನು.
1 ಸಮುವೇಲನು 15 : 18 (IRVKN)
ಆತನು ನಿನಗೆ, ‘ಹೊರಟು ಹೋಗಿ ದುಷ್ಟರಾದ ಅಮಾಲೇಕ್ಯರೊಡನೆ ಯುದ್ಧಮಾಡಿ ಅವರೆಲ್ಲರನ್ನೂ ಸಂಪೂರ್ಣವಾಗಿ ನಾಶಮಾಡು’ ಎಂದು ಹೇಳಿದನು.
1 ಸಮುವೇಲನು 15 : 19 (IRVKN)
ಆದರೆ ನೀನು ಯೆಹೋವನ ಮಾತನ್ನು ಕೇಳದೆ ಕೊಳ್ಳೆಗಾಗಿ ಮನಸೋತು ಆತನಿಗೆ ದ್ರೋಹಮಾಡಿದ್ದೇಕೆ?” ಅಂದನು.
1 ಸಮುವೇಲನು 15 : 20 (IRVKN)
ಆಗ ಸೌಲನು ಸಮುವೇಲನಿಗೆ, “ಏನು? ನಾನು ಯೆಹೋವನ ಮಾತನ್ನು ಕೇಳಲಿಲ್ಲವೋ? ಆತನು ಕಳುಹಿಸಿದಲ್ಲಿಗೆ ಹೋಗಿ ಅಮಾಲೇಕ್ಯರನ್ನೆಲ್ಲಾ ಸಂಹರಿಸಿ ಅವರ ಅರಸನಾದ ಅಗಾಗನನ್ನು ಹಿಡಿದು ತಂದೆನು.
1 ಸಮುವೇಲನು 15 : 21 (IRVKN)
ಆದರೆ ಜನರು ಸಂಪೂರ್ಣವಾಗಿ ಸಂಹರಿಸಬೇಕಾದ ಕೊಳ್ಳೆಯಲ್ಲಿ ಉತ್ತಮವಾದ ಕುರಿದನಗಳನ್ನು ನಿನ್ನ ದೇವರಾದ ಯೆಹೋವನಿಗೆ ಗಿಲ್ಗಾಲಿನಲ್ಲಿ ಯಜ್ಞಸಮರ್ಪಣೆಮಾಡುವುದಕ್ಕಾಗಿ ಉಳಿಸಿ ತಂದರು” ಎಂದು ಉತ್ತರಕೊಟ್ಟನು.
1 ಸಮುವೇಲನು 15 : 22 (IRVKN)
ಅದಕ್ಕೆ ಸಮುವೇಲನು, “[† ಕೀರ್ತ 40:6-8; ಮೀಕ. 6:6- 8 ]ಯೆಹೋವನು ವಿಧೇಯತ್ವವನ್ನು ಮೆಚ್ಚುವಷ್ಟು ಯಜ್ಞಹೋಮಗಳಿಗೆ ಮೆಚ್ಚುತ್ತಾನೋ? ‡ ಪ್ರಸಂಗಿ. 5:1; ಮಾರ್ಕ 12: 33. ಯಜ್ಞವನ್ನರ್ಪಿಸುವುದಕ್ಕಿಂತ ಆತನ ಆಜ್ಞಾಪಾಲನೆ ಉತ್ತಮವಾಗಿದೆ; ಟಗರುಗಳ ಕೊಬ್ಬಿಗಿಂತ ವಿಧೇಯತೆ ವಿಶಿಷ್ಟವಾದುದು.
1 ಸಮುವೇಲನು 15 : 23 (IRVKN)
ಅವಿಧೇಯತ್ವವು [§ ಧರ್ಮೋ 18: 10 ]ಮಂತ್ರತಂತ್ರಗಳಷ್ಟೇ ಕೆಟ್ಟದ್ದಾಗಿರುವುದು. ಹಟವು ಮಿಥ್ಯಾಭಕ್ತಿಗೂ, ವಿಗ್ರಹಾರಾಧನೆಗೂ ಸಮಾನವಾಗಿರುವುದು. ನೀನು ಯೆಹೋವನ ಮಾತಿನಂತೆ ಅನುಸರಿಸಿ ನಡೆಯದೆ ಇದ್ದುದರಿಂದ ಆತನು ನಿನ್ನನ್ನು ಅರಸುತನದಿಂದ ನಿವಾರಿಸಿಬಿಟ್ಟಿದ್ದಾನೆ” ಎಂದು ಹೇಳಿದನು.
1 ಸಮುವೇಲನು 15 : 24 (IRVKN)
ಸೌಲನು ಸಮುವೇಲನಿಗೆ, “ನಾನು ಯೆಹೋವನ ಮತ್ತು ನಿನ್ನ ಆಜ್ಞೆಗಳನ್ನು ಮೀರಿ ಪಾಪಮಾಡಿದ್ದೇನೆ; ಜನರಿಗೆ ಹೆದರಿ ಅವರ ಮಾತನ್ನು ಕೇಳಿದೆನು.
1 ಸಮುವೇಲನು 15 : 25 (IRVKN)
ನೀನು ದಯವಿಟ್ಟು ನನ್ನ ಪಾಪವನ್ನು ಕ್ಷಮಿಸು; ನಾನು ಯೆಹೋವನನ್ನು ಆರಾಧಿಸುವಂತೆ ಹಿಂದಿರುಗಿ ನನ್ನ ಜೊತೆಯಲ್ಲಿ ಬಾ” ಎಂದು ಅವನನ್ನು ಬೇಡಿಕೊಂಡನು.
1 ಸಮುವೇಲನು 15 : 26 (IRVKN)
ಅದಕ್ಕೆ ಸಮುವೇಲನು, “ನಾನು ಹಿಂದಿರುಗಿ ನಿನ್ನ ಜೊತೆಯಲ್ಲಿ ಬರುವುದಿಲ್ಲ; ನೀನು ಯೆಹೋವನ ಮಾತನ್ನು ಅನುಸರಿಸಿ ನಡೆಯದೆ ಇದ್ದುದರಿಂದ ಆತನು ನಿನ್ನನ್ನು ಇಸ್ರಾಯೇಲರ ಅರಸುತನದಿಂದ ನಿವಾರಿಸಿದ್ದಾನೆ” ಎಂದು ಹೇಳಿ ತಿರುಗಿಕೊಂಡು ಹೊರಡಲು
1 ಸಮುವೇಲನು 15 : 27 (IRVKN)
ಸೌಲನು ಅವನ ಮೇಲಂಗಿಯ ಅಂಚನ್ನು ಹಿಡಿದು ಎಳೆದನು; ಅದು ಹರಿದುಹೋಯಿತು.
1 ಸಮುವೇಲನು 15 : 28 (IRVKN)
ಆಗ ಸಮುವೇಲನು ಅವನಿಗೆ, “ಯೆಹೋವನು ಈ ಹೊತ್ತು ಇಸ್ರಾಯೇಲಿನ ರಾಜ್ಯವನ್ನು ನಿನ್ನಿಂದ ಕಿತ್ತುಕೊಂಡು ನಿನಗಿಂತ ಉತ್ತಮನಾದ ಇನ್ನೊಬ್ಬನಿಗೆ ಕೊಟ್ಟಿದ್ದಾನೆ.
1 ಸಮುವೇಲನು 15 : 29 (IRVKN)
[* ಅರಣ್ಯ 23: 19 ]ಇಸ್ರಾಯೇಲರ ನಿರಂತರ ಆಧಾರವಾಗಿ ಇರುವವನು ಸುಳ್ಳಾಡುವವನಲ್ಲ; ಪಶ್ಚಾತ್ತಾಪಪಡುವವನಲ್ಲ; ಏಕೆಂದರೆ ವಾಗ್ದಾನ ಮಾಡಿದ ಮಾತನ್ನು ನಡೆಸದೆ ಬಿಡುವವನಲ್ಲ” ಎಂದು ಹೇಳಿದನು.
1 ಸಮುವೇಲನು 15 : 30 (IRVKN)
ಅದಕ್ಕೆ ಸೌಲನು, “ನಾನು ಪಾಪಮಾಡಿದ್ದೇನೆ; ದಯವಿಟ್ಟು ಇಸ್ರಾಯೇಲರ ಮುಂದೆಯೂ, ಜನರ ಮುಂದೆಯೂ ಹಿರಿಯರ ಮುಂದೆಯೂ ನನ್ನ ಮಾನವನ್ನುಳಿಸು. ನಾನು ನಿನ್ನ ದೇವರಾದ ಯೆಹೋವನನ್ನು ಆರಾಧಿಸುವಂತೆ ಹಿಂದಿರುಗಿ ನನ್ನ ಜೊತೆಯಲ್ಲಿ ಬಾ” ಎಂದು ಬೇಡಿಕೊಂಡನು.
1 ಸಮುವೇಲನು 15 : 31 (IRVKN)
ಸಮುವೇಲನು ಹಿಂದಿರುಗಿ ಸೌಲನ ಜೊತೆಯಲ್ಲಿ ಹೋದನು. ಆಗ ಸೌಲನು ದೇವರನ್ನು ಆರಾಧಿಸಿದನು.
1 ಸಮುವೇಲನು 15 : 32 (IRVKN)
ಸಮುವೇಲನು ಅಗಾಗನನ್ನು ಸಂಹರಿಸಿದ್ದು ತರುವಾಯ ಸಮುವೇಲನು, “ಅಮಾಲೇಕ್ಯರ ಅರಸನಾದ ಅಗಾಗನನ್ನು ನನ್ನ ಬಳಿಗೆ ಕರೆತನ್ನಿರಿ” ಎಂದನು. ಅಗಾಗನು ಮರಣಭಯ ತಪ್ಪಿತೆಂದು ನೆನಪಿಸಿಕೊಂಡು ಸಂತೋಷದಿಂದ ಅವನ ಹತ್ತಿರ ಬಂದನು.
1 ಸಮುವೇಲನು 15 : 33 (IRVKN)
ಆದರೆ ಸಮುವೇಲನು ಅವನಿಗೆ, “ನಿನ್ನ ಕತ್ತಿಯು ಅನೇಕ ಸ್ತ್ರೀಯರಿಗೆ ಪುತ್ರಶೋಕವನ್ನುಂಟುಮಾಡಿದೆ; ಅದರಂತೆ ನಿನ್ನ ತಾಯಿಯು ಎಲ್ಲರಿಗಿಂತಲೂ ಹೆಚ್ಚಾಗಿ ಪುತ್ರಶೋಕವನ್ನು ಅನುಭವಿಸಲಿ” ಎಂದು ಹೇಳಿ ಅವನನ್ನು ಗಿಲ್ಗಾಲಿನಲ್ಲಿ ಯೆಹೋವನ ಸನ್ನಿಧಿಯಲ್ಲೇ ಕಡಿದುಹಾಕಿದನು.
1 ಸಮುವೇಲನು 15 : 34 (IRVKN)
ಅನಂತರ ಸಮುವೇಲನು ರಾಮಕ್ಕೆ ಹೋದನು; ಸೌಲನು ತನ್ನ ಊರಾದ ಗಿಬೆಯದಲ್ಲಿರುವ ಮನೆಗೆ ಹೋದನು.
1 ಸಮುವೇಲನು 15 : 35 (IRVKN)
ಸಮುವೇಲನು ಜೀವದಿಂದ ಇರುವವರೆಗೂ ಸೌಲನನ್ನು ನೋಡಲಿಲ್ಲ; ಆದರೆ ಯೆಹೋವನು ಸೌಲನನ್ನು ಇಸ್ರಾಯೇಲರ ಅರಸನನ್ನಾಗಿ ಮಾಡಿದ್ದಕ್ಕಾಗಿ ವಿಷಾದಪಟ್ಟನು. ಸಮುವೇಲನು ಅವನ ಕುರಿತು ದುಃಖಪಡುತ್ತಿದ್ದನು.
❮
❯