1 ಅರಸುಗಳು 3 : 1 (IRVKN)
ಸೊಲೊಮೋನನಿಗೆ ಯೆಹೋವನಿಂದ ವಿಶೇಷ ಜ್ಞಾನವು ದೊರಕಿದ್ದು ಸೊಲೊಮೋನನು ಐಗುಪ್ತದ ಅರಸನಾದ ಫರೋಹನ ಅಳಿಯನಾದನು. ಅವನು ಫರೋಹನ ಮಗಳನ್ನು ಮದುವೆಮಾಡಿಕೊಂಡು ತನ್ನ ಅರಮನೆಯನ್ನೂ, ಯೆಹೋವನ ಆಲಯವನ್ನೂ ಮತ್ತು ಯೆರೂಸಲೇಮಿನ ಸುತ್ತಣ ಗೋಡೆಯನ್ನೂ ಕಟ್ಟಿ ಮುಗಿಸುವ ತನಕ ಆಕೆಯನ್ನು ದಾವೀದನಗರದಲ್ಲಿ ಇರಿಸಿದನು.
1 ಅರಸುಗಳು 3 : 2 (IRVKN)
ಆ ವರೆಗೂ ಯೆಹೋವನ ನಾಮಕ್ಕೋಸ್ಕರ ಆಲಯವಿರಲಿಲ್ಲವಾದುದರಿಂದ ಜನರು ಪೂಜಾಸ್ಥಳಗಳಲ್ಲಿ ಯಜ್ಞವನ್ನು ಆರ್ಪಿಸುತ್ತಿದ್ದರು.
1 ಅರಸುಗಳು 3 : 3 (IRVKN)
ಸೊಲೊಮೋನನು ಯೆಹೋವನನ್ನು ಪ್ರೀತಿಸಿ, ತನ್ನ ತಂದೆಯಾದ ದಾವೀದನ ವಿಧಿಗಳನ್ನು ಕೈಕೊಳ್ಳುವವನಾಗಿದ್ದರೂ ಆ ಪೂಜಾಸ್ಥಳಗಳಲ್ಲಿಯೇ ಯಜ್ಞವನ್ನರ್ಪಿಸುತ್ತಿದ್ದನು. ಅಲ್ಲಿಯೇ ಧೂಪಹಾಕುತ್ತಿದ್ದನು.
1 ಅರಸುಗಳು 3 : 4 (IRVKN)
ಒಮ್ಮೆ ಅರಸನಾದ ಸೊಲೊಮೋನನು ಯಜ್ಞಮಾಡುವುದಕ್ಕಾಗಿ ಪೂಜಾಸ್ಥಳಗಳಲ್ಲಿ ಪ್ರಧಾನವಾಗಿದ್ದ ಗಿಬ್ಯೋನಿಗೆ ಹೋಗಿ ಅಲ್ಲಿನ ಯಜ್ಞವೇದಿಯ ಮೇಲೆ ಸಹಸ್ರ ಯಜ್ಞಗಳನ್ನು ಸಮರ್ಪಿಸಿದನು.
1 ಅರಸುಗಳು 3 : 5 (IRVKN)
ದೇವರಾದ ಯೆಹೋವನು ಆ ರಾತ್ರಿ ಕನಸ್ಸಿನಲ್ಲಿ ಅವನಿಗೆ ಗಿಬ್ಯೋನಿನಲ್ಲಿ ಕಾಣಿಸಿಕೊಂಡು, “ನಿನಗೆ ಯಾವ ವರ ಬೇಕು ಕೇಳಿಕೋ” ಎಂದು ಹೇಳಲು ಸೊಲೊಮೋನನು,
1 ಅರಸುಗಳು 3 : 6 (IRVKN)
“ನಿನಗೆ ನಂಬಿಗಸ್ತನಾಗಿಯೂ, ನೀತಿಯಿಂದಲೂ ಯಥಾರ್ಥಚಿತ್ತದಿಂದಲೂ ನಡೆದುಕೊಂಡ ನಿನ್ನ ಸೇವಕನೂ, ನನ್ನ ತಂದೆಯೂ ಆದ ದಾವೀದನಿಗೆ ನೀನು ಮಹಾ ಕೃಪೆಯನ್ನು ತೋರಿಸಿದ್ದೀ. ಅವನ ಮೇಲೆ ಬಹಳವಾಗಿ ಕೃಪೆಯಿಟ್ಟು ಈಹೊತ್ತು ಅವನ ಸಿಂಹಾಸನಕ್ಕೆ ಒಬ್ಬ ಮಗನನ್ನು ಅನುಗ್ರಹಿಸಿದ್ದರಲ್ಲಿ ಅದನ್ನು ಸಂಪೂರ್ಣಗೊಳಿಸಿರುವೆ.
1 ಅರಸುಗಳು 3 : 7 (IRVKN)
ನನ್ನ ದೇವರಾದ ಯೆಹೋವನೇ, ನನ್ನ ತಂದೆಗೆ ಬದಲಾಗಿ ನಿನ್ನಿಂದ ಅರಸನಾಗಿ ನೇಮಿಸಲ್ಪಟ್ಟ ನಿನ್ನ ಸೇವಕನಾದ ನಾನು ಇನ್ನೂ ಚಿಕ್ಕವನು. ವ್ಯವಹಾರ ಜ್ಞಾನವಿಲ್ಲದವನು.
1 ಅರಸುಗಳು 3 : 8 (IRVKN)
ನಿನ್ನ ಸೇವಕನಾದ ನಾನು ಲೆಕ್ಕಿಸಲಾಗದಂಥ ಮಹಾ ಜನಾಂಗವಾಗಿರುವ ನಿನ್ನ ಸ್ವಕೀಯ ಪ್ರಜೆಯ ಮಧ್ಯದಲ್ಲಿದ್ದೇನೆ.
1 ಅರಸುಗಳು 3 : 9 (IRVKN)
ಆದುದರಿಂದ ಅವರನ್ನು ಆಳುವುದಕ್ಕೂ, ನ್ಯಾಯ ಅನ್ಯಾಯಗಳನ್ನು ಕಂಡುಹಿಡಿಯುವುದಕ್ಕೂ ನನಗೆ ವಿವೇಕವನ್ನು ದಯಪಾಲಿಸು. ಈ ಮಹಾ ಜನಾಂಗವನ್ನು ಆಳಬಲ್ಲ ಸಮರ್ಥರು ಯಾರಿದ್ದಾರೆ?” ಎಂದು ಬೇಡಿಕೊಂಡನು.
1 ಅರಸುಗಳು 3 : 10 (IRVKN)
ಸೊಲೊಮೋನನ ಈ ಬಿನ್ನಹವನ್ನು ಕರ್ತನಾದ ದೇವರು ಮೆಚ್ಚಿದನು.
1 ಅರಸುಗಳು 3 : 11 (IRVKN)
ಆಗ ದೇವರು ಅವನಿಗೆ, “ನೀನು ನಿನಗೋಸ್ಕರ ದೀರ್ಘಾಯುಷ್ಯವನ್ನಾಗಲೀ, ಐಶ್ವರ್ಯವನ್ನಾಗಲಿ ವೈರಿಗಳ ಪ್ರಾಣವನ್ನಾಗಲಿ ಕೇಳಿಕೊಳ್ಳದೆ ನ್ಯಾಯನಿರ್ಣಯಿಸುವುದಕ್ಕಾಗಿ ವಿವೇಕವನ್ನು ಬೇಡಿಕೊಂಡದ್ದರಿಂದ ನಿನ್ನ ಬಿನ್ನಹವನ್ನು ನೆರವೇರಿಸಿದ್ದೇನೆ.
1 ಅರಸುಗಳು 3 : 12 (IRVKN)
ನೋಡು, ನಿನಗೆ ಜ್ಞಾನವನ್ನು ಮತ್ತು ವಿವೇಕವನ್ನು ಅನುಗ್ರಹಿಸಿದ್ದೇನೆ. ನಿನ್ನಂಥ ಜ್ಞಾನಿಯು ಹಿಂದೆಯೂ ಇರಲಿಲ್ಲ, ಮುಂದೆಯೂ ಇರುವುದಿಲ್ಲ.
1 ಅರಸುಗಳು 3 : 13 (IRVKN)
ಇದಲ್ಲದೆ ನೀನು ಕೇಳಿದಂಥದ್ದನ್ನೂ ನಿನಗೆ ಅನುಗ್ರಹಿಸಿದ್ದೇನೆ. ನಿನ್ನ ಜೀವಮಾನದಲ್ಲೆಲ್ಲಾ ಐಶ್ವರ್ಯದಲ್ಲಿಯೂ, ಗೌರವ ಘನತೆಗಳಲ್ಲಿಯೂ ನಿನಗೆ ಸಮಾನನಾದ ಅರಸನು ಇನ್ನೊಬ್ಬನಿರುವುದಿಲ್ಲ.
1 ಅರಸುಗಳು 3 : 14 (IRVKN)
ನೀನು ನಿನ್ನ ತಂದೆಯಾದ ದಾವೀದನಂತೆ ನನ್ನ ಮಾರ್ಗದಲ್ಲಿ ನಡೆದು, ನನ್ನ ಆಜ್ಞಾವಿಧಿಗಳನ್ನು ಕೈಕೊಳ್ಳುವುದಾದರೆ ನಿನ್ನ ಆಯುಷ್ಯವನ್ನು ಹೆಚ್ಚಿಸುವೆನು” ಎಂದನು.
1 ಅರಸುಗಳು 3 : 15 (IRVKN)
ಸೊಲೊಮೋನನು ನಿದ್ರೆಯಿಂದ ಎಚ್ಚತ್ತಾಗ ಅದು ಕನಸೆಂದು ತಿಳಿದುಕೊಂಡನು. ಅವನು ಯೆರೂಸಲೇಮಿಗೆ ಬಂದ ನಂತರ ಯೆಹೋವನ ಒಡಂಬಡಿಕೆಯ ಮಂಜೂಷದ ಮುಂದೆ ನಿಂತು ಸರ್ವಾಂಗಹೋಮಗಳನ್ನು ಸಮಾಧಾನ ಯಜ್ಞಗಳನ್ನು ಸಮರ್ಪಿಸಿ, ತನ್ನ ಎಲ್ಲಾ ಸೇವಕರಿಗಾಗಿ ಔತಣಮಾಡಿಸಿದನು.
1 ಅರಸುಗಳು 3 : 16 (IRVKN)
ಸೊಲೊಮೋನನ ವಿವೇಕಪೂರ್ಣ ತೀರ್ಪು ಅದೇ ಕಾಲದಲ್ಲಿ ಇಬ್ಬರು ವೇಶ್ಯೆಯರು ಅರಸನ ಸನ್ನಿಧಿಗೆ ಬಂದರು.
1 ಅರಸುಗಳು 3 : 17 (IRVKN)
ಅವರಲ್ಲಿ ಒಬ್ಬಳು ಅರಸನಿಗೆ, “ನನ್ನ ಒಡೆಯಾ ಕೇಳು, ನಾನು ಮತ್ತು ಈ ಹೆಂಗಸು ಒಂದೇ ಮನೆಯಲ್ಲಿ ವಾಸಮಾಡುತ್ತಿದ್ದೇವೆ. ಇವಳು ಮನೆಯಲ್ಲಿದ್ದಾಗಲೇ ನಾನು ಮಗುವನ್ನು ಹೆತ್ತೆನು.
1 ಅರಸುಗಳು 3 : 18 (IRVKN)
ಮೂರನೆಯ ದಿನದಲ್ಲಿ ಇವಳೂ ಹೆತ್ತಳು. ನಾವಿಬ್ಬರೂ ಒಟ್ಟಿಗೆ ಇದ್ದೆವು. ನಮ್ಮಿಬ್ಬರ ಹೊರತು ಆ ಮನೆಯಲ್ಲಿ ಯಾರೂ ಇರಲಿಲ್ಲ
1 ಅರಸುಗಳು 3 : 19 (IRVKN)
ಇವಳು ರಾತ್ರಿಯಲ್ಲಿ ತನ್ನ ಕೂಸಿನ ಮೇಲೆ ಹೊರಳಿದ್ದರಿಂದ ಅದು ಸತ್ತಿತು.
1 ಅರಸುಗಳು 3 : 20 (IRVKN)
ಮಧ್ಯರಾತ್ರಿಯಲ್ಲಿಯೇ ಇವಳೆದ್ದು ನಿಮ್ಮ ಸೇವಕಳಾದ ನಾನು ಗಾಢನಿದ್ರೆಯಲ್ಲಿದ್ದಾಗ ನನ್ನ ಮಗುವನ್ನು ನನ್ನ ಬಳಿಯಿಂದ ತೆಗೆದು ತನ್ನ ಪಕ್ಕದಲ್ಲಿಟ್ಟುಕೊಂಡಳು. ಸತ್ತು ಹೋದ ತನ್ನ ಮಗುವನ್ನು ನನ್ನ ಪಕ್ಕದಲ್ಲಿರಿಸಿದಳು.
1 ಅರಸುಗಳು 3 : 21 (IRVKN)
ನಾನು ಹೊತ್ತಾರೆ ಎದ್ದು ಮಗುವಿಗೆ ಮೊಲೆಕುಡಿಸಬೇಕೆಂದಿರುವಾಗ ಅದು ಸತ್ತಿತ್ತು. ಆದರೆ ಅದನ್ನು ಬೆಳಕಿನಲ್ಲಿ ನೋಡಿದಾಗ ಅದು ನಾನು ಹೆತ್ತ ಕೂಸಾಗಿರಲಿಲ್ಲ” ಎಂದು ಹೇಳಿದಳು.
1 ಅರಸುಗಳು 3 : 22 (IRVKN)
ಆಗ ಎರಡನೆಯವಳು, “ಹಾಗಲ್ಲ, ಬದುಕಿರುವವನು ನನ್ನ ಮಗನು ಸತ್ತಿರುವವನು ನಿನ್ನ ಮಗನು” ಎಂದು ನುಡಿದಳು. ಮೊದಲನೆಯವಳು ತಿರುಗಿ, “ಅಲ್ಲ, ಸತ್ತಿರುವವನು ನಿನ್ನ ಮಗನು, ಬದುಕಿರುವವನು ನನ್ನ ಮಗನು” ಎಂದಳು. ಹೀಗೆ ಅವರು ಅರಸನ ಮುಂದೆ ವಾದಿಸುತ್ತಾ ಇದ್ದರು.
1 ಅರಸುಗಳು 3 : 23 (IRVKN)
ಆಗ ಅರಸನು, “ಜೀವದಿಂದಿರುವ ಕೂಸು ನನ್ನದು. ಸತ್ತಿರುವುದು ನಿನ್ನದು ಎಂದು ಒಬ್ಬಳು ಹೇಳುತ್ತಾಳೆ. ಇನ್ನೊಬ್ಬಳು ಅಲ್ಲ ಸತ್ತಿರುವುದು ನಿನ್ನದು, ಜೀವದಿಂದಿರುವುದು ನನ್ನದು ಅನ್ನುತ್ತಾಳೆ.
1 ಅರಸುಗಳು 3 : 24 (IRVKN)
ನನಗೊಂದು ಕತ್ತಿಯನ್ನು ತಂದು ಕೊಡಿರಿ” ಎಂದು ಸೇವಕರಿಗೆ ಹೇಳಿದನು.
1 ಅರಸುಗಳು 3 : 25 (IRVKN)
ಅವರು ಕತ್ತಿಯನ್ನು ತರಲು ಅರಸನು ಅವರಿಗೆ, “ಜೀವದಿಂದಿರುವ ಕೂಸನ್ನು ಕಡಿದು ಎರಡು ಭಾಗ ಮಾಡಿ ಅರ್ಧವನ್ನು ಇವಳಿಗೂ ಅರ್ಧವನ್ನು ಅವಳಿಗೂ ಕೊಡಿರಿ” ಎಂದು ಅಪ್ಪಣೆ ಮಾಡಿದನು.
1 ಅರಸುಗಳು 3 : 26 (IRVKN)
ಆಗ ಜೀವದಿಂದಿದ್ದ ಕೂಸಿನ ನಿಜವಾದ ತಾಯಿ ಕೂಸಿನ ವಿಷಯದಲ್ಲಿ ಕರಳು ಮರುಗಿ ಅರಸನಿಗೆ, “ನನ್ನ ಒಡೆಯಾ ಬೇಡ, ಬದುಕಿರುವ ಕೂಸನ್ನು ಅವಳಿಗೆ ಕೊಟ್ಟುಬಿಡು. ಅದನ್ನು ಕೊಲ್ಲಿಸಬೇಡ” ಎಂದು ಬೇಡಿಕೊಳ್ಳುವಲ್ಲಿ ಎರಡನೆಯವಳು, “ಅದು ನನಗೂ ಬೇಡ, ನಿನಗೂ ಬೇಡ ಕತ್ತರಿಸಲಿ” ಎಂದು ಕೂಗಿದಳು.
1 ಅರಸುಗಳು 3 : 27 (IRVKN)
ಕೂಡಲೇ ಅರಸನು, “ಬದುಕಿರುವ ಕೂಸನ್ನು ಕೊಲ್ಲಬೇಡಿರಿ. ಆ ಸ್ತ್ರೀಗೆ ಕೊಡಿರಿ. ಅವಳೇ ಅದರ ತಾಯಿ” ಎಂದು ಆಜ್ಞಾಪಿಸಿದನು.
1 ಅರಸುಗಳು 3 : 28 (IRVKN)
ಇಸ್ರಾಯೇಲರೆಲ್ಲರೂ ಈ ತೀರ್ಪನ್ನು ಕೇಳಿ ನ್ಯಾಯ ನಿರ್ಣಯಿಸುವುದಕ್ಕೆ ಈತನಲ್ಲಿ ದೈವಜ್ಞಾನವಿದೆ ಎಂದು ತಿಳಿದು ಅವನಿಗೆ ಬಹಳವಾಗಿ ಭಯಪಟ್ಟರು.
❮
❯
1
2
3
4
5
6
7
8
9
10
11
12
13
14
15
16
17
18
19
20
21
22
23
24
25
26
27
28