1 ಅರಸುಗಳು 21 : 1 (IRVKN)
ನಾಬೋತನ ದ್ರಾಕ್ಷಿತೋಟ ಮತ್ತು ಅವನ ಹತ್ಯೆ ಅನಂತರ ಸಂಭವಿಸಿದ್ದೇನೆಂದರೆ, ಇಜ್ರೇಲಿನಲ್ಲಿ ಸಮಾರ್ಯದ ಅರಸನಾದ ಅಹಾಬನ ಅರಮನೆಯ ಹತ್ತಿರ ಇಜ್ರೇಲಿನವನಾದ ನಾಬೋತನೆಂಬ ಮನುಷ್ಯನ ದ್ರಾಕ್ಷಿತೋಟವಿತ್ತು.
1 ಅರಸುಗಳು 21 : 2 (IRVKN)
ಅಹಾಬನು ನಾಬೋತನಿಗೆ, “ನಿನ್ನ ದ್ರಾಕ್ಷಿತೋಟವನ್ನು ನನಗೆ ಕೊಡು, ಅದು ನನ್ನ ಅರಮನೆಯ ಹತ್ತಿರವಿರುವುದರಿಂದ ಅದನ್ನು ಕಾಯಿಪಲ್ಯದ ತೋಟವನ್ನಾಗಿ ಮಾಡಿಕೊಳ್ಳುವೆನು. ಅದಕ್ಕೆ ಬದಲಾಗಿ ನಿನಗೆ ಅದಕ್ಕಿಂತ ಉತ್ತಮವಾದ ತೋಟವನ್ನು ಕೊಡುತ್ತೇನೆ. ಅದು ಬೇಡವಾದರೆ ಕ್ರಯವನ್ನು ಕೊಡುತ್ತೇನೆ” ಎಂದು ಹೇಳಿದನು.
1 ಅರಸುಗಳು 21 : 3 (IRVKN)
ಅದಕ್ಕೆ ನಾಬೋತನು ಅಹಾಬನಿಗೆ, “ನಾನು ಪಿತ್ರಾರ್ಜಿತ ಸ್ವತ್ತನ್ನು ಮಾರದಂತೆ ಯೆಹೋವನು ನನ್ನನ್ನು ತಡೆಯಲಿ” ಎಂದು ಉತ್ತರಕೊಟ್ಟನು.
1 ಅರಸುಗಳು 21 : 4 (IRVKN)
“ನನ್ನ ಪಿತ್ರಾರ್ಜಿತ ಸ್ವತ್ತನ್ನು ನಿನಗೆ ಕೊಡುವುದಿಲ್ಲ” ಎಂದು ಇಜ್ರೇಲಿನವನಾದ ನಾಬೋತನು ಹೇಳಿದ್ದರಿಂದ ಅಹಾಬನು ಸಿಟ್ಟಿನಿಂದ ಗಂಟುಮುಖ ಮಾಡಿಕೊಂಡು ಮನೆಗೆ ಹೋಗಿ ಊಟಮಾಡಲೊಲ್ಲದೆ, ಮಂಚದ ಮೇಲೆ ಮಲಗಿ ಗೋಡೆಯ ಕಡೆಗೆ ಮುಖ ತಿರುಗಿಸಿಕೊಂಡನು.
1 ಅರಸುಗಳು 21 : 5 (IRVKN)
ಆಗ ಅವನ ಹೆಂಡತಿಯಾದ ಈಜೆಬೆಲಳು ಅವನ ಬಳಿಗೆ ಬಂದು ಅವನನ್ನು, “ನೀನು ಯಾಕೆ ಊಟಮಾಡುವುದಿಲ್ಲ? ನಿನಗೆ ಯಾವ ಚಿಂತೆ ಇರುತ್ತದೆ?” ಎಂದು ಕೇಳಿದಳು.
1 ಅರಸುಗಳು 21 : 6 (IRVKN)
ಅವನು, “ನಾನು ಇಜ್ರೇಲಿನವನಾದ ನಾಬೋತನಿಗೆ ‘ನಿನ್ನ ದ್ರಾಕ್ಷಿತೋಟವನ್ನು ನನಗೆ ಮಾರಿಬಿಡು, ಹಣ ಬೇಡವಾದರೆ ನಿನಗೆ ಬೇರೊಂದು ದ್ರಾಕ್ಷಿತೋಟವನ್ನು ಕೊಡುತ್ತೇನೆ’ ಎಂಬುದಾಗಿ ಹೇಳಿದೆನು. ಆದರೆ ಅವನು ಕೊಡುವುದಿಲ್ಲ ಎಂದನು” ಎಂದು ಉತ್ತರಕೊಟ್ಟನು.
1 ಅರಸುಗಳು 21 : 7 (IRVKN)
ಆಗ ಅವನ ಹೆಂಡತಿಯಾದ ಈಜೆಬೆಲಳು ಅವನಿಗೆ, “ಇಸ್ರಾಯೇಲರ ಅರಸನಾದ ನೀನು ಹೀಗೆ ಮಾಡುವುದು ಸರಿಯೇ? ಎದ್ದು ಊಟ ಮಾಡಿ ಸಂತೋಷದಿಂದಿರು. ನಾನು ನಿನಗೆ ಇಜ್ರೇಲಿನವನಾದ ನಾಬೋತನ ದ್ರಾಕ್ಷಿತೋಟವನ್ನು ಕೊಡಿಸುತ್ತೇನೆ” ಎಂದು ಹೇಳಿದಳು.
1 ಅರಸುಗಳು 21 : 8 (IRVKN)
ಆಮೇಲೆ ಈಜೆಬೆಲಳು ಅಹಾಬನ ಹೆಸರಿನಲ್ಲಿ ಒಂದು ಪತ್ರ ಬರೆದು, ಅದಕ್ಕೆ ಅವನ ಮುದ್ರೆ ಹಾಕಿ, ಅದನ್ನು ನಾಬೋತನ ಊರಿನಲ್ಲಿದ್ದ ಎಲ್ಲಾ ಪ್ರಧಾನ ಪುರುಷರಿಗೂ ಹಿರಿಯರಿಗೂ ಕಳುಹಿಸಿದಳು.
1 ಅರಸುಗಳು 21 : 9 (IRVKN)
ಅದರಲ್ಲಿ, “ಎಲ್ಲರೂ ಉಪವಾಸಮಾಡಬೇಕೆಂದು ಪ್ರಕಟಿಸಿ, ನಾಬೋತನನ್ನು ನೆರೆದ ಸಭೆಯ ಮುಂದೆ ನಿಲ್ಲಿಸಿ,
1 ಅರಸುಗಳು 21 : 10 (IRVKN)
ಅವನು ದೇವರನ್ನೂ ಮತ್ತು ಅರಸನನ್ನೂ ಶಪಿಸಿದನು ಎಂಬುದಾಗಿ ಇಬ್ಬರ ಸಾಕ್ಷಿ ಹೇಳಿಸಿ, ಅವನನ್ನು ಹೊರಗೆ ಒಯ್ದು ಕಲ್ಲೆಸೆದು ಕೊಲ್ಲಿರಿ” ಎಂದು ಬರೆದಿದ್ದಳು.
1 ಅರಸುಗಳು 21 : 11 (IRVKN)
ಆಗ ಊರಿನ ಹಿರಿಯರು ಪ್ರಧಾನ ಪುರುಷರೂ ಈಜೆಬೆಲಳು ಕಳುಹಿಸಿದ ಪತ್ರದಲ್ಲಿ ಬರೆದಿದ್ದಂತೆಯೇ ಮಾಡಿದರು.
1 ಅರಸುಗಳು 21 : 12 (IRVKN)
ಅವರು ಉಪವಾಸವನ್ನು ಪ್ರಕಟಿಸಿ, ನೆರೆದ ಸಭೆಯ ಮುಂದೆ ನಾಬೋತನನ್ನು ನಿಲ್ಲಿಸಿದರು.
1 ಅರಸುಗಳು 21 : 13 (IRVKN)
ತರುವಾಯ ಇಬ್ಬರು ದುಷ್ಟರು ಬಂದು ಅವನ ಮುಂದೆ ಕುಳಿತು ಇವನು ದೇವರನ್ನೂ ಅರಸನನ್ನೂ ಶಪಿಸಿದ್ದಾನೆ ಎಂಬುದಾಗಿ ಜನರ ಎದುರಿನಲ್ಲಿ ಅವನಿಗೆ ವಿರುದ್ಧವಾಗಿ ಸಾಕ್ಷಿ ಹೇಳಿದರು. ಜನರು ಅವನನ್ನು ಊರಿನ ಹೊರಗೆ ಒಯ್ದು ಕಲ್ಲೆಸೆದು ಕೊಂದರು.
1 ಅರಸುಗಳು 21 : 14 (IRVKN)
ನಾಬೋತನು ಕಲ್ಲೆಸೆಯಲ್ಪಟ್ಟು ಸತ್ತ ವರ್ತಮಾನವನ್ನು ಹಿರಿಯರು ಈಜೆಬೆಲಳಿಗೆ ತಿಳಿಸಿದರು.
1 ಅರಸುಗಳು 21 : 15 (IRVKN)
ಆಕೆಯು ಇದನ್ನು ಕೇಳಿ ಅಹಾಬನಿಗೆ, “ನೀನು ಹೋಗಿ ನಾಬೋತನು ಮಾರುವುದಿಲ್ಲವೆಂದು ಹೇಳಿದ ದ್ರಾಕ್ಷಿ ತೋಟವನ್ನು ಸ್ವಾಧೀನ ಮಾಡಿಕೋ, ಅವನು ಜೀವದಿಂದಿಲ್ಲ ಸತ್ತನು” ಎಂದು ಹೇಳಿದಳು.
1 ಅರಸುಗಳು 21 : 16 (IRVKN)
ಇಜ್ರೇಲಿನವನಾದ ನಾಬೋತನ ಮರಣವಾರ್ತೆಯನ್ನು ಅಹಾಬನು ಕೇಳಿ ದ್ರಾಕ್ಷಿ ತೋಟವನ್ನು ಸ್ವಾಧೀನಮಾಡಿಕೊಳ್ಳುವುದಕ್ಕೋಸ್ಕರ ಇಳಿದು ಹೋದನು.
1 ಅರಸುಗಳು 21 : 17 (IRVKN)
ಆಗ ತಿಷ್ಬೀಯನಾದ ಎಲೀಯನಿಗೆ ಯೆಹೋವನ ವಾಕ್ಯವುಂಟಾಯಿತು.
1 ಅರಸುಗಳು 21 : 18 (IRVKN)
ಆತನು ಅವನಿಗೆ, “ನೀನು ಹೋಗಿ ಸಮಾರ್ಯದಲ್ಲಿ ವಾಸಿಸುವ ಇಸ್ರಾಯೇಲ್ ರಾಜನನ್ನು ಕಾಣು. ಅವನು ಈಗ ನಾಬೋತನ ದ್ರಾಕ್ಷಿ ತೋಟವನ್ನು ಸ್ವಾಧೀನ ಮಾಡಿಕೊಳ್ಳುವುದಕ್ಕೋಸ್ಕರ ಅಲ್ಲಿಗೆ ಹೋಗಿದ್ದಾನೆ.
1 ಅರಸುಗಳು 21 : 19 (IRVKN)
ಅವನಿಗೆ ನೀನು ಕೊಲೆ ಮಾಡಿ ಸ್ವತ್ತನ್ನು ಸಂಪಾದಿಸಿಕೊಂಡಿಯಲ್ಲವೋ? ನಾಯಿಗಳು ನಾಬೋತನ ರಕ್ತವನ್ನು ನೆಕ್ಕಿದ ಸ್ಥಳದಲ್ಲೇ ನಿನ್ನ ರಕ್ತವನ್ನೂ ನೆಕ್ಕುವವು ಎಂಬುದಾಗಿ ಯೆಹೋವನು ಅನ್ನುತ್ತಾನೆ ಎಂದು ಅವನಿಗೆ ಹೇಳು” ಎಂಬುದೇ.
1 ಅರಸುಗಳು 21 : 20 (IRVKN)
ಅಹಾಬನು ಎಲೀಯನನ್ನು ಕಂಡು ಅವನನ್ನು, “ನನ್ನ ವೈರಿಯೇ, ನೀನು ನನ್ನನ್ನು ಕಂಡುಹಿಡಿದೆಯಾ” ಎಂದು ಕೇಳಲು ಅವನು, “ಹೌದು ಕಂಡುಹಿಡಿದ್ದೆನು. ನೀನು ನಿನ್ನನ್ನು ಪಾಪಕ್ಕೆ ಮಾರಿಕೊಂಡು ಯೆಹೋವನ ದೃಷ್ಟಿಯಲ್ಲಿ ದ್ರೋಹಿಯಾದಿಯಲ್ಲಾ.
1 ಅರಸುಗಳು 21 : 21 (IRVKN)
ಯೆಹೋವನು ನಿನ್ನನ್ನು ಕುರಿತು, ‘ನಾನು ನಿನ್ನ ಮೇಲೆ ಕೇಡನ್ನು ಬರಮಾಡಿ ನಿನ್ನನ್ನು ಕಸವನ್ನೋ ಎಂಬಂತೆ ತೆಗೆದುಹಾಕುವೆನು. ನಿನ್ನ ಸಂತಾನದ ಗಂಡಸರಲ್ಲಿ ಸ್ವತಂತ್ರರಾಗಲಿ, ದಾಸರಾಗಲಿ ಎಲ್ಲರನ್ನೂ ಇಸ್ರಾಯೇಲರೊಳಗಿಂದ ಕಡಿದುಬಿಡುವೆನು.
1 ಅರಸುಗಳು 21 : 22 (IRVKN)
ನೀನು ಇಸ್ರಾಯೇಲ್ಯರನ್ನು ಪಾಪಕ್ಕೆ ಪ್ರೇರೇಪಿಸಿ ನನಗೆ ಕೋಪವನ್ನೆಬಿಸಿದ್ದರಿಂದ ನೆಬಾಟನ ಮಗನಾದ ಯಾರೊಬ್ಬಾಮನ ಮನೆಗೂ ಅಹೀಯನ ಮಗನಾದ ಬಾಷನ ಮನೆಗೂ ಆದ ಗತಿ ನಿನ್ನ ಮನೆಗೂ ಆಗುವುದು’ ಅನ್ನುತ್ತಾನೆ
1 ಅರಸುಗಳು 21 : 23 (IRVKN)
ಇದಲ್ಲದೆ ಆತನು ಈಜೆಬೆಲಳನ್ನು ಕುರಿತು, ‘ನಾಯಿಗಳು ಇಜ್ರೇಲ್ ಪಟ್ಟಣದ ಗೋಡೆಯ ಬಳಿಯಲ್ಲಿ ಆಕೆಯ ಶವವನ್ನು ತಿನ್ನುವವು.
1 ಅರಸುಗಳು 21 : 24 (IRVKN)
ಅಹಾಬನ ಮನೆಯವರಲ್ಲಿ ಊರೊಳಗೆ ಸಾಯುವಂಥವರನ್ನು ನಾಯಿಗಳೂ, ಅಡವಿಯಲ್ಲಿ ಸಾಯುವಂಥವರನ್ನು ಪಕ್ಷಿಗಳೂ ತಿಂದು ಬಿಡುವವು’ ಎಂದು ಹೇಳುತ್ತಾನೆ” ಅಂದನು.
1 ಅರಸುಗಳು 21 : 25 (IRVKN)
ಹೆಂಡತಿಯಾದ ಈಜೆಬೆಲಳಿಂದ ಪ್ರೇರೇಪಿತನಾಗಿ ಯೆಹೋವನ ದೃಷ್ಟಿಯಲ್ಲಿ ಕೆಟ್ಟದ್ದಾಗಿರುವುದನ್ನು ಮಾಡುವುದಕ್ಕೆ ತನ್ನನ್ನೇ ಮಾರಿಬಿಟ್ಟ ಅಹಾಬನಂಥ ದುಷ್ಟನು ಇನ್ನೊಬ್ಬನಿರಲಿಲ್ಲ.
1 ಅರಸುಗಳು 21 : 26 (IRVKN)
ಯೆಹೋವನು ಇಸ್ರಾಯೇಲರ ಎದುರಿನಿಂದ ಓಡಿಸಿಬಿಟ್ಟ ಅಮೋರಿಯರಂತೆ ವಿಗ್ರಹಗಳನ್ನು ಪೂಜಿಸಿದ ಅಹಾಬನ ನಡತೆಯು ಕೇವಲ ಅಸಹ್ಯವಾಗಿತ್ತು.
1 ಅರಸುಗಳು 21 : 27 (IRVKN)
ಅಹಾಬನು ಎಲೀಯನ ಮಾತುಗಳನ್ನು ಕೇಳಿ ತನ್ನ ಬಟ್ಟೆಗಳನ್ನು ಹರಿದುಕೊಂಡು, ಹಗಲಿರುಳು ಮೈಮೇಲೆ ಗೋಣಿತಟ್ಟನ್ನು ಹಾಕಿಕೊಂಡು, ಉಪವಾಸಮಾಡುತ್ತಾ ದೀನಮನಸ್ಸಿನಿಂದ ಪ್ರವರ್ತಿಸಿದನು.
1 ಅರಸುಗಳು 21 : 28 (IRVKN)
ಆದುದರಿಂದ ಯೆಹೋವನು ತಿಷ್ಬೀಯನಾದ ಎಲೀಯನಿಗೆ, “ಅಹಾಬನು ನನ್ನ ಮುಂದೆ ತಗ್ಗಿಸಿಕೊಂಡಿದ್ದನ್ನು ಕಂಡಿಯಾ?
1 ಅರಸುಗಳು 21 : 29 (IRVKN)
ಅವನು ನನ್ನ ಮುಂದೆ ತಗ್ಗಿಸಿಕೊಂಡಿದ್ದರಿಂದ ನಾನು ಮುಂತಿಳಿಸಿದ ಕೇಡನ್ನು ಅವನ ಜೀವಮಾನದಲ್ಲಿ ಬರಗೊಡದೆ ಅವನ ಮಗನ ಕಾಲದಲ್ಲಿ ಅವನ ಮನೆಯವರ ಮೇಲೆ ಅದನ್ನು ಬರಮಾಡುವೆನು” ಎಂದು ಹೇಳಿದನು.

1 2 3 4 5 6 7 8 9 10 11 12 13 14 15 16 17 18 19 20 21 22 23 24 25 26 27 28 29