1 ಅರಸುಗಳು 18 : 1 (IRVKN)
{ಎಲೀಯನು ಮತ್ತು ಓಬದ್ಯನು} [PS] ಅನೇಕ ದಿನಗಳಾದ ನಂತರ ಎಲೀಯನಿಗೆ ಯೆಹೋವನ ವಾಕ್ಯವುಂಟಾಯಿತು. ಬರಗಾಲದ ಮೂರನೆಯ ವರ್ಷದಲ್ಲಿ ಯೆಹೋವನು ಅವನಿಗೆ, “ನೀನು ಹೋಗಿ ಅಹಾಬನನ್ನು ಕಾಣು. ನಾನು ದೇಶಕ್ಕೆ ಮಳೆ ಕೊಡುತ್ತೇನೆ” ಎಂದನು.
1 ಅರಸುಗಳು 18 : 2 (IRVKN)
ಎಲೀಯನು ಅಹಾಬನನ್ನು ನೋಡುವುದಕ್ಕೆ ಹೊರಟನು. ಆಗ ಸಮಾರ್ಯದಲ್ಲಿ ಬರವು ಬಹು ಘೋರವಾಗಿದ್ದುದರಿಂದ,
1 ಅರಸುಗಳು 18 : 3 (IRVKN)
ಅಹಾಬನು ತನ್ನ ಉಗ್ರಾಣಿಕನಾದ ಓಬದ್ಯ ಎಂಬುವನನ್ನು ಕರೇಕಳುಹಿಸಿದನು.
1 ಅರಸುಗಳು 18 : 4 (IRVKN)
ಈಜೆಬೆಲಳು ಯೆಹೋವನ ಪ್ರವಾದಿಗಳನ್ನು ಸಂಹರಿಸುತ್ತಿರುವಾಗ ಯೆಹೋವನಲ್ಲಿ ಬಹು ಭಯಭಕ್ತಿಯುಳ್ಳವನಾದ ಈ ಓಬದ್ಯನು ನೂರು ಜನರು ಪ್ರವಾದಿಗಳನ್ನು ತೆಗೆದುಕೊಂಡು ಅವರನ್ನು ಐವತ್ತೈವತ್ತು ಜನರನ್ನಾಗಿ ಗವಿಗಳಲ್ಲಿ ಅಡಗಿಸಿಟ್ಟು, ಅವರಿಗೆ ಅನ್ನಪಾನಗಳನ್ನು ಕೊಟ್ಟು ಸಾಕುತ್ತಿದ್ದನು.
1 ಅರಸುಗಳು 18 : 5 (IRVKN)
ಅಹಾಬನು ಅವನಿಗೆ, “ನಾವು ದೇಶಸಂಚಾರ ಮಾಡುತ್ತಾ, ಎಲ್ಲಾ ಬುಗ್ಗೆ ಹಳ್ಳಗಳಿಗೆ ಹೋಗಿ ಅವುಗಳಲ್ಲಿ ಹುಲ್ಲು ಸಿಕ್ಕುತ್ತದೋ ನೋಡೋಣ. ಸಿಕ್ಕುವುದಾದರೆ ನಮ್ಮ ಕುದುರೆಗಳೂ ಮತ್ತು ಹೇಸರಗತ್ತೆಗಳೂ ಉಳಿದಾವು, ಇಲ್ಲವಾದರೆ ಸತ್ತುಹೋಗುವವು” ಎಂದು ಹೇಳಿದನು.
1 ಅರಸುಗಳು 18 : 6 (IRVKN)
ಅವರು ಸಂಚಾರಕ್ಕಾಗಿ ದೇಶವನ್ನು ಎರಡು ಭಾಗ ಮಾಡಿ ಒಂದು ಭಾಗಕ್ಕೆ ಓಬದ್ಯನನ್ನು ಕಳುಹಿಸಿ ಇನ್ನೊಂದು ಕಡೆ ತಾನೇ ಹೊರಟುಹೋದನು. [PE][PS]
1 ಅರಸುಗಳು 18 : 7 (IRVKN)
ಓಬದ್ಯನು ಪ್ರಯಾಣಮಾಡುತ್ತಿರುವಾಗ ಎಲೀಯನು ಪಕ್ಕನೆ ಅವನಿಗೆ ಎದುರಾದನು. ಓಬದ್ಯನು ಅವನ ಗುರುತು ಹಿಡಿದು, ಸಾಷ್ಟಾಂಗನಮಸ್ಕಾರ ಮಾಡಿ, “ನೀನು ನನ್ನ ಸ್ವಾಮಿಯಾದ ಎಲೀಯನೋ?” ಎಂದು ಕೇಳಿದನು.
1 ಅರಸುಗಳು 18 : 8 (IRVKN)
ಅದಕ್ಕೆ ಅವನು, “ಹೌದು, ನೀನು ಹೋಗಿ ನಿನ್ನ ಒಡೆಯನಿಗೆ, ‘ಎಲೀಯನು ಬಂದಿದ್ದಾನೆ’ ಎಂದು ಹೇಳು” ಎಂದನು.
1 ಅರಸುಗಳು 18 : 9 (IRVKN)
ಅದಕ್ಕೆ ಓಬದ್ಯನು, “ಅಹಾಬನು ನನ್ನನ್ನು ಕೊಲ್ಲುವ ಹಾಗೆ ನೀನು ನನ್ನನ್ನು ಅವನ ಕೈಗೆ ಒಪ್ಪಿಸುವುದೇಕೆ? ನಾನೇನು ಪಾಪಮಾಡಿದೆನು?
1 ಅರಸುಗಳು 18 : 10 (IRVKN)
ನಿನ್ನ ದೇವರಾದ ಯೆಹೋವನಾಣೆ, ನನ್ನ ಒಡೆಯನು ಸೇವಕರನ್ನು ಕಳುಹಿಸಿ ನಿನ್ನನ್ನು ಹುಡುಕದ ಜನಾಂಗವೂ ರಾಜ್ಯವೂ ಒಂದೂ ಇರುವುದಿಲ್ಲ. ಆ ಜನಾಂಗ ರಾಜ್ಯಗಳವರು ‘ಎಲೀಯನು ನಮ್ಮಲ್ಲಿರುವುದಿಲ್ಲ’ ಎಂದು ಹೇಳಿದಾಗ ಅವನು ಅವರಿಂದ ಪ್ರಮಾಣ ಮಾಡಿಸಿದನು.
1 ಅರಸುಗಳು 18 : 11 (IRVKN)
ಹೀಗಿದ್ದರೂ ನೀನು ನನಗೆ ಎಲೀಯನು ಬಂದಿದ್ದಾನೆಂದು ನಿನ್ನ ಒಡೆಯನಿಗೆ ತಿಳಿಸು ಎಂಬುದಾಗಿ ಆಜ್ಞಾಪಿಸುವುದೇನು?
1 ಅರಸುಗಳು 18 : 12 (IRVKN)
ನಾನು ನಿನ್ನನ್ನು ಬಿಟ್ಟು ಹೊರಟ ಕೂಡಲೆ ಯೆಹೋವನ ಆತ್ಮವು ನಿನ್ನನ್ನು ನನಗೆ ಗೊತ್ತಿಲ್ಲದ ಬೇರೊಂದು ಸ್ಥಳಕ್ಕೆ ಒಯ್ಯುವುದು. ನಾನು ಹೋಗಿ ಅಹಾಬನಿಗೆ ಹೇಳುವಷ್ಟರಲ್ಲಿ ನೀನು ಅವನಿಗೆ ಸಿಕ್ಕದೆ ಹೋದರೆ ಅವನು ನನ್ನನ್ನು ಕೊಂದು ಹಾಕುವನು. ನಾನು ಬಾಲ್ಯಾರಭ್ಯ ಯೆಹೋವನಲ್ಲಿ ಭಯಭಕ್ತಿಯುಳ್ಳವನಲ್ಲವೇ?
1 ಅರಸುಗಳು 18 : 13 (IRVKN)
ಈಜೆಬೆಲಳು ಯೆಹೋವನ ಪ್ರವಾದಿಗಳನ್ನು ಸಂಹರಿಸುತ್ತಿರುವಾಗ ನಾನು ಮಾಡಿದ್ದು ನನ್ನ ಸ್ವಾಮಿಯಾದ ನಿನಗೆ ಗೊತ್ತಾಗಲಿಲ್ಲವೋ? ಅವರಲ್ಲಿ ನೂರು ಜನರನ್ನು ತೆಗೆದುಕೊಂಡು ಐವತ್ತೈವತ್ತು ಜನರನ್ನಾಗಿ ಗವಿಗಳಲ್ಲಿ ಅಡಗಿಸಿಟ್ಟು, ಅನ್ನ ಪಾನಗಳನ್ನು ಕೊಟ್ಟು ಸಾಕಿದೆನಲ್ಲವೇ.
1 ಅರಸುಗಳು 18 : 14 (IRVKN)
ಹೀಗಿದ್ದರೂ ನೀನು ನನಗೆ ಎಲೀಯನು ಬಂದಿದ್ದಾನೆ ಎಂಬುದಾಗಿ ನಿನ್ನ ಒಡೆಯನಿಗೆ ತಿಳಿಸು ಎಂದು ಆಜ್ಞಾಪಿಸುತ್ತಿರುವೆಯಲ್ಲಾ. ಅವನು ನನ್ನನ್ನು ಕೊಲ್ಲುವನಲ್ಲವೋ?” ಎಂದು ಉತ್ತರಕೊಟ್ಟನು.
1 ಅರಸುಗಳು 18 : 15 (IRVKN)
ಆಗ ಎಲೀಯನು ಅವನಿಗೆ, “ನಾನು ಸನ್ನಿಧಿ ಸೇವೆಮಾಡುತ್ತಿರುವ ಸೇನಾಧೀಶ್ವರನಾದ ಯೆಹೋವನಾಣೆ, ನಾನು ಈ ಹೊತ್ತು ಅಹಾಬನಿಗೆ ಹೇಗೂ ಕಾಣಿಸಿಕೊಳ್ಳುವೆನು” ಅಂದನು. [PS]
1 ಅರಸುಗಳು 18 : 16 (IRVKN)
{ಕರ್ಮೆಲ್ ಬೆಟ್ಟದಲ್ಲಿ ಎಲೀಯನು} [PS] ಓಬದ್ಯನು ಅಹಾಬನ ಬಳಿಗೆ ಹೋಗಿ ಅವನಿಗೆ ಈ ಮಾತನ್ನು ತಿಳಿಸಿದನು. ಅಹಾಬನು ಎಲೀಯನನ್ನು ಎದುರುಗೊಳ್ಳುವುದಕ್ಕಾಗಿ ಹೊರಟುಹೋಗಿ
1 ಅರಸುಗಳು 18 : 17 (IRVKN)
ಅವನನ್ನು ಕಂಡಕೂಡಲೆ, “ಇಸ್ರಾಯೇಲರಿಗೆ ಆಪತ್ತನ್ನು ಬರಮಾಡಿದವನೇ, ನೀನು ಬಂದಿಯಾ?” ಅಂದನು.
1 ಅರಸುಗಳು 18 : 18 (IRVKN)
ಅದಕ್ಕೆ ಅವನು, “ಇಸ್ರಾಯೇಲರಿಗೆ ಆಪತ್ತನ್ನು ಬರಮಾಡಿದವನು ನಾನಲ್ಲ. ಯೆಹೋವನ ಆಜ್ಞೆಗಳನ್ನು ಉಲ್ಲಂಘಿಸಿ ಬಾಳನ ವಿಗ್ರಹಗಳನ್ನು ಪೂಜಿಸಿದ ನೀನೂ ಮತ್ತು ನಿನ್ನ ಮನೆಯವರೂ ಅದಕ್ಕೆ ಕಾರಣರು.
1 ಅರಸುಗಳು 18 : 19 (IRVKN)
ನೀನು ಈಗ ಎಲ್ಲಾ ಇಸ್ರಾಯೇಲರನ್ನೂ, ಈಜೆಬೆಲಳಿಂದ ಪೋಷಣೆ ಹೊಂದುವ ಬಾಳನ ನಾನೂರೈವತ್ತು ಪ್ರವಾದಿಗಳನ್ನು ಮತ್ತು ಅಶೇರ ದೇವತೆಯ ನಾನೂರು ಪ್ರವಾದಿಗಳನ್ನು ಕರ್ಮೆಲ್ ಬೆಟ್ಟಕ್ಕೆ ಕರೆಯಿಸು” ಎಂದು ಹೇಳಿದನು.
1 ಅರಸುಗಳು 18 : 20 (IRVKN)
ಅಹಾಬನು ಇಸ್ರಾಯೇಲರನ್ನೂ ಎಲ್ಲಾ ಪ್ರವಾದಿಗಳನ್ನೂ ಅಲ್ಲಿಗೆ ಕರೆಯಿಸಿದನು. [PE][PS]
1 ಅರಸುಗಳು 18 : 21 (IRVKN)
ಎಲೀಯನು ಎಲ್ಲಾ ಜನರ ಹತ್ತಿರ ಹೋಗಿ ಅವರಿಗೆ, “ನೀವು ಎಷ್ಟರವರೆಗೆ ಎರಡು ಮನಸ್ಸುಳ್ಳವರಾಗಿರುವಿರಿ. ಯೆಹೋವನು ದೇವರಾಗಿದ್ದರೆ ಆತನನ್ನೇ ಹಿಂಬಾಲಿಸಿರಿ ಬಾಳನು ದೇವರಾಗಿದ್ದರೆ ಅವನನ್ನೇ ಹಿಂಬಾಲಿಸಿರಿ” ಎಂದು ಹೇಳಿದನು. ಜನರು ಇದಕ್ಕೆ ಏನೂ ಉತ್ತರಕೊಡದೆ ಸುಮ್ಮನಿರುವುದನ್ನು ಕಂಡನು.
1 ಅರಸುಗಳು 18 : 22 (IRVKN)
ಮತ್ತು ಎಲೀಯನು ಅವರಿಗೆ, “ಯೆಹೋವನ ಪ್ರವಾದಿಗಳಲ್ಲಿ ನಾನೊಬ್ಬನೇ ಉಳಿದಿದ್ದೇನೆ, ಬಾಳನ ಪ್ರವಾದಿಗಳಲ್ಲಿ ನಾನೂರೈವತ್ತು ಜನರಿದ್ದಾರೆ.
1 ಅರಸುಗಳು 18 : 23 (IRVKN)
ಅವರು ಎರಡು ಹೋರಿಗಳನ್ನು ನಮ್ಮ ಬಳಿಗೆ ತರಲಿ ಅವುಗಳಲ್ಲಿ ಒಂದನ್ನು ಆರಿಸಿಕೊಂಡು ಕಡಿದು, ತುಂಡು ಮಾಡಿ, ಕಟ್ಟಿಗೆಯ ಮೇಲಿಡಲಿ. ಆದರೆ ಬೆಂಕಿಹೊತ್ತಿಸಬಾರದು. ನಾನೂ ಇನ್ನೊಂದನ್ನು ಹಾಗೆಯೇ ಮಾಡಿ ಬೆಂಕಿಹೊತ್ತಿಸದೆ ಕಟ್ಟಿಗೆಯ ಮೇಲಿಡುವೆನು
1 ಅರಸುಗಳು 18 : 24 (IRVKN)
ನೀವು ನಿಮ್ಮ ದೇವರ ಹೆಸರು ಹೇಳಿ ಪ್ರಾರ್ಥಿಸಿರಿ, ಅನಂತರ ನಾನು ಯೆಹೋವನ ಹೆಸರು ಹೇಳಿ ಪ್ರಾರ್ಥಿಸುವೆನು. ಆ ಇಬ್ಬರಲ್ಲಿ ಯಾವನು ಲಾಲಿಸಿ ಬೆಂಕಿಯನ್ನು ಕಳುಹಿಸುವನೋ ಅವನೇ ದೇವರೆಂದೂ ನಿರ್ಣಯಿಸೋಣ” ಅಂದನು. ಎಲ್ಲಾ ಜನರು, “ಸರಿ ನೀನು ಹೇಳಿದಂತೆಯೇ ಆಗಲಿ” ಎಂದು ಉತ್ತರಕೊಟ್ಟರು.
1 ಅರಸುಗಳು 18 : 25 (IRVKN)
ಆಗ ಅವನು ಬಾಳನ ಪ್ರವಾದಿಗಳಿಗೆ, “ನೀವು ಹೆಚ್ಚು ಜನ ಇರುವುದರಿಂದ ಮೊದಲು ನೀವೇ ಒಂದು ಹೋರಿಯನ್ನು ಆರಿಸಿಕೊಂಡು ಅದನ್ನು ಸಿದ್ಧಪಡಿಸಿ, ನಿಮ್ಮ ದೇವರ ಹೆಸರು ಹೇಳಿ ಪ್ರಾರ್ಥಿಸಿರಿ. ಆದರೆ ಬೆಂಕಿಯನ್ನು ಹೊತ್ತಿಸಬಾರದು” ಅಂದನು.
1 ಅರಸುಗಳು 18 : 26 (IRVKN)
ಅವರು ತರಲ್ಪಟ್ಟ ಹೋರಿಗಳಲ್ಲಿ ಒಂದನ್ನು ತೆಗೆದುಕೊಂಡು ಸಿದ್ಧಪಡಿಸಿ, ತಮ್ಮ ದೇವರಾದ ಬಾಳನ ಹೆಸರು ಹೇಳಿ, “ಬಾಳನೇ ನಮಗೆ ಕಿವಿಗೊಡು” ಎಂದು ಹೊತ್ತಾರೆಯಿಂದ ಮಧ್ಯಾಹ್ನದವರೆಗೆ ಕೂಗಿದರೂ ಆಕಾಶವಾಣಿಯಾಗಲಿಲ್ಲ. ಅವರು ಯಜ್ಞವೇದಿಯ ಸುತ್ತಲೂ ಕುಣಿದಾಡಿದರೂ ಯಾರೂ ಉತ್ತರ ದಯಪಾಲಿಸಲಿಲ್ಲ.
1 ಅರಸುಗಳು 18 : 27 (IRVKN)
ಮಧ್ಯಾಹ್ನವಾದನಂತರ ಎಲೀಯನು ಅವರನ್ನು ಪರಿಹಾಸ್ಯ ಮಾಡಿ, “ಗಟ್ಟಿಯಾಗಿ ಕೂಗಿರಿ, ಅವನು ದೇವರಾಗಿರುತ್ತಾನಲ್ಲಾ. ಈಗ ಒಂದು ವೇಳೆ ಅವನು ಧ್ಯಾನದಲ್ಲಿರಬಹುದು, ಇಲ್ಲವೇ ಯಾವುದೋ ಕೆಲಸದಲ್ಲಿ ಅಥವಾ ಪ್ರಯಾಣದಲ್ಲಿ ಇರಬೇಕು. ಅದೂ ಇಲ್ಲದಿದ್ದರೆ ನಿದ್ರೆಮಾಡುತ್ತಿದ್ದಾನು, ಎಚ್ಚರವಾಗಬೇಕು” ಎಂದು ಹೇಳಿದನು.
1 ಅರಸುಗಳು 18 : 28 (IRVKN)
ಅವರು ಗಟ್ಟಿಯಾಗಿ ಕೂಗಿ ತಮ್ಮ ಪದ್ದತಿಯ ಪ್ರಕಾರ ಈಟಿ ಕತ್ತಿಗಳಿಂದ ರಕ್ತಸೋರುವಷ್ಟು ಗಾಯಮಾಡಿಕೊಂಡರು.
1 ಅರಸುಗಳು 18 : 29 (IRVKN)
ಮಧ್ಯಾಹ್ನದಿಂದ ನೈವೇದ್ಯ ಸಮರ್ಪಣೆಯ ಹೊತ್ತಿನವರೆಗೂ ಪರವಶರಾಗಿ ಕೂಗುತ್ತಾ ಇದ್ದರು. ಆದರೂ ಆಕಾಶವಾಣಿಯಾಗಲಿಲ್ಲ. ಯಾರೂ ಅವರಿಗೆ ಉತ್ತರಕೊಡಲಿಲ್ಲ ಅವರನ್ನು ಲಕ್ಷಿಸಲಿಲ್ಲ. [PE][PS]
1 ಅರಸುಗಳು 18 : 30 (IRVKN)
ಅನಂತರ ಎಲೀಯನು ಎಲ್ಲಾ ಜನರನ್ನು ಹತ್ತಿರಕ್ಕೆ ಕರೆಯಲು ಅವರು ಬಂದರು. ಅವನು ಹಾಳಾಗಿದ್ದ ಅಲ್ಲಿ ಯೆಹೋವನ ಯಜ್ಞವೇದಿಯನ್ನು ತಿರುಗಿ ಕಟ್ಟಿಸಿದನು.
1 ಅರಸುಗಳು 18 : 31 (IRVKN)
ಯೆಹೋವನಿಂದ ಇಸ್ರಾಯೇಲನೆಂಬ ಹೆಸರು ಹೊಂದಿದ ಯಾಕೋಬನ ಮಕ್ಕಳಿಂದ ಉತ್ಪತ್ತಿಯಾದ ಕುಲಗಳ ಸಂಖ್ಯೆಗೆ ಸರಿಯಾಗಿ ಹನ್ನೆರಡು ಕಲ್ಲುಗಳನ್ನು ತೆಗೆದುಕೊಂಡು,
1 ಅರಸುಗಳು 18 : 32 (IRVKN)
ಯೆಹೋವನ ಹೆಸರಿಗೋಸ್ಕರ ಒಂದು ಯಜ್ಞವೇದಿಯನ್ನು ಕಟ್ಟಿಸಿ, ಅದರ ಸುತ್ತಲೂ ಇಪ್ಪತ್ತು ಸೇರು ಬೀಜಬಿತ್ತುವಷ್ಟು ನೆಲವನ್ನು ಅಗೆಸಿ ಕಾಲುವೆ ಮಾಡಿಸಿದನು.
1 ಅರಸುಗಳು 18 : 33 (IRVKN)
ಇದಲ್ಲದೆ ಕಟ್ಟಿಗೆಯನ್ನು ಯಜ್ಞವೇದಿಯ ಮೇಲೆ ಕ್ರಮಪಡಿಸಿ, ಹೋರಿಯನ್ನು ವಧಿಸಿ ತುಂಡು ಮಾಡಿ ಅದರ ಮೇಲಿಟ್ಟನು. ಅನಂತರ ಜನರಿಗೆ, “ನಾಲ್ಕು ಕೊಡ ನೀರು ತಂದು ಯಜ್ಞಮಾಂಸದ ಮೇಲೆಯೂ ಕಟ್ಟಿಗೆಯ ಮೇಲೆಯೂ ಸುರಿಯಿರಿ” ಎಂದು ಆಜ್ಞಾಪಿಸಿದನು.
1 ಅರಸುಗಳು 18 : 34 (IRVKN)
ಅವರು ತೆಗೆದುಕೊಂಡು ಬರಲು, “ಇನ್ನೊಂದು ಸಾರಿ ತನ್ನಿರಿ” ಎಂದು ಹೇಳಿದನು. ತಿರುಗಿ ತಂದರು. ಅವನು ಮೂರನೆಯ ಸಾರಿ ಅದೇ ಪ್ರಕಾರವಾಗಿ ಆಜ್ಞಾಪಿಸಿಲು ಅವರು ಮತ್ತೊಮ್ಮೆ ತಂದು ಸುರಿದರು
1 ಅರಸುಗಳು 18 : 35 (IRVKN)
ನೀರು ಯಜ್ಞವೇದಿಯ ಸುತ್ತಲೂ ತುಂಬಿ ಹರಿಯಿತು. ಇದಲ್ಲದೆ ಅವನು ಕಾಲುವೆಯನ್ನು ನೀರಿನಿಂದ ತುಂಬಿಸಿದನು.
1 ಅರಸುಗಳು 18 : 36 (IRVKN)
ಸಂಧ್ಯಾನೈವೇದ್ಯದ ಹೊತ್ತಿಗೆ ಪ್ರವಾದಿಯಾದ ಎಲೀಯನು ಯಜ್ಞವೇದಿಯ ಹತ್ತಿರ ಬಂದು, “ಅಬ್ರಹಾಮ, ಇಸಾಕ ಇಸ್ರಾಯೇಲರ ದೇವರೇ, ಯೆಹೋವನೇ, ನೀನೊಬ್ಬನೇ ಇಸ್ರಾಯೇಲರ ದೇವರಾಗಿರುತ್ತೀ ಎಂಬುದನ್ನೂ, ನಾನು ನಿನ್ನ ಸೇವಕನಾಗಿರುತ್ತೇನೆ ಎಂಬುದನ್ನೂ ಮತ್ತು ಇದನ್ನೆಲ್ಲಾ ನಿನ್ನ ಅಪ್ಪಣೆಯ ಮೇರೆಗೆ ಮಾಡಿದೆನೆಂಬುದನ್ನೂ ಈ ಹೊತ್ತು ತೋರಿಸಿಕೊಡು.
1 ಅರಸುಗಳು 18 : 37 (IRVKN)
ಕಿವಿಗೊಡು, ಯೆಹೋವನೇ ಕಿವಿಗೊಡು, ಯೆಹೋವನಾದ ನೀನೊಬ್ಬನೇ ದೇವರೂ! ಈ ಜನರ ಮನಸ್ಸನ್ನು ನಿನ್ನ ಕಡೆಗೆ ತಿರುಗಿಸಿಕೊಳ್ಳುವವನೂ ನೀನೇ ಆಗಿರುತ್ತೀ ಎಂಬುದನ್ನು ಇವರಿಗೆ ತಿಳಿಯಪಡಿಸು” ಎಂದು ಪ್ರಾರ್ಥಿಸಿದನು.
1 ಅರಸುಗಳು 18 : 38 (IRVKN)
ಕೂಡಲೇ ಯೆಹೋವನ ಕಡೆಯಿಂದ ಬೆಂಕಿಬಿದ್ದು ಯಜ್ಞಮಾಂಸವನ್ನೂ, ಕಟ್ಟಿಗೆ, ಕಲ್ಲು ಮಣ್ಣುಗಳನ್ನೂ ದಹಿಸಿಬಿಟ್ಟು ಕಾಲುವೆಯಲ್ಲಿದ್ದ ನೀರನ್ನೆಲ್ಲಾ ಹೀರಿಬಿಟ್ಟಿತು.
1 ಅರಸುಗಳು 18 : 39 (IRVKN)
ಜನರೆಲ್ಲರೂ ಅದನ್ನು ಕಂಡು ಬೋರ್ಲಬಿದ್ದು, “ಯೆಹೋವನೇ ದೇವರು! ಯೆಹೋವನೇ ದೇವರು!” ಎಂದು ಕೂಗಿದರು.
1 ಅರಸುಗಳು 18 : 40 (IRVKN)
ಆಗ ಎಲೀಯನು ಅವರಿಗೆ, “ಬಾಳನ ಪ್ರವಾದಿಗಳೆಲ್ಲರನ್ನು ಹಿಡಿಯಿರಿ. ಅವರಲ್ಲಿ ಒಬ್ಬನೂ ತಪ್ಪಿಸಿಕೊಳ್ಳಬಾರದು” ಎಂದು ಆಜ್ಞಾಪಿಸಲು ಅವರು ಹಿಡಿದರು. ಅವನು ಅವರನ್ನು ಕೀಷೋನ್ ಹಳ್ಳಕ್ಕೆ ಒಯ್ದು ಅಲ್ಲಿ ಕೊಲ್ಲಿಸಿದನು. [PS]
1 ಅರಸುಗಳು 18 : 41 (IRVKN)
{ಎಲೀಯನು ಮಳೆಗಾಗಿ ಪ್ರಾರ್ಥಿಸಿದ್ದು} [PS] ಅನಂತರ ಅವನು ಅಹಾಬನಿಗೆ, “ನೀನು ಮೇಲೆ ಹೋಗಿ ಅನ್ನಪಾನಗಳನ್ನು ತೆಗೆದುಕೋ, ದೊಡ್ಡ ಮಳೆಯ ಶಬ್ದವು ಕೇಳಿಸುತ್ತದೆ” ಅಂದನು.
1 ಅರಸುಗಳು 18 : 42 (IRVKN)
ಅಹಾಬನು ಅನ್ನಪಾನಗಳನ್ನು ತೆಗೆದುಕೊಳ್ಳಲು ಹೋದಾಗ ಎಲೀಯನು ಕರ್ಮೆಲಿನ ಬೆಟ್ಟದ ತುದಿಗೆ ಹೋಗಿ ಅಲ್ಲಿ ನೆಲದ ಮೇಲೆ ಬಿದ್ದುಕೊಂಡು ಮೊಣಕಾಲಿನ ಮೇಲೆ ತಲೆಯನ್ನಿಟ್ಟನು.
1 ಅರಸುಗಳು 18 : 43 (IRVKN)
ಅವನು ತನ್ನ ಸೇವಕನಿಗೆ, “ನೀನು ಮೇಲೆ ಹೋಗಿ ಸಮುದ್ರದ ಕಡೆಗೆ ನೋಡು” ಎಂದು ಆಜ್ಞಾಪಿಸಿದನು. ಸೇವಕನು ಹೋಗಿ ನೋಡಿ ಬಂದು, “ಏನೂ ಕಾಣುವುದಿಲ್ಲ” ಎಂದು ಹೇಳಿದನು. ಹೀಗೆ ಅವನನ್ನು ಏಳು ಸಾರಿ ಕಳುಹಿಸಿದನು.
1 ಅರಸುಗಳು 18 : 44 (IRVKN)
ಏಳನೆಯ ಸಾರಿ ಸೇವಕನು, “ಅಂಗೈಯಷ್ಟು ಚಿಕ್ಕದಾದ ಮೋಡವು ಸಮುದ್ರದಿಂದ ಏರಿ ಬರುತ್ತಿದೆ” ಎಂದು ತಿಳಿಸಿದನು. ಆಗ ಎಲೀಯನು ಅವನಿಗೆ, “ನೀನು ಹೋಗಿ ಅಹಾಬನಿಗೆ, ‘ಬೇಗನೆ ರಥವನ್ನು ಹೂಡಿಸಿಕೊಂಡು ಮಳೆಯು ನಿನ್ನನ್ನು ತಡೆಯದಂತೆ ಬೆಟ್ಟವನ್ನಿಳಿದು ಹೋಗು’ ಎಂದು ಹೇಳು” ಅಂದನು.
1 ಅರಸುಗಳು 18 : 45 (IRVKN)
ಸ್ವಲ್ಪ ಹೊತ್ತಿನಲ್ಲಿಯೇ ಆಕಾಶವು ಮೋಡಗಾಳಿಗಳಿಂದ ಕಪ್ಪಾಗಿ ದೊಡ್ಡ ಮಳೆಯು ಪ್ರಾರಂಭವಾಯಿತು. ಅಹಾಬನು ರಥದಲ್ಲಿ ಕುಳಿತುಕೊಂಡು ಇಜ್ರೇಲಿಗೆ ಹೋದನು.
1 ಅರಸುಗಳು 18 : 46 (IRVKN)
ಯೆಹೋವನ ಹಸ್ತವು ಎಲೀಯನ ಸಂಗಡ ಇದ್ದುದರಿಂದ ಅವನು ನಡುಕಟ್ಟಿಕೊಂಡು ಅಹಾಬನ ಮುಂದೆ ಓಡುತ್ತಾ ಇಜ್ರೇಲನ್ನು ಸೇರಿದನು. [PE]

1 2 3 4 5 6 7 8 9 10 11 12 13 14 15 16 17 18 19 20 21 22 23 24 25 26 27 28 29 30 31 32 33 34 35 36 37 38 39 40 41 42 43 44 45 46

BG:

Opacity:

Color:


Size:


Font: