1 ಅರಸುಗಳು 14 : 1 (IRVKN)
{ಅಬೀಯನ ಅಸ್ವಸ್ಥತೆ ಮತ್ತು ಅಹೀಯನ ಪ್ರವಾದನೆ} [PS] ಆ ಕಾಲದಲ್ಲಿ ಯಾರೊಬ್ಬಾಮನ ಮಗನಾದ ಅಬೀಯನು ಅಸ್ವಸ್ಥನಾದನು.
1 ಅರಸುಗಳು 14 : 2 (IRVKN)
ಆಗ ಯಾರೊಬ್ಬಾಮನು ತನ್ನ ಹೆಂಡತಿಗೆ, “ನೀನು ಎದ್ದು ನನ್ನ ಹೆಂಡತಿಯೆಂದು ಯಾರಿಗೂ ಗೊತ್ತಾಗದಂತೆ ವೇಷಹಾಕಿಕೊಂಡು ಶೀಲೋವಿಗೆ ಹೋಗು. ನಾನು ಈ ಜನರಿಗೆ ಅರಸನಾಗಬೇಕೆಂದು ನನಗೆ ಮುಂತಿಳಿಸಿದ ಪ್ರವಾದಿಯಾದ ಅಹೀಯನು ಅಲ್ಲಿರುತ್ತಾನೆ.
1 ಅರಸುಗಳು 14 : 3 (IRVKN)
ನೀನು ಹತ್ತು ರೊಟ್ಟಿಗಳನ್ನೂ, ಒಂದಷ್ಟು ಸಿಹಿಪದಾರ್ಥವನ್ನೂ ಮತ್ತು ಒಂದು ಕುಪ್ಪೆ ಜೇನುತುಪ್ಪವನ್ನೂ ತೆಗೆದುಕೊಂಡು ಅವನ ಬಳಿಗೆ ಹೋಗು. ಹುಡುಗನಿಗೆ ಏನಾಗುವುದೆಂದು ಅವನು ತಿಳಿಸುವನು” ಎಂದು ಹೇಳಿದನು.
1 ಅರಸುಗಳು 14 : 4 (IRVKN)
ಆಕೆಯು ಅವನು ಹೇಳಿದಂತೆಯೇ ಮಾಡಿ ಶೀಲೋವಿನಲ್ಲಿದ್ದ ಅಹೀಯನ ಮನೆಗೆ ಹೋದಳು. ಮುಪ್ಪಿನ ದೆಸೆಯಿಂದ ಅಹೀಯನ ಕಣ್ಣುಗಳು ಮೊಬ್ಬಾಗಿ ಹೋಗಿದ್ದರಿಂದ ಅವನಿಗೆ ಏನು ಕಾಣಿಸುತ್ತಿರಲಿಲ್ಲ.
1 ಅರಸುಗಳು 14 : 5 (IRVKN)
ಆದರೆ ಯೆಹೋವನು ಅವನಿಗೆ, “ಯಾರೊಬ್ಬಾಮನ ಹೆಂಡತಿಯು ಅಸ್ವಸ್ಥನಾದ ತನ್ನ ಮಗನ ವಿಷಯದಲ್ಲಿ ದೈವೋಕ್ತಿಯನ್ನು ಕೇಳುವುದಕ್ಕೆ ತನ್ನನ್ನು ಅನ್ಯಳ ಹಾಗೆ ವೇಷಮರೆಸಿಕೊಂಡು ಬರುತ್ತಾಳೆಂದೂ, ಆಕೆಗೆ ಇಂಥಿಂಥ ಉತ್ತರ ಕೊಡಬೇಕು” ಎಂದು ತಿಳಿಸಿದ್ದನು.
1 ಅರಸುಗಳು 14 : 6 (IRVKN)
ಆಕೆಯು ಅಹೀಯನ ಮನೆಯನ್ನು ಪ್ರವೇಶಿಸುತ್ತಿರುವಾಗಲೇ ಅಹೀಯನು ಆಕೆಯ ಕಾಲು ಸಪ್ಪಳವನ್ನು ಕೇಳಿ, “ಯಾರೊಬ್ಬಾಮನ ಹೆಂಡತಿಯೇ ಬಾ. ಯಾಕೆ ನಿನ್ನನ್ನು ಅನ್ಯಳೆಂದು ತೋರ್ಪಡಿಸಿಕೊಳ್ಳುತ್ತೀ? ನಿನಗೆ ಕಠಿಣವಾದ ಉತ್ತರ ಕೊಡಬೇಕೆಂದು ನನಗೆ ಅಪ್ಪಣೆಯಾಗಿದೆ.
1 ಅರಸುಗಳು 14 : 7 (IRVKN)
ನೀನು ಹೋಗಿ ಯಾರೊಬ್ಬಾಮನಿಗೆ ಇಸ್ರಾಯೇಲ್ ದೇವರಾದ ಯೆಹೋವನ ಅಪ್ಪಣೆಯನ್ನು ತಿಳಿಸು. ಆತನು ಅವನಿಗೆ, ‘ನಾನು ನಿನ್ನನ್ನು ಜನರ ಮಧ್ಯದಿಂದ ಉನ್ನತಸ್ಥಾನಕ್ಕೆ ತಂದೆನು. ನಿನ್ನನ್ನು ನನ್ನ ಪ್ರಜೆಗಳಾದ ಇಸ್ರಾಯೇಲರ ನಾಯಕನನ್ನಾಗಿ ಮಾಡಿದೆನು.
1 ಅರಸುಗಳು 14 : 8 (IRVKN)
ರಾಜ್ಯವನ್ನು ದಾವೀದನ ಕುಟುಂಬದವರಿಂದ ಕಿತ್ತುಕೊಂಡು ನಿನಗೆ ಕೊಟ್ಟೆನು. ಆದರೂ ನೀನು ನನ್ನ ಆಜ್ಞೆಗಳನ್ನು ಕೈಕೊಂಡು ಪೂರ್ಣ ಮನಸ್ಸಿನಿಂದ ನನ್ನನ್ನು ಹಿಂಬಾಲಿಸಿ ನನ್ನನ್ನು ಮೆಚ್ಚಿಸಿದಂಥ ನನ್ನ ಸೇವಕನಾದ ದಾವೀದನಂತೆ ನಡೆಯಲಿಲ್ಲ.
1 ಅರಸುಗಳು 14 : 9 (IRVKN)
ನೀನು ನಿನ್ನ ಎಲ್ಲಾ ಪೂರ್ವಾಧಿಕಾರಿಗಳಿಗಿಂತಲೂ ದುಷ್ಟನಾದಿ. ನನ್ನನ್ನು ಉಲ್ಲಂಘಿಸಿ, ಅನ್ಯದೇವತೆಗಳನ್ನೂ ಎರಕದ ವಿಗ್ರಹಗಳನ್ನೂ ಪೂಜಿಸಿ ನನಗೆ ಕೋಪವನ್ನೆಬ್ಬಿಸಿದಿ.
1 ಅರಸುಗಳು 14 : 10 (IRVKN)
ಆದುದರಿಂದ ಯಾರೊಬ್ಬಾಮನೇ ಕೇಳು, ನಾನು ನಿನ್ನ ಮನೆಯವರ ಮೇಲೆ ಕೇಡನ್ನು ಬರಮಾಡುವೆನು. ನಿನ್ನ ಕುಟುಂಬದ ಗಂಡಸರಲ್ಲಿ ಸ್ವತಂತ್ರರಾಗಲಿ, ದಾಸರಾಗಲಿ ಎಲ್ಲರನ್ನೂ ಇಸ್ರಾಯೇಲರೊಳಗಿಂದ ಸಂಹರಿಸಿಬಿಡುವೆನು. ಒಬ್ಬನು ಕಸವನ್ನು ಗುಡಿಸಿ ತೆಗೆದುಹಾಕುವಂತೆ ನಾನು ನಿನ್ನ ಮನೆಯವರನ್ನು ತೆಗೆದುಹಾಕುವೆನು.
1 ಅರಸುಗಳು 14 : 11 (IRVKN)
ಅವರು ನಿರ್ನಾಮವಾಗುವರು. ಅವರಲ್ಲಿ ಪಟ್ಟಣದೊಳಗೆ ಸಾಯುವಂಥವರನ್ನು ನಾಯಿಗಳೂ ಮತ್ತು ಅಡವಿಯಲ್ಲಿ ಸಾಯುವಂಥವರನ್ನು ಪಕ್ಷಿಗಳೂ ತಿಂದುಬಿಡುವವು ಎಂದು ಹೇಳುತ್ತಾನೆ’. ಇದು ಯೆಹೋವನಾದ ನನ್ನ ಮಾತು. ನೀನು ಎದ್ದು ನಿನ್ನ ಮನೆಗೆ ಹೋಗು.
1 ಅರಸುಗಳು 14 : 12 (IRVKN)
ನೀನು ಪಟ್ಟಣದೊಳಗೆ ಕಾಲಿಡುವಷ್ಟರಲ್ಲಿ ಹುಡುಗನು ಸಾಯುವನು.
1 ಅರಸುಗಳು 14 : 13 (IRVKN)
ಇಸ್ರಾಯೇಲರೆಲ್ಲರೂ ಅವನಿಗೋಸ್ಕರ ಗೋಳಾಡಿ ಅವನ ಶವವನ್ನು ಸಮಾಧಿಮಾಡುವರು. ಯಾರೊಬ್ಬಾಮನ ಮನೆಯವರೊಳಗೆ ಅವನು ಮಾತ್ರ ಇಸ್ರಾಯೇಲ್ ದೇವರಾದ ಯೆಹೋವನ ದೃಷ್ಟಿಯಲ್ಲಿ ಒಳ್ಳೆಯವನಾಗಿರುವುದರಿಂದ ಅವನೊಬ್ಬನೇ ಸಮಾಧಿಹೊಂದುವನು.
1 ಅರಸುಗಳು 14 : 14 (IRVKN)
ಯೆಹೋವನು ಇಸ್ರಾಯೇಲರನ್ನು ಆಳಲು ಬೇರೊಬ್ಬ ಅರಸನನ್ನು ನೇಮಿಸುವನು. ಅವನು ಕೂಡಲೇ ಯಾರೊಬ್ಬಾಮನ ಮನೆಯವರನ್ನು ಸಂಹರಿಸಿಬಿಡುವನು. ಇನ್ನು ಏನೇನು ಸಂಭವಿಸುವದೋ?
1 ಅರಸುಗಳು 14 : 15 (IRVKN)
ಯೆಹೋವನು ಇಸ್ರಾಯೇಲರನ್ನು ಹೊಡೆಯುವನು. ಆಗ ಅವರು ನೀರಿನಲ್ಲಿರುವ ಆಪುಹುಲ್ಲೋ ಎಂಬಂತೆ ಹೊಯ್ದಾಡುವರು. ಅವರು ಅಶೇರ ವಿಗ್ರಹಸ್ತಂಭಗಳನ್ನು ಮಾಡಿಕೊಂಡು ಆತನಿಗೆ ಕೋಪವನ್ನೆಬ್ಬಿಸಿದ್ದರಿಂದ ಆತನು ಅವರನ್ನು ಅವರ ಪೂರ್ವಿಕರಿಗೆ ಕೊಟ್ಟ ದೇಶದಿಂದ ಕಿತ್ತುಹಾಕಿ ಯೂಫ್ರೆಟಿಸ್ ನದಿಯ ಆಚೆಯಲ್ಲಿರುವ ದೇಶದೊಳಗೆ ಚದುರಿಸಿಬಿಡುವನು.
1 ಅರಸುಗಳು 14 : 16 (IRVKN)
ಯೆಹೋವನು ಯಾರೊಬ್ಬಾಮನ ಪಾಪಗಳ ನಿಮಿತ್ತವಾಗಿಯೂ ಅವನ ಪ್ರೇರಣೆಯಿಂದ ಇಸ್ರಾಯೇಲರು ಮಾಡಿದ ಅಪರಾಧಗಳ ನಿಮಿತ್ತವಾಗಿಯೂ ಅವರನ್ನು ಶತ್ರುಗಳಿಗೆ ಒಪ್ಪಿಸುವನು” ಎಂದು ಆಕೆಗೆ ಹೇಳಿದನು. [PS]
1 ಅರಸುಗಳು 14 : 17 (IRVKN)
{ಅಬೀಯ ಮತ್ತು ಯಾರೊಬ್ಬಾಮನ ಮರಣ} [PS] ಯಾರೊಬ್ಬಾಮನ ಹೆಂಡತಿಯು ತಿರ್ಚಾ ಊರಿಗೆ ಹೊರಟುಹೋಗಿ ತನ್ನ ಮನೆಯ ಹೊಸ್ತಿಲಲ್ಲಿ ಕಾಲಿಟ್ಟ ಕೂಡಲೇ ಹುಡುಗನು ಸತ್ತನು.
1 ಅರಸುಗಳು 14 : 18 (IRVKN)
ಯೆಹೋವನು ಪ್ರವಾದಿಯಾದ ಅಹೀಯನ ಮುಖಾಂತರವಾಗಿ ತಿಳಿಸಿದ ಪ್ರಕಾರ ಎಲ್ಲಾ ಇಸ್ರಾಯೇಲರು ಅವನಿಗೋಸ್ಕರ ಗೋಳಾಡಿ ಅವನ ಶವವನ್ನು ಸಮಾಧಿಮಾಡಿದರು.
1 ಅರಸುಗಳು 14 : 19 (IRVKN)
ಯಾರೊಬ್ಬಾಮನ ಇತರ ಕೃತ್ಯಗಳೂ ಅವನ ಯುದ್ಧ ಮತ್ತು ರಾಜ್ಯಭಾರಗಳ ವಿವರವೂ ಇಸ್ರಾಯೇಲ್ ರಾಜಕಾಲವೃತ್ತಾಂತ ಎಂಬ ಗ್ರಂಥದಲ್ಲಿ ಬರೆದು ದಾಖಲಿಸಲಾಗಿದೆ.
1 ಅರಸುಗಳು 14 : 20 (IRVKN)
ಅವನು ಇಪ್ಪತ್ತೆರಡು ವರ್ಷ ಆಳಿ ಪೂರ್ವಿಕರ ಬಳಿಗೆ ಸೇರಿದನು. ಅವನಿಗೆ ಬದಲಾಗಿ ಅವನ ಮಗನಾದ ನಾದಾಬನು ಅರಸನಾದನು. [PS]
1 ಅರಸುಗಳು 14 : 21 (IRVKN)
{ಯೆಹೂದ್ಯರ ಅರಸನಾದ ರೆಹಬ್ಬಾಮನು} [PS] ಸೊಲೊಮೋನನ ಮಗನಾದ ರೆಹಬ್ಬಾಮನು ಯೆಹೂದದ ಅರಸನಾದನು. ಅವನು ಪಟ್ಟಕ್ಕೆ ಬಂದಾಗ ನಲ್ವತ್ತೊಂದು ವರ್ಷದವನಾಗಿದ್ದು, ಯೆಹೋವನು ತನ್ನ ಹೆಸರಿಗೋಸ್ಕರ ಇಸ್ರಾಯೇಲರ ಎಲ್ಲಾ ಕುಲಗಳಿಂದ ಆರಿಸಿಕೊಂಡ ಯೆರೂಸಲೇಮ್ ಪಟ್ಟಣದಲ್ಲಿ ಹದಿನೇಳು ವರ್ಷಗಳ ಕಾಲ ಆಳ್ವಿಕೆ ಮಾಡಿದನು. ಅಮ್ಮೋನಿಯಳಾದ ನಯಮಾ ಎಂಬಾಕೆಯು ಅವನ ತಾಯಿ.
1 ಅರಸುಗಳು 14 : 22 (IRVKN)
ಯೆಹೂದ್ಯರು ಯೆಹೋವನ ದೃಷ್ಟಿಯಲ್ಲಿ ದ್ರೋಹಿಗಳಾದರು. ಅವರು ತಮ್ಮ ಪೂರ್ವಿಕರಿಗಿಂತಲೂ ದುಷ್ಟರಾಗಿ ಆತನನ್ನು ರೇಗಿಸಿದರು.
1 ಅರಸುಗಳು 14 : 23 (IRVKN)
ತಮ್ಮ ಪೂರ್ವಿಕರಂತೆಯೇ ಅವರೂ ತಮಗೋಸ್ಕರ ಪೂಜಾ ಸ್ಥಳಗಳನ್ನು ನಿರ್ಮಿಸಿಕೊಂಡರು. ಪ್ರತಿಯೊಂದು ದಿಣ್ಣೆಗಳ ಮೇಲೆ ಹಾಗೂ ಚೆನ್ನಾಗಿ ಬೆಳೆದಿರುವ ಪ್ರತಿಯೊಂದು ಮರದ ಕೆಳಗೆ ಕಲ್ಲಿನ ಕಂಬಗಳನ್ನೂ ಮತ್ತು ಅಶೇರ ವಿಗ್ರಹಸ್ತಂಭಗಳನ್ನೂ ನಿಲ್ಲಿಸಿದರು.
1 ಅರಸುಗಳು 14 : 24 (IRVKN)
ಇದಲ್ಲದೆ ಅವರ ದೇಶದಲ್ಲಿ ವೇಶ್ಯಾವೃತ್ತಿಯನ್ನು ಅನುಸರಿಸುತ್ತಿರುವ ದೇವದಾಸ, ದೇವದಾಸಿಯರು ಇದ್ದರು. ಯೆಹೋವನು ಅವರ ಎದುರಿನಿಂದ ಹೊರಡಿಸಿಬಿಟ್ಟ ಅನ್ಯಜನಾಂಗಗಳಲ್ಲಿದ್ದ ದುರಾಚಾರಗಳನ್ನೆಲ್ಲಾ ಅವರೂ ಆಚರಿಸುವವರಾದರು. [PE][PS]
1 ಅರಸುಗಳು 14 : 25 (IRVKN)
ರೆಹಬ್ಬಾಮನ ಆಳ್ವಿಕೆಯ ಐದನೆಯ ವರ್ಷದಲ್ಲಿ ಐಗುಪ್ತದ ಅರಸನಾದ ಶೀಶಕನು ಯೆರೂಸಲೇಮಿಗೆ ವಿರುದ್ಧವಾಗಿ ದಂಡೆತ್ತಿ ಬಂದನು.
1 ಅರಸುಗಳು 14 : 26 (IRVKN)
ಅವನು ಯೆಹೋವನ ಆಲಯದ ಮತ್ತು ಅರಮನೆಯ ಎಲ್ಲಾ ದ್ರವ್ಯವನ್ನೂ ಹಾಗೂ ಸೊಲೊಮೋನನು ಮಾಡಿಸಿದ ಬಂಗಾರದ ಗುರಾಣಿಗಳನ್ನೂ ತೆಗೆದುಕೊಂಡು ಹೋದನು.
1 ಅರಸುಗಳು 14 : 27 (IRVKN)
ಅರಸನಾದ ರೆಹಬ್ಬಾಮನು ಅವುಗಳಿಗೆ ಬದಲಾಗಿ ತಾಮ್ರದ ಗುರಾಣಿಗಳನ್ನು ಮಾಡಿಸಿ, ಅವುಗಳನ್ನು ಅರಮನೆಯ ದ್ವಾರಪಾಲಕರಾಗಿದ್ದ ಮೈಗಾವಲಿನವರ ದಳವಾಯಿಗಳಿಗೆ ಒಪ್ಪಿಸಿದನು.
1 ಅರಸುಗಳು 14 : 28 (IRVKN)
ಅರಸನು ಯೆಹೋವನ ಆಲಯಕ್ಕೆ ಹೋಗುವಾಗಲೆಲ್ಲಾ ಅವರು ಅವುಗಳನ್ನು ಹಿಡಿದುಕೊಳ್ಳುವರು. ಅಲ್ಲಿಂದ ಅರಸನು ಹಿಂತಿರುಗಿ ಹೋದ ಮೇಲೆ ಅವುಗಳನ್ನು ತಮ್ಮ ಕೋಣೆಯಲ್ಲಿಡುವರು.
1 ಅರಸುಗಳು 14 : 29 (IRVKN)
ರೆಹಬ್ಬಾಮನ ಉಳಿದ ಚರಿತ್ರೆಯು ಅವನ ಎಲ್ಲಾ ಕೃತ್ಯಗಳೂ ಯೆಹೂದ ರಾಜಕಾಲವೃತ್ತಾಂತ ಎಂಬ ಗ್ರಂಥದಲ್ಲಿ ಬರೆದಿರುತ್ತದೆ.
1 ಅರಸುಗಳು 14 : 30 (IRVKN)
ರೆಹಬ್ಬಾಮನಿಗೂ ಯಾರೊಬ್ಬಾಮನಿಗೂ ಯಾವಾಗಲೂ ಯುದ್ಧನಡೆಯುತ್ತಿತ್ತು.
1 ಅರಸುಗಳು 14 : 31 (IRVKN)
ರೆಹಬ್ಬಾಮನು ಪೂರ್ವಿಕರ ಬಳಿಗೆ ಸೇರಲು ಅವನ ಶವವನ್ನು ದಾವೀದನಗರದೊಳಗೆ ಅವನ ಹಿರಿಯರ ಸ್ಮಶಾನಭೂಮಿಯಲ್ಲಿ ಸಮಾಧಿಮಾಡಿದರು. ಅಮ್ಮೋನಿಯಳಾದ ನಯಮಾ ಎಂಬಾಕೆಯು ಅವನ ತಾಯಿ. ಅನಂತರ ಅವನ ಮಗನಾದ ಅಬೀಯಾಮನು ಅವನಿಗೆ ಬದಲಾಗಿ ಅರಸನಾದನು. [PE]

1 2 3 4 5 6 7 8 9 10 11 12 13 14 15 16 17 18 19 20 21 22 23 24 25 26 27 28 29 30 31

BG:

Opacity:

Color:


Size:


Font: