ಜೆಕರ್ಯ 4 : 1 (ERVKN)
ನನ್ನೊಡನೆ ಮಾತನಾಡುತ್ತಿದ್ದ ದೇವದೂತನು ಬಂದು ನನ್ನನ್ನೆಬ್ಬಿಸಿದನು. ನಾನು ನಿದ್ರೆಯಿಂದ ಎದ್ದೇಳುವವನಂತೆ ಇದ್ದೆನು.
ಜೆಕರ್ಯ 4 : 2 (ERVKN)
ಆಗ ದೂತನು, “ಏನು ನೋಡುತ್ತೀ?” ಎಂದು ಪ್ರಶ್ನಿಸಿದನು. ಆಗ ನಾನು “ಬಂಗಾರದ ದೀಪಸ್ತಂಭವನ್ನು ನೋಡುತ್ತಿದ್ದೇನೆ. ಆ ಸ್ತಂಭದಲ್ಲಿ ಏಳು ದೀಪಗಳಿವೆ. ದೀಪಸ್ತಂಭದ ಮೇಲೆ ಒಂದು ಬೋಗುಣಿ ಇದೆ. ಆ ಬೋಗುಣಿಯಿಂದ ಏಳು ನಳಿಗೆಗಳು ಪ್ರತೀ ದೀಪಕ್ಕೆ ಹೋಗುತ್ತವೆ. ಬೋಗುಣಿಯಲ್ಲಿಟ್ಟ ಎಣ್ಣೆಯು ಆ ನಳಿಗೆಯ ಮೂಲಕ ದೀಪಕ್ಕೆ ಸುರಿಯುತ್ತಿತ್ತು.
ಜೆಕರ್ಯ 4 : 3 (ERVKN)
ಆ ಬೋಗುಣಿಯ ಬಳಿಯಲ್ಲಿ ಎರಡು ಆಲೀವ್ ಮರಗಳಿದ್ದವು. ಒಂದು ಬಲಬದಿಯಲ್ಲಿಯೂ ಇನ್ನೊಂದು ಎಡಬದಿಯಲ್ಲಿಯೂ ಇತ್ತು. ಈ ಮರಗಳು ದೀಪಗಳಿಗೆ ಬೇಕಾದ ಎಣ್ಣೆಯನ್ನು ತಯಾರು ಮಾಡುತ್ತಿದ್ದವು.”
ಜೆಕರ್ಯ 4 : 4 (ERVKN)
ಆಗ ನಾನು ನನ್ನ ಜೊತೆ ಮಾತನಾಡುತ್ತಿದ್ದ ದೂತನೊಡನೆ, “ಸ್ವಾಮಿ, ಇವುಗಳ ಅರ್ಥವೇನು?” ಎಂದು ಕೇಳಿದೆನು.
ಜೆಕರ್ಯ 4 : 5 (ERVKN)
ಅವನು ಹೀಗೆ ಹೇಳಿದನು: “ಈ ವಿಷಯಗಳು ಏನೆಂದು ನಿನಗೆ ತಿಳಿಯಲಿಲ್ಲವೇ?” ನಾನು, “ಇಲ್ಲ” ಅಂದೆನು.
ಜೆಕರ್ಯ 4 : 6 (ERVKN)
ಅವನು ಅದಕ್ಕೆ ಉತ್ತರಿಸಿ, “ಇದು ಯೆಹೋವನಿಂದ ಜೆರುಬ್ಬಾಬೆಲನಿಗೆ ಕೊಟ್ಟ ಸಂದೇಶವಾಗಿದೆ. ‘ನಿನ್ನ ಸಹಾಯವು ನಿನ್ನ ಸ್ವಂತ ಶಕ್ತಿಸಾಮರ್ಥ್ಯದಿಂದ ಬರುವದಿಲ್ಲ. ಅದು ನನ್ನ ಆತ್ಮದಿಂದಲೇ ನಿನಗೆ ದೊರಕುವದು.’ ಇದು ಸರ್ವಶಕ್ತನಾದ ಯೆಹೋವನ ನುಡಿ.
ಜೆಕರ್ಯ 4 : 7 (ERVKN)
ಉನ್ನತವಾದ ಶಿಖರವು ಜೆರುಬ್ಬಾಬೆಲನಿಗೆ ಸಮತಟ್ಟಾದ ನೆಲದಂತಿರುವುದು. ಅವನು ಆಲಯವನ್ನು ಕಟ್ಟುವನು. ಅದರ ಅತಿ ವಿಶೇಷವಾದ ಕಲ್ಲನ್ನಿಟ್ಟ ಬಳಿಕ ಜನರೆಲ್ಲರೂ, ‘ಬಹಳ ಚಂದ, ಬಹಳ ಚಂದ’ ಎಂದು ಆರ್ಭಟಿಸುವರು.”
ಜೆಕರ್ಯ 4 : 8 (ERVKN)
ನನಗೆ ಯೆಹೋವನ ಸಂದೇಶವೂ ಸಹ ಹೀಗೆ ಹೇಳಿತು:
ಜೆಕರ್ಯ 4 : 9 (ERVKN)
“ಜೆರುಬ್ಬಾಬೆಲನು ನನ್ನ ಆಲಯದ ಅಸ್ತಿವಾರವನ್ನು ಹಾಕುವನು. ಜೆರುಬ್ಬಾಬೆಲನು ಆಲಯವನ್ನು ಕಟ್ಟಿ ಮುಗಿಸುವನು. ಆಗ ನೀವು ಸರ್ವಶಕ್ತನಾದ ಯೆಹೋವನು ನಿಮ್ಮ ಬಳಿಗೆ ನನ್ನನ್ನು ಕಳುಹಿಸಿದ್ದಾನೆಂದು ತಿಳಿಯುವಿರಿ.
ಜೆಕರ್ಯ 4 : 10 (ERVKN)
ಒಂದು ಸಣ್ಣ ರೀತಿಯ ಪ್ರಾರಂಭಕ್ಕೆ ಜನರು ನಾಚುವುದಿಲ್ಲ. ಜೆರುಬ್ಬಾಬೆಲನು ನೂಲುಗುಂಡು ಹಿಡಿದುಕೊಂಡು ಸಂಪೂರ್ಣವಾದ ಆಲಯವನ್ನು ಅಳತೆ ಮಾಡುವಾಗ ಜನರು ಅತಿಯಾಗಿ ಸಂತೋಷಿಸುವರು. ಈಗ ಆ ಕಲ್ಲಿನ ಏಳು ಬದಿಗಳು ಯೆಹೋವನ ಕಣ್ಣುಗಳು ಎಲ್ಲಾ ದಿಕ್ಕುಗಳನ್ನು ನೋಡುತ್ತಿರುವುದನ್ನು ಸೂಚಿಸುತ್ತವೆ. ಅವು ಭೂಲೋಕದಲ್ಲಿರುವ ಎಲ್ಲಾ ಸಂಗತಿಗಳನ್ನು ನೋಡುತ್ತಿವೆ.”
ಜೆಕರ್ಯ 4 : 11 (ERVKN)
ಆಗ ಜೆಕರ್ಯನಾದ ನಾನು ಅವನಿಗೆ ಹೇಳಿದ್ದೇನೆಂದರೆ, “ನಾನು ದೀಪಸ್ತಂಭದ ಬಲಗಡೆಯಲ್ಲಿ ಒಂದು ಆಲೀವ್ ಮರವನ್ನೂ ಎಡಗಡೆಯಲ್ಲಿ ಇನ್ನೊಂದು ಆಲೀವ್ ಮರವನ್ನೂ ನೋಡಿದೆನು. ಇವುಗಳು ಏನನ್ನು ಸೂಚಿಸುತ್ತವೆ?” ಎಂದು ಕೇಳಿದೆನು.
ಜೆಕರ್ಯ 4 : 12 (ERVKN)
ತಿರಿಗಿ ನಾನು ಅವನಿಗೆ, “ನಾನು ಆ ಎರಡು ಬಂಗಾರದ ನಳಿಗೆಯ ಬದಿಯಲ್ಲಿ ಆಲೀವ್ ಮರದ ಎರಡು ಕೊಂಬೆಗಳನ್ನು ನೋಡಿದೆನು. ಅದರಿಂದ ಬಂಗಾರದ ಬಣ್ಣದ ಎಣ್ಣೆಯು ಹರಿಯುತ್ತಿತ್ತು. ಇವುಗಳ ಅರ್ಥವೇನು?” ಎಂದು ಕೇಳಿದೆನು.
ಜೆಕರ್ಯ 4 : 13 (ERVKN)
ಆಗ ದೇವದೂತನು ಹೇಳಿದ್ದೇನೆಂದರೆ, “ಇವು ಏನನ್ನು ಸೂಚಿಸುತ್ತವೆ ಎಂದು ನಿನಗೆ ತಿಳಿಯದೋ?” ಅದಕ್ಕೆ ನಾನು, “ಇಲ್ಲ” ಅಂದೆನು.
ಜೆಕರ್ಯ 4 : 14 (ERVKN)
ಆಗ ಅವನು, “ಈ ಪ್ರಪಂಚದಲ್ಲಿ ಯೆಹೋವನು ತನ್ನ ಸೇವೆಮಾಡಲು ಆರಿಸಿಕೊಂಡ ಇಬ್ಬರು ಮನುಷ್ಯರನ್ನು ಅವು ಪ್ರತಿನಿಧಿಸುತ್ತವೆ” ಅಂದನು.

1 2 3 4 5 6 7 8 9 10 11 12 13 14