ಜೆಕರ್ಯ 3 : 1 (ERVKN)
ಪ್ರಧಾನ ಯಾಜಕನು ದೇವದೂತನು ನನಗೆ ಪ್ರಧಾನ ಯಾಜಕನಾದ ಯೆಹೋಶುವನನ್ನು ತೋರಿಸಿದನು. ಅವನು ಯೆಹೋವನ ದೂತನ ಮುಂದೆ ನಿಂತಿದ್ದನು. ಸೈತಾನನು ಯೆಹೋಶುವನ ಬಲಗಡೆಯಲ್ಲಿ ನಿಂತಿದ್ದನು. ಯೆಹೋಶುವನು ಕೆಟ್ಟಕೃತ್ಯಗಳನ್ನು ಮಾಡಿದ್ದಾನೆಂದು ದೂರು ಹೇಳುವದಕ್ಕಾಗಿ ಸೈತಾನನು ಅಲ್ಲಿ ನಿಂತಿದ್ದನು.
ಜೆಕರ್ಯ 3 : 2 (ERVKN)
ಆಗ ಯೆಹೋವನ ದೂತನು ಹೇಳಿದ್ದೇನೆಂದರೆ, “ಯೆಹೋವನು ನಿನ್ನನ್ನು ಖಂಡಿಸಲಿ ಮತ್ತು ಟೀಕೆ ಮಾಡಲಿ. ಯೆಹೋವನು ತನ್ನ ವಿಶೇಷ ನಗರವನ್ನಾಗಿ ಜೆರುಸಲೇಮನ್ನು ಆರಿಸಿಕೊಂಡಿದ್ದಾನೆ. ಆ ನಗರವನ್ನು ಆತನೇ ಕಾಪಾಡಿದನು. ಬೆಂಕಿಯಿಂದ ಎಳೆದುತೆಗೆದ ಕೊಳ್ಳಿಯಂತೆ ಆತನು ಅದನ್ನು ಕಾಪಾಡಿದನು.”
ಜೆಕರ್ಯ 3 : 3 (ERVKN)
ಯೆಹೋಶುವನು ದೂತನ ಮುಂದೆ ನಿಂತುಕೊಂಡಿದ್ದನು. ಅವನ ವಸ್ತ್ರವು ಮಲಿನವಾಗಿತ್ತು.
ಜೆಕರ್ಯ 3 : 4 (ERVKN)
ಆಗ ಆ ದೂತನು ಪಕ್ಕದಲ್ಲಿ ನಿಂತಿದ್ದ ಬೇರೆ ದೂತರನ್ನುದ್ದೇಶಿಸಿ, “ಯೆಹೋಶುವನ ಮೇಲಿರುವ ಮೈಲಿಗೆ ವಸ್ತ್ರವನ್ನು ತೆಗೆಯಿರಿ” ಎಂದು ಹೇಳಿದನು. ಆಗ ದೂತನು ಯೆಹೋಶುವನಿಗೆ, “ನಾನು ನಿನ್ನ ದೋಷಗಳನ್ನು ತೊಳೆದುಬಿಟ್ಟಿರುವೆ. ಈಗ ನಾನು ನಿನಗೆ ಹೊಸ ಬಟ್ಟೆಗಳನ್ನು ಕೊಡುತ್ತೇನೆ” ಎಂದು ಹೇಳಿದನು.
ಜೆಕರ್ಯ 3 : 5 (ERVKN)
ಆಗ ನಾನು, “ಅವನ ತಲೆಯ ಮೇಲೆ ಶುಚಿಯಾದ ಪೇಟವನ್ನಿಡಿರಿ” ಎಂದು ಹೇಳಿದಾಗ ಅವರು ಅವನಿಗೆ ಶುಭ್ರವಾದ ಪೇಟವನ್ನು ಇಟ್ಟರು. ಯೆಹೋವನ ದೂತನು ಅಲ್ಲಿ ನಿಂತಿದ್ದಾಗಲೇ ಅವನಿಗೆ ನಿರ್ಮಲವಾದ ಬಟ್ಟೆಗಳನ್ನು ಧರಿಸಲು ಕೊಟ್ಟರು.
ಜೆಕರ್ಯ 3 : 6 (ERVKN)
ಆಗ ಯೆಹೋವನ ದೂತನು ಯೆಹೋಶುವನಿಗೆ ಹೀಗೆ ಹೇಳಿದನು.
ಜೆಕರ್ಯ 3 : 7 (ERVKN)
ಸರ್ವಶಕ್ತನಾದ ಯೆಹೋವನು ಹೀಗೆನ್ನುತ್ತಾನೆ,
“ನಾನು ಹೇಳುವ ರೀತಿಯಲ್ಲಿ ಜೀವಿಸು. ನಾನು ಹೇಳುವ ರೀತಿಯಲ್ಲಿ ನಡೆ.
ನೀನು ನನ್ನ ಆಲಯದ ಮುಖ್ಯಾಧಿಕಾರಿಯಾಗುವಿ. ಅದರ ಅಂಕಣಗಳನ್ನು ನೀನು ನೋಡಿಕೊಳ್ಳುವಿ.
ಇಲ್ಲಿ ನಿಂತಿರುವವರೊಂದಿಗೆ ನೀನು ಪ್ರವೇಶಿಸಬಹುದು.
ಜೆಕರ್ಯ 3 : 8 (ERVKN)
ಪ್ರಧಾನ ಯಾಜಕನಾದ ಯೆಹೋಶುವನೇ, ಅವನೊಂದಿಗೆ ಸೇವೆಮಾಡುವ ಇತರ ಯಾಜಕರೇ, ನನ್ನ ಮಾತಿಗೆ ಕಿವಿಗೊಡಿರಿ.
ಈ ಗಂಡಸರು ಮುಂದೆ ಏನಾಗಬಹುದೆಂಬುದಕ್ಕೆ ನಿದರ್ಶನವಾಗಿದ್ದಾರೆ. ಆಗ ನಾನು ನನ್ನ ವಿಶೇಷ ಸೇವಕನನ್ನು ಕರೆತರುವೆನು. ಆತನ ಹೆಸರು ಕೊಂಬೆ.
ಜೆಕರ್ಯ 3 : 9 (ERVKN)
ನೋಡು, ನಾನು ಯೆಹೋಶುವನ ಮುಂದೆ ಒಂದು ವಿಶೇಷ ಕಲ್ಲನ್ನಿಡುವೆನು. ಆ ಕಲ್ಲಿನಲ್ಲಿ ಏಳು ಬದಿಗಳಿವೆ.
ನಾನು ಆ ವಿಶೇಷ ಕಲ್ಲಿನ ಮೇಲೆ ವಿಶೇಷ ಸಂದೇಶವನ್ನು ಕೆತ್ತುವೆನು. ನಾನು ಆ ದೇಶದ ಪಾಪವನ್ನು ಒಂದು ದಿವಸದಲ್ಲಿ ತೆಗೆದುಹಾಕುವೆನೆಂದು ಅದು ತೋರಿಸುವುದು.”
ಜೆಕರ್ಯ 3 : 10 (ERVKN)
ಸರ್ವಶಕ್ತನಾದ ಯೆಹೋವನು ಹೇಳುವುದೇನೆಂದರೆ:
“ಆ ದಿವಸಗಳಲ್ಲಿ ಜನರು ತಮ್ಮ ಸ್ನೇಹಿತರೊಂದಿಗೆ ಕುಳಿತುಕೊಂಡು ಸಂಭಾಷಿಸುವರು.
ಅಂಜೂರದ ಮರದ ನೆರಳಿನಲ್ಲಿಯೂ ದ್ರಾಕ್ಷಿತೋಟಗಳ ನೆರಳಿನಲ್ಲಿಯೂ ಕುಳಿತುಕೊಂಡು ಮಾತನಾಡಲು ಪರಸ್ಪರ ಆಮಂತ್ರಿಸುವರು.”

1 2 3 4 5 6 7 8 9 10