ಪ್ರಕಟನೆ 4 : 1 (ERVKN)
ಯೋಹಾನನು ಪರಲೋಕವನ್ನು ನೋಡಿದನು ನಂತರ ನಾನು ನೋಡಿದಾಗ ನನ್ನ ಎದುರಿನಲ್ಲಿ ಪರಲೋಕದ ಬಾಗಿಲು ತೆರೆದಿರುವುದನ್ನು ಕಂಡೆನು. ನನ್ನ ಜೊತೆಯಲ್ಲಿ ಮೊದಲು ಮಾತನಾಡಿದ್ದ ಧ್ವನಿಯೇ ಮತ್ತೆ ನನ್ನೊಂದಿಗೆ ಮಾತಾಡಿತು. ಆ ಧ್ವನಿಯು ತುತೂರಿಯ ಧ್ವನಿಯಂತಿತ್ತು. ಆ ಧ್ವನಿಯು, “ಇಲ್ಲಿಗೆ ಹತ್ತಿ ಬಾ. ಮುಂದೆ ಸಂಭವಿಸುವುದನ್ನು ನಾನು ನಿನಗೆ ತೋರಿಸುತ್ತೇನೆ” ಎಂದು ಹೇಳಿತು.
ಪ್ರಕಟನೆ 4 : 2 (ERVKN)
ಕೂಡಲೇ ನಾನು ಪವಿತ್ರಾತ್ಮನ ವಶನಾದೆನು. ಪರಲೋಕದಲ್ಲಿ ನನ್ನೆದುರಿಗೆ ಒಂದು ಸಿಂಹಾಸನವಿತ್ತು. ಯಾರೋ ಒಬ್ಬನು ಆ ಸಿಂಹಾಸನದ ಮೇಲೆ ಕುಳಿತಿದ್ದನು.
ಪ್ರಕಟನೆ 4 : 3 (ERVKN)
ಸಿಂಹಾಸನದ ಮೇಲೆ ಕುಳಿತಿದ್ದಾತನು ಅಮೂಲ್ಯವಾದ ಸೂರ್ಯಕಾಂತ, ಪದ್ಮರಾಗ ಮಣಿಗಳಂತೆ ಕಾಣುತ್ತಿದ್ದನು. ಸಿಂಹಾಸನದ ಸುತ್ತಲೂ ಪಚ್ಚೆಬಣ್ಣದ ಕಾಮನಬಿಲ್ಲಿತ್ತು.
ಪ್ರಕಟನೆ 4 : 4 (ERVKN)
ಆ ಸಿಂಹಾಸನದ ಸುತ್ತಲೂ ಇಪ್ಪತ್ನಾಲ್ಕು ಮಂದಿ ಹಿರಿಯರು ಕುಳಿತುಕೊಂಡಿದ್ದರು. ಅವರು ಬಿಳಿ ವಸ್ತ್ರಗಳನ್ನು ಧರಿಸಿದ್ದರು. ಅವರ ತಲೆಗಳ ಮೇಲೆ ಚಿನ್ನದ ಕಿರೀಟಗಳಿದ್ದವು.
ಪ್ರಕಟನೆ 4 : 5 (ERVKN)
ಆ ಸಿಂಹಾಸನದಿಂದ ಸಿಡಿಲಿನ ಆರ್ಭಟವೂ ಗುಡುಗಿನ ಧ್ವನಿಯೂ ಬರುತ್ತಿತ್ತು. ಆ ಸಿಂಹಾಸನದ ಮುಂದೆ ಏಳು ದೀಪಗಳು ಬೆಳಗುತ್ತಿದ್ದವು. ಈ ದೀಪಗಳು ದೇವರ ಏಳು ಆತ್ಮಗಳಾಗಿದ್ದವು.
ಪ್ರಕಟನೆ 4 : 6 (ERVKN)
ಇದಲ್ಲದೆ ಸಿಂಹಾಸನದ ಮುಂದೆ ಗಾಜಿನ ಸಮುದ್ರದಂತೆ ಕಾಣುವ ವಸ್ತುವೊಂದಿತ್ತು. ಅದು ಸ್ಫಟಿಕದಂತೆ ಸ್ಪಚ್ಛವಾಗಿತ್ತು. ಆ ಸಿಂಹಾಸನದ ಮುಂದೆ ಮತ್ತು ಅದರ ಪ್ರತಿಯೊಂದು ಮಗ್ಗುಲಿನಲ್ಲೂ ನಾಲ್ಕು ಜೀವಿಗಳಿದ್ದವು. ಈ ಜೀವಿಗಳ ಹಿಂಭಾಗದಲ್ಲೆಲ್ಲಾ ಮತ್ತು ಮುಂಭಾಗದಲ್ಲೆಲ್ಲಾ ಕಣ್ಣುಗಳು ತುಂಬಿದ್ದವು.
ಪ್ರಕಟನೆ 4 : 7 (ERVKN)
ಮೊದಲನೆ ಜೀವಿಯು ಸಿಂಹದಂತಿತ್ತು. ಎರಡನೆಯದು ಹಸುವಿನಂತಿತ್ತು. ಮೂರನೆಯದರ ಮುಖ ಮಾನವನ ಮುಖದಂತಿತ್ತು. ನಾಲ್ಕನೆಯದು ಹಾರುವ ಗರುಡನಂತಿತ್ತು. *ನೋಡಿರಿ: ಯೆಹೆಜ್ಕೇಲ 1:4-14.
ಪ್ರಕಟನೆ 4 : 8 (ERVKN)
ಈ ನಾಲ್ಕು ಜೀವಿಗಳಲ್ಲಿ ಪ್ರತಿಯೊಂದಕ್ಕೂ ಆರು ರೆಕ್ಕೆಗಳಿದ್ದವು. ಈ ಜೀವಿಗಳ ಹೊರಭಾಗದಲ್ಲೆಲ್ಲಾ ಮತ್ತು ಒಳಭಾಗದಲ್ಲೆಲ್ಲಾ ಕಣ್ಣುಗಳಿದ್ದವು. ಈ ನಾಲ್ಕು ಜೀವಿಗಳು ಹಗಲಿರುಳು ಎಡಬಿಡದೆ ಹೀಗೆ ಹೇಳುತ್ತಿದ್ದವು: “ದೇವರಾದ ಪ್ರಭು, ಪರಿಶುದ್ಧನು, ಪರಿಶುದ್ಧನು, ಪರಿಶುದ್ಧನು; ಆತನು ಸರ್ವಶಕ್ತನು.
ಆತನು ಭೂತಕಾಲದಲ್ಲಿ ಇದ್ದವನೂ ವರ್ತಮಾನಕಾಲದಲ್ಲಿ ಇರುವಾತನೂ ಮುಂದೆ ಬರುವಾತನೂ ಆಗಿದ್ದಾನೆ.”
ಪ್ರಕಟನೆ 4 : 9 (ERVKN)
ಈ ಜೀವಿಗಳು, ಸಿಂಹಾಸನದ ಮೇಲೆ ಕುಳಿತಿರುವಾತನಿಗೆ ಪ್ರಭಾವ, ಗೌರವ ಮತ್ತು ಕೃತಜ್ಞತೆಗಳನ್ನು ಸಲ್ಲಿಸುತ್ತಿದ್ದವು. ಯುಗಯುಗಾಂತರಗಳಲ್ಲಿಯೂ ಜೀವಿಸುವವನು ಆತನೇ.
ಪ್ರಕಟನೆ 4 : 10 (ERVKN)
ಇಪ್ಪತ್ತನಾಲ್ಕು ಮಂದಿ ಹಿರಿಯರು ತಮ್ಮ ಕಿರೀಟಗಳನ್ನು ತೆಗೆದು ಬದಿಗಿಟ್ಟು, ಸಿಂಹಾಸನದ ಮೇಲೆ ಕುಳಿತಿರುವಾತನಿಗೆ ಮೊಣಕಾಲೂರಿ ನಮಸ್ಕರಿಸಿ, ಯುಗಯುಗಾಂತರಗಳಲ್ಲಿಯೂ ಜೀವಿಸುವ ಆತನನ್ನು ಆರಾಧಿಸುತ್ತಾ ಇಂತೆಂದರು:
ಪ್ರಕಟನೆ 4 : 11 (ERVKN)
“ನಮ್ಮ ಪ್ರಭುವೇ, ನಮ್ಮ ದೇವರೇ!
ನೀನು ಪ್ರಭಾವ, ಗೌರವ, ಅಧಿಕಾರಗಳನ್ನು ಪಡೆಯಲು ಯೋಗ್ಯನಾಗಿರುವೆ. ಎಲ್ಲವನ್ನೂ ನಿರ್ಮಿಸಿದಾತನು ನೀನೇ.
ನಿನ್ನ ಚಿತ್ತದಂತೆಯೇ ಎಲ್ಲವೂ ಇದ್ದವು; ಎಲ್ಲವೂ ಸೃಷ್ಟಿಗೊಂಡವು.”
❮
❯
1
2
3
4
5
6
7
8
9
10
11