ಪ್ರಕಟನೆ 3 : 1 (ERVKN)
“ಸಾರ್ದಿಸಿನಲ್ಲಿರುವ ಸಭೆಯ ದೂತನಿಗೆ ಇದನ್ನು ಬರೆ: “ಏಳು ಆತ್ಮಗಳು ಮತ್ತು ಏಳು ನಕ್ಷತ್ರಗಳನ್ನು ಹೊಂದಿರುವಾತನು ಹೇಳುವುದೇನೆಂದರೆ: ನೀನು ಮಾಡುತ್ತಿರುವುದು ನನಗೆ ತಿಳಿದಿದೆ. ನೀನು ಜೀವವುಳ್ಳವನೆಂದು ಜನರು ಹೇಳುತ್ತಾರೆ. ಆದರೆ ನೀನು ನಿಜವಾಗಿಯೂ ಸತ್ತು ಹೋಗಿರುವೆ.
ಪ್ರಕಟನೆ 3 : 2 (ERVKN)
ಎದ್ದೇಳು! ಸಾಯುವ ಸ್ಥಿತಿಯಲ್ಲಿರುವಂಥವುಗಳನ್ನು ಬಲಪಡಿಸು. ನೀನು ಮಾಡಿರುವ ಕಾರ್ಯಗಳನ್ನು ನನ್ನ ದೇವರ ದೃಷ್ಟಿಯಲ್ಲಿ ನಿಷ್ಕಳಂಕವಾಗಿರುವುದನ್ನು ನಾನು ಕಾಣಲಿಲ್ಲ.
ಪ್ರಕಟನೆ 3 : 3 (ERVKN)
ಆದ್ದರಿಂದ ನೀನು ಸ್ವೀಕರಿಸಿಕೊಂಡ ಮತ್ತು ಕೇಳಿದ ಉಪದೇಶವನ್ನು ಮರೆಯದೆ ಅದಕ್ಕೆ ವಿಧೇಯನಾಗಿರು. ನಿನ್ನ ಹೃದಯವನ್ನೂ ಜೀವಿತವನ್ನೂ ಪರಿವರ್ತಿಸಿಕೊ! ಎಚ್ಚರಗೊಳ್ಳು! ಇಲ್ಲವಾದರೆ, ನಾನು ಕಳ್ಳನಂತೆ ನಿನ್ನ ಬಳಿಗೆ ಬಂದು ಆಶ್ಚರ್ಯಗೊಳಿಸುತ್ತೇನೆ. ನಾನು ಯಾವಾಗ ಬರುತ್ತೇನೆ ಎಂಬುದು ನಿನಗೆ ಗೊತ್ತಿರುವುದಿಲ್ಲ.
ಪ್ರಕಟನೆ 3 : 4 (ERVKN)
“ನಿಮ್ಮ ಸಭೆಗೆ ಸೇರಿದ ಸಾರ್ದಿಸಿನ ಕೆಲವರು ಇನ್ನೂ ಪರಿಶುದ್ಧರಾಗಿದ್ದಾರೆ. ಅವರು ತಮ್ಮ ಬಟ್ಟೆಗಳನ್ನು ಕೊಳಕು ಮಾಡಿಕೊಂಡಿಲ್ಲ. ಅವರು ನನ್ನೊಂದಿಗೆ ನಡೆಯುವರು. ಅವರು ಯೋಗ್ಯರಾಗಿರುವುದರಿಂದ ಬಿಳಿವಸ್ತ್ರಗಳನ್ನು ಧರಿಸುತ್ತಾರೆ.
ಪ್ರಕಟನೆ 3 : 5 (ERVKN)
ಜಯಗಳಿಸುವ ಪ್ರತಿಯೊಬ್ಬನೂ ಈ ಜನರಂತೆ ಬಿಳಿಯ ವಸ್ತ್ರಗಳನ್ನು ಧರಿಸುತ್ತಾನೆ. ಆ ವ್ಯಕ್ತಿಯ ಹೆಸರನ್ನು ನಾನು ಜೀವಭಾದ್ಯರ ಪುಸ್ತಕದಿಂದ ತೆಗೆದು ಹಾಕುವುದಿಲ್ಲ. ಅವನು ನನಗೆ ಸೇರಿದವನೆಂದು ನನ್ನ ತಂದೆಯ ಮುಂದೆಯೂ ಆತನ ದೂತರ ಮುಂದೆಯೂ ಹೇಳುತ್ತೇನೆ.
ಪ್ರಕಟನೆ 3 : 6 (ERVKN)
ಪವಿತ್ರಾತ್ಮನು ಸಭೆಗಳಿಗೆ ಹೇಳುತ್ತಿರುವ ಈ ಸಂಗತಿಗಳನ್ನು ಕೇಳುತ್ತಿರುವವನೇ, ಗಮನವಿಟ್ಟು ಆಲಿಸು.
ಪ್ರಕಟನೆ 3 : 7 (ERVKN)
ಫಿಲದೆಲ್ಫಿಯದಲ್ಲಿರುವ ಸಭೆಗೆ ಯೇಸುವಿನ ಪತ್ರ “ಫಿಲದೆಲ್ಫಿಯದಲ್ಲಿರುವ ಸಭೆಯ ದೂತನಿಗೆ ಇದನ್ನು ಬರೆ: “ಪವಿತ್ರನೂ ಸತ್ಯವಂತನೂ ಆಗಿರುವಾತನು ನೀಡುವ ಸಂದೇಶವಿದು: ದಾವೀದನ ಬೀಗದ ಕೈ ನನ್ನಲ್ಲಿದೆ. ನಾನು ತೆರೆದದ್ದನ್ನು ಯಾರೂ ಮುಚ್ಚಲಾರರು; ಉಲ್ಲೇಖನ: ಯೆಶಾಯ 22:22. ಮುಚ್ಚಿದ್ದನ್ನು ಯಾರೂ ತೆರೆಯಲಾರರು.
ಪ್ರಕಟನೆ 3 : 8 (ERVKN)
“ನೀನು ಮಾಡುವ ಕಾರ್ಯಗಳು ನನಗೆ ತಿಳಿದಿವೆ. ನಿನ್ನ ಮುಂದೆ ತೆರೆದ ಬಾಗಿಲನ್ನು ಇಟ್ಟಿದ್ದೇನೆ. ಅದನ್ನು ಯಾರೂ ಮುಚ್ಚಲಾರರು. ನೀನು ದುರ್ಬಲನೆಂಬುದು ನನಗೆ ತಿಳಿದಿದೆ. ಆದರೆ ನೀನು ನನ್ನ ಬೋಧನೆಯನ್ನು ಅನುಸರಿಸಿದೆ. ನನ್ನ ಹೆಸರನ್ನು ಹೇಳಲು ನೀನು ಹಿಂಜರಿಯಲಿಲ್ಲ.
ಪ್ರಕಟನೆ 3 : 9 (ERVKN)
ಆಲಿಸು! ಅಲ್ಲಿ ಸೈತಾನನ ಗುಂಪಿಗೆ ಸೇರಿದವರಿದ್ದಾರೆ. ಆ ಜನರು ತಮ್ಮನ್ನು ಯೆಹೂದ್ಯರೆಂದು ಹೇಳಿಕೊಳ್ಳುತ್ತಾರೆ. ಆದರೆ ಅದು ಸುಳ್ಳು. ಅವರು ನಿಜವಾದ ಯೆಹೂದ್ಯರಲ್ಲ. ಆ ಜನರು ನಿನ್ನ ಮುಂದೆ ಬಂದು ನಿನ್ನ ಪಾದಗಳಿಗೆ ಅಡ್ಡಬಿದ್ದು ನಮಸ್ಕರಿಸುವಂತೆ ಮಾಡುತ್ತೇನೆ. ನಾನು ಪ್ರೀತಿಸಿದ ಜನರು ನೀವೇ ಎಂಬುದನ್ನು ಆಗ ಅವರು ತಿಳಿದುಕೊಳ್ಳುತ್ತಾರೆ.
ಪ್ರಕಟನೆ 3 : 10 (ERVKN)
ನೀನು ನನ್ನ ಆಜ್ಞೆಯನ್ನು ಸಹನೆಯಿಂದ ಮತ್ತು ತಾಳ್ಮೆಯಿಂದ ಅನುಸರಿಸಿದೆ. ಆದ್ದರಿಂದ ಈ ಲೋಕಕ್ಕೆಲ್ಲಾ ಉಂಟಾಗುವ ಕಡುಶೋಧನೆಯಿಂದ ನಾನು ನಿನ್ನನ್ನು ತಪ್ಪಿಸುತ್ತೇನೆ. ಭೂನಿವಾಸಿಗಳೆಲ್ಲರನ್ನು ಈ ಶೋಧನೆಯು ಪರಿಶೋಧಿಸುತ್ತದೆ.
ಪ್ರಕಟನೆ 3 : 11 (ERVKN)
“ನಾನು ಬೇಗನೆ ಬರುತ್ತೇನೆ. ಈಗ ನೀನಿರುವಂತೆಯೇ ಇರು. ಆಗ ಯಾರೂ ನಿನ್ನ ಕಿರೀಟವನ್ನು ಕಸಿದುಕೊಳ್ಳಲಾರರು.
ಪ್ರಕಟನೆ 3 : 12 (ERVKN)
ಜಯಗಳಿಸಿದ ವ್ಯಕ್ತಿಯನ್ನು ನನ್ನ ದೇವರ ಆಲಯದಲ್ಲಿ ಆಧಾರಸ್ತಂಭವನ್ನಾಗಿ ಮಾಡುವೆನು. ಅವನು ದೇವರ ಆಲಯವನ್ನು ಮತ್ತೆಂದಿಗೂ ಬಿಟ್ಟುಹೋಗುವ ಅಗತ್ಯವಿಲ್ಲ. ನನ್ನ ದೇವರ ಹೆಸರನ್ನೂ ನನ್ನ ದೇವರ ಪಟ್ಟಣದ ಹೆಸರನ್ನೂ ಅವನ ಮೇಲೆ ಬರೆಯುತ್ತೇನೆ. ಹೊಸ ಜೆರುಸಲೇಮೇ ಆ ಪಟ್ಟಣ. ಆ ಪಟ್ಟಣವು ನನ್ನ ದೇವರ ಬಳಿಯಿಂದ ಪರಲೋಕದಿಂದ ಇಳಿದುಬರುತ್ತದೆ. ನನ್ನ ಹೊಸ ಹೆಸರನ್ನೂ ಅವನ ಮೇಲೆ ಬರೆಯುತ್ತೇನೆ.
ಪ್ರಕಟನೆ 3 : 13 (ERVKN)
ಪವಿತ್ರಾತ್ಮನು ಸಭೆಗಳಿಗೆ ಹೇಳುತ್ತಿರುವ ಈ ಸಂಗತಿಗಳನ್ನು ಕೇಳುತ್ತಿರುವವನೇ, ಗಮನವಿಟ್ಟು ಆಲಿಸು.
ಪ್ರಕಟನೆ 3 : 14 (ERVKN)
ಲವೊದಿಕೀಯದ ಸಭೆಗೆ ಯೇಸುವಿನ ಪತ್ರ “ಲವೊದಿಕೀಯದ ಸಭೆಗೆ ಈ ಪತ್ರವನ್ನು ಬರೆ: “ಆಮೆನ್ *ಆಮೆನ್ ಇಲ್ಲಿ ಇದಕ್ಕೆ ಯೇಸುಕ್ರಿಸ್ತ ಎಂಬ ಹೆಸರಿಗೆ ಅರ್ಥೈಸಲಾಗಿದೆ. ಈ ಹೀಬ್ರೂ ಪದದ ಅರ್ಥ ಹಾಗೆಯೇ ಆಗಲಿ ಅಥವಾ ನಿಜವಾಗಲಿ. ಎಂಬಾತನು ಅಂದರೆ ನಂಬಿಗಸ್ತನೂ ಸತ್ಯಸಾಕ್ಷಿಯೂ ದೇವರ ಸೃಷ್ಟಿಗೆ ಅಧಿಪತಿಯೂ ಆಗಿರುವಾತನು ಹೇಳುವುದೇನೆಂದರೆ:
ಪ್ರಕಟನೆ 3 : 15 (ERVKN)
“ನೀನು ಮಾಡುವುದೆಲ್ಲಾ ನನಗೆ ತಿಳಿದದೆ. ನೀನು ಬಿಸಿಯೂ ಇಲ್ಲ, ತಣ್ಣಗೂ ಇಲ್ಲ! ನೀನು ಬಿಸಿಯಾದರೂ ಇರಬೇಕಿತ್ತು ಅಥವಾ ತಣ್ಣಗಾದರೂ ಇರಬೇಕಿತ್ತು!
ಪ್ರಕಟನೆ 3 : 16 (ERVKN)
ಆದರೆ ನೀನು ಬಿಸಿಯೂ ಇಲ್ಲದೆ ತಣ್ಣಗೂ ಇಲ್ಲದೆ ಬೆಚ್ಚಗಿರುವುದರಿಂದ ನಿನ್ನನ್ನು ನನ್ನ ಬಾಯಿಂದ ಉಗುಳಿ ಬಿಡುವೆನು.
ಪ್ರಕಟನೆ 3 : 17 (ERVKN)
ನೀನು ನಿನ್ನನ್ನು ಐಶ್ವರ್ಯವಂತನೆಂದು ಹೇಳಿಕೊಳ್ಳುತ್ತಿರುವೆ. ನೀನು ಐಶ್ವರ್ಯವಂತನಾಗಿರುವುದರಿಂದ ನಿನಗೇನೂ ಕೊರತೆ ಇಲ್ಲವೆಂದು ನೀನು ಯೋಚಿಸಿಕೊಂಡಿರುವೆ. ಆದರೆ ನಿಜವಾಗಿಯೂ ನೀನು ದುರವಸ್ಥೆಗೆ ಒಳಗಾದವನಾಗಿರುವೆ, ದೌರ್ಭಾಗ್ಯನಾಗಿರುವೆ, ದರಿದ್ರನಾಗಿರುವೆ, ಕುರುಡನಾಗಿರುವೆ ಮತ್ತು ಬೆತ್ತಲಾಗಿರುವೆ. ಆದರೂ ಇದು ನಿನಗೆ ತಿಳಿದೇ ಇಲ್ಲ.
ಪ್ರಕಟನೆ 3 : 18 (ERVKN)
ಬೆಂಕಿಯಲ್ಲಿ ಪುಟಹಾಕಿದ ಅಪ್ಪಟ ಚಿನ್ನವನ್ನು ನೀನು ನನ್ನಿಂದ ಕೊಂಡುಕೊಳ್ಳಬೇಕೆಂದು ನಾನು ಸಲಹೆ ನೀಡುತ್ತೇನೆ. ಆಗ ನೀನು ನಿಜವಾಗಿಯೂ ಶ್ರೀಮಂತನಾಗಲು ಸಾಧ್ಯ. ನಾನು ನಿನಗೆ ಹೇಳುವುದೇನೆಂದರೆ: ಬಿಳಿವಸ್ತ್ರಗಳನ್ನು ಕೊಂಡುಕೊ. ಆಗ ನೀನು ನಾಚಿಕೆಕರವಾದ ನಿನ್ನ ಬೆತ್ತಲೆಯನ್ನು ಮುಚ್ಚಿಕೊಳ್ಳಲು ಸಾಧ್ಯವಾಗುವುದು. ನೀನು ನಿನ್ನ ಕಣ್ಣುಗಳಿಗೆ ಹಚ್ಚಲು ಔಷಧಿಯನ್ನು ಕೊಂಡುಕೊಳ್ಳಬೇಕೆಂತಲೂ ನಾನು ನಿನಗೆ ಹೇಳುತ್ತೇನೆ. ಆಗ ನಿನಗೆ ನಿಜವಾಗಿಯೂ ದೃಷ್ಟಿ ಬರುವುದು.
ಪ್ರಕಟನೆ 3 : 19 (ERVKN)
“ನಾನು ಪ್ರೀತಿಸುವ ಜನರನ್ನೇ ನಾನು ತಿದ್ದುತ್ತೇನೆ ಮತ್ತು ಶಿಕ್ಷಿಸುತ್ತೇನೆ. ಆದ್ದರಿಂದ ನೀವು ಆಸಕ್ತಿಯಿಂದಿರಿ! ದೇವರ ಕಡೆಗೆ ತಿರುಗಿಕೊಳ್ಳಿರಿ.
ಪ್ರಕಟನೆ 3 : 20 (ERVKN)
ಇಗೋ, ನಾನು ಬಾಗಿಲ ಬಳಿ ನಿಂತುಕೊಂಡು ತಟ್ಟುತ್ತಿದ್ದೇನೆ. ಯಾವನಾದರೂ ನನ್ನ ಸ್ವರವನ್ನು ಕೇಳಿ ಬಾಗಿಲನ್ನು ತೆರೆದರೆ, ನಾನು ಒಳಗೆ ಬಂದು ಅವನೊಂದಿಗೆ ಊಟ ಮಾಡುತ್ತೇನೆ ಮತ್ತು ಅವನು ನನ್ನೊಂದಿಗೆ ಊಟ ಮಾಡುತ್ತಾನೆ.
ಪ್ರಕಟನೆ 3 : 21 (ERVKN)
“ನಾನು ಜಯಗಳಿಸಿ ನನ್ನ ತಂದೆಯೊಡನೆ ಆತನ ಸಿಂಹಾಸನದ ಮೇಲೆ ಕುಳಿತುಕೊಂಡೆನು. ಅಂತೆಯೇ ಜಯಗಳಿಸುವ ಪ್ರತಿಯೊಬ್ಬನೂ ನನ್ನ ಸಂಗಡ ನನ್ನ ಸಿಂಹಾಸನದ ಮೇಲೆ ಕುಳಿತುಕೊಳ್ಳುವಂತೆ ಮಾಡುವೆನು.
ಪ್ರಕಟನೆ 3 : 22 (ERVKN)
ಪವಿತ್ರಾತ್ಮನು ಸಭೆಗಳಿಗೆ ಹೇಳುತ್ತಿರುವ ಈ ಸಂಗತಿಗಳನ್ನು ಕೇಳುತ್ತಿರುವವನೇ, ಗಮನವಿಟ್ಟು ಆಲಿಸು.”

1 2 3 4 5 6 7 8 9 10 11 12 13 14 15 16 17 18 19 20 21 22