ಕೀರ್ತನೆಗಳು 73 : 1 (ERVKN)
ದೇವರು ಇಸ್ರೇಲಿಗೆ ಒಳ್ಳೆಯವನೇ ನಿಜ! ಶುದ್ಧ ಹೃದಯವುಳ್ಳವರಿಗೆ ದೇವರು ಒಳ್ಳೆಯವನೇ ಸರಿ!
ಕೀರ್ತನೆಗಳು 73 : 2 (ERVKN)
ಆದರೆ ನನ್ನ ಕಾಲುಗಳು ಜಾರಿದವು; ನನ್ನ ಹೆಜ್ಜೆಗಳು ತಪ್ಪಿದವು.
ಕೀರ್ತನೆಗಳು 73 : 3 (ERVKN)
ದುಷ್ಟರ ಏಳಿಗೆಯನ್ನು ಕಂಡು ಗರ್ವಿಷ್ಠರ ಮೇಲೆ ಅಸೂಯೆಗೊಂಡೆನು.
ಕೀರ್ತನೆಗಳು 73 : 4 (ERVKN)
ಅವರು ಆರೋಗ್ಯವಂತರಾಗಿದ್ದಾರೆ. ಜೀವನೋಪಾಯಕ್ಕಾಗಿ ಅವರು ಹೋರಾಡಬೇಕಿಲ್ಲ. *ಅವರು ಹೋರಾಡಬೇಕಿಲ್ಲ ಅಕ್ಷರಶಃ, “ಅವರ ಮರಣವು ನಿರ್ಬಾಧಕವಾಗಿದೆ.”
ಕೀರ್ತನೆಗಳು 73 : 5 (ERVKN)
ಆ ಗರ್ವಿಷ್ಠರು ನಮ್ಮಂತೆ ಕಷ್ಟಪಡುವುದಿಲ್ಲ. ಅವರಿಗೆ ಬೇರೆಯವರಂತೆ ತೊಂದರೆಗಳಿಲ್ಲ.
ಕೀರ್ತನೆಗಳು 73 : 6 (ERVKN)
ಆದ್ದರಿಂದ ಗರ್ವವು ಅವರಿಗೆ ಆಭರಣವಾಗಿದೆ; ದ್ವೇಷವು ಅವರಿಗೆ ಉಡುಪಾಗಿದೆ.
ಕೀರ್ತನೆಗಳು 73 : 7 (ERVKN)
ಅವರ ಕಣ್ಣುಗಳು ಕೊಬ್ಬಿವೆ; ಅವರ ಮನಸ್ಸು ದುಷ್ಕಲ್ಪನೆಗಳಿಂದ ತುಂಬಿತುಳುಕುತ್ತದೆ.
ಕೀರ್ತನೆಗಳು 73 : 8 (ERVKN)
ಅವರು ಗೇಲಿಮಾಡುತ್ತಾ ಬೇರೆಯವರ ವಿರುದ್ಧ ಕೆಟ್ಟದ್ದನ್ನೇ ಮಾತಾಡುವರು. ಗರ್ವಿಷ್ಠರಾದ ಅವರು ಬೇರೆಯವರ ಮೇಲೆ ಬಲಾತ್ಕಾರ ನಡೆಸಲು ಸಂಚು ಮಾಡುವರು.
ಕೀರ್ತನೆಗಳು 73 : 9 (ERVKN)
ಆ ಗರ್ವಿಷ್ಠರು ತಮ್ಮನ್ನು ದೇವರುಗಳೆಂದು ಭಾವಿಸಿಕೊಂಡಿದ್ದಾರೆ, ತಾವೇ ಭೂಮಿಯ ಅಧಿಪತಿಗಳೆಂದು ಆಲೋಚಿಸಿಕೊಂಡಿದ್ದಾರೆ.
ಕೀರ್ತನೆಗಳು 73 : 10 (ERVKN)
ಆದ್ದರಿಂದ ದೇವರ ಮಕ್ಕಳೂ ಅವರ ಪಕ್ಷ ಹಿಡಿಯುವರು; ಅವರು ಹೇಳಿದಂತೆಯೇ ಮಾಡುವರು.
ಕೀರ್ತನೆಗಳು 73 : 11 (ERVKN)
“ನಮ್ಮ ಕಾರ್ಯಗಳು ದೇವರಿಗೆ ಗೊತ್ತಿಲ್ಲ! ಮಹೋನ್ನತನಾದ ದೇವರಿಗೆ ಗೊತ್ತೇ ಇಲ್ಲ!” ಎಂದು ಆ ದುಷ್ಟರು ಹೇಳಿಕೊಳ್ಳುವರು.
ಕೀರ್ತನೆಗಳು 73 : 12 (ERVKN)
ಆ ಗರ್ವಿಷ್ಠರು ದುಷ್ಟರೇ ಸರಿ! ಆದರೂ ಅವರ ಐಶ್ವರ್ಯವು ಹೆಚ್ಚಾಗುತ್ತಲೇ ಇದೆ.
ಕೀರ್ತನೆಗಳು 73 : 13 (ERVKN)
ಹೀಗಿರಲು, ನನ್ನ ಹೃದಯವನ್ನು ನಾನೇಕೆ ನಿರ್ಮಲಗೊಳಿಸಿಕೊಳ್ಳಲಿ? ನನ್ನ ಕೈಗಳನ್ನು ನಾನೇಕೆ ಸ್ವಚ್ಛಗೊಳಿಸಿಕೊಳ್ಳಲಿ?
ಕೀರ್ತನೆಗಳು 73 : 14 (ERVKN)
ದೇವರೇ ದಿನವೆಲ್ಲಾ ನಾನು ಕಷ್ಟಪಡುತ್ತಿರುವೆ. ಪ್ರತಿ ಮುಂಜಾನೆಯೂ ನೀನು ನನ್ನನ್ನು ಶಿಕ್ಷಿಸುವೆ.
ಕೀರ್ತನೆಗಳು 73 : 15 (ERVKN)
ಇವುಗಳ ಬಗ್ಗೆ ನಾನು ಬೇರೆಯವರಿಗೆ ಹೇಳಬೇಕೆಂದಿದ್ದೆ. ಒಂದುವೇಳೆ ಹೇಳಿದ್ದರೆ, ನಿನ್ನ ಜನರಿಗೆ ದ್ರೋಹಿಯಾಗುತ್ತಿದ್ದೆ.
ಕೀರ್ತನೆಗಳು 73 : 16 (ERVKN)
ಇವುಗಳನ್ನು ಅರ್ಥಮಾಡಿಕೊಳ್ಳಲು ನಾನು ಬಹಳವಾಗಿ ಪ್ರಯತ್ನಿಸಿದರೂ ನಿನ್ನ ಆಲಯಕ್ಕೆ ಹೋಗುವವರೆಗೂ ಕಷ್ಟಕರವಾಗಿತ್ತು.
ಕೀರ್ತನೆಗಳು 73 : 17 (ERVKN)
ಆದರೆ ನಿನ್ನ ಆಲಯಕ್ಕೆ ಹೋದಮೇಲೆ ನನಗೆ ಅರ್ಥವಾಯಿತು.
ಕೀರ್ತನೆಗಳು 73 : 18 (ERVKN)
ನೀನು ಅವರನ್ನು ಅಪಾಯಕರವಾದ ಪರಿಸ್ಥಿತಿಯಲ್ಲಿ ಇಟ್ಟಿರುವೆ. ಅವರು ಸುಲಭವಾಗಿ ಬಿದ್ದು ನಾಶವಾಗುವರು.
ಕೀರ್ತನೆಗಳು 73 : 19 (ERVKN)
ಇದ್ದಕ್ಕಿದ್ದಂತೆ ಆಪತ್ತು ಬರುವುದು, ಆಗ ಆ ಗರ್ವಿಷ್ಠರು ನಾಶವಾಗುವರು.
ಭಯಂಕರವಾದ ಸಂಗತಿಗಳು ಅವರಿಗೆ ಸಂಭವಿಸುತ್ತವೆ; ಆಗ ಅವರು ಅಂತ್ಯಗೊಳ್ಳುವರು.
ಕೀರ್ತನೆಗಳು 73 : 20 (ERVKN)
ಯೆಹೋವನೇ, ನಾವು ನಿದ್ರೆಯಿಂದ ಎಚ್ಚರಗೊಂಡಾಗ ಮರೆತುಬಿಡುವ ಕನಸಿನಂತಿದ್ದಾರೆ ಆ ಜನರು.
ನಾವು ಕನಸಿನಲ್ಲಿ ಕಾಣುವ ರಾಕ್ಷಸರಂತೆ ನೀನು ಅವರನ್ನು ಮಾಯಗೊಳಿಸುವೆ.
ಕೀರ್ತನೆಗಳು 73 : 21 (ERVKN)
(21-22) ನಾನು ಬಹು ಮೂಢನಾಗಿದ್ದೆ. ಶ್ರೀಮಂತರ ಕುರಿತಾಗಿಯೂ ದುಷ್ಟರ ಕುರಿತಾಗಿಯೂ ಆಲೋಚಿಸಿ ಗಲಿಬಿಲಿಗೊಂಡೆ.
ದೇವರೇ, ನಾನು ನಿನ್ನ ಮೇಲೆ ಕೋಪಗೊಂಡಿದ್ದೆನು; ಬೇಸರಗೊಂಡಿದ್ದೆನು! ನಾನು ಮೂಢ ಪಶುವಿನಂತೆ ವರ್ತಿಸಿದೆನು.
ಕೀರ್ತನೆಗಳು 73 : 22 (ERVKN)
ಕೀರ್ತನೆಗಳು 73 : 23 (ERVKN)
ಆದರೂ ನಾನು ಯಾವಾಗಲೂ ನಿನ್ನ ಸಂಗಡವಿದ್ದೇನೆ. ನನ್ನ ಕೈಯನ್ನು ಹಿಡಿದುಕೊ.
ಕೀರ್ತನೆಗಳು 73 : 24 (ERVKN)
ನನಗೆ ಉಪದೇಶಿಸುತ್ತಾ ನನ್ನನ್ನು ಮುನ್ನಡೆಸು. ಬಳಿಕ ನಿನ್ನ ಮಹಿಮೆಗೆ ನನ್ನನ್ನು ಸೇರಿಸಿಕೊ.
ಕೀರ್ತನೆಗಳು 73 : 25 (ERVKN)
ಪರಲೋಕದಲ್ಲಿ ನೀನಲ್ಲದೆ ನನಗೆ ಬೇರೆ ಯಾರ ಅಗತ್ಯವಿದೆ? ಈ ಲೋಕದಲ್ಲಿ ನಿನ್ನನ್ನಲ್ಲದೆ ಬೇರೆ ಯಾರನ್ನು ಬಯಸಲಿ?
ಕೀರ್ತನೆಗಳು 73 : 26 (ERVKN)
ನನ್ನ ಹೃದಯವೂ ದೇಹವೂ ನಾಶವಾಗುತ್ತವೆ; ಆದರೆ ಎಂದೆಂದಿಗೂ ನೀನೇ ನನಗೆ ಆಶ್ರಯಸ್ಥಾನವೂ ನನ್ನ ದೇವರೂ ಆಗಿರುವೆ.
ಕೀರ್ತನೆಗಳು 73 : 27 (ERVKN)
ನಿನ್ನನ್ನು ತೊರೆದುಬಿಟ್ಟವರು ನಾಶವಾಗುವರು. ನಿನಗೆ ದ್ರೋಹಮಾಡಿದವರನ್ನೆಲ್ಲ ನೀನು ನಾಶಮಾಡುವೆ.
ಕೀರ್ತನೆಗಳು 73 : 28 (ERVKN)
ನನಗಾದರೋ ದೇವರ ಸಮೀಪದಲ್ಲಿರುವುದೇ ಭಾಗ್ಯವಾಗಿದೆ. ನನ್ನ ಒಡೆಯನಾದ ಯೆಹೋವನನ್ನು ನನ್ನ ಆಶ್ರಯಸ್ಥಾನವನ್ನಾಗಿ ಮಾಡಿಕೊಂಡಿರುವೆ. ದೇವರೇ, ನಿನ್ನ ಎಲ್ಲಾ ಕಾರ್ಯಗಳ ಕುರಿತಾಗಿ ಹೇಳಲು ಬಂದಿರುವೆ.

1 2 3 4 5 6 7 8 9 10 11 12 13 14 15 16 17 18 19 20 21 22 23 24 25 26 27 28