ಕೀರ್ತನೆಗಳು 69 : 1 (ERVKN)
ದೇವರೇ, ನನ್ನನ್ನು ರಕ್ಷಿಸು! ನನ್ನ ಕತ್ತಿನವರೆಗೂ ನೀರು ಏರಿಬಂದಿದೆ.
ಕೀರ್ತನೆಗಳು 69 : 2 (ERVKN)
ನಿಂತುಕೊಳ್ಳಲು ನೆಲೆ ಸಿಕ್ಕುತ್ತಿಲ್ಲ; ಆಳವಾದ ಮರಳಿನೊಳಕ್ಕೆ ಮುಳುಗಿಹೋಗುತ್ತಿದ್ದೇನೆ.
ನಾನು ಆಳವಾದ ನೀರಿನಲ್ಲಿದ್ದೇನೆ. ಅಲೆಗಳು ನನ್ನನ್ನು ಆವರಿಸಿಕೊಳ್ಳುತ್ತಿವೆ.
ಕೀರ್ತನೆಗಳು 69 : 3 (ERVKN)
ಸಹಾಯಕ್ಕಾಗಿ ಕೂಗಿಕೂಗಿ ಬಲಹೀನನಾಗಿರುವೆ. ನನ್ನ ಗಂಟಲು ನೋಯುತ್ತಿದೆ.
ನಿನ್ನ ಸಹಾಯಕ್ಕಾಗಿ ಎದುರುನೋಡುತ್ತಾ ನನ್ನ ಕಣ್ಣುಗಳು ನೋಯುತ್ತಿವೆ.
ಕೀರ್ತನೆಗಳು 69 : 4 (ERVKN)
ಶತ್ರುಗಳು ನನ್ನ ತಲೆಕೂದಲುಗಳಿಗಿಂತ ಹೆಚ್ಚಾಗಿದ್ದಾರೆ. ಅವರು ನಿಷ್ಕಾರಣವಾಗಿ ನನ್ನನ್ನು ದ್ವೇಷಿಸುತ್ತಾರೆ; ನನ್ನನ್ನು ನಾಶಮಾಡಲು ಬಹು ಪ್ರಯತ್ನ ಮಾಡುತ್ತಿದ್ದಾರೆ.
ನನ್ನ ಶತ್ರಗಳು ನನ್ನ ಬಗ್ಗೆ ಸುಳ್ಳು ಹೇಳುವರು. ನಾನು ಕದ್ದಿಲ್ಲದಿದ್ದರೂ ಸುಳ್ಳು ಅಪವಾದ ಹೊರಿಸಿ ನನ್ನಿಂದ ದಂಡ ವಸೂಲಿ ಮಾಡಿದರು.
ಕೀರ್ತನೆಗಳು 69 : 5 (ERVKN)
ದೇವರೇ, ನಾನೇನೂ ತಪ್ಪುಮಾಡಿಲ್ಲವೆಂದು ನಿನಗೆ ಗೊತ್ತಿದೆ. ನನ್ನ ಪಾಪಗಳನ್ನು ನಿನಗೆ ಮರೆಮಾಡಲು ನನ್ನಿಂದಾಗದು.
ಕೀರ್ತನೆಗಳು 69 : 6 (ERVKN)
ಸೇನಾಧೀಶ್ವರನಾದ ನನ್ನ ಯೆಹೋವನೇ, ನಿನ್ನ ಹಿಂಬಾಲಕರಿಗೆ ನನ್ನಿಂದ ನಾಚಿಕೆಯಾಗದಿರಲಿ. ಇಸ್ರೇಲರ ದೇವರೇ, ನಿನ್ನ ಆರಾಧಕರಿಗೆ ನನ್ನಿಂದ ಅವಮಾನವಾಗದಿರಲಿ.
ಕೀರ್ತನೆಗಳು 69 : 7 (ERVKN)
ನಾಚಿಕೆಯು ನನ್ನ ಮುಖವನ್ನು ಕವಿದಿದೆ. ನಿನಗೋಸ್ಕರವಾಗಿ ಈ ನಾಚಿಕೆಯನ್ನು ಹೊತ್ತುಕೊಂಡಿದ್ದೇನೆ.
ಕೀರ್ತನೆಗಳು 69 : 8 (ERVKN)
ನನ್ನ ಸಹೋದರರು ನನ್ನನ್ನು ಅಪರಿಚಿತನಂತೆ ಕಾಣುತ್ತಾರೆ. ನನ್ನ ತಾಯಿಯ ಪುತ್ರರು ನನ್ನನ್ನು ಪರಕೀಯನಂತೆ ಕಾಣುತ್ತಾರೆ.
ಕೀರ್ತನೆಗಳು 69 : 9 (ERVKN)
ನಿನ್ನ ಆಲಯಾಭಿಮಾನವು ನನ್ನನ್ನು ದಹಿಸುತ್ತಿದೆ. ನಿನ್ನನ್ನು ಗೇಲಿಮಾಡುವ ಜನರಿಂದ ನನಗೆ ಅಪಮಾನವಾಗುತ್ತಿದೆ.
ಕೀರ್ತನೆಗಳು 69 : 10 (ERVKN)
ನಾನು ಅಳುತ್ತಾ ಉಪವಾಸಮಾಡುವೆನು. ಅವರು ಅದಕ್ಕೂ ನನ್ನನ್ನು ಗೇಲಿಮಾಡುವರು.
ಕೀರ್ತನೆಗಳು 69 : 11 (ERVKN)
ನಾನು ಶೋಕವಸ್ತ್ರವನ್ನು ಧರಿಸಿಕೊಂಡದ್ದು ಗಾದೆಯ ಮಾತಾಯಿತು.
ಕೀರ್ತನೆಗಳು 69 : 12 (ERVKN)
ಅವರು ನನ್ನ ಬಗ್ಗೆ ಬಹಿರಂಗ ಸ್ಥಳಗಳಲ್ಲಿ ಮಾತಾಡುವರು. ಕುಡುಕರು ನನ್ನ ವಿಷಯದಲ್ಲಿ ಹಾಡನ್ನು ರಚಿಸುವರು.
ಕೀರ್ತನೆಗಳು 69 : 13 (ERVKN)
ಯೆಹೋವನೇ, ನಾನಾದರೋ, ನಿನಗೆ ಮೊರೆಯಿಟ್ಟಿದ್ದೇನೆ; ನಿನ್ನ ಕೃಪೆಗೆ ತಕ್ಕಕಾಲ ಇದೇ.
ದೇವರೇ, ನಿನ್ನ ಮಹಾಪ್ರೀತಿಯಿಂದಲೂ ನಿಶ್ಚಿತವಾದ ರಕ್ಷಣೆಯಿಂದಲೂ ನನಗೆ ಉತ್ತರಿಸು.
ಕೀರ್ತನೆಗಳು 69 : 14 (ERVKN)
ನನ್ನನ್ನು ಕಳ್ಳುಸುಬಿನಿಂದ ಮೇಲೆತ್ತು; ಮುಳುಗಿಹೋಗಲು ಬಿಡಬೇಡ.
ನನ್ನನ್ನು ದ್ವೇಷಿಸುವ ಜನರಿಂದ ನನ್ನನ್ನು ರಕ್ಷಿಸು. ಈ ಆಳವಾದ ನೀರಿನಿಂದ ನನ್ನನ್ನು ರಕ್ಷಿಸು.
ಕೀರ್ತನೆಗಳು 69 : 15 (ERVKN)
ಅಲೆಗಳು ನನ್ನನ್ನು ಮುಳುಗಿಸಲು ಬಿಡಬೇಡ. ಆಳವಾದ ಹಳ್ಳವು ನನ್ನನ್ನು ಎಳೆದುಕೊಳ್ಳಲು ಬಿಡಬೇಡ. ಸಮಾಧಿಯು ನನ್ನನ್ನು ನುಂಗಲು ಬಿಡಬೇಡ.
ಕೀರ್ತನೆಗಳು 69 : 16 (ERVKN)
ಯೆಹೋವನೇ, ನಿನ್ನ ಪ್ರೀತಿ ಎಷ್ಟೋ ಒಳ್ಳೆಯದು. ನಿನ್ನ ಪೂರ್ಣಪ್ರೀತಿಯಿಂದ ನನಗೆ ಉತ್ತರಿಸು. ನಿನ್ನ ಪೂರ್ಣ ಕರುಣೆಯಿಂದ ನನ್ನ ಕಡೆಗೆ ತಿರುಗಿ ಸಹಾಯಮಾಡು.
ಕೀರ್ತನೆಗಳು 69 : 17 (ERVKN)
ನಿನ್ನ ಸೇವಕನಿಗೆ ವಿಮುಖನಾಗಬೇಡ. ನಾನು ಆಪತ್ತಿನಲ್ಲಿದ್ದೇನೆ! ಬೇಗನೆ ನನಗೆ ಸಹಾಯಮಾಡು!
ಕೀರ್ತನೆಗಳು 69 : 18 (ERVKN)
ಬಂದು ನನ್ನ ಪ್ರಾಣವನ್ನು ರಕ್ಷಿಸು. ನನ್ನ ಶತ್ರುಗಳಿಂದ ನನ್ನನ್ನು ವಿಮೋಚಿಸು.
ಕೀರ್ತನೆಗಳು 69 : 19 (ERVKN)
ನನ್ನ ನಾಚಿಕೆ ನಿನಗೆ ಗೊತ್ತಿದೆ. ಶತ್ರುಗಳು ನನಗೆ ಮಾಡಿದ ಅವಮಾನ ನಿನಗೆ ಗೊತ್ತಿದೆ. ಅವರು ಮಾಡಿದ್ದನ್ನೆಲ್ಲಾ ನೀನು ಕಣ್ಣಾರೆ ನೋಡಿರುವೆ.
ಕೀರ್ತನೆಗಳು 69 : 20 (ERVKN)
ಅವಮಾನವು ನನ್ನನ್ನು ಜಜ್ಜಿಹಾಕಿದೆ! ನಾನು ನಾಚಿಕೆಯಿಂದ ಸಾಯುವಂತಿದ್ದೇನೆ.
ಕರುಣಾಳುಗಳನ್ನು ನಿರೀಕ್ಷಿಸಿದೆ, ಆದರೆ ಯಾರೂ ದೊರೆಯಲಿಲ್ಲ.
ಸಂತೈಸುವವರನ್ನು ಹಾರೈಸಿದೆ, ಆದರೆ ಯಾರೂ ಸಿಗಲಿಲ್ಲ.
ಕೀರ್ತನೆಗಳು 69 : 21 (ERVKN)
ಅವರು ನನಗೆ ಕೊಟ್ಟದ್ದು ವಿಷ, ಆಹಾರವಲ್ಲ. ಅವರು ನನಗೆ ಕೊಟ್ಟದ್ದು ಹುಳಿರಸ, ದ್ರಾಕ್ಷಾರಸವಲ್ಲ.
ಕೀರ್ತನೆಗಳು 69 : 22 (ERVKN)
ಅವರ ಮೇಜಿನ ಮೇಲಿರುವ ಆಹಾರ, ಪಾನೀಯಗಳು ಅವರಿಗೆ ವಿಷವಾಗಲಿ.
ಕೀರ್ತನೆಗಳು 69 : 23 (ERVKN)
ಅವರು ಕುರುಡರಾಗಲಿ; ಅವರ ಬೆನ್ನುಗಳು ಗೂನಾಗಲಿ.
ಕೀರ್ತನೆಗಳು 69 : 24 (ERVKN)
ನಿನ್ನ ಕೋಪವನ್ನೆಲ್ಲಾ ಅವರು ಅನುಭವಿಸಲಿ.
ಕೀರ್ತನೆಗಳು 69 : 25 (ERVKN)
ಅವರ ಮನೆಗಳು ಬರಿದಾಗಲಿ; ಅವುಗಳಲ್ಲಿ ಯಾರೂ ವಾಸಿಸದಂತಾಗಲಿ.
ಕೀರ್ತನೆಗಳು 69 : 26 (ERVKN)
ಅವರನ್ನು ದಂಡಿಸು. ಆಗ ಅವರು ಓಡಿಹೋಗುವರು. ಅಲ್ಲದೆ ಅವರಿಗಾದ ನೋವುಗಳು, ಗಾಯಗಳು ಅವರ ಆಡಿಕೆಗೆ ಕಾರಣವಾಗುವವು.
ಕೀರ್ತನೆಗಳು 69 : 27 (ERVKN)
ಅವರ ದುಷ್ಕೃತ್ಯಗಳಿಗಾಗಿ ಅವರನ್ನು ದಂಡಿಸು. ನಿನ್ನ ರಕ್ಷಣೆಯಲ್ಲಿ ಅವರಿಗೆ ಪಾಲುಕೊಡಬೇಡ.
ಕೀರ್ತನೆಗಳು 69 : 28 (ERVKN)
ಜೀವಬಾಧ್ಯರ ಪುಸ್ತಕದಿಂದ ಅವರ ಹೆಸರುಗಳನ್ನು ಅಳಿಸಿಬಿಡು. ನೀತಿವಂತರ ಹೆಸರುಗಳೊಂದಿಗೆ ಅವರು ಹೆಸರುಗಳನ್ನು ಜೀವಬಾಧ್ಯರ ಪುಸ್ತಕದಲ್ಲಿ ಬರೆಯಬೇಡ.
ಕೀರ್ತನೆಗಳು 69 : 29 (ERVKN)
ನಾನು ನೋವಿನಿಂದ ದುಃಖಗೊಂಡಿರುವೆ. ದೇವರೇ, ನನ್ನನ್ನು ಮೇಲೆತ್ತಿ ರಕ್ಷಿಸು!
ಕೀರ್ತನೆಗಳು 69 : 30 (ERVKN)
ನಾನು ದೇವರ ಹೆಸರನ್ನು ಹಾಡಿಕೊಂಡಾಡುವೆನು; ಕೃತಜ್ಞತಾಗೀತೆಯೊಂದಿಗೆ ಆತನನ್ನು ಸ್ತುತಿಸುವೆನು.
ಕೀರ್ತನೆಗಳು 69 : 31 (ERVKN)
ಇದು ಯೆಹೋವನಿಗೆ ಹೋರಿಗಳ ಸರ್ವಾಂಗಹೋಮಕ್ಕಿಂತಲೂ ಬಹು ಪ್ರಿಯವಾದದ್ದು.
ಕೀರ್ತನೆಗಳು 69 : 32 (ERVKN)
ದೇವರನ್ನು ಆರಾಧಿಸಲು ಬಂದ ಬಡವರೇ, ಇದನ್ನು ಕೇಳಿ ಹರ್ಷಿಸಿರಿ.
ಕೀರ್ತನೆಗಳು 69 : 33 (ERVKN)
ಯೆಹೋವನು ಬಡವರಿಗೂ ನಿಸ್ಸಹಾಯಕರಿಗೂ ಕಿವಿಗೊಡುತ್ತಾನೆ. ಸೆರೆಯಲ್ಲಿರುವ ತನ್ನ ಜನರನ್ನು ಸಹ ಕಡೆಗಣಿಸುವುದಿಲ್ಲ.
ಕೀರ್ತನೆಗಳು 69 : 34 (ERVKN)
ಭೂಮ್ಯಾಕಾಶಗಳೇ, ಸಮುದ್ರವೇ, ಸಮುದ್ರದಲ್ಲಿರುವ ಸಮಸ್ತವೇ, ಯೆಹೋವನನ್ನು ಸ್ತುತಿಸಿರಿ!
ಕೀರ್ತನೆಗಳು 69 : 35 (ERVKN)
ಯೆಹೋವನು ಚೀಯೋನನ್ನು ರಕ್ಷಿಸುವನು! ಆತನು ಯೆಹೂದದ ಪಟ್ಟಣಗಳನ್ನು ಮತ್ತೆ ಕಟ್ಟುವನು.
ಆತನ ಜನರು ಅಲ್ಲಿ ವಾಸವಾಗಿದ್ದು ಸ್ವದೇಶವಾಗಿ ಮಾಡಿಕೊಳ್ಳುವರು!
ಕೀರ್ತನೆಗಳು 69 : 36 (ERVKN)
ಆತನ ಸೇವಕರ ಸಂತತಿಗಳವರು ಆ ದೇಶವನ್ನು ಪಡೆದುಕೊಳ್ಳುವರು. ಆತನ ಹೆಸರನ್ನು ಪ್ರೀತಿಸುವ ಜನರು ಅಲ್ಲಿ ವಾಸಿಸುವರು.

1 2 3 4 5 6 7 8 9 10 11 12 13 14 15 16 17 18 19 20 21 22 23 24 25 26 27 28 29 30 31 32 33 34 35 36