ಕೀರ್ತನೆಗಳು 58 : 1 (ERVKN)
ಅಧಿಪತಿಗಳೇ, ನಿಮ್ಮ ತೀರ್ಪುಗಳು ನ್ಯಾಯವಾಗಿವೆಯೋ? ನ್ಯಾಯಾಧಿಪತಿಗಳೇ, ನಿಮ್ಮ ತೀರ್ಪುಗಳು ಯಥಾರ್ಥವಾಗಿವೆಯೋ?
ಕೀರ್ತನೆಗಳು 58 : 2 (ERVKN)
ಇಲ್ಲ, ನಿಮ್ಮ ಆಲೋಚನೆಗಳೆಲ್ಲಾ ದುಷ್ಟತನವೇ; ನೀವು ಭೂಲೋಕದಲ್ಲಿ ತೂಗಿಕೊಡುವುದು ಅನ್ಯಾಯವನ್ನೇ.
ಕೀರ್ತನೆಗಳು 58 : 3 (ERVKN)
ಆ ದುಷ್ಟರು ಹುಟ್ಟಿದಾಕ್ಷಣದಿಂದ ತಪ್ಪನ್ನು ಮಾಡತೊಡಗಿದರು. ಅವರು ಹುಟ್ಟಿದಂದಿನಿಂದ ಸುಳ್ಳುಗಾರರಾಗಿದ್ದಾರೆ.
ಕೀರ್ತನೆಗಳು 58 : 4 (ERVKN)
ಅವರ ಕೋಪವು ನಾಗರಹಾವಿನ ವಿಷದಷ್ಟೇ ಅಪಾಯಕರ. *ವಿಷದಷ್ಟೇ ಅಪಾಯಕರ ಇದು ಶಬ್ದ ಚಮತ್ಕಾರ. ಹೀಬ್ರೂ ಪದ “ಬಿಸಿಕೋಪವು,” “ಸುಡುವ ವಿಷವು” ಎಂಬಂತೆ ಉಚ್ಚರಿಸಲ್ಪಡುತ್ತದೆ. ಕಿವುಡು ನಾಗರಹಾವಿನಂತೆ ಅವರು ಸತ್ಯಕ್ಕೆ ಕಿವಿಗೊಡುವುದಿಲ್ಲ.
ಕೀರ್ತನೆಗಳು 58 : 5 (ERVKN)
ಕಿವುಡು ನಾಗರಹಾವುಗಳು ಹಾವಾಡಿಗರ ಕೊಳಲ ನಾದವನ್ನು ಕೇಳಲಾರವು. ಆ ದುಷ್ಟರು ದುಷ್ಟಾಲೋಚನೆಗಳನ್ನು ಮಾಡುವಾಗ ಕಿವುಡು ನಾಗರಹಾವುಗಳಂತಿರುವರು.
ಕೀರ್ತನೆಗಳು 58 : 6 (ERVKN)
ಯೆಹೋವನೇ, ಅವರು ಸಿಂಹಗಳಂತಿದ್ದಾರೆ. ದೇವರೇ, ಅವರ ಹಲ್ಲುಗಳನ್ನು ಮುರಿದುಹಾಕು.
ಕೀರ್ತನೆಗಳು 58 : 7 (ERVKN)
ಹರಿದು ಕಾಣದೆ ಹೋಗುವ ನೀರಿನಂತೆ ಆ ಜನರು ಕಾಣದೆ ಹೋಗಲಿ. ಹಾದಿಯ ಮೇಲಿರುವ ಕಳೆಯಂತೆ ಅವರು ಜಜ್ಜಿಹೋಗಲಿ.
ಕೀರ್ತನೆಗಳು 58 : 8 (ERVKN)
ಬಸವನಹುಳಗಳು ದಾರಿಯಲ್ಲೇ ಕರಗಿಹೋಗುವಂತೆ ಅವರೂ ಕರಗಿಹೋಗಲಿ. ಗರ್ಭದಲ್ಲೇ ಸತ್ತುಹೋದ ಮಗುವಿನಂತೆ ಅವರು ಹಗಲನ್ನು ಕಾಣದಂತಾಗಲಿ.
ಕೀರ್ತನೆಗಳು 58 : 9 (ERVKN)
ಒಲೆಯಲ್ಲಿ ಉರಿದುಹೋಗುವ ಮುಳ್ಳುಕಡ್ಡಿಗಳನ್ನು ಗಾಳಿಯು ಹಾರಿಸಿಬಿಡುವಂತೆ ದೇವರ ಉಗ್ರಕೋಪವು ಅವರನ್ನು ನಾಶಮಾಡಲಿ.
ಕೀರ್ತನೆಗಳು 58 : 10 (ERVKN)
ದುಷ್ಟರಿಗಾಗುವ ಪ್ರತಿದಂಡನೆಯನ್ನು ನೀತಿವಂತರು ಕಂಡು ಹರ್ಷಿಸುವರು;
ಆ ದುಷ್ಟರ ರಕ್ತದಲ್ಲಿ ಕಾಲಾಡಿಸುವರು.
ಕೀರ್ತನೆಗಳು 58 : 11 (ERVKN)
ಆಗ ಜನರೆಲ್ಲರು, “ನೀತಿವಂತರಿಗೆ ಪ್ರತಿಫಲ ಸಿಕ್ಕೇಸಿಕ್ಕುವುದು; ಲೋಕಕ್ಕೆ ತೀರ್ಪು ನೀಡುವ ದೇವರಿರುವುದು ಸತ್ಯವೇ ಸರಿ” ಎಂದು ಹೇಳುವರು.

1 2 3 4 5 6 7 8 9 10 11