ಕೀರ್ತನೆಗಳು 55 : 1 (ERVKN)
ದೇವರೇ, ನನ್ನ ಪ್ರಾರ್ಥನೆಯನ್ನು ಕೇಳು. ನನ್ನ ವಿಜ್ಞಾಪನೆಗೆ ಕಿವಿಗೊಡು.
ಕೀರ್ತನೆಗಳು 55 : 2 (ERVKN)
ನನ್ನ ಮೊರೆಯನ್ನು ಆಲಿಸಿ ಸದುತ್ತರವನ್ನು ದಯಪಾಲಿಸು. ನಾನು ನಿನ್ನೊಂದಿಗೆ ಮಾತಾಡುವೆನು; ನನಗಾಗಿರುವ ದುಃಖವನ್ನು ನಿನ್ನ ಮುಂದೆ ತೋಡಿಕೊಳ್ಳುವೆನು.
ಕೀರ್ತನೆಗಳು 55 : 3 (ERVKN)
ನನ್ನ ವೈರಿಗಳು ನನ್ನ ಬಗ್ಗೆ ಕೆಟ್ಟದ್ದನ್ನೇ ಹೇಳಿದರು. ಆ ದುಷ್ಟರು ನನ್ನ ಮೇಲೆ ಅಬ್ಬರಿಸಿದರು. ನನ್ನ ವೈರಿಗಳು ಕೋಪದಿಂದ ನನ್ನ ಮೇಲೆ ಆಕ್ರಮಣ ಮಾಡಿದರು. ಅವರು ನನ್ನ ಮೇಲೆ ಆಪತ್ತುಗಳನ್ನು ಬರಮಾಡಿದರು.
ಕೀರ್ತನೆಗಳು 55 : 4 (ERVKN)
ನನ್ನ ಹೃದಯ ಬಡಿತವು ಮಿತಿಮೀರಿದೆ; ಮರಣ ಭಯವು ನನ್ನನ್ನು ಆವರಿಸಿಕೊಂಡಿದೆ.
ಕೀರ್ತನೆಗಳು 55 : 5 (ERVKN)
ನಾನು ಭಯದಿಂದ ನಡುಗುತ್ತಿದ್ದೇನೆ. ನಾನು ದಿಗಿಲುಗೊಂಡಿದ್ದೇನೆ.
ಕೀರ್ತನೆಗಳು 55 : 6 (ERVKN)
ಆಹಾ, ನನಗೆ ಪಾರಿವಾಳದಂತೆ ರೆಕ್ಕೆಗಳಿದ್ದರೆ, ನಾನು ಹಾರಿಹೋಗಿ ಆಶ್ರಯ ಸೇರಿಕೊಳ್ಳುತ್ತಿದ್ದೆನು.
ಕೀರ್ತನೆಗಳು 55 : 7 (ERVKN)
ನಾನು ಅರಣ್ಯದಲ್ಲಿ ಬಹು ದೂರಕ್ಕೆ ಹಾರಿಹೋಗುತ್ತಿದ್ದೆನು.
ಕೀರ್ತನೆಗಳು 55 : 8 (ERVKN)
ನಾನು ಓಡಿಹೋಗಿ ಹಾನಿಕರವಾದ ಈ ಬಿರುಗಾಳಿಯಿಂದ ತಪ್ಪಿಸಿಕೊಳ್ಳುತ್ತಿದ್ದೆನು.
ಕೀರ್ತನೆಗಳು 55 : 9 (ERVKN)
ನನ್ನ ಒಡೆಯನೇ, ಅವರ ಸುಳ್ಳುಗಳನ್ನು ನಿಲ್ಲಿಸು. ಈ ಪಟ್ಟಣದಲ್ಲಿ ಹಿಂಸೆಕಲಹಗಳು ಕಾಣುತ್ತಿವೆ.
ಕೀರ್ತನೆಗಳು 55 : 10 (ERVKN)
ಹಗಲಿರುಳು, ಈ ನಗರದಲ್ಲೆಲ್ಲಾ ಅಪರಾಧ ಮತ್ತು ಬಲಾತ್ಕಾರಗಳು ತುಂಬಿಕೊಂಡಿವೆ.
ಕೀರ್ತನೆಗಳು 55 : 11 (ERVKN)
ಬೀದಿಗಳಲ್ಲಿ ಅಪರಾಧಗಳು ಅತಿಯಾಗಿವೆ. ಜನರು ಎಲ್ಲೆಲ್ಲಿಯೂ ಸುಳ್ಳು ಹೇಳಿ ಮೋಸಮಾಡುತ್ತಿದ್ದಾರೆ.
ಕೀರ್ತನೆಗಳು 55 : 12 (ERVKN)
ನನಗೆ ಅವಮಾನ ಮಾಡುವವನು ವೈರಿಯಾಗಿದ್ದಿದ್ದರೆ ತಾಳಿಕೊಳ್ಳಬಹುದಿತ್ತು.
ನನ್ನ ಮೇಲೆ ಆಕ್ರಮಣ ಮಾಡುವವರು ನನ್ನ ಶತ್ರುಗಳಾಗಿದ್ದಿದ್ದರೆ ಅಡಗಿಕೊಳ್ಳಬಹುದಿತ್ತು.
ಕೀರ್ತನೆಗಳು 55 : 13 (ERVKN)
ಆದರೆ ನನಗೆ ಕೇಡುಮಾಡುತ್ತಿರುವವನು ನನ್ನ ಸಂಗಡಿಗನಾದ ನೀನೇ; ನನ್ನ ಸಹೋದ್ಯೋಗಿಯೂ ನನ್ನ ಸ್ನೇಹಿತನೂ ಆದ ನೀನೇ.
ಕೀರ್ತನೆಗಳು 55 : 14 (ERVKN)
ನಾವು ಜನಸಮೂಹದ ನಡುವೆ ದೇವಾಲಯಕ್ಕೆ ಹೋಗುವಾಗ, ಗುಟ್ಟಾದ ವಿಷಯಗಳನ್ನು ಮಾತಾಡುತ್ತಿದ್ದೆವಲ್ಲಾ!
ಕೀರ್ತನೆಗಳು 55 : 15 (ERVKN)
ನನ್ನ ಶತ್ರುಗಳಿಗೆ ಮರಣವು ಇದ್ದಕ್ಕಿದ್ದಂತೆ ಬರಲಿ! ಭೂಮಿಯು ಬಾಯ್ದೆರೆದು ಅವರನ್ನು ಜೀವಂತವಾಗಿ ನುಂಗಿಬಿಡಲಿ! ಯಾಕೆಂದರೆ ಅವರು ಒಟ್ಟಾಗಿ ಸೇರಿ ಅಂಥಾ ಭಯಂಕರವಾದವುಗಳನ್ನು ಆಲೋಚಿಸುವರು.
ಕೀರ್ತನೆಗಳು 55 : 16 (ERVKN)
ನಾನು ಸಹಾಯಕ್ಕಾಗಿ ದೇವರಲ್ಲಿ ಮೊರೆಯಿಡುವೆನು. ಯೆಹೋವನು ನನಗೆ ಉತ್ತರ ಕೊಡುವನು.
ಕೀರ್ತನೆಗಳು 55 : 17 (ERVKN)
ನಾನು ದೇವರೊಂದಿಗೆ ಸಾಯಂಕಾಲದಲ್ಲಿಯೂ ಮುಂಜಾನೆಯಲ್ಲಿಯೂ ಮಧ್ಯಾಹ್ನದಲ್ಲಿಯೂ ಮಾತಾಡುವೆನು. ನನಗಾಗಿರುವ ದುಃಖವನ್ನು ಆತನಿಗೆ ಹೇಳಿಕೊಳ್ಳುವೆನು. ಆತನು ನನಗೆ ಕಿವಿಗೊಡುವನು!
ಕೀರ್ತನೆಗಳು 55 : 18 (ERVKN)
ನಾನು ಅನೇಕ ಯುದ್ಧಗಳಲ್ಲಿ ಹೋರಾಡಿದ್ದೇನೆ. ಆದರೆ ಪ್ರತಿಸಲವೂ ದೇವರು ನನ್ನನ್ನು ಪಾರುಮಾಡಿ, ಸುರಕ್ಷಿತವಾಗಿ ಬರಮಾಡಿದನು.
ಕೀರ್ತನೆಗಳು 55 : 19 (ERVKN)
ದೇವರು ನನಗೆ ಕಿವಿಗೊಡುವನು. ಅನಾದಿಕಾಲದ ರಾಜನು ನನಗೆ ಸಹಾಯ ಮಾಡುವನು. ನನ್ನ ವೈರಿಗಳು ತಮ್ಮ ಜೀವಿತಗಳನ್ನು ಪರಿವರ್ತಿಸಿಕೊಳ್ಳುವುದಿಲ್ಲ. ಅವರಿಗೆ ದೇವರಲ್ಲಿ ಭಯಭಕ್ತಿಯಿಲ್ಲ.
ಕೀರ್ತನೆಗಳು 55 : 20 (ERVKN)
ನನ್ನ ವೈರಿಗಳು ತಮ್ಮ ಸ್ನೇಹಿತರ ಮೇಲೆಯೇ ಆಕ್ರಮಣ ಮಾಡುವರು; ತಮ್ಮ ಒಡಂಬಡಿಕೆಗಳನ್ನು ತಾವೇ ಉಲ್ಲಂಘಿಸುವರು.
ಕೀರ್ತನೆಗಳು 55 : 21 (ERVKN)
ನನ್ನ ವೈರಿಗಳು ನಯ ನಾಜೂಕಿನಿಂದ ಶಾಂತಿಯ ಕುರಿತು ಮಾತಾಡುವರು; ಅಂತರಂಗದಲ್ಲಿಯೇ ಯುದ್ಧಗಳ ಕುರಿತು ಆಲೋಚಿಸುವರು.
ಅವರ ಮಾತುಗಳು ಬೆಣ್ಣೆಯಂತೆ ನುಣುಪಾಗಿದ್ದರೂ ಅವರ ಹೃದಯಗಳು ಬಿಚ್ಚುಗತ್ತಿಗಳೇ ಸರಿ.
ಕೀರ್ತನೆಗಳು 55 : 22 (ERVKN)
ನಿನ್ನ ಚಿಂತಾಭಾರವನ್ನು ಯೆಹೋವನ ಮೇಲೆ ಹಾಕು. ಆತನು ನಿನ್ನನ್ನು ಉದ್ಧಾರ ಮಾಡುವನು. ಸಜ್ಜನರಿಗೆ ಸೋಲಾಗಲು ಯೆಹೋವನೆಂದಿಗೂ ಬಿಡನು.
ಕೀರ್ತನೆಗಳು 55 : 23 (ERVKN)
ದೇವರೇ, ನೀನು ದುಷ್ಟರನ್ನು ಪಾತಾಳಕ್ಕೆ ದಬ್ಬಿಬಿಡುವೆ. ಕೊಲೆಪಾತಕರೂ ವಂಚಕರೂ ತಮ್ಮ ಅರ್ಧಾಯುಷ್ಯವಾದರೂ ಬದುಕರು.
ನಾನಾದರೊ ನಿನ್ನನ್ನೇ ನಂಬಿಕೊಂಡಿರುವೆನು.

1 2 3 4 5 6 7 8 9 10 11 12 13 14 15 16 17 18 19 20 21 22 23