ಕೀರ್ತನೆಗಳು 44 : 1 (ERVKN)
ದೇವರೇ, ಪೂರ್ವಕಾಲದಲ್ಲಿ ನೀನು ಮಾಡಿದ ಮಹತ್ಕಾರ್ಯಗಳ ಕುರಿತು ಕೇಳಿದ್ದೇವೆ. ಅವುಗಳ ಕುರಿತು ನಮ್ಮ ಪೂರ್ವಿಕರೇ ನಮಗೆ ತಿಳಿಸಿದರು.
ಕೀರ್ತನೆಗಳು 44 : 2 (ERVKN)
ದೇವರೇ, ನಿನ್ನ ಮಹಾಶಕ್ತಿಯಿಂದ ನೀನು ಈ ದೇಶವನ್ನು ಅನ್ಯಜನಾಂಗಗಳಿಂದ ನಮಗೆ ಕೊಟ್ಟಿರುವೆ.
ಆ ವಿದೇಶಿಯರನ್ನು ನೀನು ಜಜ್ಜಿಹಾಕಿದೆ. ಈ ದೇಶದಿಂದ ನೀನು ಅವರನ್ನು ಹೊರಡಿಸಿಬಿಟ್ಟೆ.
ಕೀರ್ತನೆಗಳು 44 : 3 (ERVKN)
ಈ ದೇಶವು ನಮಗೆ ದೊರೆತದ್ದು ನಮ್ಮ ಪೂರ್ವಿಕರ ಖಡ್ಗಗಳಿಂದಲ್ಲ. ಅವರನ್ನು ಜಯಶಾಲಿಗಳನ್ನಾಗಿ ಮಾಡಿದ್ದು ಅವರ ಭುಜಬಲವಲ್ಲ.
ನಮ್ಮ ಪೂರ್ವಿಕರೊಂದಿಗೆ ನೀನಿದ್ದುದರಿಂದ ಅವರಿಗೆ ಜಯವು ದೊರೆಯಿತು. ದೇವರೇ, ನಿನ್ನ ಮಹಾಶಕ್ತಿಯು ಅವರನ್ನು ರಕ್ಷಿಸಿತು. ಅವರ ಮೇಲೆ ನಿನಗಿದ್ದ ಪ್ರೀತಿಯನ್ನು ಅದು ತೋರಿಸಿತು.
ಕೀರ್ತನೆಗಳು 44 : 4 (ERVKN)
ನನ್ನ ದೇವರೇ, ನೀನೇ ನನ್ನ ರಾಜನು. ಆಜ್ಞಾಪಿಸಿ ಯಾಕೋಬನಿಗೆ ಜಯವನ್ನು ದಯಪಾಲಿಸು.
ಕೀರ್ತನೆಗಳು 44 : 5 (ERVKN)
ನಿನ್ನ ಸಹಾಯದಿಂದಲೇ ನಮ್ಮ ಶತ್ರುಗಳನ್ನು ಹಿಂದಟ್ಟುವೆವು. ನಿನ್ನ ಹೆಸರಿನಿಂದ, ನಮ್ಮ ಶತ್ರುಗಳ ಮೇಲೆ ನಡೆದಾಡುವೆವು.
ಕೀರ್ತನೆಗಳು 44 : 6 (ERVKN)
ನನ್ನ ಬಿಲ್ಲುಬಾಣಗಳಲ್ಲಿ ನಾನು ಭರವಸೆವಿಡುವುದಿಲ್ಲ. ನನ್ನ ಖಡ್ಗವು ನನ್ನನ್ನು ರಕ್ಷಿಸಲಾರದು.
ಕೀರ್ತನೆಗಳು 44 : 7 (ERVKN)
ನೀನು ನಮ್ಮನ್ನು ಈಜಿಪ್ಟಿನಿಂದ ಬಿಡುಗಡೆ ಮಾಡಿದೆ. ನಮ್ಮ ಶತ್ರುಗಳನ್ನು ನಾಚಿಕೆಗೆ ಗುರಿಮಾಡಿದೆ.
ಕೀರ್ತನೆಗಳು 44 : 8 (ERVKN)
ದಿನವೆಲ್ಲಾ ದೇವರನ್ನು ಕೊಂಡಾಡಿದೆವು. ನಿನ್ನ ಹೆಸರನ್ನು ಸದಾಕಾಲ ಸ್ತುತಿಸುವೆವು.
ಕೀರ್ತನೆಗಳು 44 : 9 (ERVKN)
ಆದರೆ, ದೇವರೇ, ಈಗ ನೀನು ನಮ್ಮನ್ನು ಕೈಬಿಟ್ಟಿರುವೆ. ನಮ್ಮನ್ನು ಅವಮಾನಕ್ಕೆ ಗುರಿಮಾಡಿರುವೆ. ನೀನು ನಮ್ಮೊಂದಿಗೆ ಯುದ್ಧಕ್ಕೆ ಬರಲಿಲ್ಲ.
ಕೀರ್ತನೆಗಳು 44 : 10 (ERVKN)
ನಮ್ಮ ವೈರಿಗಳು ನಮ್ಮನ್ನು ಹಿಂದಟ್ಟುವಂತೆ ಮಾಡಿದೆ. ನಮ್ಮ ವೈರಿಗಳು ನಮ್ಮ ಐಶ್ವರ್ಯವನ್ನು ತೆಗೆದುಕೊಂಡರು.
ಕೀರ್ತನೆಗಳು 44 : 11 (ERVKN)
ಕೊಯ್ಯಲ್ಪಡುವ ಕುರಿಗಳೋ ಎಂಬಂತೆ ನೀನು ನಮ್ಮನ್ನು ಅವರಿಗೆ ಒಪ್ಪಿಸಿಕೊಟ್ಟಿರುವೆ; ಅನ್ಯ ಜನಾಂಗಗಳ ಮಧ್ಯದಲ್ಲಿ ಚದರಿಸಿಬಿಟ್ಟಿರುವೆ.
ಕೀರ್ತನೆಗಳು 44 : 12 (ERVKN)
ನಿನ್ನ ಜನರನ್ನು ಅತ್ಯಲ್ಪ ಬೆಲೆಗೆ ಮಾರಿಬಿಟ್ಟೆ. ಬೆಲೆಯ ಬಗ್ಗೆ ವಾದವನ್ನೂ ನೀನು ಮಾಡಲಿಲ್ಲ.
ಕೀರ್ತನೆಗಳು 44 : 13 (ERVKN)
ನೀನು ನಮ್ಮನ್ನು ನೆರೆಹೊರೆಯವರಿಗೆ ತಮಾಷೆಯನ್ನಾಗಿ ಮಾಡಿರುವೆ. ನಮ್ಮ ನೆರೆಹೊರೆಯವರು ನಮ್ಮನ್ನು ಕಂಡು ನಗುತ್ತಾರೆ; ನಮ್ಮನ್ನು ಗೇಲಿ ಮಾಡುತ್ತಾರೆ.
ಕೀರ್ತನೆಗಳು 44 : 14 (ERVKN)
ನಾವು ಜನರಿಗೆ ಗಾದೆಯ ಮಾತಾಗಿದ್ದೇವೆ. ಸ್ವದೇಶವನ್ನು ಹೊಂದಿಲ್ಲದವರು ಸಹ ನಮ್ಮನ್ನು ಕಂಡು ತಲೆಯಾಡಿಸುತ್ತಾ ನಗುತ್ತಾರೆ.
ಕೀರ್ತನೆಗಳು 44 : 15 (ERVKN)
ನಾಚಿಕೆಯು ನನ್ನನ್ನು ಕವಿದುಕೊಂಡಿದೆ. ಅವಮಾನವು ದಿವವೆಲ್ಲಾ ನನ್ನೆದುರಿನಲ್ಲೇ ಇದೆ.
ಕೀರ್ತನೆಗಳು 44 : 16 (ERVKN)
ನನ್ನ ವೈರಿಗಳ ಮತ್ತು ದೂಷಕರ ನಿಂದೆಯ ಮಾತುಗಳು ನನ್ನೆದುರಿನಲ್ಲಿ ಇವೆ.
ಕೀರ್ತನೆಗಳು 44 : 17 (ERVKN)
ನಾವು ನಿನ್ನನ್ನು ಮರೆತಿಲ್ಲದಿದ್ದರೂ ನಾವು ನಿನ್ನೊಂದಿಗೆ ಮಾಡಿಕೊಂಡ ಒಡಂಬಡಿಕೆಯನ್ನು ಉಲ್ಲಂಘಿಸಿಲ್ಲದಿದ್ದರೂ ಇವೆಲ್ಲಾ ನಮಗೆ ಬಂದಿವೆ.
ಕೀರ್ತನೆಗಳು 44 : 18 (ERVKN)
ನಾವು ನಿನಗೆ ವಿಮುಖರಾಗದೆ ನಿನ್ನನ್ನೇ ಹಿಂಬಾಲಿಸಿದೆವು.
ಕೀರ್ತನೆಗಳು 44 : 19 (ERVKN)
ಆದರೆ ನರಿಗಳು ವಾಸಿಸುವ ಈ ಸ್ಥಳದಲ್ಲಿ ನೀನು ನಮ್ಮನ್ನು ಜಜ್ಜಿಹಾಕಿರುವೆ. ಮರಣದಂತೆ ಕತ್ತಲಾಗಿರುವ ಈ ಸ್ಥಳದಲ್ಲಿ ನೀನು ನಮ್ಮನ್ನು ತೊರೆದುಬಿಟ್ಟಿರುವೆ.
ಕೀರ್ತನೆಗಳು 44 : 20 (ERVKN)
ನಮ್ಮ ದೇವರ ಹೆಸರನ್ನು ನಾವು ಮರೆತುಬಿಟ್ಟೆವೋ? ಅನ್ಯದೇವರುಗಳಿಗೆ ನಾವು ಪ್ರಾರ್ಥಿಸಿದೆವೋ? ಇಲ್ಲ!
ಕೀರ್ತನೆಗಳು 44 : 21 (ERVKN)
ದೇವರಿಗೆ ಇವು ಖಂಡಿತವಾಗಿ ತಿಳಿದಿವೆ. ನಮ್ಮ ಅಂತರಾಳದ ರಹಸ್ಯಗಳನ್ನು ಸಹ ಆತನು ಬಲ್ಲನು.
ಕೀರ್ತನೆಗಳು 44 : 22 (ERVKN)
ನಿನ್ನ ನಿಮಿತ್ತ ನಾವು ದಿನವೆಲ್ಲಾ ಕೊಲೆಗೆ ಗುರಿಯಾಗಿದ್ದೇವೆ; ಕೊಯ್ಯಲು ಕೊಂಡೊಯ್ಯುವ ಕುರಿಗಳಂತಾಗಿದ್ದೇವೆ.
ಕೀರ್ತನೆಗಳು 44 : 23 (ERVKN)
ನನ್ನ ಒಡೆಯನೇ, ಎದ್ದೇಳು! ನೀನು ನಿದ್ರಿಸುತ್ತಿರುವುದೇಕೆ? ಎದ್ದೇಳು! ನಮ್ಮನ್ನು ಶಾಶ್ವತವಾಗಿ ಕೈಬಿಡಬೇಡ.
ಕೀರ್ತನೆಗಳು 44 : 24 (ERVKN)
ನೀನು ನಮಗೆ ಮರೆಯಾಗಿರುವುದೇಕೆ? ನೀನು ನಮ್ಮ ನೋವುಗಳನ್ನೂ ತೊಂದರೆಗಳನ್ನೂ ಮರೆತುಬಿಟ್ಟಿರುವೆಯಾ?
ಕೀರ್ತನೆಗಳು 44 : 25 (ERVKN)
ನಾವು ಧೂಳಿಗೆ ತಳ್ಳಲ್ಪಟ್ಟವರಾಗಿದ್ದೇವೆ. ನಮ್ಮ ಶರೀರವು ನೆಲಕ್ಕೆ ಹತ್ತಿಕೊಂಡಿದೆ.
ಕೀರ್ತನೆಗಳು 44 : 26 (ERVKN)
ಎದ್ದು ಸಹಾಯಮಾಡು! ನಿನ್ನ ಶಾಶ್ವತವಾದ ಪ್ರೀತಿಯ ನಿಮಿತ್ತ ನಮ್ಮನ್ನು ರಕ್ಷಿಸು.
❮
❯